ಮುತ್ತುಗದ ಎಲೆ (ಇಸ್ತ್ರೀ ಎಲೆ)

ಮದುವೆ ಮುಂಜಿ, ನಾಮಕರಣ ಮುಂತಾದ ಶುಭ ಸಮಾರಂಭವಿರಲೀ ಅಥವಾ ಯಾವುದೇ ಸಾರ್ವಜನಿಕ ಸಭೆ ಸಮಾರಂಭಗಳಲ್ಲಿ ಸಾಧಾರಣವಾಗಿ ಉಟವನ್ನು ಬಡಿಸಲು ಬಾಳೆ ಎಲೆಯನ್ನು ಬಳಸುವುದು ದಕ್ಷಿಣ ಭಾರತದಲ್ಲಿ ನಡೆದುಕೊಂಡು ಬಂದ ಸಂಪ್ರದಾಯವಾಗಿದೆ. ನೀರು ಹೆಚ್ಚಾಗಿರುವ ಕಡೆಯಲ್ಲಿ ಬಾಳೇಗಿಡ ಬೆಳೆಯುವ ಕಾರಣ, ನೀರಿಲ್ಲದ ಪ್ರದೇಶಗಳಲ್ಲಿ ಬಾಳೆಯ ಎಲೆಯ ಬದಲಾಗಿ ಬಳಸುವ ಎಲೆಯೇ. ಮುತ್ತುಗದ ಎಲೆ. ಕೇವಲ ಊಟದ ಎಲೆಗಷ್ಟೇ ಅಲ್ಲದೇ, ಪೂಜೆ ಪುನಸ್ಕಾರ ಮತ್ತು ಆಯುರ್ವೇದದಲ್ಲಿ ಹಲವು ಔಷಧಿಗಳಿಗೆ ಬಳಸುವ ಈ ಮರಕ್ಕೆ ಕನ್ನಡದಲ್ಲಿ ಮುತ್ತುಗ, ಸಂಸ್ಕೃತದಲ್ಲಿ ಪಾಲಾಶ ಮತ್ತು ತಮಿಳಿನಲ್ಲಿ ಮುರಕ ಎಲೆ, ತೆಲುಗಿನಲ್ಲಿ ಮೋದುಗ, ಮಲಯಾಳಂನಲ್ಲಿ ಮುರಿಕು ಎಂಬ ಹೆಸರಿದ್ದರೆ, ಸಸ್ಯಶಾಸ್ತ್ರದ ಪ್ರಕಾರ ಇದಕ್ಕೆ ಬ್ಯುಟಿಯಾ ಮಾನೊಸ್ಪರ್ಮ ಎನ್ನುತ್ತಾರೆ, ಮುತ್ತುಗದ ಮರ ಹೂವನ್ನು ಬಿಟ್ಟಾಗ ಸೂರ್ಯನ ಕಿರಣಗಳು ಪ್ರತಿಫಲಿಸಿ ಇಡೀ ಮರವೇ ಬೆಂಕಿಯ ಜ್ವಾಲೆಗಳಂತೆ ಪ್ರಜ್ವಲಿಸುವ ಹಾಗೆ ಕಾಣುವ ಕಾರಣ ಇದನ್ನುಕಾಡಿನ ಬೆಂಕಿ ಎಂಬ ಹೆಸರಿನಿಂದಲೂ ಕರೆದರೆ, ಇನ್ನು ಇಂಗ್ಲೀಷಿನಲ್ಲಿ ಈ ಮರ Flame of the forest ಎಂದೇ ಚಿರಪರಿಚಿತವಾಗಿದೆ.

