ಸಾಹಿತ್ಯದ ಮೂಲಕ ಪರಿಸರದ ಜಾಗೃತಿ

parisara2

ಅಖಿಲ ಭಾರತೀಯ ಸಾಹಿತ್ಯ ಪರಿಷತ್ತು ಬೆಂಗಳೂರು, ಹೊಸಕೆರೆಹಳ್ಳಿ ಕೆರೆ ಸಂರಕ್ಷಣಾ ಸಮಿತಿ ಮತ್ತು ಶಾರದಾ ಪಬ್ಲಿಕ್ ಶಾಲೆಯ ಸಹಯೋಗದೊಂದಿಗೆ ಸಾಹಿತ್ಯದ ಮೂಲಕ ಪರಿಸರದ ಜಾಗೃತಿ ಕಾರ್ಯಕ್ರಮವನ್ನು ದಿ. 6.8.2022 ಬಹಳ ಅರ್ಥಪೂರ್ಣವಾಗಿ ಹಮ್ಮಿಕೊಳ್ಳಲಾಗಿದ್ದು ಆ ಕಾರ್ಯಕ್ರಮದ ಒಂದು ಝಲಕ್ ಇದೋ ನಿಮಗಾಗಿ

parisara1

ಖ್ಯಾತ ಕವಿಗಳಾದ ಶ್ರೀ ಹೆಚ್. ಎಸ್. ವೆಂಕಟೇಶ ಮೂರ್ತಿಗಳು, ಖ್ಯಾತ ಸಂಗೀತಗಾರರು ಮತ್ತು ತಾಳವಾದ್ಯ ವಿದ್ವಾಂಸರರಾದ ಶ್ರೀ ಆನೂರು ಅನಂತ ಕೃಷ್ಣ ಶರ್ಮ, ಅರಣ್ಯ ರಕ್ಷಣಾಧಿಕಾರಿಗಳಾದ ಶ್ರೀ ಗಣೇಶ ತಡಗಣಿ, ಸಂವಾದ ಮತ್ತು ವಿಕ್ರಮ ಪತ್ರಿಕೆಯ ಸಂಪಾದಕರಾದ ಶ್ರೀ ವೃಷಾಂಕ್ ಭಟ್, ಶಂಕರಪುರಂ ಭಾಗದ ಪರ್ಯಾವರಣ ಸಂಯೋಜಕರು ಮತ್ತು ಇಂದಿನ ಕಾರ್ಯಕ್ರಮಕ್ಕೆ ಅಗತ್ಯವಿದ್ದ ಗಿಡಗಳನ್ನು ಒದಗಿಸಿದ ಶ್ರೀ ಸತೀಶ್ ಹೂವಿನಹಳ್ಳಿ ಅವರ ಜೊತೆ ಹೊಸಕೆರೆಹಳ್ಳಿ ಕೆರೆ ಸಂರಕ್ಷಣಾ ಸಮಿತಿಯ ಉತ್ಸಾಹೀ ಕಾರ್ಯಕರ್ತರು, ಶಾರದಾ ಪಬ್ಲಿಕ್ ಶಾಲೆಯ ವ್ಯವಸ್ಥಾಪಕ ಮಂಡಳಿ ಮತ್ತು ಶಾಲಾ ವಿದ್ಯಾರ್ಥಿಗಳ ಜೊತೆಗೆ ಸ್ಥಳೀಯರೂ ಸೇರಿಕೊಂಡು ಬಹಳ ಉತ್ಸಾಹದೊಂದಿಗೆ ವಿವಿಧ ರೀತಿಯ ಹಣ್ಣುಗಳ ಗಿಡಗಳನ್ನು ಹೊಸಕೆರೆ ಹಳ್ಳಿ ಕೆರೆಯ ಪ್ರಾಂಗಣದಲ್ಲಿ ನೆಡುವ ಮೂಲಕ ಕಾರ್ಯಕ್ರಮ ಅಧಿಕೃತವಾಗಿ ಆರಂಭವಾಯಿತು.

