ಬೇಲಿಯೇ ಎದ್ದು ಹೊಲ ಮೇಯ್ದರೆ? ರಕ್ಷಕರೇ ಭಕ್ಷಕರಾದರೆ? ಕಾಯುವವರು ಯಾರು?

karnataka_police2

ದೇಶದ ಗಡಿಯಲ್ಲಿ ಶತ್ರುಗಳ ನುಸುಳುವಿಕೆಯನ್ನು ತಡೆಯುವ ಸಲುವಾಗಿ ಹೇಗೆ ಸೈನ್ಯವಿರುತ್ತದೆಯೋ ಹಾಗೆಯೇ ದೇಶದ ಆಂತರಿಕ ಸಮಾಜದಲ್ಲಿ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ಸಲುವಾಗಿ ಆರಕ್ಷಕರು ಇರುತ್ತಾರೆ. ಸ್ಥಳೀಯವಾಗಿ ನಡೆಯುವ ಸಾವಿರಾರು ಪ್ರಕರಣಗಳನ್ನು ಬೇಧಿಸಿ ಅಪರಾಧಿಗಳನ್ನು ಹಿಡಿದು ಅವರನ್ನು ನ್ಯಾಯಾಲಯಕ್ಕೆ ಒಪ್ಪಿಸಿ ತನಿಖೆ ನಡೆಯುವಾಗ ಅ ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಕ್ತವಾದ ಸಾಕ್ಷಿಗಳನ್ನು ಒದಗಿಸಿ ಅಪರಾಧಿಗೆ ಶಿಕ್ಷೆಯಾಗುವಂತೆ ಮಾಡುವುದರಲ್ಲಿ ಪೋಲಿಸರ ಪಾತ್ರ ಬಹಳ ಮುಖ್ಯವಾಗಿರುತ್ತದೆ. ಅದೆಷ್ಟೋ ಪ್ರಕರಣಗಳನ್ನು ನ್ಯಾಯಾಲಯದವರೆಗೂ ಬಾರದಂತೆ ಸ್ಥಳೀಯವಾಗಿಯೇ ಪೋಲಿಸರು ಬಗೆಹರಿಸುವ ಕಾರಣ ನಮ್ಮ ಸಮಾಜದಲ್ಲಿ ಪೋಲಿಸರಿಗೆ ಅಪಾರವಾದ ಗೌರವ ಮತ್ತು ಮನ್ನಡೆ ಇದೆ. ಅದರಲ್ಲೂ ಕರ್ನಾಟಕದ ಪೋಲಿಸರೆಂದರೆ ದಕ್ಷತೆ ಮತ್ತು ಪ್ರಾಮಣಿಕತೆಗೆ ಇಡೀ ದೇಶದಲ್ಲೇ ಹೆಸರುವಾಸಿಯಾಗಿದೆ.

karnataka_police

ಆದರೆ ಇತ್ತೀಚಿನ ದಿನಗಳಲ್ಲಿ ಅಪರಾಧಿಗಳನ್ನು ಹಿಡಿದು ಅವರಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕಾದಂತಹ ಪೋಲೀಸರೇ ಅನೇಕ ಅಪರಾಧಗಳಲ್ಲಿ ಭಾಗಿಗಳಾಗುವ ಮೂಲಕ, ಇಂದಿನ ಲೇಖನದ ಶೀರ್ಷಿಕೆಯಾದ ಬೇಲಿಯೇ ಎದ್ದು ಹೊಲ ಮೇಯ್ದರೆ? ರಕ್ಷಕರೇ ಭಕ್ಷಕರಾದರೆ? ಕಾಯುವವರು ಯಾರು? ಎಂಬ ಪ್ರಶ್ನೆ ಎಲ್ಲರರಲ್ಲೂ ಮೂಡುವಂತಾಗಿರುವುದು ನಿಜಕ್ಕೂ ದುಃಖಕರವಾದ ಸಂಗತಿಯಾಗಿದೆ.

