ಪೂರ್ಣಾಂಕ

sslc42023ರ ‍ಚುನಾವಣಾ ಭರಾಟೆಯ ಮಧ್ಯೆಯೂ, ಮಾರ್ಚ್ ತಿಂಗಳಿನಲ್ಲಿ ಹತ್ತನೇ ತರಗತಿಯ ಪರೀಕ್ಶೆಗಳನ್ನು ಯಶಸ್ವಿಯಾಗಿ ಮುಗಿಸಿ, ಏಪ್ರಿಲ್ ತಿಂಗಳಿನಲ್ಲಿ ಮೌಲ್ಯಮಾಪನವನ್ನೂ ಮುಗಿಸಿ, ಮೇ ತಿಂಗಳ ಎರಡನೇಯ ವಾರಕ್ಕೇ ಫಲಿತಾಂಶಗಳನ್ನು ಪ್ರಕಟಮಾಡಿರುವುದಕ್ಕೆ ಶಿಕ್ಷಣ ಮಂತ್ರಿಗಳೂ ಸೇರಿದಂತೆ ಇಡೀ ಶಿಕ್ಷಣ ಇಲಾಖೆಗೊಂದು ಹೃತ್ಪೂರ್ವಕ ಅಭಿನಂದನೆಗಳು.ರಾಜ್ಯದಲ್ಲಿ ಈ ಬಾರಿ 8,35,102 (853438) ವಿದ್ಯಾರ್ಥಿಗಳು ಪರೀಕ್ಷೆ ಬರೆದು, ಒಟ್ಟು 7,00,619 (730881) ವಿದ್ಯಾರ್ಥಿಗಳು ಶೇ 83.89 (85.6) ಸರಾಸರಿಯಲ್ಲಿ ತೇರ್ಗಡೆಯಾಗಿರುವುದು ಬಹಳ ಸಂತೋಷಕರವಾದ ವಿಷಯವಾಗಿದೆ. ಆವರಣದಲ್ಲಿರುವುದು ಕಳೆದ ಬಾರಿಯ ಫಲಿತಾಂಶವಾಗಿದ್ದು, ಕಳೆದ ಬಾರಿ 145 ವಿಧ್ಯಾರ್ಥಿಗಳು 625/625 ಅಂಕಗಳೊಂದಿಗೆ 100% ಫಲಿತಾಂಶವನ್ನು ಪಡೆದಿದ್ದು ಅದರಲ್ಲಿ 21 ವಿದ್ಯಾರ್ಥಿಗಳು ಸರಕಾರಿ ಶಾಲೆಗಳಲ್ಲಿ ಓದಿದವರಾಗಿದ್ದರೆ ಈ ಬಾರಿ ಪೂರ್ಣಾಂಕ ಪಡೆದಿರುವುವರು ಕೇವಲ ನಾಲ್ಕೇ ವಿದ್ಯಾರ್ಥಿಗಳು ಎನ್ನುವುದು ಗಮನಾರ್ಹವಾದ ವಿಷಯವಾಗಿದೆ.

sslc60-70 ರ ದಶಕದವರೆಗೂ ಪರೀಕ್ಷೇಯಲ್ಲಿ ಪಾಸ್ ಆದರೆ ಸಾಕು ಎಂಬಂತಾಗಿದ್ದು ಸರಾಸರಿ 20-30% ವಿದ್ಯಾರ್ಥಿಗಳು ತೇರ್ಗಡೆ ಹೊಂದುತ್ತಿದ್ದರೆ, 80 ಮತ್ತು 90ರ ದಶಕದಲ್ಲಿ ತೇರ್ಗಡೆಯ ಫಲಿತಾಂಶ ಗಣನೀಯವಾಗಿ ಏರುತ್ತಾ 40-45% ವರೆಗು ತಲುಪಿ ಮೊದಲ ದರ್ಜೆಯಲ್ಲಿ (60%) ಪಡೆದರೂ ಸಾಕು ಎನ್ನುವಂತಹ ಪರಿಸ್ಥಿತಿ ಕ್ರಮೇಣ ಬದಲಾಗುತ್ತಾ ಹೋಗಿ 80% – 90% ತೆಗೆದುಕೊಂಡ ವಿದ್ಯಾರ್ಥಿಗಲೂ ಕಡಿಮೆ ಅಂಕ ಬಂದಿದೆ ಎಂದು ದುಃಖ ಪಟ್ಟು ಕೆಲವು ದುರ್ಬಲ ವಿದ್ಯಾರ್ಥಿಗಳು ಆತ್ಮಹತ್ಯೆಯನ್ನೂ ಮಾಡಿಕೊಂಡಿರುವ ಉದಾಹರಣೆ ಇದೆ.

