ಸಾಧಾರಣವಾಗಿ ಕೆಲವು ವಯಸ್ಸಾದವರನ್ನು ಭೇಟಿ ಮಾಡಿ. ನಮಸ್ಕಾರ ಹೇಗಿದ್ದೀರೀ? ಎಂದು ಪ್ರಶ್ನೆ ಮಾಡಿದರೆ ಸಾಲು. ಬಹುತೇಕರು, ಈ ಏನಪ್ಪಾ ಹೇಳೋದು? ಈಗೆಲ್ಲಾ ಕಾಲ ಕೆಟ್ಟು ಹೋಗಿದೆ. ನಮ್ಮ ಕಾಲದಲ್ಲಿ ಹೇಗಿತ್ತು ಗೊತ್ತಾ? ಎಂಬ ರಾಗವನ್ನು ಎಳೆಯುತ್ತಾರೆ. ಆದರೆ ನಿಜ ಹೇಳಬೇಕು ಎಂದರೆ ಕಾಲ ಖಂಡಿತವಾಗಿಯೂ ಕೆಟ್ಟಿಲ್ಲ, ನಮ್ಮ ದೈನಂದಿನದ ರೂಢಿಯನ್ನು ಅತ್ಯಂತ ಹೀನಾಮಾನವಾಗಿ ಕೆಡಿಸಿರುವದರಿಂದಲೇ ಎಲ್ಲವೂ ಅಯೋಮಯವಾಗಿದೆ ಎಂದರೆ ತಪ್ಪಾಗದು.
ಇತ್ತೀಚಿಗೆ ವ್ಯಾಟ್ಸಪ್ಬಲ್ಲಿನ ಓದಿದ ಈ ಬರಹ ಪ್ರಸ್ತುತ ವಿಕ್ಷುಬ್ಧತೆಗೆ ಹೇಳಿಮಾಡಿಸಿದಂತಿದ್ದು ಅದರ ಸಾರಾಂಶ ಈ ರೀತಿಯಾಗಿದೆ.
ಮನೆಯೊಳಗಿದ್ದ ತಾಯಿಗೆ ಮನೆಯ ಹೊರಗಿದ್ದ ಮಗ ಜೋರಾಗಿ ಕೂಗುತ್ತಾ, ಅಮ್ಮಾ ಕಸದವರು ಬಂದಿದ್ದಾರೆ ಎನ್ನುತ್ತಾನೆ. ಆಗ ಆ ಮಹಾತಾಯಿ ಶಾಂತಚಿತ್ತದಿಂದ ನೋಡು ಮಗೂ ಕಸದವರು ಅವರಲ್ಲ. ನಾವುಗಳು. ಅವರು ನಾವು ಮಾಡಿದ ಕಸವನ್ನು ಸ್ವಚ್ಛ ಗೊಳಿಸಲು ಬಂದಿದ್ದಾರೆ. ಹಾಗಾಗಿ ಇನ್ನೊಬ್ಬರ ಕೆಲಸವನ್ನು ಹೀಯಾಳಿಸದೆ ನಮ್ಮ ಮನಸ್ಥಿತಿಯನ್ನು ನಮ್ಮ ದೃಷ್ಟಿಕೋನವನ್ನು ಬದಲಿಸಿ ನೋಡು ಎಲ್ಲವೂ ಸ್ಚಚ್ಚವಾಗಿ ಕಾಣುತ್ತದೆ ಎಂದು ಸುಂದರವಾಗಿ ಸ್ವಚ್ಚತೆಯ ಬಗ್ಗೆ ಮಗನಿಗೆ ತಿಳಿಸಿ ಹೇಳುವ ಪರಿ ನಿಜಕ್ಕೂ ಈ ಲೇಖನದ ಶೀರ್ಷಿಕೆಗೆ ಸೂಕ್ತವಾಗಿದೆ ಎಂದರೂ ತಪ್ಪಾಗದು.
