ಲುಟಿಯನ್ಸ್ ದೆಹಲಿ

ದೇಶದ ಖ್ಯಾತ ಪತ್ರಕರ್ತ ಮತ್ತು ಸದ್ಯಕ್ಕೆ ರಿಪಬ್ಲಿಕ್ ಟಿವಿಯ ಮಾಲಿಕ ಅರ್ಣಾಬ್ ಗೋಸ್ವಾಮಿ ಆರಂಭದಿಂದಲೂ ತಮ್ಮ ಟಿವಿ ಛಾನೆಲ್ಲನ್ನು ದೇಶದ ರಾಜಕೀಯ ಆಗುಹೋಗುಗಳ ಪ್ರಮುಖ ಕೇಂದ್ರವಾದ ರಾಜಧಾನಿ ದೆಹಲಿಯಲ್ಲಿ ಆರಂಭಿಸಿದೇ, ದೇಶದ ಪ್ರಮುಖ ವಾಣಿಜ್ಯ ಕೇಂದ್ರವಾದ ಮುಂಬೈನಲ್ಲಿ ಪ್ರಾರಂಭಿಸಿ ತಮ್ಮ ಟಿವಿ ಷೋಗಳಲ್ಲಿ ಪದೇ ಪದೇ ಲೂಟಿಯನ್ಸ್ ಮಾಧ್ಯಮ, ಲೂಟಿಯನ್ಸ್ ಎಂಬ ಪದವನ್ನು ಬಹಳಷ್ಟು ಬಾರಿ ಬಳಸುತ್ತಲೇ ಇರುತ್ತಾರೆ. ಲೂಟಿಯನ್ಸ್ ಪದ ಕೇಳಿದ ತಕ್ಷಣ ಅದನ್ನು ಲೂಟಿ ಮಾಡುವವರು ಅರ್ಥಾತ್ ದೋಚುವವರು ಎಂಬ ಅರ್ಥವನ್ನು ಕಲ್ಪಿಸಿಕೊಂಡು ಅರೇ, ಅದು ಹೇಗೆ ತನ್ನ ಪ್ರತಿಸ್ಪರ್ಧಿ ಮಾಧ್ಯಮಗಳನ್ನು ಇಷ್ಟು ರಾಜಾರೋಷವಾಗಿ ಲೂಟಿಗೋರರು ಎಂದು ಕರೆಯುತ್ತಾರೆ? ಉಳಿದ ಮಾಧ್ಯಮಗಳು ಅವರ ವಿರುದ್ಧ ಕ್ರಮವನ್ನೇಕೆ ತೆಗೆದುಕೊಳ್ಳುವುದಿಲ್ಲ? ಎಂಬ ಪ್ರಶ್ನೆ ಮೂಡುತ್ತಿತ್ತು. ನಂತರ ಕೂತೂಹಲದಿಂದ ಲೂಟಿಯನ್ಸ್ ಎಂದರೆ ಏನು ಎಂದು ತಿಳಿದುಕೊಂಡ ನಂತರ ನನ್ನ ಅಪಾರ್ಥಕ್ಕೆ ನಾನೇ ನಗುವಂತಾಯಿತು.

ನಮಗೆಲ್ಲರಿಗೂ ತಿಳಿದಿರುವಂತೆ ಭಾರತದೊಂದಿಗೆ ಸಾಂಬಾರು ಪದಾರ್ಥಗಳ ವ್ಯಾಪಾರಕ್ಕಾಗಿ ಆಗಸ್ಟ್ 24, 1608 ರಂದು ಸೂರತ್‌ನಲ್ಲಿ ಭಾರತಕ್ಕೆ ಬಂದಿಳಿದ ಬ್ರಿಟಿಷರು, ಅಂದು ಸಣ್ಣ ಸಣ್ಣ ಸ್ವತಂತ್ರ ಸಂಸ್ಥಾನಗಳಾಗಿ ಹರಿದು ಹಂಚಿ ಹೋಗಿದ್ದ ಭಾರತೀಯರಲ್ಲಿ ಒಗ್ಗಟ್ಟಿಲ್ಲದಿದ್ದನ್ನೇ ನೆಪಮಾಡಿಕೊಂಡು ನಂತರದ ದಿನಗಳಲ್ಲಿ ನಮ್ಮ ನಮ್ಮಲ್ಲೇ ಆಂತರಿಕ ಕಿತ್ತಾಟವನ್ನು ತಂದು ಒಂದೊಂದೇ ರಾಜ್ಯಗಳನ್ನು ತಮ್ಮ ವಶಪಡಿಸಿಕೊಂಡು ಸುಮಾರು 250 ವರ್ಷಗಳ ಭಾರತವನ್ನು ತಮ್ಮ ವಸಾಹತು ಮಾಡಿಕೊಂಡು ಇಲ್ಲಿನ ಸಿರಿ ಸಂಪತ್ತುಗಳನ್ನು ದೋಚಿಕೊಂಡು ಹೋದದ್ದು ಎಲ್ಲರಿಗೂ ತಿಳಿದ ವಿಷಯವಾಗಿದೆ.