ಹಳ್ಳಿಯ ಕಡೆ ಹೆಂಗಸರು ಈ ಎಲೆಗಳನ್ನು ತಂದು ಅವುಗಳನ್ನು ಒಣಗಿಸಿ, ಮಧ್ಯದಲ್ಲಿ ದೊಡ್ಡದಾದ ಎಲೆಯನ್ನುಟ್ಟು ಅದರ ಸುತ್ತಲೂ 5-6 ಎಲೆಗಳನ್ನು ದುಂಡಾಗಿ ಹಂಚಿ ಕಡ್ಡಿಯಲ್ಲಿ ಒಪ್ಪವಾಗಿ ಬೆಸೆದು ಸುಂದರವಾಗಿ ಊಟದ ಎಲೆಗಳನ್ನು ತಯಾರಿಸಿ ಅಟ್ಟದ ಮೇಲೆ ಇಟ್ಟು ಅವಶ್ಯತೆ ಇದ್ದಾಗ ಬಳಸುತ್ತಿದ್ದರು. ಊಟವಾದ ನಂತರ ಉಂಡ ಎಲೆಗಳನ್ನು ತಿಪ್ಪೆಗೆ ಹಾಕಿದರೆ ಕೆಲವೇ ದಿನಗಳಲ್ಲಿ ಅದು ಕಳೆತು ಉತ್ತಮವಾದ ಗೊಬ್ಬರವೂ ಆಗುತ್ತಿತ್ತು.

WhatsApp Image 2022-07-05 at 4.18.35 PMಇತ್ತೀಚೆಗೆ ವಾಟ್ಸಾಪ್ ನಲ್ಲಿ ಜರ್ಮನಿಯ ಕಂಪನಿಯು ಎಲೆಯಿಂದ ಮಾಡಿದ ಅತ್ಯಂತ ಪರಿಸರ ಸ್ನೇಹಿ ಊಟದ ತಟ್ಟೆಗಳನ್ನು ಕಂಡುಹಿಡಿದಿದ್ದೇವೆ ಎಂದು ಹೇಳಿಕೊಳ್ಳುವ ಚಿತ್ರವನ್ನು ನೋಡಿದಾಗ, ಸಹಸ್ರಾರು ವರ್ಷಗಳ ಹಿಂದಿನಿಂದಲೂ ನಮ್ಮ ಹಳ್ಳಿಗಳಲ್ಲಿ ಬಳಸುತ್ತಿದ್ದ ಈ ಎಲೆ ಆಧುನಿಕತೆ ಹೆಸರಿನಲ್ಲಿ ಸ್ಟೀಲ್, ಗಾಜು, ಪಿಂಗಾಣಿ ಮತ್ತು ಪ್ಲಾಸ್ಟಿಕ್ ತಟ್ಟೆಗಳನ್ನು ಬಳಸುವ ಮೂಲಕ ಮುತ್ತುಗದ ಎಲೆಯನ್ನು ಬಳಸುವುದುದನ್ನು ಸಂಪೂರ್ಣವಾಗಿ ತ್ಯಜಿಸಿದ್ದರ ಬಗ್ಗೆ ಬೇಸರ ಆಗಿದ್ದಂತು ಸುಳ್ಳಲ್ಲ.

