ಪರಿಸರ ಪ್ರೇಮಿ ಗಣೇಶ ಮೂರ್ತಿಯ ತಯಾರಿಕಾ ಕಾರ್ಯಾಗಾರ

car_ganeshaವಿವಿಧತೆಯಲ್ಲೂ ಏಕತೆಯನ್ನು ಹೊಂದಿರುವ ಈ ಭಾರತ ದೇಶದಲ್ಲಿ ಆಯಾಯಾ ಪ್ರದೇಶಗಳಿಗೆ ಅನುಗುಣವಾಗಿ ಗ್ರಾಮದೇವತೆ ಇಲ್ಲವೇ ದೇವರುಗಳು ಇದ್ದು ಅಲ್ಲಿಯ ರೀತಿ ರಿವಾಜುಗಳಿಗೆ ಅನುಗುಣವಾಗಿ ಶ್ರದ್ಧಾ ಭಕ್ತಿಗಳಿಂದ ಪೂಜೆ ಸಲ್ಲಿಸುವುದು ವಾಡಿಕೆ. ಆದರೆ, ಕೇವಲ ಭಾರತವಷ್ಟೇ ಅಲ್ಲದೇ ಪ್ರಪಂಚದ ನೂರಾರು ರಾಷ್ಟ್ರಗಳಲ್ಲಿ ಸರ್ವೇಸಾಮಾನ್ಯವಾಗಿ ಪೂಜಿಸಲ್ಪಡುವ ಹಿಂದೂ ದೇವರು ಎಂದರೆ ಅದು ವಿಘ್ನವಿಶಾಶಕ ವಿಘ್ನೇಶ ಎಂದರೆ ಅತಿಶಯವಲ್ಲ. ಎಲ್ಲಾ ಸಭೆ ಸಮಾರಂಭಗಳಲ್ಲಿ ಮತ್ತು ಶುಭ ಕಾರ್ಯಕ್ರಮಗಳಲ್ಲಿ ಗಣೇಶನಿಗೆ ಮೊದಲ ಪೂಜೆ. ಹಾಗಾಗಿಯೇ ಪ್ರಪಂಚಾದ್ಯಂತ ಇರುವ ಸಮಸ್ತ ಹಿಂದೂಗಳ ವಾಹನಗಳಲ್ಲಿ ವಿನಾಯಕನ ವಿಗ್ರಹಗಳು ಸರ್ವೇ  ಸಾಮಾನ್ಯವಾಗಿದೆ. 

ganesha2ಪುರಾಣಗಳ ಪ್ರಕಾರ ಗಣಪತಿ ಶಿವ ಪಾರ್ವತಿಯರ ಮಗ. ಅದದಲ್ಲೂ ಪಾರ್ವತಿಯ ಅಚ್ಚುಮೆಚ್ಚಿನ ಮುದ್ದು ಮಗ ಎಂದರೇ ಹೆಚ್ಚು ಸೂಕ್ತ. ಪಾರ್ವತಿ ತನ್ನ ಸ್ನಾನ ಚೂರ್ಣದಿಂದ ಗಣೇಶನನ್ನು ಸೃಷ್ಟಿಸಿ ತಾನು ಸ್ನಾನದಿಂದ ಹಿಂದುರುಗಿ ಬರುವವರೆಗೂ ಅಲ್ಲಿಯೇ ಕಾವಲು ಕಾಯಲು ಹೇಳಿ ಹೋಗಿದ್ದಾಗ ಅಲ್ಲಿಗೆ ಬಂದ ಪರಮೇಶ್ವರನನ್ನೂ ಗಣೇಶ ಒಳಗೆ ಬಿಡದಿದ್ದಾಗ ವಾದ ವಿವಾದ ನಡೆದು, ಕೋಪದಲ್ಲಿ ಶಿವ ತನ್ನ ತ್ರಿಶೂಲದಿಂದ ಗಣೇಶನ ಶಿರವನ್ನು ಕತ್ತರಿಸಿದಾಗ, ಆ ಪುಟ್ಟ ಬಾಲಕ ಆರ್ತನಾದವನ್ನು ಕೇಳಿ ಸ್ನಾನದಿಂದ ಹೊರಗೆ ಬಂದ ಪಾರ್ವತಿ ಶಿರಚ್ಛೇಧಿತನಾಗಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ತನ್ನ ಮಗ ಗಣೇಶನನ್ನು ನೋಡಿ ದುಃಖಿತಳಾಗಿ ಆತನನ್ನು ಬದುಕಿಸಿಕೊಡಲು ಪತಿ ಪರಮೇಶ್ವರನನ್ನು ಕೋರಿಕೊಂಡಾಗ, ಕ್ಷಣಿಕ ಕೋಪದಿಂದ ತಣ್ಣಗಾಗಿದ್ದ ಪರಶಿವನು, ಉತ್ತರ ದಿಕ್ಕಿನಲ್ಲಿ ಮಲಗಿರುವವರ ಶಿರವನ್ನು ತರಲು ತನ್ನ ಗಣಕ್ಕೆ ಹೇಳಿದಾಗ, ಉತ್ತರದಿಕ್ಕಿನಲ್ಲಿ ಮಲಗಿದ್ದ ಆನೆಯ ಶಿರವನ್ನು ತಂದಾಗ ಆ ಆನೆಯ ಶಿರವನ್ನು ಬಾಲಕ ಗಣೇಶನಿಗೆ ಜೋಡಿಸಿ ಜೀವವನ್ನು ಮರಳಿಸಿದ ಕತೆ ಎಲ್ಲರಿಗೂ ತಿಳಿಸಿರುವ ಸಂಗತಿಯಾಗಿದೆ

