ಸೈನ್ಯಕ್ಕೆ ಸೇರಲು ನಾ ಪಟ್ಟ ಸಾಹಸಗಳು

agnipathಇತ್ತೀಚೆಗೆ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಅಗ್ನಿಪಥ್ ಯೋಜನೆಯ ವಿರುದ್ಧ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಬಂಡಾಯವೆದ್ದು ದೇಶಾದ್ಯಂತ ಸಾರ್ವಜನಿಕ ಆಸ್ತಿ ಪಾಸ್ತಿಗಳನ್ನು ಹಾಳು ಮಾಡಿದಾಗ, ಅಗ್ನಿಪಥ್ ಯೋಜನೆ ಫಲಾಫಲಗಳೇನು? ಅದು ಯುವಕರಿಗೆ ಹೇಗೆ ಪ್ರಯೋಜನವಾಗುತ್ತದೆ ಎಂಬುದರ ಸಂಪೂರ್ಣ ವಿವರಗಳನ್ನು ತಿಳಿಸಿದಾಗ, ಓದುಗರೊಬ್ಬರು, ನಿಮಗೆ ಸೈನಿಕ ಎಂದರೆ ಏನು ಗೊತ್ತಾ? ನೀವ್ಯಾಕೆ ಸೈನಿಕರಾಗಿಲ್ಲ? ನಿಮ್ಮ ಮಕ್ಕಳನ್ನು ಸೈನ್ಯಕ್ಕೆ ಏಕೆ ಸೇರಿಸಿಲ್ಲ? ಎಂಬ ಅಕ್ಷೇಪ ಎತ್ತಿದ್ದರು. ಹಾಗಾಗಿ ನಾನು ಯೌವನಾವಸ್ಥೆಯಲ್ಲಿದ್ದಾಗ ಸೈನ್ಯಕ್ಕೆ ಸೇರಲು ನಾನು ಮಾಡಿದ ಸಾಹಸಗಳ ಪರಿಯ  ಮೋಜಿನ ಪರಿಪಾಟಲುಗಲು ಇದೋ ನಿಮಗಾಗಿ.

ಅದು 80ರ ದಶಕ. ನಾನಾಗ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದೆ. ಆಗ ನಾವಿದ್ದ 18 ಮನೆಗಳ ವಠಾರದಲ್ಲಿ ಸುಮಾರು 12-14 ಮನೆಗಳಲ್ಲಿ ಜಾಲಹಳ್ಳಿಯ ಪಶ್ಚಿಮ ಏರ್ಫೋರ್ಸ್ ನಲ್ಲಿ ಕೆಲಸ ಮಾಡುತ್ತಿದ್ದ ಉತ್ತರ ಭಾರತೀಯರೇ ಇದ್ದ ಕಾರಣ, ಅವರ ಮಕ್ಕಳೊಡನೆ ಆಟವಾಡುತ್ತಲೇ, ನಮಗೆ ಕನ್ನಡದ ಜೊತೆಗೆ ಹಿಂದಿಯೂ ಸರಾಗವಾಗಿ ಬಂದಿದ್ದಲ್ಲದೇ, ಜೊತೆಗೆ ನಮಗೇ ಅರಿವಿಲ್ಲದಂತೆ ಸೈನಿಕರ ಕುರಿತಾಗಿ ವಿಶೇಷ ಆಕರ್ಷಣೆ ಬೆಳೆದು ಹೋದದ್ದೇ ಗೊತ್ತಾಗಲಿಲ್ಲ. ಅದೇ ಸಮಯದಲ್ಲಿ ಸಂಘದ ಶಾಖೆಗಳಲ್ಲಿಯೂ ದೇಶಭಕ್ತರ ಕಥೆಗಳನ್ನು ಕೇಳುತ್ತಲೇ ದೇಶಾಭಿಮಾನವೂ ಉಕ್ಕಿ ಹರಿದು ದೊಡ್ಡವನಾದ ಮೇಲೆ ಖಂಡಿತವಾಗಿಯೂ ಸೈನಿಕನಾಗಿ ದೇಶ ಸೇವೆಯನ್ನು ಮಾಡಬೇಕು ಎನ್ನುವ ಉತ್ಕಟ ಬಯಕೆ ಮೂಡ ತೊಡಗಿತು.