ranjithಬಹುಶಃ ಕರ್ನಾಟಕ ಶಿಕ್ಢಣ ಇಲಾಖೆಯ ಇತಿಹಾಸದಲ್ಲಿಯೇ ಮೊದಲ ಬಾರಿಗೆ, 2016ರಲ್ಲಿ ಭದ್ರಾವತಿಯ ವಿದ್ಯಾರ್ಥಿ ರಂಜನ್ ಎಸ್ 625/625 ಅಂಕಗಳೊಂದಿಗೆ 100% ಫಲಿತಾಂಶವನ್ನು ಪಡೆದು ಅಸಾಧ್ಯವಾದದ್ದನ್ನು ಸಾಧಿಸಿ ತೋರಿಸಿದ ನಂತರ 2018 ರಲ್ಲಿ ಮೈಸೂರಿನ ಸದ್ವಿದ್ಯಾ ಹೈಸ್ಕೂಲ್‌ನ ಯಶಸ್ ಎಂ ಎಸ್ ಮತ್ತು ಬೆಂಗಳೂರಿನ ಹೋಲಿ ಚೈಲ್ಡ್ ಆಂಗ್ಲ ಶಾಲೆಯ ವಿದ್ಯಾರ್ಥಿ ಸುದರ್ಶನ್ ಕೆ ಎಸ್ ಶೇ 100 ಅಂಕಗಳೊಂದಿಗೆ ಅಗ್ರಸ್ಥಾನ ಹಂಚಿಕೊಂಡ ನಂತರ ಶೇ 100 ಅಂಕಗಳಿಸುವುದೇ ಮಾನದಂಡವಾಗಿ  ಮತ್ತೆ 2019ರಲ್ಲಿ 02 ವಿದ್ಯಾರ್ಥಿಗಳು, 2020 ರಲ್ಲಿ 06 ವಿದ್ಯಾರ್ಥಿಗಳು, 2021 158 ವಿದ್ಯಾರ್ಥಿಗಳು (ಕೋವಿಡ್ ನಿಂದಾಗಿ ಪೂರ್ಣ ಪ್ರಮಾಣದ ಪರೀಕ್ಷೆ ನಡೆದಿರಲಿಲ್ಲ) ಪ್ರಸ್ತುತ 2022ರಲ್ಲಿ ನಡೆದ ಪೂರ್ಣಪ್ರಮಾಣದ ಪರೀಕ್ಷೆಯಲ್ಲಿ 145 ವಿದ್ಯಾರ್ಥಿಗಳು ಈ ಬಾರಿ 4 ವಿದ್ಯಾರ್ಥಿಗಳು ಶೇ 100 ಅಂಕಗಳಿಸಿರುವುದು ನಿಜಕ್ಕೂ ಅಚ್ಚರಿಯ ಜೊತೆಗೆ ಶಿಕ್ಷಣ ಗುಣಮಟ್ಟದೆಡೆಗೆ ಅಥವಾ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿರುವ ರೀತಿಯ ಬಗ್ಗೆ ಎಚ್ಚರಿಕೆಯ ಗಂಟೆಯಾಗಿದೆ ಎಂದರೂ ತಪ್ಪಾಗದು.

