ಬಲರಾಮ ಜಯಂತಿ

balarama1ದ್ವಾಪರ ಯುಗದ ಮಹಾಭಾರತದಲ್ಲಿ ಪಾಂಡವರು ಮತ್ತು ಕೌರವರು ಕಥೆಯಾದರೂ ಇಡೀ ಮಹಾಭಾರತದಲ್ಲಿ ಶ್ರೀಕೃಷ್ಣನು ಅತ್ಯಂತ್ಯ ಪ್ರಮುಖ ಪಾತ್ರವನ್ನು ವಹಿಸಿರುತ್ತಾನೆ. ಒಂದು ರೀತಿ ಅತನೇ ಸೂತ್ರಧಾರಿಯಾಗಿ ಉಳಿದವರೆಲ್ಲರೂ ಆತ ಆಡಿಸಿಸಂತೆ ಆಡುವ ಪಾತ್ರಧಾರಿಗಳಂತೆ ಕಾಣುತ್ತಾರೆ ಎಂದರೂ ತಪ್ಪಾಗದು. ಮಹಾವಿಷ್ಣುವಿನ ದಶಾವತಾರದಲ್ಲಿ ಕೃಷ್ಣನದ್ದು 8ನೇ ಅವತಾರವಾದರೆ, ಅವರನ ಅಣ್ಣನಾಗಿ ಸದಾಕಾಲವೂ ಬೆಂಗಾವಲಾಗಿ ಬಲರಾಮನು ಇದ್ದೇ ಇರುತ್ತಾನೆ.

balarama3ದೇವಕಿಯ ಅಣ್ಣ ಮತ್ತು ದುಷ್ಟ ರಾಜನಾದ ಕಂಸನಿಗೆ ಆತನ ತಂಗಿ ದೇವಕಿಯ ಎಂಟನೇ ಸಂತಾನನಿಂದಲೇ ಅಂತ್ಯವಾಗುವನೆಂಬ ಅಶರೀರವಾಣಿಯ ಮಾತನ್ನು ಕೇಳಿದ ನಂತರ ಆತ ತನ್ನ ತಂಗಿ ದೇವಕಿ ಮತ್ತು ಭಾವ ವಸುದೇವನನ್ನು ಸೆರೆಮನೆಯಲ್ಲಿ ಬಂಧನದಲ್ಲಿಟ್ಟು ಅವರಿಗೆ ಮಕ್ಕಳು ಹುಟ್ಟಿದ ಕೂಡಲೇ ಕೊಲ್ಲುತ್ತಾ ಬಂರುತ್ತಾನೆ. ದೇವಕಿ 7ನೇ ಸಲ ಗರ್ಭಿಣಿಯಾದಾಗ, ಅವಳ ಗರ್ಭದಲ್ಲಿದ್ದ ಮಗು ಮಾಯೆಯಿಂದ ದೇವಕಿಯ ಗರ್ಭದಿಂದ ರೋಹಿಣಿಯ ಗರ್ಭಕ್ಕೆ ಸ್ಥಳಾಂತರವಾಗಿ ಶ್ರಾವಣ ಮಾಸದ ಪೌರ್ಣಮಿಯಂದು ಶ್ರವಣ ನಕ್ಷತ್ರದಲ್ಲಿ ಜನಿಸಿದ ಕಾರಣದಿಂದ ಬಲರಾಮನಿಗೆ ಸಂಕರ್ಷಣ ಎಂಬ ಹೆಸರೂ ಇದೆ. ಆರಂಭದಲ್ಲಿ ಮಗುವಿಗೆ ರಾಮ ಎಂದು ನಾಮಕರಣ ಮಾಡಿದ್ದರು, ಆ ಮಗುವಿಗಿದ್ದ ಅತೀವ ಶಕ್ತಿಯ ಕಾರಣ ಆತ ಬಲರಾಮ ಎಂದೇ ಪ್ರಖ್ಯಾತವಾಗುವುದಲ್ಲದೇ, ಬಾಲ್ಯದಿಂದಲೂ ಸದಾಕಾಲವೂ ಶ್ರೀ ಕೃಷ್ಣನ ಜೊತೆಯೇ ಇದ್ದು ಸಹೋದರ ಕೃಷ್ಣನ ಜೊತೆ ಹಸುಗಳನ್ನು ಕಾಯುವ ಗೋಪಾಲನಾಗಿಯೇ ಬೆಳೆಯುತ್ತಾನೆ.

