ಕೆಲ ದಿನಗಳ ಹಿಂದೆ ಪ್ರವಾಸಕ್ಕೆ ಹೋಗಿದ್ದಾಗ ಮನೆಗೆ ಹಿಂದಿರುಗುವ ಮಾರ್ಗದ ಮಧ್ಯದಲ್ಲೇ ಸಂಬಂಧೀಕರ ಊರು ಇದ್ದುದ್ದರಿಂದ ಅವರ ಮನೆಗೆ ಹೋದೆವು. ನಾವು ಹೋದಾಗಲೇ ಸೂರ್ಯ ಬಾನಂಗಳದಿಂದ ಮರೆಯಾಗಿ ಚಂದಿರನು ಮೂಡುವ ಸಮಯ. ಬಹಳ ಸಮಯದ ನಂತರ ಅವರ ಮನೆಗೆ ನಾವು ಕುಟುಂಬದ ಸಮೇತ ಹೋಗಿದ್ದರಿಂದ ಅವರಿಗೆ ಸಂತೋಷವಾಗಿತ್ತಲ್ಲದೇ ಅಂದು ಅವರ ಪುಟ್ಟ ಮೊಮ್ಮಗನ ಹುಟ್ಟಿದ ಹಬ್ಬ ಇದ್ದ ಕಾರಣ ಮನೆಯಲ್ಲಿ ಸಂಭ್ರಮದ ವಾತಾವರಣ ಇತ್ತು.
ಮೊಮ್ಮಗನ ಹುಟ್ಟುಹಬ್ಬದ ಜೊತೆಗೆ ನಾವೂ ಹೋಗಿದ್ದ ಕಾರಣ, ಮನೆಯ ಹೆಂಗಸರು ವಿಶೇಷವಾದ ಅಡುಗೆಯನ್ನು ಮಾಡ ತೊಡಗಿದರೆ, ನಮ್ಮ ಮಕ್ಕಳು ಅವರ ಮಕ್ಕಳೊಂದಿಗೆ ಆಟವಾಡುತ್ತಾ, ನಾವು ಲೋಕಾಭಿರಾಮವಾಗಿ ಮಳೆ, ಬೆಳೆ, ಹಳ್ಳಿ ರಾಜಕೀಯಗಳ ಬಗ್ಗೆ ಹರಟೆ ಹೊಡೆಯುವಷ್ಟರಲ್ಲಿ ಗಂಟೆ 8 ಆಗಿದ್ದೇ ಗೊತ್ತಾಗಲಿಲ್ಲ. ಮನೆಯಾಕಿ ಹಜಾರದಲ್ಲಿ ಎಲೆಯನ್ನು ಬಡಿಸಿ ಎಲ್ಲರೂ ಕೈಕಾಲು ತೊಳೆದುಕೊಂಡು ಊಟಕ್ಕೆ ಏಳಿ ಎಂದು ಕರೆದಾಗ ಎಲ್ಲರೂ ವಾಸ್ತವಕ್ಕೆ ಮರಳಿ ಸದ್ದಿಲ್ಲದೇ ಬಚ್ಚಲು ಮನೆಯತ್ತ ಸಾಗತೊಡಗಿದರೆ, ಇದ್ದಕ್ಕಿದ್ದಂತೆಯೇ ಹುಟ್ಟು ಹಬ್ಬದ ಮಗು ಜೋರಾಗಿ ಅಳಲು ಆರಂಭಿಸಿತ್ತು.
