ಕಳೆದ ಒಂದು ತಿಂಗಳಿನಿಂದಲೂ ಮಹಾರಾಷ್ಟ್ರದ ರಾಜಕಾರಣದಲ್ಲಿ ಕ್ಷಣ ಕ್ಷಣಕ್ಕೂ ಆಗುತ್ತಿರುವ ಬದಲಾವಣೆಯನ್ನು ಇಡೀ ದೇಶದ ಜನರು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ವಿರೋಧ ಪಕ್ಷಗಳು ಇದೊಂದು ಪ್ರಜಾಪ್ರಭುತ್ವದ ಕಗ್ಗೊಲೆ. ಕೇಂದ್ರ ಸರ್ಕಾರ ವಿರೋಧ ಪಕ್ಷವನ್ನು ಧಮನ ಮಾಡುವ ಮೂಲಕ ಸರ್ವಾಧಿಕಾರಿಯಂತೆ ವರ್ತಿಸುತ್ತಿದೆ ಎಂದು ಅಬ್ಬಿರಿದು ಬೊಬ್ಬಿರಿಯುತ್ತಿರುವುದನ್ನು ಪ್ರತಿಯೊಂದು ಮಾಧ್ಯಮದಲ್ಲೂ ಕಾಣಬಹುದಾಗಿದೆ. ಆದರೆ ಈ ರೀತಿಯ ಕ್ಷಿಪ್ರಕ್ರಾಂತಿ ಕೇವಲ ಒಂದು ದಿನ ಅಥವಾ ಒಂದು ಸಂಧರ್ಭದಿಂದ ಆಗದೇ ಇದರ ಹಿಂದೆ ಹತ್ತಾರು ವಿಷಯಗಳು ಅಡಕವಾಗಿರುತ್ತದೆ ಎಂಬುದನ್ನೂ ಸೂಕ್ಷ್ಮವಾಗಿ ಗಮನಿಸಬೇಕಾಗಿದೆ.
2019ರ ಅಕ್ಟೋಬರ್ 21 ರಂದು ಮಹಾರಾಷ್ಟ್ರದ 288 ವಿಧಾನಸಭಾ ಸದಸ್ಯರನ್ನು ಆಯ್ಕೆ ಮಾಡಲು ಚುನಾವಣೆ ನಿರ್ಧಾರವಾದಾಗ, ಎಂದಿನಂತೆ ಹಿಂದೂತ್ವ ಸಿದ್ಧಾಂತದ ಅಡಿಯಲ್ಲಿ ಬಿಜೆಪಿ ಮತ್ತು ಶಿವಸೇನೆ ಒಂದಾಗಿ ಚುನಾವಣ ಪೂರ್ವತ್ತರ ಮೈತ್ರಿಯಲ್ಲಿ ಚುನಾವಣೆಯನ್ನು ಎದುರಿಸಿದರೆ, ಕಾಂಗ್ರೇಸ್ , ಎನ್.ಸಿ.ಪಿ ಮತ್ತು ಉಳಿದೆಲ್ಲಾ ಸಣ್ಣ ಪುಟ್ಟ ಪಕ್ಷಗಳು ಸ್ವತಂತ್ರ್ಯವಾಗಿ ಚುನಾವಣೆಯನ್ನು ಎದುರಿಸಿ, ಅಂತಿಮವಾಗಿ ಜನಾದೇಶ ಬಂದಾಗ, ಬಿಜೆಪಿ 105, ಶಿವಸೇನೆ 56, ಕಾಂಗ್ರೆಸ್ 54, ಎನ್.ಸಿ.ಪಿ. 44 ಮತ್ತು ಇತರೆ 29 ಶಾಸಕ ಸ್ಥಾನಗಳನ್ನು ಗೆದ್ದಿದ್ದವು.