DSC_0214

ಸುಮಾರು 50-60 ಸಸಿಗಳನ್ನು ನೆಟ್ಟನಂತರ ಕಾರ್ಯಕ್ರಮ ಶಾರದಾ ಶಾಲೆಯ ಪ್ರಾಂಗಣಕ್ಕೆ ಸ್ಥಳಾಂತರಗೊಂಡು, ಶಾಲೆಯ ಮಕ್ಕಳು ಕಾರ್ಯಕ್ರಮ ನಿರ್ವಿಘ್ನವಾಗಿ ನಡೆಯಲಿ ಎಂದು ವಿಘ್ನರಾಜನ ಪ್ರಾರ್ಥನೆ ಮಾಡುವ ಮೂಲಕ ಕಾರ್ಯಕ್ರಮ ವಿದ್ಯುಕ್ತವಾಗಿ ಆರಂಭವಾಯಿತು. ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಧ್ಯೇಯೋದ್ಧೇಶಗಳು ಮತ್ತು ಇಂದಿನ ಕಾರ್ಯಕ್ರಮದ ಕುರಿತಾಗಿ ಸ್ಥೂಲವಾಗಿ ಎಲ್ಲರಿಗೂ ಪರಿಚಯಿಸಿದ್ದಲ್ಲದೇ ವೇದಿಕೆಯ ಮೇಲೆ ಆಸೀನರಾಗಿದ್ದ ಎಲ್ಲಾ ಗಣ್ಯ ವ್ಯಕ್ತಿಗಳ ಪರಿಚಯವನ್ನು ಅಭಾಸಾಪಾ ಬೆಂಗಳೂರು ವಲಯದ ಸಹ ಸಂಯೋಜಕರಾದ ಶ್ರೀ ಭ. ರಾ. ವಿಜಯ ಕುಮಾರ್ ಅವರು ಸಭಿಕರಿಗೆ ಪರಿಚಯ ಮಾದಿಕೊಟ್ಟರು.

ಇಂದಿನ ಕಾರ್ಯಕ್ರಮೆದಲ್ಲಿ ಖ್ಯಾತ ಹಾಸ್ಯ ಸಾಹಿತಿಗಳು ಮತ್ತು ಅಭಾಸಾಪ ಬೆಂಗಳೂರು ಮಹಾನಗರದ ಅಧ್ಯಕ್ಷರಾದ ಶ್ರೀ ಎಂ. ಎಸ್. ನರಸಿಂಹಮೂರ್ತಿಗಳು ಇರಬೇಕಿತ್ತಾದರೂ, ಪೂರ್ವನಿಯೋಜಿತವಾದ ಹುಬ್ಬಳ್ಳಿಯ ಮೂರು ದಿನಗಳ ಕಾರ್ಯಕ್ರಮದಲ್ಲಿ ಭಾಗಿಗಳಾಗಿದ್ದ ಕಾರಣ, ಈ ಕಾರ್ಯಕ್ರಮ ಯಶಸ್ವಿಯಾಗಲೆಂದು ಅವರು ಕಳುಹಿಸಿಕೊಟ್ಟಿದ್ದ ಈ ಕೆಳಕಂಡ ಸಂದೇಶವನ್ನು ಕಾರ್ಯಕ್ರಮದ ನಿರೂಪಕರೇ ಪ್ರಸ್ತುತ ಪಡಿಸಿದರು.

ವೃಕ್ಷೋ ರಕ್ಷತಿ ರಕ್ಷಿತಃ ಈ ಮಾತು ಹೆಚ್ಚು ಪ್ರಸ್ತುತ ಆಗುತ್ತಿರುವ ಕಾಲಘಟ್ಟದಲ್ಲಿ ಇಂದು ನಾವಿದ್ದೇವೆ. ಯಾರೋ ಪುಣ್ಯಾತ್ಮರು‌ ನೆಟ್ಟ ವೃಕ್ಷ ಸಂಪತ್ತು ಇಂದು ನಮಗೆ ಜೀವವಾಯು ನೀಡುತ್ತಿದೆ. ಪರಿಸರ ಅನುದಿನ ಹಾನಿಗೆ ಒಳಗಾಗುತ್ತಿದೆ. ಈ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ನಮ್ಮ ಅಭಾಸಾಪ ಕೈಗೆತ್ತಿಕೊಂಡಿದೆ.

ಪರಿಸರ ಪ್ರಿಯರೂ, ಶ್ರೇಷ್ಠ ಕವಿ ಹಾಗೂ ಚಿಂತಕರಾದ ಗೆಳೆಯ ಶ್ರೀ ಎಚ್ಚೆಸ್ವಿ ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದು ಸಂತಸದ ವಿಷಯ. ಅರಣ್ಯದ ಬಗ್ಗೆ ಕಾಳಜಿ ಹೊಂದಿರುವ ಅಧಿಕಾರಿಗಳಾದ ಶ್ರೀ ಗಣೇಶ್ ಅವರ ಅಧ್ಯಕ್ಷತೆಯಲ್ಲಿ ಇಂದಿನ ಕಾರ್ಯಕ್ರಮ ನಡೆದಿದೆ ಅವರ ಜೊತೆ ಸಮಾಜ ಸೇವಕರಾದ ಶ್ರೀಮತಿ ಸವಿತಾ ಭಟ್ ಅವರು ನಮ್ಮ ಜೊತೆ ಇದ್ದಾರೆ. ಫಲ ನೀಡುವ ಗಿಡಗಳನ್ನು ಕರ್ಮಣ್ಯೇ ವಾಧಿಕಾರಸ್ತೆ ಮಾ ಫಲೇಶು ಕದಾಚನ ಸ್ಕೀಮಲ್ಲಿ ನೆಡಲಾಗಿದೆ. ವರ್ಷಕಾಲದಲ್ಲಿ ನೆಟ್ಟರೂ ಒಂದು ವರ್ಷಕಾಲ ಗಿಡಗಳ ಆರೈಕೆ ಬಹಳ ಮುಖ್ಯ. ಕಾರ್ಯಕ್ರಮ ಯಶಸ್ವಿ ಆಗಲಿ‌ ಎಂದು ಹಾರೈಸುತ್ತೇನೆ.

ಎಂ. ಎಸ್ .ನರಸಿಂಹಮೂರ್ತಿ/-

WhatsApp Image 2022-08-06 at 13.37.34 (1)

ಶಾರದಾ ಶ್ರೀ ಪಬ್ಲಿಕ್ ಶಾಲೆಯ ವ್ಯವಸ್ಥಾಪಕಿಯಾದ ಶ್ರೀಮತಿ ಪುಷ್ಪಲತ ಅವರು ಪರಿಸರದ ಕುರಿತಾಗಿ ತಮ್ಮ ಶಾಲೆ ಮತ್ತು ಶಾಲೆಯ ವಿಧ್ಯಾರ್ಥಿಗಳ ಕಾಳಜಿಯನ್ನು ಸವಿವರವಾಗಿ ವಿವರಿಸಿದ್ದಲ್ಲದೇ, ಸುತ್ತಮುತ್ತಲಿನ ಮಧ್ಯಮ ವರ್ಗದವರಿಗೆ ಕೈಗೆಟುಕುವ ಬೆಲೆಯಲ್ಲಿ ಅತ್ಯುನ್ನತ ಶಿಕ್ಷಣವನ್ನು ಒದಗಿಸುತ್ತಿರುವುದನ್ನು ಗಮನಿಸಿದ ಕೇಂದ್ರ ಸರ್ಕಾರ, ಆ ಶಾಲೆಗೆ ವಿಜ್ಞಾನ ಪ್ರಯೋಗಶಾಲೆಯನ್ನು ನೀಡಿದ್ದು ಇದರ ಪ್ರಯೋಜವನ್ನು ಎಲ್ಲಾ ಮಕ್ಕಳೂ ಸಹಾ ಉಪಯೋಗಿಸಿಕೊಳ್ಳಬಹುದು ಎಂದು ತಿಳಿಸುವುದರ ಜೊತೆಗೆ ಪರಿಸರದ ಕುರಿತಾಗಿ ಇಂತಹ ಇಂತಹ ಅಧ್ಭುತ ಕಾರ್ಯಕ್ರಮವನ್ನು ತಮ್ಮ ಶಾಲೆಯಲ್ಲಿ ಅದೂ ಹೆಚ್.ಎಸ್.ವಿಯವರ ಸಮ್ಮುಖದಲ್ಲಿ ನಡೆಯುತ್ತಿರುವುದಕ್ಕೆ ಬಹಳ ಸಂತೋಷ ವ್ಯಕ್ತಪಡಿಸಿದರು.