ele4ಮುತ್ತುಗದ ಎಲೆಯನ್ನು ಹಚ್ಚುವುದೇ ಗ್ರಾಮೀಣ ಭಾಗದ ಹೆಂಗಳೆಯರಿಗೆ ಉಪ ಕಸುಬಾಗಿದ್ದು, ಸಮಯ ಸಿಕ್ಕಾಗ ಮಕ್ಕಳೊಂದಿಗೆ ಹತ್ತಿರದ ಕಾಡಿಗೆ ಹೋಗಿ ಬಲಿತ ಎಲೆಗಳನ್ನು ಕತ್ತರಿಸಿಕೊಂಡು ತಂದು ಎಲೆಗಳ ತುದಿಯನ್ನು ಕತ್ತರಿಸಿ, ಅವುಗಳ ಆಕಾರ ಮತ್ತು ಗಾತ್ರದ ಅನುಗುಣವಾಗಿ ದಬ್ಬಳ ಪೋಣಿಸಿದ ಗೋಣೀದಾರದಲ್ಲಿ ಎಲೆಯ ಪಿಂಡಿಗಳನ್ನು ಮಾಡಿ ಅವುಗಳನ್ನು ಮನೆಯ ಹೆಂಚಿನ ಮೇಲೆ ಚೆನ್ನಾಗಿ ಒಣಗಿಸಿ ಮಾಳಿಗೆ ಇಲ್ಲವೇ ಅಟ್ಟದ ಮೇಲೆ ಎತ್ತಿಡುತ್ತಿದ್ದರು. ಎಲೆಯನ್ನು ಹಚ್ಚುವ ವೇಳೆ ಮಾಳಿಗೆಯಿಂದ ಇಳಿಸಿ ಅಗತ್ಯವಿದ್ದಷ್ಟು ಎಲೆಗಳನ್ನು ಕೆಲ ಕಾಲ ನೀರಲ್ಲಿ ನೆನೆಸಿ ಸೀಳಿದ ಹಂಚೀ ಕಡ್ಡಿಗಳ ಸಹಾಯದಿಂದ ಹಚ್ಚಿದ ನಂತರ ೫೦ ಇಲ್ಲವೇ ೧೦೦ ಎಲೆಗಳನ್ನು ಒಂದರ ಮೇಲೊಂದು ಜೋಡಿಸಿ ಅವುಗಳನ್ನು ಗೋಣಿದಾರ ಇಲ್ಲವೇ ತೆಂಗಿನ ಸೋಗೆಯಿಂದ ಪಿಂಡಿಗಳಂತೆ ಕಟ್ಟಿ ಅದರ ಮೇಲೆ ಬೀಸೋ ಕಲ್ಲು ಇಲ್ಲವೇ ಚಪ್ಪಟೆಯಾಕಾರದ ಭಾರವನ್ನು ಸುಮಾರು 24 ಗಂಟೆಗಳ ಕಾಲ ಹೇರಿಟ್ಟಲ್ಲಿ ಎಲ್ಲಾ ಎಲೆಗಳು ಇಸ್ತ್ರಿ ಮಾಡಿದಂತೆ ಸಪಾಟಾಗುತ್ತಿದ್ದರಿಂದಲೋ ಏನೋ, ಇವುಗಳಿಗೆ ಇಸ್ತ್ರಿ ಎಲೆ ಎಂದೂ ಗ್ರಾಮೀಣ ಭಾಗದಲ್ಲಿ ಕರೆಯುತ್ತಾರೆ. ಹೀಗೆ ಭಾರ ಹೇರದಿದ್ದ ಪಕ್ಷದಲ್ಲಿ ಎಲೆಗಳು ಸುಕ್ಕಾಗಿ ಇಲ್ಲವೇ ಅಂಚು ಮುದುರಿಕೊಂಡು ಬಳಸಲಾಗುವುದಿಲ್ಲ.

