ನಾಡಪ್ರಭು ಶ್ರೀ ಕೆಂಪೇಗೌಡರು

kempleGowda_statueಕರ್ನಾಟಕದ ರಾಜಧಾನಿ ಬೆಂಗಳೂರಿನ ಖ್ಯಾತಿ ಈಗ ಕೇವಲ ಕರ್ನಾಟಕ ಅಥವಾ ಭಾರತ ದೇಶಕ್ಕೆ ಮಾತ್ರವೇ, ಸೀಮಿತವಾಗಿರದೇ, ಇಡೀ ಜಗತ್ರ್ಪಸಿದ್ಧವಾಗಿದೆ. ಹೇಗೆ ಪ್ರಪಂಚದ ಮೂಲೆ ಮೂಲೆಯಲ್ಲಿಯೂ ಕನ್ನಡಿಗರು ನೆಲೆಸಿದ್ದರೆ, ಅದೇ ರೀತಿಯಲ್ಲೇ ಜಗತ್ತಿನ ದೊಡ್ಡ ದೊಡ್ಡ ಬಹುರಾಷ್ಟ್ರೀಯ ಕಂಪನಿಗಳು ಬೆಂಗಳೂರಿನಲ್ಲಿ ತಮ್ಮ ಕಛೇರಿಯನ್ನು ಹೊಂದುವುದು ಪ್ರತಿಷ್ಠತೆಯ ಸಂಕೇತ ಎಂದು ಭಾವಿಸಿರುವುದು ಗಮನಾರ್ಹವಾಗಿದೆ.  ಅಂತಹ ವಿಶ್ವವಿಖ್ಯಾತ ಬೆಂಗಳೂರಿನ ನಿರ್ಮಾತರಾದ ನಾಡಪ್ರಭು ಶ್ರೀ ಕೆಂಪೇಗೌಡರ ವ್ಯಕ್ತಿ, ವ್ಯಕ್ತಿತ್ವ, ಸಾಧನೆಯ ಜೊತೆಗೆ ಅಂತಹ ಪ್ರಾಥಃಸ್ಮರಣೀಯ ಯಶೋಗಾಧೆಯನ್ನು ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಮೆಲುಕು ಹಾಕೋಣ ಬನ್ನಿ..

ಆದಿ ಪುರಾಣ ಕವಿರಾಜ ಮಾರ್ಗದಲ್ಲೇ ಹೇಳಿರುವಂತೆ ಕಾವೇರಿಯಿಂದ ಗೋದಾವರಿಯ ತೀರದವರೆಗೂ ಕರ್ನಾಟಕದ ರಾಜರು ಆಳುತ್ತಿದ್ದ ಸಮಯದಲ್ಲೇ, ಸುಮಾರು 14ನೇ ಶತಮಾನದ ಅಂತ್ಯಭಾಗದಲ್ಲಿ ಕಂಚಿ ಬಳಿಯ ಯಣಮಂಜಿ ಪುತ್ತೂರಿನ ಪಾಳೇಗಾರರಾಗಿದ್ದ ರಣ ಬೈರೇಗೌಡ ಮತ್ತು ಸೋದರರು ಅಲ್ಲಿನ ನಡೆದ ಕ್ಷಿಪ್ರರಾಜಕೀಯ ಕ್ರಾಂತಿಯಿಂದಾಗಿ ನಿರಾಶ್ರಿತರಾದಾಗ ಅವರು ಎತ್ತಿನಬಂಡಿಗಳಲ್ಲಿ ವಲಸೆ ಬಂದು ಯಲಹಂಕ ದಾಟಿ ಇಂದಿನ ನಂದಿ ಬೆಟ್ಟದ ತಪ್ಪಲಿನಲ್ಲಿರುವ ಆವತಿ ಎಂಬ ಗ್ರಾಮದಲ್ಲಿ ನೆಲಸಿದರೆಂಬ ಪ್ರತೀತಿ ಇದ್ದು ಮುಂದೆ ಅದೇ ವಂಶದವರೇ ವಿಜಯನಗರದ ಸಾಮಂತರಾಗಿ ಯಲಹಂಕ, ಮಾಗಡಿ ಪ್ರದೇಶದಗಳನ್ನು ಆಳಿದರೆಂದು ಜನರ ನಂಬಿಕೆಯಾಗಿದೆ. ಬೆಂಗಳೂರಿನ ನಿರ್ಮಾತರಾದ ಕೆಂಪೇಗೌಡರೂ ಸಹಾ ಅದೇ ವಂಶದವರಾಗಿದ್ದಾರೆ.

ಗುರು ವಿದ್ಯಾರಣ್ಯರ ಸಾರಥ್ಯದಲ್ಲಿ ಹಕ್ಕ ಬುಕ್ಕರ ನೇತೃತ್ಚದಲ್ಲಿ ದಕ್ಷಿಣ ಭಾರರದಲ್ಲಿ ಮೊತ್ತ ಮೊದಲ ಬಾರಿಗೆ ಆಳ್ವಿಕೆಗೆ ಬಂದ ವಿಜಯ ನಗರದ ಹಿಂದವೀ ಸಾಮ್ರಾಜ್ಯ ಕಟ್ಟಿದ ನಂತರ 1509–1529ರ ವರಗೆ ಅತ್ಯಂತ ಉಚ್ಛ್ರಾಯ ಸ್ಥಿತಿಯಲ್ಲಿ ಪರವ ವೈಭವದಿಂದ ಶ್ರೀ ಕೃಷ್ಣದೇವರಾಯರ ಅಧಿಕಾರ ಪ್ರಾರಂಭವಾಗಿತ್ತು. ಆ ಸಮದಲ್ಲೇ ವಿಜಯನಗರದ ಸಾಮ್ರಾಜ್ಯದ ಸಾಮಂತರಾಗಿ ಯಲಹಂಕದ ನಾಡಪ್ರಭುಗಳಾಗಿ ಆಡಳಿತ ನಡೆಸುತ್ತಿದ್ದ ಶ್ರೀ ಕೆಂಪನಂಜೇಗೌಡ ಹಾಗೂ ಲಿಂಗಾಂಬೆ ದಂಪತಿಗಳಿಗೆ 1510 ರಲ್ಲಿ ಜನಿಸಿದ ಮೊದಲನೆಯ ಮಗುವಿಗೆ ತಮ್ಮ ಕುಲದೇವತೆಯಾದ ಕೆಂಪಮ್ಮ ಹಾಗೂ ಭೈರವರ ಅನುಗ್ರಹದಿಂದ ಜನಿಸಿದ ಎಂಬ ನಂಬಿಕೆಯಿಂದ ಆ ಮಗುವಿಗೆ ಕೆಂಪ, ಕೆಂಪಯ್ಯ, ಕೆಂಪಣ್ಣ ಎಂಬ ಹೆಸರಿನಿಂದ ಕರೆದು ನಂತರ ಪ್ರಜೆಗಳು ಗೌರವಾದರದಿಂದ, ಚಿಕ್ಕರಾಯ, ಕೆಂಪರಾಯ ಎಂದು ಸಂಭೋಧಿಸಿ ಕಡೆಗೆ ಹಿರಿಯ ಕೆಂಪೇಗೌಡ ಎಂದು ಪ್ರಖ್ಯಾತರಾಗುತ್ತಾರೆ.

