ನ್ಯಾಯಾಧೀಶ: ನಿನ್ನ ಹೆಸರೇನು?
ಹುಡುಗ: ಆಜಾದ್!
ನ್ಯಾಯಾಧೀಶ: ತಂದೆಯ ಹೆಸರು?
ಹುಡುಗ: ಸ್ವಾತಂತ್ರ
ನ್ಯಾಯಾಧೀಶ: ಮನೆ ಎಲ್ಲಿದೆ?
ಹುಡುಗ: ಸೆರೆಮನೆಯೇ ನನಗೆ ಮನೆ!
ಇದು ನಾಟಕವೊಂದರ ಸಂಭಾಷಣೆಯಲ್ಲ. ಭಾರತ ಮಾತೆಗೆ ಜೈಕಾರ ಕೂಗಿ, ಬಿಳಿಯರ ವಿರುದ್ಧ ಎದ್ದುನಿಂತ ಹದಿನೈದರ ಪೋರನೊಬ್ಬನ ದಿಟ್ಟ ಉತ್ತರ. ಹೌದು. ಚಂದ್ರಶೇಖರ್ ಆಜಾದ್ ಸ್ವಾತಂತ್ರ್ಯ ಹೋರಾಟಕ್ಕಿಳಿದಾಗ ಆತನಿಗಿನ್ನೂ ಹದಿನೈದೂ ದಾಟಿರಲಿಲ್ಲ. ಬ್ರಿಟೀಷರ ಭಿಕ್ಷೆಗೆ ಕೈಚಾಚದೇ ವಂದೇ ಮಾತರಂ ಎನ್ನುತ್ತಾ ಹನ್ನೆರಡು ಚಡಿ ಏಟುಗಳನ್ನು ಸ್ವೀಕರಿಸಿದ.
ಇದರ ನಂತರ ಆತನಲ್ಲಿದ್ದ ರಾಷ್ಟ್ರೀಯತೆಯ ಭಾವ ಮತ್ತಷ್ಟು ಹೆಚ್ಚಾಯ್ತು. ಕ್ರಾಂತಿಕಾರ್ಯದಲ್ಲಿ ಸದಾ ಚಟುವಟಿಕೆಯಿಂದಿದ್ದ ರಾಮ್‌ಪ್ರಸಾದ್ ಬಿಸ್ಮಿಲ್ಲರನ್ನು ಭೇಟಿಯಾದ. ಇಲ್ಲಿಂದ ಪ್ರಾರಂಭವಾಯ್ತು ಚಂದ್ರಶೇಖರ್‌ನ ನಿಜವಾದ ಆಟ. ಕಾಕೋರಿ ಲೂಟಿ, ಸ್ಯಾಂಡರ್ಸ್ ಹತ್ಯೆ ಹೀಗೆ ಹಲವು ಮೊಕದ್ದಮೆಗಳಲ್ಲಿ ಆತನನ್ನು ಬ್ರಿಟೀಷರು ಹುಡುಕುತ್ತಿದ್ದರೂ ಆತ ಅವರ ಕೈಗೆ ಸಿಗಲೇ ಇಲ್ಲ! ಸೂರ್ಯ ಮುಳುಗದ ಸಾಮ್ರಾಜ್ಯಕ್ಕೆ ಸವಾಲೆಸೆದಿದ್ದ. ಯುವ ಕ್ರಾಂತಿಕಾರಿಗಳ ಪಾಲಿಗೆ ನಾಯಕನಾಗಿ ನಿಂತ. ಬಿಳಿಯರ ನಿದ್ದೆ ಕದ್ದಿದ್ದ!! ಆತ ಬ್ರಿಟೀಷರಿಂದ ಸದಾ ಒಂದು ಹೆಜ್ಜೆ ಮುಂದೆಯೇ ಇರುತ್ತಿದ್ದುದು.
ದುಷ್ಮನೋಂಕಿ ಗೋಲಿಯೋಂಕ ಹಮ್ ಸಾಮ್ನಾ ಕರೇಂಗೆ. ಆಜಾದ್ ಹೀ ರಹೇ ಹಮ್
ಚಂದ್ರಶೇಖರ ಆಜಾದ್ ಎಂದೇ ಹೆಚ್ಚು ಗುರುತಿಸಲ್ಪಡುವ ಚಂದ್ರಶೇಖರ ಸೀತಾರಾಮ್ ತಿವಾರಿಯವರು 1906ರ ಜುಲೈ 23ರಂದು ಮಧ್ಯಪ್ರದೇಶದ ಝಬುವಾ ಜಿಲ್ಲೆಯಲ್ಲಿರುವ ಭಾವ್ರಾ ಎಂಬ ಹಳ್ಳಿಯಲ್ಲಿ ಜನಿಸಿದರು. ಭಾರತದ ಬಹು ಪ್ರಮುಖ ಕ್ರಾಂತಿಕಾರಿಗಳಲ್ಲಿ ಒಬ್ಬರಾದ ಅವರನ್ನು ಭಗತ್ ಸಿಂಗ್‌ರ ಮಾರ್ಗದರ್ಶಕ, ಗುರು ಎಂದು ಪರಿಗಣಿಸಲಾಗಿದೆ.
ಶ್ರದ್ಧಾವಂತರಾಗಿದ್ದ ಆಜಾದ್ ಇತರರ ಒಳಿತಿಗಾಗಿ ಹೋರಾಡುವುದು ತಮ್ಮ ಧರ್ಮ ಎಂದು ನಂಬಿದ್ದರು. ಓರ್ವ ಯೋಧ ಎಂದಿಗೂ ಶಸ್ತ್ರವನ್ನು ತ್ಯಜಿಸಲಾರನೆಂಬುದು ಅವರ ಅಭಿಪ್ರಾಯವಾಗಿತ್ತು. 1919ರಲ್ಲಿ ಅಮೃತಸರದಲ್ಲಿ ನಡೆದ ಜಲಿಯನ್‌ವಾಲಾ ಬಾಗ್ ಹತ್ಯಾಕಾಂಡದ ಘಟನೆಯಿಂದ ಚಂದ್ರಶೇಖರ ಆಜಾದ್‌ರವರು ಮಾನಸಿಕವಾಗಿ ತೀವ್ರವಾಗಿ ಜರ್ಜರಿತರಾಗಿದ್ದರು. ಮಹಾತ್ಮಾ ಗಾಂಧಿಯವರು 1921ರಲ್ಲಿ ಅಸಹಕಾರ ಚಳುವಳಿಯನ್ನು ಹಮ್ಮಿಕೊಂಡಾಗ, ನಡೆದ ಪ್ರತಿಭಟನೆಗಳಲ್ಲಿ ಅವರು ಸಕ್ರಿಯವಾಗಿ ತೊಡಗಿಕೊಂಡಿದ್ದರು. ಈ ನಾಗರಿಕ ಶಾಸನಭಂಗಕ್ಕಾಗಿ ಅವರು ಬಂಧಿತರಾದುದಲ್ಲದೇ, ತಮ್ಮ ಹದಿನೈದನೇ ವಯಸ್ಸಿನಲ್ಲಿಯೇ ಶಿಕ್ಷೆಗೆ ಗುರಿಯಾದರು. ಮ್ಯಾಜಿಸ್ಟ್ರೇಟರು ಅವರ ಹೆಸರೇನೆಂದು ಕೇಳಿದಾಗ, ಅವರು ‘ಆಜಾದ್’ ಎಂದು ಹೇಳಿದರು. ಆಜಾದ್ ಎಂದರೆ ‘ಸ್ವತಂತ್ರ ವ್ಯಕ್ತಿ’ ಎಂದು ಅರ್ಥ. ಈ ಉದ್ಧಟತನಕ್ಕಾಗಿ ಅವರಿಗೆ ಹದಿನೈದು ಛಡಿಏಟುಗಳ ಶಿಕ್ಷೆಯನ್ನು ನೀಡಲಾಯಿತು. ಛಾಟಿಯಿಂದ ಹೊಡೆದ ಪ್ರತಿ ಏಟಿಗೂ ಯುವ ಚಂದ್ರಶೇಖರ ಭಾರತ್ ಮಾತಾ ಕಿ ಜೈ ಎಂದು ಘೋಷಣೆ ಮಾಡುತ್ತಿದ್ದರು. ಈ ಘಟನೆಯ ನಂತರ, ಚಂದ್ರಶೇಖರರಿಗೆ ಆಜಾದ್ ಎಂಬ ಬಿರುದು ಪ್ರಾಪ್ತವಾಯಿತಲ್ಲದೇ ಅವರು ಚಂದ್ರಶೇಖರ ಆಜಾದ್ ಎಂದೇ ಗುರುತಿಸಲ್ಪಡುತ್ತಿದ್ದರು.