WhatsApp Image 2022-08-06 at 13.37.32 (1)

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕಾರಿಣಿ ಸದಸ್ಯರಾದ ಶ್ರೀ ಲಕ್ಷ್ಮೀನಾರಾಯಣ ಶರ್ಮರು ಕಾರ್ಯಕಮವನ್ನು ಉದ್ದೇಶಿಸಿ ಮಾತನಾಡಿ ಪ್ಲಾಸ್ಟಿಕ್ ಎಂಬ ಮಹಾಮಾರಿ ಹೇಗೆ ಈ ಪರಿಸರವನ್ನು ಹಾಳು ಮಾಡುತ್ತಿದೆ ಎಂಬುದನ್ನು ಎಳೆ ಎಳೆಯಾಗಿ ವಿವರಿಸಿ, ನೂರಾರು ವರ್ಷಗಳ ಕಾಲ ಮಣ್ಣಿನಲ್ಲಿ ಜೈವಿಕವಾಗಿ ಕರಗದ ಪ್ಲಾಸ್ಟಿಕನ್ನು ಆದಷ್ಟೂ ಆದಷ್ಟೂ ಬಳಕೆ ಮಾಡಬೇಕೆಂದು ಕೋರಿದರು. ಎಲ್ಲಾ ಕಡೆಗೂ ಹಿಂದಿನ ಕಾಲದಲ್ಲಿ ಕೊಂಡ್ಯುತ್ತಿದ್ದಂತೆ ಬಟ್ಟೆಯ ಕೈ ಚೀಲಗಳನ್ನೇ ಬಳಸ ಬೇಕೆಂದು ಆಗ್ರಹಿಸಿದ್ದಲ್ಲದೇ, ನಮ್ಮ ಜೀವ ಸಂಕುಲಕ್ಕೆ ನೀರಿನ ಬಳಕೆಯನ್ನೂ ಸಹಾ ವಿವರಿಸಿ, ಅದಷ್ಟೂ ನೀರನ್ನು ಉಳಿಸಲು ಅದರಲ್ಲೂ ವಿಶೇಷವಾಗಿ ಮಕ್ಕಳಿಗೆ ಹಲ್ಲುಜ್ಜುವಾಗ, ಕೈತೊಳೆಯುವಾಗ, ಸ್ನಾನ ಮಾಡುವಾಗ ಅನಾವಶ್ಯಕವಾಗಿ ನೀರನ್ನು ಪೋಲು ಮಾಡಬೇಡಿ ಎಂದು ಕಿವಿ ಮಾತನ್ನು ಹೇಳಿದರು.