ಚುನಾವಣಾ ಪೂರ್ವೋತ್ತರ ಮೈತ್ರಿಯಂತೆ ಬಿಜೆಪಿ ಮತ್ತು ಶಿವಸೇನೆ ಸೇರಿಕೊಂಡು ಒಟ್ಟಿ 161 ಸ್ಥಾನ ಗಳಿಸುವ ಮೂಲಕ, ಅಧಿಕಾರದ ಗದ್ದುಗೆಯನ್ನು ಏರಲು ಅಗತ್ಯವಿದ್ದ ಬಹುಮತದ ಸಂಖ್ಯೆ 145ಕ್ಕಿಂತಲೂ 16 ಸ್ಥಾನಗಳನ್ನು ಹೆಚ್ಚಿಗೆ ಪಡೆದ ಕಾರಣ ಸಹಜವಾಗಿ ಮತ್ತೊಮ್ಮೆ ಬಿಜೆಪಿ -ಶಿವಸೇನೆ ಸರ್ಕಾರವೇ ಆಡಳಿತಕ್ಕೆ ಬರಲಿದೆ ಎಂದೇ ಎಲ್ಲರೂ ಭಾವಿಸಿದ್ದರು.
ಹಿಂದೂತ್ವ ಮತ್ತು ಮರಾಠಿಗರ ಅಸ್ಮಿತೆಗಾಗಿ ಹೋರಾಟ ಮಾಡುತ್ತಾ, ಅಧಿಕಾರಕ್ಕೆ ಎಂದೂ ಆಸೆ ಪಡದಿದ್ದ ಶಿವಸೇನೆ ಸ್ಥಾಪಕರ ಮಗ ಬಾಳಾ ಸಾಹೇಬರ ಮಗ ಉದ್ಧವ್ ಠಾಕ್ರೆ ಮಾತ್ರಾ ತಮ್ಮ ತಂದೆಯವರ ಆಶಯಗಳನ್ನೆಲ್ಲಾ ಗಾಳಿಗೆ ತೂರಿ, ತಾನು ಮತ್ತು ತನ್ನ ಮಗ ಆದಿತ್ಯ ಠಾಕ್ರೆ ಅಧಿಕಾರಕ್ಕೆ ಬರಬೇಕೆಂಬ ಆಸೆಯಿಂದ ಬಿಜೆಪಿಯ ಅರ್ಧ ಸ್ಥಾನ ಗಳಿಸಿದ್ದರೂ, ಮುಖ್ಯಮಂತ್ರಿ ಸ್ಥಾನಕ್ಕೆ ಆಗ್ರಹ ಮಾಡಿದಾಗ ಸಹಜವಾಗಿ ಬಿಜೆಪಿ ಅದಕ್ಕೆ ಒಪ್ಪದೇ ಹೋದಾಗ, ಯಾವ ಕಾಂಗ್ರೆಸ್ ವಿರುದ್ಧ ತಮ್ಮ ತಂದೆಯವರು ಜೀವಮಾನವಿಡೀ ಹೋರಾಡಿದ್ದರೋ, ಈಗ ಅದೇ ಕಾಂಗ್ರೇಸ್ ಮತ್ತು ಎನ್.ಸಿ.ಪಿ. ಜೊತೆ ಕೈ ಜೋಡಿಸಿ ಮಹಾ ವಿಕಾಸ್ ಅಘಾಡಿ ಎಂಬ ಹೆಸರಿನಲ್ಲಿ ಮೈತ್ರಿ ಮಾಡಿಕೊಂಡು ಉದ್ದವ್ ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿದ್ದಲ್ಲದೇ, ತಮ್ಮ ಸಂಪುಟದಲ್ಲಿ ತಮ್ಮ ಮಗ ಆದಿತ್ಯನಿಗೆ ಮಂತ್ರಿಯನ್ನಾಗಿಸಿದರು.
