ಅನಾಥ ಶವಗಳ ತ್ರಿವಿಕ್ರಮ ಮಹದೇವ್

mahadeva6

ಪುರಾಣ ಕಾಲದಲ್ಲಿ ವಿಶ್ವಾಮಿತ್ರರ ಸಾಲವನ್ನು ತೀರಿಸುವ ಸಲುವಾಗಿ ರಾಜಾ ಸತ್ಯಹರಿಶ್ಚಂದ್ರ ಸ್ಮಶಾನದಲ್ಲಿ ಕಳೇಬರಗಳನ್ನು ಸುಡುವಂತಹ ಕಾಯಕದಲ್ಲಿ ತೊಡಗಿದ್ದರೆ, ಈ ಕಲಿಯುಗದಲ್ಲಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯ ಶವಾಗಾರದ ಅವರಣದಲ್ಲಿ ಅನಾಥಶವಗಳಿಗೆ ಅಂತ್ಯಕ್ರಿಯೆ ಮಾಡುತ್ತಾ ನಿರ್ಸ್ವಾರ್ಧ ಸೇವೆಯನ್ನು ಸಲ್ಲಿಸುತ್ತಿದ್ದ ಇದುವರೆಗೂ ಸುಮಾರು ಒಂದರಿಂದ ಒಂದೂವರೆ ಲಕ್ಷ ಅನಾಥ ಶವಗಳ ಅಂತ್ಯಸಂಸ್ಕಾರಗಳನ್ನು ಮಾಡುವ ಮೂಲಕ ಅನಾಥ ಶವಗಳ ತ್ರಿವಿಕ್ರಮ ಎಂದೇ ಖ್ಯಾತಿ ಪಡೆದಿದ್ದ ಎಂ ಮಹದೇವ್ ಜುಲೈ 14 2022 ರಂದು ನಿಧನರಾಗಿದ್ದಾರೆ ಎಂಬ ವಿಷಯ ತಡವಾಗಿ ತಿಳಿದು ಬಂದಿರುವುದು ನಿಜಕ್ಕೂ ವಿಷಾಧನೀಯವಾಗಿದೆ.

mahadeva7

ಮೂಲಗಳ ಪ್ರಕಾರ, ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನ ಅಂಚೇಪುರದಲ್ಲಿ 1969 ಜನಿಸಿದ್ದ ಮಹದೇವ್ 9ನೇ ವಯಸ್ಸಿನಿಂದಲೇ ಅನಾಥ ಶವಗಳ ಅಂತ್ಯ ಸಂಸ್ಕಾರ ನೆರವೇರಿಸಲಾರಂಭಿಸಿದ್ದರು. ಕಳೆದ ನಲವತ್ತು ವರ್ಷಗಳಿಂದಲೂ ವಿಕ್ಟೋರಿಯಾ ಆಸ್ಪತ್ರೆಯಲ್ಲದೇ ಬೆಂಗಳೂರಿನ ನೂರಾರು ಅಸ್ಪತ್ರೆಗಳಲ್ಲಿ ಅಪಘಾತ, ಆತ್ಮಹತ್ಯೆ ಸುಟ್ಟಗಾಯಗಳು ಹೀಗೆ ಹತ್ತು ಹಲವು ಕಾರಣಗಳಿಂದ ಮೃತಪಡುತ್ತಿದ್ದ ಅನಾಥ ಶವಗಳನ್ನು ಮರಣೋತ್ತರ ಪರೀಕ್ಷೆಯ ಬಳಿಕ ಕೊಂಡೊಯ್ಯಲು ಅವರ ವಾರಸುದಾರರು ಇಲ್ಲದೇ ಹೋದಾಗ ಅಂತಹ ಕಳೇಬರಹಕ್ಕೆ ಶ್ರೀ ಮಹದೇವ ಅವರೇ ಸಂಬಂಧಿಕರ ಸ್ಥಾನದಲ್ಲಿ ನಿಂತು ವಿಧಿಪೂರ್ವಕವಾಗಿ ಅಂತ್ಯಸಂಸ್ಕಾರ ನೆರವೇರಿಸುತ್ತಿದ್ದರು. ಅವರ ಈ ಸಾಧನೆಯನ್ನು ಗಮನಿಸಿದ ಪೊಲೀಸರು ಹಾಗೂ ವೈದ್ಯರುಗಳೇ ಶ್ರೀ ಮಹದೇವ ಅವರಿಗೆ ಅನಾಥ ಶವಗಳ ತ್ರಿವಿಕ್ರಮ ಎಂಬ ಬಿರುದನ್ನು ದಯಪಾಲಿಸಿದ್ದರು.