ಬ್ರಿಟೀಷರು ತಮ್ಮ ಶಕ್ತಿ ಕೇಂದ್ರವಾಗಿ ಸಮುದ್ರ ದಂಡೆಯಲ್ಲಿದ್ದ ದೂರದ ಕಲ್ಕತ್ತಾ ಮತ್ತು ದಕ್ಷಿಣದ ಮದ್ರಾಸ್ ನಗರವನ್ನು ಮಾಡಿಕೊಂಡಿದ್ದರಿಂದ ಆಡಳಿತಾತ್ಮಕವಾಗಿ ಇಡೀ ದೇಶದವನ್ನು ನೋಡಿಕೊಳ್ಳುವುದು ತುಸು ಕಷ್ಟವಾಗಿತ್ತು. ಅದೂ ಅಲ್ಲದೇ ಇಂಗ್ಲೇಂಡಿನ ತಂಪಾದ ಹವಾಮಾನದಲ್ಲಿ ಐಶಾರಾಮ್ಯದ ಜೀವನವನ್ನು ನಡೆಸಿದವರಿಗೆ ಸಮುದ್ರ ದಂಡೆಯ ಆದ್ರತೆ, ಬಿಸಿಲನ್ನು ತಡೆದುಕೊಳ್ಳಲಾಗದೇ, ದೇಶದ ಮಧ್ಯಭಾಗದಲ್ಲಿ, ತಂಪಾದ ಹವಾಗುಣ ಇರವ ಪ್ರದೇಶಕ್ಕೆ ತಮ್ಮ ರಾಜಧಾನಿಯನ್ನು ಬದಲಿಸಬೇಕೆಂದು ಯೋಚಿಸುತ್ತಿರುವಾಗಲೇ ಅವರಿಗೆ ಹೊಳೆದದ್ದೇ ದೆಹಲಿ.

ಬ್ರಿಟೀಷರಿಗಿಂತಲೂ ಮುಂಚೆ ಭಾರತಕ್ಕೆ ಧಾಳಿಕೋರರಾಗಿ ಬಂದ ಮೋಘಲರು ದಬ್ಬಾಳಿಕೆಯಿಂದ ಇಡೀ ಭಾರತವನ್ನು ತಮ್ಮ ತೆಕ್ಕೆಗೆ ತೆಗೆದುಕೊಂದು ದೆಹಲಿಯಿಂದಲೇ ತಮ್ಮ ಸಾಮ್ರಾಜ್ಯವನ್ನು ಕಟ್ಟಿದ್ದರಿಂದ ದೇಶದ ರಾಜಧಾನಿಯಾಗಿ ದೆಹಲಿಯೇ ಸೂಕ್ತ ಎಂದೆಣಿಸಿ 1912 ರಲ್ಲಿ ಬ್ರಿಟಿಷರು ತಮ್ಮ ಭಾರತೀಯ ರಾಜಧಾನಿಯನ್ನು ಕಲ್ಕತ್ತಾದಿಂದ ದೆಹಲಿಗೆ ಸ್ಥಳಾಂತರಿಸಲು ನಿರ್ಧರಿಸಿದರು. ದೆಹಲಿಗೆ ಸಮೀಪದಲ್ಲೇ ಹಿಮಾಲಯದ ಗಿರಿಧಾಮಗಳು ಇರುವ ಕಾರಣ, ಬೇಸಿಗೆಯಲ್ಲಿ ಹಿಮಾಚಲ ಪ್ರದೇಶದಿಂದ ಆಡಳಿತ ನಡೆಸಲು ನಿರ್ಧರಿಸಿ, ವೈಸ್ ರಾಯ್ ಗಳು, ಹಿರಿಯ ಅಧಿಕಾರಿಗಳು ಮತ್ತು ಆಡಳಿತಾತ್ಮಕ ಕಟ್ಟಡಗಳು ಒಂದೇ ಕಡೆ ಇಂಗ್ಲೆಂಡ್‌ನಲ್ಲಿ ಇರುವಂತಹ ಭವ್ಯವಾದ ಹಳ್ಳಿಗಾಡಿನ ಮನೆಗಳನ್ನು ವಿನ್ಯಾಸಗೊಳಿಸಲು ನಿರ್ಧರಿಸಿ ಅದಕ್ಕೆ ತಕ್ಕ ವಾಸ್ತುಶಿಲ್ಪಿಯ ಹುಡುಕಾಟದಲ್ಲಿ ಇದ್ದಾಗ ಸಿಕ್ಕವರೇ ಶ್ರೀ ಎಡ್ವಿನ್ ಲುಟಿಯನ್ಸ್.

lutಸರ್ ಎಡ್ವಿನ್ ಲುಟ್ಯೆನ್ಸ್ ಅವರ ಪೂರ್ಣ ಹೆಸರು ಸರ್ ಎಡ್ವಿನ್ ಲ್ಯಾಂಡ್‌ಸೀರ್ ಲುಟ್ಯೆನ್ಸ್ ಆಗಿದ್ದು ಮಾರ್ಚ್ 29, 1869 ರಂದು ಲಂಡನ್ನಿನಲ್ಲಿ ಜನಿಸಿದ ಶ್ರೀಯುತರು ಮಂದೆ ಇಂಗ್ಲಿಷ್ ಶೈಲಿಯ ಸಾಂಪ್ರದಾಯಿಕ ಕಟ್ಟಡಗಳ ಹೆಸರಾಂತ ವಾಸ್ತುಶಿಲ್ಪಿ ಎಂದು ಗುರುತಿಸಿಕೊಂಡಿದ್ದಲ್ಲದೇ, ತಮ್ಮ ಸಾಂಪ್ರದಾಯಿಕ ಮಾರ್ಗಗಳಲ್ಲಿ ಅನೇಕ ಆವಿಷ್ಕಾರಗಳಿಗೆ ಹೆಸರಾಗಿದ್ದವರು. ಅಂತಹವರಿಗೆ ವಾಷಿಂಗ್ಟನ್ ಅಥವಾ ಪ್ಯಾರಿಸ್ ಗೆ ಸಡ್ಡು ಹೊಡೆಯುವಂತಹ ಸಾಮರ್ಥ್ಯವನ್ನು ಹೊಂದಿರುವ ಮಹಾನ್ ಸಾಮ್ರಾಜ್ಯಶಾಹಿ ರಾಜಧಾನಿಯನ್ನು ವಿನ್ಯಾಸಗೊಳಿಸಿ ನಿರ್ಮಿಸಿ ಕೊಡಲು ಆದೇಶಿಸಲಾಯಿತು.

ld7ಇಂತಹ ಮಹತ್ತರ ಕಾರ್ಯವನ್ನು ಸಂತೋಷದಿಂದ ಒಪ್ಪಿಕೊಂಡ ವಾಸ್ತುಶಿಲ್ಪಿ ಎಡ್ವಿನ್ ಲುಟಿಯನ್ ತಮ್ಮ ತಂಡದೊಂದಿಗೆ ದೆಹಲಿಗೆ ಬಂದಾಗ ಅದಾಗಲೇ ಮೋಘಲರ ಕಾಲದಲ್ಲಿ ಪಾರಂಪರಿಕ ಕಟ್ಟಡಗಳನ್ನು ನೋಡಿ ಅವುಗಳನ್ನು ಹಾಗೆಯೇ ಉಳಿಸಿಕೊಂಡು ಅದರ ಹೊರತಾದ ಸುಂದರವಾದ ಹೊಸಾ ಬಡಾವಣೆಯನ್ನು ನಿರ್ಮಾಣ ಮಾಡಬೇಕೆಂದು ಸೂಕ್ತವಾದ ಪ್ರದೇಶವನ್ನು ಹುಡುಕುತ್ತಿದ್ದಾಗ ಅಂದಿಗೆ ದೆಹಲಿಯ ಹೊರಭಾಗದಲ್ಲಿ ಸುಮಾರು ಮುನ್ನೂರು ಕುಟುಂಬಗಳ ಹಳ್ಳಿ ಮತ್ತು ಅದರ ಪಕ್ಕದಲ್ಲೇ ಇದ್ದ ರೈಸೀನಾ ಎಂಬ ಗುಡ್ಡವಿದ್ದ ಎತ್ತರದ ಪ್ರದೇಶವೇ ತಮಗೆ ಸೂಕ್ತೆ ಎಂದು ನಿರ್ಧರಿಸಿ ಅಲ್ಲೊಂದು ಸುಂದರವಾದ ವಿಶಾಲವಾದ ಹೊಸ ನಗರವನ್ನು ನಿರ್ಮಿಸಲು ನೀಲಿ ನಕಾಶೆಯನ್ನು ತಯಾರಿಸಲಾಯಿತು.

