ನೆನ್ನೆ ತಾನೇ ಜನರನ್ನು ಕಾಯುವ ರಕ್ಷಕರೇ ಭಕ್ಷಕರದಾದರೆ ಜನರನ್ನು ಕಾಯುವವರು ಯಾರು? ಎನ್ನುವ ಲೇಖನ ಬರೆದು ಪ್ರಕಟಿಸಿ ರಾತ್ರಿ ಕಳೆದು ಬೆಳಗಾಗುವುದರೊಳಗೆ, ಮತ್ತದೇ ಕೆಲ ಸರ್ಕಾರೀ ಅಧಿಕಾರಿಗಳು ಜೈಪುರದ ಕ್ಯಾಸಿನೋ ಒಂದರಲ್ಲಿ ನಡೆಯುತ್ತಿದ್ದ ಪಾರ್ಟಿಯಲ್ಲಿ ಕರ್ನಾಟಕದ ದೊಡ್ಡ ದೊಡ್ಡ ಅಧಿಕಾರಿಗಳು ನೋಡಬಾರದಂತಹ ಸ್ಥಿತಿಯಲ್ಲಿ ಮೋಜು ಮಸ್ತಿ ಮಾಡುತ್ತಾ, ಅಲ್ಲಿನ ಸ್ಥಳೀಯ ಪೋಲಿಸರು ನಡೆಸಿದ ಧಾಳಿಯಲ್ಲಿ ಕರ್ನಾಟಕವೂ ಸೇರಿದಂತೆ ವಿವಿಧ ರಾಜ್ಯಗಳ ಹಿರಿಯ ಸರ್ಕಾರಿಗಳ ಸಹಿತ ಸುಮಾರು 84 ಬಂಧನವಾಗಿರುವ ಸುದ್ಧಿ ಕೇಳಿ ನಿಜಕ್ಕೂ ಮನಸ್ಸಿಗೆ ಖೇಧ ಉಂಟಾಗುತ್ತಿದೆ
ಪ್ರತಿ ಬಾರಿ ಲೋಕಾಯುಕ್ತ ಇಲ್ಲವೇ ಸಿಸಿಬಿಯವರ ಧಾಳಿ ಸರ್ಕಾರಿ ಅಧಿಕಾರಿಗಳ ಮನೆಗಳ ಮೇಲೆ ನಡೆದು ಕೋಟ್ಯಾಂತರ ಅಕ್ರಮ ಹಣವನ್ನು ಮುಟ್ಟುಗೋಲು ಹಾಕಿಕೊಂಡಿರುವ ಸುದ್ದಿ ಕೇಳುವಾಗ ಇಲ್ಲವೇ ಓದುವಾಗ, ಅರೇ ಇಷ್ಟೊಂದು ಹಣವನ್ನು ಇಟ್ಟುಕೊಂಡು ಏನು ಮಾಡುತ್ತಾರೆ? ಹೇಗೆ ಖರ್ಚು ಮಾಡುತ್ತಾರೆ? ಎಂಬ ಸಂದೇಹ ಎಲ್ಲರನ್ನೂ ಸಹಜವಾಗಿ ಕಾಡುತ್ತಿತ್ತು. ಆದರೆ ಇಂದಿನ ಈ ಸುದ್ದಿಯನ್ನು ಓದುತ್ತಿದ್ದಂತೆಯೇ ಅವರೆಲ್ಲರ ಸಂದೇಹಗಳೂ ನಿಸ್ಸಂಶಯವಾಗಿ ಪರಿಹಾರವಾಗುವುದರಲ್ಲಿ ಅನುಮಾನವೇ ಇಲ್ಲಾ ಎಂದರೂ ತಪ್ಪಾಗದು.