ele3ನಾವು ಚಿಕ್ಕವರಿದ್ದಾಗ  ನಮ್ಮಜ್ಜಿನೇ ಕಷ್ಟ ಪಟ್ಟು ದೂರ ದೂರದಿಂದ ಬಲಿತ ಮುತ್ತುಗದ ಎಲೆಗಳನ್ನು ತರುತ್ತಿದ್ದರೆ, ಹೆಚ್ಚಿನ ಬಾರಿ ನಮ್ಮ ಚಿಕ್ಕಪ್ಪಂದಿರನ್ನು ಕಾಡೀ ಬೇಡೀ ಕೆಲವೊಮ್ಮೆ ಧಮ್ಕಿ ಹಾಕಿಯೂ ಎಲೆಗಳನ್ನು ತರುಸುತ್ತಿದ್ದರು. ನಂತರ ಅವರೆಲ್ಲರೂ ಹೆಚ್ಚಿನ ವಿದ್ಯಾಭ್ಯಾಸ ಮತ್ತು ಕೆಲಸಕ್ಕಾ ನಗರಕ್ಕೆ ವಲಸೆ ಹೋದಾಗ, ಊರಿನ ಹುಡುಗರಿಗೆ ಕುರುಕುಲು ತಿಂಡಿಯನ್ನು ಕೊಟ್ಟು ನಮ್ಮಜ್ಜಿ ಎಲೆಗಳನ್ನು ತರಿಸಿ ಅವುಗಳನ್ನು ಬಿಡಿಸಿ, ತುದಿ ಕತ್ತರಿಸಿ, ದಾರದಲ್ಲಿ ಪೋಣಿಸಿ ಒಣಗಲೆಂದು ಮನೆಯ ಸೂರಿನ ಮೇಲೆ ಹಾಕಿ ಸಂಜೆ ಅಕಸ್ಮಾತಾಗಿ ಅವುಗಳನ್ನು ತೆಗೆಯುವುದನ್ನು ಮರೆತು ಬಿಟ್ಟಾಗ ಕೆಲವೊಮ್ಮೆ ಅಕ್ಕ ಪಕ್ಕದವರು ಅದನ್ನು ಕದ್ದೊಯ್ದಾಗ ಮಾರನೇ ದಿನ ಚನ್ನಮ್ಮಾ ಹೆಸರಿಗೆ ಅನ್ವರ್ಧದಂತೆ ನಮ್ಮಜ್ಜಿ ಇಡೀ ಊರಿಗೆ ಕೇಳುವಂತೆ ಬಯ್ಯುತ್ತಿದ್ದ ಬೈಗುಳ ಇನ್ನೂ ಕಿವಿಗಳಲ್ಲಿ ಗುಂಯ್ ಗುಟ್ಟುತ್ತಿದೆ. ನಮ್ಮ ಅಜ್ಜಿ ಮುತ್ತುಗದ ಎಲೆಗಳನ್ನು ಪೋಣಿಸಿ ಊಟದ ಎಲೆಗಳನ್ನಾಗಿ ಹಚ್ಚು ಅದನ್ನು ಒಪ್ಪವಾಗಿ ಒಣಗಿಸಿ 100ಕ್ಕೆ 2 ರೂಪಾಯಿಂತೆ ಮಾರುತ್ತಿದ್ದು ನಂತರದ ದಿನಗಳಲ್ಲಿ 5 ಅಥವಾ 10 ರೂಪಾಯಿಗೆಳಿಗೆ ಮಾರುತ್ತಿದ್ದದ್ದು ಇನ್ನೂ ಹಚ್ಶ ಹಸುರಾಗಿಯೇ ಇದೆ. ಅತ್ಯಂತ ಚಂದವಾಗಿ ಸ್ವಲ್ಪವೂ ಸೋರದಂತೆ ಎಲೆ ಹಚ್ಚುವುದರಲ್ಲಿ ಎತ್ತಿದ ಕೈ ಆಗಿದ್ದ ನಮ್ಮ ಅಜ್ಜಿ ಹಚ್ಚುತ್ತಿದ್ದ ಎಲೆಗೆ ಬಹಲ ಬೇಡಿಕೆಯೂ ಇದ್ದು, ಹೆಚ್ಚಿಗೆ ಹಚ್ಚುತ್ತಿದ್ದ ಎಲೆಗಳನ್ನು ವಾರಾಂತ್ಯದಲ್ಲಿ ನಡೆಯುತ್ತಿದ್ದ ಕದಬಳ್ಳಿ ಸಂತೆಗೆ ತಲೆಯ ಮೇಲೆ ಹೊತ್ತು ಕೊಂಡು ಹೋಗಿ ಅಲ್ಲೇ ಮಾರಿ ಬಂದ ಹಣದಲ್ಲೇ ವಾರಕ್ಕೆ ಅಡುಗೆಗೆ ಬೇಕಾಗುವಷ್ಟು ಪದಾರ್ಥಗಳು ಮತ್ತು ತರಕಾರಿ ಹಣ್ಣುಗಳ ಜೊತೆಗೆ ನಮಗೆ ಬೆಂಡು ಬತ್ತಾಸು ಇಲ್ಲವೇ ಸಕ್ಕರೇ ಮಿಠಾಯಿಯನ್ನು ತಂದು ಕೊಟ್ಟಿದ್ದೂ ಇನ್ನೂ ಚೆನ್ನಾಗಿಯೇ ನೆನಪಿನಲ್ಲಿ ಇದೆ.

