ಶ್ರೀ ಮುಮ್ಮಡಿ ಕೃಷ್ಣರಾಜ ಒಡೆಯರ್

ಮೈಸೂರು ಒಡೆಯರ್ ವಂಶದಲ್ಲೇ ಅತ್ಯಂತ ಸುದೀರ್ಘವಾಗಿ 30 ಜೂನ್ 1799 ರಿಂದ 27 ಮಾರ್ಚ್ 1868 ಸುಮಾರು 70 ವರ್ಷಗಳ ಕಾಲ ಮೈಸೂರು ಸಂಸ್ಥಾನವನ್ನು ರಾಜ್ಯಭಾರ ಮಾಡಿದ ಕೀರ್ತಿ ಹೊಂದಿದ್ದ ಮೈಸೂರು ಸಂಸ್ಥಾನದ 22ನೆಯ ಮಹಾರಾಜರಾಗಿದ್ದ, ಸ್ವತಃ ಕಲೆಗಾರಾಗಿದ್ದು, ಮೈಸೂರು ಸಂಸ್ಥಾನದಲ್ಲಿ ಸಂಗೀತ, ಸಾಹಿತ್ಯ ಮತ್ತು ಲಲಿತ ಕಲೆಗಳಿಗೆ ಪ್ರೋತ್ಸಾಹ ನೀಡಿ ಮೈಸೂರಿನ ಹೆಸರನ್ನು ವಿಶ್ವವಿಖ್ಯಾತಿ ಮಾಡಿದ್ದ ಶ್ರೀ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರ ಜನ್ಮದಿನಂದು ಅವರ ವ್ಯಕ್ತಿ, ವ್ಯಕ್ತಿತ್ವದ ಜೊತೆಗೆ ಅವರ ಸಾಧನೆಗಳ ಪರಿಚಯ ಮಾಡಿಸುವ ಸಣ್ಣ ಪ್ರಯತ್ನ.

14 ಜುಲೈ 1794 ರಂದು ಶ್ರೀರಂಗಪಟ್ಟಣದಲ್ಲಿ ಖಾಸಾ ಚಾಮರಾಜ ಒಡೆಯರ್ IX ಮತ್ತು ಅವರ ಮಹಾರಾಣಿ ಕೆಂಪನಂಜಮ್ಮಣ್ಣಿ ಅವರಿಗೆ ಜನಿಸುತ್ತಾರೆ. ಬಾಲಕನಿರುವಾಗಲೇ, ಮಹಾರಾಣಿ ಲಕ್ಷ್ಮಿ ಅಮ್ಮಣಿ ದೇವಿ ಅವರನ್ನು ದತ್ತು ತೆಗೆದುಕೊಂಡು ಅವರಿಗೆ ಶಿಕ್ಷಣ ಮತ್ತು ಪಾಲನೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದಲ್ಲದೇ, ಅವರನ್ನು ಮೈಸೂರು ಸಿಂಹಾಸನಾಧಿಪತಿಯನ್ನಾಗಿ ಮಾಡಲು ಬಹಳ ಪ್ರಮುಖ ಪಾತ್ರವನ್ನು ವಹಿಸುತ್ತಾರೆ.

poorniahಮಹಾರಾಣಿ ಲಕ್ಷ್ಮೀದೇವಿಯವರಿಗೆ ಸಂತಾನವಿಲ್ಲದಿದ್ದಾಗ, ಬಹಳ ಕುಯುಕ್ತಿಯ ಒಪ್ಪಂದ ಪ್ರಕಾರ, ಮೈಸೂರಿನ ಸೇನೆಯಲ್ಲಿ ಯಕ್ಕಶ್ಚಿತ್ ಕುದುರೇ ಲಾಳವನ್ನು ನೋಡಿಕೊಳ್ಳುವ ಕೆಲಸಕ್ಕೆ ಸೇರಿ ನಂತರ ತನ್ನ ಗೆರಿಲ್ಲಾ ಮಾದರಿಯ ಯುದ್ಧ ಕೌಶಲ್ಯದಿಂದಾಗಿ ಸೇನಾಧಿಪತಿಯಾಗಿದ್ದ ಹೈದರ್ ಅಲಿ ಮೈಸೂರು ಸಂಸ್ಥಾನವನ್ನು ತನ್ನ ವಶಕ್ಕೆ ತೆಗೆದುಕೊಂಡು ರಾಜ್ಯಭಾರ ಮಾಡಿದ್ದಲ್ಲದೇ, ಅವನ ಮರಣ ನಂತರ ಅವನ ಮಗ ಟಿಪ್ಪು ಸಹಾ ಮೈಸೂರು ಸಂಸ್ಥಾನವನ್ನು ಆಳುತಿರುತ್ತಾನೆ. ಆಗ ಮಹಾರಾಣಿ ಲಕ್ಷ್ಮೀದೇವಿಯವರು, ಟಿಪ್ಪುವಿನಿಂದ ತಮ್ಮ ರಾಜ್ಯವನ್ನು ತಮ್ಮ ಸುಪರ್ಧಿಗೆ ಒಪ್ಪಿಸಿಕೊಡಬೇಕೆಂದು ಬ್ರಿಟಿಷರಿಗೆ ಹಲವಾರು ಬಾರಿ ಪತ್ರವ್ಯವಹಾರಗಳನ್ನು ಮಾಡಿರುತ್ತಾರೆ. 1799ರ ಬ್ರಿಟೀಷರೊಂದಿಗಿನ ಯುದ್ಧದಲ್ಲಿ ಟಿಪ್ಪು ಮರಣಹೊಂದಿದಾಗ, ಮತ್ತೆ ಬ್ರಿಟೀಷರೊಂದಿಗೆ ಪತ್ರವ್ಯವಹಾರ ನಡೆಸಿದ ನಂತರ, ಅಂತಿಮವಾಗಿ ಕೇವಲ ಐದು ವರ್ಷದ ಮಗುವಾಗಿದ್ದ ಮುಮ್ಮುಡಿ ಕೃಷ್ಣರಾಜ ಒಡೆಯರ್ ಅವರನ್ನು 30 ಜೂನ್ 1799 ರಂದು ಮೈಸೂರಿನ ಲಕ್ಷ್ಮೀರಮಣ ಸ್ವಾಮಿ ದೇವಸ್ಥಾನದ ಬಳಿ ತೆಂಗಿನ ಸೋಗೆಯಿಂದ ನಿರ್ಮಿಸಲಾದ ವಿಶೇಷ ಮಂಟಪದಲ್ಲಿ ಮೈಸೂರಿನ ಮಹಾರಾಜರನ್ನಾಗಿ ಪಟ್ಠಾಭಿಷೇಕ ಮಾಡಲಾಗುತ್ತದೆ. ಈ ಸಮಾರಂಭಕ್ಕೆ ಡ್ಯೂಕ್ ಆಫ್ ವೆಲ್ಲಿಂಗ್ಟನ್ ಸಾರರ್ಥ್ಯ ವರಿಸಿದರೆ, ಟಿಪ್ಪು ಸುಲ್ತಾನನಿಗೆ ದಿವಾನರಾಗಿದ್ದ ಶ್ರೀ ಪೂರ್ಣಯ್ಯ ಅವರಿಗೆ ಮಹಾರಾಜರಿಗೆ ವಿವೇಚನೆಯ ವಯಸ್ಸನ್ನು ತಲುಪುವವರೆಗೆ ರಾಜ್ಯವನ್ನು ಮಹಾರಾಣಿಯವರ ಜೊತೆಯೊಂದಿಗೆ ನಿಭಾಯಿಸಬೇಕೆಂದು ಸೂಚಿಸುವುದರೊಂದಿಗೆ ಮುಮ್ಮುಡಿ ಕೃಷ್ಣರಾಜರ ಅಧಿಕೃತ ಆಳ್ವಿಕೆ ಆರಂಭವಾಗುತ್ತದೆ.