ಈಗ ನಾವು ಬಳಸಿ ಬಿಸಾಡುವ ತ್ಯಾಜ್ಯದ ಕಸದ ವಿಲೇವಾಗಿ ಮತ್ತು ನಾವು ಬಳಸಿ ಹೊರಗೆ ಬಿಡುವ ಕಲುಷಿತ ನೀರು ಇವೆರಡೂ ಇಂದು ಪೆಡಂಭೂತದ ಸಮಸ್ಯೆಳಾಗಿದ್ದು ಪರಿಸರದ ಮೇಲೂ ಬಹಳವಾಗಿ ದುಷ್ಪರಿಣಾಮವನ್ನು ಉಂಟು ಮಾಡುತ್ತಿದೆ. ಈ ಸಮಸ್ಯೆಯನ್ನು ಸಹಸ್ರಾರು ವರ್ಷಗಳ ಹಿಂದೆಯೇ ಅರಿತಿದ್ದ ನಮ್ಮ ಪೂರ್ವಜರು ಮನೆಯ ಮುಂದೆ ಚೆನ್ನಾಗಿ ಗುಡಿಸಿ ಯಾವುದೇ ಕಸಕಡ್ಡಿಗಳನ್ನು ಮನೆಯ ಪಕ್ಕದ ತಿಪ್ಪೆಗೆ ಹಾಕಿ ಅದರ ಜೊತೆಗೆ ಗೋಮೂತ್ರ ಮತ್ತು ಗೋಮಯ ಎಲ್ಲವನ್ನೂ ಸೇರಿಸಿ, ಅವೆಲ್ಲವೂ ಕೊಳೆತು, ಕಳಿತು, ಕೆಲವೇ ದಿನಗಳಲ್ಲಿ ಸಾವಯವ ಗೊಬ್ಬರವಾಗಿ ಮತ್ತೆ ಕೃಷಿ ಕಾರ್ಯದಲ್ಲಿ ಬಳಕೆಯಾಗಿ ಭೂಮಿಗೆ ಫಲವತ್ತತೆಯನ್ನು ತಂದು ಕೊಡುತ್ತಿತ್ತು. ಆದರೆ ಸ್ವಚ್ಛತೆಯ ಹೆಸರಿನಲ್ಲಿ ಅವೆಲ್ಲವೂ ಮಾಯವಾಗಿರುವ ಕಾರಣದಿಂದಾಗಿ ಕಸದ ವಿಲೇವಾರಿಯೇ ದೊಡ್ಡ ಸಮಸ್ಯೆಯಾಗಿದೆ.
ಇನ್ನು ಮನೆಯಲ್ಲಿ ಅಡುಗೆ ಸಮಯದಲ್ಲಿ ಅಕ್ಕಿ, ಬೇಳೆ ಮತ್ತು ತರಕಾರಿ ತೊಳೆದ ನೀರು, ಅನ್ನದ ಗಂಜಿ ಇವೆಲ್ಲವನ್ನೂ ಕೊಂಚವೂ ಪೋಲು ಮಾಡದೆ ಅದನ್ನು ಕಲಗಚ್ಚಿನ ಮರಗಿಯಲ್ಲಿ ಹಾಕಿ ಮನೆಯ ದನಕರುಗಳಿಗೆ ಪೌಷ್ಠಿಕವಾದ ಆಹಾರದ ರೂಪದಲ್ಲಿ ನೀಡುತ್ತಿದ್ದ ಕಾರಣ ನಮಗೆ ಉತ್ತಮವಾದ ಹಾಲನ್ನು ಕೊಡುತ್ತಿದ್ದವು.