ಮಾಜೀ ಪ್ರಧಾನ ಮಂತ್ರಿಗಳಾಗಿದ್ದ ಅಟಲ್ ಬಿಹಾರಿ ವಾಯಪೇಯಿಯವರು ಪದೇ ಪದೇ ಹೇಳುತ್ತಿದ್ದ ಹಾಗೆ, ಕಾಂಗ್ರೇಸ್ ಅಧಿಕಾರದಲ್ಲಿ ಇರುವುದಕ್ಕಿಂತಲೂ ಅಧಿಕಾರದಲ್ಲಿ ಇಲ್ಲದಿದ್ದಾಗಲೇ ಹೆಚ್ಚು ಅಪಾಯಕಾರಿ ಎನ್ನುವಂತೆ, ದೇಶದಲ್ಲಿ ಒಂದೊಂದೇ ರಾಜ್ಯವನ್ನು ಕಳೆದು ಕೊಂಡು ಲೋಕಸಭೆಯಲ್ಲೂ ಕೇವಲ 40+ ಸ್ಥಾನ ಗಳಿಸಿ ಅಧಿಕೃತ ವಿರೋಧ ಪಕ್ಷದ ಸ್ಥಾನವನ್ನೂ ಗಳಿಸಲು ಆಗದೇ ಪರದಾಡುತ್ತಿದ್ದ ಸಮಯದಲ್ಲಿ, ಅವಕಾಶ ಸಿಕ್ಕಾಗಲೆಲ್ಲಾ ದೇಶದ ಬಹುಸಂಖ್ಯಾತ ಹಿಂದೂಗಳಿಗಿಂತಲೂ ಅಲ್ಪಸಂಖ್ಯಾತರ ಬಗ್ಗೆಯೇ ಕಾಳಜಿ ತೋರುತ್ತಿದ್ದರೂ, ತನ್ನನ್ನು ತಾನು ಜಾತ್ಯಾತೀತ ಪಕ್ಷ ಎಂದು ಕರೆದುಕೊಳ್ಳುವ ಕಾಂಗ್ರೇಸ್, ಸದಾಕಾಲವೂ ಉಗ್ರ ಹಿಂದೂಪರವಾಗಿದ್ದು, ಬಹಿರಂಗವಾಗಿಯೇ ತಾನು ಬಲಪಂಥೀಯ ಎಂದು ಹೋರಾಟ ಮಾಡುತ್ತಲೇ ಇದ್ದ ಶಿವಸೇನೆ. ಈ ರೀತಿಯಾಗಿ ಪರಸ್ಪರ ವಿಭಿನ್ನ ಸೈದ್ಧಾಂತಿಕ ನಿಲುವುಗಳನ್ನು ಹೊಂದಿದ್ದ ಪಕ್ಷಗಳ ನಾಯಕರು ತಮ್ಮ ಸ್ವಹಿತಾಸಕ್ತಿಗಾಗಿ ಮತ್ತು ಅಧಿಕಾರದ ಮೇಲಿನ ಲಾಲಸೆಯಿಂದ ಒಂದಾದಾಗ, ಯಾವೊಬ್ಬ ಪ್ರಗತಿ ಪರರೂ ಇದು ಜಾನಾದೇಶದ ವಿರುದ್ದದ ಅನೈತಿಕ ಮೈತ್ರಿ, ಹೀಗೆ ಮಾಡಿದರೂ ಪ್ರಜಾಪ್ರಭುತ್ವದ ಕಗ್ಗೊಲೆಯಾಗುತ್ತದೆ ಎಂದು ಹೇಳದೇ ಹೋದ್ದದ್ದು ನಿಜಕ್ಕೂ ವಿಪರ್ಯಾಸವೇ ಸರಿ.