harsha_Killers

ಶಿವಮೊಗ್ಗದ ಹಿಂದೂ ಕಾರ್ಯಕರ್ತ ಹರ್ಷನನ್ನು ಹಾಡುಹಗಲಲ್ಲೇ ಕೊಚ್ಚಿ ಹಾಕಿ ಪರಾರಿಯಾಗಿದ್ದ ಅಪರಾಧಿಗಳ ಹೆಡೆಮುರಿ ಕಟ್ಟಿ ಅವರನ್ನು ಸೆರೆಮನೆಗೆ ತಳ್ಳಿದಾಗ ಪೋಲೀಸರನ್ನು ಶಭಾಷ್ ಎಂದಿದ್ದವರು ಈಗ ಅದೇ ಅಪರಾಧಿಗಳು ಪರಪ್ಪನ ಅಗ್ರಹಾರ ಸೆರೆಮನೆಯಲ್ಲಿ ಕುಳಿತಿಕೊಂಡೇ ತಮ್ಮ ಮನೆಯವರೊಂದಿಗೆ ವೀಡೀಯೋ ಕಾಲ್ ಮಾಡಿಕೊಂಡು ಮಾತನಾಡುತ್ತಾ ರೀಲ್ಸ್ ಮಾಡಿ ಸಂಭ್ರಮಿಸುತ್ತಿರುವ ಆಘಾತಕಾರಿ ಸುದ್ದಿ ಹೊರಬಿದ್ದಾಗ ಅರೇ ಪೋಲೀಸ್ ಠಾಣೆ ಅದರಲ್ಲೂ ಪರಪ್ಪನ ಅಗ್ರಹಾರದಂತಹ ಇನ್ನೂ ಕೂಡಾ ದೊಡ್ಡ ಸೆರೆಮನೆಯಲ್ಲಿ ಹೀಗಾಗಲು ಸಾಧ್ಯವೇ? ಎಂಬ ಪ್ರಶ್ನೆ ಮೂಡಿತ್ತು,

satyanarayana_rao

ಕೆಲ ವರ್ಷಗಳ ಹಿಂದೆ ಇದೇ ಪರಪ್ಪನ ಅಗ್ರಹಾರದಲ್ಲಿ ತಮಿಳುನಾಡಿನ ವಿವಾದಾಸ್ಪದ ರಾಜಕೀಯ ನಾಯಕಿ ಶಶಿಕಲ ಮತ್ತು ಆಕೆಯ ಸಹಚರೆಗೆ ಕರ್ನಾಟಕ ಕಾರಾಗೃಹಗಳ ಮಹಾನಿರ್ದೇಶಕ (ಡಿಜಿಪಿ) ಸತ್ಯನಾರಾಯಣ ರಾವ್ ಮತ್ತು ನಗರ ಕೇಂದ್ರ ಕಾರಾಗೃಹದ ಅಧಿಕಾರಿಗಳು ಶಶಿಕಲಾಳಿಂದ ಲಂಚ ಸ್ವೀಕರಿಸಿ ಆವರಿಗೆ ರಾಜಾತಿಥ್ಯ ನೀಡುತ್ತಿದ್ದಂತಹ ವಿಷಯವನ್ನು ದಕ್ಷ ಪ್ರಾಮಾಣಿಕ ಐಪಿಎಸ್ ಅಧಿಕಾರಿ ರೂಪಾ ಡಿ ಮೌದ್ಗಲ್ ಬಯಲೆಳೆದಾಗ ಸದ್ದಿಲ್ಲದೇ ಆಕೆಯನ್ನೇ ಅಲ್ಲಿಂದ ವರ್ಗಮಾಡಿ ಅಪರಾಧಿ (ಡಿಜಿಪಿ) ಸತ್ಯನಾರಾಯಣ ರಾವ್ ಪೋಲೀಸ್ ಅಧಿಕಾರಿಯನ್ನು ಬಚಾವ್ ಮಾಡಿದ್ದು ಇನ್ನೂ ಹಚ್ಚಹಸಿರಾಗಿಯೇ ಇದೆ.

