ಮನುಷ್ಯ ಸಂಘ ಜೀವಿ. ಹಾಗಾಗಿ ಆತ ಒಬ್ಬಂಟಿಯಾಗಿರದೇ ಹೆಚ್ಚು ಜನರು ಇರುವ ಪ್ರದೇಶದಲ್ಲಿ ವಾಸಿಸುತ್ತಾನೆ. ಅದೇ ರೀತಿ ಅನೇಕ ಪ್ರಾಣಿಗಳನ್ನು ಪಳಗಿಸಿಕೊಂಡು ತನ್ನ ಸಾಕುಪ್ರಾಣಿಗಳಾಗಿಸಿಕೊಂಡು ಅವುಗಳನ್ನು ತನ್ನ ದೈನಂದಿನ ಚಟುವಟಿಕೆಗಳಲ್ಲಿ ಬಳಸಿಕೊಳ್ಳುತ್ತಾನೆ. ಹಾಗೆ ಸಾಕು ಪ್ರಾಣಿಗಳೆಂದಾಗ ಥಟ್ ಎಂದು ನೆನಪಾಗೋದೇ ನಾಯಿಗಳು. ಸ್ವಾಮಿ ನಿಷ್ಟೆಗೆ ಮತ್ತೊಂದು ಹೆಸರೇ ನಾಯಿಗಳು ಆಗಿರುವಾಗ, ಬಹುತೇಕರು ತಮ್ಮ ಮನೆಯಲ್ಲಿ ನಾಯಿಗಳನ್ನು ಮುದ್ದಾಗಿ ಸಾಕಿರುತ್ತಾರೆ. ಅದೇಷ್ಟೋ ಮನೆಗಳಲ್ಲಿ ನಾಯಿಗಳನ್ನು ತಮ್ಮ ಮನೆಯ ಒಬ್ಬ ಸದಸ್ಯರಂತೆಯೇ ಪ್ರೀತಿಸುತ್ತಾರೆ ಮತ್ತು ಅವುಗಳ ಅಗಲಿದಾಗ ತಮ್ಮ ಒಡಹುಟ್ಟಿದವರನ್ನು ಕಳೆದುಕೊಂಡಷ್ಟ ದುಃಖವನ್ನು ಪಡುತ್ತಾರೆ. ಅಂತಹ ಕೆಲವೊಂದು ಹೃದಯವಿದ್ರಾವಕ ಪ್ರಸಂಗಳನ್ನು ಈ ಕೆಳಗಿನ ಲಿಂಕ್ ಮೂಲಕ ಓದಬಹುದಾಗಿದೆ.
ನಾಯಿಗಳನ್ನು ಸಾಕುವುದು ಸುಲಭ. ಅವುಗಳು ತಮ್ಮ ಮಾಲಿಕರಿಗೆ ತೋರುವ ಪ್ರೀತಿ ನಿಜಕ್ಕೂ ಅನನ್ಯ. ಆದರೆ ಅವುಗಳನ್ನು ಚೆನ್ನಾಗಿ ನೋಡಿಕೊಳ್ಳುವುದು ಬಹಳ ಕಷ್ಟ ಎನ್ನುವುದು ಬಹುತೇಕರ ಅಭಿಪ್ರಾಯ. ಅದರಲ್ಲೂ ನಾಯಿಗಳನ್ನು ಪ್ರತಿ ದಿನವೂ ಬಹಿರ್ದಶೆಗೆ ಕರೆದುಕೊಂಡು ಹೋಗುವುದು ತುಸು ತ್ರಾಸಕರವೇ ಸರಿ. ಹಾಗೆ ನಾಯಿಗಳನ್ನು ಬೆಳಿಗ್ಗೆ ಇಲ್ಲವೇ ಸಂಜೆ ಹೊರೆಗೆ ಬಹಿರ್ದಶೆಗೆ ಕರೆದು ಕೊಂಡು ಹೋದಾಗ, ಅದು ಮನೆಯಲ್ಲಿ ಸಾಕಿರುವ ನಾಯಿಗಳಾಗಲಿ ಅಥವಾ ಬೀದಿಯ ನಾಯಿಗಳಾದರೂ, ಅವುಗಳು ಮೂತ್ರ ವಿಸರ್ಜನೆ ಮಾಡುವ ಮುನ್ನಾ ಹತ್ತಾರು ಕಡೆ ಮೂಸಿ ಮೂಸಿ ಕಡೆಗೆ ಯಾವಾಗಲೂ ಎತ್ತರದ ಕಂಬಕ್ಕೋ ಇಲ್ಲವೇ ಮನೆಯ ಮುಂದೆ ನಿಂತಿರುವ ಕಾರುಗಳ ಟಯರ್ಗಳ ಮೇಲೆ ಮೂತ್ರ ವಿಸರ್ಜನೆ ಮಾಡುವುದು ನಿಜಕ್ಕೂ ಅಚ್ಚರಿಯ ಸಂಗತಿ.
