ನಮ್ಮ ಭಾರತ ದೇಶದ 75 ನೇ ಸ್ವಾತಂತ್ರ್ಯೋತ್ಸವದ ಸವಿನೆನಪಿನಲ್ಲಿ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ತಮ್ಮ ಮನ್ ಕಿ ಬಾತ್ ನಲ್ಲಿ ಎಲ್ಲರ ಮನ ಮತ್ತು ಮನೆಗಳಲ್ಲಿ ದೇಶಾಭಿಮಾನವನ್ನು ಬಿತ್ತುವ ಸಲುವಾಗಿ ಹರ್ ಘರ್ ತಿರಂಗ ಅಭಿಯಾನವನ್ನು ತಿಳಿಸಿದ್ದಾರೆ. . ಇದರ ಅಂಗವಾಗಿ ಆಗಸ್ಟ್ 2 ರಿಂದ ಆಗಸ್ಟ್ 15 ರ ನಡುವೆ ಸಾಮಾಜಿಕ ಜಾಲತಾಣಗಳ ಪ್ರೊಫೈಲ್ಗಳಲ್ಲಿ ತ್ರಿವರ್ಣಧ್ವಜವನ್ನು ಹಾಕಿಕೊಳ್ಳಬೇಕೆಂದು ಸಕಲ ಭಾರತೀಯರನ್ನೂ ಕೋರಿಕೊಂಡಿದ್ದಾರೆ. ಹಾಗಾದರೇ ಈ ತ್ರಿವರ್ಣ ಧ್ವಜ ಏಕೆ? ಮತ್ತು ಹೇಗೆ ಬಂದಿತು? ಎಂಬ ಕುತೂಹಲಕಾರಿ ಮಾಹಿತಿಯನ್ನು ತಿಳಿಯೋಣ ಬನ್ನಿ.
ಬ್ರಿಟಿಷರ ಧಮನಕಾರಿ ಮತ್ತು ಛಿಧ್ರಕಾರಿ ಆಡಳಿತದಿಂದ ಬೇಸತ್ತಿದ್ದ ಭಾರತೀಯರು ಅಲ್ಲಿಲ್ಲಿಯೇ ಸಣ್ಣ ಸಣ್ಣ ಪ್ರಮಾಣದಲ್ಲಿ ಬ್ರೀಟೀಷರ ವಿರುದ್ಧ ಲಾಲ್, ಬಾಲ್, ಪಾಲ್ (ಲಾಲಾ ಲಜಪತ್ ರಾಯ್, ಬಾಲ ಗಂಗಾಧರ ತಿಲಕ್ ಮತ್ತು ಬಿಪಿನ್ ಚಂದ್ರ ಪಾಲ್) ಈ ಮೂವರು ತ್ರಿಮೂರ್ತಿಗಳ ನೇತೃತ್ವದಲ್ಲಿಯೇ 19ನೇ ಶತಮಾನದ ಅಂತ್ಯ ಮತ್ತು 20 ನೇ ಶತಮಾನದ ಆರಂಭದ ಸಮಯದಲ್ಲಿ ನಡೆಸುತ್ತಿದ್ದ ಹೋರಾಟಗಳು ಬ್ರಿಟೀಷರಿಗೆ ತಲೆ ನೋವು ತರುತ್ತಿದ್ದದ್ದಂತೂ ಸುಳ್ಳಲ್ಲ. ಆದರೆ ಈ ರೀತಿಯಾಗಿ ಸಣ್ಣ ಸಣ್ಣ ಹೋರಾಟದ ಬದಲು ದೊಡ್ಡದಾಗಿ ಹೋರಾಟ ಮಾಡಬೇಕು ಮತ್ತು ಅದಕ್ಕೊಬ್ಬ ಸಮರ್ಥ ನಾಯಕತ್ವ ಬೇಕು ಎಂದು ಯೋಚಿಸುತ್ತಿದ್ದ ಸಮಯದಲ್ಲಿಯೇ, ಗೋಪಾಲ ಕೃಷ್ಣ ಗೋಖಲೆಯವರು ದಕ್ಷಿಣ ಆಫ್ರಿಕಾದಲ್ಲಿ ಬ್ಯಾರಿಸ್ಟರ್ ಆಗಿದ್ದ ಮತ್ತು ಅಲ್ಲಿನ ವರ್ಣಬೇಧನೀತಿಯ ವಿರುದ್ಧ ದಿಟ್ಟವಾಗಿ ಧನಿ ಎತ್ತಿದ್ದ ಮೋಹನ್ ದಾಸ್ ಕರಮ್ ಚಂದ್ ಗಾಂಧಿಯವರನ್ನು ಭಾರತಕ್ಕೆ ಹಿಂದಿರುಗಿ ಬ್ರಿಟೀಷರ ವಿರುದ್ಧ ಹೋರಾಡಲು ಆಹ್ವಾನಿಸಿದಾಗ, 1915 ಜನವರಿ 9ರಂದು ಗಾಂಧಿಯವರು ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಹಿಂದಿರುಗುತ್ತಾರಾದರೂ ಆರಂಭದ ಕೆಲವು ವರ್ಷಗಳು ಇಲ್ಲಿನ ಪರಿಸ್ಥಿತಿಯನ್ನು ಅವಲೋಕಿಸಿ, 22 ಮಾರ್ಚ್ 1918 ರಂದು ಗಾಂಧಿಯವರು ವಿವಿಧ ಸ್ಥಳಗಳಲ್ಲಿ ಸತ್ಯಾಗ್ರಹ ಚಳುವಳಿಗಳನ್ನು ಯಶಸ್ವಿಯಾಗಿ ಸಂಘಟಿಸಿದಾಗ, ಆ ಚಳವಳಿಯಲ್ಲಿ ವಲ್ಲಭಭಾಯಿ ಪಟೇಲ್ ಮತ್ತು ಇಂದುಲಾಲ್ ಯಾಗ್ನಿಕ್ ಕೂಡ ಸೇರಿಕೊಳ್ಳುತ್ತಾರೆ.
ಗಾಂಧಿಯವರ ನೇತೃತ್ವದಲ್ಲಿ ಅಖಿಲ ಭಾರತ ಕಾಂಗ್ರೆಸ್ ಭಾರತದ ಉಪಖಂಡದಲ್ಲಿ ಬ್ರಿಟೀಷರ ವಿರುದ್ಧ ಹೊರಾಡಲು ಲಕ್ಷಾಂತರ ಜನರನ್ನು ಒಟ್ಟುಗೂಡಿಸಲು ಇಂದು ವಿಶಿಷ್ಟವಾದ ಚಿಹ್ನೆಯ ಅಗತ್ಯವನ್ನು ಮನಗಂಡು ಅದಲ್ಲಿ ರಾಷ್ಟ್ರೀಯ ಧ್ವಜವೇ ಸೂಕ್ತವಾದ ಪರಿಹಾರವೆಂದು ಮನಗಂಡರು. ಆ ಸಮಯದಲ್ಲಿ ಅಲ್ಲಿದ್ದ ಎಲ್ಲರೂ ಸಾವಿರಾರು ವರ್ಷಗಳಿಂದಲೂ ಭಾರತದ ಏಕತೆ, ಅಖಂಡತೆ ಮತ್ತು ಸಂಸ್ಕೃತಿಯನ್ನು ಎತ್ತಿ ಹಿಡಿದಿರುವ ಭಗವಾ ಧ್ವಜವೇ ತಮ್ಮ ಹೋರಾಟಕ್ಕೆ ಸೂಕ್ತ ಎಂಬ ನಿರ್ಣಯಕ್ಕೆ ಬಂದಿತಾದರೂ, ಯಥಾ ಪ್ರಕಾರ ಗಾಂಧಿಯವರ ತುಷ್ಟೀಕರಣ ಗುಣ ಜಾಗೃತವಾಗಿ ಸ್ವಾತ್ರಂತ್ರ್ಯ ಹೋರಾಟದಲ್ಲಿ ಕೇವಲ ಹಿಂದೂಗಳಲ್ಲದೇ ಮುಸಲ್ಮಾನರೂ ಭಾಗವಹಿಸಿಸುತ್ತಿರುವ ಕಾರಣ, ಕೇಸರಿ ಬಣ್ಣದ ಭಗವಾಧ್ವಜವನ್ನು ಕಾಂಗ್ರೇಸ್ ಧ್ವಜವನ್ನಾಗಿ ಮಾಡಿದರೆ ಅದು ಕೇವಲ ಹಿಂದೂಗಳನ್ನು ಪ್ರತಿನಿಧಿಸುವಂತಾಗಿ ಮುಸಲ್ಮಾನರು ಕೋಪಗೊಳ್ಳಬಹುದು ಎನ್ನುವ ಕಾರಣದಿಂದ ಅದರ ಕೇಸರಿಯ ಬದಲು ಕೆಂಪು ಬಣ್ಣದ ಜೊತೆ ಹಸಿರು ಬಣ್ಣವನ್ನೂ ಸೇರಿಸಬೇಕೆಂದು ಆಗ್ರಹಿಸಿದರು.
1921 ರಲ್ಲಿ ಆಂಧ್ರ ಪ್ರದೇಶದ ಮೂಲದ ಪಿಂಗಾಳಿ(ಪಿಂಗ್ಲೇ) ವೆಂಕಯ್ಯ ಎಂಬ ವಿಶ್ವವಿದ್ಯಾನಿಲಯದ ಉಪನ್ಯಾಸಕರಿಗೆ ಗಾಂಧಿಯವರು ಧ್ವಜ ವಿನ್ಯಾಸವನ್ನು ಮಾಡಲು ನಿಯೋಜಿಸಿದರು. ಆರಂಭದಲ್ಲಿ ಅದು ಎರಡು ಪ್ರಮುಖ ಧರ್ಮಗಳಿಗೆ ಸಂಬಂಧಿಸಿದ ಬಣ್ಣಗಳನ್ನು ಒಳಗೊಂಡಿತ್ತು, ಹಿಂದೂಗಳಿಗೆ ಕೆಂಪು ಮತ್ತು ಮುಸ್ಲಿಮರಿಗೆ ಹಸಿರು. ಅಡ್ಡಲಾಗಿ ವಿಂಗಡಿಸಲಾದ ಧ್ವಜದ ಮಧ್ಯ ಭಾಗಕ್ಕೆ, ಲಾಲಾ ಹನ್ಸ್ ರಾಜ್ ಸೋಂಧಿ ಸಾಂಪ್ರದಾಯಿಕ ನೂಲುವ ಚರಕವನ್ನು ಸೇರಿಸಲು ಸಲಹೆ ನೀಡಿದ್ದಲ್ಲದೇ ಈ ಧ್ವಜವು ಸ್ಥಳೀಯರು ನಾರುಗಳಿಂದ ತಯಾರಿಸಿದ ಇಲ್ಲವೇ ಖಾದಿಯಿಂದ ತಯಾರಿಸುವ ಬಟ್ಟೆಗಳಿಂದಲೇ ತಯಾರಿಸುವ ಮೂಲಕ ಸ್ಥಳೀಯರನ್ನು ಸ್ವಾವಲಂಬಿಗಳನ್ನಾಗಿ ಮಾಡಲು ಮುಂದಾದರು.
