ಅಡುಗೆ ಮನೆ (Kitchen Room) ಕೇವಲ ಮನೆಯ ಒಂದು ಕೋಣೆಯಲ್ಲ. ಅದು ಇಡೀ ಕುಟುಂಬದ (Family) ಸದಸ್ಯರನ್ನು ಬೆಸೆದಿಟ್ಟುಕೊಳ್ಳುವ ಕೊಂಡಿ, ಮನೆಯ ಆರೋಗ್ಯದ ಕೇಂದ್ರ & ಶಕ್ತಿ ಕೇಂದ್ರವೂ ಹೌದು. ಮನೆಯ ಅಡುಗೆ ಮನೆಯಲ್ಲಿ ನಿತ್ಯವೂ ಮೂರು ಬಾರಿ ಒಲೆ ಉರಿಯುತ್ತಿದೆ ಎಂದರೆ ಆದೊಂದು ಆರೋಗ್ಯಕರ ಕುಟುಂಬ ಎಂದರು ತಪ್ಪಾಗದು. ಇತ್ತೀಚಿನವರೆಗೂ ಅಡುಗೆ ಮನೆಯ ಡಬ್ಬಿಗಳೇ ಭಾರತೀಯ ಗೃಹಿಣಿಯರ ಉಳಿತಾಯದ ಕೇಂದ್ರವೂ ಆಗಿದ್ದು, ಕುಟುಂಬಕ್ಕೆ ಅತ್ಯಾವಶ್ಯಕತೆ ಬಿದ್ದಾಗ ಅಲ್ಲಿನ ಸಾಸಿವೆ ಡಬ್ಬಿ, ಗಸಗಸೆ ಡಬ್ಬಿಯಲ್ಲಿ ಉಳಿಸಿ ಭದ್ರವಾಗಿ ಮುಚ್ಚಿಟ್ಟಿದ್ದ ಹಣ ಹೊರೆಗೆ ಬಂದು ಕುಟುಂಬದ ಮಾನವನ್ನು ಉಳಿಸುತ್ತಿದ್ದವು. ನೋಟ್ ಬ್ಯಾನ್ ಆಗಿ ಬಹುತೇಕ ಡಿಜಿಟಲ್ ಆಗುವವರೆಗೂ ಬಹುತೇಕ ಭಾರತೀಯರ ಮನೆ ಇದಕ್ಕೆ ಹೊರತಾಗಿರಲಿಲ್ಲ.
ಇನ್ನು ಮಾನವ ದೇಹದಲ್ಲಿನ ಟ್ರಿಲಿಯನ್ಗಟ್ಟಲೆ ಜೀವಕೋಶಗಳಿಗೆ ವಿವಿಧ ಆಹಾರಗಳು ಮತ್ತು ಪೋಷಕಾಂಶಗಳು ಬೇಕಾಗುತ್ತವೆ. ಹಾಗಾಗಿ ಅದರ ಅವಶ್ಯಕತೆಯನ್ನು ಪೂರೈಸುವ ಸಲುವಾಗಿಯೇ ಭಾರತೀಯ ಆಡುಗೆಯಲ್ಲಿ ವಿವಿಧ ಮಸಾಲೆಗಳನ್ನು ಒಳಗೊಂಡಿದ್ದು ಅವುಗಳು ಆಹಾರದಲ್ಲಿ ವೈವಿಧ್ಯತೆಯನ್ನು ಒದಗಿಸುವುದಲ್ಲದೇ, ಅದರಲ್ಲಿರುವ ಪ್ರತಿಯೊಂದು ಮಸಾಲೆಯು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದ್ದು ಅವರುಗಳ ಜೊತೆ ವಿವಿಧ ತರಕಾರಿಗಳನ್ನು ಸೇರಿಸುವುದರ ಮೂಲಕ ಆರೋಗ್ಯಕರ ಜೀವನವನ್ನು ಮಾಡಬಹುದಾಗಿದೆ.
