ಅಲ್ಪನಿಗೆ ಐಶ್ವರ್ಯ ಬಂದ್ರೇ ಅರ್ಧ ರಾತ್ರೀಲೀ ಕೊಡ ಹಿಡಿದ, ಕೈಯ್ಯಲ್ಲಿ ಕಾಸು ಇದ್ದಾಗ ಊರೇಲ್ಲಾ ನೆಂಟರು, ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ. ಹಾಸಿಗೆ ಇದ್ದಷ್ಟು ಕಾಲು ಚಾಚು. ಇವೆಲ್ಲವೂ ಕನ್ನಡದ ಪ್ರಸಿದ್ಧ ಗಾದೆ ಮಾತುಗಳು. ವೇದ ಸುಳ್ಳಾದರೂ ಗಾದೆ ಮಾತು ಸುಳ್ಳಾಗದು ಎನ್ನುವುದು ಆಡು ಭಾಷೆಯಲ್ಲಿ ಬಹಳವಾಗಿ ಪ್ರಚಚಲಿತದಲ್ಲಿದೆ. ಈ ಎಲ್ಲಾ ಗಾದೆಗಳು ವಿವಿಧ ಸಂದರ್ಭದಲ್ಲಿ ಅನ್ವಯವಾದರೆ, ಈಗ ನಾನು ಹೇಳಲು ಹೊರಟಿರುವ ಪ್ರಸಂಗದಲ್ಲಿ ಈ ಎಲ್ಲಾ ಗಾದೆ ಮಾತುಗಳು ಒಟ್ಟಾಗಿಯೇ ಮುಗಿಬಿದ್ದಂತಹ ಕರುಣಾಜನಕ ಕಥೆ ವ್ಯಥೆ ನಿಮಗಾಗಿ
3 ಜುಲೈ 2000ರಳ್ಲಿ ಸ್ಟಾರ್ ಪ್ಲಸ್ ಛಾನೆಲ್ಲಿನಲ್ಲಿ ಹಿಂದಿ ಚಿತ್ರರಂಗದ ಖ್ಯಾತ ನಟ ಶ್ರೀ ಅಮಿತಾಬ್ ಬಚ್ಚನ್ ಅವರು ನಡೆಸಿಕೊಡಲು ಆರಂಭಿಸಿದ ಕೌನ್ ಬನೇಗಾ ಕರೋಡ್‌ಪತಿ (ಕೆಬಿಸಿ) ಆರಂಭವಾದ ವಿಷಯ ಎಲ್ಲರಿಗೂ ತಿಳಿದೇ ಇದೆ. ಇದು ವಿದೇಶದಲ್ಲಿ ಬಹಳ ಜನುಪ್ರಿಯವಾಗಿದ್ದ ಹೂ ವಾಂಟ್ಸ್ ಟು ಬಿ ಎ ಮಿಲಿಯನೇರ್‌ನ ಎಂಬ ಕಾರ್ಯಕ್ರಮದ ಅಧಿಕೃತ ಹಿಂದಿ ರೂಪಾಂತರವಾಗಿದೆ. ಈ ಸ್ಪರ್ಧೆಗಳಲ್ಲಿ ಭಾಗವಹಿಸಲು ವಿವಿಧ ಹಂತಗಳಲ್ಲಿ ವಿಂಗಡಿಸಲ್ಪಟ್ಟು ಅಂತಿಮವಾಗಿ 8-10 ಸ್ಪರ್ಥಿಗಳು ಒಟ್ಟಾಗಿ ಕುಳಿತುಕೊಂಡು ಕೇಳುವ ಐದು ಪ್ರಶ್ನೆಗೆ ಸರಿಯಾಗಿ ಮತ್ತು ಅತ್ಯಂತ ವೇಗವಾಗಿ ಉತ್ತರಿಸುವ ಸ್ಪರ್ಥಿ ಅಂತಿಮವಾಗಿ ಅಮಿತಾಬ್ ಬಚ್ಚನ್ ಅವರ ಮುಂದೆ ಹಾಟ್ ಸೀಟಿನಲ್ಲಿ ಕುಳಿತುಕೊಳ್ಳುವ ಅರ್ಹತೆ ಪಡೆದುಕೊಳ್ಳುತ್ತ್ತನೆ. ನಂತರ 13 ಸುತ್ತುಗಳಲ್ಲಿ ಒಂದೊಂದೇ ಪ್ರಶ್ನೆಗಳನ್ನೂ ಸರಿಯಾಗಿ ಉತ್ತರಿಸುತ್ತಾ ಹೋದಂತೆಲ್ಲಾ ಗಳಿಸುವ ಹಣ ದುಪ್ಪಟ್ಟಾಗುತ್ತಾ ಹೋಗಿ ಅಂತಿಮವಾಗಿ 13 ನೇ ಪ್ರಶ್ನೆಯನ್ನು ಸರಿಯಾಗಿ ಉತ್ತರಿಸಿದಲ್ಲಿ ಒಂದು ಕೋಟಿ ಹಣವನ್ನು ಗೆಲ್ಲಬಹುದಾಗಿರುತ್ತದೆ. ಇಲ್ಲಿ ನೋಡಲು ಬಹಳ ಸುಲಭ ಎನಿಸಿದರೂ ಆ ಹಾಟ್ ಸೀಟಿನಲ್ಲಿ ಕುಳಿತುಕೊಂಡು ಎಲ್ಲವೂ ಸರಿ ಎಂದೇ ತೋರುವ ಪ್ರಶ್ನೆಗಳಿಗೆ ಉತ್ತರಿಸುವುದು ನಿಜಕ್ಕೂ ಕಷ್ಟಕರವೇ ಸರಿ ಆರಂಭದಲ್ಲಿ 1 ಕೋಟಿ ಇದ್ದ ಬಹುಮಾನ ಕಾರ್ಯಕ್ರಮ ಯಶಸ್ವಿಯಾದಂತೆಲ್ಲಾ, 5 ಕೋಟಿ ನಂತರ 7 ಕೋಟಿಯಾಗಿ ಸದ್ಯಕ್ಕೆ 14 ಕೋಟಿಯ ಬಹುಮಾನವಿದೆ.
ಬಿಹಾರ್ ಮೂಲದ ಸಾಧಾರಣ ಮಧ್ಯಮವರ್ಗದ ಕುಟುಂಬದ ನರೇಗಾ ಯೋಜನೆಯಲ್ಲಿ ಕಂಪ್ಯೂಟರ್ ಇನ್ಸ್ಟ್ರಕ್ಟರ್ ಆಗಿ ತಿಂಗಳಿಗೆ ಕೇವಲ 6 ಸಾವಿರ ರೂ ಆದಾಯ ಗಳಿಸುತ್ತಿದ್ದ ಸುಶೀಲ್ ಕುಮಾರ್ 2011ರ ಕೌನ್ ಬನೇಗಾ ಕರೋಡ್ಪತಿ ಸರಣಿಯಲ್ಲಿ ₹ 5 ಕೋಟಿ ಗೆಲ್ಲುವ ಮೂಲಕ, ಆ ಜನಪ್ರಿಯ ಆಟದಲ್ಲಿ ₹ 5 ಕೋಟಿ ಗೆದ್ದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿ ರಾತ್ರೋರಾತ್ರಿ ಇಡೀ ದೇಶವೇ ಆತನತ್ತ ತಿರುಗಿ ನೋಡುವ ಜನಪ್ರಿಯ ವ್ಯಕ್ತಿಯಾಗಿ ಬಿಡುತ್ತಾರೆ. ವಾಸ್ತವದಲ್ಲಿ ಇದ್ದಕ್ಕಿದ್ದಂತೆಯೇ, ಏಕಾಏಕಿ ಕೋಟ್ಯಾಂತರ ರೂಪಾಯಿ ಸಿಕ್ಕಲ್ಲಿ, ಕಾರು ಬಂಗಲೆಗಳನ್ನು ಖರೀಧಿಸಿ, ತಮ್ಮೆಲ್ಲಾ ಆಸೆಗಳನ್ನು ಈಡೇರಿಸಿಕೊಂಡು ನೆಮ್ಮದಿಯ ಜೀವನ ನಡೆಸಬಹುದೆಂದೇ ಎಲ್ಲರೂ ಭಾವಿಸುತ್ತಾರೆ.