ಆಗಸ್ಟ್ 2, 1876 ರಂದು ಆಂಧ್ರಪ್ರದೇಶದ ಇಂದಿನ ಮಚಲಿಪಟ್ಟಣಂ ಪಟ್ಟಣದ ಸಮೀಪವಿರುವ ಭಟ್ಲಪೆನುಮಾರು ಎಂಬಲ್ಲಿ ಜನಿಸಿದ್ದ ಪಿಂಗಾಳಿ ವೆಂಕಯ್ಯನವರು ಬ್ರಿಟೀಷ್ ಸೇನೆಗೆ ಸೇರಿಕೊಂದಿದ್ದರು. ಆ ಯುವ ವೆಂಕಯ್ಯರನ್ನು ಬ್ರಿಟಿಷ್ ಭಾರತೀಯ ಸೇನೆಯ ಸೈನಿಕನಾಗಿ ಯುದ್ಧದಲ್ಲಿ ಹೋರಾಡಲು ದಕ್ಷಿಣ ಆಫ್ರಿಕಾಕ್ಕೆ ಕಳುಹಿಸಲಾಗಿತ್ತು. ದಕ್ಷಿಣ ಆಫ್ರಿಕಾದಲ್ಲಿ ಅವರು ಬ್ರಿಟಿಷ್ ಸೈನಿಕರಲ್ಲಿ ಯೂನಿಯನ್ ಜ್ಯಾಕ್ ಪ್ರೇರಿತ ರಾಷ್ಟ್ರೀಯತೆಯ ಭಾವನೆಯಿಂದ ಹೋರಾಟ ನಡೆಸಿದ ನಂತರ ಭಾರತಕ್ಕೆ ಮರಳಿದ ನಂತರ ಕೃಷಿಯೊಂದಿಗೆ, ಭೂವಿಜ್ಞಾನಿಯಾಗಿದ್ದಲ್ಲದೇ, ಮಚಲಿಪಟ್ಟಣಂನ ಆಂಧ್ರ ನ್ಯಾಷನಲ್ ಕಾಲೇಜಿನಲ್ಲಿ ಉಪನ್ಯಾಸಕರಾಗಿಯೂ ಕೆಲ ಕಾಲ ಸೇವೆಯನ್ನು ಸಲ್ಲಿಸಿದ್ದರು. ಬಹುಭಾಷಾ ಪಂಡಿತರಾಗಿದ್ದ ವೆಂಕಯ್ಯನವರು ಜಪಾನೀಸ್ ಭಾಷೆಯನ್ನು ನಿರರ್ಗಳವಾಗಿ ಮಾತನಾಡುತ್ತಿದ್ದ ಕಾರಣ, ಅವರನ್ನು ಜಪಾನ್ ವೆಂಕಯ್ಯ ಎಂದೇ ಸ್ಥಳೀಯರು ಗುರುತಿಸುತ್ತಿದ್ದರು.
ಅಂತಹ ವೆಂಕಯ್ಯನವರು ಗಾಂಧಿಯವರ ಆಣತಿಯ ಮೇರೆಗೆ ರಾಷ್ಟ್ರ ಧ್ವಜದ ಹಲವು ಮಾದರಿಗಳನ್ನು ವಿನ್ಯಾಸಗೊಳಿಸಿ, 1921 ರಲ್ಲಿ ವಿಜಯವಾಡದಲ್ಲಿ ನಡೆದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸಭೆಯಲ್ಲಿ ಹಸಿರು ಮತ್ತು ಕೆಂಪು ಬಣ್ಣದ ಮಧ್ಯದಲ್ಲಿ ಗಾಂಧಿ ಚರಕವನ್ನು ಹೊಂದಿರುವ ಧ್ವಜವನ್ನು ಪ್ರಸ್ತುತ ಪಡಿಸಿದಾಗ ಮಹಾತ್ಮ ಗಾಂಧಿಯವರು ಕ್ರೈಸ್ತರನ್ನೂ ತೃಪ್ತಿಪಡಿಸುವ ಸಲುವಾಗಿ ಬಿಳಿಯ ಪಟ್ಟಿಯನ್ನೂ ಸೇರಿಸುವ ಮೂಲಕ ಮೂಲ ತ್ರಿವರ್ಣ ಧ್ವಜವನ್ನು ಗಾಂಧಿಯವರ ಮಧ್ಯಸ್ಥಿಕೆಯಲ್ಲಿ ಸರ್ವಾನುಮತದಿಂದ ಅಂಗೀಕರಿಸಲಾಯಿತು.