DSC_0231

ವೇದಿಕೆಯ ಮೇಲೆ ಉಪಸ್ಥಿತರಿದ್ದ ಸ್ಥಳೀಯ ಸಮಾಜಿಕ ಕಾರ್ಯಕರ್ತೆಯಾದ ಶ್ರೀಮತಿ ಸವಿತಾ ಭಟ್ ಅವರು, ಮನುಷ್ಯ ಮತ್ತು ಪ್ರಕೃತಿಯ ಸಂಬಂಧದ ಬಗ್ಗೆ ಸಂಕ್ಷಪ್ತವಾಗಿ ತಿಳಿಸಿದ್ದಲ್ಲದೇ, ಶಾರದಾ ಶಾಲೆಯ ಮಕ್ಕಳು ಲಾಲ್ ಬಾಗಿನಲ್ಲಿ ನಡೆಯುತ್ತಿರುವ ಫಲಪುಪ್ಷ ಪ್ರದರ್ಶನಕ್ಕೆ ಹೋಗಲು ಇಚ್ಚಿಸಿದಲ್ಲಿ ಅವರಿಗೆ ಉಚಿತ ಪ್ರವೇಶವನ್ನು ಕೊಡಿಸುವುದಾಗಿ ಭವರವಸೆ ನೀಡಿದರು.

DSC_0232

ಇಂದಿನ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿದ್ದ ಖ್ಯಾತ ಸಾಹಿತಿಗಳು ಮತ್ತು ಎರಡು ಮೂರು ದಶಕಗಳಿಂದ ಸ್ಥಳೀಯವಾಗಿ ಹೊಸಕರೆಹಳ್ಳಿ ಪ್ರದೇಶದಲ್ಲೇ ನೆಲೆಸಿರುವಂತಹ ಶ್ರೀ ಎಚ್ ಎಸ್ ವೆಂಕಟೇಶ್ ಮೂರ್ತಿ ಅವರು ಸಾಹಿತ್ಯದಲ್ಲಿ ಪರಿಸರದ ಪಾತ್ರವೇನಿದೆ? ಎಂಬುದನ್ನು ಎಳೆ ಎಳೆಯಾಗಿ ಮಕ್ಕಳಿಗೆ ಅರ್ಥವಾಗುವಂತೆ ತಿಳಿಸಿಕೊಟ್ಟರು. ರಾಮಾಯಣ ಮಹಾಭಾರತದ ಉಲ್ಲೇಖದ ಜೊತೆಗೆ, ಪಂಪ ಭಾರತ ಹಾಗೂ ಕಾಳಿದಾಸನ ಋತು ಸಂಹಾರದ ಬಗ್ಗೆ ತಿಳಿಸುತ್ತಾ ನಮ್ಮ ಪುರಾಣ ಮತ್ತು ಪರಂಪರೆಗಳಲ್ಲಿ ಪರಿಸರ ಹಾಸು ಹೊಕ್ಕಾಗಿದ್ದು ಪರಿಸರದಲ್ಲಿ ಹೇರಳವಾಗಿ ಗಿಡಮರಗಳಿಲ್ಲದೇ, ಮನುಷ್ಯರು ಜೀವಿಸಲು ಸಾಧ್ಯವಿಲ್ಲ. ಗಿಡಮರಗಳು ಸಹಾ ಮನುಷ್ಯರೊಂದಿಗೆ ಹೇಗೆ ಸಂವೇದನೆ ನಡೆಸುತ್ತದೆ, ಅವುಗಳು ಹೇಗೆ ಮನುಷ್ಯರ ಮಾತುಗಳನ್ನು ಅರ್ಥ ಮಾಡಿಕೊಳ್ಳುತ್ತದೆ ಎಂಬುದನ್ನು ತಮ್ಮ ಶಾಲೆಯಲ್ಲಿ ಬಹಳ ವರ್ಷಗಳ ಕಾಲ ಹೂವು, ಹಣ್ಣು ಬಿಡದೇ ಗೊಡ್ಡು ಮರಮರದ ಜೊತೆ ಅವರ ಪ್ರಾಂಶುಪಾಲರೂ ಪ್ರತಿ ದಿನವೂ ಸಂವೇದನೇ ಮಾಡುತ್ತಿದ್ದು, ಕಡೆಗೊಂದು ದಿನ ಹೀಗೇ ನೀನು ಗೊಡ್ಡಾಗಿದ್ದಲ್ಲಿ ಕಡಿದು ಹಾಕಬೇಕಾಗುತ್ತದೆ ಎಂದು ಹುಸಿ ಕೋಪ ತೋರಿಸಿದ ಕೆಲವೇ ತಿಂಗಳಲ್ಲಿ ಆ ಮರದಲ್ಲಿ ಹೂವುಗಳು ಕಾಣಿಸಿಕೊಂಡು ನಂತರ ಅದು ಕಾಯಾಗಿ ಹಣ್ಣಾಗಿದ್ದನ್ನು ಕಣ್ಣಿಗೆ ಕಟ್ಟುವಂತೆ ಮಕ್ಕಳಿಗೆ ಅರ್ಥವಾಗುವಂತೆ ಹೇಳಿದರು. ಸಂಸ್ಕೃತದ ಪ್ರಸಿದ್ಧ ಕವಿ ಕಾಳಿದಾಸರ ಮಹಾಕಾವ್ಯ ರಘುವಂಶವನ್ನು ಮಕ್ಕಳಿಗೆ ಸುಮಾರು ಒಂದು ವಾರಗಳ ಕಾಲ ಹೇಳಲು ಸಿದ್ಧ ಎಂದು ಹೇಳಿ ಮಕ್ಕಳ ಜೊತೆ ಮಕ್ಕಳಾಗಿ ಹೋದ್ದದ್ದು ಕಾರ್ಯಕ್ರಮದ ಮೆರೆಗನ್ನು ಹೆಚ್ಚಿಸಿತು ಎಂದರೂ ತಪ್ಪಾಗದು.