ld1ವೈಸರಾಯ್ ಅವರ ನಿವಾಸವನ್ನು ಒಳಗೊಂಡಂತೆ ನೂರಾರು ಕಟ್ಟಡಗಳ ನಿರ್ಮಾಣ ಮಾಡುವ ಉದ್ದೇಶದಿಂದ ಹೊಸ ರಚನೆಗಳನ್ನು ವಿನ್ಯಾಸಗೊಳಿಸುವ ಕಾರ್ಯವನ್ನು ಕೈಗೆತ್ತಿಕೊಂಡ ಲುಟ್ಯೆನ್ಸ್ ಆರಂಭದಲ್ಲಿ ಭಾರತೀಯ ವಾಸ್ತುಶೈಲಿಯನ್ನು ಇಷ್ಟಪಡದೇ, ತಮ್ಮ ಯೂರೋಪಿಯನ್ ಶೈಲಿಯಲ್ಲೇ ಕಟ್ಟಡಗಳನ್ನು ನಿರ್ಮಿಸಲು ಮುಂದಾದಾಗ, ಅಂದಿನ ಬ್ರಿಟಿಷ್ ವೈಸರಾಯ್ ಲಾರ್ಡ್ ಚಾರ್ಲ್ಸ್ ಹಾರ್ಡಿಂಜ್ ಅವರು ಸ್ಥಳೀಯರೊಂದಿಗೆ ಬೆರೆಯಲು ಇಲ್ಲಿನ ಜಾನಪದ ಸೊಗಡಿನ ಶೈಲಿಯ ಕಟ್ಟಡಗಲೇ ಸೂಕ್ತ ಎಂದು ತಿಳಿಸಿ ಒಮ್ಮೆ ಇಡೀ ದೇಶವನ್ನು ಸುತ್ತಿ ಬರಲು ಸೂ‍ಚಿದರು. ವೈಸ್ ರಾಯ್ ಅವರ ಅದೇಶವನ್ನು ಧಿಕ್ಕರಿಸುವ ಮನಸ್ಸಿಲ್ಲದೇ, ಒಲ್ಲದ ಮನಸ್ಸಿನಿಂದಲೇ ಇಡೀ ದೇಶವನ್ನು ಸುತ್ತಿದ ನಂತರ ಭಾರತದ ಸಾಂಪ್ರದಾಯಿಕ ವಾಸ್ತುಶಿಲ್ಪದ ಜೊತೆ ಮೊಘಲ್ ಮತ್ತು ಬೌದ್ಧರ ಶೈಲಿ ಎಲ್ಲವನ್ನೂ ಸೇರಿಸಿ ಸುಂದರವಾದ ಕಟ್ಟಡಗಳನ್ನು ನಿರ್ಮಾಣ ಮಾಡಲು ನಿರ್ಧರಿಸಲಾಯಿತು. ಅಂದಿನ ವೈಸರಾಯ್ ನಿವಾಸ (ಇಂದಿನ ರಾಷ್ಟ್ರಪತಿಗಳ ನಿವಾಸವಾದ ರಾಷ್ಟ್ರಪತಿ ಭವನ)ಕ್ಕೆ ಸ್ಥಳೀಯ ಅಂಶಗಳಾದ ಚತ್ರಿಗಳು (ಮಂಟಪಗಳು), ಕಲ್ಲಿನ ಲ್ಯಾಟಿಸ್ ಪರದೆಗಳು, ಆನೆಗಳ ಕೆತ್ತಿದ ಚಿತ್ರಗಳು ಮತ್ತು ಬೃಹತ್ ಬೌದ್ಧ ಗುಮ್ಮಟ. ಅವರು ಗ್ರೀಕ್ ಮತ್ತು ಭಾರತೀಯ ಅಂಶಗಳನ್ನು ಬೆಸೆಯುವ ನವ-ಶಾಸ್ತ್ರೀಯ ಶೈಲಿ ಮುಂದೆ ದೆಹಲಿ ಆರ್ಡರ್ ಎಂದೇ ಖ್ಯಾತಿ ಪಡೆಯಿತು.

