ಸ್ವಾಧೀನತೆ ಯಿಂದ ಸ್ವಾತಂತ್ರ್ಯದೆಡೆಗೆ, ವಂದೇ ಮಾತರಂ ಗೌರವ ಗಾಯನ ಆಭಿಯಾನ

bankimaನಮಗೆಲ್ಲರಿಗೂ ತಿಳಿದಿರುವಂತೆ ಪಶ್ಚಿಮ ಬಂಗಾಳದ ಹಿರಿಯ ಸ್ವಾತಂತ್ರ್ಯ ಹೋರಾಟಗಾರರೂ ಮತ್ತು ಕವಿಗಳಾಗಿದ್ದ ಬಂಕಿಮ ಚಂದ್ರ ಚಟರ್ಜಿಯವರು ಸ್ವಾತಂತ್ರ್ಯದ ಹೋರಾಟದ ಸಂಧರ್ಭದಲ್ಲಿ ಭಾರತೀಯರಲ್ಲಿ ತಾಯ್ನಾಡಿನ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ರಚಿಸಿದ ಗೀತೆಯೇ ವಂದೇ ಮಾತರಂ. ತಾಯಿ ನಿನಗೆ ವಂದಿಸುವೆ ಎಂಬರ್ಥ ಬರುವ ಈ ಗೀತೆಯ ಶೀರ್ಷಿಕೆಯಾದ ವಂದೇ ಮಾತಂ ಘೋಷಣೆ ದೇಶಾದ್ಯಂತ ಕೋಟ್ಯಾಂತರ ಸ್ವಾತ್ರಂತ್ರ್ಯ ಹೋರಾಟಗಾರ ರಣ ಘೋಷಣೆಯಾಗಿ ಅವರನ್ನೆಲ್ಲಾ ಸ್ವಾತ್ರಂತ್ರ್ಯ ಹೋರಾಟಕ್ಕೆ ಧುಮುಕಲು ಪ್ರೇರೇಪಣಾ ಮಂತ್ರವಾಗಿ ಲಕ್ಷಾಂತರ ಜನರ ವಂದೇ ಮಾತರಂ.. ವಂದೇ ಮಾತರಂ. ಉಧ್ಘೋಷ ಬ್ರಿಟೀಷರ ಕಿವಿಗೆ ಸೀಸ ಹುಯ್ಯುವಂತಾಗುತ್ತಿತ್ತು ಎಂದರೆ ಆ ವಂದೇ ಮಾತರಂ ಘೋಷಣೆಯ ಶಕ್ತಿ ಎಷ್ಟಿತ್ತು ಎಂಬುದರ ಅರಿವಾಗುತ್ತದೆ.

tagoreಈ ರೀತಿಯಾಗಿ ವಂದೇ ಮಾತರಂ ಘೋಷಣೆ ಭಾರತೀಯರ ಸ್ವಾತ್ರಂತ್ರ್ಯ ಪ್ರೇಮವನ್ನು ಜಾಗೃತಗೊಳಿಸುತ್ತಾ, ಆಂದು ದೇಶವನ್ನಾಳುತ್ತಿದ್ದ ಬ್ರಿಟಿಷರಿಗೆ ಅಸಹನೆ ಮೂಡಿಸುತ್ತಿದ್ದದ್ದನ್ನು ಮನಗಂಡೇ, 1896 ರಲ್ಲಿ, ಈ ಹಾಡನ್ನು ಮೊದಲು ಸಾರ್ವಜನಿಕವಾಗಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನದಲ್ಲಿ ರವೀಂದ್ರನಾಥ ಟ್ಯಾಗೋರ್ ಸ್ವತಃ ಹಾಡಿದ್ದರೇ, ನಂತರ ಕಲ್ಕತ್ತಾದಲ್ಲಿ 27 ಡಿಸೆಂಬರ್ 1911 ರಂದು ನಡೆದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನದಲ್ಲಿ ಹಾಡಿದ ನಂತರ ಎಲ್ಲಾ ರಾಷ್ಟ್ರೀಯ ಕಾರ್ಯಕ್ರಮಗಳಲ್ಲಿ ವಂದೇಮಾತರಂ ಗೀತೆಯನ್ನು ಆರಂಭದಲ್ಲಾಗಲೀ ಇಲ್ಲವೇ ಅಂತ್ಯದಲ್ಲಾಗಲೀ ಖಡ್ಡಾಯವಾಗಿ ಹಾಡಲೇ ಬೇಕೆನ್ನುವ ಅಲಿಖಿತ ನಿಯಮ ಅಂದು ಮತ್ತು ಇಂದೂ ಸಹಾ ದೇಶಾದ್ಯಂತ ಜಾರಿಯಲ್ಲಿದೆ ಎಂದರೆ ಅದುವೇ ಆ ಗೀತೆಯ ತಾಕತ್ತು ಎಂದರೂ ಅತಿಶಯವಲ್ಲ.