ಅಸಹಕಾರ ಚಳುವಳಿ ಸ್ಥಗಿತಗೊಂಡ ನಂತರ, ಇನ್ನೂ ಹೆಚ್ಚಿನ ಆಕ್ರಮಣಶಾಲಿ ಹಾಗೂ ಉಗ್ರ ಕ್ರಾಂತಿಕಾರಿ ಆದರ್ಶಗಳಿಂದ ಆಕರ್ಷಿತರಾದ ಅಜಾದರು, ಯಾವುದೇ ಮಾರ್ಗದಿಂದಾದರೂ ಸಂಪೂರ್ಣ ಸ್ವಾತಂತ್ರ್ಯ ಪಡೆಯುವ ಧ್ಯೇಯಕ್ಕೆ ತಮ್ಮನ್ನು ಮುಡಿಪಾಗಿಡಲು ನಿರ್ಧರಿಸಿದರು. ಈ ನಿಟ್ಟಿನೆಡೆಗೆ ಮುಂದುವರೆಯುವ ಪ್ರಥಮ ಹೆಜ್ಜೆಯಾಗಿ ಅವರು ‘ಹಿಂದೂಸ್ತಾನ್ ಸೋಷಲಿಸ್ಟ್ ರಿಪಬ್ಲಿಕನ್ ಅಸೋಸಿಯೇಷನ್-HSRA’ ಎಂಬ ಸಂಘಟನೆಯನ್ನು ಆರಂಭಿಸಿದರಲ್ಲದೇ ಭಗತ್ ಸಿಂಗ್, ಸುಖದೇವ್, ಬಟುಕೇಶ್ವರ ದತ್ತ ಮತ್ತು ರಾಜಗುರುರಂತಹಾ ಕ್ರಾಂತಿಕಾರಿಗಳಿಗೆ ಮಾರ್ಗದರ್ಶಕರಾದರು. ಭಾರತಕ್ಕೆ ಸಂಪೂರ್ಣ ಸ್ವಾತಂತ್ರ್ಯ ದೊರಕಿಸಿಕೊಳ್ಳುವುದೇ HSRA ಸಂಘಟನೆಯ ಗುರಿಯಾಗಿತ್ತು. ಅಲ್ಲದೆ, ಸಮಾಜವಾದಿತತ್ವದ ಮೇಲೆ ಆಧಾರಿತವಾದ ನವೀನ ಭಾರತವನ್ನು ಕಟ್ಟುವ ಮಹದುದ್ದೇಶವನ್ನು ಹೊಂದಿತ್ತು. ಆಜಾದರು ಮತ್ತು ಅವರ ದೇಶಬಾಂಧವರು ಬ್ರಿಟಿಷರ ವಿರುದ್ಧ ಅನೇಕ ಕ್ರಾಂತಿಕಾರೀ ಪ್ರತಿಭಟನೆಗಳನ್ನು ಯೋಜಿಸಿ ಕಾರ್ಯಗತಗೊಳಿಸಿದ್ದರು. ಕಾಕೊರಿ ರೈಲು ದರೋಡೆ (1925), ವೈಸರಾಯ್‌ರ ರೈಲನ್ನು ಸ್ಫೋಟಿಸಲು ನಡೆಸಿದ ವಿಫಲ ಯತ್ನ (1926), ಮತ್ತು ಲಾಲಾ ಲಜಪತ ರಾಯ್‌ರನ್ನು ಕೊಂದುದರ ಪ್ರತೀಕಾರವಾಗಿ ಲಾಹೋರ್‌ನಲ್ಲಿ (1928) ಜಾನ್ ಪಾಯಂಟ್ಜ್ ಸಾಂಡರ್ಸ್‌ನನ್ನು ಗುಂಡು ಹಾರಿಸಿ ಕೊಂದಂತಹಾ ಅನೇಕ ಚಟುವಟಿಕೆಗಳಲ್ಲಿ ಆಜಾದರು ಪ್ರಮುಖ ಪಾತ್ರಧಾರಿಯಾಗಿದ್ದರು.
1921ನೆಯ ಇಸವಿ ಮಹಾತ್ಮ ಗಾಂಧಿಯವರ ನೇತೃತ್ವದಲ್ಲಿ ದೇಶದಾದ್ಯಂತ ಅಸಹಕಾರ ಚಳುವಳಿ ಪ್ರಾರಂಭವಾಯಿತು. ಬ್ರಿಟಿಷರೊಡನೆ ಸಹಕರಿಸಬೇಡಿ. ತೆರಿಗೆ ಕೊಡಬೇಡಿ, ಹೀಗೆ ಗಾಂಧೀಜಿ ಕರೆಯಿತ್ತರು. ಈ ಚಳುವಳಿ ಇಡೀ ಯುವ ಜನಾಂಗದಲ್ಲಿ ಸ್ವಾತಂತ್ಯ್ರಾಕಾಂಕ್ಷೆಯ ಕಿಚ್ಚನ್ನು ಹೊತ್ತಿಸಿತು.