mum2ಹೀಗೆ ಮೈಸೂರು ರಾಜ್ಯದ ಇತಿಹಾಸದಲ್ಲಿ ಅತ್ಯಂತ ಕಷ್ಟಕರ ಸಂದರ್ಭದಲ್ಲಿ ಮುಮ್ಮಡಿ ಕೃಷ್ಣರಾಜ ಒಡೆಯರಿಗೆ ಅಂದಿನ ಬ್ರಿಟಿಫ್ ಸರ್ಕಾರ ಕೆಲವು ಷರತ್ತು ಬದ್ಧ ಒಪ್ಪಂದದ ಮೂಲಕ ಅಧಿಕಾರವನ್ನು ಹಸ್ತಾಂತರ ಮಾಡಿರುತ್ತದೆ. ಅದರ ಪ್ರಕಾರ, ಮಹಾರಾಜರು, ಆಂತರಿಕ ಆಡಳಿತವನ್ನು ಮಾತ್ರ ನಿರ್ವಹಿಸತಕ್ಕದ್ದೆಂದೂ; ಉಳಿದ ಎಲ್ಲಾ ಹೊರ ವ್ಯವಹಾರಗಳೂ ಈಸ್ಟ್ ಇಂಡಿಯ ಕಂಪನಿಯೇ ನಿಭಾಯಿಸುತ್ತದೆ ಎಂದು ಸ್ಪಷ್ಟವಾಗಿ ತಿಳಿಸಿದ್ದಲ್ಲದೇ, ಮೈಸೂರು ಸರ್ಕಾರ ವಾರ್ಷಿಕವಾಗಿ ಕಂಪನಿ ಸರ್ಕಾರಕ್ಕೆ ಏಳುಲಕ್ಷ ಪಗೋಡಾಗಳನ್ನು ಕಪ್ಪವಾಗಿ ಕೊಡಬೇಕೆಂದು ತೀರ್ಮಾನಿಸಲಾಗಿರುತ್ತದೆ. ಈ ರೀತಿಯ ಒಪ್ಪಂದದ ಪ್ರಕಾರವಾಗಿಯೇ ಅರಮನೆಯ ಅಪಾರವಾದ ಐಶ್ವರ್ಯವನ್ನು ಬ್ರಿಟಿಷರು ದೋಚಿಕೊಂದು ಹೋದದ್ದು ನಮ್ಮ ದೌರ್ಭಾಗ್ಯವೇ ಸರಿ.

