23 ಆಗಸ್ಟ್ ವಿಶ್ವ ವಡಾ ಪಾವ್ ದಿನ ಎಂದು ನನ್ನ ಹಿತೈಷಿಗಳಾದ ಶ್ರಿಯುತ ಜಯದೇವ್ ಅವರು ಕಳುಹಿಸಿದಾಗ ಅರೇ, ಹೀಗೂ ಒಂದು ದಿನಾಚರಣೆ ಉಂಟೇ? ಎಂದು ಯೋಚಿಸಿ ಅದರ ಕುರಿತಾಗಿ ಹೆಚ್ಚಿನ ಮಾಹಿತಿಯನ್ನು ಕಲೆ ಹಾಕಿ ಬಿಸಿ ಬಿಸಿಯಾಗಿ ನಿಮ್ಮೊಂದಿಗೆ ಹಂಚಿಕೊಳ್ತಾ ಇದ್ದೀನಿ. ಈ ಚುಮು ಚುಮು ಮಳೆಯ ವಾತಾವರಣದಲ್ಲಿ ಈ ಬಿಸಿ ಬಿಸಿ ವಡಾಪಾವ್ ಸುದ್ದಿಯನ್ನು ಚಪ್ಪರಿಸಿ ನಿಮ್ಮ ಅಭಿಪ್ರಾಯವನ್ನು ತಿಳಿಸಿ.
ವಡಾ ಪಾವ್ ಎನ್ನುವುದು ಮೂಲತಃ ಮುಂಬೈ ಗಲ್ಲಿಗಲ್ಲಿಗಳಲ್ಲಿ ಅತ್ಯಂತ ಅಗ್ಗದ ಮತ್ತು ರುಚಿಕರವಾದ ತಿಂಡಿಯಾಗಿದ್ದು ನಂತರದ ದಿನಗಳಲ್ಲಿ ಭಾರತಾದ್ಯಂತ ಅದರ ರುಚಿ ಹರಡಿ ಈಗ ಅದು ಇಡೀ ವಿಶ್ವಾದ್ಯಂತ ಲಭಿಸುವಂತಾಗಿದೆ. ನಮ್ಮಲ್ಲಿ ಮಾಡುವ ಬೊಂಬಾಯಿ ಬೊಂಡಾ ಅಥವಾ ಅಲೂಬೊಂಡಾವನ್ನು ಅಲ್ಲಿಯವರಉ ವಡಾ ಎಂದು ಕರೆದರೆ, ಆಯತಾಕಾರದ ಬನ್ ಇಲ್ಲವೇ ಬ್ರೆಡ್ಡನ್ನು ಪಾವ್ ಎಂದು ಅದರ ಮಧ್ಯದಲ್ಲಿ ಬಿಸಿ ಬಿಸಿಯಾದ ವಡಾವನ್ನು ಇಟ್ಟು ತಿನ್ನುವ ಮಜಾ ಹೇಳುವುದಕ್ಕಿಂತಲೂ ಅನುಭವಿಸಿದರೇ ಆನಂದ ಎನಿಸುತ್ತದೆ. ಸರಳವಾಗಿ ಅನಾಯಾಸವಾಗಿ ರಸ್ತೆ ಬದಿಯಲ್ಲಿ ಸಣ್ಣ ಪೇಪರ್ ಇಲ್ಲವೇ ಪೇಪರ್ ಪ್ಲೇಟಿನಲ್ಲಿ ಮಾರಲಾಗುವ ಈ ವಡಾಪಾವ್ ಎಲ್ಲೆಂದರಲ್ಲಿ ತಿಂದು ಅದೇ ಪೇಪರಿನಲ್ಲಿ ಕೈ ಒರೆಸಿಕೊಂಡು ಜೊತೆಗೆ ಒಂದು ಖಡಕ್ ಚಾಯ್ ಕುಡಿದವೆಂದರೆ ಹೊಟ್ಟೆ ತುಂಬುವ ಕಾರಣ ವಡಾ ಪಾವ್ ಅತ್ಯಂತ ಜನಪ್ರಿಯವಾದ ಖ್ಯಾದ್ಯವಾಗಿ ಮುಂಬೈ ನಗರದ ಪ್ರತಿ ಬೀದಿ ಮತ್ತು ಗಲ್ಲಿಗಳಲ್ಲಿ ಮತ್ತು ಲೋಕಲ್ ಟ್ರೈನಿನ ಪ್ರತಿಯೊಂದು ನಿಲ್ದಾಣಗಳಲ್ಲಿಯೂ ಕಂಡುಬರುವ ಮುಂಬೈಕರ್‌ನ ದೈನಂದಿನ ಜೀವನದ ಅನಿವಾರ್ಯ ಭಾಗವಾಗಿದೆ ಎಂದರೂ ತಪ್ಪಾಗದು.