ಹಾಗಾಗಿಯೇ ಪ್ರತಿಯೊಬ್ಬ ಯಶಸ್ವಿ ಪುರುಷನ ಹಿಂದೆ ಒಬ್ಬ ಮಹಿಳೆ ಇರುತ್ತಾಳೆ ಎನ್ನುವ ಗಾದೆ ಮಾತು ಬಂದಿದೆ ಎಂದರು ತಪ್ಪಾಗದು. ಆದರೆ ಆದೇ ಗಾದೆ ಮಾತು ಸ್ವಲ್ಪ ಬದಲಾಗಿದ್ದು ಪ್ರತೀ ಪಿಜ್ಜಾ ಬರ್ಗರ್, ಸ್ವಿಗ್ಗಿ ಝಮ್ಯಾಟೋ ಕಂಪನಿಗಳ ಯಶಸ್ಸಿನ ಹಿಂದೆ ಲಕ್ಷಾಂತರ ಅಡುಗೆ ಮಾಡದ ಮಹಿಳೆಯರು ಇದ್ದಾರೆ ಎನ್ನುವಂತಾಗಿರುವುದು ನಿಜಕ್ಕೂ ದುರಾದೃಷ್ಟಕರವೇ ಸರಿ.
ಕೇವಲ 2-3 ದಶಕಗಳ ಹಿಂದೆ ಇಡೀ ಮನೆಯವರೆಲ್ಲರೂ ಒಟ್ಟಿಗೆ ಬೆಳಿಗ್ಗೆ, ಮಧ್ಯಾಹ್ನ, ಮತ್ತು ರಾತ್ರಿ ಒಟ್ಟಿಗೆ ಸೇರುವ ತಾಣವೇ ಅಡುಗೆ ಮನೆಯಾಗಿತ್ತು. ಮನೆಯಾಗಿ ಮನೆಯವರ ಇಷ್ಟಕ್ಕೆ ತಕ್ಕಂತೆ ಪ್ರೀತಿಯಿಂದ ಆಸ್ಥೆವಹಿಸಿ ಶುಚಿ ಮತ್ತು ರುಚಿಯಾಗಿ ಅಡುಗೆಯನ್ನು ಮಾಡಿ ಸಾಲಾಗಿ ಮಂದಲಿಗೆ (ಚಾಪೆ)ಯನ್ನು ಹಾಕಿ ಆದರ ಮುಂದೆ ಎಲೆ ಇಲ್ಲವೇ ತಟ್ಟೆ, ಲೋಟಾಗಳನ್ನು ಹಾಕಿ ಎಲ್ಲರೂ ತಿಂಡಿ/ಊಟಕ್ಕೆ ಬನ್ನಿ ಎಂದು ಕರೆದ ಕೂಡಲೇ ಮನೆಯ ಆಬಾಲವೃಧ್ಧರಾದಿಯಾಗಿ ಎಲ್ಲರೂ ಕೊಂಚವೂ ಮರು ಮಾತನಾಡದೇ, ಕೈ ಕಾಲು ತೊಳೆದುಕೊಂಡು ಅವರವರಿಗೆ ನಿಗಧಿ ಪಡಿಸಿದ್ದ ಜಾಗಗಳಲ್ಲಿ ಕುಳಿತುಕೊಂಡ ನಂತರ ಎಲ್ಲರಿಗೂ ಒಟ್ಟಿಗೆ ಮಾಡಿದ ಅಡುಗೆಯನ್ನು ಬಡಿಸಿ, ಎಲ್ಲರೂ ಒಟ್ಟಿಗೆ ತಾಯಿ ಅನ್ನಪೂರ್ಣೆಗೆ ಭಕ್ತಿ ಪೂರ್ವಕ ವಂದಿಸಿದ ನಂತರ ಮನೆಯ ಹಿರಿಯರು ಊಟ ಆರಂಭಿಸಿದ ನಂತರ ಎಲ್ಲರೂ ಒಟ್ಟಿಗೆ ಊಟ ಮಾಡುತ್ತಿದ್ದರು.