bridgeಬಾಲಕ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರ ವಿದ್ಯಾಭ್ಯಾಸ ಮತ್ತು ತರಬೇತಿಯ ಹೊಣೆಯನ್ನು ಸಮರ್ಪಕವಾಗಿ ನಿರ್ವಹಿಸಿದ ಮಹಾರಾಣಿಯವರು 1810ರಲ್ಲಿ ನಿಧನರಾದಾಗ. ರಾಜ್ಯದ ಸಂಪೂರ್ಣ ಅಧಿಕಾರ ವಹಿಸಿಕೊಂಡ ಮುಮ್ಮಡಿ ಕೃಷ್ಣರಾಜ ಒಡೆಯರು ಬಹಳ ದಕ್ಷತೆಯಿಂದ ಜನಪರವಾದ ಆಡಳಿತ ನೀಡಿದ ಹೆಗ್ಗಳಿಕೆ ಪಾತ್ರರಾಗುತ್ತಾರೆ. ಸದ್ಯದ ದೆಹಲಿಯ ಮುಖ್ಯಮಂತ್ರಿ ಸರ್ಕಾರದ ಕಡೆಯಿಮ್ದ ಪ್ರತಿಯೊಂದು ಮೊಹಲ್ಲಾ (ಬಡಾವಣೆ)ಗಳಲ್ಲಿ ಮೊಹಲ್ಲಾ ಕ್ಲಿನಿಕ್ಗಳು (ಪ್ರಾಥಮಿಕ ಆರೋಗ್ಯ ಕೇಂದ್ರ) ಸ್ಥಾಪಿಸಿ ಅಲ್ಲಿ ಸೂಕ್ತ ವೈದ್ಯರು ಮತ್ತು ಸೂಲಗಿತ್ತಿ (ನರ್ಸ್) ಗಳ ಮೂಲಕ ಜನರಿಗೆ ಅಗತ್ಯ ಔಷಧಿಗಳನ್ನು ಉಚಿತವಾಗಿ ಒದಗಿಸುವ ವ್ಯವಸ್ಥೆಯ ಹರಿಕಾರ ಎಂದು ಕೊಚ್ಚಿಕೊಳ್ಳುತ್ತಿದ್ದರೆ, ಈ ಕೆಲಸವನ್ನು ಅಂದಿನ ಕಾಲದಲ್ಲೇ, ಮೈಸೂರು ನಗರದಲ್ಲಿ ಪ್ರಥಮವಾಗಿ ಸಾರ್ವಜನಿಕ ಉಚಿತ ವೈದ್ಯಶಾಲೆಗಳನ್ನು ಮುಮ್ಮಡಿ ಕೃಷ್ಣರಾಜರು ಆರಂಭಿಸಿದ್ದರು. ಅದೇ ರೀತಿ ಬ್ರಿಟೀಷರೊಡನೆ ವ್ಯವಹರಿಸಲು ಅವರದ್ದೇ ಆದ ರೀತಿಯ ಶಿಕ್ಷಣದ ಅವಶ್ಯಕತೆಯನ್ನು ಮನಗಂಡು ಮೈಸೂರಿನ ಜನರಿಗೆ ಆಂಗ್ಲ ವಿದ್ಯಾಭ್ಯಾಸಕ್ಕಾಗಿ ಶಾಲೆಗಳನ್ನು ಆರಂಭಿಸಿದ್ದರು. ಶಿವನಸಮುದ್ರದ ಬಳಿ ಕಾವೇರಿ ನದಿಗೆ ಸೇತುವೆ ನಿರ್ಮಾಣ ಮಾಡುವ ಮೂಲಕ ಸಂಚಾರವನ್ನು ಸುಗಮ ಗೊಳಿಸಿದ್ದಲ್ಲದೇ, ಅವರ ಕಾಲದಲ್ಲಿಯೇ ಮೈಸೂರು ನಗರದಲ್ಲಿ ವಿಶಾಲವಾದ ಅನೇಕ ಹೊಸ ಬಡಾವಣೆಗಳು ತಲೆ ಎತ್ತಿದವು.

darbarಸತತ ಯುದ್ದದಿಂದ ಜರ್ಜರಿತವಾಗಿ ಭೂಮಿ ಫಲವತ್ತಾಗಿದ್ದರೂ ಯಾವುದೇ ಬೆಳೆಗಳನ್ನೂ ಬೆಳೆಯದೇ ಬೆಂಗಾಡಾಗಿದ್ದ ಶ್ರೀರಂಗಪಟ್ಟಣ, ಮಂಡ್ಯ ಮತ್ತು ಮದ್ದೂರು ಪ್ರದೇಶದಲ್ಲಿ ಬೆಳೆಗಳನ್ನು ಬೆಳೆಯಲು ಅಕ್ಕ ಪಕ್ಕದ ರಾಜ್ಯಗಳಿಂದ ಅತ್ಯುತ್ತಮ ಕೃಷಿಕರನ್ನು ಕರೆತಂದು ಅವರಿಗೆ ಉಚಿತವಾಗಿ ನೂರಾರು ಎಕರೆ ಜಮೀನುಗಳನ್ನು ಕೊಟ್ಟು ಅವರಿಗೆ ಬೆಳೆಯನ್ನು ಬೆಳೆಯಲು ಸಹಾಯ ಮಾಡುವ ಮೂಲಕ ಕೆಲವೇ ಕಲವು ವರ್ಷಗಲಲ್ಲಿ ಮೈಸೂರು ಸಂಸ್ಥಾನದಲ್ಲಿ ಅಹಾರ ಕ್ರಾಂತಿಗೆ ಕಾರಣೀಭೂತರಾದವರೇ ಮುಮ್ಮಡಿ ಕೃಷ್ಣರಾಜ ಒಡೆಯರ್. ಸ್ವತಃ ವೇದಪಾರಂಗತರೂ ಸಂಗೀತಗಾರರೂ ಆಗಿದ್ದ ಮಹಾರಾಜರೂ ದೇಶ ವಿದೇಶ ಪ್ರವಾಸ ಮಾಡಿ ಅಲ್ಲಿದ್ದ ಅತ್ಯುತ್ತಮ ಕಲಾವಿದರುಗಳನ್ನು ಮೈಸೂರಿಗೆ ಕರೆತಂದು ಅವರಿಗೆ ಸೂಕ್ತವಾದ ಸೌಲಭ್ಯಗಳನ್ನು ಕೊಟ್ಟು ಸತ್ಕರಿಸಿ ಮೈಸೂರನ್ನು ಸಾಂಸ್ಕೃತಿಕ ಕಲಾನಗರಿಯನ್ನಾಗಿ ಮಾಡುತ್ತಾರೆ. ಅಂದಿನ ಪ್ರೋತ್ಸಾಹದ ಪರಿಣಾಮವಾಗಿಯೇ ಇಂದಿಗೂ ಕೂಡಾ ಮೈಸೂರು ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಎಂದೇ ಹೆಸರು ಪಡೆದಿದೆ. ಅನೇಕ ಸಂಗೀತಗಾರರು, ಲೇಖಕರು ಮತ್ತು ಕಲಾಕಾರರು (ಉದಾ: ರಾಜಾ ರವಿ ವರ್ಮ) ಮೈಸೂರು ಸಂಸ್ಥಾನದಿಂದ ಪ್ರೋತ್ಸಾಹ ಪಡೆದು ಬೆಳಕಿಗೆ ಬಂದರು. ವೀಣೆ ವೆಂಕಟಸುಬ್ಬಯ್ಯ, ಕುಣಿಗಲ್ ರಾಮಶಾಸ್ತ್ರಿ, ಸೋಸಲೆ ಗರಳಪುರಿಶಾಸ್ತ್ರಿ, ಅಳಿಯ ಲಿಂಗರಾಜ,  ದೇವಲಾಪುರದ ನಂಜುಂಡ, ಬಸವಪ್ಪಶಾಸ್ತ್ರಿ ಮೊದಲಾದ ಕವಿ, ಕಲಾವಿದರಲ್ಲದೆ,  ಹೊಸಗನ್ನಡದ ಮೊದಲ ಗದ್ಯ ಗ್ರಂಥವೆಂದು ಮನ್ನಣೆಗೆ ಪಾತ್ರವಾಗಿರುವ ಮುದ್ರಾ ಮಂಜೂಷ ಕೃತಿಯ ಕರ್ತೃ ಕೆಂಪುನಾರಾಯಣನು ಮುಮ್ಮಡಿ ಕೃಷ್ಣರಾಜರ ಆಶ್ರಿತನಾಗಿದ್ದನು. ಅದೇ ರೀತಿ ಅವರ ದರ್ಬಾರ್ ಹಾಲಿನಲ್ಲಿ ಸಂಗೀತ ಕಛೇರಿ ಇದೆ ಎಂದರೇ ಅದು ಸಭಾ ಕಛೇರಿ ಎಂದೇ ಖ್ಯಾತಿ ಪಡೆದಿರುತ್ತದೆ. ದೇಶದ ಎಲ್ಲಾ ಕಲಾವಿದರಿಗೂ ಮೈಸೂರು ಅರಮನೆಯಲ್ಲಿ ಕಾರ್ಯಕ್ರಮ ಕೊಡುವುದೇ ಒಂದು ಹೆಮ್ಮೆಯ ಮತ್ತು ಗೌರವಯುತ ಸಂಗತಿಯಾಗಿರುತ್ತದೆ.