ಇನ್ನು ಸ್ನಾನ ಮಾಡಿದ ಪಾತ್ರೆ ತೊಳೆದ ನೀರನ್ನೂ ಸಹಾ ಕೊಂಚವು ಪೋಲು ಮಾಡದೇ, ಮನೆಯ ಹಿಂದಿನ ಹಿತ್ತಲಿನ ಗಿಡಗಳಿಗೆ ಹಾಯಿಸುವ ಮೂಲಕ, ಅದೇ ಹಿತ್ತಲಿನಿಂದಲೇ ಮನೆಗೆ ಬೇಕಾದ, ಹೂವು, ಸೊಪ್ಪು, ತರಕಾರಿ ಮತ್ತು ಹಣ್ಣುಗಳನ್ನು ಸಾವಯವವಾಗಿ ಬೆಳೆಯುತ್ತಿದ್ದದ್ದಲ್ಲದೇ, ಹೆಚ್ಚಿನ ನೀರು ಅವಿಯಾಗಿ ಇಲ್ಲವೇ, ಅಂತರ್ಜಲಕ್ಕೆ ಸೇರಿಕೊಂಡು ಸ್ಥಳೀಯವಾಗಿ ನೀರಿನ ಮಟ್ಟ ಉತ್ತಮವಾಗುತ್ತಿತ್ತು. ಹೀಗೆ ಪ್ರತಿಯೊಂದೂ ಸಹಾ ಮರು ಬಳಕೆಯಾಗುತ್ತಿದ್ದ ಕಾರಣ ತ್ರಾಜ್ಯದ ಸಮಸ್ಯೆಯೇ ಇಲ್ಲದೇ ಪರಿಸರವೂ ಚೆನ್ನಾಗಿಯೇ ಇರುತಿತ್ತು. ಆದರೆ ನಗರೀಕರಣ ಹೆಚ್ಚಾಗುತ್ತಿದ್ದಂತೆಲ್ಲಾ ಸ್ವಚ್ಚತೆ ಹೆಸರಿನಲ್ಲಿ ಮನೆಯಲ್ಲಿ ಬಳಸಿದ ನೀರನ್ನು ಒಳಚರಂಡಿಯ ಮೂಲಕ ಹತ್ತಿರದ ಕೆರೆ, ನದಿಗಳಿಗೆ ಹರಿಸಿ ಅವುಗಳನ್ನು ಹಾಳು ಮಾಡಿದ ಪರಿಣಾಮ ಅದರಲ್ಲಿ ಜೀವಿಸುತ್ತಿದ್ದ ಜಲ ಚರಗಳಲ್ಲದೇ ಕುಡಿಯುವ ನೀರಿಗೂ ಹಾಹಾಕಾರವಾಗಿದೆ.
ಹಾಗಾಗಿ ಈ ದೇಶದ ಉತ್ತಮ ಪ್ರಜೆಯಾಗಿ ಮತ್ತು ಈ ಭೂಮಿಯ ಜವಾಬ್ದಾರಿಯುತ ನಾಗರೀಕರಾಗಿ ಆರೋಗ್ಯ ಮತ್ತು ಪರಿಸರದ ಹಿತದೃಷ್ಟಿಯಿಂದ ನಮ್ಮಗಳ ಮನೆಯಲ್ಲಿ ಆದಷ್ಟೂ ಮರುಬಳಕೆ ಮಾಡಬಹುದಾದ ಮತ್ತು ಸುಲಭವಾಗಿ ಮಣ್ಣಿನಲ್ಲಿ ಕರಗಿಹೋಗುವಂತಹ ವಸ್ತುಗಳನ್ನು ಬಳಸೋಣ. ಅದೇ ರೀತಿ ಮನೆಯ ಕಸದ ವಿಲೇವಾರಿಯಲ್ಲೂ ಒಣ ಕಸ ಮತ್ತು ಹಸೀ ಕಸವನ್ನಾಗಿ ವಿಂಗಡಿಸುವ ಮೂಲಕ ಪರಿಸರ ಸಂರಕ್ಷಣೆಯಲ್ಲಿ ಅಳಿಲು ಸೇವೆಯನ್ನು ಸಲ್ಲಿಸಬಹುದಾಗಿದೆ.