ld6ಲುಟಿಯೆನ್ಸ್ ಅವರ ಜೊತೆಯಲ್ಲಿ ಕೆಲಸ ಮಾಡುತ್ತಿದ್ದ ಇತರೇ ವಾಸ್ತುಶಿಲ್ಪಿಗಳಿಗೂ ಸಹಾ ಈ ರೀತಿಯ ಈ ಹೈಬ್ರಿಡ್ ಶೈಲಿಯನ್ನು ಇಷ್ಟವಾಗಿ ಅವರೂ ಸಹಾ ಅದನ್ನೇ ಸಮ್ಮತಿಸಿ ವಸಾಹತುಶಾಹಿ ಅಧಿಕಾರಿಗಳಿಗೆ ಸುಂದರವಾದ ಬಂಗಲೆಗಳನ್ನು ವಿನ್ಯಾಸಗೊಳಿಸಿದ್ದೇ ಮುಂದೆ ಲುಟ್ಯೆನ್ಸ್ ಬಂಗಲೆಗಳು ಎಂದು ಕರೆಯಲ್ಪಡುತ್ತವೆ. ಪ್ರಸಿದ್ಧ ಬ್ರಿಟಿಷ್ ಮತ್ತು ಭಾರತೀಯ ವಾಸ್ತುಶಿಲ್ಪದ ಸಮಾಗಮದೊಂದಿಗೆ ಅಮೇರಿಕಾದ ಬಿಳಿ ಮನೆಯಂತೆ (Whitehouse)ಗಳನ್ನು ಸಹಾ ನಿರ್ಮಿಸಲಾಯಿತು.

rbನಗರದ  ಉದ್ದಕ್ಕೂ ಅವರು ಸರ್ಕಾರಿ ಕಚೇರಿಗಳಿಂದ ಸುತ್ತುವರೆದಿರುವ ವಿಶಾಲವಾದ ಆಯತಾಕಾರದ ಮಾಲ್ ಅನ್ನು ಸ್ಥಾಪಿಸಿ ಅದರ ತುದಿಯಲ್ಲಿ ಕಿರೀಟಪ್ರಾಯದಂತೆ ವೈಸ್ ರಾಯ್ ಅವರ ಭವ್ಯವಾದ ಅರಮನೆ ಇರುವಂತೆ ನಿರ್ಮಾಣ ಮಾಡಿದರು. ವಿಶಾಲವಾದ ಸುತ್ತಲೂ ಸಾಲು ಮರದ ಸಾಲಿನ ಬೀದಿಗಳು ಅಲ್ಲಲ್ಲೇ ಸುಂದರವಾದ ಉದ್ಯಾನವನಗಳನ್ನು ನಿರ್ಮಿಸಿ ಆ ವಸಾಹತುಶಾಹಿ ಅಧಿಕಾರಿಗಳು ತಮ್ಮ ಮನೆಯ ಹಜಾರದಲ್ಲಿ ಬಂದು ನಿಂತರೆ ಈ ಸುಂದರವಾದ ವಿಶಾಲವಾದ ಉದ್ಯಾನಗಳು ಅವರ ಕಣ್ಮನಗಳನ್ನು ತಣಿಸುವಂತಿತ್ತು,