ಬೆಕ್ಕು ಕಣ್ಣು ಮುಚ್ಚಿ ಕೊಂಡು ಹಾಲು ಕುಡಿದು ಅದು ಲೋಕಕ್ಕೆ ಕಾಣುವುದಿಲ್ಲ ಎಂದು ಭಾವಿಸಿದರೂ, ಜನರು ಅದನ್ನು ನೋಡಿರುವಂತೆ, ಶಿವಸೇನೆ ಮತ್ತು ಕಾಂಗ್ರೇಸ್ ನಾಯಕರುಗಳು ಈ ರೀತಿಯಾಗಿ ಅಸ್ವಾಭಾವಿಕವಾದ ಅಧಿಕಾರವನ್ನು ಹಂಚಿಕೊಂಡಿದ್ದು ಅವರನ್ನು ಆಯ್ಕೆ ಮಾಡಿ ಕಳುಹಿಸಿದ್ದ ಜನರಿಗೆ ಬೇಸರ ತರಿಸಿದ್ದರೆ, ಸ್ವತಃ ಶಿವಸೇನೆಯಿಂದ ಆಯ್ಕೆಯಾದ ಶಾಸಕರಿಗೇ ಅಸಮಧಾನವಾಗಿದ್ದು, ಪದೇ ಪದೇ ನಾವು ಬಿಜೆಪಿಯೊಂದಿಗಿನ ಸಂಬಂಧ ಮುರಿದು ಕೊಳ್ಳಬಾರಾದಾಗಿತ್ತು. ಮತ್ತೊಮ್ಮೆ ಈ ಕುರಿತು ಯೋಚಿಸುವುದು ಉತ್ತಮ ಎಂದು ಸಮಯ ಸಿಕ್ಕಾಗಲೆಲ್ಲಾ ಪಕ್ಷದ ಒಳಗಡೇ ಮತ್ತು ಬಹಿರಂಗವಾಗಿಯೂ ಹೇಳುತ್ತಿದ್ದರೂ, ಅಧಿಕಾರದ ಮಧದಲ್ಲಿ ತೇಲುತ್ತಿದ್ದ ಉದ್ದವ್ ಠಾಕ್ರೆ ಮತ್ತು ಆದಿತ್ಯ ಠಾಕ್ರೆ ಇದಕ್ಕೆ ಸೊಪ್ಪು ಹಾಕಿರಲಿಲ್ಲ.
ಉದ್ದವ್ ಠಾಕ್ರೆಯ ರಾಜಕೀಯ ಜ್ಞಾನದ ಕೊರತೆ, ಆಡಳಿತ ಅನುಭವದ ಕೊರತೆ, ಪುತ್ರ ವ್ಯಾಮೋಹ, ಅಹಂಕಾರ, ಉಡಾಫೆಯ ಜೊತೆಗೆ ರಾಜ್ಯಸಭೆಯಲ್ಲಿ ಶಿವಸೇನೆ ನಾಯಕ ಮತ್ತು ಶಿವಸೇನೆಯ ಮುಖಪುಟವಾದ ದೈನಿಕ್ ಸಾಮ್ನಾ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕರಾದ ಸಂಜಯ್ ರಾವುತ್ ತಮ್ಮ ಪತ್ರಿಕೆಯ ಮುಖಪುಟದಲ್ಲಿ ಅನಗತ್ಯವಾಗಿ ಕೇಂದ್ರ ಸರ್ಕಾರದ ವಿರುದ್ಧ ಇಲ್ಲ ಸಲ್ಲದ್ದನ್ನು ಬರೆಯುತ್ತಾ ಕೇಂದ್ರ ಮತ್ತು ರಾಜ್ಯ ಸರ್ಕಾರದ ನಡುವಿನ ಸಂಬಂಧಕ್ಕೆ ಹುಳಿ ಹಿಂಡುತ್ತಿದ್ದದ್ದು ಪಕ್ಷದ ಕಾರ್ಯಕರ್ತರಿಗೂ ಮತ್ತು ಶಾಸಕರಿಗೆ ಬೇಸರ ತರಿಸಿತ್ತು.