jalahalliಅದೇ ಸಮಯಕ್ಕೆ ನಮ್ಮ ಮನೆಯ ಹತ್ತಿರವೇ ಪ್ರಮೋದ್ ಮತ್ತು ಪ್ರಶಾಂತ್ ಎಂಬು ಮಲಯಾಳಿ ಕುಟುಂಬವೊಂದು ಬಾಡಿಗೆಗೆ ಬಂದು ಅವರ ತಂದೆಯವರೂ ಸಹಾ ಜಾಲಹಳ್ಳಿ ಏರ್ಫೋರ್ಸ ನಲ್ಲಿ ಸಿವಿಲಿಯನ್ ಆಗಿ ಕೆಲಸಮಾಡುತ್ತಿದ್ದರಿಂದ ಅವರ ಜೊತೆ ಕೆಲವೊಂದು ಬಾರಿ ಜಾಲಹಳ್ಳಿ ವೆಸ್ಟ್ ಏರ್ಫೋರ್ಸ್ ಸ್ಟೇಷನ್ನಿಗೆ ಹೋಗಿ ಖುದ್ದಾಗಿ ಅಲ್ಲಿನ ಸೈನಿಕರ ಶಿಸ್ತು, ಅಲ್ಲಿದ್ದ ಗ್ರಂಥಾಲಯ, ಅವರ ತಾಂತ್ರಿಕ ತರಭೇತಿಗಳು ಎಲ್ಲದ್ದಕ್ಕಿಂತಲೂ ಹೆಚ್ಚಾಗಿ ಅವರ ಮೆಸ್ ಮತ್ತು ರಿಯಾತಿ ದರದಲ್ಲಿ ಏನು ಬೇಕಾದರೂ ಸಿಗುತ್ತಿದ್ದ ಕ್ಯಾಂಟೀನ್ ಸೌಲಭ್ಯ ನನಗೆ ಬಹಳ ಹಿಡಿಸಿತ್ತು.

armyಸೈನ್ಯದಲ್ಲಿ ಭೂಸೇನೆ, ವಾಯುಸೇನೆ, ಮತ್ತು ನೌಕಾದಳ ಎಂಬ ಮೂರು ವಿಭಾಗಗಳು ಇರುವುದು ಎಲ್ಲರಿಗೂ ತಿಳಿದಿರುವ ವಿಷಯವಷ್ಟೇ. ಭೂಸೇನೆಯಲ್ಲಿ  ದೇಹದಾಡ್ಯಕ್ಕೆ ಹೆಚ್ಚು ಒತ್ತು ನೀಡುವುದರಿಂದ ಬಹಳ ಪೀಚಾಗಿದ್ದ ಅದರತ್ತ ಹೆಚ್ಚು ಗಮನ ಹರಿಸದೇ, ತಾಂತ್ರಿಕ ವಿಷಯಗಳಿಗೆ ಹೆಚ್ಚು ಒತ್ತು ನೀಡುತ್ತಿದ್ದ ಮತ್ತು ಅಲ್ಲಿ ಕೆಲಸ ಮಾಡುತ್ತಲೇ ವಿಶೇಷ ತಾಂತ್ರಿಕ ಕೌಶಲ್ಯಗಳನ್ನು ಬೆಳಸಿಕೊಂಡು 20 ವರ್ಷಗಳ ಸೇವೆ ಸಲ್ಲಿಸಿ ಅಲ್ಲಿಂದ ನಿವೃತ್ತಿಯ ಪಡೆದ ನಂತರ ನಮ್ಮ ತಂದೆಯವರು ಕೆಲಸ ಮಾಡುತ್ತಿದ್ದ ಬಿಇಎಲ್ ನಲ್ಲೇ ಕೆಲಸಕ್ಕೆ ಸೇರಬಹುದು ಎಂಬ ದೂರಾಲೋಚನೆ ಅಥವಾ ದುರಾಲೋಚನೆಯಿಂದ ಏರ್ಫೋರ್ಸ್ ಸೇರಲು ಬಹಳ ಉತ್ಸಾಹಕನಾಗಿ ಅದಕ್ಕೆ ಸಂಬಂಧಿತ ಸ್ಪರ್ಧಾತ್ಮಕ ಪರೀಕ್ಷೆಗಳ ಪುಸ್ತಕಗಳನ್ನು ಓದುತ್ತಾ ಜ್ಣಾನಾರ್ಜನೆ ಮಾಡಿಕೊಳ್ಳತೊಡಗಿದೆ.