vande_mataramಮುಂದೆ 1947ರಲ್ಲಿ ಬ್ರಿಟೀಷರಿಂದ ಸ್ವಾತ್ರಂತ್ಯ್ರ ದೊರೆತು ಈ ದೇಶದ ರಾಷ್ಟ್ರಗೀತೆ ಯಾವುದು ಆಗಬೇಕು? ಎಂಬ ಚರ್ಚೆ ಬಂದಾಗ ಸ್ವಾತ್ರಂತ್ರ್ಯ ಹೋರಾಟದ ಸಮಯದಲ್ಲಿ ರಾಷ್ಟ್ರ ಜನತೆಯನ್ನು ಒಗ್ಗೂಡಿಸಿ, ರಾಷ್ಟ್ರದ ಜನತೆಗೆ ಸ್ವಾತಂತ್ರ್ಯದ ಜಾಗೃತಿಯನ್ನುಂಟು ಮಾಡಿದ ವಂದೇಮಾತರಂನ್ನೇ ಎಲ್ಲರೂ ಒಕ್ಕೊರಿಲಿನಿಂದ ಇದೇ ನಮ್ಮ ರಾಷ್ಟ್ರಗೀತೆಯಾಗಲಿ ಎಂದು ಹೇಳಿದಾಗ, ವಂದೇಮಾತರಂ ಗೀತೆಯಲ್ಲಿ ದೇಶವನ್ನು ದುರ್ಗಾಮಾತೆಗೆ ಹೋಲಿಸಿರುವ ಕಾರಣ ವ್ಯಕ್ತಿಪೂಜೆಯನ್ನು ಸಹಿಸಿದ ಮುಸಲ್ಮಾನರು ದಿಕ್ಕರಿಸಿದ ಪರಿಣಾಮ, 1911ರ ಡಿಸೆಂಬರ್‌ನಲ್ಲಿ ಬ್ರಿಟಿಷ್ ರಾಜ ಐದನೇ ಜಾರ್ಜ್ ಮತ್ತು ರಾಣಿ ಮೇರಿಯವರ ಭಾರತದ ಭೇಟಿಯ ಸಮಯದಲ್ಲಿ ಅವರನ್ನು ಹೊಗಳುವುದಕ್ಕಾಗಿಯೇ ಆತನನ್ನು ಅಧಿನಾಯಕ (ಭಗವಂತ ಅಥವಾ ಆಡಳಿತಗಾರ) ಎಂದು ಪ್ರಶಂಸಿರುವ ಭಾರತ ಭಾಗ್ಯ ವಿಧಾತ (ಭಾರತದ ಹಣೆಬರಹವನ್ನು ಬರೆಯುವವ) ಎಂದೇ ಹಾಡಿ ಹೊಗಳಿದ್ದ ರಾಷ್ಟ್ರಕವಿ ರವೀಂದ್ರನಾಧ್ ಠಾಗೋರ್ ಅವರ ಜನಗಣಮನ ಗೀತೆಯನ್ನು ರಾಷ್ಟ್ರಗೀತೆಯನ್ನಾಗಿ ಮಾಡಿದ್ದು ನಿಜಕ್ಕೂ ದಾಸ್ಯದ ಸಂಕೇತವೇ ಸರಿ. ಇಷ್ಟಾಗಿಯೂ ಸ್ವಾತ್ರಂತ್ರ್ಯ ಸಂಗ್ರಾಮದ ಈ ಗೀತೆಯನ್ನು 1947 ರ ಆಗಸ್ಟ್ 15 ರಂದು ಸ್ವತಂತ್ರ ಭಾರತದ ಮೊದಲ ಸೂರ್ಯೋದಯದ ಸಮಯದಲ್ಲಿ ಶ್ರೀಯುತ ಸರ್ದಾರ್ ವಲ್ಲಬಾಯಿ ಪಟೇಲ್ ಅವರ ಕೋರಿಕೆಯ ಮೇರೆಗೆ ಪಂಡಿತ್ ಓಂಕಾರನಾಥ್ ಠಾಕೂರ್ ಅವರು ಸಂಪೂರ್ಣ ವಂದೇ ಮಾತರಂ ಗೀತೆಯನ್ನು ಹಾಡಿದ್ದರು. ಈ ಗಾಯನವು ಬೆಳಿಗ್ಗೆ 06:30ಕ್ಕೆ ಆಕಾಶವಾಣಿಯಲ್ಲಿಯೂ ಸಹ ಪ್ರಸಾರವಾಯಿತು. ಪಂಡಿತ್ ಓಂಕಾರನಾಥ್ ಅವರು ಸಂಪೂರ್ಣ ಆಧ್ಯಾತ್ಮಿಕ ಗೌರವದೊಂದಿಗೆ ನಿಂತುಕೊಂಡೇ ಹಾಡಿದ್ದದ್ದು ವಿಶೇಷವಾಗಿತ್ತು. ಅಂದು ಆರಂಭವಾದ ಈ ಪದ್ದತಿ ಇಂದಿಗೂ ಸಹಾ ಪ್ರತೀ ದಿನ ಆಕಾಶವಾಣಿ ಆರಂಭವಾಗುವುದೇ ವಂದೇ ಮಾತರಂ ಗೀತೆಯೊಂದಿಗೇ ಎನ್ನುವುದು ಗಮನಾರ್ಹವಾಗಿದೆ.