ಪ್ರಸ್ತುತವಾಗಿ ಬೆಂಗಳೂರಿನ ರಾಜರಾಜೇಶ್ವರಿನಗರದಲ್ಲಿ ನೆಲೆಸಿದ್ದ ಮಹದೇವ್ ಅವರಿಗೆ ಪತ್ನಿ, ಇಬ್ಬರು ಪುತ್ರರು ಹಾಗೂ ಇಬ್ಬರು ಪುತ್ರಿಯರು ಇದ್ದು ಶ್ವಾಶಕೋಶ ಸಂಬಂಧಿತ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಶ್ರೀ ಮಹದೇವ್ ಅವರನ್ನು ಕೆಲ ದಿನಗಳ ಹಿಂದೆಯಷ್ಟೇ ಚಿಕ್ರಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಕಾರಿಯಾಗದೇ ಮಹದೇವ್ ಅವರು ಜುಲೈ 14 2022 ರಂದು ಸಾಯಬಾರಂತಹ ವಯಸ್ಸಾದ 53 ವರ್ಷದಲ್ಲಿ ನಿಧನರಾಗಿರುವುದು ನಿಜಕ್ಕೂ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ ಎಂದರು ಅತಿಶಯವಲ್ಲ. ರಾಜಕೀಯ ನಾಯಕರು ಮತ್ತು ನಟ ನಟಿಯರ ಅನೈತಿಕ ಸಂಬಂಧಗಳು ಅವರ ಮೂರನೇ ಇಲ್ಲವೇ ನಾಲ್ಕನೇ ಮದುವೆ, ಬಸುರಿ ಬಾಣಂತನದ ಬಗ್ಗೆ ಇಡೀ ರಾಜ್ಯವೇ ಸಂಭ್ರಮ ಪಡುವ ವಿಷಯ, ದುಃಖಕರ ವಿಷಯ ಎಂದು ಗಂಟೆಗಟ್ಟಲೇ ಬ್ರೇಕಿಂಗ್ ನ್ಯೂಸ್ ಎಂದು ಕೊರೆಯುವ ಮಾಧ್ಯಮಗಳೂ ಸಹಾ ಲಕ್ಷಾಂತರ ಅನಾಥ ಶವಗಳಿಗೆ ಅಂತಿಮ ಸಂಸ್ಕಾರ ನಡೆಸಿದ್ದಂತಹ ವ್ಯಕ್ತಿಯ ಆಗಲಿಕೆಯನ್ನು ಜನರಿಗೆ ಸೂಕ್ತವಾದ ರೀತಿಯಲ್ಲಿ ತಲುಪಿಸದೇ ಹೋದದ್ದು ಬೇಜವಾಬ್ಧಾರಿಯ ಪರಮಾವಧಿಯಾಗಿದೆ.