ಇತ್ತೀಚಿನ ದಿನಗಳಲ್ಲಿ ಈ ವಡಾ ಪಾವ್ ವಿಶ್ವಾದ್ಯಂತ ಬಾಂಬೆ ಬರ್ಗರ್ ಎಂದೇ ಪ್ರಸಿದ್ಧವಾಗಿದ್ದು, ಬಲ್ಲವರ ಪ್ರಕಾರ, ಮದ್ದೂರಿನ ರೈಲ್ವೇ ನಿಲ್ದಾಣದ ಹೋಟೆಲ್ಲಿನಲ್ಲಿ ಮದ್ದೂರ್ ವಡೆ ಕಂಡು ಹಿಡಿದಂತೆ, ಈ ವಡಾ ಪಾವ್ 1966 ರಲ್ಲಿ ದಾದರ್ ನಿಲ್ದಾಣದ ಹೊರೆಗೆ ತಳ್ಳುವ ಗಾಡಿಯಲ್ಲಿ ಆಹಾರವನ್ನು ಮಾರುತ್ತಿದ್ದ ಶ್ರೀ ಅಶೋಕ್ ವೈದ್ಯ ಅವರು ಕಂಡು ಹಿಡಿದರು ಎಂದುನಂಬಲಾಗಿದೆ. ಆಗೆಲ್ಲಾ ಆ ತಳ್ಳುಗಾಡಿಗಳಲ್ಲಿ ಚಪಾತಿಯ ಜೊತೆಗೆ ಅಲೂಗೆಡ್ಡೆಯ ಬಗೆ ಬಗೆಯ ಪಲ್ಯಗಳನ್ನು ಮಾರುತ್ತಿದ್ದವರಿಗೆ, ಇದ್ದಕ್ಕಿದ್ದಂತೆಯೇ ಅದೇ ಅಲೂಗೆಡ್ಡೆ ಪಲ್ಯವನ್ನು ಕಡಲೇಹಿಟ್ಟಿನಲ್ಲಿ ಅದ್ದಿ ಬೋಂಡದ ರೂಪದಲ್ಲಿ ಹದವಾಗಿ ಎಣ್ಣೆಯಲ್ಲಿ ಕರಿದು, ಅದನ್ನು ಪಾವ್ ಮಧ್ಯೆ ಇಟ್ಟು ಕೊಟ್ಟುವ ರೀತಿಯನ್ನು ಆರಂಭಿಸಿದಾಗ, ಅಲ್ಲಿನ ಜನರು ಸುಲಭವಾಗಿ ಈ ತಿಂಡಿಯನ್ನು ಒಪ್ಪಿಕೊಂಡ ಪರಿಣಾವಾಗಿ ವಡಾಪಾಪ್ ಕೆಲವೇ ಕೆಲವು ದಿನಗಳಲ್ಲಿ ಪ್ರಸಿದ್ಧವಾಯಿತು. ಇದೇ ಪ್ರಖ್ಯಾತಿಯನ್ನೇ ಬಳಸಿಕೊಂಡ ಸುಧಾಕರ್ ಮ್ಹಾತ್ರೆ ಎನ್ನುವರು ದಾದರ್‌ನಲ್ಲಿ ವಡಾಪಾವ್ ಮಾರಾಟ ಮಾಡಲು ಪ್ರಾರಂಭಿಸಿದರು ಎಂದು ಹಳೆಯ ಮುಂಬೈವಾಸಿಗಳು ನೆನಸಿಕೊಳ್ಳುತ್ತಾರೆ.
