ಬ್ರಿಟೀಷರ ವಿರುದ್ಧ ಹೋರಾಟ ಮಾಡಿದ ವೀರಮಾತೆಯರಲ್ಲಿ ಅತ್ಯಂತ ಪ್ರಖ್ಯಾತವಾಗಿದ್ದ ಭಾರತದ ಮಹಿಳಾ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಅತ್ಯಂತ ಪ್ರಮುಖ ಪಾತ್ರವಹಿಸಿದ್ದ ಕಿತ್ತೂರು ರಾಣಿ ಚೆನ್ನಮ್ಮಳ ಬಲಗೈ ಬಂಟರಾಗಿದ್ದವರೇ, ಸಂಗೊಳ್ಳಿ ರಾಯಣ್ಣ, ಸ್ವಾಮಿ ಭಕ್ತಿಗೆ ಮತ್ತೊಂದು ಹೆಸರೇ ಸಂಗೊಳ್ಳಿ ರಾಯಣ್ಣ ಎಂದರೂ ತಪ್ಪಾಗದು. ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ವಿರುದ್ಧ ತನ್ನ ಸಾವಿನವರೆಗೂ ಹೋರಾಡಿದ ಅಪ್ರತಿಮ ವೀರಕಲಿ ಸಂಗೊಳ್ಳಿ ರಾಯಣ್ಣ.
ಸಂಗೊಳ್ಳಿ ರಾಯಣ್ಣ ಕರ್ನಾಟಕದ ಬೆಳಗಾವಿ ಜಿಲ್ಲೆಯ ಬೈಲಹೊಂಗಲ (ಸಂಪಗಾವಿ)ತಾಲೂಕಿನ ಸಂಗೊಳ್ಳಿ ಗ್ರಾಮದಲ್ಲಿ ತಂದೆ ಭರಮಪ್ಪ ತಾಯಿ ಕೆಂಚಮ್ಮಾಜಿಯ ಪುತ್ರನಾಗಿ 15 ಆಗಸ್ಟ್ 1798 ರಂದು ಜನಿಸಿದರು. ಕಿತ್ತೂರಿನಿಂದ ಕೆಲವೇ ದೂರದಲ್ಲಿರುವ ಸಂಗೊಳ್ಳಿ ಗ್ರಾಮದಲ್ಲಿ ಭರಮಪ್ಪ ಮತ್ತು ಕೆಂಚವ್ವ ದಂಪತಿಯ ಪುತ್ರನಾಗಿ ರಾಯಣ್ಣ ಜನಿಸುತ್ತಾನೆ. ಇವರದು ಪ್ರಸಿದ್ಧ ಕುಟುಂಬ. ಇವರ ತಾತ ರೋಗಪ್ಪ ವೀರಪ್ಪ ದೇಸಾಯಿಯವರು ಖ್ಯಾತ ಆಯುರ್ವೇದ ಪಂಡಿತರಾಗಿದ್ದಲ್ಲದ್ದೇ ಅಪ್ರತಿಮ ಶೂರರಾಗಿ ಯುದ್ಧದಲ್ಲಿ ಅವರು ತೋರಿದಂತಹ ಶೌರ್ಯಕ್ಕಾಗಿ ‘‘ಸಾವಿರ ಒಂಟೆ ಸರದಾರ’’ ಎಂಬ ಬಿರುದು ನೀಡಿ ರಕ್ತಮಾನ್ಯ ಭೂಮಿಯನ್ನು ಬಳುವಳಿಯಾಗಿ ಪಡೆದಿದ್ದರು. ರಾಯಣ್ಣನ ತಂದೆ ಭರಮಣ್ಣನವರೂ ಸಹಾ ಮಹಾನ್ ಸಾಹಸಿಯಾಗಿದ್ದು, ಕಿತ್ತೂರ ಸಂಸ್ಥಾನದ ಜನರಿಗೆ ಕಾಟ ಕೊಡುತ್ತಿದ್ದ ಹೆಬ್ಬುಲಿಯನ್ನು ಕೊಂದ ಕೀರ್ತಿ ಇವರದ್ದು. ಈ ಸಾಹಸಕ್ಕಾಗಿ ಕಿತ್ತೂರು ಮಲ್ಲಸರ್ಜ ದೇಸಾಯಿ ನೀಡಿದ ಹೊಲವೇ ರಕ್ತಮಾನ್ಯದ ಹೊಲ. ಸಂಗೊಳ್ಳಿಯಲ್ಲಿದ್ದ ಗರಡಿ ಮನೆ ಸುತ್ತಮುತ್ತಲಿನ ಹತ್ತಾರು ಹಳ್ಳಿಗಳಲ್ಲಿ ಅತ್ಯಂತ ಪ್ರಸಿದ್ಧಿಪಡೆದಿದ್ದಂತಹ ಗರಡಿಯಾಗಿತ್ತು. ಅಂತಹ ಮಾಹಾನ್ ವೀರ ಶೂರರ ವಂಶದಲ್ಲಿ ಜನಿಸಿದ್ದಂತಹ ರಾಯಣ್ಣನೂ ಸಹಾ ಅಪ್ರತಿಮ ಹೋರಾಟಗಾರನೇ. ಸುಮಾರು 7 ಅಡಿಗಳಿಂಗಲೂ ಎತ್ತರವಿದ್ದ ರಾಯಣ್ಣ ಸಂಗೊಳ್ಳಿಯ ಗರಡಿ ಮನೆಯಲ್ಲಿ ವ್ಯಾಯಾಮ ಮಾಡಿ ತನ್ನ ದೇಹವನ್ನು ಚನ್ನಾಗಿ ಹುರಿಗೊಳಿಸಿದ್ದ ಕಾರಣ, ಅತ್ಯಂತ ಸಧೃಢ ಮತ್ತು ಶತೃಗಳು ಆತನನ್ನು ನೋಡುತ್ತಲೇ ಅವರ ಎದೆಯಲ್ಲಿ ನಡುಕ ಹುಟ್ಟಿಸುವಂತಿದ್ದ.
ತನ್ನ ತಾರುಣ್ಯದಲ್ಲಿ ರಾಯಣ್ಣ ಕಿತ್ತೂರು ಸಾಮ್ರಾಜ್ಯಕ್ಕೆ ಸೇರಿಕೊಂಡು ತನ್ನ ಶೌರ್ಯ ಮತ್ತು ಪರಾಕ್ರಮಗಳಿಂದ ಅತ್ಯಂತ ವೇಗದವಾಗಿ ರಾಣಿ ಚನ್ನಮ್ಮಳ ಬಲಗೈ ಬಂಟಗಾಗಿದ್ದಲ್ಲದೇ, ಆವಳ ಸೈನ್ಯದ ಮುಖ್ಯಸ್ಥರಾಗಿದ್ದ. ಆ ಸಮಯದಲ್ಲಿ ರಾಣಿ ಚೆನ್ನಮ್ಮ ಅವರು ಬ್ರಿಟಿಷ್ ಆಳ್ವಿಕೆಯ ವಿರುದ್ಧ ಬಂಡಾಯವೆದ್ದ ಮೊದಲ ಮಹಿಳಾ ಆಡಳಿತಗಾರರಲ್ಲಿ ಒಬ್ಬರಾಗಿದ್ದರು. ಬ್ರಿಟೀಷರ ವಿರುದ್ಧ ಕೆಚ್ಚೆದೆಯಿಂದ ಹೋರಾಡಿ ವೀರ ಮರಣಹೊಂದಿದ ಕಿತ್ತೂರು ರಾಣಿ ಚನ್ನಮ್ಮಳ ಮರಣದ ನಂತರವೂ ರಾಯಣ್ಣ ತನ್ನ ಮರಣದ ತನಕ ಕಿತ್ತೂರು ಪರವಾಗಿ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯೊಂದಿಗೆ ಹೋರಾಡಿದ ಪರಮವೀರ.