ganಪ್ರತೀ ವರ್ಷ ಬಾದ್ರಪದ ಮಾಸದ ಚೌತಿಯಂದು ಪ್ರಪಂಚಾದ್ಯಂತ ಅತ್ಯಂತ ಸಂಭ್ರಮ ಸಡಗರಗಳಿಂದ ಗಣೇಶ ಹಬ್ಬವನ್ನು ಆಚರಿಸಲಾಗುತ್ತದೆ. ಸ್ವಾತ್ರಂತ್ರ್ಯ ಸಮಯದಲ್ಲಿ ಬ್ರಿಟೀಷರ ವಿರುದ್ಧ ಭಾರತೀಯರನ್ನು ಒಗ್ಗೂಡಿಸಲು ಲೋಕಮಾನ್ಯ ತಿಲಕರು ಮನೆ ಮನೆಗಳಲ್ಲಿ ಆಚರಿಸುತ್ತಿದ್ದ ಗಣೇಶೋತ್ಸವವನ್ನು ಸಾರ್ವಜನಿಕವಾಗಿ ಆಚರಿಸಲು ಆರಂಭಿಸಿದ ನಂತರವಂತೂ ದೇಶಾದ್ಯಾಂತ ಗಲ್ಲಿ ಗಲ್ಲಿಗಳಲ್ಲಿ ಬಗೆ ಬಗೆಯ ಕೋಟ್ಯಾಂತರ ಗಣಪತಿಮೂರ್ತಿಗಳನ್ನಿಟ್ಟು ಅನಂತ ಚತುರ್ದಶಿಯವರೆಗೂ ಭಕ್ತಿಯಿಂದ ಪೂಜಿಸಿ ನಂತರ ವಿಸರ್ಜಿಸುವ ಸಂಪ್ರದಾಯ ಎಲ್ಲೆಡೆಯಲ್ಲೂ ಜಾರಿಯಲ್ಲಿದೆ.