ಪ್ರತೀ ವರ್ಷ ಹಂಪೆಯಲ್ಲಿ ಬಹಳ ವಿಜೃಂಭಣೆಯಿಂದ ನಡೆಯುತ್ತಿದ್ದ ದಸರಾ ಸಮಾರಂಭವನ್ನು ನೋಡಲು ಸಣ್ಣ ವಯಸ್ಸಿನಿಂದಲೂ ಹೋಗುತ್ತಿದ್ದ ಬಾಲಕ ಕೆಂಪೇಗೌಡರಿಗೆ ಅಲ್ಲಿ ಮುತ್ತು ಹವಳ ಪಚ್ಚೆ ಗಳನ್ನು ಬಳ್ಳ ಬಳ್ಳಗಳಲ್ಲಿ ರಸ್ತೆಗಳಲ್ಲಿ ಮಾರುತ್ತಿದ್ದ ಪರಿ, ಅಲ್ಲಿನ ಸಂಪ್ರದಾಯ ಶ್ರೀಮಂತಿಕೆ ವೈಭವದ ದಸರಾ ನೋಡಿ ಆಕರ್ಷಿತರಾಗಿ ನಾನು ದೊಡ್ಡವನಾಗಿ ಇಂತಹದ್ದೇ ಭವ್ಯ ನಗರವೊಂದನ್ನು ಕಟ್ಟುವ ಕನಸನ್ನು ಕಾಣುತ್ತಿದ್ದರಂತೆ. ಕೆಂಪೇಗೌಡರ ಶಿಕ್ಷಣ ಹೆಸರಘಟ್ಟದ ಬಳಿ ಇರುವ ಐವರುಕಂಡ ಪುರದ ಗುರುಕುಲದಲ್ಲಿ ನಡೆದು ಬಹಳ ಸಣ್ಣ ವಯಸ್ಸಿಗೇ ಯಲಹಂಕದ ಕಾರ್ಯಾಭಾರವನ್ನು ವಹಿಕೊಳ್ಳುತ್ತಾರೆ. ಶ್ರೀ ಕೃಷ್ಣದೇವರಾಯರ ಆಡಳಿತ ವೈಖರಿಯನ್ನೇ ಆದರ್ಶವಾಗಿಟ್ಟುಕೊಂಡು ನಡೆಸುತ್ತಿದ್ದ ಅವರ ಕಾರ್ಯದಕ್ಷತೆ ವಿಜಯನಗರದವೆಗೂ ಹಬ್ಬಿತ್ತು.

ಆದಿಗುರು ಶಂಕರಾಚಾರ್ಯರಿಗೆ ಪ್ರಸವದದ ಬೇನೆಯಲ್ಲಿದ್ದ ಕಪ್ಪೆಗೆ ಹಾವು ಆಶ್ರಯ ನೀಡುತ್ತಿದ್ದದ್ದನ್ನು ಶೃಂಗೇರಿಯಲ್ಲಿ ಕಂಡು ಇದಕ್ಕಿಂತಲೂ ಉತ್ತಮವಾದ ಶಾಂತಿಧಾಮ ಇನ್ನೆಲ್ಲಿಯೂ ಇರದು ಎಂದು ಅಲ್ಲಿಯೇ ತಮ್ಮ ಪೀಠವನ್ನು ಕಟ್ಟಿದಂತೆ, ಕೆಂಪೇಗೌಡರೂ ಸಹಾ ತಮ್ಮ ಆಪ್ತಸ್ನೇಹಿತ ಗಿಡ್ಡೇಗೌಡರೊಂದಿಗೆ ಬೇಟೆಯಾಡಲು ಕೋಡಿಗೇಹಳ್ಳಿ ಕಾಡಿಗೆ ಹೋಗಿದ್ದಾಗ, ಅವರೊಂದಿಗೆ ಬಂದಿದ್ದ ಬೇಟೆ ನಾಯಿ ಮೊಲವೊಂದನ್ನು ನೋಡಿ ಅದರ ಮೇಲೆ ಧಾಳಿ ಮಾಡಲು ಮುಂದಾದಾಗ, ಬಹಳ ಅಚ್ಚರಿಯಂತೆ, ಮೊಲವೇ ಆ ಭೇಟೇ ನಾಯಿಯ ವಿರುದ್ಧ ತಿರುಗಿ ಬಿದ್ದು ಬೇಟೆ ನಾಯಿಯನ್ನು ಅಟ್ಟಿಸಿಕೊಂಡು ಕಾಡಿನಿಂದ ಹೊರಗೋಡಿಸಿದ ಘಟನೆಯನ್ನು ಕಂಡು ಇದಕ್ಕಿಂತಲೂ ಕ್ಷಾತ್ರ ತೇಜದ ಜಾಗ ಮತ್ತೊಂದು ಇರಲಾರದು ಎಂದೆಣಿಸಿ, ಇದೇ ಸ್ಥಳದಲ್ಲೇ ಬಾಲ್ಯದ ಕನಸಾದ ಸುಂದರವಾದ ನಗರವೊಂದನ್ನು ಕಟ್ಟಬೇಕು ಎಂದು ನಿರ್ಧರಿಸಿದರು. ಕೂಡಲೇ ತಮ್ಮ ಕನಸಿನ ನಗರದ ನೀಲಿ ನಕಾಶೆಯನ್ನು ಸಿದ್ಧಪಡಿಸಿ, ವಿಜಯನಗರದ ಸಾಮ್ರ್ಯಾಜರ ಅಪ್ಪಣೆ, ಆಶೀರ್ವಾದ ಮತ್ತು ಅನುದಾನಕ್ಕಾಗಿ ಮೊರೆ ಹೋಗುತ್ತಾರೆ. ಆ ನೂತನ ನಗರ ನಿರ್ಮಾಣದ ವಿವರಣೆ ಕೇಳಿದ ವಿಜಯನಗರದ ಆರಸರು ಪ್ರಭಾವಿತರಾಗಿ, ಅಂದಿನ ಕಾಲಕ್ಕೇ ಸುಮಾರು ಐವತ್ತು ಸಾವಿರ ಚಿನ್ನದ ವರಾಹಗಳ ಜೊತೆಗೆ ಇನ್ನೂ ಆರು ಸಂಸ್ಥಾನಗಳನ್ನೂ ಕೆಂಪೇಗೌಡರಿಗೆ ಉಂಬಳಿಯಾಗಿ ಕೊಟ್ಟು ನಮ್ಮ ನಾಡಿಗೇ ಖ್ಯಾತಿ ತರುವಂತಹ ಅತ್ಯಂತ ಸುಂದರ ಮತ್ತು ಪ್ರಮುಖ ವಾಣಿಜ್ಯ ಕೇಂದ್ರವಾಗುವಂತಹ, ಹೇರಳ ಜಲ ಸಂಪನ್ಮೂಲ ಹೊಂದಿರುವ ಎಲ್ಲಾ ಧರ್ಮ, ಮತ ಮತ್ತು ಭಾಷಿಗರೂ ಸಹಬಾಳ್ವೆಯಿಂದ ಇರುವಂತಹ ನಗರವನ್ನು ನಿರ್ಮಿಸಿ ಎಂದು ಆಶೀರ್ವದಿಸುತ್ತಾರೆ.