bekarಇನ್ನು ಬ್ರಿಟಿಷ್ ಸರ್ಕಾರದ ಕಟ್ಟಡಗಳು ಸಚಿವಾಲಯಗಳನ್ನು ನಿರ್ಮಿಸಲು ಆರಂಭಿಸಿ ಅದನ್ನು ನಾರ್ತ್ ಬ್ಲಾಕ್, ಸೌತ್ ಬ್ಲಾಕ್ ಎಂದು ವಿಭಜಿಸಿ ಅಲ್ಲಿ ಅನೇಕ ಸರ್ಕಾರಿ ಕಟ್ಟಡಗಳು, ಅಧಿಕಾರಿಗಳಿಗೆ ಮತ್ತು ಅವರ ಸಿಬ್ಬಂದಿಗಳು ಉಳಿದುಕೊಳ್ಳಲು ವಸತಿ ಸಮುಚ್ಛಾಯ ಎಲ್ಲವೂ ಒಂದೇ ಕಡೆ ಇರುವಂತೆ ನೀಲನಕ್ಷೆಯನ್ನು ತಯಾರಿಸಿ ಅದೇ ರೀತಿಯಾಗಿ ಅವುಗಳನ್ನು ಯಶಸ್ವಿಯಾಗಿ ಬ್ರಿಟಿಷ್ ವಾಸ್ತುಶಿಲ್ಪಿಗಳಾದ ಎಡ್ವಿನ್ ಲುಟ್ಯೆನ್ಸ್ ಮತ್ತು ಹರ್ಬರ್ಟ್ ಬೇಕರ್ ಅವರು ಸರ್ಕಾರದ ದಕ್ಷ ಕಾರ್ಯನಿರ್ವಹಣೆಗೆ ಅಗತ್ಯವಿರುವ ಎಲ್ಲಾ ಸೌಲಭ್ಯಗಳನ್ನು ಹೊಂರಿರುವ ಸೆಂಟ್ರಲ್ ವಿಸ್ಟಾ ಸಂಕೀರ್ಣವನ್ನು ಭಾರತದಲ್ಲಿ ಆಡಳಿತದ ಕೇಂದ್ರವಾಗಿ ರೂಪಿಸಿ, 1931 ರಲ್ಲಿ ಇದನ್ನು ಅಧಿಕೃತವಾಗಿ ಉದ್ಘಾಟಿಸಲಾಯಿತು.

ld3ಸೆಕ್ರೆಟರಿಯೇಟ್ ಕಟ್ಟಡಗಳಾದ ಉತ್ತರ ಮತ್ತು ದಕ್ಷಿಣ ಬ್ಲಾಕ್ ಗಳ ಜೊತೆಗೆ ಉನ್ನತ ದರ್ಜೆಯ ಅಧಿಕಾರಿಗಳಿಗೆ ಆಗಿನ ಕಿಂಗ್ ಜಾರ್ಜ್ ಅವೆನ್ಯೂದಲ್ಲಿ (ಸೆಕ್ರೆಟರಿಯೇಟ್ಗಳ ದಕ್ಷಿಣ) ಬಂಗಲೆಗಳನ್ನು ಸರ್ ಹರ್ಬರ್ಟ್ ಬೇಕರ್ ವಿನ್ಯಾಸಗೊಳಿಸಿದರು. ಕನ್ನಾಟ್ ಪ್ಲೇಸ್, ಜನಪಥ್ನಲ್ಲಿ ಪೂರ್ವ ಮತ್ತು ಪಶ್ಚಿಮ ನ್ಯಾಯಾಲಯಗಳನ್ನು ರಾಬರ್ಟ್ ಟಾರ್ ರಸ್ಸೆಲ್ ವಿನ್ಯಾಸಗೊಳಿಸಿದರೆ, ತೀನ್ ಮೂರ್ತಿ ಹೌಸ್ (ಹಿಂದೆ ಫ್ಲಾಗ್ಸ್ಟಾಫ್ ಹೌಸ್ ಎಂದು ಕರೆಯಲಾಗುತ್ತಿತ್ತು), ಸಫ್ದರ್ಜಂಗ್ ವಿಮಾನ ನಿಲ್ದಾಣ (ಹಿಂದೆ ವಿಲಿಂಗ್ಡನ್ ಏರ್ಫೀಲ್ಡ್), ರಾಷ್ಟ್ರೀಯ ಕ್ರೀಡಾಂಗಣ ಮತ್ತು ಹಲವಾರು ಸರ್ಕಾರಿ ಮನೆಗಳನ್ನು ವಿಲಿಯಂ ಹೆನ್ರಿ ನಿಕೋಲ್ಸ್, CG ಬ್ಲಾಂಫೀಲ್ಡ್, FB ಬ್ಲಾಂಫೀಲ್ಡ್, ವಾಲ್ಟರ್ ಸೈಕ್ಸ್ ಜಾರ್ಜ್, ಆರ್ಥರ್ ಗಾರ್ಡನ್ ಶೂಸ್ಮಿತ್ ಮತ್ತು ಹೆನ್ರಿ ಮೆಡ್ ಮುಂತಾದ ವಾಸ್ತುಶಿಲ್ಪಿಗಳು ವಿನ್ಯಾಸಗೊಳಿಸಿದ್ದರು. ಅಷ್ಟು ಕಡಿಮೆ ಸಮಯದಲ್ಲಿ ಇಡೀ ವಿಶ್ವವೇ ಭಾರತದತ್ತ ತಿರುಗಿ ನೋಡುವಂತಹ ಸುಂದರ ಮತ್ತು ಸುಸಜ್ಜಿತ ರಾಜಧಾನಿಯನ್ನು ವಿನ್ಯಾಸಗೊಳಿಸಿ ಅದನ್ನು ಸಾಕಾರ ಗೊಳಿಸಿದ ಈ ವಾಸ್ತುಶಿಲ್ಪಿಗಳ ನಾಯಕರಾಗಿದ್ದ ಸರ್ ಎಡ್ವಿನ್ ಲುಟ್ಯೆನ್ಸ್ ಅವರ ನೆನಪಿಗಾಗಿ ದೆಹಲಿಯ ಈ ಭಾಗವನ್ನು ಲೂಟಿಯನ್ಸ್ ದೆಹಲಿ ಎಂದೇ ಕರೆಯಲಾರಂಭಿಸಿದರು.