ಈ ಕುರಿತಂತೆ ಇಂದಿನ education system ಸರಿಯಿಲ್ಲ, ಶಾಲೆಗಳು ಸರಿಯಿಲ್ಲ ಎಂದು ಕೆಲವರು ಟೀಕೆಗಳನ್ನು ಮಾಡಲಾರಂಭಿಸಿದರೆ, ನಿಮ್ಮ‌ಮನೆಯ ಮಕ್ಕಳು ಇದೇ ರೀತಿ ಪೂರ್ಣಾಂಕಗಳನ್ನು ಪಡೆದಿದ್ದರೆ, ನಿಮ್ಮ ನಿಲುವು ಹೀಗೆಯೇ ಇರುತ್ತಿತ್ತೇ?  ಎಂಬ ಸವಾಲನ್ನು ಕೆಲವರು ಹಾಕುವ ಮೂಲಕ ವಾದ ವಿವಾದಗಳ ಚರ್ಚೆ ನಡೆಯುತ್ತಿದೆ.

ಸಾಧಾರಣವಾಗಿ ಗಣಿತ ಮತ್ತು ವಿಜ್ಣಾನಗಳಲ್ಲಿ 100% ತೆಗೆದುಕೊಳ್ಳುವುದು ಸುಲಭವಾದರೂ, ಭಾಷಾ ವಿಷಯಗಳಲ್ಲಿ 100 ಕ್ಕೆ 100 ಅಂಕಗಳನ್ನು ತೆಗೆದುಕೊಳ್ಳುವುದು ತುಸು ಕಷ್ಟಕರವೇ ಸರಿ. ಪರೀಕ್ಷೆಯ ಮೂರು ಗಂಟೆಯ ಅವಧಿಯಲ್ಲಿ ಒಂದೂ ತಪ್ಪಿಲ್ಲದೇ ಭಾಷಾ ಪರೀಕ್ಷೆಯಲ್ಲಿ ಉತ್ತರ ಬರೆಯುವುದು ಅಷ್ಟು ಸುಲಭವಲ್ಲ ಎಂಬ ಭಾವನೆಯಿಂದಲೇ 2016ರಲ್ಲಿ 100% ಅಂಕಗಳನ್ನು ಗಳಿಸಿದ್ದ ಭದ್ರಾವತಿಯ ವಿದ್ಯಾರ್ಥಿ ರಂಜನ್ ಎಸ್ ಉತ್ತರ ಪತ್ರಿಕೆಯ ನಕಲನ್ನು ಎಲ್ಲಾ ವಿದ್ಯಾರ್ಥಿಗಳಿಗೂ ಮಾದರೀ ಉತ್ತರ ಪತ್ರಿಕೆಯನ್ನಾಗಿ ತೋರಿಸಬೇಕೆಂದು ನನ್ನನ್ನೂ ಒಳಗೊಂಡು ಹಲವರು ಶಿಕ್ಷಣ ಇಲಾಖೆಗೆ ಪತ್ರ ಬರೆದಿದ್ದದ್ದರೂ ಅದು ನೆನೆಗುದಿಗೆ ಬಿದ್ದಿತ್ತು. ಈಗ ಈ ಪ್ರಮಾಣದ ವಿದ್ಯಾರ್ಥಿಗಳು 100% ಅಂಕಗಳನ್ನು ಗಳಿಸಿರುವಾಗ ಖಂಡಿತವಾಗಿಯೂ ಅವರ ಉತ್ತರ ಪತ್ರಿಕೆಗಳನ್ನು ಎಲ್ಲರಿಗೂ ಬಹಿರಂಗ ಪಡಿಸಿದಾಗ ಎಲ್ಲರ ಅನುಮಾನಗಳೂ ಪರಿಹಾರವಾಗಿ ಮುಂದಿನ ಮಕ್ಕಳಿಗೆ ಪ್ರೇರಣಾದಾಯಕವಾಗಬಲ್ಲದು.