psi case

ಇನ್ನು ಪಿ.ಎಸ್.ಐ. ನೇಮಕದ ಹಗರಣ ದಿನದಿಂದ ದಿನಕ್ಕೆ ರೋಚಕತೆಯ ಹಂತವನ್ನು ತಲುಪುತ್ತಿದ್ದು ಆರಂಭದಲ್ಲಿ ಕೆಲ ಕಿಂಗ್ ಪಿನ್ ಮತ್ತು ಪರೀಕ್ಷಾ ಕೇಂದ್ರಗಳನ್ನು ಆರೋಪಿಗಳನ್ನಾಗಿಸಿ ಬಂಧಿಸಿ ತನಿಖೆ ಮುಂದುವರೆಸಿದಾಗ ಆಶ್ಚರ್ಯಕರ ರೀತಿಯಲ್ಲಿ ಪೋಲೀಸ್ ಇಲಾಖೆಯ ವಿವಿಧ ಶ್ರೇಣಿಯ ಅಧಿಕಾರಿಗಳು ಅದರಲ್ಲಿ ಭಾಗಿಗಳಾಗಿರುವ ಸಂಗತಿ ಬಯಲಾಗಿ ವಾರದಿಂದ ವಾರಕ್ಕೆ ಒಬ್ಬೊಬ್ಬರೇ ಪೋಲೀಸ್ ಅಧಿಕಾರಿಗಳು ಅಪರಾಧಿಗಳಾಗಿ ಬಂಧಿತರಾಗುತ್ತಿರುವ ಬಹಳ ಆಘಾತಕಾರಿಯಾದ ವಿಷಯ ಇನ್ನೂ ನೆನಪಿನಿಂದ ಮಾಸಿ ಹೋಗದೇ ಇರುವಾಗಲೇ, ಬಳ್ಳಾರಿಯ ಪೋಲೀಸರು ಅಮೇದ್ಯ ತಿಂದಿರುವ ಈ ವಿಷಯ ನಿಜಕ್ಕೂ ಎಲ್ಲಾ ಪೋಲಿಸರೂ ತಲೆ ತಗ್ಗಿಸುವಂತೆ ಮಾಡಿದೆ.

bacchaKhan

ಬಳ್ಳಾರಿಯ ಹಲವು ಕೊಲೆ, ಸುಲಿಗೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಅಷ್ಟೇ ಅಲ್ಲ, ಹಲವು ಪ್ರಕರಣಗಳಲ್ಲಿ ಜೈಲು ಶಿಕ್ಷೆಯನ್ನೂ ಅನುಭವಿಸಿರುವ ಮತ್ತು ಒಂದು ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವುದಲ್ಲದೇ, ಇನ್ನೂ ಹಲವು ಪ್ರಕರಣಗಳ ತನಿಖೆಯೂ ನಡೆಯುತ್ತಲಿರುವ ಕುಖ್ಯಾತ ಭೂಗತ ಪಾತಕಿ, ಬಚ್ಚಾಖಾನ್ ನನ್ನು ವಿ‍ಚಾರಣೆಗೆಂದು ಬಳ್ಳಾರಿಯಿಂದ ಧಾರವಾಡದ ನ್ಯಾಯಾಲಯಕ್ಕೆ ಭಾರೀ ಪೊಲೀಸ್ ಬಂದೋಬಸ್ತ್ ಭದ್ರತೆಯೊಂದಿಗೆ ಕರೆ ತಂದು ವಿಚಾರಣೆ ಮುಗಿಸಿ ಬಳ್ಳಾರಿಗೆ ನೇರವಾಗಿ ಹಿಂದಿರುಗದೇ, ಮಾರ್ಗದ ಮಧ್ಯದಲ್ಲಿ ಧಾರವಾಡದ ಸತ್ತೂರು ಜಿಲ್ಲೆಯ ರಾಯಾಪುರದ ಬಳಿಯಿರುವ ಪ್ರಕೃತಿ ರೆಸಿಡೆನ್ಸಿ ಲಾಡ್ಜ್‌ನಲ್ಲಿ ತನ್ನ ಪ್ರೇಯಸಿಯೊಂದಿಗೆ ಸರಸ ಸಲ್ಲಾಪದಲ್ಲಿರುವ ವಿಷಯವನ್ನು ತಿಳಿದ ಹುಬ್ಬಳ್ಳಿ ಧಾರವಾಡ ಮಹಾನಗರ ಪೊಲೀಸ್ ಆಯುಕ್ತ ಲಾಬೂರಾಮ್ ತಮ್ಮ ಪೊಲೀಸರೊಂದಿಗೆ ದಾಳಿ ಮಾಡಿ ನಡೆಸಿದಾಗ, ಆತ ತನ್ನ ಪ್ರೇಯಸಿಯ ಜೊತೆ ಚಕ್ಕಂದ ನಡೆಸುತ್ತಿರುವಾಗಲೇ ಸಿಕ್ಕಿ ಬಿದ್ದಿದ್ದಾನೆ. ವಿಚಾರಣೆಗೆಂದು ಬಚ್ಚಾಖಾನನನ್ನು ಕರೆರುತ್ತಿದ್ದ ಪೋಲೀಸರು ಸಹಾ ಈ ಕುಕೃತ್ಯದಲ್ಲಿ ಭಾಗಿಗಳಾಗಿ ಆತನ ಪ್ರೇಯಸಿಯನ್ನು ಈ ಮೊದಲೇ ಆ ಲಾಡ್ಜಿನಲ್ಲಿರಿಸಿ, ಆಕೆಯೊಂದಿಗೆ ಸರಸವಾಡಲು ಪೋಲೀಸರೇ ಅನುವು ಮಾಡಿಕೊಟ್ಟಿರುವ ವಿಷಯ ಹೊರಬಿದ್ದಿರುವುದು ನಿಜಕ್ಕೂ ಹೇಯಕರವಾಗಿದೆ.