ಆದರೆ ಚೌರಿ ಚೋರ ಎನ್ನುವ ಕಡೆ ಕೆಲವು ಜನರು ಅಹಿಂಸೆಯನ್ನು ಮರೆತರು. ಅನೇಕ ಮಂದಿ ಪೋಲಿಸರನ್ನು ಸುಟ್ಟರು. ಇದನ್ನು ಕೇಳಿದ ಗಾಂಧೀಜಿಗೆ ನೋವಾಯಿತು. “ದೇಶ ಇನ್ನೂ ಅಹಿಂಸಾಯುತ ಹೋರಾಟಕ್ಕೆ ಸಿದ್ಧವಾಗಿಲ್ಲ” ಎಂದು ಹೇಳಿ 1922 ಫೆಬ್ರವರಿಯಲ್ಲಿ ಚಳುವಳಿಯನ್ನು ನಿಲ್ಲಿಸಿ ಬಿಟ್ಟರು. ಇದರಿಂದ ಯುವಜನಾಂಗ ತೀವ್ರ ಹತಾಶೆಗೆ ಗುರಿಯಾಯಿತು.
ಹತಾಶರಾದ ಯುವಜನರಲ್ಲಿ ಕ್ರಾಂತಿಕಾರಿ ಭಾವನೆಗಳು ಬಲಗೊಂಡವು. ಬ್ರಿಟಿಷರದು ದೊಡ್ಡ ಸಾಮ್ರಾಜ್ಯ. ಅವರಿಗೆ ಸೈನ್ಯಗಳುಂಟು, ಪ್ರಬಲವಾದ ಆಯುಧಗಳುಂಟು. ಇಂತಹವರು ಒಳ್ಳೆಯ ಮಾತಿಗೆ ಭಾರತವನ್ನು ಬಿಟ್ಟು ಹೋಗುತ್ತಾರೆಯೇ? ಹೋರಾಟ ನಡೆಸಬೇಕು, ಅಗತ್ಯವಾದಾಗ ರಿವಾಲ್ವಾರ್, ಬಾಂಬ್ ಇಂತಹ ಅಯುಧಗಳನ್ನೂ ಉಪಯೋಗಿಸಬೇಕು, ಬ್ರಿಟಿಷರ ಎದೆ ನಡುಗುವಂತೆ ಮಾಡಬೇಕು, ಅವರು ಹೆದರಿಕೊಂಡು ಭಾರತವನ್ನು ಬಿಟ್ಟು ಹೋಗುವಂತೆ ಅವರಿಗೆ ತಲ್ಲಣವನ್ನು ಮಾಡಬೇಕು ಎಂದು ಕ್ರಾಂತಿಕಾರಿಗಳ ದೃಢನಂಬಿಕೆ. ಪರಿಣಾಮವಾಗಿ ಅಲ್ಲಲ್ಲಿ ಚದುರಿ ಹೋಗಿದ್ದ ಕ್ರಾಂತಿಕಾರಿ ದಳಗಳು ಸುಸಂಘಟಿತವಾಗಿ ತೊಡಗಿದವು. ಕಾಶಿ ಕ್ರಾಂತಿಕಾರರ ಪ್ರಮುಖ ಕೇಂದ್ರವಾಯಿತು. ಸಶಸ್ತ್ರ ಕ್ರಾಂತಿಯಿಂದ ನಾಡನ್ನು ಸ್ವತಂತ್ರ ಗೊಳಿಸುವುದನ್ನೇ ಮುಖ್ಯ ಗುರಿಯಾಗಿ ಉಳ್ಳ “ಹಿಂದೂಸ್ಥಾನ ರಿಪಬ್ಲಿಕನ್ ಅಸೊಸಿಯೇಷನ್” ಎಂಬ ಸಂಘವು ರೂಪುಗೊಂಡಿತು.
ಈ ಸಂಘವು 1925ರಲ್ಲಿ “ಕ್ರಾಂತಿಕಾರಿ” ಎಂಬ ಒಂದು ಪ್ರಣಾಳಿಕೆಯನ್ನು ಪ್ರಕಟಿಸಿ ತನ್ನ ರೂಪುರೇಷೆಗಳನ್ನು ಪ್ರಸಿದ್ಧಗೊಳಿಸಿತು. ಕಲ್ಕತ್ತಾದಿಂದ ಲಾಹೋರಿನವರೆಗೆ ಈ ಪ್ರಣಾಳಿಕೆ ಏಕ ಕಾಲದಲ್ಲಿ ಹೊರಬಂದು, ಸರಕಾರವನ್ನು ದಂಗುಬಡಿಸಿತು. ಭಾರತದ ಎಲ್ಲಾ ರಾಜ್ಯಗಳು ಸೇರಿ ಒಂದು ಒಕ್ಕೂಟವಾಗಬೇಕು, ಪ್ರಾಂತ್ಯಗಳಿಗೆ ತಮ್ಮ ತಮ್ಮ ಒಳ ಆಡಳಿತ ನಡೆಸಿಕೊಳ್ಳುವಷ್ಟು ಅಧಿಕಾರವಿರಬೇಕು, ಒಬ್ಬ ಮನುಷ್ಯ ಇನ್ನೊಬ್ಬನನ್ನು ದುಡಿಸಿಕೊಂಡು ಹಣ ಪಡೆಯುವುದು, ಅಧಿಕಾರ ನಡೆಸುವುದು ಹೋಗಬೇಕು, ಇವು ಈ ಸಂಘದ ಗುರಿಗಳೆಂದು ಸಾರಲ್ಪಟ್ಟಿತ್ತು.
ಈಗ ಕ್ರಾಂತಿಕಾರಿ ಪಕ್ಷಕ್ಕೆ ಇದ್ದ ಪ್ರಮುಖ ಕೊರತೆ ಹಣದ್ದಾಯಿತು. ಶಸ್ತ್ರಗಳನ್ನು ಸಂಗ್ರಹಿಸಲು, ಕಾರ್ಯಕರ್ತರನ್ನು ಪೋಷಿಸಲು, ಪ್ರಚಾರಕಾರ್ಯಗಳನ್ನು ನಡೆಸಲು ಹೀಗೆ ಪ್ರತಿಯೊಂದು ಕೆಲಸಕ್ಕೂ ಹಣ ಬೇಕಾಗುತ್ತಿತ್ತು. ಸದಸ್ಯರಿಂದ ಚಂದಾ ಸೇರಿಸಿಯಾಯಿತು. ಕೆಲವರು ತಮ್ಮ ತಮ್ಮ ಮನೆಗಳಿಂದ ಕದ್ದು, ಬೇಡಿ ತಂದುದಾಯಿತು. ಮಿತ್ರರಿಂದ ಹಣ ಕೂಡಿಸಿದ್ದೂ ಆಯಿತು. ಆದರೆ ಇವರು ಇಟ್ಟುಕೊಂಡಿದ್ದ ಗುರಿಗೆ, ಮಾಡಬೇಕಾದ ಕೆಲಸಕ್ಕೆ ಹತ್ತಾರು ಸಹಸ್ರ ರೂಪಾಯಿಗಳೇ ಬೇಕಾಗಿತ್ತು. ದೇಶದ ಕೆಲಸಕ್ಕೆ ಹಣ ಬೇಕು.
