ಭಾರತ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕ್ರಾಂತಿಕಾರಿಗಳನ್ನು ನೆನಪಿಸಿಕೊಂಡಾಗಲೆಲ್ಲಾ ಥಟ್ ಅಂತ ನೆನಪಾಗೋದೇ ಚಂದ್ರಶೇಖರ್ ಆಚಾದ್ ಮತ್ತು ಭಗತ್ ಸಿಂಗ್. ದೇಶಕ್ಕಾಗಿ ತಮ್ಮೆಲ್ಲಾ ತಾರುಣ್ಯದ ಚಿಂತನೆಯನ್ನೆಲ್ಲಾ ಮರೆತು ಭಗತ್ ಸಿಂಗ್ ಅವರೊಂದಿಗೆ ಪ್ರಾಣಾರ್ಪಣ ಮಾಡಿವರೆಏ, ಸುಖದೇವ್ ಮತ್ತು ಶಿವರಾಮ ಹರಿ ರಾಜಗುರು. ದೇಶಕ್ಕಾಗಿ ನೇಣುಗಂಬ ಏರುವಾಗಲೂ ಪರಸ್ಪರ ನಾಮುಂದು, ತಾಮುಂದು ಎಂದು ಒಬ್ಬರಿಗೊಬ್ಬರು ಪೈಪೋಟಿಯಿಂದ ನಗುನಗುತ್ತಲೇ ದೇಶಕ್ಕಾಗಿ ಪ್ರಾಣವನ್ನೇ ತ್ಯಾಗ ಮಾಡಿದ ವೀರ ಪುರುಷರು.
ಶಿವರಾಮ ಹರಿ ರಾಜಗುರು ಅವರು 24 ಆಗಸ್ಟ್ 1908 ರಂದು ಮರಾಠಿ ದೇಶಸ್ಥ ಬ್ರಾಹ್ಮಣ ಕುಟುಂಬದ ಪಾರ್ವತಿ ದೇವಿ ಮತ್ತು ಹರಿನಾರಾಯಣ ರಾಜಗುರು ದಂಪತಿಗಳಿಗೆ ಪುಣೆಯ ಬಳಿ ಭೀಮಾ ನದಿಯ ತಡದಲ್ಲಿರುವ ಖೇಡ್ ಎಂಬ ಗ್ರಾಮದಲ್ಲಿ ಜನಿಸಿದರು. (ಕೆಲ ವರ್ಷಗಳ ಹಿಂದೆ ಈ ಖೇಡ್ ಗ್ರಾಮವನ್ನು ರಾಜಗರು ಗ್ರಾಮ ಎಂದು ಬದಲಿಸಲಾಗಿದೆ) ಅವರಿಗೆ ಕೇವಲ ಆರು ವರ್ಷವಾಗಿದ್ದಾಗಲೇ ಅವರ ತಂದೆ ನಿಧನರಾದ ಕಾರಣ ಇಡೀ ಕುಟುಂಬದ ಜವಾಬ್ದಾರಿ ಅವರ ಅಣ್ಣ ದಿನಕರ್ ಅವರ ಮೇಲೆ ಬಿದ್ದಿತ್ತು. ರಾಜಗುರು ಅವರು ತಮ್ಮ ಹುಟ್ಟೂರಿನಲ್ಲೇ ಪ್ರಾಥಮಿಕ ಶಿಕ್ಷಣವನ್ನು ಮುಗಿಸಿದ ನಂತರ ಉನ್ನತ ಶಿಕ್ಷಣಕ್ಕಾಗಿ ಪುಣೆಯ ನ್ಯೂ ಇಂಗ್ಲಿಷ್ ಹೈಸ್ಕೂಲಿಗೆ ಸೇರಿಕೊಂಡಾಗ ಘಟಪ್ರಭಾದಲ್ಲಿ ಡಾ. ಎನ್.ಎಸ್.ಹರ್ಡಿಕರ್ ಅವರು ನಡೆಸಿದ ಸೇವಾದಳದ ಶಿಬಿರ ಅವರ ಜೀವನವನ್ನೇ ಬದಲಾಯಿಸುತ್ತದೆ.