ಸಂಗೊಳ್ಳಿ ರಾಯಣ್ಣ ಕೂಡ ಕಿತ್ತೂರು ರಾಣಿಯ ಜೊತೆ 1824 ರ ಹೋರಾಟದಲ್ಲಿ ರಾಣಿ ಚನ್ನಮ್ಮನೊಂದಿಗೆ ಭಾಗವಹಿಸಿ, ಬ್ರಿಟಿಷರಿಂದ ಬಂಧಿಸಲ್ಪಟ್ಟು ನಂತರ ಬಿಡುಗಡೆಯಾಗಿದ್ದರು. ಪರಮ ಸ್ವಾಮಿ ಭಕ್ತರಾಗಿದ್ದ ರಾಯಣ್ಣ ಬಿಡುಗಡೆಯಾದ ನಂತರ ನಿರಂತರವಾಗಿ ಬ್ರಿಟಿಷರ ವಿರುದ್ಧ ಹೋರಾಟ ಮಾಡುವ ಸಲುವಾಗಿ ಸುತ್ತಮುತ್ತಲಿನ ಊರುಗಳ ಜಮೀನ್ದಾರರುಗಳಿಂದ ಹಣ ಪಡೆದು, ಹಳ್ಳಿಗಳಲ್ಲಿ ವೀರ ಯೋಧರನ್ನು ಒಟ್ಟು ಮಾಡಿ ಸಮರ್ಧವಾದ ಸೈನ್ಯವನ್ನು ಕಟ್ಟಿ ಬ್ರೀಟೀಷರ ವಿರುದ್ಧ ಹೋರಾಟವನ್ನು ಮುಂದುವರೆಸಿದ್ದಲ್ಲದೇ, ರಾಣಿ ಚನ್ನಮ್ಮಳ ದತ್ತುಪುತ್ರ ಶಿವಲಿಂಗಪ್ಪನನ್ನು ಕಿತ್ತೂರಿನ ರಾಜನನ್ನಾಗಿ ಮಾಡಲು ಪ್ರಯತ್ನಿಸುತ್ತಿದ್ದರು. ಅದಕ್ಕಾಗಿ ಸ್ಥಳೀಯ ಜನರನ್ನು ಒಟ್ಟುಗೂಡಿಸಿ, ಬ್ರಿಟಿಷರ ವಿರುದ್ಧ ಛತ್ರಪತಿ ಶಿವಾಜಿ ಮಹಾರಾಜರಂತೆ ಗೆರಿಲ್ಲಾ ಮಾದರಿಯ ಯುದ್ಧವನ್ನು ಪ್ರಾರಂಭಿಸಿದರು. ಅವನು ಮತ್ತು ಅವನ “ಸೈನ್ಯ” ಸ್ಥಳದಿಂದ ಸ್ಥಳಕ್ಕೆ ಕ್ಷಣ ಮಾತ್ರದಲ್ಲಿ ಓಡಾಡುತ್ತಾ, ಬ್ರಿಟಿಷ್ ಕಚೇರಿಗಳನ್ನು ಸುಟ್ಟು ಹಾಕಿದ್ದಲ್ಲದೇ, ಬ್ರಿಟಿಷ್ ಸೈನ್ಯವನ್ನು ಲೂಟಿ ಮಾಡುವ ಮೂಲಕ ಅವರಲ್ಲಿದ್ದ ಮದ್ದು ಗಂಡುಗಳನ್ನು ಮತ್ತು ಅವರ ಖಜಾನೆಗಳನ್ನು ಲೂಟಿ ಯುದ್ದಕ್ಕೆ ಬಳಸಿಕೊಳ್ಳುತ್ತಿದ್ದರು. ಸಂಗೊಳ್ಳಿ ರಾಯಣ್ನ ಮತ್ತು ಆತನ ಸೈನ್ಯವನ್ನು ಬ್ರಿಟಿಷ್ ಪಡೆಗಳು ಎಂದಿಗೂ ಬಹಿರಂಗ ಯುದ್ಧದಲ್ಲಿ ಸೋಲಿಸಲು ಸಾಧ್ಯವಾಗಿರಲೇ ಇಲ್ಲ. ಆದರೆ, ಸ್ಥಳೀಯ ಕೆಲ ವಿಶ್ವಾಸಘಾತುಕರ ಸಹಾಯದಿಂದ ಏಪ್ರಿಲ್ 1830 ರಲ್ಲಿ ಬ್ರಿಟಿಷರು ಸಂಗೊಳ್ಳಿ ರಾಯಣ್ಣನನ್ನು ಮತ್ತು ಕಿತ್ತೂರಿನ ಮುಂದಿನ ದೊರೆ ಆಗಬೇಕಿದ್ದ ಬಾಲಕ ಶಿವಲಿಂಗಪ್ಪನನ್ನೂ ಮತ್ತವರ ಸಂಗಡಿಗರನ್ನು ಬ್ರಿಟಿಷರು ಮೋಸದಿಂದ ಬಂಧಿಸಿದ್ದರು. ರಾಯಣ್ಣನ ವಿರುದ್ಧ ವಿಚಾರಣೆ ನಡೆಸಿದ ಅಂದಿನ ಸರ್ಕಾರ ಮರಣದಂಡನೆ ವಿಧಿಸಿತು. ಆತನ ಜೊತೆಯೇ ಸರೆ ಸಿಕ್ಕ ೧೩ ಜನರಲ್ಲಿ ಏಳು ಜನ ಅನುಯಾಯಿಗಳಿಗೆ ಮರಣ ದಂಡನೆ ನೀಡಿದರೆ ಉಳಿದ ಆರು ಜನರಿಗೆ ಜೀವಾವಧಿ ಶಿಕ್ಷೆ ನೀಡಿ, ಸಮುದ್ರದಾಚೆಗೆ ಕಳಿಸಿದರು.
ತನಗೆ ಮರಣದಂಡಣೆಯ ಶಿಕ್ಷೆ ಆಗಿದೆ ಎಂಬ ವಿಷಯವನ್ನು ಅರಿತು, ನೀವು ನನ್ನನ್ನು ಗಲ್ಲಿಗೇರಿಸಬಹುದು ಆದರೆ ನೆನಪಿರಲಿ, ನಮಗೆ ಸ್ವಾತಂತ್ರ್ಯ ಬರುವವರೆಗೂ ಈ ದೇಶದ ಪ್ರತಿಯೊಂದು ಮನೆಯಿಂದಲೂ ಒಬ್ಬ ರಾಯಣ್ಣ ಹುಟ್ಟುತ್ತಾನೆ ಎಂದು ಅವರು ಬ್ರಿಟಿಷರಿಗೆ ಎಚ್ಚರಿಕೆಯ ರೀತಿಯಲ್ಲಿ ತನ್ನ ಕೊನೆಯ ಮಾತುಗಳನ್ನು ಹೇಳಿದ್ದರು.
ರಾಯಣ್ಣನನ್ನು 26 ಜನವರಿ 1831 ರಂದು ಬೆಳಗಾವಿ ಜಿಲ್ಲೆಯ ನಂದಗಡದಿಂದ ಸುಮಾರು 4 ಕಿಲೋಮೀಟರ್ ದೂರದಲ್ಲಿರುವ ಆಲದ ಮರಕ್ಕೆ ನೇಣು ಹಾಕುವ ಮೂಲಕ ಮರಣದಂಡನೆ ವಿಧಿಸಲಾಯಿತು. ಸಂಗೊಳ್ಳಿ ಗ್ರಾಮದ ಮತ್ತು ರಾಯಣ್ಣನ ಪರಮಾಪ್ತರಲ್ಲಿ ಒಬ್ಬರಾಗಿದ್ದ ಬಿಚ್ಚುಗತ್ತಿ ಚನ್ನಬಸವಣ್ಣನವರು ಮಾರುವೇಷದಲ್ಲಿ ರಾಯಣ್ಣನ ಅಂತಿಮ ಸಂಸ್ಕಾರದಲ್ಲಿ ಪಾಲ್ಗೊಂಡು, ರಾಯಣನ 8 ಅಡಿ ಉದ್ದದ ಸಮಾಧಿಯ ಮೇಲೆ ಆಲದ ಸಸಿ ನೆಡುವ ಮೂಲಕ ತನ್ನ ಗೆಳೆಯರಿಗೆ ಅಂತಿಮ ನಮನ ಸಲ್ಲಿಸಲ್ಲಿಸಿದ್ದರು. ಅಂದು ಆವರು ನೆಟ್ಟ ಆ ಆಲದ ಸಸಿ, ನಮ್ಮ ರಾಷ್ಟ್ರೀಯ ವೃಕ್ಷವಾಗಿ ದೇಶಾಭಿಮಾನಿಗಳಿಗೆ ಸದಾಕಾಲ ಸ್ಪೂರ್ತಿಯ ಸಂಕೇತವಾಗಿ ಬೃಹದಾಕಾರವಾಗಿ ಬೆಳೆದು ಇಂದು ಪೂಜ್ಯ ಭಾವನೆಗಳಿಗೆ ಇಂಬು ನೀಡುವ ಪುಣ್ಯ ಸ್ಥಳವಾಗಿದೆ.