ಕೆಲವು ಗ್ರಾಮಗಳಲ್ಲಿ ಡಕಾಯಿತಿ ನಡೆಸಿದರು ಕ್ರಾಂತಿಕಾರಿಗಳು. ಡಕಾಯಿತಿಗಳಲ್ಲಿ ದೊರೆಯುತ್ತಿದ್ದ ನೂರಿನ್ನೂರು ರೂಪಾಯಿಗಳು ಪಕ್ಷದ ವಿಶಾಲ ಕಾರ್ಯಗಳಿಗೆ ಸಾಲುತ್ತಿರಲಿಲ್ಲ. ಮೇಲಾಗಿ ಸ್ವಾತಂತ್ರ್ಯ ಗಳಿಸುವುದಕ್ಕೆ ಆದರೂ ನಮ್ಮ ದೇಶದ ಜನರನ್ನೇ ಸುಲಿಗೆ ಮಾಡಬೇಕಾಗಿ ಬರುತ್ತಿದ್ದುದು ಹೃದಯವಂತರಾದ ಈ ಕ್ರಾಂತಿಕಾರಿಗಳಿಗೆ ಹಿಡಿಸುತ್ತಿರಲಿಲ್ಲ.
ಕ್ರಾಂತಿಕಾರಿಗಳಲ್ಲಿ ಪ್ರಮುಖ ಹೆಸರಾದ ರಾಮಪ್ರಸಾದ್ ಒಂದು ದಿನ ಷಾಜಹಾನ್ ಪುರದಿಂದ ಲಕ್ನೋವಿಗೆ ಹೋಗುತ್ತಿದ್ದ ರೈಲು ಗಾಡಿಯನ್ನು ಏರಿದ. ರೈಲು ನಿಂತ ನಿಲ್ದಾಣಗಳಲ್ಲೆಲ್ಲ ತಾನೂ ಕೆಳಗಿಳಿದು ಸುಮ್ಮನೆ ನಿಲ್ಲುತ್ತಿದ್ದ. ಒಂದು ಸ್ಟೇಷನ್ನಿನಲ್ಲಿ ಸ್ಟೇಷನ ಮಾಸ್ಟರನು ಹಣದ ಚೀಲವೊಂದನ್ನು ತಂದು ಗಾರ್ಡಿನ ಡಬ್ಬಿಯೊಳಕ್ಕೆ ಒಯ್ಯುತ್ತಿದ್ದುದನ್ನು ಗಮನಿಸಿದ. ಕೂಡಲೇ ಅವನು ಗಾರ್ಡಿನ ಡಬ್ಬಿಯ ಪಕ್ಕದ ಡಬ್ಬಿಗೆ ಬಂದು ಕುಳಿತ. ಪ್ರತಿ ಸ್ಟೇಷನ್ನಿನಲ್ಲಿಯೂ ಹೀಗೆ ಹಣದ ಚೀಲಗಳು ಬಂದು ಗಾರ್ಡಿನ ಡಬ್ಬಿಯಲ್ಲಿಟ್ಟಿದ್ದ ಒಂದು ಕಬ್ಬಿಣದ ಸಂದೂಕದೊಳಕ್ಕೆ ಬಿಳುತ್ತಿದ್ದವು. ಲಕ್ನೋನಲ್ಲಿ ಇಳಿದು ಗಮನಿಸಿದಾಗ ಇದಕ್ಕೆ ಯಾವ ವಿಶೇಷವಾದ ಭದ್ರತೆಯ ಏರ್ಪಾಡೂ ಇದ್ದಂತೆ ತೋರಲಿಲ್ಲ. ಅವನು ಓಡಿ ಹೋಗಿ ತಾನು ಬಂದ ಗಾಡಿ ಯಾವುದು ಎಂದು ವೇಳಾ ಪಟ್ಟಿಯಿಂದ ಅರಿತ. ಅದು ಎಂಟನೆಯ ನಂಬರ ಡೌನ್ ಗಾಡಿ.
“ಎಲ್ಲಾ! ಏನು ಇಲ್ಲವೆಂದರೂ ಇದರಲ್ಲಿ ಹತ್ತು ಸಾವಿರ ರೂಪಾಯಿಗಳಿಗೆ ಕಡಿಮೆಯಿಲ್ಲ. ಇಂತಹ ಸದವಕಾಶವನ್ನು ಬಿಡಬಾರದು” ಎಂದು ಸರಸರನೆ ನಿರ್ಧಾರಕ್ಕೆ ಬಂದ. ಮುಂದೆ ಕಾಕೋರಿಯಲ್ಲಿ ನಡೆದ ರೈಲು ಡಕಾಯಿತಿ ಪ್ರಕರಣಕ್ಕೆ ಇದು ಅಂಕುರಾರ್ಪಣೆಯಾದಂತಾಯಿತು.
ಕ್ರಾಂತಿಕಾರರ ಸಭೆ ಕೂಡಿತು. ಕಾಶಿ, ಕಾನ್ಪುರ, ಲಕ್ನೋ, ಆಗ್ರಾಗಳಿಂದ ಸದಸ್ಯರು ಬಂದಿದ್ದರು. ರಾಮಪ್ರಸಾದ ತಾನು ಆಲೋಚಿಸಿದ್ದನ್ನು ಸಭೆಗೆ ವಿವರಿಸಿದ. ನಾವು ರೈಲಿನಲ್ಲಿ ಬರುವ ಸರಕಾರಿ ಹಣದಲೂಟಿ ಮಾಡಿದರೆ ನಮ್ಮ ಚಳುವಳಿಗೆ ಬೇಕಾದ ಪ್ರಮಾಣದಲ್ಲಿ ಹಣ ದೊರೆಯುತ್ತದೆ. ಮೇಲಾಗಿ ನಮ್ಮ ಜನರ ಮೇಲೆಯೇ ನಾವು ಕೈ ಮಾಡುವ ಅವಶ್ಯಕತೆಯಿರುವುದಿಲ್ಲ. ಕಾರ್ಯವೇನೋ ಕಠಿಣವಾದುದು. ಬಹಳ ಜಾಗರೂಕತೆಯಿಂದ ನಿರ್ವಹಿಸಬೇಕಾದ ಕೆಲಸ. ಆದರೆ ನಮ್ಮ ಪ್ರಯತ್ನಗಳಿಗೆ ಸಕಲ ದೃಷ್ಟಿಗಳಿಂದಲೂ ತಕ್ಕ ಪ್ರತಿಫಲವಿದೆ. ಸರಕಾರಕ್ಕೂ ಸಹ ಕ್ರಾತಿಕಾರಿಗಳು ಬರಿ ಬಾಯ ಕ್ರಾಂತಿಕಾರರಲ್ಲ, ಕಾರ್ಯತಃ ಕ್ರಾಂತಿಕಾರಿಗಳು ಎಂಬುವುದನ್ನು ತಿಳಿಸಿಕೊಟ್ಟಂತಾಗುತ್ತದೆ ಎಂದ. ಸಭೆಗೆ ಆ ಸೂಚನೆ ಕೇಳಿ ಬಹಳ ಮೆಚ್ಚುಗೆಯಾಯಿತು. ಪರಾಕ್ರಮ ತೋರಿ ಮಾಡಬಹುದಾದ ಕಾರ್ಯಚರಣೆಗಳಿಗಾಗಿ ಕ್ರಾಂತಿಕಾರರು ಕಾತುರರಾಗಿದ್ದರು. ಹೆಚ್ಚು ಕಡಿಮೆ ಎಲ್ಲರೂ ಸರಿ, ಸರಿ, ಸೊಗಸಾದ ಅಲೋಚನೆ ಎಂದರು.
