ಕೆಲವು ವರ್ಷಗಳ ಹಿಂದೆ ನಿಜಕ್ಕೂ ನಮ್ಮ ಬಹುತೇಕರ ಆರ್ಥಿಕ ಪರಿಸ್ಥಿತಿ ಅಷ್ಟೊಂದು ಚೆನ್ನಾಗಿರಲಿಲ್ಲ. ದುಡಿಯುವ ಕೈ ಎರಡಾದರೇ ಕುಳಿತು ತಿನ್ನುವ ಕೈ ಹತ್ತಾರು ಇರುತ್ತಿತ್ತು. ಸರಿಯಾಗಿ ಎರಡು ಹೊತ್ತು ಹೊಟ್ಟೆ ತುಂಬಾ ಊಟವೂ ಇಲ್ಲದಿರುವಂತಹ ಸಂಧರ್ಭವೂ ಇತ್ತು. ಆದರೂ ನಮ್ಮ ಅಜ್ಜ-ಅಜ್ಜಿಯರ ಆಯಸ್ಸು 80-90 ರ ಆಸುಪಾಸಿನಲ್ಲಿಯೇ ಇರುತ್ತಿತ್ತು. ಆಷ್ಟು ವರ್ಷಗಳ ಕಾಲ ಅವರು ಕಷ್ಟದಲ್ಲೇ ಜೀವಿಸಿದರೂ ಅವರಿಗೆಂದೂ ಬಿಪಿ, ಶುಗರ್, ಕಿಡ್ನಿ ತೊಂದರೆಯಾಗಲಿ ಇರಲೇ ಇಲ್ಲ. ಹೃದಯಾಘಾತ ಎನ್ನುವುದನ್ನು ಕೇಳೇ ಇರಲಿಲ್ಲ ಅವರೆಲ್ಲರೂ ಗಂಡಾ ಗುಂಡೀ ಮಾಡಿಯಾದರೂ ತುಪ್ಪಾ ತಿನ್ನು ಎಂದು ಆರಾಮವಾಗಿ ಆರೋಗ್ಯವಾಗಿ ಇರುತ್ತಿದ್ದದ್ದಕ್ಕೆ ಮುಖ್ಯ ಕಾರಣ ಎಂದರೆ ಅವರೆಲ್ಲರೂ ಕಷ್ಟ ಪಟ್ಟು ದೇಹ ದಂಡಿಸಿ ದುಡಿದು ಸಂಪಾದನೆ ಮಾಡುತ್ತಿದ್ದದ್ದಲ್ಲದೇ ಇದ್ದದ್ದರಲ್ಲೇ ಸಂತೋಷವಾಗಿ ಹಂಚಿಕೊಂಡು ತಿನ್ನುತ್ತಿದ್ದ ಕಾರಣ ಅಷ್ಟು ವರ್ಷಗಳ ಕಾಲ ಯಾವುದೇ ತೊಂದರೆ ಇಲ್ಲದೇ ಇರುತ್ತಿದ್ದರು.
ಅದಕ್ಕೆ ಏನೋ 70ರ ದಶಕದಲ್ಲಿ ಬಂದ ಭೂತಯ್ಯನ ಮಗ ಅಯ್ಯೂ ಕನ್ನಡದ ಚಿತ್ರದಲ್ಲಿ ಮಲೆನಾಡ ಹೆಣ್ಣ ಮೈ ಬಣ್ಣ ಬಲು ಚೆನ್ನಾ ಆ ನಡು ಸಣ್ಣ ಅಹಾ ಮನಸೋತೆನೆ ಚಿನ್ನ ನಾ ಮನಸೋತೆನೆ ಚಿನ್ನ… ಹಾಡಿನಲ್ಲಿ ನಾಯಕಿಯ ಸಣ್ಣದಾದ ನಡುವಿನ ಬಗ್ಗೆ ಸೊಗಸಾಗಿ ಹೇಳಿದ್ದಾರೆ. ಅದೇ 2002ರದ ಹೊತ್ತಿಗೆ ಬಿಡುಗಡೆಯಾದ ಸುದೀಪ್ ಅಭಿನಯದ ಚಂದು ಸಿನಿಮಾದಲ್ಲಿ ಸೊಂಟದ ವಿಸ್ಯಾ ಬೇಡವೋ ಸಿಸ್ಯಾ ಸೊಂಟ ಸೂಪರು ಆದ್ರೇ ಡೇಂಜರೂ… ಎಂಬ ಹಾಡನ್ನೂ ಹೇಳುವ ಮೂಲಕ 3 ದಶಕಗಳಲ್ಲಿ ನಮ್ಮ ಯುವಕ ಯುವತಿಯರಲ್ಲಿ ಆದ ಭಾರೀ ಬದಲಾವಣೆಯನ್ನು ಆ ಹಾಡಿನ ಮೂಲಕ ಹೇಳಿರುವುದನ್ನು ಸೂಕ್ಷ್ಮವಾಗಿ ಗಮನಿಸಬಹುದು.