ಇಷ್ಟು ಹೊತ್ತು ಚೆನ್ನಾಗಿಯೇ ಆಟ ವಾಡಿಕೊಂಡಿದ್ದವನಿಗೆ ಏನಾಯ್ತಪ್ಪಾ? ಎಂದು ಎಲ್ಲರೂ ಗಾಭರಿಯಿಂದ ಅವನ ಬಳಿ ಹೋದಾಗ ತಿಳಿದು ಬಂದ ವಿಷಯವೇನೆಂದರೆ, ಅವನ ಹುಟ್ಟು ಹಬ್ಬಕ್ಕೆ ಕೇಕ್ ಕತ್ತರಿಸಿದೇ ಹೋದದ್ದಕ್ಕೆ ರಂಪ ತೆಗೆದಿದ್ದ. ಇತ್ತೀಚೆಗಷ್ಟೇ ಅವನ ಅವನ ಮಾವನ ಮಗನ ಹುಟ್ಟು ಹಬ್ಬಕ್ಕೆ ಹೋಗಿದ್ದಾಗ ಅಲ್ಲಿ ಚಂದನೆಯ ಕೇಕ್ ಕತ್ತರಿಸಿದ್ದನ್ನು ನೋಡಿ ನನ್ನ ಹುಟ್ಟು ಹಬ್ಬಕ್ಕೂ ಹಾಗೇ ಮಾಡಬೇಕು ಎಂದು ಕೇಳಿದ್ದಕ್ಕೆ ಆಗ ಸರಿ ಎಂದು ಅವರಮ್ಮ ಹೇಳಿದ್ದರಂತೆ. ಈಗ ಅದನ್ನೇ ನೆಪ ಮಾಡಿಕೊಂಡು ರಚ್ಚೆ ಹಿಡಿದಿದ್ದವನನ್ನು ಸಮಾಧಾನ ಮಾಡಲಾಗದೇ ಹೋದಾಗ, ನಮ್ಮಾಕಿ ಬಂದು ರೀ, ಹೇಗೂ ನಾವೂ ಏನು ತಂದಿಲ್ಲ. ಹೋಗಿ ಒಂದು ಕೇಕ್ ತರಬಾರ್ದೇ ಎಂದಳು.
ಅಷ್ಟು ಹೊತ್ತಿನಲ್ಲಿ ಮಳೇ ಬೇರೇ ಬರುತ್ತಿರುವ ಸಮಯದಲ್ಲಿ ಆ ಊರಿನಲ್ಲಿ ಕೇಕ್ ಎಲ್ಲಿ ಸಿಗುತ್ತದೆ ಎಂದು ಅವರ ಮನೆಯವನ್ನು ಕೇಳಿದಾಗ ಅವರೂ ಸಹಾ ಸಂಕೋಚದಿಂದ, ಹೇ.. ಹೇ.. ಏನೂ ಬೇಡಾ ಸ್ವಲ್ಪ ಹೊತ್ತಿನಲ್ಲಿ ಸರಿ ಹೋಗ್ತಾನೆ ಎಂದರೂ, ಚಿಕ್ಕ ಮಕ್ಕಳ ಮನಸ್ಸನ್ನು ನೋಯಿಸಬಾರದೆಂದು ಅವರ ಮಗನನ್ನೇ ಲಗುಬಗನೇ ಕರೆದುಕೊಂಡು ಹೋಗಿ ಅವರ ಊರಿನಿಂದ 5-6 ಕಿಮೀ ದೂರದಲ್ಲಿದ್ದ ಪಟ್ಟಣಕ್ಕೆ ಹೋಗಿ ಅಲ್ಲಿ ಲಭ್ಯವಿದ್ದ ಕೇಕ್ ಜೊತೆಗೆ 5 ವರ್ಷದ ಕ್ಯಾಂಡಲ್ ತೆಗೆದುಕೊಂಡು ಬಂದು ಆ ಮಗುವಿನ ಆಸೆಯಂತೆ ಕ್ಯಾಂಡಲ್ ಹತ್ತಿಸಿ (ಆರಿಸಲಿಲ್ಲ) ಕೇಕ್ ಕತ್ತರಿಸಿ ಸಂಭ್ರಮ ಪಟ್ಟು ಮಗುವಿಗೆ ಹುಟ್ಟಿದ ಹಬ್ಬದ ಕಾಣಿಕೆಯನ್ನು ಕೊಟ್ಟು ಹುಟ್ಟಿದ ಹಬ್ಬ ಆಚರಿಸಲಾಯಿತು. ನಂತರ ಎಲ್ಲರೂ ಊಟ ಮಾಡಿ ನಿದ್ದೆ ಮಾಡುತ್ತಿರುವಾಗ ಅರೇ, ಈ ಕೇಕ್ ಕತ್ತರಿಸುವುದು ನಮ್ಮ ಸಂಪ್ರದಾಯವಲ್ಲಾ ಆದರೂ ಅದು ಹೇಗೆ ದಿಲ್ಲಿಯಿಂದ ಹಳ್ಳಿಯವರೆಗೂ ಹಬ್ಬಿದೆ? ಎಂದು ಯೋಚಿಸಿ ಸಾಮಾಜಿಕ ಜಾಲತಾಣಗಳಲ್ಲಿ ಅರಸಿದಾಗ ಕಂಡು ಬಂದ ವಿಷಯ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.