airmenನನ್ನ ಹತ್ತನೇ ತರಗತಿಯ ಪರೀಕ್ಷೆ ಮುಗಿದ ನಂತರ ನಾನು ಪ್ರಥಮ ದರ್ಜೆಯಲ್ಲಿಯೂ ನನ್ನ ಗೆಳೆಯ ಎರಡನೇ ದರ್ಜೆಯಲ್ಲಿ ತೇರ್ಗಡೆ ಹೊಂದಿದಾಗ ನಾನು ಏರ್‌ಮೆನ್ ಟೆಕ್ನಿಕಲ್ ಮತ್ತು ಪ್ರಮೋದ್ ನಾನ್ ಟೆಕ್ನಿಕಲ್ ವಿಭಾಗಕ್ಕೆ ಅರ್ಜಿ ಗುಜರಾಯಿಸಿ ಪರೀಕ್ಷೆಯ ದಿನಕ್ಕಾಗಿ ಬಕ ಪಕ್ಷಿಯಂತೆ ಕಾಯ ತೊಡಗಿದೆವು. ಅಂತಿಮವಾಗಿ ನನಗೆ ಬೆಂಗಳೂರಿನ ಶಿವಾಜಿ ನಗರದ ಬಳಿಯ ಕಬ್ಬನ್ ರಸ್ತೆಯಲ್ಲಿರುವ ಬಿ.ಆರ್.ವಿ ಸಿನಿಮಾ ಮಂದಿರದ ಪಕ್ಕದಲ್ಲಿದ್ದ ಏರ್‌ಮೆನ್ ಆಯ್ಕೆ ಕೇಂದ್ರದಲ್ಲಿ ಪರೀಕ್ಷೆ ಬರೆಯಲು ಪರೀಕ್ಷಾ ಪ್ರವೇಶ ಪತ್ರ ಅಂಚೆಯ ಮೂಲಕ ಬಂದಾಗ ಸ್ವರ್ಗಕ್ಕೆ ಮೂರೇ ಗೇಣು. ಹೇಗೂ ಕಾಲೇಜು ಸೇರಿಕೊಳ್ಳಲು ಇನ್ನೂ ಸ್ವಲ್ಪ ಸಮಯವಿದ್ದ ಕಾರಣ, ದಿನವೆಲ್ಲಾ ಸ್ಪರ್ಧಾತ್ಮಕ ಪರೀಕ್ಶೆಗಳ ಪ್ರಶ್ನೆಗಳನ್ನು ಬಿಡಿಸುವುದರಲ್ಲೇ ಮಗ್ನನಾಗಿದ್ದೆ. ಅದಕ್ಕೆ ಪೂರಕ ಎನ್ನುವಂತೆ ಪ್ರಮೋದ್ ಅವರ ತಂದೆ ನಂಬಿಯಾರ್ ಮಾವ (ಅಂದೆಲ್ಲಾ ನಾವು ಅಂಕಲ್ ಎನ್ನದೇ ಮಾವ ಎಂದೇ ಸಂಬೋಂಧಿಸುತ್ತಿದ್ದೆವು) ಸಹಾ ಕೆಲ ಹಳೆಯ ಪ್ರಶ್ನೆಪತ್ರಿಕೆಗಳನ್ನು ತಂದು ಕೊಟ್ಟಿದ್ದೂ ಸಹಾ ಪ್ರಯೋಜನಕ್ಕೆ ಬಂದಿತ್ತು.

ಪರೀಕ್ಷೆಯ ಹಿಂದಿನ ದಿನ ರಾತ್ರಿ ಸರಿಯಾಗಿ ನಿದ್ದೆಯೇ ಬಾರದೇ, ಬೆಳ್ಳಂಬೆಳಿಗ್ಗೆ ಎದ್ದು ಸ್ನಾನ ಸಂಧ್ಯಾವಂದನೆಗಳನ್ನು ಮುಗಿಸಿ ದೇವರಿಗೆ ಭಕ್ತಿಯಿಂದ ಪೂಜೆ ಮಾಡಿ ಅಮ್ಮಾಅಪ್ಪಂದಿರ ಆಶೀರ್ವಾದ ಪಡೆದು ಸರಿಯಾಗಿ ತಿಂಡಿಯೂ ತಿನ್ನದೇ, 272 ಬಸ್ಸು ಹತ್ತಿ ಶಿವಾಜಿನಗರ ತಲುಪಿ ಅಲ್ಲಿಂದ ಧಾವಂತದಿಂದಲೇ ಏರ್‌ಮೆನ್ ಆಯ್ಕೆ ಕೇಂದ್ರಕ್ಕೆ ಸಲುಪುವಷ್ಟರಲ್ಲಿ ನನ್ನಂತೆ ನೂರಾರು ಹುಡುಗರು ಜೊತೆಗೆ ಅವರ ಪೋಷಕರೂ ಬಂದಿದ್ದರು. ಅಲ್ಲಿಗೆ ಬಂದಿದ್ದ ಹೆಚ್ಚಿನ ಹುಡುಗರಿಗೆ ಅದಾಗಲೇ ಮೀಸೆ ಎಲ್ಲಾ ಮೂಡಿ ಆಜಾನುಬಾಹುಗಳಾಗಿ ಕಂಡರೆ ನಾನಿನ್ನೂ 7-8ನೇ ತರಗತಿಯ ಹುಡುಗನಂತೆ ಕಾಣುತ್ತಿದ್ದೆ. ಸಮಯಕ್ಕೆ ಸರಿಯಾಗಿ ಎಲ್ಲರನ್ನೂ ತಪಾಸಣೆ ಮಾಡಿ ಪರೀಕ್ಷಾ ಕೇಂದ್ರ ಒಳಗೆ ಕರೆದು ಕೂರಿಸಿ ಕೈಗೆ ಕೊಟ್ಟ ಪ್ರಶ್ನಪತ್ರಿಕೆಯನ್ನು ನೋಡಿದಾಗ ಬಹುತೇಕ ಗೊತ್ತಿದ ಪ್ರಶ್ನೆಗಳೇ ಬಂದಿದ್ದ ಕಾರಣ ಹೆಚ್ಚಿನ ಆತಂಕವಿಲ್ಲದೇ ಸುಲಭವಾಗಿ ಪರೀಕ್ಷೆ ಬರೆದು ಮುಗಿಸಿದಾಗ, ಮಧ್ಯಾಹ್ನ2 ಗಂಟೆಗೆ ಫಲಿತಾಂಶ ಪ್ರಕಟಿಸಿ ಪರೀಕ್ಷೆಯಲ್ಲಿ ತೇರ್ಗಡೆ ಆದವರಿಗೆ ಆಗಲೇ ದೇಹದಾಡ್ಯ ಪರೀಕ್ಷೆಗಳನ್ನು ನಡೆಸುವುದಾಗಿ ತಿಳಿಸಿದಾಗ ಅಲ್ಲೇ ಹತ್ತಿರ ಹೋಟೆಲ್ ಒಂದರಲ್ಲಿ ಊಟ ಮುಗಿಸಿ ಹಾಗೇ ಚಿನ್ನಸ್ವಾಮಿ ಕ್ರೀಡಾಂಗಣವನ್ನೊಮ್ಮೆ ಸುತ್ತಿಹಾಕಿ ಅಲ್ಲೇ ನಡೆಯುತ್ತಿದ್ದ ಅಭ್ಯಾಸ ಪಂದ್ಯವನ್ನೂ ಇಣುಕಿ ನೋದಿ 1:30ಕ್ಕೆಲ್ಲಾ ಪರೀಕ್ಷಾಕೇಂದ್ರಕ್ಕೆ ಬಂದು ಫಲಿತಾಂಶಕ್ಕಾಗಿ ಬಕ ಪಕ್ಷಿಗಳಂತೆ ಕಾಯತೊಡಗಿದ್ದೆ.