ಈಗಾಗಲೇ ತಿಳಿಸಿದಂತೆ ಸ್ವತ: ಕವಿಗಳಾಗಿದ್ದ ಮಹಾರಾಜರು ಕನ್ನಡ ಮತ್ತು ಸಂಸೃತದಲ್ಲಿ ಅನೇಕ ಕೃತಿಗಳನ್ನು ರಚಿಸಿದ್ದಲ್ಲದೇ, ಸಂಸ್ಕೃತದಲ್ಲಿ ಕೃಷ್ಣಕಥಾ ಪುಷ್ಪಮಂಜರಿ, ರಾಮಾಯಣ ಕಥಾ ಪುಷ್ಪಮಂಜರಿ, ಚಾಮುಂಡಿ ಮಂಗಳ ಮಾಲಿಕಾ ಎಂಬ ಕೃತಿಗಳನ್ನು ರಚಿಸಿದ್ದಾರೆ.  ತತ್ವನಿಧಿ , ಗಣಿತ ಸಂಗ್ರಹ, ಸೌಗಂಧಿಕಾ ಪರಿಣಯ, ಸೂರ್ಯ ಚಂದ್ರವಂಶಾವಳಿ, ಶ್ರೀ ಚಾಮುಂಡಿಕಾ ಲಘು ನಿಘಂಟು, ಕೃಷ್ಣ ಕಥಾ ಸಾರ ಸಂಗ್ರಹ, ಚತುರಂಗ ಸಾರ ಸರ್ವಸ್ವ, ದೇವತಾನಾಮ ಕುಸುಮ ಮಂಜರಿ, ದಶವಿಭಾಗ ಪದಕ, ಮಹಾ ಕೋಶ ಸುಧಾಕರ, ಸಂಖ್ಯರತ್ನ ಕೋಶ, ಸ್ವರ ಚೂಡಾಮಣಿ ಹೀಗೆ ಸುಮಾರು 59 ಗ್ರಂಥಗಳ ರಚನೆ ಅವರ ವಿದ್ವತ್ತು, ಪ್ರತಿಭೆಗಳಿಗೆ ಸಾಕ್ಷಿಯಾಗಿದೆ.