ಹಿಂದೆಲ್ಲಾ ಮೌಲ್ಯಮಾಪಕರು ಹಾಕಿದ್ದೇ ಅಂಕ ಎಂಬಂತಾಗಿ, ಯಾರೋ ಯಾರೋ ಗೀಚೀ ಹೋದಾ.. ಹಾಳು ಹಣೆಯ ಬರಹಾ.. ಎನ್ನುವ ಹಾಡಂತಾಗಿತ್ತು. ಆದರೆ ಇಂದು ಯಾರು ಬೇಕಾದರೂ ತಮ್ಮ ಅಂಕಗಳ ಬಗ್ಗೆ ಸಂದೇಹವಿದ್ದಲ್ಲಿ ಸೂಕ್ತವಾದ ಹಣವನ್ನು ಕಟ್ಟಿ ತಮ್ಮ ಉತ್ತರ ಪತ್ರಿಕೆಯ ನಕಲನ್ನು ಪಡೆದು ಮೌಲ್ಯಮಾಪನವನ್ನೇ ಪುರರ್ಮೌಲ್ಯಮಾಪನ ಮಾಡಿ ತಕರಾರು ಇದ್ದಲ್ಲಿ ಶಿಕ್ಶಣ ಇಲಾಖೆಗೆ ದೂರು ಸಲ್ಲಿಸಿ ಸರಿ ಪಡಿಸಿಕೊಳ್ಳಬಹುದಾಗಿದೆ. ಅದೇ ರೀತಿ ಮೌಲ್ಯಮಾಪನ ಮಾಡುವಾಗಲೂ ಕೂಡಾ ಯಾವುದೇ ರೀತಿಯ ತಪ್ಪುಗಳಾಗದೇ ಇರಲಿ ಎಂದು 90+ ಅಂಕಪಡೆದ ಉತ್ತರ ಪತ್ರಿಕೆಗಳು ಗುರುತು ಪರಿಚಯವೇ ಇಲ್ಲದ ಆರು ಮೌಲ್ಯಮಾಪಕರಿಂದ ಪರಿಶೀಲಿಸಿದ ನಂತರವೇ ಅವರಿಗೆ ಅಂಕಗಳನ್ನು ನೀಡುವ ಕಾರಣ, ಉತ್ತರ ಬರೆದ ಜಾಣ ವಿದ್ಯಾರ್ಥಿಯ ಪೂರ್ಣಂಕ ಪಡೆದ ಉತ್ತರಪತ್ರಿಕೆಗಳು ಮೌಲ್ಯಮಾಪನ ಸರಿಯಾಗಿಯೇ ನಡೆದಿರುತ್ತದೆ ಎಂಬುದು ಸ್ಪಷ್ಟವಾಗುತ್ತದೆ. ಹಾಗಾಗಿ ಪೂರ್ಣಾಂಕ ಪಡೆದ ಮಕ್ಕಳನ್ನೂ ಅವರಿಗೆ ವಿದ್ಯೆ ಕಲಿಸಿದ ಗುರುಗಳನ್ನೂ ಮತ್ತು ಅವರಿಗೆ ಪ್ರೋತ್ಸಾಹ ನೀಡಿದ ತಂದೆ ತಾಯಿಯರನ್ನು ಮನಸಾರೆ ಅಭಿನಂದಿಸಲೇ ಬೇಕಾಗಿರುವುದು ನಮ್ಮೆಲ್ಲರ ಆದ್ಯ ಕರ್ತ್ಯವೇ ಅಗಿದೆ.