70-80 ರ ದಶಕದವರೆಗೂ ಈ ಪರಿಯ ನಗರೀಕರಣವಾಗದೇ ಇದ್ದು ಮಳೆ ಬೆಳೆಯೂ ಚೆನ್ನಾಗಿ ಆಗುತ್ತಿದ್ದ ಕಾರಣ ಬಹುತೇಕರು ಪಟ್ಟಣದಿಂದ ದೂರವೇ ಉಳಿದು ಹಳ್ಳಿಯಿಂದ ಬೆಳೆಗ್ಗೆ ಎದ್ದು ಹೆಣ್ಣು ಮಕ್ಕಳು ಕಸ ಗುಡಿಸಿ ಬಾಗಿಲಿಗೆ ನೀರು ಹಾಕಿ ರಂಗೋಲಿ ಬಿಟ್ಟು ಊರಿನ ಮುಂದಿನ ಕೆರೆಕಡೆಗೆ ಹೋಗಿ ಪಾತ್ರೇ ತೊಳೆದುಕೊಂಡು ಊರ ಹೊರಗಿನ ಸಿಹಿ ನೀರಿನ ಭಾವಿಯಿಂದ ಕುಡಿಯಲು ನೀರು ತಂದು ಮನೆಯ ಮುಂದಿನ ಭಾವಿಯಿಂದ ಬಚ್ಚಲು ಮನೆಗೆ ನೀರು ತುಂಬಿಸಿ, ಮನೆಯವರಿಗೆ ಅಡುಗೆ ಮಾಡಲು ಅಡುಗೆ ಮನೆ ಸೇರಿಕೊಂಡರೆ, ಬಂದರೆ ಗಂಡಸರು ಕೊಟ್ಟಿಗೆ ಗುಡಿಸಿ ಸಗಣಿ ಬಾಚಿ ತಿಪ್ಪಗೆ ಹಾಕಿ ದನಕರುಗಳನ್ನು ಹೊಡೆದು ಕೊಂಡು ಸೂರ್ಯ ನೆತ್ತಿಗೆ ಬರುವ ವರೆಗೂ ರೆಟ್ಟೆ ಬಗ್ಗಿಸಿ ಬೆವರು ಬರುವ ವರೆಗೂ ಕೃಷಿ ಚಟುವಟಿಕೆಗಳಲ್ಲಿ ಮಾಡುತ್ತಿದ್ದರೆ, ಮನೆಯವರಿಗಾಗಿ ಬಿಸಿ ಬಿಸಿ ಮುದ್ದೇ ಬಸ್ಸಾರು ಮಾಡಿಕೊಂಡು ಹೊಲಕ್ಕೆ ತೆಗೆದುಕೊಂಡು ಬಂದು ಅಲ್ಲೇ ಮರದ ನೆರಳಿನಲ್ಲಿ ಒಟ್ಟಿಗೆ ಕುಳಿತುಕೊಂಡು ಊಟಮಾಡಿ ನೆಮ್ಮದಿಯ ಜೀವನ ಸಾಗಿಸುತ್ತಿದ್ದ ಕಾರಣ ಮೈಯ್ಯಲ್ಲಿದ ಕೊಬ್ಬೆಲ್ಲಾ ಅವರಿಗೇ ಅರಿವಿಲ್ಲದಂತೆ ಅವರು ಮಾಡುತ್ತಿದ ಕೆಲಸ ಕಾರ್ಯಗಳ ಮೂಲಕ ಕರಗಿ ಹೋಗಿ ಸ್ಥೂಲಕಾಯ ಎನ್ನುವುದರ ಅರಿವೇ ಇರಲಿಲ್ಲ.