ಮೇ 1923 ರಲ್ಲಿ ನಾಗಪುರದಲ್ಲಿ, ಬ್ರಿಟಿಷ್ ಆಳ್ವಿಕೆಯ ವಿರುದ್ಧ ಶಾಂತಿಯುತ ಪ್ರತಿಭಟನೆಯ ಸಂದರ್ಭದಲ್ಲಿ, ಸಾವಿರಾರು ಜನರು ಈ ಧ್ವಜವನ್ನು ಮೊತ್ತ ಮೊದಲ ಬಾರಿಗೆ ಪ್ರದರ್ಶಿಸಿದವರನ್ನು ಅಂದಿನ ಸರ್ಕಾರ ಬಂಧಿಸಲಾಗಿತ್ತು. ಆದರೇ, ಆಗಸ್ಟ್ 1931 ರಲ್ಲಿ ನಡೆದ ಕಾಂಗ್ರೇಸ್ ಪಕ್ಷದ ವಾರ್ಷಿಕ ಸಭೆಯಲ್ಲಿ ನೆರೆದಿದ್ದ ಬಹುತೇಕ ಕಾಂಗ್ರೇಸ್ಸಿಗರು, ಧ್ವಜದಲ್ಲಿ ಹಿಂದೂಗಳ ಪರಮ ಪವಿತ್ರ ಕೇಸರೀ ಬಣ್ಣವಿಲ್ಲದ ಬಗ್ಗೆ ತೀವ್ರತರವಾದ ಆಕ್ಷೇಪಣೆ ಎತ್ತಿದ ಪರಿಣಾಮ, ಗಾಂಧಿ ಒಲ್ಲದ ಮನಸ್ಸಿನಿಂದಲೇ, ಕೆಂಪು ಬಣ್ಣದ ಬದಲಿಗೆ ದಟ್ಟವಾದ ಕೇಸರಿ ಬಣ್ಣವನ್ನು ಒಪ್ಪಿಕೊಳ್ಳುವಂತಾಯಿತು. ಈ ಕೇಸರಿ, ಬಿಳಿ ಮತ್ತು ಹಸಿರು ಬಣ್ಣಗಳನ್ನು ಜನರು ಎಲ್ಲಿ ಧರ್ಮಾಧಾರಿತ ಎಂದು ಭಾವಿಸುತ್ತಾರೋ ಎಂಬ ನಂತರದ ದಿನಗಳಲ್ಲಿ, ಆ ಬಣ್ಣಗಳಲ್ಲಿ ಕೇಸರಿ ದೇಶದ ಶಕ್ತಿ ಮತ್ತು ಧೈರ್ಯವನ್ನು ಸೂಚಿಸುತ್ತದೆ. ಬಿಳಿ ಶಾಂತಿ ಮತ್ತು ಸತ್ಯವನ್ನು ಸೂಚಿಸುತ್ತದೆ. ಹಾಗೂ ಹಸಿರು ಬಣ್ಣ ಭೂಮಿಯ ಫಲವತ್ತತೆ, ಬೆಳವಣಿಗೆಯ ಜೊತೆ ಮಂಗಳಕರತೆಯನ್ನು ಸೂಚಿಸುತ್ತದೆ ಎಂಬ ಬಣ್ಣ ಕಟ್ಟಿ ಜನರ ಕಣ್ಣಿಗೆ ಮಂಕು ಬೂದಿ ಎರಚಲಾಯಿತು ಎಂದರೂ ತಪ್ಪಾಗದು.