ಇವೆಲ್ಲರದ ಪರಿಣಾಮವಾಗಿ ಮೂರು ವಾರದ ಹಿಂದೆ ನಡೆದ ರಾಜ್ಯ ಸಭಾ ಚುನಾವಣೆಯಲ್ಲಿ ಕೆಲ ಅಡ್ಡ ಮತದಾನಗಳು ನಡೆದು ಬಿಜೆಪಿ ಒಂದು ಹೆಚ್ಚಿನ ಸ್ಥಾನವನ್ನು ಗಳಿಸಿದಾಗಲೂ, ತನ್ನ ಶಾಸಕರ ಮನದಾಳದ ಇಂಗಿತವನ್ನು ಅರಿಯದೇ ಹೋದ ಉದ್ದವ್ ಗೆ ಮತ್ತೊಮ್ಮೆ ಪಾಠ ಕಲಿಸುವ ಸಲುವಾಗಿ ಕಳೆದ ವಾರ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಕೇವಲ 106 ಸಂಖ್ಯಾಬಲ ಇದ್ದ ಬಿಜೆಪಿಯ ಲೆಕ್ಕಾಚಾರದ ಪ್ರಕಾರ ನಾಲ್ಕು ಸ್ಥಾನಗಳನ್ನಷ್ಟೇ ಗೆಲ್ಲಬಹುದಿತ್ತು. ಆದರೆ ಕೆಲವು ಸ್ವತಂತ್ರ ಶಾಸಕರ ಜೊತೆ ಶಿವಸೇನೆಯ ಕೆಲವು ಶಾಸಕರೂ ಸೇರಿ ಅಡ್ಡ ಮತದಾನ ಮಾಡಿದ ಪರಿಣಾಮ, ಅಘಾಡಿಯ ಆರು ಅಭ್ಯರ್ಥಿಗಳಲ್ಲಿ ಒಬ್ಬರನ್ನು ಸೋಲಿಸುವ ಮೂಲಕ ಬಿಜೆಪಿಗೆ ಹೆಚ್ಚುವರಿಯಾಗಿ ಐದು ಸ್ಥಾನಗಳನ್ನು ಗೆಲ್ಲಿಸುವ ಮೂಲಕ ಸರ್ಕಾರಕ್ಕೆ ಆಘಾತ ನೀಡಿದ್ದನ್ನು ಅರಗಿಸುಕೊಳ್ಳುವ ಮುನ್ನವೇ, ಶಿವಸೇನೆ ಪಕ್ಷದ ಶಾಸಕಾಂಗ ಪಕ್ಷದ ನಾಯಕರಾಗಿದ್ದ ಏಕನಾಥ್ ಶಿಂಧೆ ನಾಯಕತ್ವದಲ್ಲಿ ಸುಮಾರು 34 ಶಾಸಕರು ತಮ್ಮ ಪಕ್ಷದ ವಿರುದ್ಧವೇ ಬಂಡಾಯ ಎದ್ದು ಗುಜರಾತಿನ ರೆಸಾರ್ಟ್ ಒಂದರಲ್ಲಿ ಬೀಡು ಬಿಟ್ಟು ನಂತರ ದೂರದ ಅಸ್ಸಾಂ ರಾಜ್ಯಕ್ಕೆ ತಮ್ಮ ವಾಸ್ತವ್ಯ ಬದಲಿಸಿದ್ದಾರೆ. ಇವರ ಜೊತೆ ಇನ್ನೂ ಕೆಲವು ಪಕ್ಷೇತರ ಶಾಸಕರು ಸಹಾ ಅಲ್ಲಿ ಬೀಡು ಬಿಟ್ಟಿರುವುದು ಸರ್ಕಾರದ ಅಸ್ತಿತ್ವಕ್ಕೆ ತೂಗು ಕತ್ತಿಯಾಗಿದೆ.
