ಸ್ವದೇಶಿ ಜಾಗರಣ ಮಂಚ್ ಮತ್ತು ವಿಶ್ವಗುರು ಚಾರಿಟಬಲ್ ಟ್ರಸ್ಟ್ ಆಶ್ರಯದಲ್ಲಿ ಬೆಂಗಳೂರಿನ ವಿದ್ಯಾರಣ್ಯಪುರದಲ್ಲಿ ದಿನಾಂಕ 24.07.2022 ರಂದು ಶ್ರೀಮತಿ ಪ್ರತಿಮಾ ಅಡಿಗರ ಸಾರಥ್ಯದಲ್ಲಿ ಅತ್ಯಂತ ಯಶಸ್ವಿಯಾಗಿ ತಾರಸಿ ತೋಟ ಕಾರ್ಯಾಗಾರವನ್ನು ನಡೆಸಲಾಯಿತು.
ಭಾರತ ಕೃಷಿ ಪ್ರಧಾನವಾದ ದೇಶವಾಗಿದ್ದು ರೈತನೇ ಈ ದೇಶದ ಬೆನ್ನಲುಬಾಗಿದ್ದಾನೆ. ಹಾಗಾಗಿ ಸ್ಥಳೀಯ ಚಿಂತನೆ, ಸ್ಥಳೀಯ ಮಾರುಕಟ್ಟೆ ಮತ್ತು ದೇಶದ ಸ್ಥಳೀಯ ಆರ್ಥಿಕ ಅಭಿವೃದ್ಧಿಯು ಎಂಬ ಸ್ವದೇಶಿ ಪರಿಕಲ್ಪನೆಯು ನಮ್ಮ ದೇಶದ ಆರ್ಥಿಕತೆಯ ಅವಿಭಾಜ್ಯ ಅಂಗವಾಗಿದೆ. ಬ್ರಿಟಿಷ್ ವಸಾಹತುಶಾಹಿಯಿಂದ ಸ್ವಾತಂತ್ರ್ಯ ಪಡೆದ ನಂತರವೂ ನಮ್ಮ ದೇಶ ಸಂಪೂರ್ಣ ಆರ್ಥಿಕ ಸ್ವಾತಂತ್ರ್ಯಗಳಿಸದೇ ಇನ್ನೂ ಸಹಾ ಬಹುರಾಷ್ಟ್ರೀಯ ಕಂಪನಿಗಳ ಆಶ್ರಯದಲ್ಲೇ ಇರುವುದು ನಿಜಕ್ಕೂ ದುಃಖಕರವಾದ ಸಂಗತಿಯಾಗಿದೆ. ಇದರಿಂದಾಗಿ ಭಾರತೀಯ ನಮ್ಮ ಪೂರ್ವಜರು ನಡೆಸಿಕೊಂದು ಬರುತ್ತಿದ್ದ ಸ್ವದೇಶಿ ಜೀವನಶೈಲಿಯನ್ನು ಸಂಪೂರ್ಣವಾಗಿ ತ್ಯಜಿಸಿ ಪಾಶ್ಚಾತ್ಯ ರೀತಿಯ ಜೀವನ ಶೈಲಿಯನ್ನು ಅಳವಡಿಸಿಕೊಳ್ಳುವುದೇ ದೇಶದ ಆರ್ಥಿಕ ಪರಿಸ್ಥಿಗೆ ಮತ್ತು ಜನರ ಆರೋಗ್ಯದ ಮೇಲೆ ಬಹಳಷ್ಟು ದುಷ್ಪರಿಣಾಮಗಳನ್ನು ಉಂಟು ಮಾಡಿರುವುದನ್ನು