ಮೌನವಾಗಿ ಎಲ್ಲವನ್ನೂ ಕೇಳುತ್ತಾ ಕ್ರಾಂತಿಕಾರಿ ಆಶ್ಪಾಕ್ ಆ ಯೋಜನೆಯನ್ನು ಕುರಿತು ಪೂರ್ವಭಾವಿಯಾಗಿ ರಾಮಪ್ರಸಾದನಿಂದ ಕೇಳಿದಾಗಿನಿಂದ ಕೂಲಂಕುಷವಾಗಿ ಆಲೋಚಿಸಿದ್ದ. ಎಲ್ಲರೂ ಹೂಂ, ಹೂಂ ಎನ್ನುವವರೇ ಆದಾಗ ತಾನು ಸುಮ್ಮನಿದ್ದರಾಗದು ಎಂದುಕೊಂಡು, “ಮಿತ್ರರೇ ನನಗೇನೋ ಈ ಹೆಜ್ಜೆ ಆತುರದ್ದು ಎನಿಸುತ್ತದೆ. ರಾಮಪ್ರಸಾದ್ ಹೇಳಿದಂತೆ ಹಲವು ದೃಷ್ಟಿಗಳಿಂದ ಅದು ಒಳ್ಳೆಯದೇ ಇರಬಹುದು. ಆದರೆ ನಮ್ಮ ಬಲವೆಷ್ಟು, ನಾವು ಎದುರಿಸುತ್ತಿರುವ ಸರಕಾರದ ಬಲವೆಷ್ಟು ಎಂಬುವುದನ್ನು ಕುರಿತು ಯಾರೂ ಅಲೋಚಿಸಿದಂತಿಲ್ಲ. ಸಾಧಾರಣವಾದ ಡಕಾಯಿತಿ ನಡೆಸಿದಾಗ ದೊರೆಯುವ ಧನ ಕಡಿಮೆ. ಅಷ್ಟೇ ಮಟ್ಟಿಗೆ ದೇಶದಲ್ಲಿ ದಿನನಿತ್ಯ ನಡೆಯುವ ಹತ್ತಾರು ಘಟನೆಗಳಲ್ಲಿ ಒಂದಾಗಿ ಅದನ್ನು ಸರಕಾರ ಎಣಿಸುತ್ತದೆ. ಮಾಮೂಲಾಗಿ ಪೋಲಿಸರು ಏನು ಮಾಡುತ್ತಾರೆಯೋ ಅಷ್ಟನ್ನೇ ನಾವು ಎದುರಿಸಬೇಕಾಗುತ್ತದೆ. ಸರಕಾರದ ಖಜಾನೆಗೆ ಕೈಯಿಟ್ಟರೆ ಮಾತೇ ಬೇರೆ. ಇಡೀ ಆಡಳಿತ ಯಂತ್ರ ನಮ್ಮನ್ನು ಪತ್ತೇ ಮಾಡಿ ಹತ್ತಿಕ್ಕುವುದರಲ್ಲಿ ತೊಡಗುತ್ತದೆ. ನಮ್ಮ ಪಕ್ಷಕ್ಕೆ ಅದರಿಂದ ಪಾರಾಗುವಷ್ಟು ಬಲವಿಲ್ಲವೆಂಬುವುದನ್ನು ನನ್ನ ಅಭಿಪ್ರಾಯ. ಈ ಯೋಜನೆಯನ್ನು ಕೈಬಿಡುವುದು ಒಳ್ಳೆಯದು” ಎಂದು ಸ್ಪಷ್ಟವಾಗಿ ತಿಳಿಸಿದ.
ಉತ್ಸಾಹದ ಪ್ರವಾಹದಲ್ಲಿದ್ದ ಕ್ರಾಂತಿಕಾರರು ಈ ರೀತಿಯ ವಿವೇಕವನ್ನು ಕೇಳುವ ಸ್ಥಿತಿಯಲ್ಲಿರಲಿಲ್ಲ. ಬಹಳ ಹೊತ್ತು ಚರ್ಚೆ ಮಾಡಿ, ಆ ಯೋಜನೆಯನ್ನು ಒಪ್ಪಿ, ಅದರ ನಿರ್ವಹಣೆಯನ್ನು ರಾಮ ಪ್ರಸಾದನಿಗೆ ಬಿಟ್ಟರು. ಆಗ ರಾಮಪ್ರಸಾದ್, “ಮಿತ್ರರೇ, ಒಂದು ಮಾತು. ನಮ್ಮ ಮೇಲೆ ಗುಂಡು ಹಾರಿಸದ ಹೊರತು ನಾವಾಗಿಯೇ ಯಾರನ್ನೂ ಕೊಲೆ ಮಾಡಲು ಮುಂದಾಗಬಾರದು. ಸಾಧ್ಯವಿದ್ದಷ್ಟು ಮಟ್ಟಿಗೆ ರಕ್ತಪಾತವಾಗದಂತೆ ಕಾರ್ಯ ಸಾಗಬೇಕು ” ಎಂದು ಎಚ್ಚರಿಸಿದ. ಸಭೆ ಚದುರಿತು.
1925ನೆಯ ಇಸವಿ ಅಗಸ್ಟ್ ತಿಂಗಳ ಒಂಬತ್ತರಂದು ಸಂಜೆ ಷಾಹಜನಪುರದಿಂದ ಲಕ್ನೋವಿಗೆ ಹೊರಟಿದ್ದ ಎಂಟನೆಯ ನಂಬರ ಡೌನ್ ರೈಲುಗಾಡಿ ಕಾಕೋರಿ ಗ್ರಾಮದ ಬಳಿ ಸಾಗಿತ್ತು. ಸೂರ್ಯ ಸರಸರನೆ ಪಶ್ಚಿಮಕ್ಕೆ ಇಳಿಯುತ್ತಿದ್ದ. ತಟಕ್ಕನೆ ರೈಲಿನ ಸರಪಳಿ ಎಳೆಯಲ್ಪಟ್ಟಿತ್ತು. ವೇಗದಿಂದ ಸಾಗಿದ್ದ ಗಾಡಿ ಹಠಾತ್ತಾನೆ ನಿಂತಿತ್ತು. ಎರಡನೆಯ ತರಗತಿಯ ಡಬ್ಬಿಯೊಂದರಿಂದ ಅಶ್ಪಾಕ್ ಉಲ್ಲಾ ತನ್ನ ಸಂಗಡಿಗರಾದ ಶಚೀಂದ್ರ ಬಕ್ಷಿ ಮತ್ತು ರಾಜೇಂದ್ರ ಲಾಹಿರಿಯವರೊಂದಿಗೆ ನೆಲಕ್ಕೆ ಜಿಗಿದ. ಕಾಕೋರಿ ಕಾರ್ಯಕ್ರಮದಲ್ಲಿ ಅವನಿಗೆ ವಹಿಸಿದ್ದ ಮೊದಲ ಜವಾಬ್ದಾರಿಯು ಮುಗಿದಿತ್ತು.