ಎರಡು ಗಂಟೆಗೆ ಸರಿಯಾಗಿ ಮತ್ತೆ ನಮ್ಮ ಮುಂದೆ ಹಾಜರಾದ ಪರೀಕ್ಶಾ ಮುಖ್ಯಸ್ಥ ಬೆಳಗಿನ ಪರೀಕ್ಷೆ ತೇರ್ಗಡೆಯಾದವವರ ಒಬ್ಬೊಬ್ಬರ ಹೆಸರನ್ನೇ ಕರೆಯುತ್ತಾ ಹೋದಂತೆಲ್ಲಾ ಎದೆಬಡಿತ ಹೆಚ್ಚಾಗುತ್ತಲೇ ಹೋಗಿ ಅಂತಿಮವಾಗಿ ನನ್ನ ಹೆಸರನ್ನೂ ಅವರು ಕರೆದಾಗ ಮೌಂಟ್ ಎವರೆಸ್ಟ್ ಹತ್ತಿದಷ್ಟು ಸಂತೋಷವಾಗಿತ್ತು ಎಂದರೂ ಸುಳ್ಳಲ್ಲ. ತಮ್ಮ ಹೆಸರನ್ನು ಕರೆಯದೇ ಹೋದವರು ಹ್ಯಾಪು ಮೋರೆ ಹಾಕಿಕೊಂಡು ಮರಳಿ ಯತ್ನವ ಮಾಡು ಎಂದು ಹಿಂದುರಿಗೆ ಹೋಗುತ್ತಿದ್ದದ್ದನ್ನು ಕಂಡು ತುಸು ಬೇಸರ ತರಿಸಿತ್ತು. ಇದು ತಾಂತ್ರಿಕ ವಿಭಾಗವಾಗಿದ್ದ ಕಾರಣ ಉಳಿದಂತೆ ದೇಹದಾಢ್ಯಕ್ಕೆ ಉಳಿದ ವಿಭಾಗದಂತೆ ಹೆಚ್ಚಿನ ಪ್ರಾಮುಖ್ಯತೆ ಕೊಡದಿದ್ದರೂ ಕನಿಷ್ಟ ಪಕ್ಷ ಎತ್ತರ, ತೂಕ, ಎದೆಯಳತೆೆ, ಬಣ್ಣ ಗುರುತಿಸುವಿಕೆ ಮುಂತಾದ ಪರೀಕ್ಷೆಗಳು ಖಡ್ಡಾಯವಾಗಿದ್ದ ಕಾರಣ ಎಲ್ಲರಿಗೂ ಬಟ್ಟೆಗಳನ್ನು ಬಿಚ್ಚಿ ಒಳಉಡುಪಿನಲ್ಲಿ ನಿಂತು ಕೊಳ್ಳಲು ಸೂಚಿಸಿದಾಗ ಕೊಂಚ ಮುಜುಗರವೂ ಆಯಿತು.