ele5ನಮ್ಮ ಅಜ್ಜಿಯಿಂದಲೇ ಎಲೆಗಳನ್ನು ಹಚ್ಚುವುದನ್ನು ಕಲಿತು ನಂತರದ ದಿನಗಳಲ್ಲಿ ನಮ್ಮ ಅಜ್ಜಿಗೇ ಸಡ್ಡು ಹೊಡೆಯುವಂತೆ ಎಲೆ ಹಚ್ಚಿಯೇ ಬೆಳೆದ ನೆರೆಹೊರೆಯವರನ್ನೂ ಕಂಡಿದ್ದೇನೆ. ಅಜ್ಜಿಗೆ ವಯಸ್ಸಾದಂತೆಲ್ಲಾ ಊರು ಬೆಟ್ಟಿ ನಮ್ಮೊಂದಿಗೆ ಬೆಂಗಳೂರಿಗೆ ಬಂದು ವರ್ಷಕ್ಕೊಮ್ಮೆ ಊರ ಜಾತ್ರೆಗೆ ಹೋದಾಗ ಅವರಿಂದಲೇ ೧೦೦ ಎಲೆಗೆ 50-100 ರೂಪಾಯಿ ಕೊಟ್ಟು ಕೊಂಡು ಕೊಳ್ಳುವಾಗ, ಛೇ. ಛೇ.. ಛೇ.. ರೂಪಾಯಿಗೆ ಒಂದೆಲೆಯೇ, ಅವಳಿಗೆ ತುಂಬಾ ದುರಾಸೆ ಬಂದು ಬಿಡ್ತು. ಎಲೆ ಹಚ್ಚಿದ ಹಣದಲ್ಲೇ ಬಂಗಲೆ ಮೇಲೆ ಮೇಲೆ ಬಂಗಲೆ ಕಟ್ಟಿ ಬಿಡ್ತಾಳೋ ಏನೋ ? ಎಂದು ಅಜ್ಜಿ ಲೊಚಗುಟ್ಟುತ್ತಿದ್ದದ್ದನ್ನೂ ಮರೆಯಲಾಗುತ್ತಿಲ್ಲ.

ele1ಪ್ರತೀಬಾರಿ ಹಬ್ಬ ಹರಿದಿನಗಳಲ್ಲಿ ನಾವೆಲ್ಲರೂ ಊರಿಗೆ ಹೋದಾಗ ಮುತ್ತುಗದ ಎಲೆ ಹಚ್ಚುವುದು ನಮ್ಮ ಕುಲಕಸುಬು ಎನ್ನುವಂತೆ ಗಂಡು ಮಕ್ಕಳು ಹೆಣ್ಣು ಮಕ್ಕಳು ಎಂಬ ಬೇಧವಿಲ್ಲದೇ, ನಮ್ಮಜ್ಜಿ ಎಲ್ಲರನ್ನೂ ಒಟ್ಟಿಗೆ ಕೂರಿಸಿಕೊಂಡು ಎಲೆ ಹಚ್ಚುವುದನ್ನು ಹೇಳಿಕೊಡುತ್ತಿದ್ದದ್ದು ಈಗಲೂ ಕಣ್ಣ ಮುಂದೆ ಬಂದು ಹೋಗುತ್ತದೆ.  ಇನ್ನು ಊರಿಂದ ಬೆಂಗಳೂರಿಗೆ ವಾಪಸ್ ಬರುವಾಗ ಅಜ್ಜಿ ಬಹಳ ಪ್ರೀತಿಯಿಂದ ರಾಗಿ, ಅಕ್ಕಿಯ, ಬೇಳೆ ಕಾಳುಗಳು, ಕುರುಕಲು ತಿಂಡಿಯ ಜೊತೆ ತಾವೇ ಹಚ್ಚಿದ 50 ಮುತ್ತುಗದ ಎಲೆಯ ಒಂದು ಪಿಂಡಿಯನ್ನು ಕೊಟ್ಟು ಕಳುಹಿಸುವುದನ್ನು ಮರೆಯುತ್ತಿರಲಿಲ್ಲ. ಅದೇ ಎಲೆಯನ್ನೇ ಹಬ್ಬ ಹರಿದಿನಗಳಲ್ಲಿ ಬಳಸುತ್ತಿದ್ದದ್ದಲ್ಲದೇ, ಅಕ್ಕ ಪಕ್ಕದ ಮನೆಯವರಿಗೂ ನಮ್ಮಮ್ಮ ಹಂಚಿಬಿಡುತ್ತಿದ್ದರು