ಆರಂಭದಲ್ಲಿ ಕೇವಲ 10 ಪೈಸೆಗೆ ಮಾರಾಟವಾಗುತ್ತಿದ್ದ ವಡಾಪಾವ್ ಇಂದು ರಸ್ತೆಯ ಬದಿಯಲ್ಲಿ 10-25ರೂಗಳ ಆಸುಪಾಸಿನ ದರದಲ್ಲಿ ಲಭ್ಯವಿದೆ. ಆ ದಿನಗಳಲ್ಲಿ ಲೋಕಲ್ ರೈಲುಗಳು ಮಧ್ಯಾಹ್ನ 2 ಗಂಟೆ ಸುಮಾರಿಗೆ ಆರಂಭವಾಗುತ್ತಿದ್ದ ರೈಲು ರಾತ್ರಿ 8-30ರವರೆಗೆ ಓಡುತ್ತಿದ್ದಂತಹ ಸಮಯದಲ್ಲಿ ಸಂಜೆಯ ಸಮಯದಲ್ಲಿ ಮಾತ್ರವೇ ಈ ವಡಾಪಾವ್ ಮಾರಾಟ ಮಾಡುತ್ತಿದ್ದರೆ, ನಂತರ ದಿನಗಳಲ್ಲಿ ರೈಲುಗಲ ಸಂಖ್ಯೆ ಹೆಚ್ಚಾದಂತೆಲ್ಲಾ, ಎಲ್ಲಾ ಲೋಕಲ್ ರೈಲು ನಿಲ್ದಾಣಗಳಲ್ಲಿಯೂ ಬೆಳಿಗ್ಗೆ ತಿಂಡಿಯಿಂದ ಹಿಡಿದು ರಾತ್ರಿ ಉಟದ ಸಮಯದ ವರೆಗೂ ಲಭ್ಕ್ಯವಾಗತೊಡಗಿದವು. ದಾದರ್ ಸುತ್ತಮುತ್ತಲಿನ ಪ್ರದೇಶದ ಗಿರಣಿ ಕಾರ್ಮಿಕರಿಗೆ ತಿನ್ನಲು ತಟ್ಟೆ, ಚಮಚವಿಲ್ಲದೇ, ಅತ್ಯಂತ ಕಡಿಮೆ ಬೆಲೆಯಲ್ಲಿ ಬಿಸಿ ಬಿಸಿಯಾದ ಮತ್ತು ರುಚಿಯಾದ ಈ ಪದಾರ್ಥ ದೊರೆಕಿದ ಕಾರಣ, ವಡಾಪಾವ್ ಮುಂಬೈನ ಗಿರಣಿ ಕಾರ್ಮಿಕರ ಸಂಸ್ಕೃತಿಯಲ್ಲಿ ಬೇಗನೆ ಬೇರೂರಿತಲ್ಲದೇ, ಈಗ ಅದು ಮುಂಬೈನ ಕಾರ್ಮಿಕ ಸಂಸ್ಕೃತಿಯ ಗುರುತಾಗಿ ಹೋಗಿದೆ. ಇಂದು ಮುಂಬೈ ಒಂದರಲ್ಲೇ ದಿನಕ್ಕೆ ಸುಮಾರು 18 ರಿಂದ 20 ಲಕ್ಷ ವಡಾ ಪಾವ್‌ಗಳನ್ನು ಮಾರಾಟವಾಗುತ್ತದೆ ಎಂದು ಅಂದಾಜಿಸಲಾಗಿದೆ ಎಂದರೆ ವಡಾಪಾವ್ ರುಚಿಗೆ ಹೇಗೆ ಮುಂಬೈ ನಗರಿಗರು ಮಾರು ಹೋಗಿದ್ದಾರೆ ಎಂಬುದು ಅರ್ಥವಾಗುತ್ತದೆ. ಒಂದು ರೀತಿಯಲ್ಲಿ ವಡಾಪಾವ್ ಮುಂಬೈವಾಸಿಗಳ ಜೀವನದ ಅವಿಭಾಜ್ಯ ಅಂಗವಾಗಿ ಹೋಗಿದೆ ಎಂದರೂ ತಪ್ಪಾಗದು.