ನೀರಿಗೆ ಬಿದ್ದ ಮೇಲೆ ಛಳಿ ಏನು? ಬಿಸಿಲೇ ಏನೂ? ಎನ್ನುವಂತೆ ಅದಾಗಲೇ ಬಹುತೇಕರು ಶರ್ಟ್ ಪ್ಯಾಂಟ್ ಬಿಚ್ಚಿ ಕೈಯ್ಯಲ್ಲಿ ಹಿಡಿದುಕೊಂಡು ನಿಂತಿದ್ದಾಗ, ನಾನು ಸಹಾ ಅವರನ್ನೇ ಅನುಸರಿಸಿದ್ದೆ. ಎತ್ತರದ ಪರೀಕ್ಷೆ ಸುಲಭವಾಗಿ ದಾಟಿ, ತೂಕದ ಪರೀಕ್ಶೆಯಲ್ಲಿ ತೇರ್ಗಡೆಯಾಗಲು 45 ಕೆಜಿ ಕನಿಷ್ಟವಾಗಿದ್ದು ನಾನು 44 ಕೆಜಿ ಇದ್ದದ್ದನ್ನು ನೋಡೀ ಅಯ್ಯೋ ರಾಮಾ!! ಕೈಗೆ ಬಂದಿದ್ದು 1 ಕೆಜಿಯಿಂದ ಬಾಯಿಗೆ ಬರಲಿಲ್ಲವೇ ಎಂಬಂತೆ ತಲೆ ಮೇಲೆ ಕೈ ಹೊತ್ತಿದ್ದನ್ನು ನೋಡಿದ ಅಲ್ಲಿನ ಅಧಿಕಾರಿ, ಆಯಿಂದ ಟೀಕ್ ಸೇ ಖಾನ, ಓಕೇ.. ಎಂದು ಹೇಳಿ ತೂಕವನ್ನು 45 ಎಂದು ಬರೆದು, ಆಗೇ ಜಾವ್ ಎಂದಾಗ ಹೃದಯಪೂರ್ವಕವಾಗಿ ಆತನಿಗೆ ವಂದಿಸಿ ಮುಂದೆ ಕಣ್ಣಿನ ಪರೀಕ್ಷೆ ನಡೆದು ಎದೆಯ ಅಳತೆ ಪರೀಕ್ಷೆಯಲ್ಲಿ ಮತ್ತೆ ಫೇಲ್ ಆದಾಗ, ಮೂಛೇ ನೈ ಆಯಾತಾ ಕ್ಯೋಂ ಆಯಾ? (ಮೀಸೆ ಬಂದಿಲ್ಲಾ ಅಂದ್ರೂ ಪರೀಕ್ಷೇಗೆ ಏಕೆ ಬಂದೇ?) ಎಂದು ಗದುರಿಸಿದಾಗ ಕಣ್ಣಲ್ಲಿ ಧಾರಾಕಾರವಾಗಿ ನೀರು ಹರಿಯತೊಡಗಿದ್ದನ್ನು ನೋಡಿ ಮನಸ್ಸು ಕರಗಿದ ಆ ಅಧಿಕಾರಿ, ತೋಡಾ exercise ಕರ್ಕೆ, ತೋಡಾ body ಬನಾಕೆ ಅಗ್ಲೀ ಬಾರ್ ಆವ್ ಎಂದು ಹೊರೆಗೆ ಕಳುಹಿಸಿದಾಗ ಬಂದ ದಾರಿಗೆ ಸುಂಕವಿಲ್ಲ ಎಂದು ಯಾರೊಂದಿಗೂ ಮಾತನಾಡಾದೇ ಶಿವಾಜಿನಗರದಿಂದ ಮತ್ತೆ 272 ಬಸ್ ಹತ್ತಿ ಮನೆಗೆ ಬಂದು ನಡೆದದ್ದೆಲ್ಲವನ್ನೂ ತಿಳಿಸಿ ಮುಂದಿನ ಬಾರಿ ಖಂಡಿತವಾಗಿಯೂ ಪ್ರಯತ್ನ ಪಟ್ಟು ಪಾಸ್ ಅಗ್ತೀನಿ ಎಂದಿದ್ದೆ