rottiಇನ್ನೂ ಚೆನ್ನಾಗಿ ಬಲಿತ ಅಂಗೈ ಅಗಲದ ದೊಡ್ಡ ದೊಡ್ಡದಾದ ಎಲೆಗಳ ಮೇಲೆ ಅಕ್ಕಿ ಇಲ್ಲವೇ ರಾಗಿ ಹಿಟ್ಟಿನ ರೊಟ್ಟಿಯನ್ನು ತಟ್ಟಿ ಎರಡೂ ಬದಿಗಳಿಗೆ ಮುತ್ತುಗದ ಎಲೆಯನ್ನು ಒತ್ತಿ ಅದನ್ನು ಸ್ನಾನದ ಮನೆಯ ಹಂಡೆ ಒಲೆಯೊಳಗೆ ಹಾಕಿ ಮೂರ್ನಾಲು ನಿಮಿಷಗಳ ನಂತರ ಬದಿಯನ್ನು ಬದಲಿಸಿ, 8-10 ನಿಮಿಷಗಳ ಕಾಲ ಚೆನ್ನಾಗಿ ಕೆಂಡದಲ್ಲೇ ಬೆಂದು ಚಟ ಪಟ ಶಬ್ಧ ಬಂದ ನಂತರ ತೆಗೆದು ಸೀದು ಹೋಗಿದ್ದ ಎಲೆಗಳನ್ನು ರೊಟ್ಟಿಯಿಂದ ಬಿಡಿಸಿದ ಕೆಂಡದ ರೊಟ್ಟಿಗೆ ಗಟ್ಟಿಯಾಗಿ ರುಬ್ಬಿದ ತೆಂಗಿನ ಕಾಯಿ ಚೆಟ್ನಿ, ಇಲ್ಲವೇ ಕಾಯಿತುರಿಗೆ ಉಪ್ಪಿನ ಕಾಯಿ ಬೆರೆಸಿದ ಸವಾರಿ ಚಟ್ಟಿ ಅದೂ ಇಲ್ಲದೇ ಹೋದಲ್ಲಿ, ಚಟ್ನಿ ಪುಡಿಗೆ ಹುಚ್ಚೆಳ್ಳು ಎಣ್ಣೆ ಹಾಕಿಕೊಂಡು ಸವಿಯುತ್ತಿದ್ದದ್ದು ಈಗಲೂ ಬಾಯಲ್ಲಿ ನೀರೂರಿಸುತ್ತದೆ. ರೊಟ್ಟಿ ಹಿಟ್ಟಿನ ಜೊತೆ ಮುತ್ತುಗದ ಎಲೆಯೂ ಹದವಾಗಿ ಬೇಯುತ್ತಿದ್ದ ಕಾರಣ ಎಲೆಯ ಪರಿಮಳವೂ ಅದಲ್ಲಿ ಸಮ್ಮಿಳಿತವಾಗಿರುತ್ತಿದ್ದ ಅದರ ರುಚಿಯ ಮುಂದೇ ಈಗ ಬಗೆ ಬಗೆಯ ಸ್ಯಾಂಡ್ವಿಜ್ ಅಥವಾ ಬರ್ಗರ್ಗಳು ನೀವಾಳಿಸಿ ಹಾಕಬೇಕು ಎಂದರೂ ತಪ್ಪಾಗದು.

ele2ಇನ್ನು ನಮ್ಮ ತಾತ ಮತ್ತು ತಂದೆಯವರು ಹೇಳುತ್ತಿದ್ದಂತೆ, ಮುತ್ತುಗದ ಮರದ ಹೂವು ಮತ್ತು ಕಾಯಿಗಳು ಕೃಷಿಕರಿಗೆ ಮುಂದಿನ ವರ್ಷ ಮಳೆ ಬೆಳೆಯ ಹವಾಮಾನ ಮುನ್ಸೂಚನೆ ನೀಡುವುದರಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದವಂತೆ. ಮುಂಗಾರಿಗೆ ಮುನ್ನಾ ಮಾರ್ಚ್-ಏಪ್ರಿಲ್ ತಿಂಗಳಲ್ಲಿ ಬೀಳುವ ಮಳೆಗೆ ಮರದ ತುಂಬಾ ಹೂ ಬಿಟ್ಟು ಗುಂಪು ಗುಂಪಾಗಿ ಸೊಂಪಾಗಿ ಕಾಯಿ ಬಿಟ್ಟಲ್ಲಿ ಆ ವರ್ಷದ ಹಿಂಗಾರು ಮತ್ತು ಮುಂಗಾರು ಎರಡೂ ಸಹ ಸಮೃದ್ಧವಾಗಿರುತ್ತದೆ ಎಂಬುದು ರೈತರ ನಂಬಿಕೆ ಯಾಗಿದ್ದ ಕಾರಣ ಮಳೆಗಾಲಕ್ಕೂ ಮುಂಚೆ ರೈತರುಗಳು ಆಗ್ಗಾಗ್ಗೆ ಮುತ್ತುಗದ ಮರದ ಕಡೆ ಅಡ್ಡಾಡಿ ಬರುತ್ತಿದ್ದಂತೆ.