sslc3ಹಾಗಾದರೆ 10-20 ವರ್ಷಗಳ ಹಿಂದಿನ ವಿದ್ಯಾರ್ಥಿಳಲ್ಲಿ ಪೂರ್ಣಾಂಕ ಪಡೆಯಲು ಸಾಮರ್ಥ್ಯವಿರಲಿಲ್ಲವೇ? ಅವರೆಲ್ಲಾ ಅಷ್ಟು ದಡ್ಡರೇ? ಎಂಬ ಜಿಜ್ಣಾಸೆಯೂ ಮೂಡುತ್ತದೆ. ಹೌದು ನಿಜ. ಖಂಡಿತವಾಗಿಯೂ ಈ ಹಿಂದಿನ ವಿದ್ಯಾರ್ಥಿಗಳಲ್ಲಿ ಪೂರ್ಣಾಂಕ ಪಡೆಯುವ ಸಂಪೂರ್ಣವಾದ ಸಾಮ್ಯಥ್ಯವಿತ್ತಾದರೂ ಅಗಿನ ಪರೀಕ್ಷೆ ಮತ್ತು ಮೌಲ್ಯಮಾಪನ ಈಗಿನ ರೀತಿಯಾಗಿ ಸುಲಭವಾಗಿ ಇರಲಿಲ್ಲ. ಆಗ ಪ್ರತಿಯೊಬ್ಬರೂ ಅಂಕಗಳಿಗಿಂತ ವಿಷಯವನ್ನು ಅಧ್ಯಯನ ಮಾಡಿಕೊಂಡು ಮನನ ಮಾಡಿ ಅದನ್ನು ಜೀವನ ಪೂರ್ತಿ ಅಳವಡಿಸಿಕೊಳ್ಳುವತ್ತ ಗಮನಿಸುತ್ತಿದ್ದರು. ಈಗ ಎಲ್ಲವೂ ಅಂಕಮಯವಾಗಿ ಪರಿವರ್ತಿತವಾಗಿ ಸಂತೆಗೆ ತಕ್ಕಂತೆ ಬಂತೆ ಎಂಬಂತೆ ಪ್ರತಿಯೊಂದನ್ನೂ ಉರು ಹೊಡೆದು ಪರೀಕ್ಷೆಯ ಸಮಯದಲ್ಲಿ ಉರುಹೊಡೆದದ್ದನ್ನು ಉತ್ತರ ಪತ್ರಿಕೆಗಳಲ್ಲಿ ಕಕ್ಕಿದ ನಂತರ ಓದಿದ ವಿಷಯವನ್ನೂ ಮರೆತು ಬಿಡುವ ಅನೇಕ ಉದಾರಣೆಗಳನ್ನು ತೋರಿಸಬಲ್ಲೆ. ಅದಕ್ಕೆ ಸರಳವಾದ ಉದಾಹರಣೆಯೆಂದರೆ ಮಗ್ಗಿ. ಈಗ 45+ ಆಗಿರುವ ಬಹುತೇಕರ ಬಳಿ 1-20ರ ವರೆಗಿನ ಮಗ್ಗಿಯನ್ನು ಕೇಳಿದರೆ ಅವರು ಸುಲಭವಾಗಿ ಥಟ್ ಎಂದು ಹೇಳುವ ಸಾಮರ್ಥ ಹೊಂದಿರುತ್ತಾರೆ. ಇಂದು ಶೇ 100% ಅಂಕಗಳನ್ನು ಪಡೆದ ವಿದ್ಯಾರ್ಥಿಗಳು ಅದಕ್ಕೆ ಖಂಡಿತವಾಗಿಯೂ ತಡವರಿಸುತ್ತಾರೆ. ಮಗ್ಗಿಯೇಕೆ ಬೇಕು? ನಮ್ಮ ಬಳಿ ಕ್ಯಾಲುಕ್ಲೇಟರ್ ಇದೆ. ಮೊಬೈಲ್ ಇದೆ ಅದರಲ್ಲೇ ಸುಲಭವಾಗಿ ಕೂಡು, ಕಳೆ, ಗುಣಾಕಾರ, ಭಾಗಾಕಾರ ಕರಾರುವಾಕ್ಕಾಗಿ ಹಾಕುತ್ತೇವೆ ಎಂಬ ಉದ್ಧಟತನದ ಉತ್ತರವನ್ನು ಹೇಳುತ್ತಾರೆ.