ಹಾಗೆ ಊಟ ಮಾಡುತ್ತಿದ್ದ ಸಮಯದಲ್ಲಿ ಇಡೀ ಕುಟುಂಬವೇ ಅಲ್ಲಿ ಇರುತ್ತಿದ್ದ ಕಾರಣ ಬಹುತೇಕ ಕುಟುಂಬದ ವಿಷಯಗಳು ಒಂದು ರೀತೀ ಲೋಕಸಭೆ ಇಲ್ಲವೇ ವಿಧಾನಸಭೆಯ ರೀತಿಯಲ್ಲಿ ಅಲ್ಲಿ ಚರ್ಚಿತವಾಗಿ ಪ್ರಜಾಪ್ರಭುತ್ವದ ರೀತಿಯಲ್ಲೇ ಬಹುಮತದೊಂದಿಗೆ ಅನುಮೋದನೆಗೊಂಡು ಕಾರ್ಯರೂಪಕ್ಕೆ ಬರುತ್ತಿದ್ದವು. ಮನೆಯವರದ್ದೆಲ್ಲಾ ಊಟವಾದ ನಂತರ ಉಳಿದುಪಳಿದದ್ದನ್ನೇ ತಿಂದರೂ ಮನೆಯೊಡತಿಗೆ ಕೊಂಚವೂ ಬೇಸರವನ್ನಾಗಲೀ, ಕೋಪವನ್ನಾಗಲೀ ಮಾಡಿಕೊಳ್ಳದೇ, ಸದ್ಯ ಮಾಡಿದ್ದೆಲ್ಲವೂ ಖರ್ಚಾಯಿತಲ್ಲಾ ಎಂದು ಸಂತೋಷ ಪಡುತ್ತಿದ್ದರು. ಇನ್ನು ಮನೆಯಲ್ಲಿ ಎಷ್ಟೇ ಜನರಿದ್ದರೂ ಅಥವಾ ಅಚಾನಕ್ಕಾಗಿ ಮನೆಗೆ ಬಂಧು-ಮಿತ್ರರು ಬಂದರೂ, ಎಷ್ಟೇ ಹೊತ್ತಾದರೂ, ಮನೆಯಾಕಿ ಕೊಂಚವು ಬೇಸರಿಸಿಕೊಳ್ಳದೆ ಸಂತೋಷದಿಂದಲೇ ಅಡುಗೆ ಮಾಡುತ್ತಿದ್ದರಿಂದ ಆ ಅಡುಗೆಯ ರುಚಿ ಮತ್ತಷ್ಟೂ ಹೆಚ್ಚುತ್ತಿತ್ತು ಎಂದರು ಅತಿಶಯವಲ್ಲ.
ಅದರೆ 90ರ ದಶಕದಲ್ಲಿ ಏಕಾಏಕಿ ಭಾರತ ಜಾಗತೀಕ ಮಟ್ಟದಲ್ಲಿ ತನ್ನನ್ನು ತಾನು ತೆರೆದುಕೊಂಡ ಪರಿಣಾಮ ಭಾರತದಲ್ಲಿ ಅತ್ಯಂತ ಕಡಿಮೆ ವೆಚ್ಚದಲ್ಲಿ ಅತ್ಯಂತ ಬುದ್ಧಿವಂತ ಮತ್ತು ಶ್ರಮವಂತರು ಸಿಗುತ್ತಾರೆ ಎಂಬ ಕಾರಣದಿಂದಾಗಿ ಅನೇಕ ಬಹುರಾಷ್ಟ್ರೀಯ ಕಂಪನಿಗಳು ಭಾರತಕ್ಕೆ ಲಗ್ಗೆ ಹಾಕಿದಾಗ, ನೋಡ ನೋಡುತ್ತಿದ್ದಂತೆಯೇ ಏಕಾಏಕಿ ಸಾವಿರಾರು ರೂಪಾಯಿ ಸಂಬಳವನ್ನು ಲಕ್ಶಾಂತರ ಗೊಳಿಸಿದ್ದಲ್ಲದೇ, ದೇಶ ಮತ್ತು ವಿದೇಶಗಳಿಗೆ ಅಡುಗೆ ಮನೆ ಮತ್ತು ಚಚ್ಚಲು ಮನೆಯಂತೆ ಹೋಗುವಂತೆ ಸರಳೀಕರಿಸಿದ ನಂತರ ನಮ್ಮ ದೇಶದ ಯುವಜನತೆ ಅದರ ಸಂಪೂರ್ಣ ಲಾಭವನ್ನು ಪಡೆದು ವಿದೇಶಗಳಿಗೆ ಹೋಗಿ ದುಡಿಯತೊಡಗಿದ್ದಲ್ಲದೇ ನಿಧಾನವಾಗಿ ತಮ್ಮನ್ನೇ ತಾವು ಪಾಶ್ಚಾತ್ಯ ಸಂಸ್ಕೃತಿಗೆ
ಒಗ್ಗಿಕೊಳ್ಳ ತೊಡಗಿದರು.