ಇನ್ನು ಈ ವಡಾಪಾವ್ ಗಾಡಿಗಳು ಹೆಚ್ಚಾಗಲು 1970 ರಿಂದ 1980 ರ ದಶಕದಲ್ಲಿ, ಮುಂಬೈನಲ್ಲಿದ ಹೆಚ್ಚಿನ ಬಟ್ಟೆಯ ಗಿರಣಿಗಳು ಮುಚ್ಚಲಾರಂಭಿಸಿದಾಗ, ಅಲ್ಲಿನ ಅನೇಕ ಕಾರ್ಮಿಕರು ಜೀವನೋಪಾಯಕ್ಕಾಗಿ ಸುಲಭವಾಗಿ ಈ ವಡಾಪಾವ್ ಗಾಡಿಗಳನ್ನೇ ಮುಂಬೈ ವಿವಿಧ
ಗಲ್ಲಿಗಲ್ಲಿಗಳಲ್ಲಿ ತೆರೆದು ಎಲ್ಲರಿಗೂ ಅದರ ರುಚಿಯನ್ನು ಉಣಬಡಿಸಿತೊಡಗಿದರು. ನಂತರ ದಿನಗಳಲ್ಲಿ ಅಂತಹವರಿಗೆ ಶಿವಸೇನೆಯ ಬೆಂಬಲವೂ ದೊರೆತು ಇಂದೊಂದು ರೀತಿ ರಾಜಕೀಯ ಆಂದೋಳನವಾಗಿ ಪರಿಣಮಿಸಿತು.
ಅಂದು ಮತ್ತು ಇಂದಿಗೂ ಮುಂಬೈನಗರದ ಬಹುತೇಕ ಹೋಟೆಲ್ಲುಗಳಲ್ಲಿ ನಮ್ಮ ದಕ್ಷಿಣ ಕನ್ನಡದವರದ್ದೇ ಹೆಚ್ಚಿನ ಪ್ರಾಬಲ್ಯ. ಹಾಗಾಗಿ ದಕ್ಷಿಣ ಭಾರತೀಯರ ಪ್ರಾಭ್ಯಲವನ್ನು ಒಡೆಯುವ ಸಲುವಾಗಿ ಶಿವಸೇನೆ ಅಮ್ಚೀ ಮುಂಬೈ ಎಂಬ ಆಂದೋಲನವನ್ನು ಆರಂಭಿಸಿ ಮುಂಬೈನ ದಾದರ್, ಮಾತುಂಬಾ ಮುಂತಾದ ಪ್ರದೇಶಗಳಲ್ಲಿ ಉಡುಪಿ ಹೋಟೆಲ್‌ಗಳ ವಿರುದ್ಧ ಅಮ್ಚೀ ವಡಾಪಾವ್ ಎಂದು ಪ್ರಚಾರ ಮಾಡಲು ಆರಂಭಿಸಿದ್ದೇ ತಡಾ, ಸಾವಿರಾರು ಮರಾಠಿ ಹುಡುಗರು ಶಿವಸೇನೆಯ ಈ ಅಭೂತಪೂರ್ವ ಬೆಂಬಲ ಪಡೆದು ನಗರಾದ್ಯಂತ ಸಾವಿರಾರು ವಡಾ ಪಾವ್ ಗಾಡಿಗಳೊಂದಿಗೆ ಸಣ್ಣ ಉದ್ಯಮವನ್ನು ಪ್ರಾರಂಭಿಸಿ ತಮ್ಮ ಬದುಕನ್ನು ಕಟ್ಟಿಕೊಳ್ಳಲಾರಂಭಿಸಿದರು. ಇದೇ ಕಾರಣಕ್ಕೆ ಇದೇ ವಡಾ ಪಾವ್ ಶಿವವಡಾ ಆಗಿ ಮಹಾರಾಷ್ಟ್ರದ ಅನೇಕ ಕಚೇರಿಗಳು ಮತ್ತು ಶಾಲೆಗಳ ಕ್ಯಾಂಟೀನ್‌ಗಳಲ್ಲಿ ಶಾಶ್ವತ ಸ್ಥಾನವನ್ನು ಪಡೆದುಕೊಂಡಿದೆ.