ನಾಯಿಗಳ ಆ ರೀತಿಯ ಸ್ವಭಾವಕ್ಕೆ ಕಾರಣಗಳೇನು? ಎಂದು ಯೋಚಿಸಿದರೆ, ನಾಯಿಗಳು ಮನುಷ್ಯರಿಗಿಂತ ಹೇಗೆ ಭಿನ್ನ ಮತ್ತು ಅವುಗಳಿಗೆ ಎಲ್ಲಿ ಮೂತ್ರವಿಸರ್ಜನೆ ಮಾಡಬೇಕು ಎಂಬುದರ ಅರಿವಿರುತ್ತದೆ ಎನ್ನುವುದು ಕುತೂಹಲಕಾರಿಯಾಗಿದೆ. ಹೆಚ್ಚಿನ ನಾಯಿಗಳು ತೆರೆದ ಜಾಗದಲ್ಲಿ ಮೂತ್ರ ವಿಸರ್ಜಿಸಲು ಇಷ್ಟಪಡುತ್ತವೆ ಮತ್ತು ಬಹುತೇಕ ಕಾಡು ಪ್ರಾಣಿಗಳಂತೆ ತಮ್ಮ ಪರಿಧಿಯನ್ನು ಗುರುತಿಸಿಕೊಂಡು ಆ ಪ್ರದೇಶಗಳಲ್ಲಿ ಮೂತ್ರವನ್ನು ಮಾಡುವ ಮೂಲಕ ತನ್ನ ಗಡಿ ಪ್ರದೇಶವನ್ನು ಗುರುತಿಸಿಕೊಳ್ಳುತ್ತವೆ. ಹೀಗಾಗಿ ಬೇರೆ ಪ್ರದೇಶಗಳಿಂದ ಬರುವ ನಾಯಿಗಳಿಗೆ ಅದು ಎಚ್ಚರಿಕೆಯ ಗಂಟೆಯಾಗಿದ್ದು ಆ ಪ್ರದೇಶ ಹೊರಗಿನ ನಾಯಿಗಳಿಗೆ ಪ್ರವೇಶ ನಿರ್ಬಂಧಿಸಲಾಗಿದೆ ಎಂಬುದರ ಸೂಚನೆಯಾಗಿರುತ್ತದೆ. ಒಂದು ನಾಯಿಯ ಮೂತ್ರದ ವಾಸನೆಯನ್ನು ನೋಡಿದ ಕೂಡಲೇ, ಹೊಸ ನಾಯಿಯು ಅಲ್ಲಿ ಮೂತ್ರವನ್ನು ಮಾಡಿ ತನ್ನ ಗುರುತನ್ನು ಅಲ್ಲಿ ಛಾಪಿಸುತ್ತದೆ. ಹೀಗೆ ಒಪ್ಪಿಗೆಯಾದ ನಾಯಿಗಳು ಪರಸ್ಪರ ಕೂಡಿ ಬಾಳುತ್ತವೆ ಇಲ್ಲದೇ ಹೋದಲ್ಲಿ ಪರಸ್ಪರ ಕಚ್ಚಾಡಿ ಕೊಳ್ಳುವುದನ್ನೂ ಅನೇಕ ಬಾರಿ ನೋಡಿದ್ದೇವೆ.