ಕೇಕ್ ಕತ್ತರಿಸುವ ಆಚರಣೆಯು ಪೇಗನ್ ಆಚರಣೆಯಾಗಿದ್ದು, ಗ್ರೀಕೋ ಮತ್ತು ರೋಮನ್ ಕಾಲದಲ್ಲಿ ಹುಟ್ಟಿಕೊಂಡಿತು. ನಂತರದ ದಿನಗಳಲ್ಲಿ ಕ್ರಿಶ್ಚಿಯನ್ನರು ಪೇಗನಿಸಂ ಮತ್ತು ಜುದಾಯಿಸಂನಿಂದ ಅಳವಡಿಸಿಕೊಂಡ ಹಲವಾರು ಆಚರಣೆಗಳಲ್ಲಿ ಇದೂ ಇದೂ ಸಹಾ ಒಂದಾಗಿದೆ. ಗ್ರೀಕರು ಮತ್ತು ರೋಮನ್ನರು ತಮ್ಮ ಜನ್ಮದಿನವನ್ನು ಕೇಕ್ ಮತ್ತು ಮೇಣದಬತ್ತಿಗಳನ್ನು ಬಳಸಿ ಆಚರಿಸುತ್ತಿದ್ದರು. ಕೇಕ್ ಸಾಮಾಜಿಕ ಕೊಡುಗೆಯ ಸಂಕೇತವಾಗಿದ್ದರೆ, ಮೇಣದಬತ್ತಿಗಳು (ದೀಪಗಳು) ಜೀವನವನ್ನು ಸಂಕೇತಿಸುತ್ತವೆ. ಜನರು ತಮ್ಮ ಜೀವನದ ಆಯಸ್ಸು 1 ವರ್ಷ ಕಡಿಮೆಯಾಗಿದೆ ಎಂದರ ಸಂಕೇತವಾಗಿ ಹತ್ತಿಸಿದ ಕ್ಯಾಂಡಲ್ಲನ್ನು ನಂದಿಸುತ್ತಿದ್ದರು. ಇದು ಕತ್ತಲೆಯನ್ನು ತುಂಬುತ್ತದೆ ಮತ್ತು ಉಳಿದವುಗಳನ್ನು ಉದ್ದೇಶ ಮತ್ತು ಅರ್ಥದೊಂದಿಗೆ ಬಳಸಲು ಅವರಿಗೆ ಸಲಹೆ ನೀಡುತ್ತದೆ.
ಇದಾದ ನಂತರ 15 ನೇ ಶತಮಾನದಲ್ಲಿ, ಜರ್ಮನಿಯ ಬೇಕರಿಗಳು ತಮ್ಮ ಗ್ರಾಹಕರನ್ನು ಆಕರ್ಷಿಸುವ ಸಲುವಾಗಿ ವ್ಯಾಪಾರದ ತಂತ್ರವಾಗಿ ಆರಂಭದಲ್ಲಿ ಮದುವೆಯ ಸಂದರ್ಭದಲ್ಲಿ ಮಾತ್ರ ಕೇಕ್ ಕತ್ತರಿಸುವ ಸಂಪ್ರದಾಯವನ್ನು ಆರಂಭಿಸಿದರು. ಆಗ ಮದುವೆಯ ಕೇಕ್ ಗಳು ಸಾಮಾನ್ಯವಾಗಿ ಬಹು ಪದರದ ಕೇಕ್ ಆಗಿದ್ದವು. ನಂತರದ ದಿನಗಳಲ್ಲಿ ಜರ್ಮನಿಯ ಬೇಕರಿಯವರು ಒಂದೇ ಪದರದ ಕೇಕ್ ತಯಾರಿಸಲು ಪ್ರಾರಂಭಿಸಿದ ನಂತರ ಅವುಗಳ ಮೇಲೆ ಚಿತ್ತಾರವನ್ನು ಮಾಡಿ ಹುಟ್ಟುಹಬ್ಬದ ಆಚರಣೆಯ ಭಾಗವಾಗಿ ಅಂತಹ ಕೇಕ್ ಕತ್ತರಿಸುವ ಸಂಪ್ರದಾಯವನ್ನು ಪ್ರಾರಂಭಿಸಿದರು ಎಂದು ನಂಬಲಾಗಿದೆ. 17ನೆಯ ಶತಮಾನದಲ್ಲಿ, ಹುಟ್ಟುಹಬ್ಬದಲ್ಲಿ ಕೇಕ್ ಕತ್ತರಿಸುವ ಪದ್ದತಿ ಹೆಚ್ಚು ಕಡಿಮೆ ಅತ್ಯಂತ ಶ್ರೀಮಂತ ವರ್ಗಕ್ಕೆ ಮಾತ್ರ ಸೀಮತವಾಗಿದ್ದು, ಬಗೆ ಬಗೆಯ ವರ್ಣಮಯ ಹುಟ್ಟುಹಬ್ಬದ ಕೇಕ್‌ಗಳು ಆಚರಣೆ ಮತ್ತು ಶ್ರೀಮಂತಿಕೆಯೊಂದಿಗೆ ಹೆಚ್ಚು ಹೆಚ್ಚು ಸಂಬಂಧಿಸಿವೆ. ಕೈಗಾರಿಕಾ ಕ್ರಾಂತಿಯ ಪರಿಣಾಮವಾಗಿ, ವಸ್ತುಗಳು ಮತ್ತು ಉಪಕರಣಗಳು ಹೆಚ್ಚು ಸುಧಾರಿತವಾಗಿ ದೇಶ ವಿದೇಶಗಳಲ್ಲ ಕೇಕ್ ಗಳ ಬಳಕೆ ವ್ಯಾಪಕವಾಗಿ ಹರಡಿಕೊಂಡು ವಸಹತುಶಾಹಿಯ ಭಾಗವಾಗಿ ಭಾರತಕ್ಕೂ ಬಂದು ತಲುಪಿದ್ದು ದುರಂತವೇ ಸರಿ.
ಇನ್ನು ಕೇಕ್‌ಗಳಲ್ಲಿ ಮೇಣದಬತ್ತಿಗಳನ್ನು ಬಳಸುವುದರ ಕುರಿತು ಅನೇಕ ಸಿದ್ಧಾಂತಗಳಿವೆ.
ಗ್ರೀಕ್: ಪ್ರತಿ ಚಂದ್ರನ ತಿಂಗಳ ಆರನೇ ದಿನದಂದು ದೇವತೆಯ ಜನ್ಮವನ್ನು ಗೌರವಿಸಲು, ಆರ್ಟೆಮಿಸ್ ದೇವಾಲಯಕ್ಕೆ ಕೇಕ್ಗಳನ್ನು ತರಲಾಯಿತು ಮತ್ತು ಅವುಗಳನ್ನು ಚಂದ್ರನಂತೆ ಹೊಳೆಯುವಂತೆ ಮೇಣದಬತ್ತಿಗಳಿಂದ ಅಲಂಕರಿಸಲಾಯಿತು.