ಮನಗಂಡೇ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮತ್ತೊಂದು ಅಂಗ ಸಂಸ್ಥೆಯಾಗಿ ಸ್ವದೇಶೀ ಜಾಗರಣ ಮಂಚ್ ನವೆಂಬರ್ 22, 1991 ರಂದು ನಾಗಪುರದಲ್ಲಿ ಅಸ್ತಿತ್ವಕ್ಕೆ ಬಂದಿತು. 1992 ರ ಜನವರಿ 12 ರಂದು ಸ್ವಾಮಿ ವಿವೇಕಾನಂದರ ಜನ್ಮದಿನದಂದು ಕೇಂದ್ರ ಸರ್ಕಾರದ ಆರ್ಥಿಕ ನೀತಿಯ ವಿರುದ್ಧ ಡಾ.ಎಂ.ಜಿ. ಬೋಕರೆ (ಮಾಜಿ ಉಪಕುಲಪತಿ, ನಾಗ್ಪುರ ವಿಶ್ವವಿದ್ಯಾಲಯ) ಅವರ ನೇತೃತ್ವದಲ್ಲಿ ಮೊದಲ ಬಾರಿಗೆ ಬೃಹತ್ ಅಭಿಯಾನ ಆರಂಭಿಸುವ ಮೂಲಕ ದೇಶದಲ್ಲಾಗುತ್ತಿರುವ ಆರ್ಥಿಕ ಸಾಮ್ರಾಜ್ಯಶಾಹಿಯ ವಿರುದ್ಧ ಹೋರಾಟ ಆರಂಭವಾಗಿ ಇಂದು ದೇಶಾದ್ಯಂತ ಜಿಲ್ಲಾ ಮಟ್ಟದವರೆಗಿನ ಉಪ ಘಟಕಗಳ ಅಖಿಲ ಭಾರತ ಜಾಲವನ್ನು ಹೊಂದಿದೆ. ಇದೇ ನಿಟ್ಟಿನಲ್ಲಿ ಸಾವಯವ ಕೃಷಿ ಮತ್ತು ಸ್ವದೇಶಿ ಉತ್ಪನ್ನಗಳನ್ನು ತಯಾರಿಸುವ ಕುಶಲಕರ್ಮಿಗಳನ್ನು ಪ್ರೋತ್ಸಾಹಿಸುವ ಸಲುವಾಗಿ ದೇಶದ ವಿವಿಧ ಭಾಗಗಳಲ್ಲಿ ಸ್ದದೇಶೀ ಮೇಳ ಮತ್ತು ಸಾವಯವ ಸಂತೆಗಳನ್ನು ನಡೆಸಿಕೊಂಡು ಬರುತ್ತಿದ್ದು ಬೆಂಗಳೂರಿನಲ್ಲಿ ಅದರಲ್ಲೂ ವಿಶೇಷವಾಗಿ ವಿದ್ಯಾರಣ್ಯಪುರದಲ್ಲೂ ಪ್ರತೀ ತಿಂಗಳ 2 ಮತ್ತು 4ನೇ ಭಾನುವಾರ ಸಾವಯವ ಸಂತೆಯನ್ನು ಕಳೆದ ಮೂರ್ನಾಲ್ಕು ವರ್ಷಗಳಿಂದಲೂ ಅತ್ಯಂತ ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದೆ.