ದೇಶಕ್ಕಾಗಿ ತಮ್ಮನ್ನೇ ತಾವು ತೊಡಗಿಸಿಕೊಳ್ಳಬೇಕೆಂಬ ಉತ್ಕಟ ಬಯಕೆಯು ಅವರಿಗೆ ಆ ವಯಸ್ಸಿನಲ್ಲೇ ಮೂಡಿ ಭಾರತೀಯ ಸಂಸ್ಕೃತಿಯವನ್ನು ಆಳವಾಗಿ ಅಭ್ಯಸಿಸಿದ ತಮ್ಮ ಜೀವನವನ್ನು ದೇಶಸೇವೆಗೆ ಮೀಸಲಿಡಲು ಕಂಕಣಬದ್ಧರಾಗುತ್ತಾರೆ. ಅಷ್ಟೊಂದು ಸುಸಂಸ್ಕೃತ ನಡವಳಿಕೆ, ವಿದ್ವತ್ಪೂರ್ಣ ಅಧ್ಯಯನವನ್ನು ರೂಢಿಸಿಕೊಂಡಿದ್ದರೂ ಅಹಿಂಸಾತ್ಮಕ ಹೊರಾಟಗಳಿಂದ ಯಾವುದೇ ಪ್ರಯೋಜನ ಇಲ್ಲವೆಂದು ತಿಳಿದು ಬಂದೂಕು ಹಿಡಿದು ಕ್ರಾಂತಿಕಾರಿಗಳಾಗಿ ಸ್ವಾತ್ರಂತ್ರ್ಯ ಹೋರಾಟಕ್ಕೆ ಧುಮುಕಿದಾಗಲೇ ಅವರಿಗೆ ಹಿಂದೂಸ್ತಾನ್ ಸೋಷಿಯಲಿಸ್ಟ್ ರಿಪಬ್ಲಿಕನ್ ಅಸೋಸಿಯೇಷನ್ (HSRA) ನ ಸಕ್ರಿಯ ಸದಸ್ಯರಾಗಿದ್ದ ಭಗತ್ ಸಿಂಗ್, ಸುಖದೇವ್ ಮುಂತಾದವರು ಪರಿಚಯವಾಗುತ್ತಾರೆ. ಅ ಕಾಲದಲ್ಲಿ ಸುಖದೇವ್ ಅವರಷ್ಟು ಕರಾರುವಾಕ್ಕಾಗಿ ಬಂದೂಕಿನ ಗುರಿಯಿಡುವವರು ಯಾರೂ ಇಲ್ಲಾ ಎಂದೇ ಪ್ರಖ್ಯಾತರಾಗಿರುತ್ತಾರೆ. ಸ್ವಾತ್ರಂತ್ರ್ಯ ಹೋರಾಟದ ಅಂದಿನ ಪ್ರಮುಖರಾಗಿದ್ದ ಲಾಲ್, ಬಾಲ್, ಪಾಲ್ ತ್ರಿಮೂರ್ತಿಗಳ ಪೈಕಿ ಲಾಲಾ ಲಜಪತರಾಯರು ಬ್ರಿಟಿಷ್ ಪೋಲೀಸ್ ಅಧಿಕಾರಿಗಳ ದೌರ್ಜನ್ಯದಿಂದಾಗಿ ನಿಧನರಾದಾಗ, ಅದರ ವಿರುದ್ಧ ಸೇಡನ್ನು ತೀರಿಸಲು ಈ ತ್ರಿಮೂರ್ತಿಗಳು ಸಿದ್ಧರಾಗಿ ಜೆ. ಪಿ. ಸಾಂಡರ್ಸ್ ಎಂಬ ಬ್ರಿಟಿಷ್ ಅಧಿಕಾರಿಯನ್ನು ಗುಂಡ್ಡಿಕ್ಕಿ ಕೊಂದ ಪರಿಣಾಮ, ಬ್ರಿಟೀಷರು ಅ ಮೂವರನ್ನೂ ಬಂಧಿಸಿ ಕಾಟಾಚಾರದ ತನಿಖೆಯನ್ನು ನಡೆಸಿ ಆ ಮೂವರಿಗೂ ಗಲ್ಲು ಶಿಕ್ಷೆಯನ್ನು ವಿಧಿಸುತ್ತದೆ.