ಆ ವೇಳೆಗೆ ಗಾರ್ಡು ತನ್ನ ಡಬ್ಬಿಯಿಂದ ಇಳಿದು ಸರಪಳಿ ಎಳೆದುದು ಯಾವ ಡಬ್ಬಿಯಲ್ಲಿ, ಏನಾಗಿದೆ ವಿಚಾರಿಸಲು ಹೊರಟಿದ್ದ. ಇಬ್ಬರು ಕ್ರಾಂತಿಕಾರರು ಅವನ ಮೇಲೆ ಬಿದ್ದರು. ಮುಖವನ್ನು ಕೆಳಕ್ಕೆ ಮಾಡಿ ಮಲಗಿಸಿ ಎದ್ದರೆ ತಲೆ ಹಾರಿಸುವುದಾಗಿ ಎಚ್ಚರಿಕೆ ನೀಡಿ ಪಿಸ್ತೂಲನ್ನು ಗುರಿಯಿಟ್ಟು ನಿಂತರು.
ಇನ್ನಿಬ್ಬರು ಕ್ರಾಂತಿಕಾರರು ಡ್ರೈವರನ್ನು ಎಂಜಿನ್ನಿನಿಂದ ಕೆಳಕ್ಕೆ ತಳ್ಳಿ ನೆಲಕ್ಕೆ ಬೀಳಿಸಿ ಕಾವಲು ನಿಂತರು. ಗಾಡಿಯ ಆ ತುದಿಯಲ್ಲಿ ಒಬ್ಬ, ಈ ತುದಿಯಲ್ಲಿ ಒಬ್ಬ ಕ್ರಾಂತಿಕಾರರು ನಿಂತು ತಮ್ಮ ಮೌಜರ್ ಪಿಸ್ತೂಲುಗಳಿಂದ ಗುಂಡುಹಾರಿಸಿದರು. ನಡುವೆ ಗಂಭೀರ ಧ್ವನಿಯಿಂದ “ಪ್ರಯಣಿಕರೇ, ಹೆದರಬೇಡಿ. ನಾವು ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವ ಕ್ರಾಂತಿಕಾರರು. ನಿಮ್ಮ ಜೀವಕ್ಕಾಗಲೀ, ಹಣಕ್ಕಾಗಲಿ, ಮಾನಕ್ಕಾಗಲೀ ಯಾವ ಅಪಾಯವೂ ಇಲ್ಲ. ಆದರೆ ತಲೆ ಹೊರಗೆ ಇಟ್ಟೀರಿ ಜೋಕೆ!” ಎಂದು ಘೋಷಿಸತೊಡಗಿದರು.
ಉಳಿದ ನಾಲ್ವರು ಕ್ರಾಂತಿಕಾರರು ಗಾರ್ಡ್ ಡಬ್ಬಿಯನ್ನು ಹತ್ತಿದರು. ಬಹಳ ಶ್ರಮದಿಂದ ಸಂದೂಕವನ್ನು ಹೊರ ತಳ್ಳಿದರು. ಅದಕ್ಕೆ ಭದ್ರವಾದ ಬೀಗ ಹಾಕಿತ್ತು. ಡ್ರೈವರನನ್ನಾಗಲೀ, ಗಾರ್ಡನಲ್ಲಾಗಲೀ ಕೀಲಿ ಇರಲಿಲ್ಲ. ಆ ಸಂದೂಕಕ್ಕೆ ಚೀಲಗಳನ್ನು ಹಾಕಲು ರಂಧ್ರವೊಂದಿತ್ತು. ಅದರಿಂದ ಏನನ್ನೂ ತೆಗೆಯಲು ಆಗುತ್ತಿರಲಿಲ್ಲ.
ಕ್ರಾಂತಿಕಾರರು ಸುತ್ತಿಗೆಗಳನ್ನೆತ್ತಿ ಅದನ್ನು ಒಡೆಯಲು ತೊಡಗಿದರು. ಹತ್ತೇಟು ಬಿದ್ದರೂ ತಡೆದುಕೊಂಡು ಜಗ್ಗದೆ ನಿಂತಿತು ಸಂದೂಕ. ಗಸ್ತು ತಿರುಗುತ್ತಿದ್ದ ಆಶ್ಪಾಕ್ ನೋಡಿದ. ದೇಹಬಲದಲ್ಲಿ ಆ ಕ್ರಾಂತಿಕಾರಿ ದಳದಲ್ಲಿ ಅವನೇ ಅಸಮಾನ. ತನ್ನ ಕೈಯಲ್ಲಿದ್ದ ಮೌಜರ ಪಿಸ್ತೂಲನ್ನು ಮನ್ಮಥ ನಾಥನಿಗೆ ಕೊಟ್ಟು ಸಂದೂಕದತ್ತ ಓಡಿದ. ಸುತ್ತಿಗೆ ಎತ್ತಿ ರಂಧ್ರವನ್ನು ದೊಡ್ಡದು ಮಾಡಲೆಂದು ಏಟಿನ ಮೇಲೆ ಎಟು ಜಡಿದ. ಅವನ ಏಟುಗಳ ಧ್ವನಿ ಸುತ್ತಲಿನ ನಿರ್ಜನ ಪ್ರದೇಶದಲ್ಲಿ ಢಣ್, ಢಣ್ ಎಂದು ಪ್ರತಿಧ್ವನಿತವಾಗತೊಡಗಿತು.
ಅಷ್ಟರಲ್ಲಿ ಲಕ್ನೋವಿನ ಕಡೆಯಿಂದ ರೈಲು ಗಾಡಿಯೊಂದು ಬರುತ್ತಿರುವ ಶಬ್ದ ಕೇಳೀಬಂತು. ಆತಂಕದಿಂದ ಆ ಕೆಲವು ಕ್ಷಣಗಳೇ ಯುಗಗಳಂತೆ ತೋರಿತು. ವೇಗವಾಗಿ ಬರುತ್ತಿದ್ದ ಆ ರೈಲು ಇದೇನನ್ನೂ ಗಮನಕ್ಕೆ ತಂದುಕೊಳ್ಳದೇ ಪಕ್ಕದ ಹಳ್ಳಿಗಳ ಮೇಲೆ ಓಡಿತು. ಮತ್ತೇ ಕಾರ್ಯಾಚರಣೆ ಆರಂಭವಾಯಿತು. . ಢಣ್ ! ಡಣ್ !! ಡಣಾರ !!! ಸಂದೂಕದ ರಂದ್ರದ ಮೇಲೆ ಬಲವಾದ ಏಟುಗಳು ಮೇಲೆ ಏಟುಗಳು ಬಿದ್ದು ಅದು ದೊಡ್ಡದಾಯಿತು. ಹಣದ ಚೀಲಗಳು ಹೊರ ಬಂದವು.