ಆರಂಭದಲ್ಲಿ ಎಲ್ಲಾಕಡೆಯಲ್ಲೂ ಒಂದೇ ರುಚಿಯಿದ್ದ ವಡಾಪಾಪ್ ಸಮಯ ಕಳೆದಂತೆಲ್ಲಾ ಅವರವಲ್ಲೇ ಸ್ಪರ್ಧೆ ಹೆಚ್ಚಾದ ಪರಿಣಾಮ ಅದೇ ವಡಾಪಾಪ್ ಗಳು ರುಚಿಯಲ್ಲಿ ಅನೇಕ ಮಾರ್ಪಾಟು ಪಡೆಯಲಾರಂಭಿಸಿತು. ಕೆಲವರು ಅಲೂಗೆಡ್ಡೆ ಪಲ್ಯಕ್ಕೆ ಶುಂಠಿ ಬೆರೆಸಿ ಅರೋಗ್ಯ ಮತ್ತು ರುಚಿಕರ ಎಂದು ಹೇಳಿದರೆ, ಇನ್ನೂ ಕೆಲವರು ಅದರ ಜೊತೆಗೆ ಉಪ್ಪು ಬೆರೆಸಿ ಎಣ್ಣೆಯಲ್ಲಿ ಕರಿದ ಹಸೀ ಮೆಣಸಿನಕಾಯಿ ಬೆರೆಸಿ ಅದನ್ನು ವಡಾಪಾವ್ ನೊಂದಿಗೆ ಕೊಟ್ಟು ಅದರ ರುಚಿಯನ್ನು ಮತ್ತಷ್ಟು ಹೆಚ್ಚಿಸಿದರು. ಇನ್ನೂ ಕೆಲವರು ನಮ್ಮ ಉತ್ತರ ಕನ್ನಡದ ಬೆಳ್ಳುಳ್ಳಿ ಚಟ್ಣಿಪುಡಿ ಮತ್ತು ಸಣ್ಣಗೆ ಕತ್ತರಿಸಿದ ಈರುಳ್ಳಿಯ ಜೊತೆಗೆ ಮತಷ್ಟು ರುಚಿಯನ್ನು ಹೆಚ್ಚಿಸಲಾರಂಭಿಸಿದರು. ಹೀಗೆ ಪ್ರದೇಶದಿಂದ ಪ್ರದೇಶಕ್ಕೆ ವಡಾಪಾವ್ ರುಚಿ ಬದಲಾದರೂ ಆದರ ಮೂಲ ಪದಾರ್ಥಗಳು ಮತ್ತು ಆಕಾರ ಇಂದಿಗೂ ಅದೇ ರೀತಿಯಲ್ಲಿ ಇರುವುದು ಗಮನಾರ್ಹವಾಗಿದೆ. ಥಾಣೆಯಲ್ಲಿರುವ ಕುಂಜ್ವಿಹಾರ್ ಎಂಬುವರು, ಜನಾಕರ್ಷಣೆಗಾಗಿ ಎರಡು ಪಾವ್ ಗಾತ್ರದಲ್ಲಿ ದೊಡ್ಡ ಪಾವ್ ತಯಾರಿಸಿ ಅದರಲ್ಲಿ ವಡಾ ಇಟ್ಟು ಜಂಬೂ ವಡಾಪಾವ್ ಎಂದು ಬ್ರಾಂಡ್ ಮಾಡಿದರು.