ಅದೂ ಅಲ್ಲದೇ, ಶಿಕ್ಷಣ ಇಲಾಖೆಯವರೇ ಹೇಳಿರುವಂತೆ

  • ಈಗಿನ ಪ್ರಶ್ನಪತ್ರಿಕೆಗಳು ಅತ್ಯಂತ ಸರಳ ಮತ್ತು ಸುಲಭವಾಗಿರುವಂತೆ ತಯಾರಿಸಲಾಗಿರುತ್ತದೆ.
    ಮೊದಲಿದ್ದ 20 ಕಠಿಣ ಪ್ರಶ್ನೆಗಳನ್ನು ಈಗ 10ಕ್ಕೆ ಇಳಿಸಲಾಗಿದೆ.
  • ಒಂದು ಅಂಕದ ಪ್ರಶ್ನೆಗಳೇ ಹೆಚ್ಚಾಗಿವೆ
  • ಬಹು ಆಯ್ಕೆಯ ಪ್ರಶ್ನೆಗಳು
  • 20 ಆಂತರಿಕ ಅಂಕಗಳು ಮತ್ತು 10% ಕೃಪಾಂಕಗಳು

ಹೀಗಿರುವಾಗ ಈ ರೀತಿಯಾಗಿ ಅಂಕಗಳನ್ನು ಪಡೆದು ಶಿಕ್ಷಣ ಪಡೆದ ವಿದ್ಯಾರ್ಥಿಗಳ ಬೌದ್ಧಿಕ ಮಟ್ಟ ಯಾವ ಪರಿ ಇರುತ್ತದೆ? ಎಂಬುದನ್ನು ಊಹಿಸಬಹುದಾಗಿದೆ. ವಿಜ್ಞಾನ ಮತ್ತು ಗಣಿತಗಳಲ್ಲಿ ಒಂದಂಕ ಮತ್ತು ಬಹು ಆಯ್ಕೆಯ ಪ್ರಶ್ನೆಗಳು ಒಪ್ಪುವಂತಾದರೂ ಭಾಷೇ ಮತ್ತು ಸಮಾಜ ಶಾಸ್ತ್ರದ ವಿಷಯಗಳನ್ನು ಮಂಡಿಸುವಗ ಸುದೀರ್ಘವಾಗಿ ಬರೆದಾಗಲೇ ಆ ವಿದ್ಯಾರ್ಥಿಯ ಭಾಷಾ ಜ್ಞಾನ, ವ್ಯಾಕರಣ, ಪದ ಜೋಡಣೆ, ಕಾಗುಣಿತ ಎಲ್ಲವುದರ ಅರಿವಾಗುತ್ತದೆಯಲ್ಲವೇ? ಇಂದಿನ ಮಕ್ಕಳಿಗೆ ಭಾಷಾ ಜ್ಞಾನವೇ ಇಲ್ಲಾ ವ್ಯಾಕರಣ ಬದ್ಧವಾಗಿ ಸರಿಯಾಗಿ ಎರಡು ಮೂರು ಪದಗಳನ್ನು ಜೋಡಿಸಿಕೊಂಡು ತಡವರಿಸದೇ ಮಾತನಾಡಲೂ ಬರುವುದಿಲ್ಲ ಎನ್ನುವುದರ ಹಿಂದಿನ ಕರಾಳ ಸತ್ಯವನ್ನು ಎಲ್ಲರೂ ಅರಿಯಲೇ ಬೇಕಾಗಿದೆ.