samskaraಸ್ವಾತ್ರಂತ್ರ್ಯ ಹೋರಾಟದ ಸಮಯದಲ್ಲಿ ನಾವೂ ನೀವು ಇನ್ನೂ ಹುಟ್ಟಿಯೇ ಇಲ್ಲದಿದ್ದ ಕಾರಣ, ವಂದೇಮಾತರಂ ಗೀತೆಯ ರಸಾನುಭವವನ್ನು ನಾವು ಆಹ್ಲಾದಿಸದೇ ಹೋದದ್ದಕ್ಕಾಗಿ ಪರಿತಪಿಸಬಾರದೆಂದೇ, ನಮ್ಮ ದೇಶದ ಸ್ವಾತ್ರಂತ್ಯದ ಅಮೃತ ಮಹೋತ್ಸವದ ಈ ಸುಸಂಧರ್ಭದಲ್ಲಿ ಸಂಸ್ಕಾರ ಭಾರತೀ, ಸ್ವಾಧೀನತೆಯಿಂದ ಸ್ವಾತಂತ್ರ್ಯದೆಡೆಗೆ ಎನ್ನುವ ಬೃಹತ್ ಯೋಜನೆಯಲ್ಲಿ ವಂದೇ ಮಾತರಂ ಗೌರವ ಗಾಯನ ಕಾರ್ಯಕ್ರಮದ ಆಯೋಜನೆಯನ್ನು ನಿರ್ಧರಿಸಿದೆ. ಅದರಂತೆ 2022ರ ಆಗಸ್ಟ್ 15 ರಂದು ಬೆಳಿಗ್ಗೆ 06.30 ಗಂಟೆಗೆ ದೇಶಾದ್ಯಂತ ಸಂಸ್ಕಾರ ಭಾರತಿಯ ಎಲ್ಲಾ ಸಮಿತಿಗಳಲ್ಲೂ ಏಕಕಾಲದಲ್ಲಿ ವಂದೇ ಮಾತರಂ ಗೀತೆಯನ್ನು ರಾಗಬದ್ಧವಾಗಿ ಹಾಡುವ ಕಾರ್ಯಕ್ರಮ ಆಯೋಜಿಸಿದ್ದು, ಅದೇ ಸಂಕಲ್ಪದಂತೆ ಈಗಾಗಲೇೆ ಎಲ್ಲೆಡೆಯಲ್ಲಿಯೂ ವಂದೇಮಾತರಂ ಗಾಯನದ ಅಭ್ಯಾಸ ನಿರಂತರವಾಗಿ ನಡೆದಿದೆ.