aivaruಪ್ರಭುಗಳ ಅಪ್ಪಣೆಯ ಜೊತೆಗೆ ಅನುದಾನವೂ ದೊರೆತ ನಂತರ ಕ್ರಿ.ಶ. 1537ರಲ್ಲಿ ತಮ್ಮ ಇಪ್ಪತ್ತೇಳನೇ ವಯಸ್ಸಿನಲ್ಲಿ ತಾವು ವಿದ್ಯೆ ಕಲಿತ ಹೆಸರಘಟ್ಟದ ಬಳಿಯ ಐವರುಕಂಡಪುರದ ಗುರುಕುಲದ ಗುರುಗಳನ್ನು ಸಂಪರ್ಕಿಸಿ ನಗರದ ನಿರ್ಮಾಣಕ್ಕೆ ಪ್ರಶಸ್ತ ಮಹೂರ್ತವನ್ನು ನಿಗಧಿ ಪಡಿಸಿಕೊಂಡು ಎಲ್ಲರಿಗೂ ಅನುಕೂಲವಾಗುವಂತೆ ತಮ್ಮ ಪ್ರಾಂತ್ಯದ ದೊಮ್ಮಲೂರು ಮತ್ತು ಯಲಹಂಕದ ನಡುವಿನ ಅಲ್ಲಲ್ಲಿ ಗುಡ್ಡಗಳು, ಅನೇಕ ನದಿಮೂಲಗಳು, ಕೆರೆ ನಿರ್ಮಾಣಕ್ಕೆ ಅಗತ್ಯವಾದ ಕಣಿವೆ ಪ್ರದೇಶ, ನಗರ ನಿರ್ಮಾಣಕ್ಕೆ ಸಮತಟ್ಟಾದ ಭೂಪ್ರದೇಶ, ಸಾಕಷ್ಟು ಮಳೆ ಬೀಳುವ ಮತ್ತು ಹಿತಕರ ಹವಾಗುಣ ಹೊಂದಿದ್ದ ಪ್ರದೇಶವನ್ನು ಗುರುತಿಸಿ ಅಲ್ಲಿ ನೂತನ ನಗರವೊಂದಕ್ಕೆ ಭೂಮಿ ಪೂಜೆ ಆರಂಭವಾಗಿ, ಸಂಪ್ರದಾಯಿಕವಾಗಿ ಮುಗಿಲು ಮುಟ್ಟುವಂತಹ ವೇದಘೋಷಗಳ ನಡುವೆ ಪುರೋಹಿತರು ಹೋಮ ಹವನಾದಿಗಳನ್ನು ನಡೆಸುತ್ತಿದ್ದರೆ, ನೇಗಿಲು ಹೊತ್ತ ಬಿಳಿ ಬಣ್ಣದ ನಾಲ್ಕು ಜೋಡಿ ಎತ್ತುಗಳು ನಾಲ್ಕು ದಿಕ್ಕುಗಳಲ್ಲಿ ಗೆರೆ ಎಳೆದು ನಗರದ ಗಡಿಯನ್ನು ನಿರ್ಧರಿಸಿಲಾಯಿತು. ಬಸವನಗುಡಿಯ ದೊಡ್ಡ ಬಸವಣ್ಣನ ದೇವಾಲಯ ಮತ್ತು ದೊಡ್ಡ ಪೇಟೆಯ ಆಂಜನೇಯ ದೇವಾಲಯವೇ ಅಂದು ಬೆಂಗಳೂರಿನ ಭೂಮಿಪೂಜೆ ಮಾಡಿದ ಸ್ಥಳ ಎಂದು ಬಲ್ಲವರು ಹೇಳುತ್ತಾರೆ.