ಇನ್ನು ಅದುವರೆವಿಗೂ ಹೆಚ್ಚಾಗಿ ಅಡುಗೇ ಮನೆಗೇ ಸೀಮಿತವಾಗಿದ್ದ ವಿದ್ಯಾವಂತ ಮಹಿಳೆಯರೂ ಸಹಾ ತಾವು ಪುರುಷರಿಗಿಂತ ಯಾವುದರಲ್ಲೂ ಕಡಿಮೆ ಇಲ್ಲಾ ಎಂದು ಬಹುರಾಷ್ಟ್ರೀಯ ಕಂಪನಿಗಳಲ್ಲಿ ಗಂಡಸರಿಗೆ ಸರಿ ಸಮನಾಗಿ ವಾರದ ಐದು ದಿನಗಳ ಕಾಲ ಮೈಬಗ್ಗಿಸಿ ದುಡಿದು ವಾರಾಂತ್ಯದಲ್ಲಿ ದುಡಿದ ದಣಿವನ್ನಾರಿಸಿಕೊಳ್ಳುವ ಸಲುವಾಗಿ ಮನೆಯಿಂದ ಹೊರೆಗೆ ಹೋಗಿ ಬರಲು ಆರಂಭಿಸಿದರು.
ಆರಂಭದಲ್ಲಿ ವಾರಾಂತ್ಯಕ್ಕೆ ಮಾತ್ರವೇ ಹೊರಗೆ ಊಟ ಮಾಡುತ್ತಿದ್ದವರು ನಿಧಾನವಾಗಿ ಸಂಜೆ ದುಡಿದು ಬಂದು ಅಡಿಗೆ ಮಾಡಲು ಸುಸ್ತಾಗುತ್ತದೆ ಎಂಬ ನೆಪಮಾಡಿಕೊಂಡು ಹೊರಗಿನಿಂದ ಆಹಾರವನ್ನು ತರಿಸಲು ಮುಂದಾಗುವ ಮೂಲಕ ನಿಧಾನವಾಗಿ ಅಡುಗೆ ಮನೆಯ ನಂದಾದೀಪ ಆರತೊಡಗುತ್ತಿದ್ದಂತೆಯೇ ಕುಟುಂಬದ ಆರೋಗ್ಯಪೂರ್ಣ ವಾತಾವರಣ ನಂದಿಸ ತೊಡಗಿ ಮನೆ ಕೇವಲ ಮಲಗುವ ಕೋಣೆಗಳಾಗಿ ಬದಲಾಗಿ, ಮನೆಯೊಂದು ಮೂರು ಬಾಗಿಲು ಎಂಬಂತಾಗಿ ಹೋಗಿರುವುದು ಸುಳ್ಳಲ್ಲ.