vande_mataram2ವಂದೇಮಾತರಂ ಗೌರವ ಗಾಯನ ಆಭಿಯಾನ ಕಾರ್ಯಕ್ರಮದ ಪ್ರಾಂತ ಸಂಯೋಜಕರಾಗಿ ಡಾ. ಪದ್ಮಿನಿ ಓಕ್ (9591400488) ಮತ್ತು ಸಹ ಸಂಯೋಜಕರಾಗಿ ಶ್ರೀ ಬಿ.ಎಸ್. ಅಶೋಕ್ (9008824900) ನಿಯುಕ್ತರಾಗಿದ್ದು ಈ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಎಲ್ಲಾ ರೀತಿಯ ಮಾಹಿತಿಗಳಿಗಾಗಿ ಅವರಿಬ್ಬರನ್ನೂ ಸಂಪರ್ಕಿಸಬಹುದಾಗಿದೆ. ರಾಜ್ಯಾದ್ಯಂತ ವಿವಿಧ ಜಿಲ್ಲೆಗಳಲ್ಲಿ ಆಗಸ್ಟ್ 15ರಂದು ಬೆಳಗ್ಗೆ 6:30ಕ್ಕೆ ಸರಿಯಾಗಿ ವೈಯಕ್ತಿಕವಾಗಿ ಇಲ್ಲವೇ ಹತ್ತಾರು ಕಲಾವಿದರ ಸಮೂಹದೊಂದೀಗೆ ವಂದೇಮಾತರಂ ಹಾಡುವುದಕ್ಕೆ ತಯಾರಿ ಈಗಾಗಲೇ ನಡೆದಿದೆ. ಇದೇ ಕಾರ್ಯಕ್ರಮದ ಅಂಗವಾಗಿ ಈಗಾಗಲೇ, ವಿದ್ಯಾರಣ್ಯಪುರ ಎನ್.ಟಿ.ಐ ಕ್ರೀಡಾಂಗಣ, ಯಲಹಂಕ, ಅಲ್ಲಾಳಸಂದ್ರ, ತಿಂಡ್ಲು, ನಂಜಪ್ಪ ಸರ್ಕಲ್, ಮುನೇಶ್ವರ ಬಡಾವಣೆ, ಲಾಲ್ ಬಾಗ್ ವೆಸ್ಟ್ ಗೇಟ್. ರಾಮಕೃಷ್ಣ ಆಶ್ರಮ. ಕೆಂಗೇರಿ, ರಾಜರಾಜೇಶ್ವರಿ ನಗರದಲ್ಲೂ ಆಯೋಜಿತವಾಗಿದ್ದು, ನಾವೆಲ್ಲರೂ ನಮ್ಮ ಹತ್ತಿರದ ಸಂಸ್ಕಾರಭಾರತಿಯ ಕಾರ್ಯಕರ್ತರನ್ನು ಸಂಪರ್ಕಿಸಿ ರಾಗ ಬದ್ಧವಾಗಿ ಇಡೀ ವಂದೇಮಾತರಂ ಗೀತೆಯನ್ನು ಮತ್ತೊಮ್ಮೆ ಹಾಡುವ/ಕೇಳುವ ಮೂಲಕ ನಾವೆಲ್ಲರೂ ಈ ಗೌರವಪೂರ್ಣ ಕಾರ್ಯದಲ್ಲಿ ಸಕ್ರಿಯರಾಗಿ ಈ ಕಾರ್ಯಕ್ರಮದಲ್ಲಿ ತಪ್ಪದೇ ಭಾಗಿಗಳಾಗಿ ಮತ್ತೆ ಮೈಮನ ರೋಮಾಂಚಿತಗೊಳಿಸಿ ನಮ್ಮಲ್ಲಿರುವ ದೇಶಭಕ್ತಿಯನ್ನು ಜಾಗೃತಗೊಳಿಸುವ ಮೂಲಕ ಪುಲಕಿತಗೊಳ್ಳೋಣ ಅಲ್ವೇ?