ಕೇವಲ 23-25 ವಯಸ್ಸಿನ ಬಿಸಿರಕ್ತದ ತರುಣರಿಗೆ ಗಲ್ಲು ಶಿಕ್ಷೆ ಅತ್ಯಂತ ಕಠಿಣ ಎಂದೇ ಅಂದಿನ ಎಲ್ಲಾ ಸ್ವಾತ್ರಂತ್ರ್ಯ ಹೋರಾಟಗಾರರು ತಿಳಿದು ಅವರನ್ನು ಬಿಡುಗಡೆ ಮಾಡಿಸಲು ಇಲ್ಲವೇ ಶಿಕ್ಷೆಯನ್ನು ತಗ್ಗಿಸುವಂತೆ ಪತ್ರವನ್ನು ಬರೆಯಲು ಮಹಾತ್ಮಾ ಗಾಂಧಿಯವರನ್ನು ಕೋರಿಕೊಂಡಾಗ, ಎಲ್ಲಾ ಸ್ವಾತ್ರಂತ್ಯ್ರ ಹೋರಾಟಗಾರರ ಮನವಿಯನ್ನು ತಿರಸ್ಕರಿಸಿದ ಗಾಂಧಿ, ನಮ್ಮದೇನಿದ್ದರೂ ಅಹಿಂಸಾತ್ಮಕ ಹೋರಾಟವಾದ ಕಾರಣ, ಅಂತಹ ಕ್ರಾಂತಿಕಾರಿಗಳನ್ನು ಸಮರ್ಥಿಸಿಕೊಂಡು ಪತ್ರ ಬರೆಯಲು ಸಾಧ್ಯವಿಲ್ಲ ಎಂದು ಸಣ್ಣ ತನವನ್ನು ತೋರುತ್ತಾರೆ. ದೇಶಕ್ಕೆ ಆತೀ ಶೀಘ್ರವಾಗಿ ಸ್ವಾತ್ರಂತ್ಯ ಕೊಡಿಸಲು ವಿವಿಧ ರೀತಿಯ ಹೋರಾಟಗಳನ್ನು ಕೈ ಹಿಡಿದ್ದಿದ್ದವರಿಗೆ ಗಾಂಧಿಯವರ ಸಂಕುಚಿತತನದಿಂದಾಗಿ ಮೂವರು ತರುಣರು ಚಿಕ್ಕವಯಸಿನಲ್ಲೇ ತಮ್ಮ ಪ್ರಾಣವನ್ನು ಅರ್ಪಣೆ ಮಾಡಬೇಕಾಗಿ ಹೋಗುವುದು ನಿಜಕ್ಕೂ ವಿಪರ್ಯಾಸವೇ ಸರಿ.
ದೇಶಕ್ಕಾಗಿ ಪ್ರಾಣವನ್ನೇ ಅರ್ಪಿಸಲು ಸಿದ್ಧವಾಗಿದ್ದ ತರುಣ ರಾಜಗುರು ಅವರ ಮಾನಸಿಕ ಸ್ಥಿತಿ ಹೇಗಿತ್ತು ಎಂಬುದಕ್ಕೆ ಈ ಕೆಲವು ಪ್ರಸಂಗಗಳೇ ಜ್ವಲಂತ ಉದಾಹಣೆಯಾಗಿದೆ.