ಹಿಂದಿನ ಕಾಲದಲ್ಲಿ ಬಹುತೇಕರ ಮನೆಗಳಲ್ಲಿ ದಿನ ನಿತ್ಯದ ದೇವರ ಪೂಜೆಗೆ ಹೂವು ಮತ್ತು ದೈನಂದಿನ ಬಳಕೆಗಾಗಿ ತರಕಾರಿ, ಹಣ್ಣುಗಳನ್ನು ಹೊರಗಿನಿಂದ ಕೊಳ್ಳದೇ ತಮ್ಮದೇ ಕೈತೋಟದಲ್ಲೋ ಇಲ್ಲವೇ ಮನೆಯ ಹಿಂದಿನ ಹಿತ್ತಲಿನಲ್ಲಿ ಬೆಳೆಸಿಕೊಂಡು ಆರೋಗ್ಯಕರವಾದ ಜೀವನವನ್ನು ನಡೆಸುತ್ತಿದ್ದರು. ಇನ್ನು ಅಡುಗೆ ಮನೆಯ ತ್ರಾಜ್ಯಗಳು ಮನೆಯಲ್ಲಿದ ದನಕರುಗಳಿಗೆ ಕಲಗಚ್ಚಿನ ಆಹಾರವಾಡರೆ, ಅವುಗಳ ಗೋಮೂತ್ರ ಮತ್ತು ಗೋಮಯಗಳು ಮನೆಯ ಪಕ್ಕದ ತಿಪ್ಪೆಯಲ್ಲಿ ಗೊಬ್ಬರವಾಗಿ ಸಾವಯವ ಕೃಷಿಗೆ ಮೂಲ ಉತ್ಪನ್ನವಾಗುತ್ತಿತ್ತು. ದುರಾದೃಷ್ಟವಶಾತ್, ನಗರೀಕರಣದ ಹೆಸರಿನಲ್ಲಿ ಕಾಡೆಲ್ಲಾ ನಾಡಾಗಿ, ಒಂದು ಚೂರೂ ಜಾಗವನ್ನು ಬಿಡದೇ ಮನೆಗಳನ್ನು ಕಟ್ಟಿಕೊಳ್ಳುವ ಕೆಟ್ಟ ಪರಿಪಾಠ ಬೆಳೆದ ಕಾರಣ ಗಿಡ ಮರಗಳನ್ನು ಬೆಳೆಯಲು ಸಾಥ್ಯವೇ ಇಲ್ಲ ಎಂಬ ಕುಂಟು ನೆಪ ಒಡ್ಡುವವರಿಗೆ ಅನುಕೂಲವಾಗಲೆಂದೇ, ತಮ್ಮ ಮನೆಯ ಮೇಲೆಯೇ ತಾರಸೀ ತೋಟದ ಮೂಲಕ ತಮಗೆ ಇಷ್ಟವಾದ ಹೂವು ಹಣ್ಣುಗಳನ್ನು ಬೆಳೆದುಕೊಳ್ಳುವುದರ ಮೂಲಕ ಸ್ವಾವಲಂಭಿ ಮತ್ತು ಸ್ವಾಭಿಮಾನಿ ಬದುಕನ್ನು ಸಾಗಿಸುವುದಲ್ಲದೇ ಆರೋಗ್ಯಪೂರ್ಣವಾಗಿ ಇರಬಹುದು ಎಂಬ ಕಾರಣದಿಂದಾಗಿಯೇ ಈ ತಾರಸೀ ತೋಟದ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದದಲ್ಲಿ ತರಭೇತಿದಾರರಾಗಿ ಬಂದಿದ್ದ ಶ್ರೀಮತಿ ಪ್ರತಿಮಾ ಆಡಿಗ ಮತ್ತು ಸ್ವದೇಶೀ ಜಾಗರಣ ಮಂಚ್ ಪ್ರಾಂತ ಸಂಪರ್ಕ ಪ್ರಮುಖರಾದ ಶ್ರೀ ಬಿ. ಆರ್. ಶ್ರೀನಿವಾಸ್ ಅವರುಗಳು ದೀಪವನ್ನು ಪ್ರಜ್ವಲಿಸಿ ಭಾರತ ಮಾತೆಗೆ ಪುಷ್ಪಾರ್ಚನೆಯನ್ನು ಮಾಡುವ ಮೂಲಕ ಆರಂಭವಾದ ಕಾರ್ಯಕ್ರಮ, ತಮ್ಮ ಸುಶ್ರಾವ್ಯವಾದ ಕಂಠಸಿರಿಯಿಂದ ಶ್ರೀಮತಿ ರೇಖಾರವರು ಭಾರತಮಾತೆಯನ್ನು ವಂದಿಸುವ ಗೀತೆಯೊಂದಿಗೆ ವಿದ್ಯುಕ್ತವಾಗಿ ಕಾರ್ಯಕ್ರಮ ಆರಂಭವಾಯಿತು.