ಏನಂತೀರೀ?
ನಿಮ್ಮವನೇ ಉಮಾಸುತ

ವಂದೇ ಮಾತರಂ ಸಂಪೂರ್ಣ ಗೀತೆ

ಸುಜಲಾಂ ಸುಫಲಾಂ ಮಲಯಜಶೀತಲಾಮ್ ಶಸ್ಯಶ್ಯಾಮಲಾಂ ಮಾತರಮ್ |
ಶುಭ್ರಜ್ಯೋತ್ಸ್ನಾ ಪುಲಕಿತಯಾಮಿನೀಂ ಫುಲ್ಲಕುಸುಮಿತಧ್ರುಮದಲಶೋಭಿನಿಂ
ಸುಹಾಸಿನಿಂ ಸುಮಧುರ ಭಾಷಿಣೀಂ ಸುಖದಾಂ ವರದಾಂ ಮಾತರಮ್ || ೧ ||
ವಂದೇ ಮಾತರಮ್ |

ಕೋಟಿ-ಕೋಟಿ-ಕಂಠ-ಕಲ-ಕಲ-ನಿನಾದ-ಕರಾಲೆ, ಕೋಟಿ-ಕೋಟಿ-ಭುಜೈಧೃತ-ಖರಕರವಾಲೆ,
ಕೇ ಬೋಲೆ ಮಾ ತುಮಿ ಅಬಲೆ| ಬಹುಬಲಧಾರಿಣಿಂ ನಮಾಮಿ ತಾರಿಣೀಂ ರಿಪುದಲವಾರಿಣೀಂ ಮಾತರಮ್ || ೨ ||
ವಂದೇ ಮಾತರಮ್ |

ತುಮಿ ವಿದ್ಯಾ, ತುಮಿ ಧರ್ಮ ತುಮಿ ಹೃದಿ, ತುಮಿ ಮರ್ಮ ತ್ವಂ ಹಿ ಪ್ರಾಣಾಃ ಶರೀರೆ
ಬಾಹುತೆ ತುಮಿ ಮಾ ಶಕ್ತಿ, ಹೃದಯೆ ತುಮಿ ಮಾ ಭಕ್ತಿ, ತೋಮಾರಈ ಪ್ರತಿಮಾ ಗಡಿ ಮಂದಿರೆ-ಮಂದಿರೆ ಮಾತರಮ್ || ೩ ||
ವಂದೇ ಮಾತರಮ್ |

ತ್ವಂ ಹಿ ದುರ್ಗಾ ದಶಪ್ರಹರಣಧಾರಿಣೀ ಕಮಲಾ ಕಮಲದಲವಿಹಾರಿಣಿ
ವಾಣಿ ವಿದ್ಯಾದಾಯಿನಿ, ನಮಾಮಿ ತ್ವಾಮ್ ನಮಾಮಿ ಕಮಲಾಂ ಅಮಲಾಂ ಅತುಲಾಂ ಸುಜಲಾಂ ಸುಫಲಾಂ ಮಾತರಮ್ || ೪ ||
ವಂದೇ ಮಾತರಮ್ |