DSC_0233

ಇನ್ನು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದಿದ್ದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಾಗಿರುವ ಶ್ರೀ ಗಣೇಶ್ ವಿ ತಡಗಣಿಯವರು ನನಗೆ ವೇದಿಕೆಯ ಮೇಲೆ ಇರುವ ಗಣ್ಯರಷ್ಟು ಮಾತನಾಡಲು ಬಾರದು ಎಂದೇ ತಮ್ಮ ಮಾತನ್ನು ಆರಂಭಿಸಿ ನಂತರ ನಿರರ್ಗಳವಾಗಿ ಶಾಲಾ ಮಕ್ಕಳಿಗೆ ಕೇವಲ ವಿಜ್ಞಾನ, ಗಣಿತ, ಸಮಾಜ ಶಾಸ್ತ್ರವಷ್ಟೇ ಅಲ್ಲದೇ, ಪರಿಸರದ ಬಗ್ಗೆ ಆಸಕ್ತಿ ಮೂಡಿಸುವ ಅವಶ್ಯಕತೆ ಮತ್ತು ಮಾರ್ಗಗಳನ್ನು ಸವಿವರವಾಗಿ ತಿಳಿಸಿಕೊಟ್ಟಿದ್ದಲ್ಲದೇ, ಬೆಟ್ಟ ಗುಡ್ಡಗಳ ಪ್ರದೇಶವಾದ ಬೆಂಗಳೂರಿನ ಸುತ್ತಮುತ್ತಲೂ ಸೂಕ್ತವಾದ ನದಿ ನೀರಿನ ಸೆಲೆ ಇಲ್ಲದದ್ದನ್ನು ಸುಮಾರು 500 ವರ್ಷಗಳ ಹಿಂದೆಯೇ ಗಮನಿಸಿ, ಬೆಂಗಳೂರಿನಲ್ಲಿ ನೂರಾರು ಕೆರೆಗಳನ್ನು ಕಟ್ಟಿಸಿದ್ದ ಕೆಂಪೇಗೌಡರ ದೂರದೃಷ್ಟಿಯನ್ನು ಬಹಳವಾಗಿ ಕೊಂಡಾಡಿ, ದುರಾದೃಷ್ಟವಷಾತ್ ಇಂದಿನ ಜನರು ಅವರ ಆಶಯಗಳ ವಿರುದ್ಧವಾಗಿ ಕೆರೆಗೆಳನ್ನು ಮುಚ್ಚಿ ಬಂಗಲೆಗಳನ್ನು ಕಟ್ಟಿ, ರಾಜಕಾಲುವೆಗಳನ್ನು ಒತ್ತರಿಸಿದ ಪರಿಣಾಮವೇ ಸಣ್ಣ ಸಣ್ಣ ಮಳೆಗೂ ಬೆಂಗಳೂರು ನಗರವಾಸಿಗಳು ಪರದಾಡುವುದನ್ನು ಎಳೆ ಎಳೆಯಾಗಿ ಬಿಡಿಸಿಟ್ಟರು. ಬೆಂಗಳೂರಿನಲ್ಲಿದ್ದ/ಇರುವ ಕೆರೆಗಳ ಬಗ್ಗೆ ತಮ್ಮ ಅಪಾರವಾದ ಮಾಹಿತಿಯನ್ನು ಎಲ್ಲರ ಮುಂದೆ ಬಿಚ್ಚಿಡುತ್ತಾ ಹೋದಾಗ ಅವರ ಜ್ಞಾನದ ಬಗ್ಗೆ ಸಭಿಕರೆಲ್ಲರೂ ಮೂಗಿನ ಮೇಲೆ ಬೆರಳಿಡುವಂತಾಯಿತು ಎನ್ನುವುದು ಸತ್ಯ. ಸದ್ಯದ ಪರಿಸ್ಥಿತಿಯಲ್ಲಿ ಸಮಾಜದ ಸಮತೋಲನಕ್ಕಾಗಿ 24% ಅರಣ್ಯದ ಅವಶ್ಯಕತೆ ಇದ್ದು ಸದ್ಯದ ಪರಿಸ್ಥಿತಿಯಲ್ಲಿ ಕೇವಲ 11% ಆರಣ್ಯ ಇರುವ ಕಾರಣ, ಎಲ್ಲರೂ ಅಗತ್ಯವಿರುವ 13% ಕಾಡನ್ನು ಬೆಳೆಸುವತ್ತ ಹರಿಸಬೇಕು ಚಿತ್ತ ಎಂದು ತಿಳಿ ಹೇಳಿದರು. ಪರಿಸರದ ಕುರಿತಾದ ಯಾವುದೇ ಕಾರ್ಯಕ್ರಮ ಇದ್ದರೂ ತಾವು ಶಾಲಾ ಮಕ್ಕಳೊಂದಿಗೆ ಭಾಗವಹಿಸಲು ಸಿದ್ದ ಎಂದು ತಿಳಿಸುವ ಮೂಲಕ ಪರಿಸರದ ಕುರಿತಾದ ಅವರ ಕಾಳಜಿಯನ್ನು ತೋರಿಸಿದರು.

DSC_0241

ಇಂತಹ ಅಧ್ಭುತವಾದ ಕಾರ್ಯಕ್ರಮಕ್ಕೆ ಪತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಅಭಾಸಾಪ ಬೆಂಗಳೂರು ನಗರ ಕಾರ್ಯಾಲಯ ಪ್ರಮುಖರಾದ ಶ್ರೀ ವರುಣ್ ಅವರು ವಂದನಾರ್ಪಣೆ ಸಲ್ಲಿಸಿದ ನಂತರ ಕಾರ್ಯಕ್ರಮದ ನಿರೂಪಣೆಯನ್ನು ಮಾಡಿದ ಅಭಾಸಾಪ ಬೆಂಗಳೂರು ನಗರ ಕಾರ್ಯದರ್ಶಿಗಳಾದ ಶ್ರೀ ಶ್ರೀಕಂಠ ಬಾಳಗಂಚಿಯವರು ಹೇಳಿಕೊಟ್ಟ ಶಾಂತಿ ಮಂತ್ರದೊಂದಿಗೆ ಕಾರ್ಯಕ್ರಮ ಅಧಿಕೃತವಾಗಿ ಮುಕ್ತಾಯವಾಯಿತು.