balarama4ಶ್ರೀ ಕೃಷ್ಣ ಜನ್ಮಾಷ್ಠಮಿ ಶ್ರಾವಣ ಬಹುಳ ಅಷ್ಟಮಿಯಂದು/ರೋಹಿಣಿ ನಕ್ಷತ್ರದಂದು ಆಚರಿಸಿದರೆ, ಶ್ರೀ ಕೃಷ್ಣನ ಅಣ್ಣ ಬಲರಾಮನ ಜಯಂತಿ ಎಂಟು ದಿನಗಳ ಮೊದಲು ಶ್ರಾವಣ ಮಾಸದ ಪೌರ್ಣಮಿಯಂದು ಆಚರಿಸಲಾಗುತ್ತದೆ.. ಶ್ರೀ ಕೃಷ್ಣನ ಮೈಬಣ್ಣ ಕಡು ನೀಲಿ ಬಣ್ಣವಾಗಿದ್ದರೆ, ಬಲರಾಮನ ಮೈಬಣ್ಣ ಬಿಳಿ ಶರತ್ಕಾಲದ ಮೋಡದಂತಿದೆ. ಶ್ರೀಕೃಷ್ಣ ಕೊಳಲನ್ನು ತನ್ನೊಂದಿಗೆ ಇಟ್ಟು ಕೊಂಡರೆ, ಬಲರಾಮನು ನೇಗಿಲು (ಹಲ) ಮತ್ತು ಗದೆಯನ್ನು ತನ್ನ ಆಯುಧವನ್ನಾಗಿಸಿಕೊಂಡಿದ್ದಾನೆ. ಸಾಂಪ್ರದಾಯಿಕವಾಗಿ ಬಲರಾಮನು ನೀಲಿ ಬಟ್ಟೆಗಳನ್ನು ಧರಿಸಿ, ಕೂದಲನ್ನು ಗಂಟಿನಲ್ಲಿ ಕಟ್ಟಿ, ಕಿವಿಗೆ ಒಡವೆ, ಕೈಗೆ ಕಂಕಣ ಮತ್ತು ತೋಳಬಂದಿ ಧರಿಸಿರುತ್ತಾನೆ. ಬಲರಾಮ ಅತ್ಯಂತ ಶಕ್ತಿಶಾಲಿ ಎಂದೇ ಎಲ್ಲರು ನಂಬಿದ್ದಾರೆ. ಬಲರಾಮನನ್ನು ಬಲದೇವ, ಬಲಭದ್ರ, ಮತ್ತು ಹಲಾಯುಧ ಎಂಬ ಹೆಸರುಗಳಿಂದಲೂ ಸಂಬೋಧಿಸುತ್ತಾರೆ.

ಮುಂದೆ ವಯಸ್ಕನಾದ ಮೇಲೆ ಬಲರಾಮ ಅನರ್ಥ ಸಾಮ್ರಾಜ್ಯದ ಕುಶಸ್ಥಲಿಯ ರಾಜ ಕಕುದ್ಮಿಯ ಮಗಳಾದ ರಾಜಕುಮಾರಿ ರೇವತಿಯನ್ನು ವರಿಸುತ್ತಾನೆ. ಕುಶಸ್ಥಲಿಯ ವಂಶದವರು ಭಗವಾನ್ ಸೂರ್ಯನ ನೇರ ವಂಶಸ್ಥರಾದ್ದರಿಂದ ಆವರೂ ಸಹಾ ಪ್ರಭು ಶ್ರೀರಾಮನಂತೆ ಸೂರ್ಯವಂಶಿಗಳಾಗಿದ್ದು, ಕೌರವರಂತೆ ರೇವತಿಗೂ ಸಹಾ 100 ಜನ ಸಹೋದರರು ಇದ್ದರು.