ಶ್ಯಾಮಲಾಂ ಸರಲಾಂ ಸುಸ್ಮಿತಾಂ ಭೂಷಿತಾಂ ಧರಣೀಂ ಭರಣೀಂ ಮಾತರಮ್ || ೫ ||
ವಂದೇ ಮಾತರಮ್ | ವಂದೇಮಾತರಂ

ಸಂಸ್ಕೃತ ಭಾಷೆಯಲ್ಲಿರುವ ಈ ವಂದೇ ಮಾತರಂ ಗೀತೆಯ ಭಾವಾರ್ಥ ಹೀಗಿದೆ

ಹೇ ಮಾತೆ, ನಾನು ನಿನಗೆ ವಂದಿಸುತ್ತೇನೆ. ಜಲ, ಧನ ಧಾನ್ಯಗಳಿಂದ ಸಮೃದ್ಧವಾಗಿರುವ, ದಕ್ಷಿಣದಲ್ಲಿನ ಮಲಯ ಪರ್ವತದಿಂದ ಬರುವ ವಾಯುಲಹರಿಗಳಿಂದ ಶೀತಲವಾಗುವ ಮತ್ತು ವಿಪುಲವಾದ ಕೃಷಿಯಿಂದ ಶ್ಯಾಮಲ ವರ್ಣವಾಗಿರುವ, ಹೇ ಮಾತೆ !

ಶ್ವೇತಶುಭ್ರ ಬೆಳದಿಂಗಳಿನಿಂದ ನಿನ್ನ ರಾತ್ರಿಗಳು ಪ್ರಫುಲ್ಲಿತವಾಗಿರುತ್ತವೆ, ಅದೇ ರೀತಿ ಅರಳಿದ ಹೂವುಗಳಿಂದ ನಿನ್ನ ಭೂಮಿಯು ವೃಕ್ಷಬಳ್ಳಿಗಳ ವಸ್ತ್ರಗಳನ್ನು ಧರಿಸಿದಂತೆ ಸುಶೋಭಿತವಾಗಿ ಕಾಣಿಸುತ್ತದೆ. ಸದಾ ಹಸನ್ಮುಖ ಮತ್ತು ಸದಾಕಾಲ ಮಧುರವಾಗಿ ಮಾತನಾಡುವ, ವರದಾಯಿನಿ, ಸುಖಪ್ರದಾಯಿನಿಯಾಗಿರುವ ಹೇ ಮಾತೆ !

ಮೂವತ್ತು ಕೋಟಿ ಕಂಠಗಳಿಂದ ಭಯಂಕರವಾದ ಗರ್ಜನೆಯು ಮೊಳಗುತ್ತಿರುವಾಗ ಮತ್ತು ಆರವತ್ತು ಕೋಟಿ ಕೈಗಳಲ್ಲಿ ಹಿಡಿದಿರುವ ಖಡ್ಗಗಳ ಮೊನೆಯು ಹೊಳೆಯುತ್ತಿರುವಾಗ ಹೇ ಮಾತೆಯೇ ನೀನು ಅಬಲೆಯಾಗಿದ್ದಿ ಎಂದು ಹೇಳಲು ಯಾರಿಗಾದರೂ ಧೈರ್ಯವಿದೆಯೇ? ವಾಸ್ತವದಲ್ಲಿ ಮಾತೆಯೇ ಅಪಾರ ಸಾಮರ್ಥ್ಯವು ನಿನ್ನಲ್ಲಿದೆ. ಶತ್ರುಸೈನ್ಯದ ಪಡೆಯನ್ನೇ ಹಿಂತಿರುಗಿಸಿ ನಿನ್ನ ಸಂತಾನವಾದ ನಮ್ಮನ್ನು ರಕ್ಷಿಸುತ್ತಿರುವ ಹೇ ಮಾತೆಯೇ ನಾನು ನಿನಗೆ ವಂದಿಸುತ್ತೇನೆ.