mahadeva8

ಬಹಳ ಹಿಂದೆ ಅವರು ಅನಾಥ ಶವಗಳನ್ನು ಸಾಗಿಸಲು ತಮ್ಮದೇ ಆದ ಟಾಂಗಾ ಗಾಡಿ (ಕುದುರೆ ಗಾಡಿ)ಯನ್ನು ಬಳಸುತ್ತಿದ್ದು ಕುದುರೆಯನ್ನು ಸಾಕುವುದು ಬಹಳ ಕಷ್ಟವಾಗುತ್ತಿದ್ದದ್ದನ್ನು ಗಮನಿಸಿಸಿದ ದಾನಿಯೊಬ್ಬರು ಅವರಿಗೆ ಮೂರು ಚಕ್ರದ ಗೂಡ್ಸ್ ಆಟೋವೊಂದನ್ನು ದಾನ ನೀಡಿದಾಗ, ಹೆಣಗಳನ್ನು ಬಹಳ ಕಾಲ ತಮ್ಮ ಆಟೋದಲ್ಲಿ ಸ್ಮಶಾನಕ್ಕೆ ಸಾಗಿಸುತ್ತಿದ್ದರು. ಮಹದೇವ್ ಅವರ ಈ ಅದ್ಭುತಕಾರ್ಯ ಹಿರಿಯ ಐಎಎಸ್ ಅಧಿಕಾರಿಗಳಾದ ಶ್ರೀ ಮದನ್‌ ಗೋಪಾಲ್ ಅವರ ಗಮನಕ್ಕೆ ಬಂದು ಅವರು ಶ್ರೀ ಮಹದೇವ್ ಅವರಿಗೆ ಮಾರುತಿ ಒಮ್ನೀ ವಾಹನವನ್ನು ಕೊಡುಗೆಯಾಗಿ ನೀಡಿದ ನಂತರ ಅದೇ ವಾಹನದಲ್ಲೇ ಶವ ಸಾಗಣೆಯನ್ನು ಮುಂದುವರಿಸಿದ್ದರು. ವಿಕ್ಟೋರಿಯಾ ಆಸ್ಪತ್ರೆಯ ವೈದ್ಯರುಗಳೇ ಹೇಳುವಂತೆ ಮಹದೇವ್ ಅವರು ಈ 40 ವರ್ಷಗಳ ಸುದೀರ್ಘಾವಧಿಯಲ್ಲಿ ಸರಿ ಸುಮಾರು ಒಂದು ಲಕ್ಷದಿಂದ ಒಂದೂವರೆ ಲಕ್ಷಕ್ಕೂ ಅಧಿಕ ಅನಾಥ ಶವಗಳ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ.

mahadeva9

ಆರಂಭದಲ್ಲಿ ಈ ಕಾಯಕವನ್ನು ಒಬ್ಬರೇ ಮಾಡುತ್ತಿದ್ದು ಇತ್ತೀಚಿನ ಕೆಲ ವರ್ಷಗಳಿಂದ ಅವರ ಮಕ್ಕಳಾದ ಪ್ರವೀಣ್ ಹಾಗೂ ಕಿರಣ್ ವಯಸ್ಕರಾದ ನಂತರ ಅವರುಗಳೂ ಸಹಾ ತಮ್ಮ ತಂದೆಯವರ ಕಾಯಕಕ್ಕೆ ಕೈ ಜೋಡಿಸಿದಾಗ ಅವರ ಕೆಲಸ ಸ್ವಲ್ಪ ಸುಗಮವಾಗಿದ್ದಲ್ಲದೇ ಇನ್ನೂ ಹೆಚ್ಚಿನ ವೇಗ ಪಡೆದು ದಿನವೊಂದರಲ್ಲೇ ವಿವಿಧ ಆಸ್ಪತ್ರೆಗಳಿಂದ ಐದಾರು ಶವಗಳ ಅಂತ್ಯ ಸಂಸ್ಕಾರವನ್ನು ಮಾಡುವಂತಾಗಿತ್ತು. ಆವರ ಕಿರಿಯ ಮಗ ಕಿರಣ್ ತಿಳಿಸಿದಂತೆ ಕ್ಯಾನ್ಸರ್ ಹೆಚ್ಚಿನ ಚಿಕಿತ್ಸೆಗಾಗಿ ಕಳೆದ 1 ತಿಂಗಳಿನಿಂದ ಆಸ್ಪತ್ರೆಯಲ್ಲಿ ಇರುವಾಗಲೂ ಅವರು ಅನಾಥ ಶವಗಳ ಬಗ್ಗೆಯೇ ಆ ಹಿರಿಯ ಜೀವ ಯೋಚಿಸುತ್ತಿದ್ದರಂತೆ. ಹಾಗಾಗಿ ತಮ್ಮ ತಂದೆಯವರು ನಿಧನವಾದ ಬಳಿಕ ಆ ಅನಾಥ ಶವಗಳ ಸಂಸ್ಕಾರ ಕಾರ್ಯವನ್ನು ನಾವಿಬ್ಬರು ಅಣ್ಣ ತಮ್ಮಂದಿರೇ ಮುಂದುವರೆಸಿಕೊಂಡು ಹೋಗಲಿದ್ದೇವೆ ಎಂದು ತಿಳಿಸಿರುವುದು ನಿಜಕ್ಕೂ ಅನನ್ಯವೇ ಸರಿ. ತಂದೆಯವರಿದ್ದಾಗಲೇ, ಅವರೊಂದಿಗೆ ನಾವಿಬ್ಬರು ಅಣ್ಣ ತಮ್ಮಂದಿರು ಸೇರಿಕೊಂಡು ಅನಾಥ ಶವಗಳಸಂಸ್ಕಾರ ಮಾಡುತ್ತಿದ್ದೆವು. ಈಗ ಅದೇ ಕಾಯಕವನ್ನು ಮುಂದುವರಿಸಿ ಕೊಂಡು ಹೋದಾಗ ಮಾತ್ರವೇ ತಮ್ಮ ತಂದೆಯವರ ಆತ್ಮಕ್ಕೆ ಶಾಂತಿ ಸಿಗುತ್ತದೆ ಎಂದು ಹೇಳಿದಾಗ, ನಿಜಕ್ಕೂ ಕರುಳು ಚುರುಕ್ ಎಂದಿದ್ದಲ್ಲದೇ, ಗಂಟಲು ಗದ್ಗತವಾಗಿ ಬಾಯಿಯಿಂದ ಮಾತೇ ಹೊರಡಲಿಲ್ಲ.

ಮಹದೇವ್ ಅವರ ಈ ಪುಣ್ಯ ಕಾರ್ಯವನ್ನು ಗುರುತಿಸಿ ಸರ್ಕಾರ ಅವರಿಗೆ ರಾಜ್ಯೋತ್ಸವ ಪ್ರಶಸ್ತಿಯನ್ನು ಕೊಟ್ಟಿದ್ದರೆ, ನಮ್ಮ ಬೆಂಗಳೂರು ಪ್ರತಿಷ್ಠಾನ ಕೆಂಪೇಗೌಡ ಪ್ರಶಸ್ತಿಯನ್ನು ಕೊಟ್ಟು ಸತ್ಕರಿಸಿತ್ತು. ತ್ರಿವಿಕ್ರಮ ಮಹಾದೇವ ಅವರ ಸಾಧನೆ ದೂರದ ದೆಹಲಿಯನ್ನೂ ತಲುಪಿ ಅಂದಿನ ರಾಷ್ಟ್ರಪತಿಗಳಾಗಿದ್ದ ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ಅವರು ಮಹದೇವ ಅವರಿಗೆ ಮುಂಬೈನಲ್ಲಿ ನಡೆದ ಸಮಾರಂಭದಲ್ಲಿ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದರು. ಆದೇ 1999ರ ನವೆಂಬರ್ ನಲ್ಲಿ ರಾಜ್ಯದ ಮುಖ್ಯಮಂತ್ರಿಗಳಾಗಿದ್ದ ಶ್ರೀ ಎಸ್.ಎಂ.ಕೃಷ್ಣ ಅವರೂ ಸಹಾ ಮುಖ್ಯಮಂತ್ರಿ ಚಿನ್ನದ ಪದಕವನ್ನು ನೀಡಿ ಸನ್ಮಾನಿಸಿದ್ದರು.