ಬ್ರಿಟೀಷರು ಭಾರತಕ್ಕೆ ಸ್ವಾತ್ರಂತ್ರ್ಯ ಕೊಡುವುದಕ್ಕೆ ಸಿದ್ಧರಾದಾಗ, ಜುಲೈ 22 1947 ರಂದು ನಡೆದ ಸಂವಿಧಾನ ಸಭೆಯ ಸಭೆಯಲ್ಲಿ ಕಾಂಗ್ರೇಸ್ ಧ್ವಜವನ್ನೇ ಭಾರತದ ಧ್ವಜವಾಗಿ ಸ್ವಿಕರಿಸಿ, ಧರ್ಮ ಮತ್ತು ನಿರಂತರ ಪ್ರಗತಿಯ ಪ್ರತಿರೂಪವಾಗಿ ಧ್ವಜದ ಮಧ್ಯದಲ್ಲಿ ಚರಕದ ಬದಲಾಗಿ 24 ಗೆರೆಗಳುಳ್ಳ ಅಶೋಕ ಚಕ್ರವಿರುವ ಪ್ರಸ್ತುತ ರೂಪದ ಧ್ವಜವನ್ನು ಅಳವಡಿಸಿಕೊಳ್ಳಲಾಯಿತು ಮತ್ತು 15 ಆಗಸ್ಟ್ 1947 ರಂದು ಅದೇ ಧ್ವಜ ಸ್ವತ್ರಂತ್ಯ್ರ ಭಾರತದ ಅಧಿಕೃತ ಧ್ವಜವಾಯಿತು.
ಹೀಗೆ ನಮ್ಮ ಹಿಂದೂಸ್ಥಾನದ ಹಿಂದೂ ಧರ್ಮದ ಅಸ್ಮಿತೆ, ಅಸ್ಥಿತ್ವ, ತ್ಯಾಗ ಮತ್ತು ಬಲಿದಾನಗಳ ಪ್ರತೀಕವಾಗಿದ್ದ ಭಗವಾಧ್ವಜದ ಜಾಗದಲ್ಲಿ ದೇಶದ ಮಹಾತ್ಮ ಎನಿಸಿಕೊಂಡವರು ತಮ್ಮ ಅಹಿಂಸೆ ಮತ್ತು ಜಾತ್ಯಾತೀತತೆಯ ಹೆಸರಿನಲ್ಲಿ ತ್ರಿವರ್ಣ ಧ್ವಜವನ್ನು ಪ್ರತಿಷ್ಠಾಪಿಸಿ ನಾಮಕಾವಾಸ್ಥೆಗೆ ವೆಂಕಯ್ಯ ಪಿಂಗಳಿಯವರೇ ಧ್ವಜದ ರೂವಾರಿ ಎಂದು ಕೊಂಡಾಡಲಾಯಿತು. 2009ರಲ್ಲಿ ವೆಂಕಯ್ಯನವರ ಸ್ಮರಣಾರ್ಥ ಅಂಚೆ ಚೀಟಿ ಬಿಡುಗಡೆ ಮಾಡಿದ್ದಲ್ಲದೇ, 2014 ರಲ್ಲಿ ವಿಜಯವಾಡದ ಆಕಾಶವಾಣಿ ಬಾನುಲಿ ಕೇಂದ್ರಕ್ಕೆ ಪಿಂಗಳಿ ವೆಂಕಯ್ಯನವರ ಹೆಸರನ್ನೇ ಇಡಲಾಗಿದೆ. ಈ ಸ್ವಾತ್ರಂತ್ರ್ಯ ಅಮೃತಮಹೋತ್ಸವದ ಸವಿನೆನಪಿನ ಈ ಸಂಧರ್ಭದಲ್ಲಿ ಪಿಂಗಳಿಯವರ ಜನ್ಮದಿನವಾದ ಆಗಸ್ಟ್ 2 ರಂದು ಅರ್ಥಾತ್ ಆಗಸ್ಟ್ 2 2022ರಂದು ವೆಂಕಯ್ಯ ಅವರ ಸ್ಮರಣಾರ್ಥ ವಿಶೇಷ ಅಂಚೆ ಚೀಟಿಯನ್ನು ಬಿಡುಗಡೆ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿ, ಪ್ರಧಾನಿ ನರೇಂದ್ರ ಮೋದಿಯವರು ನವ ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಂಚೆಚೀಟಿ ಬಿಡುಗಡೆ ಮಾಡಿದ್ದಾರೆ.