alarama3ಮಹಾಭಾರತದಲ್ಲಿ ಬಲರಾಮನು ಕೌರವ ದುರ್ಯೋಧನ ಮತ್ತು ಪಾಂಡವ ಭೀಮರಿಗೆ ಗದಾವಿದ್ಯೆಯನ್ನು ಕಲಿಸಿದ ಗುರುವಾಗಿದ್ದು, ಆತನಿಗೆ ದುರ್ಯೋಧನನ ಮೇಲೆ ವಿಶೇಷವಾದ ಅಭಿಮಾನವಿರುತ್ತದೆ. ಹಾಗಾಗಿ ಆತ ತನ್ನ ತಂಗಿ ಸುಭದ್ರೆಯನ್ನು ದುರ್ಯೋಧನನೊಂದಿಗೆ ವಿವಾಹ ಮಾಡಿಕೊಡಲು ಮುಂದಾಗಿದ್ದನ್ನು ಗಮನಿಸಿದ ಶ್ರೀಕೃಷ್ಣ ಅರ್ಜುನನ್ನು ಸಾಧುವೇಷದಲ್ಲಿ ತನ್ನ ಮನೆಗೆ ಕರೆಸಿಕೊಂಡು ಸುಭದ್ರೆಯನ್ನು ವರಿಸುವಂತೆ ಮಾಡುತ್ತಾನೆ. ಕುರುಕ್ಷೇತ್ರ ಯುದ್ಧದಲ್ಲಿ ಪಾಂಡವರೇ ಗೆಲ್ಲುವರೆಂದು ತಿಳಿದಿದ್ದ ಬಲರಾಮ ಪಾಂಡವರು ಮತ್ತು ಕೌರವರು ಇಬ್ಬರಿಗೂ ಸಹಾಯ ಮಾಡಲು ಇಚ್ಛಿಸದೇ ಯುದ್ಧ ಮುಗಿಯುವವರೆಗೂ ತೀರ್ಥಯಾತ್ರೆ ಹೋಗಿ ಅಂತಿಮವಾಗಿ ಭೀಮ ಮತ್ತು ದುರ್ಯೋಧನರ ನಡುವೆ ವೈಶಂಪಾಯನ ಸರೋವರದ ಬಳಿ ನಡೆದ ಘನಘೋರ ಗದಾಯುದ್ಧದ ಸಮಯಕ್ಕೆ ಸರಿಯಾಗಿ ಅಲ್ಲಿಗೆ ಬರುತ್ತಾನೆ. ಭೀಮನು ದುರ್ಯೋಧನನ ತೊಡೆಗೆ ಹೊಡೆದು ವಧಿಸಿದ್ದನ್ನು ವಿರೋಧಿಸಿ ಬಲರಾಮನು ಭೀಮನನ್ನು ಕೊಲ್ಲಲ್ಲು ಮುಂದಾದಾಗ, ಶ್ರೀ ಕೃಷ್ಣನು ದ್ರೌಪತಿಯ ಪ್ರತಿಜ್ಞೆಯನ್ನು ತನ್ನ ಅಣ್ಣನಿಗೆ ನೆನಪಿಸಿ ಸಮಾಧಾನ ಮಾಡುತ್ತಾನೆ.

ಭಾಗವತ ಪುರಾಣದ ಪ್ರಕಾರ ಪ್ರಭಾಸ ಕ್ಷೇತ್ರದಲ್ಲಿ ಯದುವಂಶದ ನಿರ್ನಾಮದ ಬಳಿಕ, ಕೃಷ್ಣನ ಅಂತ್ಯದ ಬಳಿಕ ಬಲರಾಮನು ಧ್ಯಾನಮಗ್ನನಾಗಿ ತನ್ನ ಬಾಯಿಯಿಂದ ಸರ್ಪ ರೂಪವಾಗಿ ಶರೀರವನ್ನು ತ್ಯಜಿಸುತ್ತಾನೆ ಎಂಬುದಾಗಿದೆ.

balarama2ಬಲರಾಮ ಜಯಂತಿಯಂದು ಇತರೇ ಹಿಂದೂ ಹಬ್ಬಗಳಂತೆ ಮುಂಜಾನೆಯೇ ಬೇಗ ಎದ್ದು ಸ್ನಾನ ಮಾಡಿ ಶ್ರೀಕೃಷ್ಣ ಮತ್ತು ಬಲರಾಮನ ವಿಗ್ರಹಗಳನ್ನು ಹೊಸ ಬಟ್ಟೆಗಳಿಂದ ಅಲಂಕರಿಸಿ ಬಗೆ ಬಗೆಯ ಹೂವುಗಳಿಂದ ಪೂಜಿಸುತ್ತಾರೆ. ಇನ್ನು ರೈತಾಪಿವರ್ಗದವರ ಮನೆಗಳಲ್ಲಿ ಉಳುಮೆ ಮಾಡಿ ಎತ್ತುಗಳಿಗೆ ಪೂಜೆ ಸಲ್ಲಿಸಿದರೆ, ಇನ್ನು ಮಹಿಳೆಯರು ಮಗನ ರಕ್ಷಣೆಗಾಗಿ ಮಹಿಳೆಯರು ದಿನವಿಡೀ ಉಪವಾಸವಿದ್ದು, ಸಂಜೆ ಕೊಳದಲ್ಲಿ ಬೆಳೆದ ಹಣ್ಣುಗಳು ಅಥವಾ ಅಕ್ಕಿಯಿಂದ ಹಬ್ಬದೂಟತಯಾರಿಸಿ ಊಟ ಮಾಡುತ್ತಾರೆ. ಹೀಗೆ ಉಪವಾಸದ ಸಮಯದಲ್ಲಿ ಹಾಲಿನಿಂದ ಮಾಡಿದ ಯಾವುದೇ ಪದಾರ್ಥವನ್ನು ಸೇವಿಸುವುದಿಲ್ಲ. ಭಕ್ತಿಯಿಂದ ಆಧ್ಯಾತ್ಮಿಕ ಜೀವನದ ಆಚರಣೆಗೆ ಅಗತ್ಯವಾದ ಆಧ್ಯಾತ್ಮಿಕ ಶಕ್ತಿಯನ್ನು ನೀಡೆಂದು ಪ್ರಾರ್ಥಿಸುತ್ತಾರೆ. ಹೀಗೆ ಬಲರಾಮನನ್ನು ಪೂಜಿಸಿದಲ್ಲಿ ಆತ್ಮ ಸಾಕ್ಷಾತ್ಕಾರದ ಯಾತ್ರೆಯಲ್ಲಿನ ಎಲ್ಲ ಅಡೆತಡೆಗಳನ್ನು ದಾಟುವ ಶಕ್ತಿಯನ್ನು ಬಲರಾಮನು ನಮಗೆ ನೀಡುತ್ತಾನೆ ಎನ್ನುವುದು ಭಕ್ತರ ನಂಬಿಕೆಯಾಗಿದೆ.