echo_ganesha2-removebg-previewಹಿಂದಿನ ಕಾಲದಲ್ಲಿ ಪ್ರತಿಯೊಂದು ಮನೆಗಳಲ್ಲಿಯೂ ಗಣೇಶನ ಹಬ್ಬದ ಮೊದಲು ಕೆರೆ ಕಟ್ಟೆಗಳಿಂದ ಶ್ರದ್ಧಾ ಭಕ್ತಿಗಳಿಂದ ಜೇಡಿ ಮಣ್ಣನ್ನು ತಂದು ಅದರಿಂದ ತಮಗೆ ಬಂದಂತೆ ಗಣೇಶನನ್ನು ತಯಾರಿಸಿ ಪೂಜೆ ಸಲ್ಲಿಸಿ ಮತ್ತೆ ಕೆರೆಕಟ್ಟೆಗಳಲ್ಲಿ ವಿಸರ್ಜಿಸುತ್ತಿದ್ದರು. ನಂತರದ ದಿನಗಳಲ್ಲಿ ವಿವಿಧ ಆಕೃತಿಯ, ವಿವಿಧ ಎತ್ತರದ ಬಣ್ಣ ಬಣ್ಣದ ಗಣೇಶನ ಮೂರ್ತಿಗಳು ಮಾರುಕಟ್ಟೆಯಲ್ಲಿ ಸುಲಭವಾಗಿ ಲಭ್ಯವಾದಾಗ ಅವುಗಳನ್ಣೇ ಖರೀಧಿಸಿ ಪೂಜಿಸತೊಡಗಿದರು. ಗಣೇಶನ ಎತ್ತರ ಮತ್ತು ಆಕರ್ಷಣೆ ಹೆಚ್ಚಾದಂತೆಲ್ಲಾ, ಮಣ್ಣಿನ ಬದಲಾಗಿ ಪ್ಲಾಸ್ಟರ್ ಆಫ್ ಪ್ಯಾರೀಸ್ ಗಣೇಶ ಮತ್ತು ಅಲಂಕಾರ ಹೆಚ್ಚಿಸಲು ವಿವಿಧ ಬಗೆಯ ರಾಸಾಯನಿಕ ಯುಕ್ತ ಬಣ್ಣಗಳ ಬಳಕೆಯಿಂದ ಪರಿಸರದ ಮೇಲೆ ಬಾರೀ ಪರಿಣಾಮವನ್ನು ಉಂಟು ಮಾಡುತ್ತಿದ್ದನ್ನು ಗಮನಿಸಿದ ಕೆಲ ಪರಿಸರ ಪ್ರೇಮಿಗಳು ಮತ್ತೆ ರಾಸಾಯನಿಕ ಮುಕ್ತ ಮಣ್ನಿನಿಂದ ಗಣೇಶ ತಯಾರಿಸುವ ಕಾರ್ಯಾಗಾರಗಳನ್ನು ವಿವಿಧ ಬಡಾವಣೆಗಳಲ್ಲಿ ಹಮ್ಮಿಕೊಳ್ಳುವ ಮೂಲಕ ಜಾಗೃತಿ ಮೂಡಿಸತೊಡಗಿರುವುದು ಶ್ಲಾಘನೀಯವಾಗಿದೆ