ಅದೊಮ್ಮೆ ಕ್ರಾಂತಿಕಾರಿಗಳೆಲ್ಲರೂ ಊಟಕ್ಕಾಗಿ ಒಟ್ಟಾಗಿ ಸೇರಿದ್ದಾಗ, ರಾಜಗುರು ಅವರು ರೊಟ್ಟಿಯನ್ನು ತಯಾಸುತ್ತಾ, ತಂದೂರ್ ಒಳಗೆ ಬೇಯಿಸಿದ ರೊಟ್ಟಿಗಳನ್ನು ಬರಿಗೈಯ್ಯಿಂದ ಹೊರತೆಗೆಯುತ್ತಿರುತ್ತಾರೆ. ಇದನ್ನು ಗಮನಿಸಿದ ಕ್ರಾಂತಿಕಾರಿಯೊರ್ವರು ಪ್ರಶಂಸಿದ್ದನ್ನು ನೋಡಿದ ಮತ್ತೊರ್ವ ಕ್ರಾಂತಿಕಾರಿ ತಮಾಷೆಗೆಂದು, ತಂದೂರ್ ಒಳಗೆ ಕೈ ಹಾಕುವುದು ದೊಡ್ಡ ಕೆಲಸವಲ್ಲ, ಪೊಲೀಸರ ಅತ್ಯಾಚಾರಗಳನ್ನು ಇಷ್ಟು ಸಹಿಷ್ಣುತೆಯಿಂದ ಎದುರಿಸಿದರೆ ಮಾತ್ರ ಅದು ಪ್ರಶಂಸನೀಯ ಎನ್ನುತ್ತಾರೆ. ಇದನ್ನು ಕೇಳಿದ ರಾಜಗುರು ಕೂಡಲೇ ಅಲ್ಲಿಯೇ ಇದ್ದ ಬಾಣಾಲೆಯೊಂದನ್ನು ಬಿಸಿ ಮಾಡಿ ತನ್ನ ಎದೆಗೆ ಒತ್ತಿಕೊಂಡಾಗ, ಅವರ ಎದೆಯ ಚರ್ಮ ಸುಟ್ಟು ಹೋದರೂ, ಮತ್ತೆ ಮತ್ತೆ ಅದನ್ನೇ ಪುನರಾವರ್ತಿಸುತ್ತಾ, ಅದೇ ಶಾಂತ ರೀತಿಯಿಂದಲೇ, ನಗು ನಗುತ್ತಾ ಈಗ ಹೇಳು, ನಾನು ಕಾರಾಗೃಹ ಅತ್ಯಾಚಾರಗಳನ್ನು ಸಹಿಸಲು ಸಿದ್ಧನಿದ್ದೇನೆ ಎಂಬುದಕ್ಕೆ ಏನಾದರೂ ಸಂದೇಹ ಉಂಟೆ? ಎಂದು ಪ್ರಶ್ನಿಸುತಾರೆ. ಇದನ್ನು ನೋಡಿದ ಕೂಡಲೇ, ಆ ಕ್ರಾಂತಿಕಾರಿಗೆ ತನ್ನ ತಪ್ಪಿನ ಅರಿವಾಗಿ, ಕ್ಷಮಿಸೂ ಗೆಳೆಯಾ, ನಿನ್ನ ಪ್ರಖರ ದೇಶಭಕ್ತಿಯ ಬಗ್ಗೆ ನನಗೆ ಕಿಂಚಿತ್ತೂ ಅನುಮಾನವಿಲ್ಲ ಎಂದು ಕ್ಷಮೆ ಯಾಚಿಸಿ, ಸುಟ್ಟ ಗಾಯಕ್ಕೆ ಮುಲಾಮು ಹಚ್ಚುತ್ತಾರೆ.