ಈ ನಡುವೆ ಗಾಡಿಯಲ್ಲಿದ್ದ ಪ್ರಯಾಣಿಕರು ಶಾಂತರಾಗಿಯೇ ಇದ್ದರು. ಪಿಸ್ತೂಲುಗಳಿದ್ದ ಆಂಗ್ಲ ಅಧಿಕಾರಿಗಳೂ ಇದ್ದರು ಅವರಲ್ಲಿ. ದೊಡ್ಡ ಡಕಾಯಿತರ ಗುಂಪು ದಾಳಿ ನಡೆಸಿದೆ ಎಂದು ಭಾವಿಸಿದ ಅವರು ಕಮಕ್ ಕಿಮಕ್ಕೆನ್ನದೆ ಕುಳಿತಿದ್ದರು. ಆದರೆ ಹೊಸದಾಗಿ ಮದುವೆಯಾಗಿ ಆ ರೈಲಿನಲ್ಲಿ ಹೆಂಡತಿಯನ್ನು ಕರೆತರುತ್ತಿದ್ದ ಒಬ್ಬ ತರುಣ, ಹೆಂಗಸರ ಡಬ್ಬಿಯನ್ನು ಕುಳಿತ್ತಿದ್ದ ಹೆಂಡತಿಗೆ ಏನಾದರೂ ಅಪಾಯವೊದಗಿತೋ ಎಂಬ ಯೋಚನೆಯಿಂದ ತಲೆಯನ್ನು ಒಮ್ಮೆ ಹೊರಚಾಚಿದ. ಕ್ರಾಂತಿಕಾರನೊಬ್ಬನ ಗುಂಡು ಅವನ ತಲೆಗೆ ಹೊಡೆದು ಅಲ್ಲಿಯೇ ಸತ್ತು ಬಿದ್ದ. ಇದಾವುದೂ ಇತರ ಕ್ರಾಂತಿಕಾರರ ಗಮನಕ್ಕೆ ಬರಲಿಲ್ಲ. ಸಂದೂಕ ಬಾಯಿ ಬಿಟ್ಟಿತು. ಹಣದ ಚೀಳಗಳು ಹೊರ ಬಂದಿದ್ದವು. ಅವುಗಳನ್ನು ಕಂಬಳಿಗಳಲ್ಲಿ ಕಟ್ಟಿ ಹೊತ್ತು ಲಕ್ನೋವಿನತ್ತ ನಡೆದರು!.
ಹತ್ತೇ ಹತ್ತು ಮಂದಿ ಧೈರ್ಯ, ಸಾಹಸ, ಶಿಸ್ತು ತಾಳ್ಮೆ ಮೇಲಾಗಿ ಅಮೋಘ ನಾಯಕತ್ವ ಹಾಗೂ ಅಪಾರ ಶ್ರದ್ಧೆಗಳಿಂದಾಗಿ ಮಹಾನ್ ಕಾರ್ಯಚರಣೆಯನ್ನು ಯಶಸ್ವಿಯಾಗಿ ಮುಗಿಸಿದರು. ಭಾರತದ ಸ್ವಾತಂತ್ರ್ಯ ಹೋರಾಟ ಹೋರಾಟದಲ್ಲಿ ಸಾಹಸದ ಅಧ್ಯಾಯವೊಂದನ್ನು ಬರೆದರು. ಆ ಹತ್ತು ಮಂದಿ ಕ್ರಾಂತಿವೀರರೆಂದರೆ ರಾಮಪ್ರಸಾದ್ ಬಿಸ್ಮಿಲ್ಲ, ರಾಜೇಂದ್ರ ಲಾಹಿರಿ, ಠಾಕೂರ ರೋಷನ್ ಸಿಂಹ, ಶಚೀಂದರ ಬಕ್ಷಿ, ಚಂದ್ರಶೇಖರ ಅಜಾದ್, ಕೇಶವ ಚಕ್ರವರ್ತಿ, ಗನವಾರಿಲಾಲ್, ಮುಕುಂದೀಲಾಲ್, ಮನ್ಮಥ ನಾಥ ಗುಪ್ತ ಮತ್ತು ಅಶ್ಪಾಕ್ ಉಲ್ಲಾ ಖಾನ್. ಮುಂದೆ ಕೆಲವುತಿಂಗಳುಗಳಲ್ಲಿ ಅಲ್ಲಲ್ಲಿ ಬಂಧನಗಳಾಗಿ ಹಲವು ವಿಚಾರಣೆ, ಮೊಕದ್ದೊಮ್ಮೆ ಮತ್ತು ಪೂರಕ ಮೊಕದ್ದೊಮ್ಮೆಗಳೊಂದಿಗೆ ರಾಮಪ್ರಸಾದ ಬಿಸ್ಮಿಲ್, ಅಶ್ಪಾಕ್ ಉಲ್ಲಾ ಖಾನ್, ರಾಜೇಂದ್ರ ಲಾಹಿರಿ, ರೋಶನ್ ಸಿಂಹ, ಈ ನಾಲ್ವರಿಗೆ ಮರಣದಂಡನೆಯಾಯಿತು. ಹಲವರಿಗೆ ಜೀವಾವಧಿ ಸಜೆ ಆಯಿತು. ದೇಶಕ್ಕಾಗಿ ತಮ್ಮ ಸ್ವಾರ್ಥವನ್ನು ಕಿಂಚಿತ್ತೂ ಲೆಕ್ಕಿಸದೆ ಈ ಯುವಕರು ಪ್ರಾಣಾರ್ಪಣೆ ಮಾಡಿದ್ದರು.