ಜರ್ಮನ್: 18 ನೇ ಶತಮಾನದಲ್ಲಿ, ಹುಟ್ಟುಹಬ್ಬದ ಆಚರಣೆಗಳಲ್ಲಿ ಕೇಕ್ ಮೇಲೆ ಮೇಣದಬತ್ತಿಗಳನ್ನು ಬಳಸಿದ ಪುರಾವೆಯಾಗಿ, 1746 ರಲ್ಲಿ ಮೇರಿನ್ಬಾರ್ನ್ ಜರ್ಮನಿಯ ಕೌಂಟ್ ಲುಡ್ವಿಗ್ ವಾನ್ ಜಿನ್ಜೆಂಡಾರ್ಫ್ ಅವರ ಹುಟ್ಟುಹಬ್ಬದ ವೈಭವವನ್ನು ಆಂಡ್ರ್ಯೂ ಫ್ರೇ ಹೀಗೆ ವಿವರಿಸಿದ್ದಾರೆ
ಒಂದು ಒಲೆಯಲ್ಲಿ ಬೇಯಿಸಲು ಸಾಧ್ಯವಾದಷ್ಟು ದೊಡ್ಡದಾದ ಕೇಕ್ ತಯಾರಿಸಿ, ಅದರ ಮೇಲೆ ಆ ವ್ಯಕ್ತಿಯ ವಯಸ್ಸಿನ ವರ್ಷಗಳ ಪ್ರಕಾರ ಕೇಕ್ನಲ್ಲಿ ರಂಧ್ರಗಳನ್ನು ಮಾಡಿ ಅವುಗಳಲ್ಲಿ ಮೇಣದಬತ್ತಿಯನ್ನು ಇಟ್ಟು ಅವುಗಳನ್ನು ಹತ್ತಿಸಿ ಒಂದೊಂದಾಗಿಯೇ ಆರಿಸಲಾಯಿತು.
ಸ್ವಿಸ್: ಫೋಕ್-ಲೋರ್ ಎಂಬ ಪತ್ರಿಕೆಯಲ್ಲಿ ಉಲ್ಲೇಖಿಸಿರುವಂತೆ, ಸ್ವಿಸ್ ಜನರು ತಮ್ಮ ಹುಟ್ಟು ಹಬ್ಬದ ಕೇಕ್ ಸುತ್ತಲೂ ಅವರ ಜೀವನದ ಪ್ರತಿ ವರ್ಷಕ್ಕೆ ಒಂದು ಮೇಣದಬತ್ತಿಯಂತೆ ಹತ್ತಿಸಬೇಕು. ಕೇಕ್ ಕತ್ತರಿಸಿ ತಿನ್ನುವ ಮೊದಲು, ಹುಟ್ಟುಹಬ್ಬದ ವ್ಯಕ್ತಿಯು ಮೇಣದಬತ್ತಿಗಳನ್ನು ಒಂದರ ನಂತರ ಒಂದರಂತೆ ಆರಿಸುತ್ತಾ ಅವರು ಅಷ್ಟು ವರ್ಷಗಳನ್ನು ಕಳೆದಿದ್ದಾರೆ ಎಂಬುದರ ದ್ಯೋತಕವಾಗಿದೆ.
ಈಗಂತೂ ಭಾರತದಲ್ಲಿ ಕೇಕ್ ಕತ್ತರಿಸುವುದು ಕೇವಲ ಹುಟ್ಟು ಹಬ್ಬಕಷ್ಟೇ ಸೀಮಿತವಾಗಿರದೇ, ನಾಮಕರಣ, ನಿಶ್ಚಿತಾರ್ಥ, ಮದುವೆ, ಮುಂಜಿ, ಹೊಸಾವರ್ಷದ ಆಚರಣೆ, ಹೀಗೆ ಎಲ್ಲದ್ದಕ್ಕೂ ಕೇಕ್ ಕತ್ತರಿಸುವ ಸಂಪ್ರದಾಯ ಆರಂಭವಾಗಿ ದೀವವನ್ನು ಆರಿಸುವ ಪದ್ದತಿಯನ್ನು ಅನುಸರಿಸುವುದಲ್ಲದೇ, ಕತ್ತರಿಸಿದ ಕೇಕನ್ನು ಮುಖಕ್ಕೆ ಬಳಿದು ಹಾಳು ಮಾಡುವುದು ನಿಜಕ್ಕೂ ಬೇಸರ ತರಿಸುತ್ತದೆ.