ಇದಲ್ಲದೇ ಮಹದೇವ ಅವರು ಕೈವಾರ ತಾತಯ್ಯ ಎಂಬ ಸಿನಿಮಾದಲ್ಲಿಯೂ ನಟಿಸಿದ್ದಲ್ಲದೇ, ಇವರ ಕಾಯಕದ ಬಗೆಯನ್ನೇ .ಆಧರಿಸಿದ ಸಂಸ್ಕಾರವಂತ ಎಂಬ ಸಿನಿಮಾ ಕೂಡ ಇತ್ತೀಚೆಗೆ ಬಿಡುಗಡೆಯಾಗಿದ್ದು ಗಮನಾರ್ಹವಾಗಿದೆ.

mahadeva4

ಯಾವುದೇ ನಿರೀಕ್ಷೆಯಿಲ್ಲದೇ, ಪ್ರತಿಫಲಾಪೇಕ್ಷೆ ಇಲ್ಲದೇ ಇಂತಹ ಅದ್ಭುತವಾದ ಸೇವೆಯನ್ನು ಮುಂದುವರೆಸಿಕೊಂಡು ಹೋಗಿದ್ದ ಮಹದೇವ್ ಅವರು ಆರ್ಥಿಕವಾಗಿ ಬಹಳ ಹಿಂದಿದ್ದರು. ಅನೇಕ ಬಾರಿ ಶವಗಳನ್ನು ಸಾಗಿಸಲು ಗಾಡಿಗೆ ಪೆಟ್ರೋಲ್ ಸಹಾ ಇಲ್ಲದೇ ಅಥವಾ ಹೆಣದ ಮೇಲೆ ಹೊದಿಸುವ ಬಟ್ಟೆಗೂ ಸಹಾ ಮತ್ತೊಬ್ಬರ ಬಳಿ ಸಾಲವನ್ನು ಪಡೆದು ಸಂಸ್ಕಾರ ಮಾಡಿದ ಉದಾಹರಣೆಗಳು ಇವೆ. ಆಗೊಮ್ಮೆ ಈಗೊಮ್ಮೆ ಬೆಂಗಳೂರಿನ ಮೇಯರ್ ಅವರು 25,000 ದೇಣಿಗೆ ನೀಡಿದ್ದರೆ, ಸದಾ ಕಾಲವೂ ಅವರು ಸಂಪರ್ಕದಲ್ಲಿ ಇರುವಂತಾಗಲು ಭಾರತೀಯ ರೈಲ್ವೇ ಅವರಿಗೆ ಸೆಲ್ ಫೋನ್ ಅನ್ನು ಕೊಡುಗೆ ನೀಡಿತ್ತು. ಕೆಲ ಹಿತೈಷಿಗಳು ಅಗಾಗ ಅವರಿಗೆ ಉಚಿತ ಪೆಟ್ರೋಲ್ ಒದಗಿಸುತ್ತಿದ್ದಾರೆ.

mahadeva5

ಮಹದೇವ ಅವರೇ ಹೇಳುತ್ತಿದ್ದಂತೆ ಬೆಂಗಳೂರಿನಲ್ಲಿ ಸ್ಮಶಾನದ ಕೊರತೆಯಿಂದಾಗಿ ಕೆಲವೊಂದು ಬಾರಿ ಇಂದೇ ಸಮಾಧಿಯಲ್ಲಿ ಏಳರಿಂದ ಎಂಟು ಶವಗಳನ್ನು ಹೂಳಬೇಕಾದ ಅನಿವಾರ್ಯ ಸಂದರ್ಭಗಳೂ ಬಂದಿವೆ. ಮನುಷ್ಯರಿಗೆ ಉಸುರಿದ್ದಾಗ ಅಷ್ಟು ಆಸ್ಥೆಯನ್ನು ತೋರುವ ಜನರು ಅದೇ ಉಸಿರು ಹೋದಾಗ ಬಹಳ ತಾತ್ಸಾರಂದಿಂದ ನೋಡುತ್ತಾರೆ. ಆದರೆ ನಮಗೆ ಸತ್ತವರ ಘನತೆ ಮುಖ್ಯವಾಗುವುದಿಲ್ಲ. ನಾವು ಪ್ರತಿಯೊಂದು ಶವವನ್ನು ನಮ್ಮ ಬಂಧುಗಳೇ ಎನ್ನುವಂತೆ ನೋಡುತ್ತೇವೆ ಹಾಗಾಗಿ ಶವಗಳನ್ನು ಹೂಳುವಾಗ ಕೈಗವಸುಗಳನ್ನು ಧರಿಸಿದರೆ ಆದು ಆ ಅಗಲಿದ ಜೀವಕ್ಕೆ ತೋರಿಸುವ ಅಗೌರವ ಎಂದೇ ನಾವು ಭಾವಿಸುತ್ತೇವೆ. ಹಾಗಾಗಿ ಆ ಮೃತ ದೇಹಗಳು ಕೊಳೆತವಾಗಿದ್ದರೂ ಅಥವಾ ಎಂತಹ ಕೆಟ್ಟ ಸ್ಥಿತಿಯಲ್ಲಿದ್ದರೂ ಅವುಗಳೆಲ್ಲವೂ ಗೌರವಕ್ಕೆ ಅರ್ಹವಾಗಿರುವ ಕಾರಣ ಅವುಗಳನ್ನು ಘನತೆಯಿಂದ ಸಮಾಧಿ ಮಾಡುತೇವೆ ಎಂದಿದ್ದರು.