bangaloreಬಾಲ್ಯದಿಂದಲೂ ವಿಜಯನಗರದ ವ್ಯವಸ್ಥಿತ ವಾಣಿಜ್ಯ ಕೇಂದ್ರಗಳಿಂದ ಪ್ರಭಾವಿತರಾಗಿದ್ದರಿಂದ ಅದೇ ಅನುಭವದ ಮೂಲಕ ರೈತರ ಮತ್ತು ವರ್ತಕರ ಸಗಟು ವ್ಯಾಪಾರಕ್ಕಾಗಿ ದೊಡ್ಡ ಪೇಟೆ ಮತ್ತು ಪ್ರಜೆಗಳ ಚಿಲ್ಲರೇ ವ್ಯಾಪಾರಕ್ಕಾಗಿ ಚಿಕ್ಕಪೇಟೆ ಯನ್ನು ಕಟ್ಟಿಸಿ ಅದರ ಅಕ್ಕ ಪಕ್ಕದಲ್ಲೇ, ಹೆಸರೇ ಸೂಚಿಸುವಂತೆ, ಅಕ್ಕಿಪೇಟೆ, ರಾಗಿಪೇಟೆ, ಅರಳೆ ಪೇಟೆ, ತರಗು ಪೇಟೆಯಲ್ಲಿ ದವಸ ಧಾನ್ಯಗಳ ಮಾರಾಟಕ್ಕಾದರೆ, ಕುಂಬಾರ ಪೇಟೆ ಮಡಿಕೆಗಳ ಮಾರಾಟ, ಗಾಣಿಗರ ಪೇಟೆ ಎಣ್ಣೆ ಮಾರಾಟ, ಉಪ್ಪಾರರ ಪೇಟೆ ಉಪ್ಪಿನ ಮಾರಾಟ, ತಿಗಳರ ಪೇಟೆಯಲ್ಲಿ ಹೂವಿನ ಮಂಡಿ, ನಗರ್ತ ಪೇಟೆ ಚಿನ್ನ, ಬೆಳ್ಳಿ ಆಚಾರಿಗಳಿಗಾದರೆ< ಬಳೇಪೇಟೆ ಬಳೆ, ಸರ ಮಾರಾಟ ಮಾಡುವ ಬಲಿಜಿಗರಿಗೆ ಹೀಗೆ ವೃತ್ತಿ, ಕುಲ ಕಸುಬುದಾರರು ವಾಸಿಸಲು ಮತ್ತು ವ್ಯಾಪಾರ ವಹಿವಾಟು ನಡೆಸಲು ಯೋಗ್ಯವಾಗುವಂತಹ ನಗರವನ್ನು ನಿರ್ಮಾಣ ಮಾಡಲು ಮುಂದಾದರು.

lalbagh_lakeಕೇವಲ ವ್ಯಾಪಾರ ಮತ್ತು ವಾಣಿಜ್ಯ, ವಹಿವಾಟುಗಳಿಂದಲೇ ನಾಡನ್ನು ಕಟ್ಟಲು ಸಾಧ್ಯವಿಲ್ಲ ಎಂಬುದನ್ನು ಅರಿತಿದ್ದ ಕೆಂಪೇಗೌಡರು, ಕೃಷಿ ಮತ್ತು ಕೃಷಿಯಾಧಾರಿತ ಚಟುವಟಿಕೆಗಳನ್ನೇ ನೆಚ್ಚಿಕೊಂಡ ನಾಡಿನ ಬಹುಸಂಖ್ಯಾತ ಕೃಷಿಕರು ಮತ್ತು ಹೈನುಗಾರರ ಅನುಕೂಲಕ್ಕಾಗಿ ಹೊಸಾ ನಗರದಲ್ಲಿ ಸುಮಾರು ನೂರಕ್ಕೂ ಹೆಚ್ಚು ಚಿಕ್ಕ ಮತ್ತು ದೊಡ್ಡ ಗಾತ್ರದ ಕೆರೆಗಳನ್ನು ಕಟ್ಟಿಸಿದರ ಪರಿಣಾಮವಾಗಿಯೇ ಇಂದಿಗೂ ಕಾಣ ಸಿಗುವ ಕೆಂಪಾಂಬುಧಿಕೆರೆ, ಕಾರಂಜಿಕೆರೆ, ಸಂಪಂಗಿರಾಮಕೆರೆ, ಧರ್ವಂಬುಧಿಕೆರೆ, ಗಂಧದ ಕೋಟಿ, ಹಲಸೂರು ಕೆರೆ, ಯಡೆಯೂರು ಕೆರೆ, ಸಿದ್ಧನಕಟ್ಟೆ, ಗಿಡ್ಡಪ್ಪನಕೆರೆ, ಜಕ್ಕರಾಯನಕೆರೆ, ದೊಮ್ಮಲೂರುಕೆರೆ, ಬೆಳ್ಳಂದೂರುಕೆರೆ, ಲಾಲ್ಬಾಗ್ ಮುಂತಾದ ಕೆರೆಗಳನ್ನು ಕಟ್ಟಿಸಿನರಿಗೆ ಮತ್ತು ದನಕರುಗಳಿಗೆ ಕುಡಿಯುವ ನೀರಿನ ಜೊತೆಗೆ ಕೃಷಿ ಚಟುವಟಿಕೆಗೆ ಬಳಸಿಕೊಂಡು ಜೀವನಾಶ್ಯಕವಾದ ಆಹಾರ ಧಾನ್ಯ, ಹಣ್ಣು, ತರಕಾರಿ, ಎಣ್ಣೆಕಾಳುಗಳು, ದ್ವಿದಳ ಧಾನ್ಯಗಳು ಮುಂತಾದ ಬೆಳೆ ಬೆಳೆಯುವ ರೈತರಿಗೆ ಅನುಕೂಲ ಮಾಡಿಕೊಟ್ಟರು. ಮಳೆಯ ನೀರು ಸುಮ್ಮನೇ ಪೋಲಾಗಂತೆ ತಡೆಯುವ ಸಲುವಾಗಿ ನಗರದ ಬಡಾವಣೆಗಳಲ್ಲಿ ಮತ್ತು ಎತ್ತರದ ಪ್ರದೇಶಗಳಿಂದ ಅವರು ಕಟ್ಟಿಸಿದ ಕೆರೆಗಳಿಗೆ ನೀರು ಸರಾಗವಾಗಿ ಹರಿಯುವಂತೆ ರಾಜಕಾಲುವೆಗಳ ನಿರ್ಮಾಣ, ಮಳೆ ನೀರಿನಿಂದ ಒಂದು ಕೆರೆ ತುಂಬಿದ ಕೂಡಲೇ ಮತ್ತೊಂದು ರಾಜಕಾಲುವೆಗಳ ಮುಖಾಂತರ ಇನ್ನೊಂದು ಕೆರೆಗೆ ನೀರು ಹರಿಸಲಾಗುತ್ತಿತ್ತು. ಈ ವ್ಯವಸ್ಥೆಯನ್ನು ನೋಡಿಕೊಳ್ಳಲು ನುರಿತ ನೀರುಗಂಟಿಗಳನ್ನು ವಿಜಯನಗರದಿಂದ ಕರೆತರಲಾಗಿತ್ತು. ಹೀಗೆ ಎಲ್ಲಾ ಕೊರೆಗಳು ತುಂಬಿದ ಮೇಲೆ ಕೋಟೆಯ ಹೊರವಲಯದ ಕಾಲುವೆಗಳಿಗೆ ಹರಿಸಲಾಗುತ್ತಿತ್ತು. ಇದೊಂದು ಕೋಟೆಯ, ನಗರದ ಮತ್ತು ನಾಗರೀಕರ ಸುರಕ್ಷೆಯ ವ್ಯವಸ್ಥೆಯಾಗಿತ್ತು.