mum1ಮಹಾರಾಜರ ಸಂಗೀತ ನೈಪುಣ್ಯತೆಗೆ ಸಾಕ್ಷಿಯಾಗಿ ಒಂದು ಪ್ರಸಂಗವನ್ನು ನೆನಪಿಸಿಕೊಳ್ಳಲೇ ಬೇಕು. ಅದೊಂದು ಬಾರಿ ತಮಿಳುನಾಡಿನ ಖ್ಯಾತ ಸಂಗೀತ ತಂಡವೊಂದು ಮೈಸೂರಿನ ಅರಮನೆಯಲ್ಲಿ ರಾಜರ ಸಮ್ಮುಖದಲ್ಲಿ ಸುಮಾರು ಮೂರು ಗಂಟೆಗೂ ಅಧಿಕ ಹೊತ್ತು ಸಂಗೀತ ಕಾರ್ಯಕ್ರಮ ಕೊಟ್ಟು ಎಲ್ಲರ ಮೆಚ್ಚಿಗೆ ಗಳಿಸುತ್ತಾರೆ. ಸಾಥಾರಣವಾಗಿ ಕಾರ್ಯಕ್ರಮ ಮುಗಿದ ನಂತರ ಮಹಾರಾಜರು ಮೆಚ್ಚಿಗೆ ಸೂಚಿಸಿ ಯಾವುದಾದರೂ ಬಹುಮಾನ ಕೊಡುವ ಸಂಪ್ರದಾಯ ಇರುತ್ತದೆ. ಆದರೆ ಅಂದೇಕೂ ಮಹಾರಾಜರೂ ಏನೂ ಹೇಳದೇ ಸುಮ್ಮನೆ ಒಳಗೆ ಹೊರಟುಹೋದಾಗ ಸಂಗೀತಗಾರರಲ್ಲಿ ಅಸಮಧಾನವಾಗುತ್ತದೆ. ಅದಾದ ಸ್ವಲ್ಪ ಸಮಯದ ನಂತರ ರಾಜರ ಆಡಳಿತಗಾರರು ಬಂದು ನಾಳೆ ಬೆಳಿಗ್ಗೆ ಹತ್ತು ಘಂಟೆಗೆ ಇದೇ ಸಭಾಂಗಣದಲ್ಲಿ ಮಹಾರಾಜರು ನಿಮ್ಮನ್ನು ಭೇಟಿಯಾಗುವವರೆಗೂ ನೀವು ವಿಶ್ರಾಂತಿ ಪಡೆದುಕೊಳ್ಳಿ ಎಂದು ಸೂಚಿಸಿದರು. ಮಾರನೆಯ ದಿನ ಹತ್ತು ಗಂಟೆಗೆ ಸರಿಯಾಗಿ ಸಂಗೀತಗಾರರು ಮತ್ತವರ ತಂಡ ದರ್ಬಾರ್ ಹಾಲಿಗೆ ಹೋಗವಷ್ಟರಲ್ಲೇ ಸ್ವತಃ ಮಹಾರಾಜರೇ ಸಂಗೀತಗಾರ ಮಧ್ಯದಲ್ಲಿ ಕುಳಿತಿರುವುದನ್ನು ನೋಡಿ ಸಂಗೀತಗಾರಗಿಗೆ ಆಶ್ವರ್ಯವಾಗುತ್ತದೆ. ಅದನ್ನು ಸಾವರಿಸಿಕೊಂಡು ಅವರೆಲ್ಲರೂ ಅಲ್ಲೇ ಕುಳಿತಾಗ ಮಹಾರಾಜರು ತನ್ಮಯರಾಗಿ ಸುಮಾರು ಮೂರು ಘಂಟೆಗಳಿಗೂ ಅಧಿಕ ಸಮಯ ಸುಶ್ರಾವ್ಯವಾಗಿ ಸಭಿಕರೆಲ್ಲರೂ ತಲೆ ತೂಗುವಂತೆ ಕಛೇರಿ ನಡೆಸಿಕೊಟ್ಟು ಹಿಂದಿನ ದಿನ ಆ ಸಂಗೀತಗಾರರು ಹಾಡಿದ್ದ ಪ್ರತಿಯೊಂದು ತಪ್ಪನ್ನೂ ಸರಿಯಾಗಿ ಹೇಗೆ ಹಾಡಬೇಕೆಂದು ತೊಡೆ ತಟ್ಟಿ ತಟ್ಟೀ ತೋರಿಸಿಕೊಟ್ಟು, ಇನ್ನು ಮುಂದೆ ಯಾವುದೇ ಕಛೇರಿಗೆ ಹೋಗುವ ಮೊದಲು ಸರಿಯದ ತಾಲೀಮು ಮಾಡಿಕೊಳ್ಳದೇ ಹೋಗದಿರೆಂದು ಸಲಹೆ ಕೊಟ್ಟು ಅವರಿಗೆ ಕೈ ತುಂಬಾ ಸಂಭಾವನೆ ಕೊಟ್ಟು ಕಳುಹಿಸಿದ ಮಹಾನುಭಾವರಾಗಿದ್ದರು ನಮ್ಮ ನಾಲ್ವಡೀ ಕೃಷ್ಣರಾಜ ಒಡೆಯರ್ .

dasaraಆಷ್ಟು ಒಳ್ಳೆಯ ಆಡಳಿತ ನಡೆಸುವ ಮೂಲಕ ಆರ್ಥಿಕವಾಗಿ ಮೈಸೂರನ್ನು ಎತ್ತಿಹಿಡಿದ್ದದ್ದನ್ನು ಗಮನಿಸಿದ ಬ್ರೀಟೀಷರು, ಈ ಚಿನ್ನದ ಮೊಟ್ಟೆ ಇಡುವ ಕೊಳಿಯಂತಿರುವ ಮೈಸೂರನ್ನು ಹೇಗಾದರೂ ಮಾಡಿ ತಮ್ಮ ಆಡಳಿತಕ್ಕೆ ಒಳಪಡಿಸಲೇಬೇಕು ಎಂದು ಹವಣಿಸಿ, 1824ರಲ್ಲಿ ಅದ್ದೂರಿಯಿಂದ ದಸರಾ ನಡೆಯುತ್ತಿದ್ದ ಸಂದರ್ಭದಲ್ಲಿಯೇ ರಾಜ್ಯದ ಹಣಕಾಸು ಪರಿಸ್ಥಿತಿ ಸರಿಯಾಗಿಲ್ಲದಿರುವಾಗ, ಈ ರೀತಿಯಾಗಿ ಅನಾವಶ್ಯಕ ಖರ್ಚುಗಳನ್ನು ಮಾಡುವ ರಾಜ್ಯಾಡಳಿತ ಅರಾಜಕತೆಯಿಂದ ಕೂಡಿದೆ ಎಂಬ ಕುಂಟು ನೆಪವೊಡ್ಡಿ ಮೈಸೂರು ಸಂಸ್ಥಾನವನ್ನು ತಮ್ಮ ಸುಪರ್ಧಿಗೆ ವಶಪಡಿಸಿಕೊಳ್ಳುತ್ತಾರೆ. ತಾಳ್ಮೆಪ ಪ್ರತಿರೂಪವಾಗಿದ್ದ ನಮ್ಮ ರಾಜರು ಅದಕ್ಕೆ ಸ್ವಲ್ಪವೂ ಪ್ರತಿರೋಧ ತೋರದೇ, ಶಾಂತಿಯಂದ ಬಗೆಹರಿಸಿಕೊಳ್ಳುವ ಸಲುವಾಗಿ ಬ್ರಿಟಿಷರಿಗೆ ಪತ್ರದ ಮೇಲೆ ಪತ್ರ ಬರೆಯುತ್ತಾರೆ. ಇಂತಹ ಪತ್ರ ವ್ಯವಹಾರ ಸುಮಾರು 50 ವರ್ಷಗಳ ಕಾಲ ಮುಂದುವರಿಯುತ್ತದೆಯೇ ಹೊರತು ರಾಜ್ಯದ ಆಡಳಿತ ಒಡೆಯರ್ ಅವರ ಸುಪರ್ದಿಗೆ ಒಪ್ಪಿಸಲು ಬ್ರಿಟಿಷರು ಒಪ್ಪಲೇ ಇಲ್ಲ.