ಪ್ರತಿದಿನವೂ ನೂರಾರು ಹೆಣಗಳನ್ನು ನೋಡಿ ನಿಮಗೆ ಭಯವಾಗುವುದಿಲ್ಲವೇ? ಎಂದು ಯಾರೋ ಅವರನ್ನು ಪ್ರಶ್ನಿಸಿದಾಗ, ಬಹಳ ಮಾರ್ಮಿಕವಾಗಿ ನಕ್ಕು, ನಿಜ ಹೇಳಬೇಕೆಂದರೆ, ಸತ್ತರ ಮುಖ ನೋಡುವುದಕ್ಕಿಂತಲೂ ಬದುಕಿರುವವರ ಮುಖವನ್ನು ನೋಡುವುದಕ್ಕೆ ನಮಗೆ ಹೆಚ್ಚು ಭಯವಾಗುತ್ತದೆ. ಬದುಕಿರುವವರ ಮುಖದಲ್ಲಿ ರೋಷ, ದ್ವೇಷ, ಅಸೂಯೆ, ಅಸಹನೆಗಳು ಎದ್ದು ಕಾಣುತ್ತಿರುತ್ತದೆ. ಆದರೆ ಸತ್ತವರ ಮುಖದಲ್ಲಿ ಕಾಣುವುದು ಕೇವಲ ಶಾಂತಿ ಮಾತ್ರ ಎನ್ನುವಾಗ ಜೀವನದ ಕಠು ಸತ್ಯವನ್ನು ಇದಕ್ಕಿಂದಲೂ ಮಾರ್ಮಿಕವಾಗಿ ಹೇಳಲು ಸಾಧ್ಯವಿಲ್ಲ ಎಂಬುದು ಸತ್ಯ.

ಅನಾಥ ಶವಗಳ ಅಂತ್ಯ ಸಂಸ್ಕಾರಕ್ಕೆಂದೇ ಮೀಸಲಾಗಿರಿಸಿ, ಫೆಬ್ರವರಿ 2018 ರಲ್ಲಿ ತ್ರಿವಿರಾಮ ಮಹಾದೇವ ಸೇವಾ ಟ್ರಸ್ಟ್ ಎಂಬ ಟ್ರಸ್ಟ್ ಅನ್ನು ನೋಂದಾಯಿಸಿ ಅದರ ಮೂಲಕ ಬೆಂಗಳೂರಿನಲ್ಲಿ ಗುರುತಿಸಲಾಗದ ಮೃತ ದೇಹಗಳಿಗೆ ಯೋಗ್ಯ ಮತ್ತು ಗೌರವಾನ್ವಿತ ಸಮಾಧಿಯನ್ನು ಒದಗಿಸುವ ಉದ್ದೇಶವನ್ನು ಹೊಂದಿದ್ದು ಈ ಚಟುವಟಿಕೆಗಳಿಗೆ ಸಾರ್ವಜನಿಕರು ಸಹಾ ಯಥಾಶಕ್ತಿ ಬೆಂಬಲವನ್ನು ನೀಡಲು ಅನುಕೂಲವಾಗುವಂತೆ ಬ್ಯಾಂಕ್ ಖಾತೆಯನ್ನು ತೆರೆದಿದ್ದು ಅದರ ವಿವರಗಳು ಈ ರೀತಿಯಾಗಿದೆ.