navyನಂತರ ಪಿಯೂಸಿಗೆ ಸೇರಿದ ನಂತರ, ಸೇನೆಗೆ ಸೇರುವ ಯಾವುದೇ ಪ್ರಯತ್ನ ಮಾಡದೇ ಇದ್ದರೂ, 2ನೇ ಪಿಯುಸಿ ಆರಂಭದ ಸಮಯದಲ್ಲಿ ಟೈಪಿಂಗ್ ಕ್ಲಾಸಿನ ಕೆಲವು ಸಹಪಾಠಿಗಳ ಒತ್ತಡಕ್ಕೆ ಮಣಿದು ಐದಾರು ಜನರು ಸೇರಿಕೊಂಡು ಈ ಬಾರಿ ನೌಕಾದಳಕ್ಕೆ ಅರ್ಜಿ ಗುಜರಾಯಿಸಿ, ಬೆಂಗಳೂರು ಮಹಾತ್ಮಾಗಾಂಧಿ ರಸ್ತೆಯಲ್ಲಿರುವ ಸೆಂಟ್ರಲ್ ಮಾಲ್ ಪಕ್ಕದಲ್ಲಿರುವ ನೌಕಾದಳಕ್ಕೆ ಭರ್ತಿ ಕೇಂದ್ರಕ್ಕೆ ಒಟ್ಟೊಟ್ಟಿಗೆ ಹೋದಾಗ ಅಲ್ಲಿಗೆ ಬಂದಿದ್ದ ಬಹುತೇಕ ಅಭ್ಯರ್ಥಿಗಳು ಪಂಚೆ ಮತ್ತು ಟಿಷರ್ಟಿನಲಿ ಬಂದಿದ್ದು ತುಸು ಸೋಜಿಗ ಎನಿಸಿತ್ತು. ಇಲ್ಲಿ ಮೊದಲು ದೇಹದಾಡ್ಯ ಪರೀಕ್ಷೆ ನಡೆಯುವುದರಿಂದ ಬಟ್ಟೆ ಬಿಚ್ಚಿ ನಿಂತು ಕೊಳ್ಳಿ ಎಂದ ಕೂಡಲೇ ಛಕ್ ಎಂದು ಕ್ಷಣಾರ್ಧದಲ್ಲಿ ಟಿಷರ್ಟ್ ಮತ್ತು ಪಂಚೆಯನ್ನು ಕಳಚಿಡುವುದು ಸುಲಭ ಎನ್ನುವುದು ಅವರ ಅನುಭವಾಗಿತ್ತು. ಈ ಬಾರಿ ಎತ್ತರ, ತೂಕ, ಎದೆಯೆಳತೆ ಎಲ್ಲವನ್ನೂ ದಾಟಿ ಕೆಲವು ಪರೀಕ್ಷೆಗಳನ್ನು ದಾಟಿ ಇನ್ನೇನು ಎಲ್ಲವೂ ಸುಗಮ ಎಂದು ಯೋಚಿಸುತ್ತಿರುವಾಗ ಬರೀ ಕಾಲು ಮತ್ತು ಹವಾಯಿ ಚಪ್ಪಲಿಯಲ್ಲಿ ಓಡಾಡುತ್ತಿದ್ದ ಕಾರಣ ಕಾಲು ಸಿಕ್ಕಾ ಪಟ್ಟೇ ಒಡೆದಿರುವುದನ್ನು ಗಮನಿಸಿ ನೌಕಾದಳದಲ್ಲಿ ಸದಾಕಾಲವೂ ನೀರಿನಲ್ಲಿ ಇರಬೇಕಾದ ಕಾರಣ ಕಾಲು ಒಡೆದಿದ್ದಲ್ಲಿ ಪ್ರರಿಗಣಿಸಲಾಗುವುದಿಲ್ಲ. ಒಂದು ಆರು ತಿಂಗಳುಗಳ ಕಾಲಿಗೆ ಎಣ್ಣೆಯ ಮಾಲಿಷ್ ಮಾಡಿ ಸಧಾ ಕಾಲವೂ ಶೂ ಹಾಕಿಕೊಂಡು ಸರಿಯಾಗಿ ಕಾಲನ್ನು ಆರೈಕೆ ಮಾಡಿಕೊಂಡು ಬರಲು ಸೂಚಿಸಿ ಮನೆಗೆ ಕಳುಹಿಸಿದರೆ. ನನ್ನ ಸ್ನೇಹಿತ ಸುಭಾಷನಿಗೆ ತೂಕ ಕಡಿಮೆ ಮಾಡಿಕೊಂಡು ಬರಲು ಸೂಚಿಸಿದ್ದರು. ಈ ರೀತಿಯಲ್ಲಿ ನಾವು ನೌಕಾ ದಳ ಸೇರುವ ಆಸೆಗೆ ತಣ್ಣೀರೆರೆಚಿದ್ದರು.