ಜನರ ಓಡಾಟದಿಂದಾಗಿ ಹೀಗೆ ನೆಲದ ಮೇಲೆ ಮಾಡಿದ ಮೂತ್ರವಿಸರ್ಜನೆಯ ವಾಸನೆ ಬಲುಬೇಗ ಅಳಿಸಿಹೋಗುವ ಕಾರಣದಿಂದ ಲಂಬವಾದ ಕಲ್ಲು ಇಲ್ಲವೇ ಕಂಬಗಳ ಮೇಲೆ ಮೂತ್ರ ವಿಸರ್ಜಿಸುವ ಮೂಲಕ ಅದು ಹೆಚ್ಚು ಕಾಲ ಅದರ ವಾಸನೆ ಇರುವಂತೆ ನೋಡಿಕೊಳ್ಳುತ್ತವೆ. ಸೂಕ್ಶ್ಮವಾಗಿ ಗಮನಿಸಿದಲ್ಲಿ ನಾಯಿಗಳು ತಮ್ಮ ಮೂಗಿನ ನೇರಕ್ಕೆ ತಾಗುವಷ್ಟು ಎತ್ತರಕ್ಕೆ ಮಾತ್ರವೇ ಮೂತ್ರ ವಿಸರ್ಜಿಸಿ ಮತ್ತೊಮ್ಮೆ ಆಪ್ರದೇಶಕ್ಕೆ ಬಂದಾಗ ಮೂಸಿ ನೋಡಲು ಅನುಕೂಲವಾಗುವಂತಿರುತ್ತದೆ. ಇನ್ನು ಮತ್ತೊಂದು ಕುತೂಹಲಕಾರಿ ವಿಷಯವೇನೆಂದರೆ, ನಾಯಿಗಳು ಅತ್ಯಂತ ಸ್ವಚ್ಚವಾಗಿರುವ ಪ್ರದೇಶದಲ್ಲಿ ಬಹಿರ್ದಶೆಗೆ ಹೋಗದೇ ಕೊಳಕಾದ ಪ್ರದೇಶದಲ್ಲಿಯೇ ಬಹಿರ್ದಶೆಗೆ ಹೋಗುವುದನ್ನು ಗಮನಿಸಿರಹುದು. ಆ ಪ್ರದೇಶದಲ್ಲಿ ಅದಾಗಲೇ ತ್ಯಾಜ್ಯ ವಸ್ತುವಿನ ವಾಸನೆ ಬರುತ್ತಿರುವ ಕಾರಣದಿಂದಾಗಿ ಅದು ಕಸ ಹಾಕುವ ಜಾಗವೆಂದು ನಾಯಿಗಳು ಭಾವಿಸಸುವ ಕಾರಣ ಅಂತಹ ಪ್ರದೇಶದಲ್ಲಿ ಮಾತ್ರವೇ ಮೂತ್ರವನ್ನು ವಿಸರ್ಜಿಸುವಷ್ಟು ಬುದ್ಧಿವಂತ ಪ್ರಾಣಿಯಾಗಿದೆ.
ಇನ್ನು ವಾಹನಗಳು ನಿರಂತರವಾಗಿ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಓಡಾಡುವಾಗ ರಸ್ತೆಯ ಮೇಲೆ ಕಲ್ಲು ಮಣ್ಣು, ಸಗಣಿ ಅಥವಾ ಇತರೇ ತ್ಯಾಜ್ಯ ಪದಾರ್ಥಗಳು ಅಂಟಿಕೊಂಡಿದ್ದು ಅವುಗಳ ಮೇಲೆ ಕಾರುಗಳು ಹೋದಾಗ ಆ ತ್ಯಾಜ್ಯ ಪದಾರ್ಥಗಳು ವಾಹನಗಳ ಟೈರುಗಳ ಮೇಲೆ ಮೆತ್ತಿಕೊಳ್ಳುವ ಕಾರಣ, ಅವುಗಳಿಂದ ತ್ಯಾಜ್ಯ ವಸ್ತುವಿನ ವಾಸನೆ ಬರುವುದರಿಂದ ಆ ಪ್ರದೇಶವು ಸಹಾ ಕಸ ಹಾಕುವಂತಹ ಪ್ರದೇಶ ಎಂದು ನಾಯಿಗಳು ಭಾವಿಸುವ ಕಾರಣ ನಾಯಿಗಳು ವಾಹನದ ಟೈಯರ್ಗಳ ಮೇಲೆಯೇ ಹೆಚ್ಚಾಗಿ ಮೂತ್ರ ವಿಸರ್ಜಿಸುತ್ತವೆ. ಟೈರಿನ ರಬ್ಬರ್ ವಾಸನೆಯೂ ಸಹಾ ನಾಯಿಗಳನ್ನು ಆಕರ್ಷಿಸುವ ಕಾರಣ, ನಾಯಿಗಳು ಟೈರುಗಳ ಮೇಲೆ ಮೂತ್ರ ವಿಸರ್ಜನೆ ಮಾಡಬಹುದು ಎನ್ನಲಾಗುತ್ತದೆ.