ootyಇದೇ ಸಮಯದಲ್ಲಿಯೇ ಬ್ರಿಟೀಷರು ಶ್ರೀರಂಗ ಪಟ್ಟಣದಲ್ಲಿದ್ದ ಹಲವಾರು ಅರಮನೆಗಳನ್ನು ನಾಶಗೊಳಿಸಿ ಅಲ್ಲಿಯ ಮರ ಮುಟ್ಟುಗಳನ್ನು ಊಟಿಗೆ ಸಾಗಿಸಿ ಅಲ್ಲಿ ಸೆಂಟ್ ಸ್ಟೀಫನ್ ಚರ್ಚ್ ಕಟ್ಟುವುದಕ್ಕೆ ಬಳೆಸಿಕೊಳ್ಳುತ್ತಾರೆ ಈ 50 ವರ್ಷಗಳಲ್ಲಿ ಅಲ್ಲಿಗೆ ಆಡಳಿತಕ್ಕೆ ಬಂದ ಎಲ್ಲಾ ಬ್ರಿಟೀಷ್ ಅಧಿಕಾರಿಗಳು ಅವರವರ ಸಾಮರ್ಥ್ಯಕ್ಕೆ ತಕ್ಕಂತೆ ಇಲ್ಲಿಯ ಸಂಪತ್ತನ್ನು ಲೂಟಿ ಮಾಡಿಕೊಂಡು ಹೋಗಿರುವುದು ನಿಜಕ್ಕೂ ಮೈಸೂರಿನ ಪಾಲಿಗೆ ದೌರ್ಭಾಗ್ಯಕರ ದಿನಗಳಾಗಿರುತ್ತವೆ.

rajbhavanರಾಜ್ಯದಲ್ಲಿ ಇಷ್ಟೆಲ್ಲಾ ಅಪಸವ್ಯಗಳ ನಡುವೆಯೂ ಮಹಾರಾಜರು ಅನೇಕ ಉತ್ತಮವಾದ ಗೆಳೆಯರನ್ನು ಸಂಪಾದಿಸಿರುತ್ತಾರೆ. ಅಂತಹವರಲ್ಲಿ ಪರ್ಷಿಯಾದಿಂದ ಕುದುರೇ ವ್ಯಾಪಾರಕ್ಕೆಂದು ಭಾರತಕ್ಕೆ ಬಂದು ಬೆಂಗಳೂರಿನಲ್ಲಿಯೇ ನೆಲೆಸಿದ್ದ ಅಲಿ ಅಸ್ಗರ್ ಸಹಾ ನಮ್ಮ ರಾಜರಿಗೆ ಪರಮಾಪ್ತರಾಗಿರುತ್ತಾರೆ. ಅಸ್ಗರ್ ಅವರಿಗೆ ನಮ್ಮ ಮಹಾರಾಜರಲ್ಲದೇ ದೇಶದ ಉಳಿದ ಸಂಸ್ಥಾನದ ಮಹಾರಾಜರು ಮತ್ತು ಬ್ರಿಟಿಷರ ನಡುವೆಯೂ ಉತ್ತಮ ಬಾಂಧವ್ಯವಿದ್ದು ಅವರೊಂದಿಗೂ ಕುದುರೆಯ ವ್ಯಾಪಾರವನ್ನು ಮಾಡಿ ಗೆಳೆತನ ಸಂಪಾದಿಸಿರುತ್ತಾರೆ. ಅಂದು ಮಹಾರಾಜರು ಕೊಟ್ಟ ಭೂಮಿಯಲ್ಲಿ ಅಲೀ ಅಸ್ಗರ್ ಅವರೇ ಕಟ್ಟಿಸಿದ ಭವನವನ್ನು ಮೆಚ್ಚಿದ ರಾಜರು ಅಂದಿನ ಕಾಲದಲ್ಲೇ 10000ರೂಗಳಿಗೆ ಖರೀದಿಸಿರುತ್ತಾರೆ. ಸ್ವಾತಂತ್ರ್ಯಾನಂತರ ಅದೇ ಬಂಗಲೆಯೇ ಈಗ ಕರ್ನಾಟಕದ ರಾಜಭವನವಾಗಿ ಮಾರ್ಪಾಟಾಗಿದೆ.