ಇತ್ತೀಚೆಗೆ ಸುಪ್ರೀಂ ಕೋರ್ಟಿನ ನ್ಯಾಯಾಧೀಷರು ದೇಶದಲ್ಲಿ ನಡೆಯುತ್ತಿರುವ ಅನಿಷ್ಟಕ್ಕೆಲ್ಲಾ ಶನೀಶ್ವನೇ ಕಾರಣ ಎಂದು ಹೇಳಿದಂತೆ, ಈ ದೇಶದಲ್ಲಿ ನಡೆಯುತ್ತಿರುವ, ವಿವಾಹ ವಿಚ್ಚೇದನ, ಅಕ್ರಮ ಸಂಬಂಧ, ಅದರಲ್ಲೂ ತಮ್ಮ ಮಕ್ಕಳಿಗೆ ಮದುವೆ ವಯಸ್ಸಾಗಿದ್ದರೂ ಮೂರನೇ, ನಾಲ್ಕನೇ, ಐದನೇ ಮದುವೆ ಮಾಡಿಕೊಳ್ಳಲು ಮುಂದಾಗುತ್ತಿರುವ ನಟ ನಟಿಯರ ಸುದ್ದಿಗಳಿಗೂ ನಂದಿದ ಅಡುಗೆ ಮನೆಯೇ ಕಾರಣ ಎಂದರೆ ಅತ್ಯಾಶ್ಚರ್ಯವಾಗಬಹುದು.
ಈ ಕುರಿತಂತೆ 1980ರಲ್ಲೇ ಪ್ರಸಿದ್ಧ ಅಮೇರಿಕನ್ ಸಮಾಜಶಾಸ್ತ್ರಜ್ಞರು, ಅಮೇರಿಕನ್ನರಿಗೆ ಈ ಕುರಿತಾದ ದುಷ್ಪರಿಣಾಮಗಳ ಬಗ್ಗೆ ಎಚ್ಚರಿಕೆ ನೀಡಿದ್ದರು. ಅಲ್ಲಿನ ಅಡುಗೆ ಮನೆಗಳು ಕ್ರಮೇಣ ಕಾರ್ಪೊರೇಟ್‌ಗಳಿಗೆ ಹಸ್ತಾಂತರವಾಗಿ ಹೋಗಿವೆ. ಮೊದಲು ಮನೆಯಲ್ಲಿದ್ದ ಹಿರಿಯರು, ಚಿಕ್ಕ ಮಕ್ಕಳನ್ನು ನೋಡಿಕೊಳ್ಳುತ್ತಿದ್ದರೆ, ಈಗ ಮಕ್ಕಳು ಡೇಕೇರ್ ಸೆಂಟರ್‌ಗಳಲ್ಲಿದ್ದರೆ, ಕುಟಂಬದ ಹಿರಿಯರು ವೃದ್ಧಾಶ್ರಮದಲ್ಲಿ ಇರುವ ಮೂಲಕ ಕುಟುಂಬದ ಜವಾಬ್ದಾರಿಗಳು ಮತ್ತು ಅದರ ಪ್ರಸ್ತುತತೆ ಕ್ರಮೇಣ ನಾಶವಾಗುತ್ತಾ ಹೋಗಿರುವುದು ವಿಷಾಧನೀಯವೇ ಸರಿ.