Ganesha_Workshopಇದರ ಮುಂದುವರೆದ ಭಾಗವಾಗಿ, ಪರಿಸರ ಮಾಲಿನ್ಯ ಇಲಾಖೆ ಮತ್ತು ಬೆಂಗಳೂರು ಗಣೇಶ ಉತ್ಸವ ಸಮಿತಿ ಜ೦ಟಿಯಾಗಿ ಒಂದು ಅತ್ಯುತ್ತಮ ಕಾರ್ಯಕ್ರಮವನ್ನು ಬೆಂಗಳೂರಿನ ಪ್ರತಿಷ್ಟಿತ ನ್ಯಾಷನಲ್ ಕಾಲೇಜ್ ಮೈದಾನದಲ್ಲಿ ಇದೇ ಆಗಸ್ಟ್‌ 28/08/2022 ರ ಭಾನುವಾರ, ಮಧ್ಯಾಹ್ನ 3 ಗಂಟೆಯಿಂದ ಉಚಿತವಾಗಿ ಜೇಡಿಮಣ್ಣಿನಿಂದ ಗಣೇಶನ ಮೂರ್ತಿಯನ್ನು ಮಾಡುವುದನ್ನು ಹೇಳಿಕೊಡುವ ಕಾರ್ಯಾಗಾರವನ್ನು ಹಮ್ಮಿಕೊಂಡಿದ್ದು, ಅಲ್ಲಿ ನಾವು ಮಾಡಿದ ಗಣಪನನ್ನು ನಾವೇ ಮನೆಗೆ ತೆಗೆದುಕೊಂಡು ಹೋಗಿ ಪೂಜಿಸಬಹುದಾಗಿದೆ. ಅದರ ಜೊತೆ ಈ ಬಾರಿಯ ವಿಶೇಷವೇನೆಂದರೆ, ನಾವು ತಯಾರಿಸುವ ಗಣೇಶನ ವಿಗ್ರದೊಂದಿಗೆ ಹೂವು ಮತ್ತು ಹಣ್ಣು ತರಕಾರಿ ಬೀಜಗಳನ್ನು ಬೆರಸಿ ಸಿದ್ಧ ಪಡಿಸುವ ಕಾರಣ, ಪೂಜೆಯ ನಂತರ ನೀರಿನಲ್ಲಿ ಗಣೇಶ ಮೂರ್ತಿಯನ್ನು ವಿಸರ್ಜಿಸಿ ಆ ತ್ರಾಜ್ಯವನ್ನು ಒಂದು ಕುಂಡದಲ್ಲೋ ಇಲ್ಲವೇ ಮನೆಯ ಅಂಗಳದಲ್ಲೂ ಹಾಕಿದರೆ ಕೆಲವೇ ಕೆಲವೇ ದಿನ/ವಾರಗಳಲ್ಲಿ ಅದರಿಂದಲೇ ಸುಂದರವಾದ ಹೂ, ಹಣ್ಣು, ಇಲ್ಲವೇ ತರಕಾರಿ ಗಿಡ ಹುಟ್ಟಿ ಅದರಿಂದ ಫಲಪುಷ್ಪಗಳನ್ನು ಸವಿಯಬಹುದಾದ ಸುಂದರವಾದ ಪರಿಕಲ್ಪನೆಯನ್ನು ಅಯೋಜಕರು ಇಟ್ಟು ಕೊಂಡಿದ್ದಾರೆ. ಇದರ ಜೊತೆಗೆ ಈ ಕಾರ್ಯಾಗಾರ ವಿಶ್ವ ಮಟ್ಟದಲ್ಲಿ ಗಿನ್ನಿಸ್ ಬುಕ್ ಆಫ್ ರೆಕಾರ್ಡ್ ನಲ್ಲಿ ದಾಖಲಾಗುವ ಸಂಭವವಿರುವ ಕಾರಣ, ಆ ಕಾರ್ಯಾಗಾರದಲ್ಲಿ ಸೇರುವ ಪ್ರತಿಯೊಬ್ಬರೂ ಆ ದಾಖಲೆಗೆ ಸಾಕ್ಷಿಯಾಗುವುದರ ಜೊತೆಗೆ ಹೆಮ್ಮೆಯಿಂದ ಅದರ ಭಾಗವಾಗಬಹುದಾಗಿದೆ.

ಇಡೀ ಕಾರ್ಯಾಗಾರ ಸಂಪೂರ್ಣವಾಗಿ ಉಚಿತವಾಗಿದ್ದು 9342022070, 9590443016, ನಂಬರಿಗೆ ಕರೆ ಮಾಡಿ ನೋಂದಣೆ ಮಾಡಿಸಿಕೊಂಡಲ್ಲಿ, ಕಾರ್ಯಾಗಾರಕ್ಕೆ ಬರುವ ಪ್ರತಿಯೊಬ್ಬರಿಗೂ ಗಣೇಶನನ್ನು ತಯಾರಿಸಲು ಜೇಡಿ ಮಣ್ಣು ಕೊಡುವುದರ ಜೊತೆಗೆ, ನಾವೆಲ್ಲರೂ ಒಂದೇ ಎನ್ನುವಂತೆ ಕಾಣುವ ಸಲುವಾಗಿ ಆಕರ್ಷಣೀಯವಾದ T ಶರ್ಟ್, ಲಘು ಉಪಹಾರವಲ್ಲದೇ, ದೂರ ದೂರದ ಪ್ರದೇಶದಿಂದ ಅಲ್ಲಿಗೆ ಬರುವವರಿಗೆ ಉಚಿತವಾಗಿ BMTC Bus ವ್ಯವಸ್ಥೆಯೂ ಇದೆ. ಪ್ರತೀ ಹತ್ತು ಜನರ ಒಂದು ಗುಂಪನ್ನು ಮಾಡಿ ಆ ಗುಂಪಿಗೇ ಒಬ್ಬ ತರಭೇತುದಾರರನ್ನು ನಿಯೋಜಿಸಿ ವ್ಯಕ್ತಿಗತ ತರಬೇತಿ ನೀಡುವ ರೀತಿ ಆಯೋಗಿಸಲಾಗಿದೆ.