ಆಡು ಮುಟ್ಟದ ಸೊಪ್ಪಿಲ್ಲ ಶ್ರೀಮತಿ ಪ್ರತಿಮಾ ಅಡಿಗ ಅವರು ಮಾಡದ ಕಾರ್ಯಗಳಿಲ್ಲ ಎಂದರೂ ಅತಿಶಯೋಕ್ತಿಯಲ್ಲ. ಈಗಾಗಲೇ ನಾಡಿನಾದ್ಯಂತ ಉದಯ ಟಿವಿ, ಸುವರ್ಣ ಟಿವಿ, ಈಟಿವಿ ಮುಂತಾದ ಜನಪ್ರಿಯ ಟಿವಿ ಚಾನೆಲ್ಗಳಲ್ಲಿ ಕಳೆದ 18 ವರ್ಷಗಳಿಂದಲೂ ಸುಮಾರು 2500 ಕ್ಕೂ ಹೆಚ್ಚು ಅಡುಗೆಯ ಕುರಿತದ ಸಂಚಿಕೆಗಳನ್ನು ನಡೆಸಿಕೊಡುವ ಮೂಲಕ ಜನಪ್ರಿಯರಾಗಿರುವುದಲ್ಲದೇ, ಕಳೆದ 8 ವರ್ಷಗಳಿಂದಲೂ ತಾರಸಿ ತೋಟಗಾರಿಕೆ ಕ್ಷೇತ್ರದಲ್ಲಿ ವಿಶೇಷವಾದ ಅನುಭವವನ್ನು ಪಡೆದು, ನಿಮ್ಮ ಊಟವನ್ನು ನೀವೇ ಬೆಳೆಯಿರಿ ಎಂಬ ಅಭಿಯಾನದ ಮೂಲಕ ನಾಡಿನಾದ್ಯಂತ ಮನೆಮಾತಾಗಿರುವ ಶ್ರೀಮತಿ ಪ್ರತಿಮಾ ಅವರ ಸಂಕ್ಷಿಪ್ತ ಪರಿಚಯವನ್ನು ಮಾಡಿಕೊಡುವ ಜೊತೆಗೆ ಸ್ವದೇಶೀ ಜಾಗರಣ ಮಂಚ್ ಮತ್ತು ಇಂದಿನ ಕಾರ್ಯಾಗಾರದ ಮೂಲ ಉದ್ದೇಶವನ್ನು ತಿಳಿಸುವುದರೊಂದಿಗೆ ಕಾರ್ಯಾಗಾರವನ್ನು ಅಧಿಕೃತವಾಗಿ ಆರಂಭಿಸಲಾಯಿತು.