DSC_0237

ಇಡೀ ಕಾರ್ಯಕ್ರಮದ ಅವಧಿಯಲ್ಲಿ ಅತ್ಯಂತ ತದೇಕ ಚಿತ್ತದಿಂದ ಅತ್ಯಂತ ಶಾಂತ ರೀತಿಯಲ್ಲಿ ಎಲ್ಲರ ಮಾತುಕತೆಗಳನ್ನು ಆಲಿಸಿದ್ದ ವಿದ್ಯಾರ್ಥಿಗಳಲ್ಲಿ ಉತ್ಸಾಹ ತುಂಬುವ ಸಲುವಾಗಿ ಕಾರ್ಯಕ್ರಮದ ನಿರೂಪಕರಾದ ಶ್ರೀಕಂಠರವರು ತಮ್ಮ ವಿನೂತನ ಶೈಲಿಯ ಬೋಲೋ…. ಭಾರತ್.. ಮಾತಾ.. ಕೀ.. ಜೈ… ಎಂಬ ಘೋಷಣೆ ಒಂದು ಕ್ಷಣ ನೆರೆದಿದ್ದವರಲ್ಲಿ ವಿದ್ಯುತ್ ಸಂಜಾರವಾದಂತಾಗಿ ಮೈಮನಗಳು ಪುಳಿಕಿತರಾಗಿ,

WhatsApp Image 2022-08-06 at 13.37.33 (1)

ಸಭಿಕರ ಒತ್ತಾಯದ ಮೇರೆಗೆ ಮತ್ತೊಮ್ಮೆ ಭಾರತ ಮಾತೆಗೆ ಒಕ್ಕೊರಲಿನ ಜೈಕಾರ ಹಾಕುವ ಮೂಲಕ ಪ್ರತಿಯೊಬ್ಬ ವಿದ್ಯಾರ್ಥಿ/ವಿದ್ಯಾರ್ಥಿನಿಯರೂ ಪರಿಸರ ಸಂರಕ್ಷಣೆಗೆ ಕಟಿಬದ್ಧರಾಗಿರುತ್ತೇವೆ ಎಂಬದನ್ನು ವ್ಯಕ್ತ ಪಡಿಸಿದ್ದು ಕಾರ್ಯಕ್ರಮದ ಸಾರ್ಥಕತೆಯನ್ನು ಎತ್ತಿ ತೋರಿಸಿತು.

ಹನಿ ಹನಿ ಗೂಡಿದರೆ ಹಳ್ಳ, ಒಗ್ಗಟ್ಟಿನಲ್ಲಿ ಬಲವಿದೆ ಎಂಬುದನ್ನು ಅರಿತು ಪ್ರತಿಯೊಬ್ಬರು ಕನಿಷ್ಟ ಪಕ್ಷ ಎರಡು ಗಿಡಗಳನ್ನು ನೆಟ್ಟು ಅದನ್ನು ಪಾಲಿಸಿ ದೊಡ್ಡ ಮರವನ್ನಾಗಿ ಬೆಳೆಸುವಂತೆ ಮಾಡಿದರೂ ಸಾಕು ಪರಿಸರದಲ್ಲಿ ಸಮತೋಲನ ಕಾಪಡಿದಂತಾಗುತ್ತದೆ ಅಲ್ವೇ?

ಏನಂತೀರೀ?
ನಿಮ್ಮವನೇ ಉಮಾಸುತ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s