ಪರಿಸ್ಥಿತಿಯನ್ನು ನಿಭಾಯಿಸಲು ಉದ್ದವ್ ಕರೆದಿದ್ದ ಶಾಸಕಾಂಗ ಸಭೆಯೂ ಸಹಾ ವಿಫಲವಾಗಿ ಮಹಾ ಅಘಾಡಿ ಸರ್ಕಾರದಿಂದ ಹೊರಬಂದು ಮಹಾರಾಷ್ಟ್ರದ ಜನತೆಯ ಆಶಯದಂತೆ ಅಪ್ಪಟ ಕೇಸರಿ ಸರ್ಕಾರ ಬಾರದೇ ಹೋದಲ್ಲಿ, ಸರ್ಕಾರ ಪತನವಾಗುವುದು ಬಿಡಿ, ಪಕ್ಷದ ಮೂರನೇ ಎರಡರಷ್ಡು ಶಾಸಕರು ಉದ್ದವ್ ಠಾಕ್ರೆ ವಿರುದ್ದ ಬಂಡೆದ್ದಿರುವ ಕಾರಣ ಶಿವಸೇನೆ ಪಕ್ಷವೇ ವಿಭಜನೆಯಾಗುವ ಸಂಭವವೇ ಹೆಚ್ಚಾಗಿ ಕಾಣುತ್ತಿದೆ
ಶಿವಸೇನೆಯಲ್ಲಿ ಬಂಡಾಯ ಇದೆ ಮೊದಲಲ್ಲ. ಬಾಳಠಾಕ್ರೆ ಅದ್ಯಕ್ಷರಾಗಿದ್ದಾಗಲೂ ಜಗನ್ ಬುಜಬಲ್, ನಾರಾಯಣ ರಾಣೆ, ರಾಜ್ ಠಾಕ್ರೆಯಂತಯ ನಾಯಕರು ಹೊರಹೋಗಿದ್ದರೂ, ಶಿವಸೇನೆ ಎಂದೂ ತನ್ನ ಮೂಲ ಹಿಂದುತ್ವದಿಂದ ಹಿಂದೆ ಸರಿಯದಿದ್ದ ಕಾರಣ, ಪಕ್ಷದ ಕಾರ್ಯಕರ್ತರ ಬೆಂಬಲ ಸದಾಕಾಲವೂ ಮುಂದುವರೆದಿತ್ತು. ಆದರೆ ಪುತ್ರ ವ್ಯಾಮೋಹದಿಂದಾಗಿ ರಾಜಕೀಯ ಪ್ರಬುದ್ಧತೆಯನ್ನೇ ಮರೆತ ಉದ್ದವ್ ತಮ್ಮನ್ನು ಟೀಕಿಸಿದ ರಿಪಬ್ಲಿಕ್ ಟಿವಿಯ ಅರ್ನಾಬ್ ಗೋಸ್ವಾಮಿಯ ಅನಗತ್ಯ ಬಂಧನ, ನಟಿ ಕಂಗಾನ ರಣಾವತ್ ಕಟ್ಟಡ ಒಡೆದಿದ್ದರ ಜೊತೆಗೆ ದುರಹಂಕಾರಿ ಸಂಜಯ್ ರಾವತ್ ನ ಮಾತು ಕೇಳಿ ದಾರಿ ತಪ್ಪಿದ್ದಕ್ಕಾಗಿ, ಸರ್ಕಾರದ ಅವನತಿ, ಜನವಿರೋಧಿ ಪರಿಸ್ಥಿತಿ ಮತ್ತು ಬಾಳಾಠಾಕ್ರೆಯವರು ಕಟ್ಟಿ ಅತ್ಯಂತ ಜತನದಿಂದ ಬೆಳಸಿದ್ದ ಪಕ್ಷವನ್ನು ಈಗ ಅವರದ್ದೇ ಪಕ್ಷದ ಶಾಸಕರು ಒಡೆದು ಶಿವಸೇನೆಗೆ ಅಂತ್ಯವನ್ನು ಹಾಡಲು ಮುಂದಾಗಿರುವುದು ತುಂಬಲಾರದ ನಷ್ಟವಾಗಿದೆ.
ಇವೆಲ್ಲದರ ಮಧ್ಯೆ, ಆಘಾಡಿ ಸರ್ಕಾರವನ್ನು ಉಳಿಸಲು ಎನ್ ಸಿ ಪಿ ವರಿಷ್ಠ ಶರದ್ ಪವಾರ್ ಅವರು ಏಕನಾಥ್ ಶಿಂಧೆಯವರನ್ನೇ ಮುಖ್ಯಮಂತ್ರಿ ಮಾಡಿ ಎಂಬ ಸಲಹೆಗೆ ಸರ್ಕಾರ ಮತ್ತು ಪಕ್ಷವನ್ನು ಉಳಿಸುವುದರ ಜೊತೆಗೆ ಅಳುದುಳಿದಿರುವ ಮಾನವನ್ನು ಕಾಪಾಡಿಕೊಳ್ಳಲು