k4ನಗರ ವಾಣಿಜ್ಯವಾಗಿ ಅಭಿವೃದ್ಧಿ ಹೊಂದುತ್ತಿದ್ದಂತೆ ಶತ್ರುಗಳ ಕಾಟ ಬರಬಹುದು ಎಂಬ ದೂರಾಲೋಚನೆಯಿಂದ ನಗರದ ರಕ್ಷಣೆಗೆಂದು ಸುತ್ತಲೂ ಕೋಟೆಯನ್ನು ನಿರ್ಮಿಸಿ ಯಲಹಂಕ, ಕೆಂಗೇರಿ, ಹಲಸೂರು ಮತ್ತು ಆನೇಕಲ್ಲಿನಲ್ಲಿ ಈ ಕೋಟೆಯ ಮಹಾದ್ವಾರಗಳನ್ನು ನಿರ್ಮಿಸುವ ಮೂಲಕ ಜನರ ಮತ್ತು ಸಂಪತ್ತಿನ ಸುರಕ್ಷತೆಯನ್ನು ನೋಡಿಕೊಂಡರು. ನಗರದ ಸುರಕ್ಷೆತೆಯ ದೃಷ್ಟಿಯಿಂದ ತಿಗಳರ ಪೇಟೆಯ ಧರ್ಮರಾಮ ಸ್ವಾಮಿಯ ದೇವಸ್ಥಾನವನ್ನು ಕೇಂದ್ರ ಬಿಂದುವನ್ನಾಗಿಟ್ಟು ಕೊಂಡು ಸಮಾನಾಂತರ ದೂರದಲ್ಲಿ ಹಲಸೂರು, ಈಗಗಿನ ಲಾಲ್ ಬಾಗ್ , ಸದಾಶಿವನಗರ (ಈಗಿನ ಮೇಖ್ರೀ ಸರ್ಕಲ್) ಮತ್ತು ಕೆಂಪಾಂಬುಧಿ ಕೆರೆಯ ಬಳಿ ಎತ್ತರದ ಆಯಕಟ್ಟಿನ ಸ್ಥಳಗಳಲ್ಲಿ ವೀಕ್ಷಣಾಗೋಪುರಗಳನ್ನು ಕಟ್ಟಿ ದಿನದ 24 ಗಂಟೆಗಳ ಕಾಲ ಸತತ ಪಹರೆಯನ್ನು ನಿಯೋಜಿಸಿದ್ದರು. ಬಸವನಗುಡಿಯ ಎತ್ತರದ ಬಂಡೆಯಿಂದ ಪ್ರತಿ ಸಂಜೆ ಕಹಳೆ ಊದಿ ಎಲ್ಲಾ ಸರಿಯಾಗಿದೆ ಎನ್ನುವ ಸಂಕೇತದ ವ್ಯವಸ್ಥೆ ಮಾಡಲಾಗಿದ್ದು, ಅಪಾಯದ ಸಮಯದಲ್ಲಿ, ಎಚ್ಚರಿಕೆಯ ಕಹಳೆಯನ್ನು ಊದುವ ಮೂಲಕ ಶತ್ರುಗಳ ಸುಳಿವಿನ ಎಚ್ಚರಿಕೆಯನ್ನು ನೀಡುವಂತಹ ವ್ಯವಸ್ಥೆ ಮಾಡಲಾಗಿದ್ದು ಇಂದು ಆ ಪ್ರದೇಶವು ಬ್ಯೂಗಲ್ ರಾಕ್ ಎಂದೇ ಪ್ರಸಿದ್ಧವಾಗಿದೆ. ಬೆಂಗಳೂರಿನ ನಾಲ್ಕು ದಿಕ್ಕಿನಲ್ಲಿಅಂದು ಅವರು ಕಟ್ಟಿಸಿರುವ ಕಾವಲು ಗೋಪುರಗಳು ಇಂದು ಬೆಂಗಳೂರಿನ ಹೆಗ್ಗುರುತಾಗಿದ್ದು, ಅದೇ ಗೋಪುರವನ್ನೇ ಬೆಂಗಳೂರು ಬೃಹತ್ ಮಹಾನಗರಪಾಲಿಕೆ ತನ್ನ ಲಾಂಛನವನ್ನಾಗಿ ಮಾಡಿಕೊಂಡಿರುವುದು ವಿಶೇಷವಾಗಿದೆ.