ತ್ರಿವಿಕ್ರಮ ಮಹಾದೇವ ಸೇವಾ ಟ್ರಸ್ಟ್
ಬ್ಯಾಂಕ್: ಎಸ್ಬಿಐ, ಮಾರುಕಟ್ಟೆ ಶಾಖೆ
ಎ/ಸಿ : 37764012561
ಪ್ರಕಾರ: ಪ್ರಸ್ತುತ ಖಾತೆ

ನಾನಾ ಕಾರಣಗಳಿಂದಾಗಿ ಹತ್ತಿರದ ಬಂಧು ಮಿತ್ರರೇ ತಮ್ಮ ಸಂಬಂದೀಕರ ಶವಗಳನ್ನು ಅನಾಧವಾಗಿಸುವಾಗ ಅವರಿಗೆ ಸಂಬಂಧವೇ ಪಡದ ಲಕ್ಷಾಂತರ ಶವಗಳಿಗೆ ಸಲ್ಲಬೇಕಾದ ಅಂತಿಮ ಸಂಸ್ಕಾರಗಳನ್ನು ನೀಡುತ್ತಿದ್ದ ಶ್ರೀ ಮಹದೇವ್ ಅವರ ಈ ಸೇವೆ ನಿಜಕ್ಕೂ ಅದ್ಭುತ ಮತ್ತು ಅನುಕರಣಿಯವೇ ಸರಿ. ಅಂತಹ ಶ್ರಮಜೀವಿಯ ಆತ್ಮಕ್ಕೆ ಭಗವಂತನು ಸದ್ಗತಿಯನ್ನು ನೀಡಲಿ ಮತ್ತು ಅವರ ಈ ಸೇವೆಗಳು ಇನ್ನೂ ಹತ್ತು ಹಲವಾರು ಜನರಿಗೆ ಪ್ರೇರಣಾದಾಯಕವಾಗಲಿ ಎಂದು ನಾವೂ ನೀವು ಪ್ರಾರ್ಥಿಸುವುದಲ್ಲದೇ, ಅಂತಹ ಮಹ್ತತ್ಕಾರ್ಯವನ್ನು ಹಾಗೆಯೇ ಮುಂದುವರಿಸಿಕೊಂಡು ಹೋಗಲು ಮುಂದಾಗಿರುವ ಅವವರ ಮಕ್ಕಳಿಗೆ ಯಥಾ ಶಕ್ತಿ ಆರ್ಥಿಕಸಹಾಯ ಮಾಡುವ ಮೂಲಕ ನಮ್ಮ ಅಳಿಲು ಸೇವೆಯನ್ನು ಮಾಡಬಹುದಲ್ಲವೇ?

ಏನಂತೀರೀ?
ನಿಮ್ಮವನೇ ಉಮಾಸುತ

ಸೂಚನೆ : ವಯಕ್ತಿಕವಾಗಿ ಶ್ರೀ ಮಹದೇವ್ ಅಥವಾ ಅವರ ಮಕ್ಕಳ ಪರಿಚಯ ನನಗಿಲ್ಲವಾದರು ಅವರ ಕುರಿತಾಗಿ ಮಾಹಿತಿಯನ್ನು ಸಂಗ್ರಹಿಸುವಾಗ ಅವರು Crowd Fund raising Milaap & Face Book ನಲ್ಲಿ ಕೊಟ್ಟಿದ್ದ Bank Detailsಗಳನ್ನು ನೀಡಿರುತ್ತೇನೆ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s