ಕೇವಲ ಕಂಬಗಳು ಮತ್ತು ವಾಹನಗಳಲ್ಲದೇ ನಾಯಿಗಳು ಮೂತ್ರ ವಿಸರ್ಜಿಸಲು ಇಷ್ಟ ಪಡುವ ಮತ್ತೊಂದು ತಾಣವೇ ಮರಗಳ ಬುಡ. ಹೀಗೆ ನಾಯಿಗಳ ಮೂತ್ರದಿಂದ ಅನೇಕ ಮರಗಳು ಒಣಗಿ ಹೋಗಿರುವ ಉದಾಹರಣೆಯೂ ಸಹಾ ಇರುವುದರಿಂದ, ನಾಯಿಗಳು ಒಮ್ಮೆ ಮೂತ್ರ ಮಾಡಿದ್ದನ್ನು ನೋಡಿದ ಕೂಡಲೇ ಆ ಮರದ ಬುಡವನ್ನು ಚೆನ್ನಾಗಿ ನೀರಿನಿಂದ ತೊಳೆದು ಅಲ್ಲೊಂದು ಸುವಾಸನೆ ಬರುವಂತಹದನ್ನು ಪದೇ ಪದೇ ಸಿಂಪಡಿಸುವ ಮೂಲಕ ಆ ಮರಗಳನ್ನು ನಾಯಿಯ ಮೂತ್ರದಿಂದ ರಕ್ಷಿಸುವ ಇನ್ನೊಂದು ಸುಲಭವಾದ ವಿಧಾನವಾಗಿದೆ.
ಇದರಿಂದ ನಾವುಗಳು ಕಲಿಯಬೇಕಾದ ಬಹುಮುಖ್ಯ ವಿಷಯವೇನೆಂದರೆ, ಈ ರೀತಿ ನಾಯಿಗಳು ನಮ್ಮ ನಿಮ್ಮ ಮನೆಯ ಮುಂದೆಯೋ ಇಲ್ಲವೇ ನಮ್ಮ ಕಾರುಗಳ ಮೇಲೆ ಮೂತ್ರ ವಿಸರ್ಜಿಸುವುದು ನಾಯಿಯ ತಪ್ಪಲ್ಲ. ನಾಯಿಗಳು ಹಾಗೆ ಮಾಡುವಂತ ಮಾಡಿಕೊಂಡಿರುವುದು ನಮ್ಮದೇ ತಪ್ಪಾಗಿದೆ. ಹಾಗಾಗಿ ನಾವುಗಳು ನಮ್ಮ ಮನೆಯ ಅಕ್ಕ ಪಕ್ಕ ಯಾವುದೇ ರೀತಿಯ ಕಸ ಕಡ್ಡಿ ಇಲ್ಲದೇ, ಕೊಳೆತು ನಾರದಂತೆ ಇಟ್ಟು ಕೊಳ್ಳದೇ, ವಾಹನಗಳ ಟಯರ್ ಗಳನ್ನು ಸ್ವಚ್ಛವಾಗಿಟ್ಟು ಕೊಂಡಲ್ಲಿ ಖಂಡಿತವಾಗಿಯೂ ನಾಯಿಗಳು ಮೂತ್ರ ವಿಸರ್ಜಿಸುವುದಿಲ್ಲ. ಇನ್ನು ಮುಂದೆ ನಾಯಿಗಳು ಮನೆಯ ಮುಂದೆ ಅಥವಾ ಕಾರಿನ ಟೈರುಗಳಿಗೆ ಮೂತ್ರ ವಿಸರ್ಜಿಸುವಾಗ ಅವುಗಳನ್ನು ಹೊಡೆದೋಡಿಸುವ ಬದಲು ನಮ್ಮ ಪರಿಸರವನ್ನು ಶುದ್ಧವಾಗಿರಿಸಿ ಕೊಳ್ಳೋಣ. ಇದನ್ನೇ ಅಲ್ವೇ ನಮ್ಮ ಪ್ರಧಾನಿಗಳು ಬಾರಿ ಬಾರಿ ಸ್ವಚ್ಚ ಭಾರತ್ ಎಂದು ಹೇಳುತ್ತಿರುವುದು.
ಏನಂತೀರೀ?
ನಿಮ್ಮವನೇ ಉಮಾಸುತ