ನೀನೇ ನಮ್ಮ ಜ್ಞಾನ, ನೀನೇ ನಮ್ಮ ಚಾರಿತ್ರ್ಯ, ನೀನೇ ನಮ್ಮ ಧರ್ಮವಾಗಿದ್ದಿ. ನೀನೇ ನಮ್ಮ ಹೃದಯ, ನೀನೇ ನಮ್ಮ ಚೈತನ್ಯವಾಗಿದ್ದಿ. ನಮ್ಮ ದೇಹದಲ್ಲಿನ ಪ್ರಾಣವು ಖಂಡಿತವಾಗಿಯೂ ನೀನೇ ಆಗಿದ್ದಿ. ನಮ್ಮ ಮಣಿಕಟ್ಟಿನಲ್ಲಿರುವ ಶಕ್ತಿ ನೀನೇ ಮತ್ತು ಅಂತಃಕರಣದಲ್ಲಿನ ಕಾಳಿಯೂ ನೀನೇ. ದೇವಸ್ಥಾನದಲ್ಲಿ ನಾವು ಯಾವ ಮೂರ್ತಿಯ ಪ್ರತಿಷ್ಠಾಪನೆ ಮಾಡುತ್ತೇವೆಯೋ ಅದೆಲ್ಲವೂ ನಿನ್ನದೇ ರೂಪಗಳು.

ತನ್ನ ಹತ್ತೂ ಕೈಗಳಲ್ಲಿ ಹತ್ತು ಶಸ್ತ್ರಗಳನ್ನು ಧರಿಸಿದ ಶತ್ರುಸಂಹಾರಿಣಿ ದುರ್ಗೆಯೂ ನೀನೆ ಮತ್ತು ಕಮಲದ ಪುಷ್ಪಗಳಿಂದ ತುಂಬಿದ ಸರೋವರದಲ್ಲಿ ವಿಹರಿಸುವ ಕಮಲಕೋಮಲ ಲಕ್ಷ್ಮೀಯೂ ನೀನೆ. ನಿನಗೆ ನಮ್ಮ ನಮಸ್ಕಾರ. ಮಾತೆ, ನಾನು ನಿನಗೆ ವಂದಿಸುತ್ತೇನೆ. ಐಶ್ವರ್ಯದಾತ್ರಿ, ಪುಣ್ಯಪ್ರದಾಯಿನಿ ಮತ್ತು ಪಾವನ, ಪವಿತ್ರ ಜಲಪ್ರವಾಹಗಳಿಂದ ಮತ್ತು ಅಮೃತಮಯ ಫಲಗಳಿಂದ ಸಮೃದ್ಧಳಾಗಿರುವ ಮಾತೆಯೇ ನಿನ್ನ ಶ್ರೇಷ್ಠತನಕ್ಕೆ ಯಾವುದೇ ಹೋಲಿಕೆಯಿಲ್ಲ, ಯಾವುದೇ ಮಿತಿಯೂ ಇಲ್ಲ. ಹೇ ಮಾತೆ, ಹೇ ಜನನಿ ನಿನಗೆ ನನ್ನ ಪ್ರಣಾಮಗಳು.

2 thoughts on “ಸ್ವಾಧೀನತೆ ಯಿಂದ ಸ್ವಾತಂತ್ರ್ಯದೆಡೆಗೆ, ವಂದೇ ಮಾತರಂ ಗೌರವ ಗಾಯನ ಆಭಿಯಾನ

  1. ಈ ಸವಿಚಾರವಾದ ಬರಹದಿಂದ, ವಂದೇ ಮಾತರಂ ಗೀತೆಯ ಬಗ್ಗೆ ಮತ್ತಷ್ಟು ಮಾಹಿತಿ ತಿಳಿದಂತಾಯಿತು.

    Liked by 1 person

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s