ರಾಷ್ಟ್ರ ಅಥವಾ ದೇಶದ ಪ್ರತಿಯೊಬ್ಬ ಪ್ರಜೆಗೂ ತನ್ನ ದೇಶದ ಬಗ್ಗೆ ಅತ್ಯಂತ ಗೌರವ ಮತ್ತು ದೇಶ ಭಕ್ತಿಯ ಭಾವನೆ ಇರುತ್ತದೆ. ರಾಷ್ಟ್ರವು ಅನುಭವಿಸಿದ ತ್ಯಾಗ ಮತ್ತು ಮತ್ತು ದೇಶಕ್ಕಾಗಿ ಕಳೆದುಹೋದ ಎಲ್ಲಾ ಜೀವಗಳನ್ನು ಗೌರವಿಸುವ ಸಹಜ ಭಾವನೆ ಉಂಟಾಗುತ್ತದೆ. ಹಾಗಾಗಿ ಪ್ರತಿಯೊಬ್ಬ ಭಾರತೀಯರಲ್ಲೂ ದೇಶ ಮತ್ತು ಧರ್ಮ ಎಂಬ ಆಯ್ಕೆ ಬಂದಾಗ ದೇಶ ಮೊದಲು ಆನಂತರ ಧರ್ಮ ಎಂದು ಪರಿಗಣಿಸಿ, ಶಾಂತಿ ಮತ್ತು ಸೌಹಾರ್ದತೆ, ಒಗ್ಗಟ್ಟಿನ ಬಲದಿಂದ ಬದುಕುವುದಕ್ಕಾಗಿ ಒಂದು ರಾಷ್ಟ್ರಕ್ಕೆ ಧ್ವಜ ಎನ್ನುವುದು ಅತ್ಯಾವಶ್ಯಕ. ಹಾಗಾಗಿ ನಾವು ರಾಷ್ಟ್ರ ಧ್ವಜವನ್ನು ನೋಡಿದಾಗ, ಅದು ಕೇವಲ ಧ್ವಜವಾಗಿ ನೋಡದೇ, ಅದೇ ನಮ್ಮ ರಾಷ್ಟ್ರವನ್ನಾಗಿ ನೋಡುವುದರಿಂದ, ಎಲ್ಲರೂ ನಮ್ಮ ತ್ರಿವರ್ಣ ಧ್ವಜ ಸಂಹಿತೆಯನ್ನು ಖಡ್ಡಾಯವಾಗಿ ಪಾಲಿಸುವ ಮೂಲಕ ದೇಶದ ಅಖಂಡತೆಯನ್ನು ಎತ್ತಿ ಹಿಡಿಯೋಣ. ಪ್ರಧಾನಿಗಳ ಆಶಯದಂತೆ ಆಗಸ್ಟ್ 2 ರಿಂದ ಆಗಸ್ಟ್ 15 ರ ನಡುವೆ ಸಾಮಾಜಿಕ ಜಾಲತಾಣಗಳ ಪ್ರೊಫೈಲ್ಗಳಲ್ಲಿ ತ್ರಿವರ್ಣಧ್ವಜವನ್ನು ಹಾಕಿಕೊಳ್ಳೋಣ ಮತ್ತು ಆಗಸ್ಟ್ 13, 14 ಮತ್ತು 15 ರಂದು ಪ್ರತಿಯೊಬ್ಬರ ಮನೆಯ ಮೇಲೂ ನಮ್ಮ ಪವಿತ್ರವಾದ ತ್ರಿವರ್ಣಧ್ವಜವನ್ನು ಹಾರಿಸುವ ಮೂಲಕ ಹರ್ ಘರ್ ತಿರಂಗ ಅಭಿಯಾನವನ್ನು ಯಶಸ್ವಿಗೊಳಿಸೋಣ.