1990ರ ದಶಕದ ಉತ್ತರಾರ್ಧದಲ್ಲಿ ಜಾಗತೀಕರಣದ ಭಾಗವಾಗಿ ಆಹಾರ ಕ್ಷೇತ್ರದಲ್ಲಿ KFC, Mc-Donalds ನಂತಹ ವಿದೇಶಿ ಬ್ರ್ಯಾಂಡ್‌ಗಳೂ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸುವಾಗ, ಭಾರತದಲ್ಲಿ ಅದಾಗಲೇ ಮನೆಮಾತಾಗಿದ್ದ ವಡಾಪಾವ್ ಗೆ ಸಡ್ಡು ಹೊಡೆಯುವ ಸಲುವಾಗಿ Mc-D ಬರ್ಗರ್ ರೂಪದಲ್ಲಿ ಮ್ಯಾಕ್ ಆಲೂ ಟಿಕ್ಕಿ ಯನ್ನು ಆರಂಭಿಸಿತು. ನಂತರ ಆಲೂಗೆಡ್ಡೆ ಪ್ಯಾಟೀಸ್ ಎಂಬ ಹೆಸರಿನಲ್ಲಿ ವಡಾಪಾವ್‌ಗಳ ಮೂಲಭೂತ ಅಂಶಗಳನ್ನೇ ಇಟ್ಟುಕೊಂಡು ಮಾರಾಟ ಮಾಡಲಾರಂಬಿಸಿದೆ.
ಅದೇ ರೀತಿ ಆಗಸ್ಟ್ 23, 2001 ರಂದು, ಮುಂಬೈನ ಧೀರಜ್ ಗುಪ್ತಾ ಎಂಬ ಯುವಕ ಜಂಬೋಕಿಂಗ್ ಎಂಬ ಹೆಸರಿನೊಂದಿಗೆ ವಡಾ ಪಾವ್‌ಗೆ ವಿದೇಶಿ ಲುಕ್ ನೀಡುವ ಮೂಲಕ, ಜಂಬೋ ವಡಾಪಾವ್ ಆಹಾರ ಸರಪಳಿಯನ್ನು ಪ್ರಾರಂಭಿಸಿದ್ದಲ್ಲದೇ, ವಡಾಪಾವ್ ಅನ್ನು ಭಾರತೀಯ ಬರ್ಗರ್ ಎಂದು ಮರುಬ್ರಾಂಡ್ ಮಾಡಿದ್ದಲ್ಲದೇ ಆಗಸ್ಟ್ 23 ರನ್ನು ವಿಶ್ವ ವಡಾ ಪಾವ್ ದಿನವನ್ನು ಆಚರಿಸಲು ಆರಂಭಿಸಿದ ನಂತರ ಅದನ್ನೇ ಇತರರೂ ಅನುಸರಿಸುತ್ತಿದ್ದಾರೆ.