ಅದೇ ರಾಜಗುರು ಭಗತ್ ಸಿಂಗ್ ಮತ್ತು ಸುಖದೇವ್ ರೊಂದಿಗೆ ಲಾಹೋರ್ ಕಾರಾಗೃಹದಲ್ಲಿದ್ದಾಗ ಅವರ ಮೇಲೆ ಅಮಾನವೀಯ ಅತ್ಯಾಚಾರಗಳು ನಡೆಯುತ್ತಲೇ ಹೋಗುತ್ತದೆ. ಅಲ್ಲಿನ ತೀವ್ರ ಬೇಸಿಗೆಯ ಬಿಸಿಲಿನಲ್ಲಿ, ಸುತ್ತಲೂ ಬೆಂಕಿಯನ್ನು ಹಚ್ಚಿ ಅದರ ಮಧ್ಯದಲ್ಲಿ ಅವರನ್ನು ಕೂರಿಸುತ್ತಾರೆ. ಅದೇ ರೀತಿ ಮಂಜುಗಡ್ಡೆಯನ್ನು ಹಾಸಿಗೆಯಂತೆ ಹಾಸಿ ಅದರ ಮೇಲೆ ಬರೀ ಮೈಯಲ್ಲಿ ಮಲಗಿಸಿ ಅವರ ಅವಯವಗಳೆಲ್ಲವೂ ನಿಷ್ಕ್ರಿಯವಾಗುವಂತೆ ಮಾಡಿದರೂ, ಅಂತಹ ಯವುದೇ ಶಿಕ್ಷೆಗಳಿಗು ಬಗ್ಗದ ರಾಜಗುರು ಬಗ್ಗುವುದಿಲ್ಲ, ಅದೇ ರೀತಿ ತಲೆಯ ಮೇಲೆ ಮಲದ ಧಾರೆಯನ್ನೆರೆದರೂ ಸಹಾ ರಾಜಗುರು ಬಾಯಿ ಬಿಡಲಿಲ್ಲ ಮತ್ತು ತನ್ನ ಜೊತೆಯಲ್ಲಿದ್ದ ಸಹಕ್ರಾಂತಿಕಾರಿಗಳ ಹೆಸರನ್ನು ಹೇಳಲಿಲ್ಲ ಎಂದರ ಅವರ ದೇಶ ಪ್ರೇಮದ ಉತ್ಕಟತೆ ಎಷ್ಟಿತ್ತು ಎಂಬುದರ ಅರಿವಾಗುತ್ತದೆ.
ತಮಗೆ ಗಲ್ಲು ಶಿಕ್ಷೆಗೆ ಕರೆದೊಯ್ಯುವ ಮುನ್ನ ತಮ್ಮ ಕ್ರಾಂತಿಕಾರಿ ಇತರೇ ಗೆಳೆಯರಾದ ಪಂಡಿತ್ ರಾಮ್ ಪ್ರಸಾದ್ ಬಿಸ್ಮಿಲ್, ಅಶ್ಫಾಕುಲ್ಲಾ ಖಾನ್, ಠಾಕೂರ್ ರೋಷನ್ ಸಿಂಗ್, ಸಚೀಂದ್ರ ನಾಥ್ ಬಕ್ಷಿ, ರಾಮ್ ಕೃಷ್ಣ ಖಾತ್ರಿ ಮುಂತಾದವರಿಂದ ರಚಿತವಾದ ಮೇರಾ ರಂಗ್ ದೇ ಬಸಂತಿ ಚೋಲಾ.. ಮೇರಾ ರಂಗ್ ದೇ ಬಸಂತಿ ಚೋಲಾ.. ಹಾಡನ್ನು ಸಂತೋಷವಾಗಿಯೇ ಹಾಡುತ್ತಾ, ನೇಣುಗಂಬವನ್ನು ಏರುವ ಮೊದಲು ಅದೇ ಸೆರೆಮನೆಯಲ್ಲಿದ್ದ ಇತರೇ ಕ್ರಾಂತಿಕಾರಿಗಳೊಂದಿಗೆ ಮಾತನಾಡುತ್ತ ನೀವೆಲ್ಲರೂ ಇನ್ನಷ್ಟು ವರ್ಷಗಳು ಭಾರತಾಂಬೆಗಾಗಿ ಕಾರ್ಯ ಮಾಡುವ ಸೌಭಾಗ್ಯ ಪಡೆದಿರುವುದಿ, ಆದರೆ ನಾವು ನೇಣುಗಂಬ ಏರಿದ ತಕ್ಷಣವೇ ಅಂತಹ ಸೌಭಾಗ್ಯದಿಂದ ವಂಚಿತರಾಗುತ್ತಿದ್ದೇವೆ ಎಂದು ಮಮ್ಮಲ ಮರುಗುವುದನ್ನು ಕಂಡಾಗ ಎಂತಹವರಿಗೂ ಕರುಳು ಕಿತ್ತು ಬರುತ್ತದೆ.