ಇನ್ನು ಇಸ್ಕಾನ್ ದೇವಸ್ಥಾನಗಳಲ್ಲಿ ಕೃಷ್ಣ ಮತ್ತು ಬಲರಾಮ ವಿಗ್ರಹಗಳಿಗೆ ಪಂಚಾಮೃತ (ಹಾಲು, ಮೊಸರು, ತುಪ್ಪ, ಜೇನುತುಪ್ಪ ಮತ್ತು ಸಿಹಿ ನೀರು), ಪಂಚಗವ್ಯ, ವಿವಿಧ ಹಣ್ಣುಗಳ ರಸ, ಗಿಡ ಮೂಲಿಕೆಗಳ ಮಿಶ್ರಿತ ಜಲ ಮತ್ತು ಎಳನೀರುಗಳಿಂದ ನಂತರ, 108 ಕಳಶಗಳ ಪವಿತ್ರ ಜಲದಿಂದ ಅಭಿಷೇಕ ಮಾಡಲಾಗುತ್ತದೆ. ನಂತರ ಆ ಉತ್ಸವ ಮೂರ್ತಿಗಳಿಗೆ ಹೊಸ ಉಡುಗೆ ತೊಡಿಗೆ ಮತ್ತು ಆಭರಣಗಳಿಂದ ಅಲಂಕರಿಸಿ, ಆ ವಿಗ್ರಹಗಳಿಗೆ ವಿಧವಿಧವಾದ ಪುಷ್ಪಗಳಿಂದ ಪೂಜಿಸಿ, ಶ್ರೀ ಕೃಷ್ಣ ಬಲರಾಮರಿಗೆ ಛಪ್ಪನ್ ಭೋಗ್ ಅಂದರೆ 56 ಬಗೆಯ ಖಾದ್ಯಗಳನ್ನು ನೈವೇದ್ಯದ ರೂಪದಲ್ಲಿ ಸಮರ್ಪಿಸಿ, ಮಂಗಳಾರತಿಯನ್ನು ಮಾಡುತ್ತಾರೆ. ಸಂಜೆ ಅತ್ಯಂತ ಸಡಗರ ಸಂಭ್ರಮಗಳಿಂದ ಉತ್ಸವವನ್ನು ಮಾಡಲಾಗುತ್ತದೆ.

ಶ್ರೀ ಕೃಷ್ಣಾಷ್ಠಮಿ ಆಚರಿಸುವ ಭರದಲ್ಲಿ ಅದಕ್ಕಿಂತಲೂ 8 ದಿನಗಳ ಮುಂಚೆಯೇ ಬರುವ ಶ್ರೀಕೃಷ್ಣನ ಅಣ್ಣ ಬಲರಾಮನ ಜಯಂತಿಯನ್ನು ಅದ್ದೂರಿಯಿಂದ ಆಚರಿಸದೇ ಹೋಗದೇ ಇರುವುದು ವಿಪರ್ಯಾಸವೇ ಸರಿ.

ಏನಂತೀರೀ?
ನಿಮ್ಮವನೇ ಉಮಾಸುತ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s