police_helmet

ರಸ್ತೆ ಬದಿಯ ತಳ್ಳು ಗಾಡಿಯ ವ್ಯಾಪಾರಿಗಳು, ಹೆಲ್ಮೆಟ್ ಇಲ್ಲದೇ ಅಲ್ಲಿಲ್ಲಿ ವಾಹನ ಓಡಿಸುವವರನ್ನು ಹಿಡಿದೋ ಇಲ್ಲವೇ ಹೊಟ್ಟೆಯ ಪಾಡಿಗೆ ರಸ್ತೆಯ ಬದಿಯಲ್ಲಿ ಮೈಮಾರಿಕೊಳ್ಳಲು ನಿಂತಿರುವವರನ್ನು (ಅಂತಹವರ ಬಗ್ಗೆ ಬಾರೀ ಕನಿಕರವಿದೆ)ಹಿಡಿದೋ ಇಲ್ಲವೇ ಅಕ್ರಮವಾಗಿ ವೇಶ್ಯಾವಾಟಿಕೆ ನಡೆಸುತ್ತಿರುವ ಲಾಡ್ವ್ ಇಲ್ಲವೇ ಬಂಗಲೆಗಳ ಮೇಲೆ ಧಾಳಿ ಮಾಡಿ ಬಾರೀ ಘನಾಂಧಾರಿ ಕೆಲಸ ಮಾಡಿದೆವೆಂದು ಪೋಸು ಕೊಡುವ ಪೋಲೀಸರೇ, ಭೂಗತಪಾತಕಿಯ ಎಂಜಲು ಕಾಸಿನ ಆಸೆಗೆ ಬಿದ್ದು ವಿಟಪುರುಷರಾಗಿ ಹಾದರಕ್ಕೆ ಅನುವು ಮಾಡಿಕೊಟ್ಟಿರುವುದು ನಿಜಕ್ಕೂ ಅಕ್ಷಮ್ಯ ಅಪರಾಧವಾಗಿದೆ.

raide_lodge

ಕಾನೂನಿನ ಪ್ರಕಾರ 10 ಅಪರಾಧಿಗಳಿಗೆ ಶಿಕ್ಷೆ ತಪ್ಪಿದರೂ ಪರಾವಾಗಿಲ್ಲ ಆದರೆ ಒಬ್ಬ ನಿರಪರಾಧಿಗೆ ಶಿಕ್ಷೆಯಾಗಬಾರದು ಎಂಬುದಾಗಿದೆ. ಹಾಗಾಗಿ ಈ ಕೂಡಲೇ ಆ ಭೂಗತ ಪಾತಕಿಯೊಂದಿಗೆ ಸಿಕ್ಕಿಹಾಕಿಕೊಂಡಿರುವ ಆ ಎಲ್ಲಾ ಪೋಲಿಸರನ್ನೂ ಈ ಕೂಡಲೇ ಪೋಲೀಸ್ ಕೆಲಸದಿಂದ ವಜಾಮಾಡಿ ಅವರಿಗೆ ಕಠಿಣ ಶಿಕ್ಷೆಯಾಗುವಂತೆ ಮಾಡಿದಲ್ಲಿ ಮುಂದೆ ಇನ್ನಾವ ಪೋಲಿಸರೂ ಈ ರೀತಿಯ ಕುಕೃತ್ಯ ಮಾಡಲು ಮುಂದಾಗರು ಎನ್ನುವುದು ಸರಳ ಸಜ್ಜನರ ಆಶೆಯಾಗಿದೆ.