ಈಗಾಗಲೇ ಜಾತಿಯಾಧಾರಿತವಾಗಿ ಎಗ್ಗಿಲ್ಲದೆ ಮೀಸಲಾತಿಯನ್ನು ಏರಿಸಿ (ಇಂದಿಗೂ ಹತ್ತಾರು ಮಠಗಳ ಸ್ವಾಮಿಗಳು ತಮ್ಮ ತಮ್ಮ ಜಾತಿಯ ಮೀಸಲಾತಿ ಹೆಚ್ಚಿಸಲು ಧರಣಿ, ಹೋರಾಟ, ಬ್ಲಾಕ್ಮೇಲ್ ) ಎಂದು ಸರ್ಕಾರದ ಮೇಲೆ ಒತ್ತಾಯ ಹಾಕುತ್ತಾ 30-40% ಅಂಕ ಗಳಿಸಿದವನಿಗೆ ಸರ್ಕಾರಿ ನೌಕರಿಯ ಜೊತೆಗೆ ಕಾಲ ಕಾಲಕ್ಕೆ ಭಡ್ತಿಯನ್ನು ಕೊಡುತ್ತಾ ಸಮಾಜ ಮತ್ತು ಸರ್ಕಾರೀ ಕೆಲಸದ ಗುಣಮಟ್ಟವನ್ನು ಹಾಳು ಗೆಡವಿರುವಾಗ ಮತ್ತೆ ಯಾರನ್ನೋ ಮೆಚ್ಚಿಸಲೋ ಇಲ್ಲವೇ ಎಲ್ಲರೂ ತೇರ್ಗಡೆಯಾಗಲು ಪ್ರಶ್ನೆ ಪತ್ರಿಯನ್ನೇ ಸರಳೀಕರಿಸುವ ಬದಲು ಪರೀಕ್ಷೆಯನ್ನೇ ಮಾಡದೇ ತೇರ್ಗಡೆ ಮಾಡ ಬಹುದಲ್ಲವೆ?

ಹಿಂದಿನ ಗುರುಕುಲದಲ್ಲಿ ಗುರುಗಳು ವಿದ್ಯಾರ್ಥಿಗಳಿಗೆ ಸಂಸ್ಕೃತ, ವ್ಯಾಕರಣ, ಛಂದಸ್ಸು, ವೇದ, ಉಪನಿಷತ್ತು, ಯೋಗ, ಭಗವದ್ವೀತೆಯ ಜೊತೆಗೆ ಸಮಾಜದಲ್ಲಿ ಬೆಳೆದು ದೊಡ್ಡವನಾದ ಮೇಲೆ ಜೀವನದಲ್ಲಿ ಪ್ರಾಯೋಗಿಕವಾಗಿ ಅವಶ್ಯಕವಿದ್ದ ಉಳಿದ ಎಲ್ಲಾ ವಿದ್ಯೆಗಳನ್ನೂ ಕಲಿಸಿಕೊಡುತ್ತಿದ್ದರು. ಅದರಲ್ಲಿ ಭಿಕ್ಷೇ ಬೇಡುವುದೂ ಇಂದು ಶಿಕ್ಷಣ ಪದ್ದತಿಯಾಗಿ, ರಾಜನ ಮಗನಿಂದ ಹಿಡಿದು ಬಿಕ್ಷುಕನ ಮಗನ ವರೆಗೂ ಗುರುಕುಲದಲ್ಲಿ ಅಭ್ಯಾಸ ಮಾಡುತ್ತಿದ್ದವರೆಲ್ಲರೂ ತಮ್ಮ ದೈನಂದಿನ ಅವಶ್ಯಕತೆಗೆ ಎಷ್ಟು ಬೇಕೋ ಅಷ್ಟನ್ನು ಮಾತ್ರವೇ ಅಕ್ಕ ಪಕ್ಕದ ಊರಿನಿಂದ ಭಿಕ್ಷಾಟನೆ ಮಾಡಿ ತಂದು ಅದನ್ನೆಲ್ಲಾ ಗುರುಗಳು ಮತ್ತು ಇತರ ವಿದ್ಯಾರ್ಥಿಗಳೊಡನೆ ಹಂಚಿಕೊಂಡು ತಿನ್ನುವ ಪದ್ದತಿ ಇತ್ತು. ಹೀಗೆ ಭಿಕ್ಷೇ ಬೇಡಲು ಹೋದಾಗ ಅವರುಗಳಿಗೆ ಸಮಾಜವನ್ನು ಹತ್ತಿರದಿಂದ ನೋಡುತ್ತಾ ಅಲ್ಲಿನ ಕಷ್ಟ ಸುಖಃಗಳನ್ನು ಅರಿತು ಅದಕ್ಕೆ ತಮ್ಮಿದೇನಾದರೂ ಪರಿಹಾರ ಮಾಡಬಹುದೇ ಎಂದು ಯೋಚಿಸಿ ತಮ್ಮ ಕೈಲಾದ ಮಟ್ಟಿಗೆ ಪರಿಹರಿಸುವ ಸಾಮರ್ಥ್ಯವನ್ನು ಪಡೆದುಕೊಳ್ಳುತ್ತಿದ್ದರು ಎಲ್ಲದ್ದಕ್ಕಿಂತಲೂ ಹೆಚ್ಚಾಗಿ ಬೇಡುವಾಗ ಅವರಲ್ಲಿದ್ದ ಅಹಂ ಮಾಯವಾಗಿ ಮತ್ತೊಬ್ಬರ ಬಳಿ ಸಹಾಯ ಕೇಳುವುದು ಮತ್ತು ಕಷ್ಟದಲ್ಲಿ ಇದ್ದವರಿಗೆ ಸಹಾಯ ಮಾಡುವ ಮನಸ್ಥಿತಿ ಅವರಲ್ಲಿ ಬೆಳಿಯುತ್ತಿತ್ತು.