rallyನಂತರ 2ನೇ ಪಿಯುಸಿ ಮುಗಿಸಿ ರಜಾದಿನಗಳಲ್ಲಿ ಮತ್ತೆ ಅರ್ಜಿ ಗುಜರಾಯಿಸಿದ್ದೆ. ಅದೇ ಸಮಯಕ್ಕೆ ಸರಿಯಾಗಿ ಸಂಘದ ದ್ವಿತೀಯ ಸಂಘ ಶಿಕ್ಷಾವರ್ಗವೂ ಬಂದು ಚನ್ನೇನಹಳ್ಳಿಯ ಕ್ಯಾಂಪಿಗೂ ಸಹಾ ಹೋಗಿದ್ದೆ. ಪರೀಕ್ಷೆಯ ಹಿಂದಿನ ದಿನ ಸಂಘಶಿಕ್ಷಾ ವರ್ಗದ ಅಧಿಕಾರಿಗಳನ್ನು ಪರೀಕ್ಷೆ ಬರೆಯಲು ಅವಕಾಶ ಕೊಡಿ ಎಂದು ಕೇಳಿದಾಗ ಅವರು ನನ್ನನ್ನು ನ. ಕೃಷ್ಣಪ್ಪನವರ ಬಳಿ ಅನುಮತಿ ಪಡೆಯಲು ಕಳುಹಿಸಿಕೊಟ್ಟಿದ್ದರು. ನರಿಕೊಂಬು ವೇದ ಶಿಭಿರದಿಂದಲೂ ನನಗೆ ಕೃಷ್ಣಪ್ಪನವರ ಪರಿಚಯವಿದ್ದ ಕಾರಣ ಅಳುಕಿಲ್ಲದೇ ಅವರ ಬಳಿ ಹೋಗಿ ಎಲ್ಲವನ್ನೂ ತಿಳಿಸಿದಾಗ ಆರಂಭದಲ್ಲಿ ಇಲ್ಲಾ ಎಂದರೂ, ಸೇನೆಗೆ ಸೇರುವ ನನ್ನ ಉತ್ಕಟ ಬಯಕೆಯನ್ನು ಹೇಳಿ ಕಳೆದ ಬಾರಿಯ ವಿಷಯವನ್ನು ತಿಳಿಸಿದಾಗ ಪರೀಕ್ಷೆ ಮುಗಿದ ತಕ್ಷಣವೇ ಹಿಂದಿರುಗಿ ಬರಬೇಕೆಂಬ ತಾಕೀತುನೊಂದಿಗೆ ಅನುಮತಿ ಕೊಟ್ಟಿದ್ದರು. ಈ ಬಾರಿ ಸ್ವಲ್ಪ ದಷ್ಟ ಪುಷ್ಟವಾಗಿ ಬೆಳೆದಿದ್ದಲ್ಲದೆ ಹೋದ ಬಾರಿಯೇ ಪರೀಕ್ಷೆಯಲ್ಲೇ ತೇರ್ಗಡೆ ಹೊಂದಿದ್ದ ಕಾರಣ, ಈ ಬಾರಿ ಸುಲಭವಾಗಿ ತೇರ್ಗಡೆಯಾಗುತ್ತೇನೆ ಎಂಬ ಅತಿಯಾದ ಆತ್ನವಿಶ್ವಾಸದಿಂದ ಸರಿಯಾಗಿ ಪರೀಕ್ಷೆಗೆ ತಯಾರಿ ನಡೆಸದ ಕಾರಣ, ಲಿಖಿತ ಪರೀಕ್ಷೆಯಲ್ಲೇ ಡುಮ್ಕಿ ಹೊಡೆದ ಕಾರಣ, ದೇಹದಾಢ್ಯ ಪರೀಕ್ಷೆಯೇ ನಡೆಯದೇ ಸೀದಾ ಅಲ್ಲಿಂದ ಚನ್ನೇನಹಳ್ಳಿ ಸಂಘಶಿಕ್ಷಾವರ್ಗಕ್ಕೆ ವಾಪಸ್ಸಾಗಿದ್ದೆ

crpfನಂತರದ ದಿನಗಳಲ್ಲಿ Computer Sciene Diplomaಗೆ ಸೇರಿಕೊಂಡು ಗೆಳೆಯನ ಮನೆಗೆಂದು ಯಲಹಂಕಕ್ಕೆ ಹೋಗಿದ್ದಾಗ ಅಲ್ಲಿನ CRPF campusನಲ್ಲಿ CRPFಗೆ ನೇಮಕಾತಿ ಮಾಡಿಕೊಳ್ಳುತ್ತಿರುವ ವಿಷಯ ಕೇಳಿ ಈ ಬಾರಿ ಮನೆಯವರಿಗೂ ಸ್ನೇಹಿತರಿಗೂ ಯಾರಿಗೂ ಹೇಳದೇ ಗುಟ್ಟಾಗಿಯೇ ಬೆಳ್ಳಂಬೆಳಿಗ್ಗೆಯೇ CRPF campusಗೆ ಹೋಗಿ ದೇಹದಾಡ್ಯ ಪರೀಕ್ಷೆಯಲ್ಲಿ ಮೊದಲ ಹಂತ ಮುಗಿಸಿ ಅವರು ದೂರ ಓಡಿಸುವ, ಜಿಗಿಸುವ ಪರೀಕ್ಷೆಯಲ್ಲಿ ನಿಗಧಿತ ಅವಧಿಗಿಂತ ಹೆಚ್ಚಿನ ಸಮಯ ತೆಗೆದುಕೊಂಡ ಕಾರಣ ಶಾಶ್ವತವಾಗಿ ಸೇನೆ ಸೇರುವ ಆಸೆಗೆ ಎಳ್ಳು ನೀರು ಬಿಟ್ಟು ಆಸ್ಥೆಯಿಂದ ಓದಿನ ಕಡೆ ಗಮನ ಕೊಟ್ಟು ಈಗ ಪ್ರತಿಷ್ಠಿತ ಬಹುರಾಷ್ಟ್ರೀಯ ಕಂಪನಿಯಲ್ಲಿ ಒಳ್ಳೆಯ ನೌಕರಿಯನ್ನು ಮಾಡುತ್ತಿರುವೆನಾದರೂ, ಯಲಹಂಕ, ಜಾಲಹಳ್ಳಿಯ ಕಡೆ ಹೋದಾಗಲೆಲ್ಲಾ, ಸೇನೆಯಲ್ಲಿಯೇ ಕೆಲಸ ಮಾಡುತ್ತಿರುವ ಗೆಳೆಯರಾದ ಪ್ರಮೋದ್ ಮತ್ತು ಪ್ರಶಾಂತ್ ಅಣ್ಣ ತಮ್ಮಂದಿರೊಡನೆ ಅಪರೂಪಕ್ಕೊಮ್ಮೆ ಮಾತನಾಡುವಾಗ ಛೇ! ಸೈನ್ಯಕ್ಕೆ ಸೇರಲಾಗಲಿಲ್ಲವಲ್ಲಾ ಎಂಬ ನೋವಂತೂ ಕಾಡುವುದು ಸುಳ್ಳಲ್ಲ.