ಆದರೆ ಸುಶೀಲ್ ಕುಮಾರ್ ಜೀವನದಲ್ಲಿ ನಡೆದದ್ದೇ ಬೇರೆ. ಅಷ್ಟು ಹಣವನ್ನು ಗೆದಿದ್ದರೂ, ಅಲ್ಪನಿಗೆ ಐಶ್ವರ್ಯಬಂದ್ರೇ ಅರ್ಧ ರಾತ್ರೀಲಿ ಕೊಡೆ ಹಿಡಿದ ಎನ್ನುವಂತೆ, ಏನೇನೋ ಕನಸು ಕಂದು ಅವೆಲ್ಲವನ್ನು ಮಾದಲು ಹೋಗಿ ಕೈ ಸುಟ್ಟುಕೊಂದು ಇದ್ದದ್ದೆಲ್ಲವನ್ನೂ ಕಳೆದುಕೊಂಡು ಖಿನ್ನತೆಗೆ ಹೋಗಿ, ವೈವಾಹಿಕ ಸಂಬಂಧ ಹದಗೆಟ್ಟು ವಿಚ್ಚೇಧನದವರೆಗೂ ಹೊಗಿ ಈಗ ವಾಸ್ತವಕ್ಕೆ ಮರಳಿ ಸಹಜ ಜೀವನವನ್ನು ನಡೆಸುತ್ತಿರುವ ಸುಶೀಲ್ ಕುಮಾರ್ ಅವರ ಕರುಣಾಜನಕ ಕಥೆ ಇಂದಿನ ಬಹಳಷ್ಟು ಯುವಕರಿಗೆ ಮಾದರಿ ಎಂದರೂ ತಪ್ಪಾಗದು.
ಸುಶೀಲ್ ಐದು ಕೋಟಿ ರೂ ಗೆದ್ದ ಕೂಡಲೇ ಅವರು ಬೇಡಾ ಎಂದರೂ ಅವರಿಗೇ ಅರಿವಿಲ್ಲದಂತೆ ಅವರ ಜೀವನದ ಶೈಲಿಯೇ ಬದಲಾಗಿ ಹೋಯಿತು. ಅಲ್ಲಿಯವರೆಗೂ ಅವರ ಬಗ್ಗೆ ಗಮನವೇ ಹರಿಸದಿದ್ದವರೆಲ್ಲರೂ ಇದ್ದಕ್ಕಿಂದ್ದಂತೆಯೇ ಅವರ ಸಮೀಪದ ಆಪ್ತರೆನಿಸುವಂತೆ ವರ್ತಿಸತೊಡಗಿದ್ದಲ್ಲದೇ ಏಕಾಏಕಿ ಸುಶೀಲ್ ಕುಮಾರ್ ಅವರಿಗೆ ಸಕಲ ಮರ್ಯಾದೆ ಕೊಡಲಾರಂಭಿಸಿದರು. ಸುತ್ತ ಮುತ್ತಲಿನ ಊರಿನ ಎಲ್ಲಾ ಸಭೆ ಸಮಾರಂಭಗಳಿಗೂ ಸುಶೀಲ್ ಕುಮಾರ್ ಅವರೇ ಮುಖ್ಯ ಅತಿಥಿ. ನಮ್ಮ ಮುಂದಿನ ಪೀಳಿಗೆಯವರು ಸುಶೀಲ್ ಅವರಂತೆಯೇ ಬುದ್ಧಿವಂತರಾಗಬೇಕು ಎಂದು ಭಾಷಣ ಮಾಡುತ್ತಿದ್ದರೆ, ಸುಶೀಲ್ ಅವರಿಗೂ ತಾನು ಏನೋ ಮಹತ್ತರವಾದ ಕಾರ್ಯ ಸಾಧಿಸಿರುವನೆಂಬ ಗರ್ವ. ಆರಂಭದ ಕೆಲವು ತಿಂಗಳುಗಳು ಎಲ್ಲವೂ ಚೆನ್ನಾಗಿಯೇ ಇತ್ತು. ಆದರೆ, ಎರಡು ವರ್ಷಗಳ ಬಳಿಕ ಅವರ ಜೀವನದಲ್ಲಿ ತಿರುವುಗಳ ಮೇಲೆ ತಿರುವುಗಳು, ರೋಚಕತೆ ಮೇಲೆ ರೋಚಕತೆ ಎಲ್ಲವೂ ಅಪ್ಪಳಿಸತೊಡಗಿತು.