parliment1947ರಲ್ಲಿ ಬ್ರಿಟಿಷರು ಭಾರತದಿಂದ ನಿರ್ಗಮಿಸಿದಾಗ, ಸ್ವತಂತ್ರ ಭಾರತದ ಮೊದಲ ಪ್ರಧಾನ ಮಂತ್ರಿ ಜವಾಹರಲಾಲ್ ನೆಹರು ಅವರು ಈ ಕಟ್ಟಡಗಳು ಬ್ರಿಟಿಷ್ ಶಕ್ತಿಯ ಸಂಕೇತ ಮತ್ತು ಈ ರೀತಿಯ ಆಡಂಬರಗಳು ವ್ಯರ್ಥ ಎಂದು ಹೇಳಿದರಾದರು ನಂತರದ ದಿನಗಳಲ್ಲೇ ಅದೇ ಸಂಸತ್ ಭವನವಾಗಿ ಅಲ್ಲೇ ಲೋಕ ಸಭೆ, ರಾಜ್ಯಸಭೆಗಳಾದವು. 144 ಕಂಬಗಳನ್ನು ಹೊಂದಿರುವ ಕರ್ನಾಟಕದ ಐಹೊಳೆಯ ದೇವಸ್ಥಾನದ ಶೈಲಿಯಲ್ಲಿರುವ ಭಾರತದ ಸಂಸತ್ ಭವನವು ವಿಶ್ವದಲ್ಲೇ ಅತ್ಯಂತ ವಿಶಿಷ್ಟವಾದ ಸಂಸತ್ತಿನ ಕಟ್ಟಡಗಳಲ್ಲಿ ಒಂದಾಗಿದ್ದುಮೂರು ಕೋಣೆಗಳ ಸುತ್ತಲೂ ನಾಲ್ಕು ಅಂತಸ್ತಿನ ವೃತ್ತಾಕಾರದ ರಚನೆಯು ಮಂತ್ರಿಗಳು, ಅಧ್ಯಕ್ಷರು, ಸಂಸದೀಯ ಸಮಿತಿಗಳು, ಪಕ್ಷದ ಕಚೇರಿಗಳು, ಲೋಕಸಭೆ ಮತ್ತು ರಾಜ್ಯಸಭಾ ಸಚಿವಾಲಯದ ಪ್ರಮುಖ ಕಚೇರಿಗಳು ಮತ್ತು ಸಂಸದೀಯ ವ್ಯವಹಾರಗಳ ಸಚಿವಾಲಯದ ಕಚೇರಿಗಳಿಗೆ ವಸತಿ ಸೌಕರ್ಯವನ್ನು ಒದಗಿಸುತ್ತದೆ.