ಉದ್ದವ್ ಒಪ್ಪಿಕೊಂಡರೂ, ನನಗೆ ಸಿಎಂ ಸ್ಥಾನ ಬೇಡ, ನಾನು ಮುಖ್ಯಮಂತ್ರಿ ಅಗುವುದಿಲ್ಲ ಎಂದು ಟ್ವೀಟ್ ಮಾಡಿರುವ ಏಕನಾಥ್ ಶಿಂಧೆ, ಮಹಾ ವಿಕಾಸ್ ಅಘಾಡಿ ಸರ್ಕಾರ ನಡೆಯೋದು ಸಾಧ್ಯವಿಲ್ಲ, ಶಿವಸೇನೆ ಅಘಾಡಿ ಮೈತ್ರಿಕೂಟದಿಂದ ಹೊರ ಬರಬೇಕು. ಕಳೆದ ಎರಡೂವರೆ ವರ್ಷದ ನಡೆಸುತ್ತಿರುವ ಸಮ್ಮಿಶ್ರ ಸರ್ಕಾರದಿಂದ ಕಾಂಗ್ರೇಸ್ ಮತ್ತು ಎನ್.ಸಿಪಿ. ಹೆಚ್ಚಿನ ಲಾಭ ಪಡೆದು ಮಹಾರಾಷ್ಟ್ರದಲ್ಲಿ ಆ ಎರಡೂ ಪಕ್ಷಗಳು ಬಲಿಷ್ಠಗೊಂಡು, ಶಿವಸೇನೆ ತನ್ನ ನೆಲೆಯನ್ನು ಕಳೆದುಕೊಳ್ಳುವ ಆತಂಕದಲ್ಲಿರುವ ಕಾರಣ ಮಹಾರಾಷ್ಟ್ರದ ಹಿತದೃಷ್ಟಿಯಿಂದ ಮೈತ್ರಿ ಕಡಿದುಕೊಳ್ಳುವ ಮೂಲಕ ಮೂಲ ಶಿವಸೈನಿಕರ ಮನಸ್ಸಿನಲ್ಲಿರೋ ಭಾವನೆಗಳಿಗೆ ಬೆಲೆ ಕೊಡಿ ಎಂದಿರುವುದು ಗಮನಾರ್ಹವಾಗಿದೆ.
ಶಿವಸೇನೆಯೊಂದಿಗೆ ಒಪ್ಪಂದ ಪ್ರಕಾರ ಸ್ಪರ್ಥಿಸಿದ್ದ140 ಕ್ಷೇತ್ರಗಳಲ್ಲಿ 105 ಸ್ಥಾನಗಳನ್ನು ಗಳಿಸುವ ಮೂಲಕ ಜನಾದೇಶ ಬಿಜೆಪಿಯ ಪರವಾಗಿದ್ದರೂ ಅಧಿಕಾರ ಗಳಿಸಲಾಗಲಿಲ್ಲವಲ್ಲಾ ಎಂದು, ಅಘಾಢಿ ಸರ್ಕಾರವನ್ನು ಒಂದಲ್ಲ ಒಂದು ರೀತಿಯಲ್ಲಿ ಅಸ್ಥಿರಗೊಳಿಸಲು ಬಿಜೆಪಿ ಪ್ರಯತ್ನಿಸುತ್ತಿದ್ದರೂ ಸಫಲವಾಗಿರಲಿಲ್ಲ. ಆದರೆ ಈಗ ಶಿವಸೇನೆಯ ಈ ಆಂತರಿಕ ಕ್ಷಿಪ್ರ ಕ್ರಾಂತಿಯಿಂದಾಗಿ, ರೊಟ್ಟಿ ಜಾರಿ ತುಪ್ಪಕ್ಕೆ ಬಿದ್ದಂತಾಗಿ ಸುಲಭವಾಗಿ ಭಿನ್ನಮತೀಯರು ಮತ್ತು ಪಕ್ಷೇತರ ಶಾಸಕರ ಸಂಖ್ಯಾ ಬೆಂಬಲದಿಂದ ಮತ್ತೊಮ್ಮೆ ಮಹಾರಾಷ್ಟ್ರದಲ್ಲಿ ಅಧಿಕಾರಕ್ಕೆ ಮರಳಬಹುದೆಂದು ಬಕ ಪಕ್ಷಿಯಂತೆ ಬಿಜೆಪಿಯೂ ಕಾಯುತ್ತಿರುವುದು ಪ್ರಜಾಪ್ರಭುತ್ವದಲಿರುವ ಹುಳುಕನ್ನು ಎತ್ತಿ ತೋರಿಸುವಂತಾಗಿದೆ.