ಅದೇ ರೀತಿ ದಖನ್ನಿನ ಕೇಂದ್ರ ಕಚೇರಿಯಾಗಿದ್ದ ಮದರಾಸು ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಗೆ ದಿನಸಿಗಳನ್ನು ಸರಬರಾಜು ಮಾಡುತ್ತಿದ್ದ ಮತ್ತು ಅಗ್ಗಾಗ್ಗೆ ಸಾಲ ಕೊಡುತ್ತಿದ್ದ ಮತ್ತೊಬ್ಬ ಮಹಾನುಭಾವನೇ ಶ್ರೀ ಲಕ್ಷ್ಮೀನರಸೂ ಚೆಟ್ಟಿ. ಕೊಯಮತ್ತೂರಿನಲ್ಲಿ ಹುಟ್ಟಿ ಬೆಳೆದು ಬದುಕಿದ ಚೆಟ್ಟಿ ಮೂಲತಃ ಬಹುದೊಡ್ಡ ಕಿರಾಣಿ ವ್ಯಾಪಾರಿಯಾಗಿದ್ದ… ಈತನ ವ್ಯಾಪಾರೀ ಜಾಲ ಎಷ್ಟು ದಿವಿನಾಗಿತ್ತೆಂದರೆ ಅಲ್ಲಿಯೇ ಕುಳಿತು ಮದರಾಸಿನ ಈಸ್ಟ್ ಇಂಡಿಯಾ ಕಂಪನಿಗೂ ಮೈಸೂರಿನ ಅರಮನೆಗೂ ಏಕಕಾಲಕ್ಕೆ ಕಿರಾಣಿ ಒದಗಿಸುತ್ತಿದ್ದ ಚತುರ… ಇಡೀ ದಖನ್ನಿನ ಸಿರಿವಂತರ , ಪಾಳೇಗಾರರ , ಬ್ರಿಟಿಷ ಅಧಿಕಾರಿಗಳ ಸ್ನೇಹ ಅವನಿಗಿತ್ತು… ಅಂತಹ ಚಟ್ಟಿಯವರಿಗೂ ಮುಮ್ಮುಡಿ ಕೃಷ್ಣರಾಜರಿಗೂ ಒಳ್ಳೆಯ ಸ್ನೇಹವಿತ್ತು.

ಬ್ರಿಟಿಷರು ಕುಂಟುನೆಪವೊಡ್ಡಿ ರಾಜ್ಯ ಕಸಿದುಕೊಂಡು ಅಧಿಕಾರದಲ್ಲಿ ಇರದಿದ್ದರೂ, ಅವರು ಮಾಡುತ್ತಿದ್ದ ಜನಸೇವೆ… ಅವರಿಗಿದ್ದ ಪ್ರಜಾಪ್ರೀತಿ… ಹಗಲಿರುಳೂ ಅವರು ಚಿಂತಿಸುತ್ತಿದ್ದ ರಾಜ್ಯದ ಅಭ್ಯುದಯದ ಜೊತೆ, ಬ್ರಿಟೀಷರಿಗೆ ಮೇಲಿಂದ ಮೇಲೆ ಪತ್ರಗಳನ್ನು ಬರೆದು ಅಧಿಕಾರ ವಾಪಸಿಗಾಗಿ ವಿನಂತಿಸಿಕೊಳ್ಳುತ್ತಿದ್ದರೂ ಬ್ರಿಟಿಷರು ಗಮನ ಹರಿಸದೇ ಇರುತ್ತಿದ್ದದ್ದನ್ನು ಗಮನಿಸಿದ ಚೆಟ್ಟಿ ಅವರು ಅದೊಂದು ದಿನ, ಮೈಸೂರು ಪ್ರಭುಗಳಿಗೆ ರಾಜ್ಯಾಧಿಕಾರ ಹಿಂದಿರುಗಿಸದಿದ್ದಲ್ಲಿ ನಾನು ಈಸ್ಟ್ ಇಂಡಿಯಾಗೆ ಸಾಲ ಕೊಡುವುದನ್ನು ನಿಲ್ಲಿಸಬೇಕಾದೀತು ಎಚ್ಚರ ಎಂಬ ಬೆದರಿಗೆ ಹಾಕಿದಾಗ, ಅಲೀ ಆಸ್ಗರ್ ಕೂಡಾ ತನ್ನ ಪ್ರಭಾವ ಬಳೆಸಿ ಮೈಸೂರು ಅರಸರಿಗೆ ಅಧಿಕಾರವನ್ನು ಹಿಂದಿರುಗಿಸಬೇಕೆಂದು ಒತ್ತಾಯ ಹಾಕಿದರು. ಇವರಿಬ್ಬರ ಬೆದರಿಕೆಗೆ ಬೆಚ್ಚಿದಂತೆ ನಟಿಸಿದ ಬ್ರಿಟಿಷರು ಅಂದಿನಿಂದ ಪ್ರಭುಗಳ ಪತ್ರಗಳಿಗೆ ಮಾನ್ಯತೆ ಕೊಟ್ಟು ಮಾರುತ್ತರ ಬರೆಯಲಾರಂಭಿಸಿದ್ದಲ್ಲದೇ, ಅಧಿಕಾರ ವಾಪಸಿಗಾಗಿ ತಾವು ಪ್ರಾಮಾಣಿಕ ಪ್ರಯತ್ನ ನಡೆಸುವುದಾಗಿಯೂ ವಾಗ್ದಾನ ಮಾಡಿದರು…

1857ರಲ್ಲಿ ಬ್ರಿಟಿಷರ ವಿರುದ್ಧ ಸಿಪಾಯಿ ದಂಗೆಯಾಗಿ ಪ್ರಥಮ ಸ್ವಾಂತ್ರತ್ರ್ಯ ಸಂಗ್ರಾಮವಾದಾಗ ಅದನ್ನು ಹತ್ತಿಕ್ಕಲು ಸಾಧ್ಯವಾಗದ ಈಸ್ಟ್ ಇಂಡಿಯಾ ಕಂಪನಿ ಬ್ರಿಟನ್ ರಾಣಿ ವಿಕ್ಟೋರಿಯಾಗೆ ಶರಣಾದಾಗ, ವಿಕ್ಟೋರಿಯಾರಾಣಿ ದೇಶದ ಆಡಳಿತದ ಚುಕ್ಕಾಣಿ ಹಿಡಿದಾಗ, ಪ್ರಾನ್ಸಿಸ್ ಕನ್ನಿಂಗ್ ಹ್ಯಾಮ್ ಮತ್ತು ಅವರ ಸಹಾಯಕರಾಗಿದ್ದ ಮಾರ್ಕ್ ಕಬ್ಬನ್ ಅವರು ಬರೆದಿದ್ದ ಪತ್ರವನ್ನು ಪುರಸ್ಕರಿಸಿ 565 ಸಂಸ್ಥಾನಗಳ ಪೈಕಿ ಮೈಸೂರಿನ ರಾಜರಿಗೆ ಮಾತ್ರವೇ ಆಡಳಿತವನ್ನು ಮರಳಿ ಹಸ್ತಾಂತರ ಮಾಡುತ್ತಾಳೆ. ಅಂತಹ ಮಹನೀಯರ ಸ್ಮರಣಾರ್ಥವಾಗಿಯೇ ಬೆಂಗಳೂರಿನ ಪ್ರಮುಖ ರಸ್ತೆಗಳಿಗೆ ಮತ್ತು ಉದ್ಯಾನಗಳಿಗೆ ಅವರುಗಳ ಹೆಸರನ್ನೇ ನಾಮಕರಣ ಮಾಡಿ ಇಂದಿಗೂ ಅವರನ್ನು ಸ್ಮರಿಸುವಂತೆ ಮಾಡಿದ್ದಾರೆ ನಮ್ಮ ಮಹಾರಾಜರು.