vatuಇನ್ನು ಭಾರತೀಯರ ಸಂಪ್ರದಾಯದಲ್ಲಿ ಮುತ್ತುಗದ ಮರಕ್ಕೆ ಗುರುವಿನ ಸ್ಥಾನವಿದೆ. ಉಪನಯನದ ಸಂದರ್ಭದಲ್ಲಿ ವಟುವಿಗೆ ಮುತ್ತುಗದ ಕೊಂಬೆಯನ್ನೇ ದಂಡವನ್ನಾಗಿ ಕೊಡುವುದು ರೂಢಿಯಲ್ಲಿದೆ. ಇನ್ನು ನವಗ್ರಹಗಳಲ್ಲಿ ಈ ಮರ ಚಂದ್ರನ ಸ್ಥಾನವನ್ನು ಪ್ರತಿನಿಧಿಸುವುದಲ್ಲದೇ, ಈ ಮರ ಪುಷ್ಯಾ ನಕ್ಷತ್ರದ ಪ್ರತೀಕವಾಗಿದೆ ಎಂದು ಹೇಳಲಾಗುತ್ತದೆ.

ಆರ್ಯುವೇದದಲ್ಲಿ ಒಗರು, ಖಾರ, ಕಹಿ ಮೂರು ರಸಗಳಿಂದ ಕೂಡಿರುವ ಕ್ರಿಮಿನಾಶಕ ಎನಿಸಿಕೊಂಡಿರುವ ಮುತ್ತುಗದ ಬೀಜಕ್ಕೆ ಬಹಳ ಮಹತ್ವವಿದೆ. ಮುರಿದಿರುವ ಮೂಳೆಗಲನ್ನು ಕೂಡಿಸಲು ಸಹಾ ಜೀಜದ ರಸವನ್ನು ಬಳಸುತ್ತಾರಲ್ಲದೇ, ಮುತ್ತುಗದ ಬೇರು ಕಣ್ಣಿನ ರೋಗಗಳಿಗೂ ರಾಮಬಾಣವಾಗಿದೆ. ಮುತ್ತುಗದ ಅಂಟು ಲವಣ ಬಾಯಿಯೊಳಗಿನ ರೋಗ, ಕೆಮ್ಮು, ಬೆವರನ್ನು ದೂರ ಮಾಡುತ್ತದೆ. ಇದರ ಬೀಜವು ಹಾವು ಮತ್ತಿತರ ಪ್ರಾಣಿಗಳ ವಿಷವನ್ನೂ ನಿವಾರಣೆ ಮಾಡುವ ಗುಣವನ್ನು ಹೊಂದಿದೆ.