ಜೈಪುರ ಪೊಲೀಸರ ತಂಡ ಶನಿವಾರ ಆಗಸ್ಟ್ 20ರ ರಾತ್ರಿ ಜೈಸಿಂಗ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಸಾಹಿಪುರದ ಫಾರ್ಮ್‌ಹೌಸ್‌ನಲ್ಲಿ ರೇವ್ ಪಾರ್ಟಿ ನಡೆಯುತ್ತಿದ್ದ ವಿಷಯ ತಿಳಿದು ಬೆಳಗಿನ ಜಾವ ಸುಮಾರು 2 ಗಂಟೆ ದಾಳಿ ನಡೆಸಿದ ಸಂಧರ್ಭದಲ್ಲಿ ಸಮಾಜದ ಪ್ರತಿಷ್ಠಿತರ ಮಕ್ಕಳು ಹಾಗೂ ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳ ಹಿರಿಯ ಅಧಿಕಾರಿಗಳು ಅಶ್ಲೀಲವಾಗಿ ಕೆರೆಹೆಣ್ಣುಗಳ ಜೊತೆ ಪಾರ್ಟಿ ಮಾಡುತಿದ್ದದ್ದಲ್ಲದೇ, ಎಗ್ಗಿಲ್ಲದೇ ಕುಡಿತ, ಹುಕ್ಕಾ ಸೇದುವಿಕೆ ಮತ್ತು ಜೂಜಾಡುತ್ತಿದ್ದದ್ದು ಕಂಡು ಬಂದಿದೆಯಲ್ಲದೇ ಇನ್ನೂ ಕೆಲವರು ನೋಡಬಾರದಂತಹ ಸ್ಥಿತಿಯಲ್ಲಿದ್ದದ್ದು ಕಂಡು ಪೋಲೀಸರೇ ಬೆಚ್ಚಿ ಬಿದ್ದಿರುವ ಸುದ್ದಿ ತಿಳಿದು ಬಂದಿದೆ. ಧಾಳಿ ನಡೆದ ಸಂಧರ್ಭದಲ್ಲಿ 9 ಹುಕ್ಕಾ, ಐಎಂಎಫ್‌ಎಲ್‌ನ 44 ಬಾಟಲಿಗಳು, 66 ಬಿಯರ್ ಬಾಟಲಿಗಳು, 14 ಐಷಾರಾಮಿ ಕಾರುಗಳು, ಒಂದು ಟ್ರಕ್ ಮತ್ತು 23.78 ಲಕ್ಷ ರೂಪಾಯಿ ನಗದು ವಶಪಡಿಸಿಕೊಳ್ಳಲಾಗಿದೆ ಎಂದು ಜೈಪುರ ಪೊಲೀಸ್ ಹೆಚ್ಚುವರಿ ಆಯುಕ್ತ ಅಜಯ್‌ಪಾಲ್ ಲಂಬಾ ತಿಳಿಸಿದ್ದಾರೆ.
ಕರ್ನಾಟಕದ ಪೊಲೀಸ್ ಇನ್‌ಸ್ಪೆಕ್ಟರ್ ಅಂಜಯ್ಯ, ಬೆಂಗಳೂರಿನ ತಹಶೀಲ್ದಾರ್ ಶ್ರೀನಾಥ್ ಮತ್ತು ಕಾಲೇಜು ಪ್ರಾಧ್ಯಾಪಕ ಕೆ.ಎಲ್. ರಮೇಶ್ ಸೇರಿದಂತೆ ಹರಿಯಾಣ, ಪಂಜಾಬ್, ಕರ್ನಾಟಕ, ಉತ್ತರ ಪ್ರದೇಶ, ಮಹಾರಾಷ್ಟ್ರ ಸೇರಿದಂತೆ ವಿವಿಧ ರಾಜ್ಯಗಳವರೂ ಸಹಾ ಈ ರೇವ್ ಪಾರ್ಟಿಯಲ್ಲಿ ಉಪಸ್ಥಿತರಿದ್ದು, ಅವರ ಜೊತೆಗಿದ್ದ 13 ಮಹಿಳೆಯರು ಸೇರಿದಂತೆ ಒಟ್ಟು 