80ರ ಅಂತ್ಯದ ಹೊತ್ತಿಗೆ ನಿಧಾನವಾಗಿ ಒಂದೊಂದೇ ಯಾಂತ್ರಿಕೃತವಾಗಿ ಬತ್ತ ಕುಟ್ಟುವ ಒನಕೆ ಮತ್ತು ಹಿಟ್ಟು ಬೀಸುವ ಬೀಸೋ ಕಲ್ಲಿನ ಜಾಗದಲ್ಲಿ ಊರಿನಲ್ಲಿ floor millಗಳು ಬಂದವೋ ಒನಕೆ ಮತ್ತು ಬೀಸೋಕಲ್ಲು ಅಟ್ಟ ಸೇರಿಕೊಂಡವು. ಇನ್ನು ರುಬ್ಬಲು, ತಿರುವಲು ಬಳಸುತ್ತಿದ್ದ ಒರಳುಕಲ್ಲಿನ ಜಾಗಕ್ಕೆ mixer grinder/wet grinderಗಳು ಬಂದು ಹೆಣ್ಣು ಮಕ್ಕಳನ್ನು ಮತ್ತಷ್ಟು ಸೋಮಾರಿಗಳನ್ನಾಗಿಸಿತು ಎಂದರೂ ತಪ್ಪಾಗದು. ಇನ್ನು ಕಾಡೆಲ್ಲಾ ಕಡಿದು ನಾಡು ಮಾಡಿದ ಕಾರಣ ಮಳೆ ಎಲ್ಲವೂ ಕಡಿಮೆ ಆಗಿ ಅಂತರ್ಜಲ ಮಟ್ಟ ಕುಸಿದು ಊರಿನ ಬಾವಿಗಳು ಬರಿದಾದಾಗ ನೂರಾರು ಅಡಿಗಳ ಆಳಕ್ಕೆ ಕೊಳವೇ ಭಾವಿ ಕೊರೆದು ಅದಕ್ಕೆ ಮೋಟರ್ ಪಂಪ್ ಅಳವಡಿಸಿ, ಯಾವಾಗ ಸ್ವಿಚ್ ಒತ್ತಿದ ತಕ್ಷಣ ನೀರು ಬರಲು ಆರಂಭಿಸಿತೋ, ಅದುವರೆಗೂ ಸಾವಿರಾರು ನೀರಿನ ಕೊಡವನ್ನು ಹೊತ್ತಿದ್ದ ಸೊಂಟಗಳು ನಿಸ್ತೇಜವಾಗಿದ್ದಲ್ಲದೇ ನಿಧಾನವಾಗಿ ದೇಹದಲ್ಲಿ ಕೊಬ್ಬು ನಮಗೇ ಅರಿವಿಲ್ಲದಂತೆಯೇ ಬೆಳೆಯುತ್ತಾ ಹೋಗಿದ್ದಲ್ಲದೇ ಕಲಬೆರಕೆ ಎಣ್ಣೆ, ಆಹಾರಗಳಿಂದ ಮೂವತ್ತಕ್ಕೆಲ್ಲಾ ಕೂದಲು ಬೆಳ್ಳಗಾಗುವುದೋ ಇಲ್ಲವೇ ಸಂಪೂರ್ಣ ಉದುರಿಹೋಗುವುದನ್ನು ಕಾಣಬಹುದಾಗಿದೆ. ಅಷ್ಟೇ ಅಲ್ಲದೇ, ದೇಹಕ್ಕೆ ಯಾವುದೇ ವ್ಯಾಯಾಮವಿಲ್ಲದಿರುವ ಕಾರಣ, ಹೆಂಗಸು ಮತ್ತು ಗಂಡಸರು ಎನ್ನುವ ಬೇಧ ಭಾವವಿಲ್ಲದೇ, ಯದ್ವಾ ತದ್ವಾ ದಪ್ಪವಾಗಿ ಸ್ಥೂಲಕಾಯವಾಗುತ್ತಿರುವ ಕಾರಣದಿಂದ ಸಣ್ಣ ವಯಸ್ಸಿನಲ್ಲಿಯೇ ಬಿಪಿ, ಶುಗರ್, ಕಿಡ್ನಿ ತೊಂದರೆ ಅನುಭವಿಸುತ್ತಿದ್ದು 40-45ರ ವಯಸ್ಸಿಗೆ ಹೃದಯಾಘಾತಕ್ಕೆ ಒಳಗಾಗಿ 50+ ಇರುವುದೇ ಬೋನಸ್ ಎನಿಸುವಂತಾಗಿರುವುದು ಸುಳ್ಳಲ್ಲ.