ಹೀಗೆ ಅಸ್ಕರ್ ಅಲಿ ಮತ್ತು ಚೆಟ್ಟಿಯವರ ಸಹಕಾರದಿಂದ ಅಧಿಕಾರವನ್ನು ಮರಳಿ ಪಡೆಯುವಷ್ಟರಲ್ಲಿ ವಯಸ್ಸಾಗಿದ್ದ ಮುಮ್ಮುಡಿ ಕೃಷ್ಣರಾಜ ಒಡೆಯರ್ ಅವರು ವಯೋಸಹಜವಾಗಿ 27 ಮಾರ್ಚ್ 1868 ರಂದು ತಮ್ಮ 73ನೇ ವಯಸ್ಸಿನಲ್ಲಿ ನಿಧನರಾಗುತ್ತಾರೆ. ಕೃಷ್ಣರಾಜ ಒಡೆಯರ್ ಅವರ ಸುದೀರ್ಘವಾದ ಹೋರಾಟದಿಂದಾಗಿ ಪಡೆದ ರಾಜ್ಯಭಾರವವನ್ನು ಮುಂದೆ ನಾಲ್ವಡೀ ಕೃಷ್ಣರಾಜ ಓಡೆಯರ್ ಮತ್ತು ಜಯಚಾಮರಾಜ ಒಡೆಯರ್ ಅವರು 1947ರಲ್ಲಿ ದೇಶಕ್ಕೆ ಸ್ವಾತ್ರಂತ್ಯ ದೊರೆತು ಭಾರತದ ಒಕ್ಕೂಟದ ಭಾಗವಾಗುವವರೆಗೂ ಅತ್ಯಂತ ಸುಗಮವಾಗಿ ಜನಪರವಾದ ಆಡಳಿತವನ್ನು ನಡೆಸಿಕೊಂಡು ಹೋಗಿದ್ದು ಈಗ ಇತಿಹಾಸ.

ಇಂತಹ ಮಹಾನುಭಾವರುಗಳ ಆಡಳಿತವನ್ನು ನೋಡಿದ್ದರಿಂದಲೇ ಸ್ವಾತ್ರಂತ್ಯಾ ನಂತರದ ಪ್ರಜಾಪ್ರಭುತ್ವದ ಆಡಳಿತ ವ್ಯವಸ್ಥೆ ಜಾರಿಗೆಯಾದರೂ, ಇಂದಿಗೂ ಬಹುತೇಕರ ಮನ ಮತ್ತು ಮನೆಗಳಲ್ಲಿ ಮೈಸೂರು ಮಹಾರಾಜರುಗಳ ದೊಡ್ಡ ದೊಡ್ಡ ಪೋಟೋಗಳನ್ನು ಇಟ್ಟು ಪ್ರತಿ ದಿನವೂ ದೇವರಂತೆ ಪೂಜೆ ಮಾಡುವುದನ್ನು ನೋಡಿದಾಗ, ಇಂದಿನ ಪ್ರಜಾಪ್ರಭುತ್ವದ ಆಡಳಿತಕ್ಕಿಂತ ಮೈಸೂರು ಮಹಾರಾಜರುಗಳಂತಹ ಜನಪರ ರಾಜರ ವ್ಯವಸ್ಥೆಯೇ ಚೆನ್ನಾಗಿತ್ತು ಎನಿಸುವುದಲ್ಲಿ ತಪ್ಪೇನೂ ಇಲ್ಲ ಅಲ್ವೇ?

ಏನಂತೀರೀ?
ನಿಮ್ಮವನೇ ಉಮಾಸುತ

One thought on “ಶ್ರೀ ಮುಮ್ಮಡಿ ಕೃಷ್ಣರಾಜ ಒಡೆಯರ್

  1. ಬಹಳ ಉಪಯುಕ್ತವಾಗಿದೆ ‌‌ ಮಹಾರಾಜರ ವ್ಯಕ್ತಿತ್ವ ಅದೆಷ್ಟು ಉನ್ನತವಾಗಿತ್ತು ಎಂದು ಸಂತೋಷವಾಯಿತು.
    ಬ್ರಿಟಿಷ್ ಅಧಿಕಾರಿಗಳು ಮತ್ತು ಮುಸಲ್ಮಾನ ದೊರೆಗಳ ಮನೆಹಾಳತನ ನೋವು ತರುತ್ತದೆ.
    ನನ್ನದೊಂದು ಸಣ್ಣ ಪ್ರಶ್ನೆ ಇದೆ ದಯವಿಟ್ಟು ಉತ್ತರಿಸಿ. ಮುಮ್ಮಡಿ ನಾಲ್ವಡಿ ಎನ್ನುವ ಅಭಿವಾದನಗಳು ಹೇಗೆ ಬಂತು ಅವುಗಳ ಅರ್ಥ ಏನು?

    Liked by 1 person

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s