ನಮ್ಮ ಸನಾತನ ಧರ್ಮದ ಪ್ರಕಾರ ಹುಟ್ಟು ಹಬ್ಬವನ್ನು ಗ್ರೇಗೋರಿಯನ್ ಆಂಗ್ಲ ಕ್ಯಾಲೆಂಡರ್ ಪ್ರಕಾರ ಆಚರಿಸಿದೇ, ನಮ್ಮ ಪಂಚಾಂಗರೀತ್ಯಾ ಹುಟ್ಟಿದ ತಿಂಗಳು ಮತ್ತು ತಿಥಿ ಇಲ್ಲವೇ ನಕ್ಷತ್ರದ ಪ್ರಕಾರ ಆಚರಿಸುವ ಸಂಪ್ರದಾಯವಿದೆ. ಮಕ್ಕಳ ಆಯಸ್ಸು ವೃದ್ಧಿಯಾಗಲೀ ಎಂದು ಹುಟ್ಟಿದ ದಿನದ ಬದಲು ಒಂದೆರದು ದಿನ ಹೆಚ್ಚಿಸಿ ಮಾಡುವ ಸಂಪ್ರದಾಯವನ್ನು ಕಾಣಬಹುದು.
ಹುಟ್ಟು ಹಬ್ಬದ ದಿನ ಬೆಳಿಗ್ಗೆ ಎದ್ದು ಎಣ್ಣೆಯ ಅಭ್ಯಂಜನ ಮಾಡಿ ಹಣೆಗೆ ತಿಲವನ್ನಿಟ್ಟು ಹೊಸಾ ಬಟ್ಟೆಯನ್ನು ಧರಿಸಿ, ಮನೆಯ ಮುಂದೆ ದೇವರ ನೀಲಾಂಜವನ್ನು ಬೆಳಗಿ, ಮನೆಯ ದೇವರಿಗೆ ಶ್ರದ್ಧಾ ಭಕ್ತಿಯಿಂದ ಪೂಜೆಯನ್ನು ಮಾಡಿ ತಂದೆ, ತಾಯಿ ಮತ್ತು ಕುಟುಂಬದ ಹಿರಿಯರಿಗೆ ನಮಸ್ಕಾರ ಮಾಡಿ ಅವರಿಂದ ದೀರ್ಘಾಯುಷ್ಮಾನ್ ಭವ ಎಂದು ಆಶೀರ್ವಾದ ಪಡೆಯುವುದು ಸತ್ ಸಂಪ್ರದಾಯವಾಗಿದೆ. ನಂತರ ಮನೆಯ ಹಿರಿಯವರು ಹುಟ್ಟು ಹಬ್ಬದವರನ್ನು ದೇವರ ಮುಂದೆ ಕೂರಿಸಿ ಅವರ ಹಣೆಗೆ ತಿಲವನ್ನಿಟ್ಟು ದೇವರ ಮುಂದೆ ಆಯಸ್ಸು ವೃದ್ಧಿಯಾಗಲಿ ಎಂದು ತುಪ್ಪದ ದೀಪ ಬೆಳಗಿಸುತ್ತಾರೆಯೇ ಹೊರತು ದೀಪವನ್ನು ಆರಿಸುವುದಿಲ್ಲ. ನಂತರ ಮುಂಬರುವ ವರ್ಷದಲ್ಲಿ ನೀವು ವಿಜಯಶಾಲಿಯಾಗಲಿ ಮತ್ತು ಹೆಚ್ಚು ಹೆಚ್ಚು ಸಮೃದ್ಧಿಯಾಗಲಿ ಎಂದು ಮಂತ್ರಾಕ್ಷತೆಯನ್ನು ಹಾಕಿ ಆಶೀರ್ವದಿಸುತ್ತಾರೆ. ನಂತರ ಮನೆಯಲ್ಲೇ ಮಾಡಿದ ಸಿಹಿತಿಂಡಿಯನ್ನು ತಿನ್ನಿಸಿ. ಅವರವರ ಶಕ್ತ್ಯಾನುಸಾರ ಕೊಡುಗೆಯನ್ನು ಕೊಟ್ಟು ನಂತರ ಮನೆಯಲ್ಲಿಯೇ ಹಬ್ಬದ ಅಡುಗೆಯನ್ನು ಮಾಡಿ ಎಲ್ಲರೂ ಒಟ್ಟಾಗಿ ಕುಳಿತು ಕೊಂಡು ಸಂಭ್ರಮಿಸುತ್ತಾರೆ.