ಭಾರತೀಯ ಅಡುಗೆ ಮನೆ ಎಂದರೆ ಅದು ಕೇವಲ ಅಡುಗೆ ಮಾಡುವುದಕ್ಕೇ ಮೀಸಲಾಗದೇ, ಅದು ಕುಂಟುಂಬದ ಕೇಂದ್ರ ಬಿಂದುವಾಗಿದ್ದು, ಕುಟುಂಬದ ಬಾಂಧವ್ಯದ ಕೊಂಡಿಯಾಗಿದೆ. ಪ್ರೀತಿಯಿಂದ ಅಡುಗೆ ಮಾಡುವುದು ಎಂದರೆ ಕುಟುಂಬದ ಎಲ್ಲ ಸದಸ್ಯರ ಬಾಂಧವ್ಯ ಮತ್ತು ಪ್ರೀತಿಯನ್ನು ಗಳಿಸುವುದು ಎಂದರ್ಥ. ಆದರೆ ಆಹಾರವನ್ನು ಹೊರಗಿನಿಂದ ಆರ್ಡರ್ ಮಾಡುವುದರಿಂದ ಈ ಸ್ನೇಹ, ಪ್ರೀತಿ, ವಿಶ್ವಾಸವೆಲ್ಲವೂ ಮಾಯವಾಗಿದ್ದೇ ಪ್ರಪಂಚಾದ್ಯಂತ ಬಹುತೇಕ ಕುಟುಂಬಗಳ ಅಳಿವಿಗೆ ಕಾರಣವಾಗಿದೆ. ಈ ಮೊದಲೇ ಹೇಳಿದಂತೆ ಅಡಿಗೆ ಮನೆಯಲ್ಲಿ ಒಲೆ ಉರಿಯದೇ ಹೋದಲ್ಲಿ, ಅದು ಮನೆಯಾಗಿರದೇ, ಅದೊಂದು ಮಲಗುವ ಕೋಣೆಗಳಾಗಿ ಮಾರ್ಪಟ್ಟು ಅಲ್ಲಿರುವವರು ಕುಟುಂಬವಾಗಿರದೇ, ಹಾಸ್ಟೆಲ್ಲಿನಲ್ಲಿಯೋ ಇಲ್ಲವೇ ಹೋಟೆಲ್ಲಿನಲ್ಲಿ ವಾಸಿರುವ ಅಪರಿಚಿತರಂತೆ ಆಗುವುದರಲ್ಲಿ ಸಂದೇಹವೇ ಇಲ್ಲ.
ಒಂದು ಅಂಕಿ ಅಂಶದ ಪ್ರಕಾರ, 1971 ರಲ್ಲಿ ಅಮೇರಿಕಾದ 70% ಕುಟುಂಬಗಳು ಗಂಡ ಮತ್ತು ಹೆಂಡತಿ ಮತ್ತು ಮಕ್ಕಳೊಂದಿಗೆ ಒಟ್ಟಿಗೆ ವಾಸಿಸುತ್ತಿದ್ದರೆ, 2020ರ ವೇಳೆಗೆ ಅದು ಶೇ.24ಕ್ಕೆ ಕುಸಿದಿರುವುದು ನಿಜಕ್ಕೂ ಕಳವಳಕಾರಿಯಾದ ಸಂಗತಿಯಾಗಿದೆ. ಇನ್ನು ಕುಟುಂಬದ ಹಿರಿಯ ಸದಸ್ಯರು ಈಗಗಲೇ ವೃದ್ಧಾಶ್ರಮದಲ್ಲಿ ವಾಸಿಸುತ್ತಿದ್ದಾರೆ.
ಹೀಗೆ ಕುಟುಂಬದ ವ್ಯವಸ್ಥೆಯೇ ಛಿಧ್ರ ಛಿದ್ರವಾಗಿ ಹೋದಾಗ, ಅಮೇಕಾದಲ್ಲಿ ಮಹಿಳಾ ಏಕ-ಪೋಷಕ ಕುಟುಂಬ 18% ರಷ್ಟಿದ್ದರೆ, ಪುರುಷ ಏಕ-ಪೋಷಕ ಕುಟುಂಬ 12% ರಷ್ಟಿದ್ದು ಕೇವಲ 28%ರಷ್ಟು ಕುಟುಂಬಗಲ್ಲಿ ಮಾತ್ರವೇ, ಗಂಡ ಹೆಂಡತಿ ಒಟ್ಟಿಗೆ ಸಂಸಾರ ನಡೆಸುತ್ತಿದ್ದಾರೆ. ಇನ್ನು 16% ಕುಟುಂಬಗಳು ಯಾವುದೇ ರೀತಿಯ ವೈವಾಹಿಕ ಕಟ್ಟು ಪಾಡಿಗೆ ಒಳಗಾಗದೇ, ಕೇವಲ ತಮ್ಮ ತೆವಲುಗಳನ್ನು ತೀರಿಸಿಕೊಳ್ಳುವ ಲಿವ್-ಇನ್ ಸಂಬಂಧಗಳಾಗಿದ್ದು ವಾಂಛೆ ತೀರಿದ ನಂತರ ಬೇರ್ಪಟ್ಟು ಮತ್ತೊಂದು ಜೋಡಿಯನ್ನು ಹುಡಿಕಿಕೊಂಡು ಹೋಗುವಂತಾಗಿರುವುದು ಅಪಾಯಕಾರಿ ವಿಷಯವಾಗಿದೆ.