ಇಷ್ಟೆಲ್ಲಾ ಪೀಠಿಕೆ ಯಾಕಪ್ಪಾ ಎಂದರೆ ಇಂದಿನ ಯುವ ಜನತೆ ಉತ್ತಮ ಆಹಾರಕ್ಕಿಂತ ಜಂಕ್ ಫುಡ್ ಕಡೆಗೆ ಹೆಚ್ಚು ಆಕರ್ಷಿತರಾಗಿರುವುದಲ್ಲದೇ, ಮೇಲೆ ಹೇಳಿದಂತೆ ಯಾವುದೇ ಆರೋಗ್ಯಕರ ದೇಹದಂಡಿಸುವ ಕಾರ್ಯದಲ್ಲಿ ಭಾಗವಹಿಸದಿರುವ ಕಾರಣ ಸಣ್ಣ ವಯಸ್ಸೀಗೇ ಸ್ಥೂಲ ಕಾಯರಾಗಿ, ಡುಮ್ಮ ಅಥವಾ ಡುಮ್ಮಿ ಎನಿಸಿಕೊಂಡು Dummy dummy Duplicate Door No. 88 ಎಂದು ಚಿಕ್ಕವಯಸ್ಸಿನ ಮಕ್ಕಳೂ ಆಡಿಕೊಳ್ಳುವಂತಾಗಿದ್ದಾರೆ. ಹಾಗಾಗಿ ಬಹುತೇಕರು ತಮ್ಮ ದೇಹದ ತೂಕವನ್ನು ಇಳಿಸಿಕೊಳ್ಳಲು ಮುಂದಾಗಿರುವುದು ತಪ್ಪಲ್ಲವಾದರೂ ಅವರು ಅನುಸರಿಸುತ್ತಿರುವ ಮಾರ್ಗ ತಪ್ಪಾಗಿದೆ.
ನನ್ನ ವಯಕ್ತಿಕ ಅನುಭವದ ಪ್ರಕಾರ ಪ್ರತಿಯೊಬ್ಬರೂ ಆರೋಗ್ಯಕರವಾಗಿರಲು 60% ಆಹಾರ ಪದ್ದತಿ ಮತ್ತು 40% ನಿಯಮಿತ ವ್ಯಾಯಾಮ ಅತ್ಯಾವಶ್ಕಕ. ದುರಾದೃಷ್ಟವಷಾತ್ ಇಂದಿನ ಯುವಕರು ಇವೆರಡರಲ್ಲೂ ಎಡವಿ ಊಟ ತನ್ನಿಷ್ಟ ಎಂದು ಯದ್ವಾ ತದ್ವಾ ತಿಂದು ದೇಹ ಬೆಳಸಿಕೊಂಡು ನಂತರ ನೋಟ ಪರರ ಇಷ್ಟ ಎಂದು ಅದನ್ನು ಬೆವರು ಸುರಿಸದೇ ಕರಗಿಸಿಕೊಳ್ಳುವ ಸಲುವಾಗಿ ಲಕ್ಷಾಂತರ ಹಣ ಖರ್ಚು ಮಾಡಿ Fat shaming ಹಿಂದೆ ಬಿದ್ದಿರುವುದು ನಿಜಕ್ಕೂ ಆಘಾತಕಾರಿಯಾಗಿದೆ. ಅದ್ನಾನ್ ಸಾಮಿ ಎಂಬ ಪಾಕ್ ಮೂಲದ ಬಾಲಿವುಡ್ ಗಾಯಕ ಬ್ಯಾರಿಯಾಟ್ರಿಕ್ ಶಸ್ತ್ರಚಿಕಿತ್ಸೆಯ ಮೂಲಕ ದಿಢೀರ್ ಎಂದು ಸಾಕಷ್ಟು ತೂಕವನ್ನು