84 ಜನರನ್ನು ಬಂಧಿಸಲಾಗಿದೆ ಎಂದು ಧಾಳಿ ನಡೆಸಿದ ತಂಡದ ನೇತೃತ್ವ ವಹಿಸಿದ್ದ ಜೈಪುರದ ಹೆಚ್ಚುವರಿ ಪೊಲೀಸ್ ಕಮಿಷನರ್ ಅಜಯ್ ಪಾಲ್ ಲಾಂಬಾ ತಿಳಿಸಿದ್ದಾರೆ. ಈ ಅಕ್ರಮ ಹೈ-ಪ್ರೊಫೈಲ್ ಪಾರ್ಟಿಯಲ್ಲಿ ಪಾಲ್ಗೊಳ್ಳುವವರಲ್ಲಿ, ಹುಡುಗಿಯರು ಸೇರಿದಂತೆ ಹೆಚ್ಚಿನ ಸಂಖ್ಯೆಯ ಯುವಕರು ಡ್ಯಾನ್ಸ್ ಪಾರ್ಟಿಯ ನೆಪದಲ್ಲಿ ಮದ್ಯ ಸೇವನೆ, ಕ್ಯಾಸಿನೊ ಆಟಗಳ ರೂಪದಲ್ಲಿ ಜೂಜಾಟ ಆಡುತ್ತಿರುವುದು ಕಂಡುಬಂದಿದೆ.
ರೇವ್ ಪಾರ್ಟಿ ನಡೆದ ರೆಸಾರ್ಟ್ ನ ಮ್ಯಾನೇಜರ್ ಮೋಹಿತ್ ಸೋನಿ ಅವರನ್ನು ಬಂಧಿಸಿ ವಿಚಾರಣೆ ನಡೆಸಿದಾಗ, ರಾಜಧಾನಿ ದೆಹಲಿಯ ನಿವಾಸಿ ನರೇಶ್ ಮಲ್ಹೋತ್ರಾ ಅಲಿಯಾಸ್ ರಾಹುಲ್ ಅಲಿಯಾಸ್ ಬಬ್ಲು ಮತ್ತು ಅವರ ಮಗ ಮಾನ್ವೇಶ್ ಈ ಕಾರ್ಯಕ್ರಮವನ್ನು ಆಯೋಜಿಸಿದ್ದರು ಎಂದು ತಿಳಿದುಬಂದಿದೆ. ಈವೆಂಟ್ ಮ್ಯಾನೇಜರ್ ನರೇಶ್ ಮಲ್ಲೋತ್ರಾ ಅವರ ಮಗ ಮನ್ವೇಶ್, ಫಾರ್ಮ್ ಹೌಸ್ ಮ್ಯಾನೇಜರ್ ಮೋಹಿತ್ ಸೋನಿ, ಮೀರತ್ ನಿವಾಸಿ ಮನೀಶ್ ಶರ್ಮಾ ಅವರನ್ನು ಮಾನವ ಕಳ್ಳಸಾಗಣೆಯ ಸೆಕ್ಷನ್‌ಗಳ ಅಡಿಯಲ್ಲಿ ಬಂಧಿಸಲಾಗಿದ್ದು ಹೆಚ್ಚಿನ ತನಿಖೆ ನಡೆಸುತ್ತಿರುವ ಸುದ್ಧಿ ತಿಳಿದು ಬಂದಿದೆ
ಈ ಈವೆಂಟ್ ಮ್ಯಾನೇಜರ್ ಮತ್ತವರ ಸಹಚರರು, ಕರ್ನಾಟಕ, ತೆಲಂಗಾಣ, ಹರಿಯಾಣ, ಪಂಜಾಬ್, ಉತ್ತರ ಪ್ರದೇಶ, ದೆಹಲಿ ಮತ್ತು ಮಹಾರಾಷ್ಟ್ರ ಸರ್ಕಾರಿ ಅಧಿಕಾರಿಗಳು ಮತ್ತು ಸಮಾಜದ ಇತರೇ ಗಣ್ಯರು ಮತ್ತವರ ಮಕ್ಕಳನ್ನು ತಮ್ಮ ಬುಟ್ಟಿಗೆ ಬೀಳಿಸಿಕೊಂಡು ನಗರದ ಹೊರವಲಯದ ಫಾರ್ಮ್ ಹೌಸ್‌ನ್ನು 2-3 ದಿನಗಳ ಕಾಲ ಬಾಡಿಗೆಗೆ ಪಡೆದು ಅಲ್ಲಿ ಈ ರೀತಿಯ ರೇವ್ ಪಾರ್ಟಿಗಳನ್ನು