ಕಳೆದ ಒಂದು ತಿಂಗಳಿನಿಂದಲೂ ಈ ಕಾರ್ಯಾಗಾರದ ಕುರಿತಾಗಿ ಸಾಮಾಜಿಕ ಜಾಲತಾಣಗಳಲ್ಲಿ ವಿಷಯವನ್ನು ತಲುಪಿಸಿದ್ದ ಕಾರಣ 100 ಕ್ಕೂ ಮಿಗಿಲಾದ ಶಿಭಿರಾರ್ಥಿಗಳು ಈ ಕಾರ್ಯಾಗಾರದಲ್ಲಿ ಭಾಗವಹಿಸಿ ಇಡೀ ಸಭಾಂಗಣ ತುಂಬಿ ತುಳುಕುತ್ತಿದ್ದದ್ದು ಆಯೋಜಕರ ಉತ್ಸಾಹವನ್ನು ಇಮ್ಮಡಿ ಗೊಳಿಸಿತ್ತು. ಅಲ್ಲಿಂದ ಸುಮಾರು 3 ಗಂಟೆಗಳ ಕಾಲ ನಿರರ್ಗಳವಾಗಿ
- ಅಡುಗೆ ಮನೆಯ ತ್ಯಾಜ್ಯದಿಂದಲೇ ವಿವಿಧ ಬಗೆಯ ಒಣ ಮತ್ತು ಹಸೀ ಸಾವಯವ ಗೊಬ್ಬರ ತಯಾರಿಸುವ ವಿಧಾನಗಳು
- ಮನೆಯಲ್ಲೀ ಇರುವ ತ್ರಾಜ್ಯದಿಂದಲೇ ಮಿಶ್ರ ಗೊಬ್ಬರದ ತಯಾರಿಕೆ
- ಮಣ್ಣು, ಮಿಶ್ರಗೊಬ್ಬರ ಮತ್ತು ಜೈವಿಕ ಕಿಣ್ವಗಳ ಸಮಪ್ರಮಾಣದ ಸಂಯೋಜನೆಯ ಮಿಶ್ರಣದ ಮೂಲಕ ಗೊಬ್ಬರದ ತಯಾರಿಕೆ
- ಮನೆಯಲ್ಲಿಯೇ ಹಣ್ಣುಗಳು, ತರಕಾರಿಗಳು ಮತ್ತು ಔಷಧೀಯ ಸಸ್ಯಗಳನ್ನು ಬೆಳೆಯುವ ವಿಧಾನಗಳು
- ನಮ್ಮ ಬೆಂಗಳೂರಿನ ಹವಾಮಾನಕ್ಕೆ ಎಂತಹ ಸಸ್ಯಗಳು ಉತ್ತಮ ಮತ್ತು ಅದನ್ನು ಬೆಳೆಯುವ ವಿಧಾನ
- ಗಿಡಗಳಿಗೆ ಕೀಟನಾಶಕವಾಗವಲ್ಲಂತಹ ಜೀವಾಮೃತದ ತಯಾರಿಕೆ
ಹಾಗೆಯೇ ಮನೆಯಲ್ಲಿಯೇ ಬಳಸಿ ಬಿಸಾಡುವ ನಿಂಬೇಹಣ್ಣು, ಕಿತ್ತಳೇ, ಮೂಸಂಬಿ ಸಿಪ್ಪೆಗಳೊಂದಿಗೆ ಕಿಂಚಿತ್ ಬೆಲ್ಲ ಮತ್ತು ಈಸ್ಟ್ ಸೇರಿಸಿ ಬಚ್ಚಲು ಮನೆಯನ್ನು ಶುದ್ಧೀಕರಿಸುವ ಕ್ಲೀನರ್ ತಯಾರಿಸುವ ವಿಧಾನ ಎಲ್ಲರ ಮನ ಸೂರೆಗೊಂಡಿತು. ಅಪೀ ಸ್ವರ್ಣಮಯೀ ಲಂಕಾ ನಮೇ ಲಕ್ಷ್ಮಣ ರೋಚತೇ, ಜನನೀ ಜನ್ಮ ಭೂಮಿಶ್ಚ ಸ್ವರ್ಗಾದಪೀ ಗರೀಯಸೀ ಎಂದು ಪ್ರಭು ಶ್ರೀರಾಮ ತನ್ನ ತಾಯ್ನಾಡಿನ ಬಗ್ಗೆ ಹೇಳಿದ ರೂಪದಲ್ಲೇ ಶ್ರೀಮತಿ ಪ್ರತಿಮಾ ಆಡಿಗರೂ ಸಹಾ, ಎಲ್ಲೇ ಇರಿ ಹೇಗೇ ಇರಿ ಎಂದೂದೂ ಭಾರತೀಯ ಸಂಸ್ಕಾರ, ಸಂಪ್ದದಾಯ ಮತ್ತು ಆಹಾರ ಪದ್ದತಿಗಳನ್ನು ಮರೆಯದಿರಿ ಎಂದು ಹೇಳುವ ಮೂಲಕ ತಮ್ಮ ಕಾರ್ಯಕ್ರಮವನ್ನು ಮುಗಿಸಿದಿದಾಗ 3 ಗಂಟೆ ಕಳೆದದ್ದೇ ಯಾರಿಗೂ ತಿಳಿಯದೇ, ಅಯ್ಯೋ ಇಷ್ಟು ಬೇಗೆ ಕಾರ್ಯಕ್ರಮ ಮುಗಿದು ಹೋಯಿತೇ ಎಂಬ ಉದ್ಗಾರ ತೆಗೆದದ್ದೂ ಕೇಳಿಬಂದಿತು. ಕಾರ್ಯಾಗಾರದ ಅಂಗವಾಗಿಯೇ ತಾರಸೀ ತೋಟಗಾರಿಕೆಗೆ ಸಂಬಂಧಿಸಿದಂತೆ ಕಾರ್ಯಕ್ರಮಕ್ಕೆ ಬಂದಿದ್ದವರ ಬಳಿ ಇದ್ದ ಪ್ರಶ್ನೆಗಳಿಗೆ ಅತ್ಯಂತ ತಾಳ್ಮೆಯಿಂದ ಲೀಲಾಜಾಲವಾಗಿ ಉತ್ತರವನ್ನು ನೀಡುವ ಮೂಲಕ ಎಲ್ಲರ ಮನವನ್ನು ಶ್ರೀಮತಿ ಪ್ರತಿಮಾ ಅಡಿಗರು ಗೆದ್ದರು ಎಂದರೆ ಸುಳ್ಳಲ್ಲ. ಇದೇ ಸಂಧರ್ಭದಲ್ಲಿ ಮದುಮೇಹಿಗಳಿಗೆ ರಾಮಬಾಣವಾಗಬಲ್ಲಂತಹ ನೆಲಬೇವು ಗಿಡವನ್ನು ಶ್ರೀಮತಿ ಅಡಿಗರು ಉಚಿತವಾಗಿ ಎಲ್ಲರಿಗೂ ಹಂಚಿದರು.
ಈ ಕಾರ್ಯಗಾರದಲ್ಲಿ ಭಾಗವಹಿಸಿದ್ದರೂ ಈಗಾಗಲೇ ತಮ್ಮ ಮನೆಯಲ್ಲಿ ಅತ್ಯುತ್ತಮವಾಗಿ ತಾರಸೀ ತೋಟದವನ್ನು ಮಾಡಿರುವ ಸ್ಥಳೀಯರಾದ ಶ್ರೀ ವಿನಯ್ ಭಟ್ ಅವರು ಆರಂಭದಲ್ಲಿ ಹವ್ಯಾಸವಾಗಿ ಆರಂಭಿಸಿದ ತಾರಸೀತೋಟ ಇಂದು ಸುಮಾರು 150-200 ಕುಂಡಗಳಲ್ಲಿ ವಿವಿಧ ಬಗೆಯ ಹೂವು ಹಣ್ಣುಗಳಲ್ಲದೇ ದಿನನಿತ್ಯಕ್ಕೆ ಅವಶ್ಯಕವಾಗಿರುವ ಬಹುತೇಕ ಎಲ್ಲಾ ರೀತಿಯ ಸೊಪ್ಪು ಮತ್ತು ತರಕಾರಿಗಳನ್ನು ಬೆಳೆಯುತ್ತಿರುವ ಬಗೆ ಮತ್ತು ಅದರ ಹಿಂದಿನ ಅವರ ರಸಾನುಭಾವವನ್ನು ಹಂಚಿಕೊಂಡಿದ್ದಲ್ಲದೇ ಆಸಕ್ತರು ಅವರ ಮನೆಗೆ ಭೇಟಿ ನೀಡಿ ಅವರ ತೋಟವನ್ನು ಪ್ರತ್ಯಕ್ಷವಾಗಿ ನೋಡಬಹುದೆಂದು ಆಹ್ವಾನಿಸಿದರು.