ಅದೇ ರೀತಿಯಲ್ಲಿ ಥಾನೆಯ ಗಜಾನನ ವಡಾ ಪಾವ್ ಅವರು ವಡಾಪಾವ್ ನೊಂದಿಗೆ ಹಳದಿ ಬೇಸನ್ ಚಟ್ನಿಯನ್ನು ಕೊಡುವ ಮೂಲಕ ಮತ್ತೊಂದು ರುಚಿಯನ್ನು ಪ್ರಯತ್ನಿಸಿ ಅದನ್ನು ಪ್ರಖ್ಯಾತ ಗೊಳಿಸಿದರು. ಇನ್ನು ಕಲ್ಯಾಣ್‌ನಲ್ಲಿ ವಝೆ ಕುಟುಂಬದವರು ಪ್ರಾರಂಭಿಸಿದ ವಡಾ ಪಾವ್ ಅಂಗಡಿಯಲ್ಲಿ ಗ್ರಾಹಕರಿಗೆ ವಡಾ ಪಾವ್ ಅನ್ನು ತಮ್ಮ ಸಣ್ಣ ಕಿಟಕಿಯ ಮೂಲಕ ಮಾರಾಟಮಾಡುತ್ತಿದ್ದರಿಂದ ಅದು ವಡಾ ಪಾವ್ ವಿಂಡೋ ಎಂದೇ ಜನಪ್ರಿಯತೆ ಪಡೆಯಿತು.
ಗಲೀಜು ರಸ್ತೆಯಲ್ಲಿ ಶುಚಿತ್ವಕ್ಕೆ ಮಹತ್ವವೇ ನೀಡದಿದ್ದ ಸಮಯದಲ್ಲಿ ಸ್ವಚ್ಛತೆಯ ಹೆಸರಿನಲ್ಲಿ ಗೋಲಿ ಎಂಬ ಬ್ರ್ಯಾಂಡ್ ಮೂಲಕ ಆಕರ್ಷಣಿಯವಾದ ಸಣ್ಣ ಸಣ್ಣ ಅಂಗಡಿಗಲ್ಲಿ ವಡಾ ಪಾವ್ ಗಳಿಗೆ ಮತ್ತೊಂದು ಆಯಾಮ ನೀಡಿತು. ಸಾಂಪ್ರದಾಯಕ ಆಲೂವಡಾದ ಜೊತೆ ಪನ್ನೀರ್ ವಡಾ ಪಾವ್, ನಾಚೋ ವಡಾ ಪಾವ್, ಶೆಜ್ವಾನ್ ವಡಾ ಪಾವ್, ಮಸಾಲೆ ವಡಾ ಪಾವ್, ಸ್ವೀಟ್ ಕಾರ್ನ್ ವಡಾ ಪಾವ್, ಮೇಯನೇಸ್ ವಡಾ ಪಾವ್ ಮುಂತಾದ ಅದ್ಭುತ ಸಂಯೋಜನೆಗಳ ಮೂಲಕ ಗ್ರಾಹಕರ ನಾಲಿಗೆಗೆ ಕಚಗುಳಿ ಇಡುವ ಮೂಲಕ ದೇಶಾದ್ಯಂತ ಸಾವಿರಾರು ಶಾಖೆಗಳನ್ನು ಹೊಂದಿದೆ. ಆರಂಭದಲ್ಲಿ ಕೇವಲ ಒಂದೇ ಗಾತ್ರದಲ್ಲಿ ಲಭ್ಯವಿದ್ದ ವಡಾ ಪಾವ್ ಈಗ ಮಿನಿ, ಸಾಮಾನ್ಯ ಮತ್ತು ಜಂಬೋ ಎಂಬ ಮೂರು ವಿಧಗಳಲ್ಲಿ ಸಾದಾ ಬ್ರೆಡ್ ಮತ್ತು ಬ್ರೌನ್ ಬ್ರೆಡ್ ರೂಪದಲ್ಲಿಯೂ ಲಭ್ಯವಿದೆ.