ಈಗೆಲ್ಲಾ ತಮಿಳುನಾಡಿನಿಂದ ಹೇರಳವಾಗಿ ಬಾಳೇ ಎಲೆ ಸಿಗುತ್ತಿದ್ದರೆ, ಇನ್ನು ಆಲಂಕಾರಿಕವಾಗಿ ಪ್ಲಾಸ್ಟಿಕ್‌, ಸ್ಟೀಲ್‌, ಅಡಕೆ ಹಾಳೆಯ ತಟ್ಟೆ ಬಣ್ನ ಬಣ್ಣದ ಪೇಪರ್‌ ತಟ್ಟೆಗಳು ಬಂದ ನಂತರ ಮತ್ತು ಹಳ್ಳಿಗಳ ಹೆಣ್ಣು ಮಕ್ಕಳೂ ಮೈಬಗ್ಗಿಸಿ ದುಡಿಯುವುದನ್ನು ಕಡಿಮೆ ಮಾಡಿದ ನಂತರ ಮುತ್ತುಗದ ಎಲೆ ಅರ್ಥಾತ್ ಇಸ್ತ್ರೀ ಎಲೆಗೆ ಬೇಡಿಕೆ ಕಡಿಮೆಯಾಗುತ್ತಾ ಈಗ ಬಿಡಿ ಎಲೆಗಳು ಕೇವಲ ದೇವಸ್ಥಾನದಲ್ಲಿ ಪ್ರಸಾದ ವಿತರಣೆಗೆ, ಹೂವಾಡಾಗಿತ್ತಿಯರು ಹೂವು ಕಟ್ಟಲು ಮತ್ತು ಕೆಲವು ವಿಶೇಷ ಪೂಜೆ ಪುನಸ್ಕಾರಗಳಲ್ಲಿ ಮಾತ್ರವೇ ಬಳಕೆ ಆಗುತ್ತಿರುವುದು ವಿಪರ್ಯಸವೇ ಸರಿ.

ಅಂತಹ ಅಪೂರ್ವ ಅನುಭವಗಳ ನೆನಪಿನ ಬುತ್ತಿಯನ್ನು ಹೊತ್ತಿದ್ದ ನಮ್ಮಲ್ಲಿ ಅನಾದಿ ಕಾಲದಿಂದಲೂ ಭಾರತೀಯ ಸಂಸ್ಕೃತಿಯಅವಿಭಾಜ್ಯ ಅಂಗವಾಗಿದ್ದ ಮುತ್ತುಗದ ಎಲೆ ಪರಿಸರ ಸ್ನೇಹಿ (eco friendly edible plates)  ಹೆಸರಿನಲ್ಲಿ ವಿದೇಶಿಗರ ಪಾಲಾಗಿ ಕಡೆಗೊಮ್ಮೆ ವಿದೇಶದಿಂದಲೇ ಅದೇ ಇಸ್ತ್ರಿ ಎಲೆಗಳನ್ನು ಆಮದು ಮಾಡಿಕೊಳ್ಳಬೇಕಾದಂತಹ ದುಸ್ಥಿತಿ ಬಂದರೂ ಬರಬಹುದೇನೋ?

ಏನಂತೀರೀ?
ನಿಮ್ಮವನೇ ಉಮಾಸುತ

2 thoughts on “ಮುತ್ತುಗದ ಎಲೆ (ಇಸ್ತ್ರೀ ಎಲೆ)

  1. ಮುತ್ತುಗದ ಮಹಾತ್ಮೆ ಸ್ವಾರಸ್ಯಕರವಾಗಿ ಮೂಡಿಬಂದಿದೆ. ಬಹಳ ಉಪಯುಕ್ತವಾಗಿದೆ. ಎಲ್ಲೆಡೆ ಮುತ್ತುಗ ಎಂದಿದೆ. ಆದರೆ ಶೀರ್ಷಿಕೆಯಲ್ಲಿ ಮುತ್ತಗ ಎಂದಾಗಿದೆ. ಮುತ್ತುಗ ಎಂಬುದೇ ಸರಿಯೇನೋ ನೋಡಿ!
    ಮುತ್ತುಗದ ಪಾತ್ರ ನನ್ನ ಬದುಕಿನಲ್ಲಿ ಮಹತ್ವದ್ದು ಎಂದು ನನ್ನ ಪತ್ನಿ ಆಗಾಗ ಹೇಳುತ್ತಿದ್ದರು. ಅದು ಹೇಗೆಂದು ತಿಳಿಯಲು ಅವರನ್ನೇ ಕೇಳಬೇಕು.
    ಅಂದಹಾಗೆ ಬರಹದಲ್ಲಿ ಅಲ್ಲಲ್ಲಿ ಒಂದೆರಡು ಅಕ್ಷರದೋಷಗಳು ನುಸುಳಿದೆ, ಗಮನಿಸಿ.

    Liked by 1 person

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s