rdparadeಇದೇ ರಾಷ್ಟ್ರಪತಿ ಭವನ ಮತ್ತು ಅಲ್ಲಿಂದ ಮೂರು ಕಿಲೋಮೀಟರ್ ದೂರವಿರುವ ಇಂಡಿಯಾ ಗೇಟ್ ನಡುವೆ ಇರುವ ದೆಹಲಿಯ ರಾಜಪಥದಲ್ಲಿ ಪ್ರತೀವರ್ಷ ಜನವರಿ26 ರಂದು ನಡೆಯುವ ಗಣರಾಜ್ಯೋತ್ಸವದಲ್ಲಿ ಮೂರೂ ಸೇನೆಗಳು ನಡೆಸುವ ಕವಾಯತು ನೋಡಲು ದೇಶವಿದೇಶಗಳಿಂದ ಲಕ್ಷಾಂತರ ಜನರು ಆಗಮಿಸಿ ಸೇನಾ ಪೇರೇಡ್ ನಂತರ ಇದೇ ಲೂಟಿಯನ್ಸ್ ಬಂಗಲೆಗಳನ್ನು ನೋಡಿ ಅದರ ಆಂದ ಚಂದ ಮತ್ತು ವಾಸ್ತುಶಿಲ್ಪಕ್ಕೆ ಬೆರಗಾಗುತ್ತಾರೆ ಎಂದರೂ ತಪ್ಪಾಗದು.

new_parlimentಈ ಬಂಗಲೆಗಳು ಈಗಾಗಲೇ ಸುಮಾರು ನೂರು ವರ್ಷಗಳನ್ನು ಕಳೆದು ಕೆಲವೊಂದು ಶಿಥಿಲಾವಸ್ಥೆಗೂ ತಲುಪಿರುವುದನ್ನು ಮನಗಂಡ ಪ್ರಸಕ್ತ ಸರ್ಕಾರ ಇಂದಿನ ಶೈಲಿಗೆ ಅನುಗುಣವಾಗಿ 64,500 ಚದರ ಮೀಟರ್ ವಿಸ್ತೀರ್ಣವನ್ನು ಹೊಂದಿರುವ ಹೊಸ ಸಂಸತ್ ಭವನದ ನಿರ್ಮಾಣಕ್ಕಾಗಿ 2021ರಲ್ಲಿ ಪ್ರಧಾನ ಮಂತ್ರಿಗಳು ಭೂಮಿ ಪೂಜೆಯನ್ನು ನೆರವೇರಿಸಿದ್ದು, ಅಕ್ಟೋಬರ್ 2022ರ ಸಂಸತ್ತಿನ ಚಳಿಗಾಲದ ಅಧಿವೇಶನದ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ.

ದೆಹಲಿಯ ಅತ್ಯಂತ ದುಬಾರಿ ಪ್ರದೇಶ ಎಂದೇ ಪ್ರಖ್ಯಾತವಾಗಿರುವ ಸುಮಾರು 26 km ವಿಸ್ತೀರ್ಣದಲ್ಲಿರುವ ಈ ಲುಟಿಯನ್ಸ್ ಬಂಗಲೆಯ ಪ್ರದೇಶವನ್ನು ಖಂಡಿತವಾಗಿಯೂ ಪ್ರತಿಯೊಬ್ಬ ಭಾರತೀಯರೂ ನೋಡಲೇ ಬೇಕಾದಂತಹ ಸ್ಥಳವಾಗಿದೆ. ಮುಂದಿನ ಬಾರಿ ಸ್ವಲ್ಪ ಸಮಯ ಮಾಡಿಕೊಂಡು ದೇಶದ ರಾಜಧಾನಿ ದೆಹಲಿಗೆ ಹೋಗಿ ಈ ಲೂಟಿಯನ್ಸ್ ದೆಹಲಿಯನ್ನೂ ನೋಡಿ ಕಣ್ಮನಗಳನ್ನು ತುಂಬಿಸಿಕೊಂಡು ಅದರ ಅನುಭವನ್ನು ನಮ್ಮೊಂದಿಗೆ ಹಂಚಿಕೊಳ್ತೀರೀ ತಾನೇ?

ಏನಂತೀರಿ?
ನಿಮ್ಮವನೇ ಉಮಾಸುತ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s