ಇನ್ನು ಮನೆಯ ತರಕಾರಿಯ ಸಿಪ್ಪೆ ಕಾಫೀ ಟೀ ಚರಟ, ಅಳುದುಳಿದ ಆಹಾರ ಇವೆಲ್ಲವನ್ನೂ ಹಾಗೆಯೇ ಬಿಸಾಡದೇ ಕೆಲವೇ ಕೆಲವು ಸಾವಿರ ಖರ್ಚು ಮಾಡಿ ಮನೆಯಲ್ಲೇ ಕಾಂಪೋಸ್ಟ್ ಗೊಬ್ಬರವನ್ನು ತಯಾರಿಸಿ ಮನೆಯ ಮುಂದಿನ ಕೈತೋಟ ಇಲ್ಲವೇ ತಾರಸೀ ತೋಟದಲ್ಲಿ ಬಳಕೆ ಮಾಡಿಕೊಳ್ಳೋಣ. ಅದೇ ರೀತಿಯಲ್ಲಿ ಅಗತ್ಯವಿದಷ್ಟೇ ನೀರನ್ನು ಬಳಕೆ ಮಾಡುತ್ತಾ ಮನೆಯಲ್ಲಿ ಬಳಸಿದ ನೀರನ್ನು ಮನೆಯ ಮುಂದಿನ ಕೈತೋಟಕ್ಕಾಗಲೀ ಇಲ್ಲವೇ ತಾರಸೀ ತೋಟದಲ್ಲಿ ಬಳಸಬಹುದಾಗಿದೆ.
ಇನ್ನು ಮಳೆಗಾಲದಲ್ಲಿ ಸುರಿವ ಮಳೆ ನೀರು ಪೋಲಾಗದಂತೆ ಶುದ್ದೀಕರಿಸಿದ ಮಳೆ ನೀರಿನ ಕೊಯ್ಲನ್ನು ಮಾಡುವ ಮಳೆಯ ನೀರನ್ನು ಸದ್ಬಳಕೆ ಮಾಡಿಕೊಳ್ಳಬಹುದಾಗಿದೆ. ಇನ್ನು ಪ್ರತಿಯೊಬ್ಬರೂ ತಮ್ಮ ತಮ್ಮ ಮನೆಗಳ ಮುಂದೆ ಕನಿಷ್ಟ ಪಕ್ಷ ಒಂದೆರಡು ಮರ-ಗಿಡಗಳನ್ನು ನೆಟ್ಟು ಕಾಲ ಕಾಲಕ್ಕೆ ನೀರೆರೆದು, ಅವುಗಳನ್ನು ಸಂರಕ್ಷಿಸುವ ಮೂಲಕ ಬೃಹದಾಕಾರವಾಗಿ ಬೆಳೆದು ನಮಗೆ ಅಗತ್ಯವಿದ್ದಷ್ಟು ಆಮ್ಲಜನಕವನ್ನು ಉತ್ಪಾದನೆ ಮಾಡಿಕೊಳ್ಳುವುದಲ್ಲದೇ, ಆ ಮರದಲ್ಲಿ ಹತ್ತಾರು ಪಕ್ಷಿಗಳಿಗೆ ಆಶ್ರಯ ತಾಣವನ್ನಾಗಿ ಮಾಡಬಹುದಾಗಿದೆ.
ಬದಲಾವಣೆ ಎನ್ನುವುದು ಜಗದ ನಿಯಮವೇ ಹೌದಾದರೂ, ಆ ಬದಲಾವಣೆ ಪರಿಸರಕ್ಕೆ ಮಾರಕವಾಗದೇ ಪೂರಕವಾಗಿ ಇರುವಂತೆ ನೋಡಿಕೊಳ್ಳುವುದು ನಮ್ಮ ನಿಮ್ಮೆಲ್ಲರ ಆದ್ಯ ಕರ್ತವ್ಯವೇ ಆಗಿದೆ. ನಮ್ಮ ಪೂರ್ವಜರು ನಮಗೆ ಬಿಟ್ಟು ಹೋದ ಶುದ್ಧ ಪರಿಸರವನ್ನು ನಮ್ಮ ಮುಂದಿನ ಪೀಳಿಗೆಯರಿಗೂ ಅಷ್ಟೇ ಶುದ್ಧವಾಗಿ ಉಳಿಸುವ ಜವಾಬ್ಧಾರಿ ನಮ್ಮ ನಿಮ್ಮದೇ ಅಲ್ವೇ?
ಏನಂತೀರೀ?
ನಿಮ್ಮವನೇ ಉಮಾಸುತ
ಈ ಲೇಖನ 2022ರ ಜೂನ್ ತಿಂಗಳ ಅಕ್ಷರ ಮಾಸ ಪತ್ರಿಕೆಯಲ್ಲಿ ಪ್ರಕಟವಾಗಿದೆ