ಶಿವಸೇನೆಯ ಪಕ್ಷದ ಆಂತರಿಕ ಸಮಸ್ಯೆ ಬಗೆಹರಿಯದೇ ಹೋದಲ್ಲಿ, ಶತಾಯಗತಾಯ ಬಿಜೆಪಿ ಅಧಿಕಾರಕ್ಕೆ ಬರುವುದನ್ನು ತಪ್ಪಿಸುವ ಸಲುವಾಗಿ ಉದ್ದವ್ ವಿಧಾನಸಭೆಯನ್ನೇ ವಿಸರ್ಜಿಸಲೂ ಯೋಚಿಸಿದ್ದರೂ, ಮತ್ತೊಮ್ಮೆ ಜನರಿಂದ ಆಯ್ಕೆಯಾಗಿ ಬರುವ ಭರವಸೆ ಇಲ್ಲದ ಆಘಾಡಿ ಸರ್ಕಾರದ ಸಹಶಾಸಕರು ಇದಕ್ಕೆ ಒಪ್ಪಿಗೆ ನೀಡುತ್ತಿಲ್ಲವೆಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.
ಭಾರತ ಒಕ್ಕೂಟ ಸಂಸ್ಥಾನ. ಪ್ರಜೆಗಳಿಂದ ಪ್ರಜೆಗಳಿಗಾಗಿ ಮತ್ತು ಪ್ರಜೆಗಳಿಗೋಸ್ಕರ ಇರುವುದೇ ಈ ಪ್ರಜಾಪ್ರಭುತ್ವ ಸರ್ಕಾರ ಎಂದು ಎಲ್ಲಾ ಪಕ್ಷದ ರಾಜಕೀಯ ನಾಯಕರು ಅಬ್ಬಿರಿದು ಬೊಬ್ಬಿರಿದರೂ, ಒಳೊಗೊಳಗೇ, ಪ್ರಾದೇಶಿಕ ಧರ್ಮ, ಜಾತಿ, ಭಾಷೆಯ ಅಸ್ಮಿತೆ, ಅಸ್ಥಿತ್ವ ಎಂಬ ಹೆಸರಿನಲ್ಲಿ ವಂಶಪಾರಂಪರ್ಯ ಕುಟುಂಬ ರಾಜಕಾರಣಕ್ಕೆ ಒತ್ತು ನೀಡುತ್ತಿರುವುದೇ ಈ ರೀತಿಯ ರಾಜಕೀಯ ಅಸ್ಥಿರತೆಗೆ ಕಾರಣವಾಗಿರುವುದು ದೇಶದ ಮುನ್ನಡೆಗೆ ಮಾರಕವೇ ಸರಿ. ಯಾರು ಬಂದರೂ ತಮಗೇನೂ ಮಾಡುವುದಿಲ್ಲ ಎಂಬ ಉಡಾಫೆಯಿಂದ ಮತದಾನವನ್ಣೇ ಮಾಡದ ವಿದ್ಯಾವಂತರು ಮತ್ತು ರಾಜಕೀಯ ಪಕ್ಷಗಳು ಒಂದು ದಿನ ನೀಡುವ ಬಿರ್ಯಾನಿ, ಹಣ ಹೆಂಡಕ್ಕೆ ಮತಗಳನ್ನು ಮಾರಿ ಕೊಳ್ಳುವವರು, ಅಭ್ಯರ್ಥಿ ತಮ್ಮ ಧರ್ಮದವನು, ತಮ್ಮ ಜಾತಿಯವನು ಎಂದು ಅಪಾತ್ರರನ್ನು ಆಯ್ಕೆ ಮಾಡುವವರು ಎಲ್ಲರೂ ಒಮ್ಮೆ ಈ ಕುರಿತಾಗಿ ಪ್ರಭುದ್ಧರಾಗಿ ಆಲೋಚಿಸಿ ಸರ್ಕಾರವನ್ನು ಚುನಾಯಿಸುವ ಪರಿಸ್ಥಿತಿ ಈಗ ಬಂದಿದೆ ಅಲ್ವೇ?
ಏನಂತೀರೀ?
ನಿಮ್ಮವನೇ ಉಮಾಸುತ.