basavannaಉತ್ತಮ ಆಡಳಿತದ ಜೊತೆಗೆ ಧರ್ಮಭೀರುವೂ ಆಗಿದ್ದ ಕೆಂಪೇಗೌಡರು ಹೊಸದಾಗಿ ಕಟ್ಟಿದ ನಗರದಲ್ಲಿ ಹತ್ತಾರು ದೇವಾಲಯಗಳನ್ನು ನಿರ್ವಿುಸಿದ್ದಾರೆ. ಬಸವನಗುಡಿಯ ಏಕಶಿಲಾ ದೊಡ್ಡ ಬಸವಣ್ಣನ ದೇವಸ್ಥಾನ ಅದರ ಪಕ್ಕದ್ಲೇ ದೊಡ್ಡ ಗಣೇಶನ ದೇವಸ್ಥಾನ, ರಂಗನಾಥಸ್ವಾಮಿ ದೇವಾಲಯ, ಆಂಜನೇಯಸ್ವಾಮಿ ದೇವಾಲಯ, ಗವಿಗಂಗಾಧರೇಶ್ವರ ದೇವಾಲಯದ ಆವರಣದಲ್ಲಿ ಬೃಹತ್ ಏಕಶಿಲಾ ಸೂರ್ಯಪಾನ, ಚಂದ್ರಪಾನ ಫಲಕಗಳು, ಶಿವನ ಡಮರು, ತ್ರಿಶೂಲ, ಹರಿಹರ ಬೆಟ್ಟದ ಮೇಲೆ ಬೃಹತ್ ಏಕಶಿಲಾ ಛತ್ರಿ ಇವುಗಳು ಕೆಂಪೇಗೌಡರ ಕಾಲದ ಶಿಲ್ಪಕಲಾ ವೈಭವ ಮತ್ತು ಸಾಂಸ್ಕೃತಿಕ ಶ್ರೀಮಂತಿಕೆಯ ಪ್ರತೀಕಗಳಾಗಿವೆ ಎಂದರೂ ಅತಿಶಯವಲ್ಲ. ಹಲಸೂರಿನ ಸೋಮೇಶ್ವರ ದೇವಾಲಯ ಮತ್ತು ವಸಂತಪುರದ ದೇವಾಲಯಗಳ ವಿಸ್ತರಣೆ ಮತ್ತು ಜೀರ್ಣೋದ್ಧಾರವೂ ಸಹಾ ಅವರ ಕಾಲದಲ್ಲಿ ಆಗಿದೆ.

k2ಕೃಷ್ಣದೇವರಾಯರ ನಂತರ ವಿಜಯನಗರದ ಆಡಳಿತ ಚುಕ್ಕಾಣಿ ಹಿಡಿದವರು ದಕ್ಷರಾಗಿಲ್ಲದಿದ್ದ ಕಾರಣ ಬಹುತೇಕ ಸಾಮಂತರು ವಿಜಯನಗರ ಸಾಮ್ರಾಜಯದ ವಿರುದ್ಧ ಸಿಡಿದೆದ್ದು ಸ್ವತಂತ್ರರದರೂ, ಕೆಂಪೇಗೌಡರ ನಿಯತ್ತು ವಿಜಯನಗರದ ಪರವಾಗಿಯೇ ಇತ್ತು. ಇಷ್ಟೆಲ್ಲಾ ಆದರೂ, ಚನ್ನಪಟ್ಟಣದ ಪಾಳೇಗಾರ ಜಗದೇವರಾಯ ಬೆಂಗಳೂರಿನ ನಾಡಪ್ರಭು ಕೆಂಪೇಗೌಡರು ವಿಜಯನಗರದ ಸಾಮಂತಿಕೆಯಿಂದ ದೂರಸರಿಯುವ ಸಲುವಾಗಿ ತಮ್ಮದೇ ಭೈರವ ಎಂಬ ಹೆಸರಿನಲ್ಲಿ ಪ್ರತ್ಯೇಕವಾಗಿ ನಾಣ್ಯಗಳ ಚಲಾವಣೆ ಮಾಡುತ್ತಿದ್ದಾರೆ ಎಂಬ ದೂರನ್ನು ವಿಜಯನಗರದ ಸಾಮ್ರಾಜ್ಯರ ಬಳಿ ಇಟ್ಟಾಗ ಅದನ್ನು ಕೂಲಂಕುಶವಾಗಿ ಪರೀಕ್ಷಿಸದೇ, ರಾಜದ್ರೋಹದ ಆರೋಪದಡಿ ಕೆಂಪೇಗೌಡರನ್ನು ಬಂಧಿಸಿ ಅನೇಗುಂದಿಯ ಸೆರೆಮನೆಗೆ ತಳ್ಳಲಾಗುತ್ತದೆ. ಸುಮಾರು ಐದು ವರ್ಷಗಳ ನಂತರ ಹಿರಿಯ ಕೆಂಪೇಗೌಡರನ್ನು ಬಂಧಿಸಿದ್ದು ತಪ್ಪೆಂದು ಅರಿವಾಗಿ ಅವರನ್ನು ಸಕಲ ಮರ್ಯಾದೆಯೊಂದಿಗೆ ಯಲಹಂಕಕ್ಕೆ ಕಳುಹಿಸಲಾಗುತ್ತದೆ.

ಕೆಂಪೇಗೌಡರು ಬಂಧಿಯಾಗಿದ್ದಾಗ ಅವರ ರಾಜ್ಯವನ್ನು ಮಕ್ಕಳು ಮತ್ತು ಮೊಮ್ಮಕ್ಕಳೇ ಸಂಭಾಳಿಸಿದ್ದನ್ನು ಗಮನಿಸಿ ಇನ್ನು ಮುಂದೆ ರಾಮಕೃಷ್ಣಾ ಗೋವಿಂದಾ ಎಂದು ಭಗವಂತನ ಧಾನ್ಯದಲ್ಲಿ ಕಳೆಯುತ್ತೇನೆ ಎಂದು ನಿರ್ಧರಿಸಿ, ಹೊಸಾ ದೇವಸ್ಥಾನಗಳ ನಿರ್ಮಾಣ, ಹಳೆಯ ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ತಮ್ಮ ಸಮಯವನ್ನು ಮೀಸಲಿಟ್ಟರು. ಸುಮಾರು ವರ್ಷಗಳ ಕಾಲ ಪ್ರಜೆಗಳಿಂದ ದೂರವಿದ್ದರೂ ಪ್ರಜೆಗಳಿಗೆ ಅವರ ಮೇಲೆ ಎಂತಹ ಪೂಜ್ಯಭಾವನೆ ಇತ್ತು ಎನ್ನುವುದಕ್ಕೆ ಈ ಪ್ರಸಂಗ ಸೂಕ್ತವೆನಿಸುತ್ತದೆ.