1931ರ ಫೆಬ್ರವರಿ 27ರಂದು, ಚಂದ್ರಶೇಖರ ಆಜಾದರು ಅಲಹಾಬಾದ್‌ನ ಆಲ್‌ಫ್ರೆಡ್ ಉದ್ಯಾನವನದಲ್ಲಿ . ವೀರಭದ್ರ ತಿವಾರಿ ಎಂಬ ತನ್ನ ಸ್ನೇಹಿತನೊಬ್ಬನ ಮೋಸದಿಂದ ಪೊಲೀಸರು ಆತನನ್ನು ಅಲಹಾಬಾದ್ ನ ಆಲ್ಫ್ರೆಡ್ ಪಾರ್ಕ್ ನಲ್ಲಿ ಸುತ್ತುವರಿದರು ತಮ್ಮ ಇಬ್ಬರು ಸಂಗಡಿಗರನ್ನು ಭೇಟಿ ಮಾಡಲು ಬಂದಾಗ ಅವರನ್ನು ಪೊಲೀಸರು ಗುರುತು ಹಿಡಿದರು, ಇಡೀ ಉದ್ಯಾನವನ್ನು ಸುತ್ತುವರಿದ ಪೊಲೀಸರು ಚಂದ್ರಶೇಖರ ಆಜಾದ್‌ರಿಗೆ ಶರಣಾಗಲು ಆದೇಶಿಸಿದರು. ಆಜಾದರು ಏಕಾಕಿಯಾಗಿ ಹೋರಾಡಿದರಲ್ಲದೇ ಮೂವರು ಪೊಲೀಸರನ್ನು ಕೊಂದರಾದರೂ ಅವರ ತೊಡೆಗೆ ಗುಂಡೇಟು ಬಿದ್ದಿತ್ತು. ತಮ್ಮಲ್ಲಿದ್ದ ಬಹುತೇಕ ಮದ್ದುಗುಂಡುಗಳೆಲ್ಲಾ ಖಾಲಿಯಾದ ನಂತರ, ತಪ್ಪಿಸಿಕೊಳ್ಳಲು ಬೇರೆ ದಾರಿಯಿಲ್ಲವೆಂದು ಮನಗಂಡ ಅವರು ಮೈ ಆಜಾದ್ ಹೂಂ. ಮೈ ಆಜಾದೀ ರಹೂಂಗಾ. ನಾನೆಂದೂ ಬ್ರಿಟೀಷರ ಕೈಗೆ ಸಿಕ್ಕಿಹಾಕಿಕೊಳ್ಳುವುದಿಲ್ಲಾ ಎಂದು ಹೇಳುತ್ತಲೇ ತಮ್ಮಲ್ಲಿ ಉಳಿದಿದ್ದ ಕೊನೆಯ ಗುಂಡಿನಿಂದ ತಲೆಗೆ ಗುಂಡು ಹೊಡೆದುಕೊಂಡರು. ಅಷ್ಟೊಂದು ಪೊಲೀಸರ ಮಧ್ಯೆ ಅಭಿಮನ್ಯುವಿನಂತೆ ಹೋರಾಡಿದ ಆಜಾದ್ ಅವರಿಗೆ ಎಷ್ಟೊಂದು ಸುವ್ಯವಸ್ಥಿತ ಜಾಗೃತಿ ಇತ್ತೆಂದರೆ ಅವರ ಪಿಸ್ತೂಲಿನಲ್ಲಿ ಒಂದಾದ ನಂತರ ಒಂದು ಗುಂಡುಗಳು ಖಾಲಿಯಾಗುತ್ತಿದ್ದರೂ ಕೊನೆಯ ಗುಂಡಿನ ಲೆಕ್ಕ ಕೂಡಾ ಖಚಿತವಾಗಿ ಜಾಗೃತಿಯಲ್ಲಿದ್ದು ಆ ಕೊನೆಯ ಗುಂಡಿನ ಅರಿವು ದೊರೆತ ತಕ್ಷಣದಲ್ಲಿ ಅದನ್ನು ತಮ್ಮ ತಲೆಗೆ ಗುರಿ ಇಟ್ಟುಕೊಂಡರು.
ತಮ್ಮನ್ನು ಯಾವುದೇ ಕ್ಷಣದಲ್ಲೂ ಬ್ರಿಟಿಷರಿಗೆ ಒಪ್ಪಿಸಿಕೊಳ್ಳದೆ ಬ್ರಿಟಿಷ್ ಹಿಂಸಾಚಾರ, ದಮನಕಾರಿ ಪ್ರವೃತ್ತಿಗಳಿಗೆ ಅದೇ ಮಾದರಿಯಲ್ಲಿ ಉತ್ತರ ನೀಡಿ ಇಡೀ ಬ್ರಿಟಿಷ್ ಸಾಮ್ರಾಜ್ಯಕ್ಕೆ ಸಿಂಹಸ್ವಪ್ನರಾಗಿದ್ದ ಚಂದ್ರಶೇಖರ್ ಆಜಾದ್ ಅವರ ಮಹಾನ್ ವ್ಯಕ್ತಿತ್ವ ನೆನೆದಾಗಲೆಲ್ಲಾ ದೇಶಭಕ್ತಿಯನ್ನು ಪ್ರಜ್ವಲಿಸುವ ಅಮರ ಜ್ಯೋತಿಯ ಉದ್ದೀಪನವಾದಂತೆನಿಸುತ್ತದೆ. ಹಿಂಸೆಗೆ ಹಿಂಸೆಯ ದಾರಿ ಹಿಡಿದರಾದರೂ ಅವರ ಬದುಕಿನಲ್ಲಿ ಜಾಗೃತವಾಗಿದ್ದ ಸುಸಂಸ್ಕೃತ ನಡಾವಳಿ, ಸ್ತ್ರೀಯರು ಮತ್ತು ಹಿರಿಯರ ಬಗ್ಗೆ ಗೌರವ, ಬಡಜನರ ಬಗ್ಗೆ ಅನುಕಂಪ, ದೇಶಕ್ಕಾಗಿ ಏನನ್ನೂ ಮಾಡಲು ಸಿದ್ಧವಿದ್ದ ಭಕ್ತಿನಿಷ್ಠ ಮನಸ್ಸುಗಳು ನಿರಂತರ ಮನನಯೋಗ್ಯವಾಗಿವೆ.
ಭಾರತೀಯ ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ದೇಶಭಕ್ತಿ ಪ್ರಜ್ವಲಿಸುವಂತೆ ಮಾಡುವ ಮತ್ತು ಮೈನವಿರೇಳಿಸುವ ಪ್ರಮುಖ ಚರಿತ್ರೆಯಾಗಿ ಚಂದ್ರಶೇಖರ ಅಜಾದ್ ಕುರಿತಾದ ಸುಂದರವಾದ ಪುಸ್ತಕವನ್ನು ತಮ್ಮ ಚೊಚ್ಚಲು ಕೃತಿಯಾಗಿ ಅಜೇಯ ಎಂಬ ಪುಸ್ತಕ ರೂಪದಲ್ಲಿ ಬಾಬು ಕೃಷ್ಣಮೂರ್ತಿಯವರು ಕಟ್ಟಿಕೊಟ್ಟಿದ್ದಾರೆ.
ಜುಲೈ 23. ಚಂದ್ರಶೇಖರ ಅಝಾದ್ ಅವರ ಜಯಂತಿ. 1931ರ ಫೆಬ್ರವರಿ 27 ಅವರು ಈ ದೇಶಕ್ಕಾಗಿ ತಮ್ಮನ್ನು ತಾವು ಸಮರ್ಪಿಸಿಕೊಂಡ ದಿನ. ದೇಶದ ಸ್ವಾತಂತ್ರ್ಯಕ್ಕಾಗಿ ತನ್ನನ್ನೇ ತಾನು ಅರ್ಪಿಸಿಕೊಂಡದ್ದಲ್ಲದೇ, ಅನೇಕ ದೇಶಭಕ್ತರಿಗೆ ಪ್ರೇರಣಾದಾಯಕರಾಗಿದ್ದ ಚಂದ್ರಶೇಖರ ಆಝಾದ್ ಅವರಿಗೆ ಭಕ್ತಿ ಪೂರ್ವಕ ಪ್ರಧಾನಗಳನ್ನು ಸಲ್ಲಿಸೋಣ.
ಜಾತಸ್ಯ ಮರಣಂ ಧೃವಂ. ಅಂದರೆ, ಹುಟ್ಟಿದ ಮನುಷ್ಯ ಸಾಯಲೇ ಬೇಕು. ಆದರೆ ಆತ ಸತ್ತ ನಂತರವೂ ಆತನ ಪ್ರಭಾವ ಎಲ್ಲರ ಮೇಲೆ ಬೀರುತ್ತದೆ ಎಂದಾದರೆ ಆತ ಮಾಹಾನ್ ವೀರ ಪುರುಷನೇ ಆಗಿರಬೇಕು ಮತ್ತು ಅಜೇಯನೇ ಆಗಿರಬೇಕು.
ಏನಂತೀರಿ?
ನಿಮ್ಮವನೇ ಉಮಾಸುತ