ಗುಟ್ಟಾಗಿ ನಡೆಸುತ್ತಾ, ಆ ಪಾರ್ಟಿಗಳಲ್ಲಿ ಯಥೇಚ್ಚವಾದ ಕುಡಿತ, ಮಾದಕದ್ರವ್ಯಗಳ ಸೇವನೆಯ ಜೊತೆ ಹೆಣ್ಣುಮಕ್ಕಳೊಂದಿಗೆ ಆಶ್ಲೀಲವಾದ ಕುಣಿತ ಮತ್ತು ಇತರೆ ಎಲ್ಲಾ ರೀತಿಯ ಅನೈತಿಕ ಚಟುವಟಿಕೆಗಳು ನಡೆಯುತ್ತಿದ್ದವು ಎಂದು ಧಾಳಿ ನಡೆಸಿದ ಪೋಲಿಸರು ತಿಳಿಸಿದ್ದಾರೆ. ಈ ರೀತಿಯ ಪಾರ್ಟಿಗಳಿಗೆ ಹೊರಗಿನಿಂದ ಹುಡುಗಿಯರನ್ನು ಕರೆತರಲಾಗುತ್ತಿತ್ತು. ಆರೋಪಿ ಮನೀಶ್ ಕೇವಲ ಜೈಪುರವಲ್ಲದೇ, ನೇಪಾಳದಲ್ಲೂ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಿರ ವಿಷಯ ಪ್ರಾಥಮಿಕ ವಿಚಾರಣೆಯ ವೇಳೆಯಲ್ಲಿ ತಿಳಿದು ಬಂದಿದೆ.
ಸರ್ಕಾರೀ ಅಧಿಕಾರಿಗಳು ಸಹಾ ಮನುಷ್ಯರೇ, ಅವರವರ ವಯಕ್ತಿಕ ವಿಚಾರಗಳನ್ನು ಸಾರ್ವಜನಿಕವಾಗಿ ಈ ರೀತಿಯಲ್ಲಿ ಪ್ರಶ್ನಿಸಬಾರದು ಎಂದು ಕೇಳುವವರೂ ಇದ್ದರೂ, ಸಮಾಜದಲ್ಲಿ ಪ್ರತಿಷ್ಥಿತ ಹುದ್ದೆಗಳಲ್ಲಿದ್ದು, ಸಮಾಜಕ್ಕೆ ತಿದ್ದಿ ಬುದ್ದಿ ಹೇಳ ಬೇಕಾದಂತಹ ಕಾಲೇಜು ಅಧ್ಯಾಪಕರು, ಪೋಲೀಸ್ ಇನ್ಸಪೆಕ್ಟರ್, ತಹಶೀಲ್ದಾರರುಗಲೇ ಈ ರೀತಿಯಾಗಿ ಅನೈತಿಕ ಚಟುವಟಿಕೆಗಳಲ್ಲಿ ಭಾಗಿಯಾಗಿ ಸಿಕ್ಕಿಕೊಂಡಾಗ, ಸೊಸೆಗೆ ಬುದ್ದಿ ಹೇಳಿ ಅತ್ತೆಯೇ ಪಕ್ಕದ ಮನೆಯವರೊಂದಿಗೆ ಓಡಿ ಹೋದಳಂತೇ ಎನ್ನುವ ಗಾದೆ ಮಾತು ನೆನಪಾಗುತ್ತಿದೆ. ಇನ್ನು ಈ ರೀತಿಯ ದುಬಾರಿ ಕಾಲದಲ್ಲಿ ನಿಯತ್ತಾಗಿ ದುಡಿದ ಸಂಬಳದಲ್ಲಿ ಈ ರೀತಿಯಾಗಿ ಮೋಜು ಮಸ್ತಿ ಮಾಡಲು ಖಂಡಿತವಾಗಿಯೂ ಸಾಧ್ಯವಿಲ್ಲದ ಕಾರಣ, ನಿಸ್ಸಂದೇಹವಾಗಿಯೂ ಇದು ಲಂಚದ ರೂಪದಲ್ಲಿ ಅಕ್ರಮವಾಗಿ ಗಳಿಸಿದ ಹಣವನ್ನು ಈ ರೀತಿಯಾಗಿ ಪೋಲು ಮಾಡುತ್ತಿರುವುದು ಕಂಡು ಬರುತ್ತಿದೆ.