k3ಅದೊಮ್ಮೆ ಯಲಹಂಕದಿಂದ ಮಲ್ಲೇಶ್ವರದ ಕಾಡುಮಲ್ಲೇಶ್ವರ ದೇವಸ್ಥಾನಕ್ಕೆ ಸ್ವಾಮಿಯ ದರ್ಶನಕ್ಕೆ ಬರುವುದಾಗಿ ತಮ್ಮ ಭಟರ ಮೂಲಕ ಅಲ್ಲಿನ ಅರ್ಚಕರಿಗೆ ಹೇಳಿ ಕಳುಹಿಸಿದ್ದರು. ನಾಡ ಪ್ರಭುಗಳು ತಮ್ಮ ದೇವಾಲಯಕ್ಕೆ ಬರುವ ವಿಷಯವನ್ನು ಅರ್ಚಕರು ತಮ್ಮ ಆಪ್ತ್ರ ಬಳಿ ಸಂತೋಷದಿಂದ ಹಂಚಿಕೊಂಡಿದ್ದು ಬಾಯಿಂದ ಬಾಯಿಗೆ ಹರಡಿ. ಬೆಳಿಗ್ಗೆ ಯಲಹಂಕದಿಂದ ಹೊರಟು ಮಧ್ಯಾಹ್ನದ ಹೊತ್ತಿಗೆ ಕಾಡುಮಲ್ಲೇಶ್ವರ ದೇವಾಲಯಕ್ಕೆ ಒಂದು ಮೈಲಿಗಳ ದೂರ ಬರುವಷ್ಟರಲ್ಲಿ ಪ್ರಭುಗಳನ್ನು ನೋಡಲು ಭಾರೀ ಜನಸಾಗರವೇ ಅಲ್ಲಿ ನೆರೆದಿದ್ದಲ್ಲದೇ, ಕೆಂಪೇಗೌಡರಿಗೆ ಜೈಕಾರ ಹಾಕುತ್ತಾ ಅವರಿಗೆ ಸಕಲ ರಾಜ ಮರ್ಯಾದೆಗಳಿಂದ ಬೆಳ್ಳಿ ಫಲಕದ ಉಯ್ಯಾಲೆಯ ಮೇಲೆ ಕೂರಿಸಿ ಹಾಲಿನ ಅಭಿಷೇಕ ಮಾಡಿಸಿ ನಂತರ ಆ ಇಡೀ ಜನಸ್ತೋಮದೊಂದಿಗೇ ಕೆಂಪೇಗೌಡರು ಕಾಡುಮಲ್ಲೇಶ್ವರನ ದರ್ಶನ ಪಡೆದದ್ದು ಈಗ ಇತಿಹಾಸವಾಗಿದೆ. ಅಂದು ಕೆಂಪೇಗೌಡರನ್ನು ಉಯ್ಯಾಲೆ ಮೇಲೆ ಸಮ್ಮಾನಿಸಿದ ಸ್ಥಳವೇ ಉಯ್ಯಾಲೆ ಕಾವಲು ಎಂದು ಪ್ರಸಿದ್ಧಿಯಾಗಿ ನಂತರದ ದಿನಗಳಲ್ಲಿ ಆಡು ಭಾಷೆಯಲ್ಲಿ ವೈಯ್ಯಾಳೀಕಾವಲ್ ಎಂದು ಅಪಭ್ರಂಶವಾಗಿರುವುದು ಗಮನಾರ್ಹವಾಗಿದೆ. 1569 ಇಸವಿಯಲ್ಲಿ ಹಿರಿಯ ಕೆಂಪೇಗೌಡರು ಕುಣಿಗಲ್ಲಿನಿಂದ ಮಾಗಡಿಯ ಮಾರ್ಗವಾಗಿ ಹಿಂದಿರುಗುವಾಗ ಮಾಗಡಿಯ ಸಮೀಪದ ಕೆಂಪಾಪುರದಲ್ಲಿ ವಯೋಸಜವಾಗಿ ಅಕಾಲಿಕವಾಗಿ ಮರಣಹೊಂದುವ ಮೂಲಕ ಒಬ್ಬ ನಿಜವಾದ ನಾಡಪ್ರಭುವನ್ನು ಈ ನಾಡು ಕಳೆದುಕೊಳ್ಳುವಂತಾಗುತ್ತದೆ.

ವಿಜಯನಗರದ ಸಾಮಂತ ರಾಜನಾಗಿ ಯಲಹಂಕ ನಾಡಿನ ವ್ಯಾಪ್ತಿಯು ಹಿರಿಯ ಕೆಂಪೇಗೌಡರ ಕಾಲದಲ್ಲಿ ಈಗಿನ ಬೆಂಗಳೂರಿನ ಹೊರವಲಯದಲ್ಲಿರುವ ಆವತಿಯಿಂದ ಹಿಡಿದು ಕೋಲಾರ, ಶಿವಗಂಗೆ, ಹುಲಿಕಲ್, ಕುಣಿಗಲ್, ಹುಲಿಯೂರುದುರ್ಗ, ಹುತ್ರಿದುರ್ಗ, ಮಾಗಡಿ, ರಾಮನಗರ ಸಾವನದುರ್ಗದವರೆಗೂ ವಿಸ್ತರಿಸಲ್ಪಟ್ಟು ಜನಾನುರಾಗಿಯಾಗಿ ನಿರ್ಮಿಸಿದ ಕೆರೆಗಳು, ದೇವಾಲಯಗಳು, ಕೋಟೆ-ಕೊತ್ತಲಗಳು ಇಂದಿಗೂ ನಮ್ಮ ಕಣ್ಣ ಮುಂದಿದ್ದು ಅವರ ಪೀಳಿಗೆಯವರು ಇಂದಿಗೂ ಮಾಗಡಿ ತಾಲ್ಲೂಕಿನ ಹುಲಿಕಲ್ ಗ್ರಾಮದಲ್ಲಿರುವ ಅರಮನೆಯಲ್ಲಿ ವಾಸಿಸುತ್ತಿದ್ದಾರೆ.