ಹರ್ ಘರ್ ತಿರಂಗಾ‘ ಅಭಿಯಾನ ಅಡಿಯಲ್ಲಿ ಭಾಗವಹಿಸಲು ಇಷ್ಟ ಆದರೆ ನಮಗೆ ಅಧಿಕೃತವಾದ ಧ್ವಜ ಎಲ್ಲಿ ಸಿಗುತ್ತದೆ? ಎಂಬ ಪ್ರಶ್ನೆಗೆ ಉತ್ತರವಾಗಿ ಕೇಂದ್ರ ಸರ್ಕಾರವು ದೇಶಾದ್ಯಂತ ಇರುವ 1.6 ಲಕ್ಷ ಅಂಚೆ ಕಚೇರಿಗಳಲ್ಲಿ ಆಗಸ್ಟ್ 1 ರಿಂದ ತ್ರಿವರ್ಣ ಧ್ವಜವನ್ನು ಮಾರಾಟ ಮಾಡಲಿವೆ. ಇಲ್ಲಿ ರಾಷ್ಟ್ರಧ್ವಜಗಳು ಮೂರು ಗಾತ್ರಗಳಲ್ಲಿ ಮಾರಾಟಕ್ಕೆ ಲಭ್ಯವಿದ್ದು. ಅತಿ ದೊಡ್ಡದೆಂದರೆ 20″X30″ ಧ್ವಜವೊಂದಕ್ಕೆ ಕೇವಲ ರೂ 25/- ಕ್ಕೆ ಮಾರಾಟ ಮಾಡಲಾಗುತ್ತಿದೆ. ಇನ್ನು ಎರಡು ಸಣ್ಣ ಗಾತ್ರದ ಧ್ವಜವನ್ನು ಕ್ರಮವಾಗಿ ರೂ 18/- ಮತ್ತು ರೂ 9/- ಕ್ಕೆ ಮಾರಾಟ ಮಾಡುವ ವ್ಯವಸ್ಥೆ ಮಾಡಲಾಗಿದೆ. ಆಗಸ್ಟ್ 1 ರಿಂದ ಕೇಂದ್ರ ಗೃಹ ಸಚಿವಾಲಯವೂ ಧ್ವಜ ಸಹಿಂತೆಯನ್ನು ಸ್ವಲ್ಪ ಮಾರ್ಪಾಟು ಮಾಡಿದ್ದು, ಪ್ರತಿ ನಾಗರಿಕರಿರೂ ಹಗಲು ರಾತ್ರಿ ಧ್ವಜವನ್ನು ಪ್ರದರ್ಶಿಸಲು ಅನುಮತಿ ನೀಡಿದೆ. ಸ್ವಾತಂತ್ರ್ಯದ 75 ನೇ ವರ್ಷದ ಅಮೃತ ಮಹೋತ್ಸವವನ್ನು ಅತ್ಯಂತ ಸ್ಮರಣಣಿಯವಾಗಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ದೇಶಾದ್ಯಂತ 20 ಕೋಟಿ ಮನೆಗಳಲ್ಲಿ ರಾಷ್ಟ್ರಧ್ವಜದ ಸಾಮೂಹಿಕ ಪ್ರದರ್ಶನವನ್ನು ಹಾರಿಸುವ ಗುರಿಯನ್ನು ಇಟ್ಟು ಕೊಂಡಿರುವ ಅಭಿಯಾನದಲ್ಲಿ ನಮ್ಮ ಮನೆಯ ಮೇಲೂ ತ್ರಿವರ್ಣ ಧ್ವಜವನ್ನು ಹಾರಿಸುವ ಮೂಲಕ ಹರ್ ಘರ್ ತಿರಂಗಾ ಅಭಿಯಾನದಲ್ಲಿ ನಮ್ಮದೂ ಅಳಿಲು ಸೇವೆ ಇರಲೀ ಅಲ್ವೇ?
ಏನಂತೀರೀ?
ನಿಮ್ಮವನೇ ಉಮಾಸುತ