2015-16ರ ವರ್ಷ ಅವರ ಜೀವನದಲ್ಲಿನ ಅತ್ಯಂತ ಸವಾಲಿನ ದಿನಗಳಾಗಿದ್ದವು. ಅವರ ಬಳಿ ಅಷ್ಟೊಂದು ಹಣ ಇದೆ ಎಂದು ಬಹಿರಂಗವಾಗಿ ತಿಳಿದೊಡನೆಯೇ, ಅವರ ಬಳಿ ದಾನ ಕೇಳಲು ವಿವಿಧ ಸಂಘ ಸಂಸ್ಥೆಗಳು ಮತ್ತು ಜನರು ಅವರ ಮನೆಯ ಮುಂದೆ ಸಾಲು ಸಾಲಾಗಿ ನಿಂತರು. ಬಡತನದ ಅರಿವಿದ್ದ ಸುಶೀಲ್ ಕುಮಾರ್, ಅವರ ಕಪಟತನವನ್ನು ಅರಿಯದೆ, ಬಂದವರೆಲ್ಲರಿಗೂ ದಾನ ಶೂರ ಕರ್ಣನಂತೆ ಎತ್ತಿ ಎತ್ತೀ ಧಾರಾಳವಾಗಿ ದಾನ ಮಾಡತೊಡಗಿದರು. ಇದರ ನಡುವೆಯೇ ವ್ಯವಹಾರದ ಅರಿವಿಲ್ಲದೇ ಅವರಿವರ ಬಣ್ಣ ಬಣ್ಣದ ಬೆರಗು ಮಾತುಗಳಿಗೆ ಮರುಳಾಗಿ ವಿವಿಧ ವ್ಯವಹಾರಗಳಲ್ಲಿ ಹೂಡಿದ ಹಣವೆಲ್ಲವೂ ಬಹಳ ಬೇಗ ನಷ್ಟಕ್ಕೆ ಈಡಾಗತೊಡಗಿದವು. ಹೀಗೆ ಹಲವರಿಗೆ ದೇಣಿಗೆ ನೀಡಿ ಮೋಸ ಹೋಗಿದ್ದು ಮತ್ತು ವಿವಿಧ ವ್ಯವಹಾರಗಳಲ್ಲಿ ಹಣ ಕಳೆದುಕೊಂಡ ವಿಚಾರ ಆತನ ಮಡದಿಗೆ ತಿಳಿದಾಗ, ಆಕೆ ಸಹಜವಾಗಿಯೇ ಕೋಪಗೊಂಡು, ಯಾರನ್ನು ನಂಬಬೇಕು? ಯಾರನ್ನು ನಂಬಬಾರದು? ಎಂದು ಗೊತ್ತಾಗುವುದಿಲ್ಲವಾ? ಭವಿಷ್ಯದ ಬಗ್ಗೆ ಚಿಂತೆ ಇಲ್ಲವಾ? ಎಂದು ತರಾಟೆಗೆ ತೆಗೆದುಕೊಳ್ಳುತ್ತಿದ್ದಳಲ್ಲದೇ, ಇದೇ ವಿಚಾರವಾಗಿ ಮನೆಯಲ್ಲಿ ಆಗ್ಗಾಗ್ಗೆ ಜಗಳವಾಗಿ ಕಡೆಗೆ ವಿವಾಹ ವಿಚ್ಚೇಧನದ ವರೆಗೂ ತಲುಪಿತ್ತು.
ಇವೆಲ್ಲದರ ಮಧ್ಯೆ, ಬರಗಾಲದಲ್ಲಿ ಅಧಿಕಮಾಸ ಎನ್ನುವಂತೆ, ಜಾಮಿಯಾ, ಜೆ.ಎನ್.ಯು ಮುಂತಾದ ವಿವಿ ವಿದ್ಯಾರ್ಥಿಗಳು ಸಹಾ ಸುಶೀಲ್ ಕುಮಾರ್ ಗೆ ಎಡತಾಕಿ ಅವನಿಗೆ ಸಹಾಯ ಮಾಡುತ್ತೇವೆ ಎಂಬ ಭ್ರಮೆ ಮೂಡಿಸಿ ಗೆಳೆತನ ಬೆಳಸಿಕೊಂಡರು. ಜಾಮಿಯಾ ಮಿಲಿಯಾ, ಐಐಎಂಸಿ, ಜೆಎನ್ಯುನಲ್ಲಿ ಮಾಧ್ಯಮ ವಿಭಾಗದಲ್ಲಿ ಓದುತ್ತಿದ್ದ ವಿದ್ಯಾರ್ಥಿಗಳು ಮತ್ತು ಕಲಾ ವಿಭಾಗದ ಮತ್ತು ರಂಗಭೂಮಿಯಲ್ಲಿಯೂ ಸಕ್ರೀಯರಾಗಿದ್ದವರೆಲ್ಲರೂ ಒಟ್ಟಾಗಿ ಕುಳಿತು ಪಾರ್ಟಿ ಮಾಡುವಾಗ ಅವರೆಲ್ಲರೂ ಚರ್ಚೆ ಮಾಡುತ್ತಿದ್ದದ್ದನ್ನು ನೋಡುತ್ತಿದ್ದ ಸುಶೀಲ್ ಕುಮಾರ್ಗೆ ತನ್ನ ಬಗ್ಗೆಯೇ ತನಗೆ ಕೀಳರಿಮೆ ಉಂಟಾಗುತ್ತಿತ್ತು, ಅನೇಕ ವಿಷಯಗಳ ಬಗ್ಗೆ ಆತನಿಗೆ ಹೆಚ್ಚು ಜ್ಞಾನ ಇಲ್ಲದಿರುವುದರ ಅರಿವಾಗಿ ಅವನಿಗೇ ಅರಿವಿಲ್ಲದಂತೆಯೇ, ನಿಧಾನವಾಗಿ ಮಹ್ಯಪಾನ ಸೇವನೆ, ಸಿಗರೇಟು ಮತ್ತಿತರ ಚಟಗಳ ದಾಸರಾಗ ತೊಡಗಿದರು. ಆತ ದೆಹಲಿಲಿಗೆ ಒಂದು ವಾರದ ಮಟ್ಟಿಗೆ ಬಂದ ನೆಂದರೇ, ಆ ಏಳೂ ದಿನಗಳು ಬೇರೆ ಬೇರೆ ಗುಂಪುಗಳ ಜೊತೆ ಕುಡಿತ, ಸಿಗರೇಟು ಪಾರ್ಟಿ ಇರುತ್ತಿದ್ದದ್ದಲ್ಲದೇ, ಅವೆಲ್ಲದರ ಖರ್ಚೂ ಸಹಜವಾಗಿ ಸುಶೀಲ್ ಕುಮಾರ್ ಭರಿಸಬೇಕಾಗುತ್ತಿತ್ತು. ಅವರೆಲ್ಲರ ಬಣ್ಣ ಬಣ್ಣದ ಮಾತುಗಳು ಕೇಳಲು ಆಕರ್ಷಣೀಯವಾಗಿರುತ್ತಿದ್ದ ಕಾರಣ ತಾನು ಮಾಡುತ್ತಿದ್ದ ಖರ್ಚಿನ ಬಗ್ಗೆ ಅರಿವೇ ಇರುತ್ತಿರಲಿಲ್ಲ.