ತೂಕ ಕಳೆದುಕೊಂಡು ಸಣ್ಣಗಾಗಿ ಎಲ್ಲಗೂ ಮೂಗಿನ ಮೇಲೆ ಬೆರಳಿಡುವಂತ ಮಾಡಿದ ನಂತರ ಬಹುತೇಕರು ಅದೇ shortcut method ಅನುಸರಿಸಲು ಹೋಗಿ ಕಡೆಗೆ ತಮ್ಮ ಪ್ರಾಣವನ್ನೇ ಕಳೆದುಕೊಳ್ಳುತ್ತಿರುವುದು ನಿಜಕ್ಕೂ ದುಃಖಕರವಾದ ಸಂಗತಿಯಾಗಿದೆ. ಕೇಂದ್ರ ಸರ್ಕಾರದ ಸಚಿವ ಅರುಣ್ ಜೇಟ್ಲಿಯವರಂತೂ ತಮ್ಮ ತೂಕ ಇಳಿಸಲು ಒಳಗಾಗಿದ್ದರೆಂದು ಬಲ್ಲ ಮೂಲಗಳಿಂದ ತಿಳಿದು ಬಂದಿದ್ದರೆ, ಮೈಸೂರಿನ ಮಾಜಿ ಯುವರಾಜ ಶ್ರೀ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರೂ ಕೂಡ ತಮ್ಮ ದೇಹದ ತೂಕವನ್ನು ಒಮ್ಮಿಂದೊಮ್ಮೆಲ್ಲೆ ಕಡಿಮೆ ಮಾಡಿಕೊಳ್ಳಲು ಶಸ್ತ್ರಚಿಕಿತ್ಸೆಗೆ ಒಳಗಾಗಿ, ಚಿಕಿತ್ಸೆ ಫಲಾಕಾರಿಯಾಗದ ಕಾರಣವೇ ಅವರು ದೇಹಾಂತ್ಯವಾದರು ಎಂದು ಓದಿದ ನೆನಪು. ಇನ್ನು ಖ್ಯಾತ ಪತ್ರಕರ್ತ ರವಿ ಬೆಳಗೆರೆ ಕೂಡಾ ತಮ್ಮ ದೇಹದ ತೂಕವನ್ನು ಅಸಾಂಪ್ರಾದಾಯಕವಾಗಿ ಕಡಿಮೆ ಮಾಡಿಕೊಳ್ಳಲು ಶಸ್ತ್ರ ಚಿಕಿತ್ಸೆಗೆ ಒಳಗಾಗಿ, ಚಿಕಿತ್ಸೆ ಮಧ್ಯದಲ್ಲಿಯೇ ಕೋಮಾಕ್ಕೆ ಜಾರಿ ಸುಮಾರು ತಿಂಗಳುಗಳ ನಂತರ ಆರೋಗ್ಯವಂತರಾಗಿ ಮನೆಗೆ ಹಿಂತಿರುಗಿ ಬಂದರೂ ಸಂಪೂರ್ಣವಾಗಿ ಚೇತರಿಸಿಕೊಳ್ಳಲಾಗದೇ ಮೃತರಾದರೆ, ಕನ್ನಡದ ಖ್ಯಾತ ಹಾಸ್ಯ ನಟ ಬುಲೆಟ್ ಪ್ರಕಾಶ್ ಸಹಾ ಇದೇ ರೀತಿಯ ಧಿಡೀರ್ ಸಣ್ಣಗಾಗಲು ಹೋಗಿ ಹೈರಾಣಾಗಿ ಕಡೆಗೆ ಶಿವನ ಪಾದ ಸೇರಿರುವುದು ಈಗ ಇತಿಹಾಸವಾಗಿದೆ.