ಈ ರೀತಿಯಾಗಿ ಬಂಧಿಸಿದವರನ್ನು ಒಂದೆರೆಡು ದಿನಗಳ ಕಾಲ ಬಂಧಿಸಿ ಸೆರೆಮನೆಯಲ್ಲಿಟ್ಟು ನಂತರ ಮುಚ್ಚಳಿಕೆಯನ್ನು ಬರೆಸಿಕೊಂಡು ಒಂದಷ್ಟು ದಂಡವನ್ನು ಕಟ್ಟಿಸಿಕೊಂಡು ಬಿಡುಗಡೆ ಮಾಡುವ ಕಾರಣ, ಯಾವುದೇ ನಾಚಿಕೆ, ಮಾನ, ಮರ್ಯಾದೆ ಇಲ್ಲದೇ ಈ ರೀತಿಯ ಕುಕೃತ್ಯಗಳು ಎಗ್ಗಿಲ್ಲದೇ ನಡೆಯುತ್ತಲ್ದಿದೆ. ಇನ್ನು ಸಮಾಜವು ಸಹಾ ಮೂರು ಬಿಟ್ಟವರು ಲೋಕಕ್ಕೇ ದೊಡ್ಡವರು ಎಂಬುವಂತೆ ಇಂತಹವರನ್ನೇ ತಲೆ ಮೇಲಿಟ್ಟುಕೊಂಡು ಮೆರೆಸುವ ಕಾರಣ, ಕಾಮಾತುರಾಣಾಂ ನ ಲಜ್ಜಾ ನ ಭಯಂ ಎನ್ನುವಂತೆ ನಿರ್ಭಿಡೆಯಿಂದ ಈ ರೀತಿಯ ಕುಕೃತ್ಯಗಳಲ್ಲಿ ಭಾಗಿಗಳಾಗುತ್ತಿದ್ದಾರೆ.
ಕೆಲ ವರ್ಷಗಳ ಹಿಂದೆ ಮೈಸೂರು ಮತ್ತು ಹುಣಸೂರಿನ ಮಾರ್ಗದ ಮಧ್ಯಲ್ಲಿರುವ ರೂಸ್ಟ್ ಎಂಬ ಹೋಟೆಲ್ ಒಂದರಲ್ಲಿ ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಾಧೀಷರುಗಳು ಸಹಾ ಕೆಲವು ಹೆಂಗಸರ ಜೊತೆ ಕಾಣಿಸಿಕೊಂಡು ಕುಡಿದ ಅಮಲಿನಲ್ಲಿ ಅದೇ ಹೆಂಗಸರ ವಿಷಯವಾಗಿ ಪರಸ್ಪರ ಜೋರಾಗಿ ಕಿತ್ತಾಡಿಕೊಂಡು ಪೋಲೀಸ್ ಕೇಸ್ ಸಹಾ ಆಗಿ ಅದರ ಕುರಿತಂತೆ ಪತ್ರಿಕೆಗಳಲ್ಲಿ ಪ್ರಕಟವಾದರೂ, ತಮ್ಮ ಅಧಿಕಾರವನ್ನು ಬಳಸಿಕೊಂಡು ತಮ್ಮ ಅಧಿಕಾರವನ್ನು ಬಳಸಿಕೊಂಡು ಅಂದು ಅಲ್ಲಿ ಅಂತಹ ಪ್ರಕರಣವೇ ನಡದೇ ಇಲ್ಲ ಎಂದು ಸಾಧಿಸಿ ಇಡೀ ಪ್ರಕರಣವನ್ನೇ ಮುಚ್ಚಿ ಹಾಕಿದ ಆ ನ್ಯಾಯಾಧೀಶರುಗಳು ಮರ್ಯಾದೆ ಇಲ್ಲದೇ ಯಾವುದೇ ಘಟನೆಯೇ ನಡದೇ ಇಲ್ಲವೇನೋ ಎನ್ನುವಂತೆ ಅದೇ ಹುದ್ದೆಯಲ್ಲೇ ಮುಂದುವರೆದು ನಿವೃತ್ತಿಯನ್ನು ಪಡೆದಾಗಿದೆ. ಅದರಲ್ಲಿ ಭಾಗಿಯಾಗಿದ್ದ ಒಬ್ಬ ನಿವೃತ್ತ ನ್ಯಾಯಾಧೀಶರಂತೂ ಇತ್ತೀಚಿಗೆ ತಾವು ಸತ್ಯ ಹರಿಶ್ಚಂದ್ರನ ವಂಶದವದ ಸತ್ಯಸಂಧರು ಎಂದು ಭಾಷಣ ಬಿಗಿಯುತ್ತಾ ಪತ್ರಿಕಾ ಹೇಳಿಕೆ ಕೊಡುತ್ತಿದ್ದದ್ದನ್ನು ನೋಡಿದಾಗ ಥೂ! ಇಂತಹ ನಾಚಿಕೆ ಮಾನ ಮರ್ಯಾದೆ ಇಲ್ಲದವರು ಅಂತಹ ಉನ್ನತ ಹುದ್ದೆಯಲ್ಲಿ ಮುಂದುವರೆಯಲು ಅನುವು ಮಾಡಿಕೊಟ್ಟ ನಮ್ಮ ಕಾನೂನುಗಳ ಲೋಪದೋಷಗಳ ಕುರಿತಾಗಿ ಅಸಹ್ಯ ಬಂದಿದ್ದಂತೂ ಸುಳ್ಳಲ್ಲ.
ಇಷ್ಟೆಲ್ಲಾ ನೋಡಿದ ನಂತರ ಕಟ್ಟ ಕಡೆಯದಾಗಿ ಕಾಡುತ್ತಿರುವ ಪ್ರಶ್ನೆ ಎಂದರೆ, ಸಮಾಜದಲ್ಲಿ ಗಣ್ಯವ್ಯಕ್ತಿಗಳೆಂದು ಖ್ಯಾತರಾದವರೇ ಈ ರೀತಿಯಾಗಿ ಅಕ್ರಮಗಳಲ್ಲಿ ಭಾಗಿಯಾದರೆ, ಅವರು ಎಂತಹ ತನಿಖೆ ನಡೆಸುತ್ತಾರೆ? ಎಂತಹ ಆಡಳಿತ ಹೇಳಿಕೊಡುತ್ತಾರೆ? ಎಂತಹ ಆಡಳಿತ ನಡೆಸುತ್ತಾರೆ? ಇವರು ಕೊಡುವ ತೀರ್ಪುಗಳು ಎಷ್ತು ನ್ಯಾಯ ಸಮ್ಮತವಾಗಿತ್ತದೆ?
ಏನಂತೀರೀ?
ನಿಮ್ಮವನೇ ಉಮಾಸುತ