NDAನಾನು ಸೈನಿಕನಾಗದೇ ಹೋದರೇನಂತೆ, ನನ್ನ ಮಗನಾದರೂ ಸೈನಿಕನಾಗಲೀ ಎಂದು ಅವನಿಗೂ NDA ಪರೀಕ್ಷೆ ಬರೆಸಿದನಾದರೂ ಇಂದಿನ ಜಾಗತಿಕ ಸ್ಪರ್ಥಾಕಣದಲ್ಲಿ ಆತ ಆಯ್ಕೆಯಾಗದೇ ಹೋದಾಗ, ಪರವಾಗಿಲ್ಲ ಬಿಡು Engineering ಮುಗಿಸಿಯೂ ಸೇನೆಯಲ್ಲಿ ಉನ್ನತ ಅಧಿಕಾರಿಯಾಗಬಹುದು ಎಂದು ಸಮಾಧಾನ ಪಡಿಸಿ Electronics & Telecommunication Engineeringಗೆ ಸೇರಿಸಿದ್ದೇನೆ. Engineering ಮುಗಿಸಿದ ನಂತರ ನನ್ನ ಮಗನ ಮನಸ್ಸು ಬದಲಾಗದೇ, ಸೈನ್ಯಕ್ಕೆ ಸೇರಿಕೊಳ್ಳುವಂತಾಗಲಿ ಎಂದು ಸದಾಕಾಲವೂ ಆ ಭಗವಂತನನ್ನು ಪ್ರಾರ್ಥನೆ ಮಾಡುತ್ತಲೇ ಇರುತ್ತೇನೆ. ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಪರಮಾತ್ಮನೇ ಹೇಳಿರುವಂತೆ ನಮ್ಮ ಕೆಲಸವನ್ನು ನಾವು ನಿಷ್ಟೆಯಿಂದ ಮಾಡಿ ಫಲಾಫಲಗಳನ್ನು ಆ ಭಗವಂತನಿಗೇ ಬಿಡುತ್ತಿದ್ದೇನೆ.

gani2ಇತ್ತೀಚೆಗೆ ಸರ್ಕಾರದ ಅಗ್ನಿಪಥ್ ಯೋಜನೆಯನ್ನು ನೋಡಿದಾಗ, ಛೇ, ನಾವು ಚಿಕ್ಕವರಿದ್ದಾಗ ಅಲ್ಪ ಸಮಯವಾದರೂ, ನೇರವಾಗಿ ದೇಶ ಸೇವೆಯನ್ನು ಮಾಡುವಂತಹ ಇಂತಹ ಸುವರ್ಣಾವಕಾಶ ತಪ್ಪಿಹೋಯಿತಲ್ಲಾ ಎಂಬ ಬೇಸರವಂತೂ ಇದ್ದೇ ಇದೆ. ಕೆಲ ಪಟ್ಟಭಧ್ರ ಹಿತಸಾಕ್ತಿಗಳ ಅಷ್ಟೆಲ್ಲಾ ಸಂಘರ್ಷಗಳ ಮಧ್ಯೆಯೂ ಅಗ್ನಿಪಥ್ ಗೆ ಸೇರಲು ಕೇವಲ 6 ದಿನಗಳಲ್ಲಿ 2 ಲಕ್ಷಕ್ಕೂ ಅಧಿಕ ಅರ್ಜಿ ಬಂದಿರುವುದನ್ನು ನೋಡಿದಾಗ, ಇಂದಿನ ಯುವಕರಿಗೆ ಹಣಕ್ಕಿಂತಲೂ ದೇಶಸೇವೆ ಮಾಡುವುದೇ ಮುಖ್ಯ ಎಂಬುದರ ಅರಿವಾಗಿದೆಯಲ್ಲಾ ಎಂದು ಮನಸ್ಸಿಗೆ ಸಂತೋಷವಾಗುತ್ತಿದೆ ಅಲ್ವೇ?

ಏನಂತೀರೀ?
ನಿಮ್ಮವನೇ ಉಮಾಸುತ

3 thoughts on “ಸೈನ್ಯಕ್ಕೆ ಸೇರಲು ನಾ ಪಟ್ಟ ಸಾಹಸಗಳು

  1. Hummmmmmm
    Super bro …wht a lines u write …while reading your topic ..100 /. A complete picture runs in front of the eyes .. .small small things .. but very meaningfull and the pain which u felt while passing all the situations . And a concern of the youths . .really i hv to appreciate you bro 🙏💐
    I loved the topic after long time again i really liked the way u hv bought with words ..
    Keep writing and shareing .. God bless you brother 🌹❤️🙏

    Liked by 1 person

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s