ರಾಯಣ್ಣನಿಗೆ, ವೀರ ರಾಯ , ವೀರ ಸಂಗೊಳ್ಳಿ ರಾಯಣ್ಣ, ಶೂರ ರಾಯಣ್ಣ ಧೀರ ರಾಯಣ್ಣ, ಕ್ರಾಂತಿವೀರ ರಾಯಣ್ಣ ಇತ್ಯಾದಿ ದಾಖಲೆಗಳು ಜನಮನದಾಳದಿಂದ, ಜನಪದರಿಂದ ನಾಟಕಕಾರರಿಂದ, ಇತಿಹಾಸಕಾರರಿಂದ ರಾಯಣ್ಣನಿಗೆ ಹೆಸರಿಸಲ್ಪಟ್ಟಿವೆ. ರಾಯಣ್ಣನ ನಿಸ್ವಾರ್ಥ ಹೋರಾಟ, ದೇಶಪ್ರೇಮ ಯುವಜನತೆಯಲ್ಲಿ ಸ್ಫೂರ್ತಿಯನ್ನು ತುಂಬುತ್ತದೆ. ಇದ್ದರೆ ರಾಯಣ್ಣನಂತಹ ದೇಶಪ್ರೇಮಿಗಳಿರಬೇಕು ಎನ್ನುವುದು ಎಲ್ಲರ ಮಾತಾಗಿದೆ. ರಾಯಣ್ಣನ ದಂಡಿನಲ್ಲಿ ಸ್ಮರಿಸಬೇಕಾದ ಅತ್ಯಂತ ಮಹತ್ವದ ವಿಷಯವೆಂದರೆ ಒಗ್ಗಟ್ಟು ಉಂಟು ಮಾಡಿರುವ ಬಗೆಯನ್ನು ತಿಳಿಯುವುದು. ರಾಯಣ್ಣನ ಹೆಸರನ್ನು ಅಮರವಾಗಿಸಲು ಬೆಂಗಳೂರಿನ ರೈಲು ನಿಲ್ದಾಣಕ್ಕೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಎಂದು ಹೆಸರಿಡಲಾಗಿದೆ.
ಭಾರತಕ್ಕೆ ಸ್ವಾತ್ರಂತ್ರ್ಯ ದೊರೆತ ಅಗಸ್ಟ್ 15ರಂದೇ ಹುಟ್ಟಿದ್ದ ರಾಯಣ್ಣ ಕೊನೆಗೆ ಬ್ರಿಟೀಷರಿಂದ ಗಲ್ಲಿಗೇರಿಸಲ್ಪಟ್ಟು ಸತ್ತದ್ದು ಜನವರಿ 26 ಅರ್ಥಾತ್ ಭಾರತದ ದೇಶದ ಗಣರಾಜ್ಯೋತ್ಸದ ದಿನ. ಹೀಗೆ ರಾಯಣ್ಣನ ಹುಟ್ಟು ಮತ್ತು ಸಾವು ಎರಡೂ ಸಹಾ ಭಾರತದ ಐತಿಹಾಸಿಕ ದಿನಗಳೊಂದಿಗೆ ತಾಳೆಯಾಗುತ್ತಿರುವುದು ಕಾಕತಾಳೀಯ ಎನ್ನುವುದಕ್ಕಿಂತಲೂ ಅಂತಹ ವೀರ ಮಗನನ್ನು ಪಡೆದ ಭಾರತಮಾತೆಯೇ ಧನ್ಯಳು ಎಂದರೂ ತಪ್ಪಾಗದು ಅಲ್ವೇ?
ಏನಂತೀರೀ?
ನಿಮ್ಮವನೇ ಉಮಾಸುತ