ಮುಂಬೈನ ರಿಜ್ವಿ ಕಾಲೇಜಿನ ಮಾಜಿ ವಿದ್ಯಾರ್ಥಿಗಳಾದ ಸುಜಯ್ ಸೋಹ್ನಿ (ಥಾಣೆ) ಮತ್ತು ಸುಬೋಧ್ ಜೋಶಿ (ವಡಾಲ) ಅವರು ಶ್ರೀ ಕೃಷ್ಣ ವಡಾಪಾವ್ ಎಂಬ ಹೆಸರಿನಲ್ಲಿ ಆಗಸ್ಟ್ 15, 2010 ಲಂಡನ್ನಿನಲ್ಲಿ ಆರಂಭಿಸಿದ ಹೋಟೆಲ್ ಉದ್ಯಮವು ಈಗ ವಾರ್ಷಿಕ ನಾಲ್ಕು ಕೋಟಿಗೂ ಅಧಿಕ ರೂಪಾಯಿಗಳ ಆದಾಯ ಗಳಿಸುತ್ತಿದ್ದಾರೆ. ಅದೇ ರೀತಿಯಲ್ಲಿ ಅಮೆರಿಕದ ರೋಡ್ ಐಲ್ಯಾಂಡ್‌ನಲ್ಲಿರುವ ಬ್ರೌನ್ ವಿಶ್ವವಿದ್ಯಾಲಯದಲ್ಲಿ 30 ವರ್ಷದ ಹ್ಯಾರಿಸ್ ಸೊಲೊಮನ್ ಎಂಬ ವಿದ್ಯಾರ್ಥಿ ಈ ಮುಂಬೈ ವಡಾಪಾವ್ ಕುರಿತಾಗಿ ಪಿಎಚ್‌ಡಿ ವ್ಯಾಸಂಗ ಮಾಡಿ ಡಾಕ್ಟರೇಟ್ ಪಡೆದಿರುವುದು ಹೆಗ್ಗಳಿಕೆಯಾಗಿದೆ.
ಹೀಗೆ ಆರಂಭದಲ್ಲಿ ಮುಂಬೈ ದಾದರಿನ ರಸ್ತೆ ಬದಿಯಲ್ಲಿ ಆರಂಭವಾದ ಅಲೂಗೆಡ್ಡೆಯ ವಡಾ ಪಾವ್ ಇಂದು ವಿವಿಧ ರೂಪ ಮತ್ತು ರುಚಿಗಳಲ್ಲಿ ದೇಶ ವಿದೇಶಗಳ ಗಲ್ಲಿಯಿಂದ ಹಿಡಿದು. ಫೈವ್ ಸ್ಟಾರ್ ಹೋಟೆಲ್‌ಗಳಲ್ಲಿ ಲಭ್ಯವಾಗುವ ಮೂಲಕ ಮುಂಬೈ ನಗರದ ಖ್ಯಾತಿಯನ್ನು ಹೆಚ್ಚಿಸಿದೆ ಎಂದರು ತಪ್ಪಾಗದು.
ವಡಾಪಾವ್ ಬಗ್ಗೆ ಇಷ್ಟೆಲ್ಲಾ ಮಾಹಿತಿ ತಿಳಿದ ನಂತರ ಇನ್ನೇಕೆ ತಡಾ, ನಿಮ್ಮ ಮನೆಗಳ ಹತ್ತಿರ ಇರುವ ವಡಾಪಾವ್ ಅಂಗಡಿಗಳಿಗೆ ಈ ಕೂಡಲೇ ಭೇಟಿ ನೀಡಿ ರುಚಿ ರುಚಿಯಾದ ವಡಾಪಾವ್ ಸವಿದು ಅದರ ಸವಿಯನ್ನು ನಮ್ಮೊಂದಿಗೆ ಹಂಚಿಕೊಳ್ತೀರೀ ಅಲ್ವೇ?
ಏನಂತೀರೀ?
ನಿಮ್ಮವನೇ ಉಮಾಸುತ