ಕರ್ನಾಟಕದಿಂದ ಅಧಿಕೃತವಾಗಿಯೇ ಚಿನ್ನವನ್ನು ಕೊಂಡೊಯ್ಯುತ್ತಿದ್ದ ಕೇರಳದ ಚಿನ್ನದ ವ್ಯಾಪಾರಿಯನ್ನು ಮೈಸೂರು ರಸ್ತೆಯಲ್ಲಿ ಅಡ್ಡಗಟ್ಟಿ ದೋಚಿದಂತಹ ಪೋಲೀಸ್ ಅಧಿಕಾರಿಯನ್ನೇ ತಿಂಗಳಾನುಗಟ್ಟಲೆ ಬಚ್ಚಿಟ್ಟು ನಂತರ ಆತನ ಕೇಸನ್ನು ಹಳ್ಳ ಹಿಡಿಸಿದ ಕೆಲವೇ ಕೆಲವು ದಿನಗಳಲ್ಲಿ ಆತನಿಗೆ ಭಡ್ತಿ ಕೊಡುವಂತಹ, ಪರಪ್ಪನ ಅಗ್ರಹಾರದಲ್ಲಿ ಕೈದಿಗಳಿಗೆ ಐಶಾರಾಮಿ ವ್ಯವಸ್ಥೆಗಳನ್ನು ಅಕ್ರಮವಾಗಿ ನೀಡುತ್ತಿದ್ದಂತಹ ಕೇಸುಗಳನ್ನೇ ಹಳ್ಳ ಹಿಡಿಸಿದ ಪೋಲೀಸ್ ಇಲಾಖೆ ಈ ರೀತಿಯ ವಿಟಪುರುಷರ ಮೇಲೆ ಯಾವುದೇ ರೀತಿಯ ಕ್ರಮ ತೆಗೆದುಕೊಳ್ಳುತ್ತಾರೆ ಎನ್ನುವ ಭರವಸೆಯೇ ಜನಸಾಮಾನ್ಯರಿಗೆ ಇಲ್ಲದಂತಾಗಿ, ಬೇಲಿಯೇ ಎದ್ದು ಹೊಲ ಮೇಯ್ದರೆ? ರಕ್ಷಕರೇ ಭಕ್ಷಕರಾದರೆ? ಜನಸಾಮಾನ್ಯರನ್ನು ಕಾಯುವವರು ಯಾರು? ಎನ್ನುವಂತಾಗಿದೆ.

karnataka_police

ಇಂತಹ ಲಂಚಕೋರರು ಪೋಲೀಸ್ ಇಲಾಖೆಯಲ್ಲಿ ಇರುವ ವರೆಗೂ ಯಾವುದೇ ಸರ್ಕಾರ ಬಂದರೂ, ಯಾರೇ, ಗೃಹಮಂತ್ರಿಗಳಾದರೂ, ನಿಯಂತ್ರಿಸಲು ಅಸಾಧ್ಯವೇ ಸರಿ. ಇಲಾಖೆಯಲ್ಲಿ ಇರುವ ಕೆಲವೇ ಕೆಲವು ಬೆರಳೆಣಿಕೆಯ ದಕ್ಷ ಮತ್ತು ಪ್ರಾಮಾಣಿಕ ಅಧಿಕಾರಿಗಳು ಈ ಕುರಿತಂತೆ ವಿಶೇಷವಾದ ಆಸ್ಥೆವಹಿಸಿ ದಯವಿಟ್ಟು ಇಂತಹ ಅತ್ಯಂತ ಹೀನಾಯ ಪ್ರಕರಣದಲ್ಲಿ ಭಾಗಿಗಳಾಗಿರುವ ಎಲ್ಲಾ ಪೋಲೀಸ್ ಸಿಬ್ಬಂಧಿಗಳನ್ನು ಈ ಕೂಡಲೇ ಇಲಾಖೆಯಿಂದಲೇ ವಜಾಗೊಳಿ, ಸಾಯುವವರೆಗೂ ಇಂತಹ ತಲೆ ಹಿಡುಕರಿಗೆ ಶಿಕ್ಷೆ ಆಗುವಂತಾದಲ್ಲಿ ಮಾತ್ರವೇ, ಜನಸಾಮಾನ್ಯರು ನೆಮ್ಮದಿಯಿಂದ ಬಾಳ್ವೆ ನಡೆಸ ಬಹುದಾಗಿದೆ ಅನ್ಸತ್ತೆ ಅಲ್ವೇ?
ಏನಂತೀರೀ?
ನಿಮ್ಮವನೇ ಉಮಾಸುತ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s