ಸುಮಾರು ಎರಡು ದಶಕಗಳ ಮುಂಚೆಯೂ ಬಹುತೇಕ ಶಾಲೆಗಳಲ್ಲಿ ನೀತಿಶಾಸ್ತ್ರದ ತರಗತಿಗಳು ಇರುತ್ತಿದ್ದರೆ ಹಳ್ಳಿಗಾಡಿನಲ್ಲಿ ಕೃಷಿ ಚಟುವಟುಕೆಗಳು ಮತ್ತು ಇತರೇ ವಿಷಯಗಳ ಪ್ರಾಯೋಗಿಕ ತರಗತಿಗಳು ಇರುತ್ತಿದ್ದವು. ಈಗ ಅವೆಲ್ಲವೂ ಮಾಯವಾಗಿ ಎಲ್ಲವೂ ಅಂಕಮಯವಾಗಿರುವುದರಿಂದಲೇ ಶಿಕ್ಷಣದ ಮಟ್ಟ ಕುಸಿತವಾಗಿದೆ ಎಂದರೂ ತಪ್ಪಾಗದು

ಹೈಜಂಪ್ ಆಗಲೀ ಲಾಂಗ್ ಜಂಪ್ ಸ್ಪರ್ಥೆಗಳಲ್ಲಿ ಪ್ರತೀ ಬಾರಿಯೂ ಪ್ರತೀ ಸ್ಪರ್ಧಿಯೂ ತಾನು ಹಾರುವ ಇಲ್ಲವೇ ನೆಗೆಯುವ ದೂರವನ್ನು ಹೆಚ್ಚಿಸಿ ಕೊಳ್ಳುತ್ತಾ ಹೋಗಿ ಅಂತಿಮವಾಗಿ ವಿಜಯಶಾಲಿಯಾಗುತ್ತಾನೆಯೇ ಹೊರತು ತನ್ನ ಎತ್ತರದ ಮಟ್ಟವನ್ನಗಲೀ ಜಿಗಿಯುವ ದೂರವನ್ನಾಗಲೀ ಕಡಿಮೇ ಮಾಡಿಕೊಳ್ಳುವುದಿಲ್ಲ. ಇದೇ ಮಾನದಂಡ ಶಿಕ್ಷಣ ಕ್ಷೇತ್ರದಲ್ಲಿಯೂ ಅಳವಡಿಕೆಯಾಗಬೇಕಲ್ಲವೇ? ಇಂದಿನ ಮಕ್ಕಳೇ, ದೇಶದ ನಾಳಿದ ಹೆಮ್ಮೆಯ ಪ್ರಜೆಗಳು. ಅಂತಹ ಮಕ್ಕಳಿಗೆ ಚಿಕ್ಕಂದಿನಿಂದಲೇ ಉತ್ತಮವಾದ ಶಿಕ್ಷಣವನ್ನು ಕೊಡಿಸುವುದು ನಮ್ಮ ನಿಮ್ಮದೇ ಕರ್ತವ್ಯವಲ್ಲವೇ?

ಏನಂತೀರಿ?
ನಿಮ್ಮವನೇ ಉಮಾಸುತ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s