kGಇಂದು ಪ್ರಧಾನಿಗಳು ಹೇಳುವ ಸಬ್ ಕಾ ಸಾತ್, ಸಬ್ ಕಾ ವಿಶ್ವಾಸ್ ಮತ್ತು ಸಬ್ ಕಾ ವಿಕಾಸ್ ಎಂಬುದನ್ನು 500 ವರ್ಷಗಳ ಹಿಂದೆಯೇ ಅಕ್ಷರಶಃ ಮಾಡಿ ತೋರಿಸಿದ್ದ ಹಿರಿಯ ಕೆಂಪೇಗೌಡರನ್ನು ಕೇವಲ ಒಂದು ಜಾತಿಗೆ ಸೀಮಿತಗೊಳಿಸಿ, ಅವರು ಕಟ್ಟಿಸಿದ ಕೆರೆ, ಕಟ್ಟೆ ರಾಜಕಾಲುವೆಗಳನ್ನೇ ಮುಚ್ಚಿಸಿ ಅದನ್ನು ಮಾರಿ ಹಣ ದೋಚಿಕೊಂಡು ಕೆಂಪೇಗೌಡರ ಆಶಯಗಳನ್ನು ಗಾಳಿಗೆ ತೂರಿದವರೇ ಇಂದಿನ ದಿನಪತ್ರಿಕೆಯಲ್ಲಿ ದೊಡ್ಡದೊಡ್ಡದಾಗಿ ಕೆಂಪೇಗೌಡರ ಕುರಿತಾಗಿ ಜಾಹೀರಾತನ್ನು ನೀಡುವುದನ್ನು ನೋಡಿದಾಗ, ಛೇ!! ಎಂತಹ ಅಪಾತ್ರ ಕೈಯಲ್ಲಿ ಕೆಂಪೇಗೌಡರು ಕಟ್ಟಿದ ನಗರ ಸಿಲುಕಿಕೊಂಡಿದೆ ಎಂದೆನಿಸುವುದು ಸುಳ್ಳಲ್ಲ.

ಪ್ರಗತಿ ಪ್ರತಿಮೆ ಹೆಸರಿನಲ್ಲಿ ನಾಡಪ್ರಭು ಶ್ರೀ ಕೆಂಪೇಗೌಡರ 108 ಅಡಿಯ ಎತ್ತರದ 218ಟನ್‌(120ಟನ್‌ ಉಕ್ಕು ಮತ್ತು 98ಟನ್‌ ಕಂಚು)ತೂಕವಿರುವ ಅದರ ಖಡ್ಗದ ತೂಕವೇ ಸುಮಾರು 4ಟನ್‌ ಇರುವ ಒಟ್ಟು 84 ಕೋಟಿ ರೂಗಳ ವೆಚ್ಚದಲ್ಲಿ, 23 ಎಕರೆ ವಿರ್ಸ್ತೀರ್ಣದ ಥೀಂ ಪಾರ್ಕ್ ನಲ್ಲಿ 11.11.22ರ ಶುಕ್ರವಾರದಂದು ಪ್ರಧಾನ ಮಂತ್ರಿ ಶ್ರೀ ನರೇಂದ್ರಮೋದಿಯವರು ಅನಾವರಣಗೊಳಿಸುವ ಮೂಲಕ ಬೆಂಗಳೂರಿನ ನಿರ್ಮಾತರ ಕೀರ್ತಿಪತಾಕೆಯನ್ನು ಮತ್ತೊಮ್ಮೆ ಇಡೀ ವಿಶ್ವಕ್ಕೆ ಪರಿಚಯಿಸುವುದಲ್ಲದೇ, ಅವರಿಗೆ ಸಲ್ಲಬೇಕಾದ ನಿಜವಾದ ಗೌರವವನ್ನು ಸಲ್ಲಿಸಲಿದ್ದಾರೆ. ಸುಮಾರು 500 ವರ್ಷಗಳ ಹಿಂದೆಯೇ ಬೆಂಗಳೂರನ್ನು ವಿಶ್ವವಿಖ್ಯಾತ ನಗರವನ್ನಾಗಿ ಮಾಡುವ ದೂರದೃಷ್ಟಿಯನ್ನು ಹೊಂದಿದ್ದ ನಾಡಪ್ರಭು ಶ್ರೀ ಕೆಂಪೇಗೌಡರು ನಮ್ಮ ಹೆಮ್ಮೆಯ ಕನ್ನಡದ ಕಲಿಗಳೇ ಸರಿ.

ಏನಂತೀರೀ?
ನಿಮ್ಮವನೇ ಉಮಾಸುತ

2 thoughts on “ನಾಡಪ್ರಭು ಶ್ರೀ ಕೆಂಪೇಗೌಡರು

  1. ವಿಜಯನಗರ ಇತಿಹಾಸದ ಬಗ್ಗೆ ನಿಮಗಿರುವ ಕಾಳಜಿ ಮತ್ತು ಹಿಂದೂ ಧರ್ಮ ಮತ್ತು ಸಂಸ್ಖೃತಿಯ ಬಗ್ಗೆ ಇರುವ ಕಳಕಳಿ ಕಂಡು ತುಂಬ ಖುಷಿಯಾಯಿತು. ನಿಮ್ಮ ಬಗ್ಗೆ ಹೆಮ್ಮೆಯೂ ಇದೆ. ಇಲ್ಲಿಯವರೆಗೂ ನಾವು ಡಮ್ಮಿ ಇತಿಹಾಸವನ್ನು ಓದಿಕೊಂಡು ದೊಡ್ಡವರಾಗಿದ್ದೇವೆ. ಎಲ್ಲೂ ಸಹಿತ ನಿಜಾಮರ, ಸುಲ್ತಾನರ, ಮೋಘಲರ ಆಕ್ರಮಣ, ನರಮೇಧ, ಅಮಾನವೀಯ ಕೃತ್ಯಗಳು ಇತಿಹಾಸದಲ್ಲಿ ತೋರಿಸಿಲ್ಲ. ಅಷ್ಟು ವ್ಯವಸ್ಥಿತವಾಗಿ ಅವರನ್ನು ವಿಜೃಂಭಿಸಲಾಗಿದೆ. ನೈಜ ಇತಿಹಾಸ ಹೊರ ತರಬೇಕಾದುದು ನಮ್ಮ ನಿಮ್ಮೆಲ್ಲರ ಜವಾಬ್ದಾರಿಯಾಗಿದೆ. ದಯವಿಟ್ಟು ನಿಮ್ಮ ಮೋಬೈಲ್‌ ನಂಬರನ್ನು ನೀಡಿ…

    Liked by 1 person

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s