ಇವಿಷ್ತರ ಮಧ್ಯೆ ಬಾಲ್ಯದಿಂದಲೂ ಸಿನಿಮಾದ ಬಗ್ಗೆ ಒಲವಿದ್ದ ಕಾರಣ, ಪ್ರಶಸ್ತಿ ವಿಜೇತ ಚಿತ್ರಗಳನ್ನು ನೋಡದೇ ಬಿಡುತ್ತಿರಲಿಲ್ಲ. ಹಾಗಾಗಿ ಸಿನಿಮಾ ನಿರ್ದೇಶಕನಾಗುವ ಆಸೆಯಿಂದ ಪರಿಚಿತ ಸಿನಿಮಾ ನಿರ್ಮಾಪಕರೊಬ್ಬರಿಗೆ ಕರೆ ಮಾಡಿದಾಗ ಅವರು ಸಿನಿಮಾಗೆ ನೇರವಾಗಿ ಬರುವ ಮುನ್ನಾ ಅದರ ತಾಂತ್ರಿಕ ಅಂಶಗಳನ್ನು ತಿಳಿದುಕೊಳ್ಳುವ ಸಲುವಾಗಿ ಕಿರುತೆರೆಯಲ್ಲಿ ಕೆಲಸ ಮಾಡಿ ಅನುಭವ ಪಡೆದುಕೊಳ್ಳಿ ಎಂಬ ಸಲಹೆ ಸೂಕ್ತವೆನಿಸಿ ಕಿರುತೆರೆಯಲ್ಲಿ ತೊಡಗಿ ಕೊಳ್ಳಲಾರಂಭಿಸುತ್ತಾರೆ. ಸಿನಿಮಾ ನಿರ್ದೇಶಕ ಆಗುವ ಕನಸಿನಿಂದ ಮುಂಬೈಗೆ ಹೋಗಿ ಚಿತ್ರಸಾಹಿತಿಯಾಗಿದ್ದ ಸ್ನೇಹಿತರೊಬ್ಬರ ಕೊಠಡಿಯಲ್ಲೇ ಉಳಿದುಕೊಂಡು ನಿಧಾನವಾಗಿ. ಕಥೆ, ಚಿತ್ರಕಥೆ, ಸಂಭಾಷಣೆ, ಉಡುಗೆ ತೊಡುಗೆ ಇತ್ಯಾದಿ ಅನೇಕ ವಿಚಾರಗಳನ್ನು ಇವರು ತಿಳಿದುಕೊಳ್ಳುತ್ತಲೇ, ಅದೇ ಸಂಬಂಧ ಪಟ್ಟಂತೆ ಕೊಠಡಿಯಲ್ಲೇ ಕುಳಿತು ವಿವಿಧ ಸಿನಿಮಾ ನೋಡುತ್ತಲೋ ಅಥವಾ ವಿವಿಧ ಪುಸ್ತಕಗಳನ್ನು ಓದುತ್ತಲೇ ಹೋಗುವಾಗ ಅವರಿಗೇ ಅರಿವಿಲ್ಲದಂತೆ ಕೆಲವೇ ಕೆಲವು ತಿಂಗಳುಗಳಲ್ಲಿ ಚೈನ್ ಸ್ಮೋಕರ್ ಆಗಿ ಹೋಗುತ್ತಾರೆ. ಕೆಲವು ದಿನಗಳ ನಂತರ ಆತ್ಮವಿಮರ್ಶೆ ಮಾಡಿಕೊಂಡು ತಾನು ನಿಜವಾಗಿಯೂ ಸಿನಿಮಾ ನಿರ್ದೇಶಕನಾಗಬೇಕೆಂದು ನಾನು ಬಂದದ್ದಲ್ಲ, ಬದಲಾಗಿ ವಾಸ್ತವವನ್ನು ಒಪ್ಪಿಕೊಳ್ಳಲಾಗದೇ ಓಡಿ ಹೋಗುವ ಪಲಾಯನವಾದಿಯಂತೆ ಗೋಚರಿಸಿದಾಗ ಬಂದ ದಾರಿಗೆ ಸುಂಕವಿಲ್ಲ ಎನ್ನುವಂತೆ ಮರಳಿ ಊರಿಗೆ ಹಿಂದಿರುಗುತ್ತಾರೆ.