ganesaಇಷ್ಟೆಲ್ಲಾ ಮಾಹಿತಿಗಳು ತಿಳಿದ ಮೇಲೇ ಇನ್ನೇಕೆ ತಡಾ, ಈ ಲೇಖನ ಓದಿದ ಕೂಡಲೇ, ನಿಗಧಿತ ನಂಬರಿಗೆ ಕರೆ ಮಾಡಿ ನೋಂದಣೆ ಮಾಡಿಸಿಕೊಂಡು ನಮ್ಮ ಕೈಯ್ಯಲ್ಲೇ ಗಣೇಶನನ್ನು ತಯಾರಿಸಿ, ಅದನ್ನೇ ಬುಧವಾರ, ಆಗಸ್ಟ್ 31ನೇ ತಾರೀಖಿನ ಗಣೇಶ ಚರ್ತುರ್ಥಿಯಂದು ನಮ್ಮ ನಮ್ಮ ಮನೆಗಳಲ್ಲಿಟ್ಟು ಶ್ರದ್ಧಾ ಭಕ್ತಿಗಳಿಂದ ಪೂಜಿಸಿ ನಂತರ ಮೇಲೆ ತಿಳಿಸಿದಂತೆ ವಿಸರ್ಜಿಸಿದ ನಂತರ ಅದೇ ಮಣ್ಣಿನಿಂದಲೇ, ಕೆಲವು ದಿನಗಳಲ್ಲಿ ಅದೇ ಗಣಪ ಮತ್ತೆ ಹೂವಾಗಿ, ಹಣ್ಣಾಗಿ, ತರಕಾರಿಯಾಗಿ ನಮ್ಮ ಮನೆಯಲ್ಲಿ ಅರಳುವುದನ್ನು ಕಾಣಬಹುದಾಗಿದೆ.

syed2-removebg-preview (1)ನಮ್ಮ ಹಿರಿಯರು ಉಳಿಸಿಕೊಟ್ಟ ಹೋದ ಈ ಸುಂದರವಾದ ಪರಿಸರವನ್ನು ನಮ್ಮ ಮುಂದಿನ ಪೀಳಿಗೆಯವರಿಗೆ ಉಳಿಸಿ ಹೋಗುವ ಜವಾಬ್ಧಾರಿ ನಮ್ಮ ನಿಮ್ಮೆಲ್ಲದ್ದೇ ಆಗಿರುವ ಕಾರಣ, ಪರಿಸರ ಪ್ರೇಮಿಗಳಾದ ನಾವೆಲ್ಲರೂ ನಮ್ಮ ಕೈಯಿಂದಲೇ ಪರಿಸರ ಪ್ರೇಮಿ ಗಣೇಶನನ್ನು ಮಾಡಿಸಲು ಕಂಕಣತೊಟ್ಟು ನಿಂತ ನಿಂತಿರುವ ಪರಿಸರ ಮಾಲಿನ್ಯ ಮಂಡಳಿಯ ನಿರ್ದೇಶಕರಾದ ಶ್ರೀಯುತ ಸೈಯದ್ ಖಾಜಾ ಮತ್ತವರ ತಂಡದ ಜೊತೆಗೆ ಕೈ ಜೋಡಿಸೋಣ ಅಲ್ವೇ?

echo_ganesha-removebg-previewಈ ವಿಷಯವನ್ನು ಸಮಸ್ತ ಆಸ್ತಿಕ ಬಂಧು-ಮಿತ್ರರೊಂದಿಗೆ ಹಂಚಿಕೊಳ್ಳುವ ಮೂಲಕ, ಎಲ್ಲರನ್ನೂ ಪರಿಸರ ಪ್ರೇಮಿ ಗಣೇಶ ಮೂರ್ತಿಯ ತಯಾರಿಕಾ ಕಾರ್ಯಾಗಾರಕ್ಕೆ ಕರೆ ತಂದು ಆ ಕಾರ್ಯಾಗಾರವನ್ನು ಯಶಸ್ವಿಗೊಳಿಸುವ ಗುರುತರ ಜವಾಬ್ಧಾರಿ ನಮ್ಮ ನಿಮ್ಮಲ್ಲದ್ದೇ ಆಗಿದೆ ಅಲ್ವೇ?

ಏನಂತೀರೀ?
ನಿಮ್ಮವನೇ ಉಮಾಸುತ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s