ಆರಂಭದಲ್ಲಿ ಮಾರ್ಚ್ 24ರಂದು ಈ ತ್ರಿವಳಿಗಳನ್ನು ಗಲ್ಲಿಗೆ ಏರಿಸುತ್ತಾರೆ ಎಂಬ ವಿಷಯವನ್ನು ತಿಳಿದು ಅದನ್ನು ಪ್ರತಿಭಟಿಸಲು ಸಾವಿರಾರು ಸ್ವಾತ್ರಂತ್ರ್ಯ ಹೋರಾಟಗಾರರು ಸೆರೆಮನೆಯ ಎದುರು ಸೇರುವ ವಿಷಯ ತಿಳಿದ ಬ್ರಿಟೀಷರು ಈ ಮೂವರನ್ನೂ ಒಂದು ದಿನದ ಮೊದಲೇ ಅಂದರೆ 1931ರ ಮಾರ್ಚ್ 23ರಂದು ಗಲ್ಲಿಗೆ ಏರಿಸಲು ಬ್ರಿಟಿಷರು ಸಿದ್ಧರಾದಾಗ, ಯಾವುದೇ ಖೇದ ಭಾವನೆಯಿಲ್ಲದೆ ಹಸನ್ಮುಖದಿಂದ ಈ ತ್ರಿಮೂರ್ತಿಗಳಾದ ಭಗತ್ ಸಿಂಗ್, ಸುಖದೇವ್ ಮತ್ತು ಶಿವರಾಮ ರಾಜಗುರುತಮ್ಮನ್ನು ನೇಣಿಗೆ ಒಡ್ಡಿಕೊಂಡರು.
ಈ ಮಹಾತ್ಮರ ದೇಹಗಳನ್ನು ಗುಟ್ಟಾಗಿ ಭಾರೀ ಬಂದೋಬಸ್ತಿನಲ್ಲಿ ಫಿರೋಜ್ ಪುರ ಜಿಲ್ಲೆಯ ಸಟ್ಲೇಜ್ ನದೀತೀರದ ಹುಸ್ಸೇನ್ ವಾಲಾ ಎಂಬ ಗ್ರಾಮದಲ್ಲಿ ಸಮಾಧಿ ಮಾಡಲಾಗುತ್ತದೆ.
ಭಾರತರಕ್ಕೆ ಬ್ರಿಟೀಷರಿಂದ ಸ್ವಾತ್ರಂತ್ಯ ಕೆಲವು ಮಹಾನ್ ನಾಯಕರ ಆಹಿಂಸಾತ್ಮಕ ಹೋರಾಟ ಮತ್ತು ಉಪವಾಸ ಸತ್ಯಾಗ್ರಹಗಳಿಂದ ದೊರೆಕಿತು ಎಂದು ಗಿಣಿ ಪಾಠವನ್ನು ಹೇಳಿಕೊಡುವವರಿಗೆ ಶಿವರಾಮ ಹರಿ ರಾಜಗುರು ಅಂತಹ ಲಕ್ಷಾಂತರ ಎಲೆಮರೆಕಾಯಿ ಹೋರಾಟಗಾರರ ತ್ಯಾಗ ಮತ್ತು ಬಲಿದಾನಗಳನ್ನು ನೆನಪಿಸಿ ಅಂತಹ ಪ್ರಾಥಸ್ಮರಣೀಯರಿಗೆ ನಮ್ಮ ಗೌರವವನ್ನು ತೋರಿಸುವುದು ನಮ್ಮ ನಿಮ್ಮೆಲ್ಲರ ಆದ್ಯಕರ್ತವ್ಯೇ ಅಗಿದೆ ಅಲ್ವೇ?
ಏನಂತೀರೀ?
ನಿಮ್ಮವನೇ ಉಮಾಸುತ