ಹೀಗಾಗಿಯೇ ಇಂದು ಅಮೆರಿಕದಲ್ಲಿ ಜನಿಸುವ 35% ರಷ್ಟು ಮಕ್ಕಳು ಅವಿವಾಹಿತ ಸಂಬಂಧದಿಂದ ಜನಿಸುವಂತಾಗಿದ್ದು ಅವರಲ್ಲಿ ಅರ್ಧದಷ್ಟು ಮಕ್ಕಳು ಮುಂದೇ ಒಂದೇ ಪೋಷಕರೊಂದಿಗೆ ಜೀವಿಸುವಂತಾಗಿದೆ. ಇನ್ನು ಈ ರೀತಿಯ ಸ್ವೇಚ್ಚಾಚಾರದಿಂದಾಗಿ ವಿವಾಹ ವಿಚ್ಚೇಧನಗಳ ಸಂಖ್ಯೆಯೂ ಹೆಚ್ಚಾಗಿದ್ದು, ಸುಮಾರು 45% ಮೊದಲ ಮದುವೆಗಳು ವಿಚ್ಛೇದನದಲ್ಲಿ ಕೊನೆಗೊಂಡರೆ, ಸುಮಾರು 74% ಎರಡನೇ ವಿವಾಹಗಳು ಸಹ ಹೆಚ್ಚು ಸಮಸ್ಯಾತ್ಮಕವಾಗುತ್ತಿವೆ.
ಮೊನ್ನೇ Swiggy, Zomato, Uber eats ಮುಂತಹ ಆನ್‌ಲೈನ್ ಆಹಾರ ಸರಬರಾಜು ಕಂಪನಿಯವರು ಮುಂದಿನ ಐದು ವರ್ಷಗಳಲ್ಲಿ ಈ ದೇಶದ ಜನ ಏನು ತಿನ್ನಬೇಕು? ಏನು ತಿನ್ನಬಾರದು ಎಂಬ ಸಂಪೂರ್ಣ ಹಿಡಿತ ನಮ್ಮ ಕೈಯಲ್ಲಿ ಇರುತ್ತದೆ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದು ನಿಜಕ್ಕೂ ಆತಂಕಕಾರಿ ಬೆಳವಣಿಗೆಯಾಗಿದೆ. ಊಟ ತನ್ನಿಷ್ಟ. ನೋಟ ಪರರ ಇಷ್ಟ. ಎನ್ನುವ ಗಾದೇ ಮಾತನ್ನೇ ಈ ಧಿಕ್ಕರಿಸಿ, ನಮಗೆ ಏನು ತಿನ್ನಿಸ ಬೇಕೆಂದು ಈ ಆನ್‌ಲೈನ್ ಕಾರ್ಪೊರೇಟ್ ಕಂಪನಿಗಳು ನಿರ್ಧರಿಸುತ್ತವೆ ಎಂದರೆ ಇದ್ದಕ್ಕಿಂತಲೂ ದೊಡ್ಡದಾದ ದಿವಾಳಿತನ ಮತ್ತೊಂದಿಲ್ಲ ಎಂದರೂ ತಪ್ಪಾಗದು.