ಅಂದಿನ ಕಾರ್ಯಾಗಾರವನ್ನು ಅಚ್ಚುಕಟ್ಟಾಗಿ ನಡೆಸಿಕೊಟ್ಟ ಶ್ರೀಮತಿ ಪ್ರತಿಮಾ ಅಡಿಗರಿಗೆ ಮತ್ತು ತಮ್ಮ ತಾರಸಿ ತೋಟಡ ಅನುಭವವನ್ನು ಹಂಚಿ ಕೊಂಡ ಶ್ರೀ ವಿನಯ್ ಭಟ್ ಆವರಲ್ಲದೇ ಕಾರ್ಯಕ್ರಮದ ಯಶಸ್ಸಿಗೆ ವಿವಿಧ ರೀತಿಯಲ್ಲಿ ಸಹಕರಿಸಿದ ಶ್ರೀಯುತ ಪಿಳ್ಳಪ್ಪನವರಿಗೆ ಸ್ವದೇಶೀ ಜಾಗರಣ್ ಮಂಚ್ ಮತ್ತು ವಿಶ್ವಗುರು ಚಾರಿಟಬಲ್ ಟ್ರಸ್ಟ್ ಮೂಲಕ ಗೌರವದ ಸಮರ್ಪಣೆ ಮಾಡಲಾಯಿತು.
ಸ್ವದೇಶೀ ಜಾಗರಣ ಮಂಚ್ ನೊಂದಿಗೆ ಸಹವರ್ತಿಗಳಾಗಿ ಕಾರ್ಯಾಗಾರವನ್ನು ಆಯೋಜಿಸಿದ್ದ ವಿಶ್ವಗುರು ಚಾರಿಟಬಲ್ ಟ್ರಸ್ಟಿನ ಮುಖ್ಯಾಸ್ಥರಾದ ಶ್ರೀ ಧನಂಜಯ ಮುರ್ದಂಬಿಲ್ ಅವರು ತಮ್ಮ ಟ್ರಸ್ಟಿನ ಧ್ಯೇಯೋದ್ದೇಶಗಳು ಮತ್ತು ಕಾರ್ಯಚಟುವಟಿಗೆಗಳನ್ನು ಸಂಕ್ಷಿಪ್ತವಾಗಿ ವಿವರಿಸಿದ್ದಲ್ಲದೇ, ಕಾರ್ಯಕ್ರಮ ಯಶಸ್ವಿಯಾಗಲು ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಈಗ ವಂದನಾರ್ಪಣೆ ಸಲ್ಲಿಸಿದರು.
ಎಂದಿನಂತೆ ಶ್ರೀ ಶ್ರೀಕಂಠ ಬಾಳಗಂಚಿಯವರ ಉತ್ಸಾಹ ಭರಿತ ನಿರೂಪಣೆ ಮತ್ತು ತಮ್ಮ ವಿಶಿಷ್ಟ ಶೈಲಿಯ ಬೋಲೋ… ಭಾರತ್, ಮಾತಾ ಕೀ.. ಜೈ… ಉದ್ಘೋಷ ಬಂದಿದ್ದವರೆಲ್ಲರ ಮೈನೆವೆರೇಳಿಸಿದ್ದಲ್ಲೇ, ಭಾರತೀಯತೆಯ ಜಾಗೃತೆ ಗೊಳಿಸಿದರು.