ಪ್ರೊಫೆಸರ್ ಹಕ್ಸಲೆ ಎಂಬ ಪಾಶ್ಚಾತ್ಯ ಪಂಡಿತರು ಹೇಳಿದ ಹಾಗೆ Be careful, your body is the living temple of God ಅಂದರೆ, ನಮ್ಮ ದೇಹವು ಜೀವಂತ ದೇವರು ಇರುವ ದೇವಾಲಯ ಹಾಗಾಗಿ ಜಾಗರೂಕರಾಗಿ ನಮ್ಮ ಆರೋಗ್ಯವನ್ನು ಹೇಗೆ ಕಾಪಾಡಿಕೊಳ್ಳಬೇಕು ಎಂಬುದನ್ನು ಸೂಕ್ಷ್ಮವಾಗಿ ಹೇಳಿದ್ದಾರೆ. ನಮ್ಮ ದೇಹ ಯಾವುದೇ ಪತ್ರವನ್ನೇ ಆಗಲಿ ಸ್ವೀಕಾರ ಮಾಡುವ ಅಂಚೆ ಪೆಟ್ಟಿಗೆ (Post box) ಅಥವಾ ಎಲ್ಲಾ ರೀತೀಯ ಗಲೀಜನ್ನು ಹಾಕಲು ಬಳೆಸುವ ಕಸದ ಡಬ್ಬ( Dust bin) ಅಂತೂ ಅಲ್ಲವೇ ಅಲ್ಲ. ಹಾಗಾಗಿ ಮೊದಲು ನಾವೇ ನಮ್ಮ ದೇಹವನ್ನು ಪ್ರೀತಿಸುವುದನ್ನು ರೂಢಿಮಾಡಿಕೊಳ್ಳಬೇಕು. ನಮ್ಮ ದೇಹ ಸುಸ್ಥಿತಿಯಲ್ಲಿರಲು ಏನು ಬೇಕು? ಏನು ಬೇಡ? ಏನನ್ನು? ಎಷ್ಟು ತಿನ್ನಬೇಕು? ಯಾವುದನ್ನು ಬಿಡಬೇಕು? ನಮ್ಮ ದೇಹಕ್ಕೆ ಅನುಗುಣವಾಗಿ ಎಷ್ಟು ಹೊತ್ತು? ಯಾವ ರೀತಿಯ ವ್ಯಾಯಾಮ ಮಾಡಬೇಕು? ಯಾವ ರೀತಿಯಾಗಿ ನಮ್ಮ ಜೀವನ ಶೈಲಿ ಇರಬೇಕು? ಎಂಬುದನ್ನು ಪಟ್ಟಿ ಮಾಡಿಕೊಂಡು ಅದೇ ರೀತಿಯಾಗಿ ನಿಯಮಿತವಾಗಿ ಪಾಲಿಸಬೇಕು.
ಇಂದಿನ ಯುವಜನತೆ ಎದುರಿಸುತ್ತಿರುವ ಬಹುತೇಕ ರೋಗಗಳಿಗೆ ಸ್ಥೂಲಕಾಯ ಅತ್ಯಂತ ಮಾರಕವಾಗಿದ್ದು ಅದನ್ನು ಹೇಗೆ ಪಡೆದು ಕೊಂಡೆವೋ ಹಾಗೆಯೇ ನಿಧಾನವಾಗಿ ನಿಯಮಿತವಾದ ವ್ಯಾಯಾಮ ಮತ್ತು ಯೋಜಿತ ಆಹಾರ ಪದ್ದತಿಯ ಮೂಲಕ ಆರೋಗ್ಯಕರವಾದ ರೀತಿಯಲ್ಲಿ ತೂಕವನ್ನು ಕಾಯ್ದುಕೊಳ್ಳುವ ಮೂಲಕ ನಾನಾ ವಿವಿಧ ರೋಗ ರುಜಿನಗಳಿಂದ ಮುಕ್ತರಾಗಿರಬಹುದಾಗಿದೆ. ಇದನ್ನು ಚೆನ್ನಾಗಿಯೇ ಅರಿತಿದ್ದ ನಮ್ಮ ಪೂರ್ವಜರು ಲಂಘನಂ ಪರಮೌಷಧಂ ಎಂದರೆ ಉಪವಾಸವೇ ಸಕಲ ಖಾಯಿಲೆಗಳಿಗೆ ಪರಮೌಷಧ ಎಂದು ಹೇಳಿದ್ದಾರೆ. Something