ಸುಶೀಲ್ ಕುಮಾರ್ ನ ಈ ಎಲ್ಲಾ ತಿಕ್ಕಲುತನದಿಂದ ಬೇಸತ್ತು ತವರು ಮನೆಗೆ ಹೋಗಿದ್ದ ತನ್ನ ಮಡದಿಯನ್ನು ಮನೆಗೆ ಕರೆ ತಂದು ಅದೊಂದು ರಾತ್ರಿ ಲ್ಯಾಪ್ ಟಾಪಿನಲ್ಲಿ ಪ್ಯಾಸಾ ಸಿನಿಮಾ ನೋಡುತ್ತಾ, ಇನ್ನೇನು ಕ್ಲೈಮ್ಯಾಕ್ಸ್ ಸೀನ್ ಬರಬೇಕು ಎನ್ನುವಷ್ಟರಲ್ಲಿ ಹೆಂಡತಿ ಜೋರಾಗಿ ಅದೇನು ನೋಡಿದ್ದೇ ಸಿನಿಮಾವನ್ನು ನೋಡಿ ನೋಡಿ ಹುಚ್ಚು ಹಿಡಿಯುತ್ತಿದೆ ನಿಮಗೆ. ದಯವಿಟ್ಟು ರೂಮಿಂದ ಹೊರಗೆ ಹೋಗಿ ಎಂದು ಕೂಗಿಕೊಂಡಾಗ ಅಸಹನೆಯಿಂದ ರೂಮಿನಿಂದ ಹೊರಬಂದು, ಛೇ! ತನ್ನ ಜೀವನವು ಹೀಗೇಕೆ ಆಯಿತು? ಎಂದು ಯೋಚಿಸುತ್ತಲೇ ಮನೆಯ ಮುಂದೆ ನಡೆದುಕೊಂಡು ಹೋಗುವಾಗ ಇಂಗ್ಲೀಷ್ ಪತ್ರಿಕೆಯೊಂದರ ಪತ್ರಕರ್ತರೊಬ್ಬರು ಕರೆ ಮಾಡಿ ಅದ್ಯಾವುದೋ ವಿಷಯವನ್ನು ಹೇಳಿದಾಗ, ಬೇಸತ್ತು, ತನ್ನ ಬಳಿ ಇದ್ದಬದ್ದ ಹಣವೆಲ್ಲಾ ಖರ್ಚಾಗಿ ಹೋಗಿದೆ. ಈಗ ತನ್ನ ಬಳಿ ಕೇವಲ ಎರಡು ಹಸುಗಳು ಮಾತ್ರ ಇದ್ದು, ಆ ಹಸುಗಳ ಹಾಲನ್ನು ಮಾರಿ ಜೀವನ ನೆಡೆಸುತ್ತಿದ್ದೇನೆ ಎಂದು ಹೇಳಿದ ಸುದ್ದಿಯನ್ನು ಆತ ಯಥಾವತ್ತಾಗಿ ತನ್ನ ಪತ್ರಿಕೆಯಲ್ಲಿ ಪ್ರಕಟವಾದ ಕೂಡಲೇ, ಅಲ್ಲಿಯವರೆಗೆ ಸುಶೀಲ್ ಸುತ್ತಾ ಗಿರಕಿ ಹೊಡೆಯುತ್ತಿದ್ದವರ ಸಂಖ್ಯೆ ದಿನೇ ದಿನೇ ಕಡೆಮೆಯಾಗುತ್ತಾ ಬರುತ್ತದೆ. ಆರಂಭದಲ್ಲಿ ತಿಂಗಳಿಗೆ 10-15 ಕಾರ್ಯಕ್ರಮಗಳಿಗೆ ಕರೆಯುತ್ತಿದ್ದವರು, ಕೈಯಲ್ಲಿ ಕಾಸಿಲ್ಲ ಎಂದ ನಂತರ ಕ್ಯಾರೇ ತಿಮ್ಮಯ್ಯಾ? ಎಂದು ಮೂಸು ನೋಡದ ಸ್ಥಿತಿಗೆ ಬಂದಿರುತ್ತಾರೆ.