ಇನ್ನು ಹೊರಗಿನ ಸೋಡ ಹಾಕಿದ ಅನ್ನ, ಟೇಸ್ಟ್ ಮೇಕರ್ ಅಜಿನೋಮೋಟೋ ಮತ್ತು ಕೃತಕ ಬಣ್ಣ ಹಾಕಿದ ಚೈನೀಸ್ ಫಾಸ್ಟ್ ಫುಡ್, ಜಂಕ್ ಫುಡ್ ತಿನ್ನುವುದರಿಂದ, ದೇಹದ ಕೊಬ್ಬು ಮತ್ತು ಮಧುಮೇಹ ಮತ್ತು ಅಧಿಕ ರಕ್ತದೊತ್ತಡದಂತಹ ಇತರ ಜೀವನಶೈಲಿ ಕಾಯಿಲೆಗಳಿಗೆ ಕಾರಣವಾಗುತ್ತಿರುವುದಲ್ಲದೇ, ಅನಗತ್ಯ ಖರ್ಚು ಸಹಾ ಹೆಚ್ಚುತ್ತಿದೆ. ನಾಲ್ಕೈದು ಜನರು ಇರುವ ಕುಟುಂಬ ಒಮ್ಮೆ ಸಾಧಾರಣ ಹೋಟೆಲ್ಲಿಗೆ ಹೋಗಿ ಕನಿಷ್ಟವಾಗಿ ತಿಂದರೂ 2-3 ಸಾವಿರದಷ್ಟು ಬಿಲ್ ಆಗುತ್ತದೆ. ಅದೇ 2-3 ಸಾವಿರದಲ್ಲಿ ಇಡೀ ತಿಂಗಳಿಗೆ ಆಗುವಷ್ಟು ಸಾಮಾನುಗಳನ್ನು ಕೊಂಡು ತಂದು ಮನಸ್ಸಿಗೆ ಇಷ್ಟ ಬಂದ ಅಡುಗೆಯನ್ನು ಇಷ್ಟ ಬಂದಷ್ಟು ಮಾಡಿಕೊಂಡು ಸವಿಯಬಹುದಾಗಿದೆ. ಹಾಗಾಗಿ ದಯವಿಟ್ಟು ನಮ್ಮ ಶ್ರದ್ದೇಯ ತಾಯಂದಿರು ಆದಷ್ಟೂ ಹೊರಗಿನ ಆಹಾರವನ್ನು ಕಡಿಮೆ ಮಾಡಿ ತಮ್ಮ ತಮ್ಮ ಅಡುಗೆಮನೆಯಲ್ಲಿಯೇ ನಮಗೆ ಇಷ್ಟ ಬಂದ ಆಹಾರವನ್ನು ಶುಚಿ ರುಚಿಯಾದ ಪ್ರೀತಿ ವಿಶ್ವಾಸದಿಂದ ಅಡುಗೆ ಮಾಡುವ ಮೂಲಕ ಕುಟುಂಬದ ಐಕ್ಯತೆ, ಯೋಗಕ್ಷೇಮಕ್ಕೆ ಮತ್ತು ಕುಟುಂಬದ ಆರ್ಥಿಕತೆಯನ್ನು ಸರಿ ದಿಕ್ಕಿಗೆ ತರವುದಲ್ಲದೇ, ಸಹನೌ ಭುನಕ್ತು ಎಂದು ಮನೆಯವರೆಲ್ಲರೂ ಒಟ್ಟಿಗೆ ಕುಳಿತುಕೊಂಡು ಭೋಜನವನ್ನು ಸವಿಯುತ್ತಾ ಅಡುಗೆ ಮನೆಯನ್ನು ಮತ್ತೊಮ್ಮೆ ಕುಟುಂಬದ ಶಕ್ತಿ ಕೇಂದ್ರವನ್ನಾಗಿ ಬಹುದಾಗಿದೆ ಅಲ್ವೇ?
ಏನಂತೀರೀ?
ನಿಮ್ಮವನೇ ಉಮಾಸುತ