is better than nothing ಎನ್ನುವಂತೆ, ಯಾವುದೇ ರೀತಿಯ ವ್ಯಾಯಾಮವನ್ನೇ ಮಾಡದೇ ಇರುವುದಕ್ಕಿಂತಲೂ, ಅಲ್ಪ ಸ್ವಲ್ಪ ನಮ್ಮ ದೇಹಕ್ಕೆ ಅನುಗುಣವಾಗಿ ನಿಯಮಿತವಾಗಿ ವ್ಯಾಯಾಮ ಮಾಡುವುದು ಉತ್ತಮ. ವಾರದಲ್ಲಿ ಕನಿಷ್ಠ ಪಕ್ಷ ನಾಲ್ಕೈದು ದಿನಗಳಾದರೂ ದಿನದಲ್ಲಿ 30-60 ನಿಮಿಷ ವ್ಯಾಯಾಮ ಮಾಡುವುದು ಅತ್ಯುತ್ತವಾದ ಅಭ್ಯಾಸ. ಯಾವುದೇ ವ್ಯಾಯಾಮ ಮಾಡಲು ಸಾಧ್ಯವಾಗದಿದ್ದಲ್ಲಿ ದೇಹವನ್ನು ದಂಡಿಸಲು ಮತ್ತು ಸುಸ್ಥಿತಿಯಲ್ಲಿಡಲು ದೀರ್ಘ ನಡಿಗೆ ಮತ್ತು ಯೋಗಾಸನ ಮತ್ತು ಪ್ರಾಣಾಯಾಮಗಳು ಅತ್ಯುತ್ತಮ ವಿಧಾನಗಳಾಗಿವೆ. ಅದರಲ್ಲೂ ಸೂರ್ಯ ನಮಸ್ಕಾರದ ಮೂಲಕ ಅತ್ಯಂತ ಕಡಿಮೆ ಸಮಯದಲ್ಲಿ ಅತ್ಯಂತ ಹೆಚ್ಚಿನ Calories burn ಮಾಡಬಹುದಾಗಿದೆ.
ಇಂದಿನ ಜನರ ಪರಿಸ್ಥಿತಿ ಹೇಗಿದೆ ಎಂದರೆ,
ಸೈಕಲ್ ತುಳಿದು ಕಾಲು ನೋವಾಗಿ ಬೈಕ್ ಬಂತು
ಬೈಕ್ ಓಡಿಸಿ ಬೆನ್ನು ನೋವಾಗಿ ಕಾರ್ ಬಂತು
ಕಾರ್ ಓಡಿಸುವಾಗ ಕೈಕಾಲು ಆಡಿಸದ ಕಾರಣ ಹೊಟ್ಟೆ ಬಂತು
ಆ ಹೊಟ್ಟೆ ಕರಗಿಸಲು ಮತ್ತೆ ಜಿಮ್ಮಿನಲ್ಲಿ ಸೈಕಲ್ ತುಳಿಯುವ ಹಾಗಾಯ್ತು
ಮೊದಲು ನಾಲಿಗೆಯನ್ನು ಹಿಡಿತಲ್ಲಿ ಇಟ್ಟು ಕೊಳ್ಳಲಾಗದೇ ಉಟತನ್ನಿಷ್ಟ ಎಂದು ಸಿಕ್ಕಾ ಪಟ್ಟೆ ತಿಂದು ದಪ್ಪಗಾಗಿ ನಂತರ ಮತ್ತೊಬ್ಬರ ಕಣ್ಣಿಗೆ ಸಣ್ಣಗೆ ಕಾಣುವ ಸಲುವಾಗಿ ಕಳೆದ ವಾರವಷ್ಟೇ, ಕಿರುತೆರೆ ನಟಿಯೊಬ್ಬರು ದೇಹದ ಕೊಬ್ಬು ಕರಗಿಸಲು ತನ್ನ ಪೋಷಕರು ಮತ್ತು ಸ್ನೇಹಿತರಿಗೂ ಹೇಳಿದೇ, ಶಸ್ತ್ರಚಿಕ್ತಿತ್ಸೆಗೆ ಒಳಗಾಗಿ ಚಿಕಿತ್ಸೆಯ ಸಮಯದಲ್ಲಿ ಶ್ವಾಸಕೋಶದಲ್ಲಿ ನೀರು ತುಂಬಿದ ಕಾರಣ ಅಸುನೀಗಿರುವುದು ನಿಜಕ್ಕೂ ದುಃಖಕರವೇ ಸರಿ. ಮೇಲ್ನೋಟಕ್ಕೆ ಇದು ಎಷ್ಟೇ ವೈದ್ಯರ ನಿರ್ಲಕ್ಷ್ಯ ಎಂಬಂತೆ ಕಂಡರೂ, ಚಿಕಿತ್ಸೆಯ ಸಮಯದಲ್ಲಿ ಆಗ ಬಹುದಾದ ಅವಘಢಗಳಿಗೆ ವೈದ್ಯರು ಜವಾಬ್ಧಾರಲ್ಲಾ ಎಂಬ ಎಲ್ಲಾ ರೀತಿಯ ಕರಾರು ಪತ್ರಗಳಿಗೆ ಸಹಿ ಹಾಕಿಸಿಕೊಂಡಿರುವ ಕಾರಣ ಕಾನೂನಾತ್ಮಕವಾಗಿ ವೈದ್ಯರನ್ನೇನು ಮಾಡಲಾಗದು. ಈಗ ಎಷ್ಟೇ ಬಡಿದಾಡಿದರೂ ಹೋದ ಜೀವವನ್ನು ಮರಳಿ ತರಲಾಗದ ಕಾರಣ, ಈ ಲೇಖನವನ್ನು ಓದಿದ ನಂತರವಾದರೂ ವ್ಯಾಯಮ ಮತ್ತು ಸರಿಯಾದ ಆಹಾರ ಪದ್ದತಿಗಳಿಲ್ಲದೇ ದಿಢೀರ್ ಎಂದು ಸಣ್ಣಗಾಗುವುದು ಆಘಾತಕಾರಿ ವಿಷಯ ಎಂದು ತಿಳಿದು ಯಾರು ಏನೇ ಹೇಳಿದರೂ ಅದನ್ನು ತಲೆಗೆ ಹಾಗಿಕೊಳ್ಳದೇ, ನಾವು ಹೇಗಿದ್ದೇವೋ ಅದನ್ನೇ ಒಪ್ಪಿಕೊಂಡು ಬದುಕುವುದು ಉತ್ತಮ.
ಇನ್ನೂ ಕೆಲವರು ಗುಳಿಗೆ ಮತ್ತು ಪುಡಿಗಳ ರೂಪದಲ್ಲಿ ರಾಸಾಯನಿಕ ವಸ್ತುಗಳನ್ನು ಸೇವಿಸಿ ಹಲವರು ತೂಕ ಇಳಿಸಿಕೊಂಡಿರುವ ಉದಾಹರಣೆ ಇದ್ದರೂ, ಅದರಿಂದ ಸದ್ಯಕ್ಕೆ ಜೀವಕ್ಕೆ ಅಪಾಯ ಇಲ್ಲದೇ ಇದ್ದರೂ, long term ನಲ್ಲಿ ಖಂಡಿತವಾಗಿಯೂ ಅದರ ಅಡ್ಡಪರಿಣಾಮವನ್ನು ಅನುಭವವಿಸಲೇ ಬೇಕಾಗುತ್ತದೆ. Thyroid, BP, sugar ಮುಂತಾದವುಗಳಿಗೆ ಕಟ್ಟು ನಿಟ್ಟಿನ ಆಹಾರ, ನಿಯಮಿತವಾದ, ಅಷ್ಟೇ ಹಿತಮಿತವಾದ ವ್ಯಾಯಾಮ ಮಾಡಿಕೊಳ್ಳುವ ಮೂಲಕ ನೆಮ್ಮದಿಯ ಜೀವನವನ್ನು ಸಾಗಿಸಬಹುದಾಗಿದೆ. There is no shortcut for success in life ಎನ್ನುವುದನ್ನು ಮನಗಂಡು ಬೇಸಿಗೆಯಲ್ಲಿ ಒಣಗುವ, ಚಳಿಯಲ್ಲಿ ಬೆದರುವ ಈ ಹುಲುಶರೀರಕ್ಕೆ ? ಒಂದು ದಿನ ಜೀವನ ಮುಗಿಸಲೇ ಬೇಕಾದ ಈ ಶರೀರಕ್ಕೆ ಅನಗತ್ಯವಾದ ಹಿಂಸೆಯನ್ನು ತೆಗೆದುಕೊಳ್ಳದೇ ಆರಾಮಾಗಿ ಇರೋಣ. ಜೀವ ಇದ್ದಲ್ಲಿ ಮಾತ್ರವೇ ಜೀವನ ಅಲ್ವೇ?
ಏನಂತೀರಿ?
ನಿಮ್ಮವನೇ ಉಮಾಸುತ