2016ರ ಮಾರ್ಚ್ ತಿಂಗಳ ನಂತರ ಅವರ ಜೀವನದಲ್ಲಿ ಸ್ವಲ್ಪ ಮಟ್ಟಿಗೆ ಸುಧಾರಣೆ ಕಾಣತೊಡಗುತ್ತದೆ. ತನ್ನ ಬದುಕಿಗೆ ಎಷ್ಟು ಬೇಕೋ ಅಷ್ಟು ಮಾತ್ರ ಗಳಿಸಬೇಕು ಎಂಬ ಉದ್ದೇಶದಿಂದ ಮತ್ತೆ ಅವರ ಇಚ್ಛೆಯಂತೆ ಶಿಕ್ಷಕ ವೃತ್ತಿಗೆ ಸೇರಿಕೊಂಡು ಪರಿಸರ ಜಾಗೃತಿ ಕಾರ್ಯಕ್ರಮಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಾಗನಿಂದ ಅವರಿಗೆ ಮಾನಸಿಕ ನೆಮ್ಮದಿ ಸಿತೊಡಗುತ್ತದೆ. 2019ರಲ್ಲಿ ಧೂಮಪಾನ ಮಧ್ಯಪಾನವೆಲ್ಲವನ್ನೂ ತ್ಯಜಿಸಿ, ಸುಂದರವಾದ ಸಂಸಾರದೊಂದಿಗೆ ಸರಳವಾದ ಜೀವನ ನಡೆಸತೊಡಗಿದ್ದಾರೆ.
ಬದಲಾವಣೆಗೆ ಹೊಂದಿಕೊಳ್ಳುವ ಸಾಮರ್ಥ್ಯವೇ ಬುದ್ದಿವಂತಿಕೆ. ಯಾರು ಎಷ್ಟು ಬೇಗ ಹೊಸ ಪರಿಸ್ಥಿತಿಗಳಿಗೆ ಒಗ್ಗಿಕೊಳ್ಳುತ್ತಾರೋ, ಅಷ್ಟು ಯಶಸ್ಸನ್ನು ತಮ್ಮದಾಗಿಸಿಕೊಳ್ಳುತ್ತಾರೆ. ಅದಿಲ್ಲದೇ ಹೋದಲ್ಲಿ, ಹಾಸಿಗೆ ಇದ್ದಷ್ಟೇ ಕಾಲು ಚಾಚು ಎಂಬ ಹಿರಿಯರ ಅನುಭವಾಮೃತ ನುಡಿಯಂತೆ ಇದ್ದದ್ದರಲ್ಲೇ ಸಂತೃಪ್ತಿ ಹೊಂದುವುದೇ ಉತ್ತಮವಲ್ಲವೇ?
ಏನಂತೀರೀ?
ನಿಮ್ಮವನೇ ಉಮಾಸುತ
Nice one Sir 👍🏻
LikeLiked by 1 person