ಶಾಂತಿ ಮಂತ್ರದೊಂದಿಗೆ ಕಾರ್ಯಕ್ರಮ ಅಧಿಕೃತವಾಗಿ ಪೂರ್ಣಗೊಂಡ ನಂತರ ಬಂದಿದ್ದರೆಲ್ಲರಿಗೂ ಶುಚಿ ರುಚಿಯಾದ ಸುಗ್ರಾಸವಾದ ಭೋಜನದ ವ್ಯವಸ್ಥೆ ಅತ್ಯಂತ ಮೆಚ್ಚುಗೆಗೆ ಪಾತ್ರವಾಯಿತು. ಕಾರ್ಯಾಗಾರದ ಮಧ್ಯದಲ್ಲಿ ಎಲ್ಲರಿಗೂ ಕುಡಿಯಲು ಕಷಾಯದವನ್ನು ಪ್ಲಾಸ್ಟಿಕ್ ಮಿಶ್ರಿತ ಪೇಪರ್ ಕಪ್ಪಿನಲ್ಲಿ ಕೊಟ್ಟದ್ದು ಮತ್ತು ಪ್ಲಾಸ್ಟಿಕ್ ಚಮಚಗಳನ್ನು ಬಳಸಿದ್ದರ ಕುರಿತಾಗಿ ಶ್ರೀಮತಿ ಪ್ರತಿಮಾರವರು ಅಸಮಧಾನವನ್ನು ವ್ಯಕ್ತಪಡಿಸಿ ಸಾಧ್ಯವಾದಷ್ಟೂ ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆಮಾಡಬೇಕು ಎಂಬ ಕಿವಿ ಮಾತು ಆಯೋಜಕರಿಗೆ ಎಚ್ಚರಿಕೆಯ ಗಂಟೆಯಾದದ್ದಂತು ಸುಳ್ಳಲ್ಲ.
ಸಾರ್ವಜನಿಕರಿಂದ ತಾರಸೀ ತೋಟದ ಕಾರ್ಯಾಗಾರಕ್ಕೆ ಬಂದ ಉತ್ತಮ ಪ್ರತಿಕ್ರಿಯಯನ್ನು ಶ್ಲಾಘಿಸಿ ಈ ಪ್ರಯತ್ನ ಕೇವಲ ಇದೊಂದೇ ದಿನಕ್ಕೆ ಸೀಮಿತವಾಗಿರದೇ, ಇದು ಸಹಾ ಕಾಲವೂ ನಿರಂತರವಾಗಿ ಇರಬೇಕೆಂದು ಆಯೋಜಕರು ಎಲ್ಲರ ಸಹಕಾರ ಕೋರಿದ್ದಲ್ಲದೇ, ಬಂದಿದ್ದದವರ ಎಲ್ಲರ ಜೊತೆ ತಾರಸೀ ತೋಟ ಮತ್ತು ಸ್ವದೇಶಿ ಉತ್ಪನ್ನಗಳ ಬಗ್ಗೆ ನಿರಂತರವಾದ ಮಾಹಿತಿಯನ್ನು ತಲುಪಿಸುವ ಸಲುವಾಗಿ ಪ್ರತ್ಯೇಕವಾದ ವಾಟ್ಸಾಪ್ ಗುಂಪನ್ನು ಆರಂಭಿಸಿ ಬಂದಿದ್ದ ಎಲ್ಲರನ್ನೂ ಆ ಗುಂಪಿಗೆ ಸೇರಿಸುವುದಾಗಿ ಹೇಳಿದ್ದು ಬಂದಿದ್ದವರೆಲ್ಲರ ಮೆಚ್ಚುಗೆಗೆ ಪಾತ್ರವಾಯಿತು.
ನಿಮ್ಮವನೇ ಉಮಾಸುತ
ನಾನು ಸಸ್ಯ ಪ್ರೇಮಿ, ಕಾರ್ಯಕ್ರಮ ಕೆ ಬರಲಾಗಿದೆ ಪರಿತಪಿಸಿ, ನಿಮ್ಮ ಮುಖೇನ ಕಾರ್ಯಕ್ರಮದ ಸವಿವರ ತಿಳಿದು ಸಂತೋಷ ಆಯ್ತು. ಮುಂದಿನ ಕಾರ್ಯಾಗಾರಕ್ಕೆ ಕಂಡಿತಾ ಬರುವೆ. Whatsapp group ge nanna number add madi.
ಧನ್ಯವಾದ.
LikeLike