ಈಗೆಲ್ಲಾ ಕಂಪನಿಗಳು ತಮ್ಮ ವ್ಯಾಪಾರಕ್ಕಾಗಿ ಪ್ರತಿಯೊಂದು ಶುಭ ಸಮಾರಂಭಗಳಲ್ಲಿ ಗ್ರೀಟಿಂಗ್ಸ್ ಕೊಡುವುದು, ಬಣ್ಣ ಬಣ್ಣದ ಕೇಕ್ ಮೇಲೆ ಮೇಣದ ಬತ್ತಿಯನ್ನು ಹತ್ತಿಸಿ, ಅದನ್ನು ಆರಿಸಿ ಕತ್ತರಿಸುವುದು ಪ್ರತಿಷ್ಟೆಯ ಸಂಕೇತ ಎಂದು ಗಿಮಿಕ್ ಮಾಡಿದ್ದನ್ನೇ ಅಂಧಾನುಕರಣದಿಂದ ಎಲ್ಲಾ ಸಮಾರಂಭಗಳಲ್ಲಿಯೂ ಅನುಸರಿಸುತ್ತಿರುವುದು ನಿಜಕ್ಕೂ ಬೌದ್ಧಿಕ ದೀವಾಳಿತನವೇ ಸರಿ. ಈಗಂತೂ ಹುಟ್ಟು ಹಬ್ಬದವರ ಚಿತ್ರವನ್ನೇ ಕೇಕ್ ಮೇಲೆ ಮುದ್ರಿಸಿ ಅದನ್ನೇ ಕತ್ತರಿಸಿ ತಿನ್ನುವುದು ನಿಜಕ್ಕೂ ಮುಗುಜರನ್ನುಂಟು ಮಾಡುತ್ತದೆ. When you are in Rom, be like a Roman ಎನ್ನುವಂತೆ ಯಾರನ್ನೋ ಉದ್ದಾರ ಮಾಡಲು ಅವರ ಆಚರಣೆಗಳನ್ನೇ ಆಚರಿಸುವುದು ಪ್ರತಿಷ್ಠೆ ಎನ್ನುವ ಬದಲು ಭಾರತದಲ್ಲಿರುವಾಗ ಭಾರತೀಯ ಸಂಸ್ಕೃತಿಯನ್ನು ಅನುಸರಿಸುವುದು ಉತ್ತಮ ಅಲ್ವೇ? ನಮ್ಮ ಸಂಸ್ಕೃತಿ ನಮಗೆ ಹೆಮ್ಮೆ. ಅದನ್ನು ನಾವು ನಮ್ಮ ಮಕ್ಕಳಿಗೆ ಕಲಿಸಿ ಕೊಡದೇ ಹೋದಲ್ಲಿ ಮತ್ತಾರು ಕಲಿಸುತ್ತಾರೆ?
ಏನಂತೀರೀ?
ನಿಮ್ಮವನೇ ಉಮಾಸುತ
Bro …its very true ..wht u hv been described regarding the cake and the celebration ….but unfortunately..people hv been used to this trend ……they should make a change …related to our culture….
But anu way …the reason and how cake celebrations got startd…this was interesting….simply super bro ❤🙏
LikeLiked by 1 person