ನೆನ್ನೆ ಸಂಜೆ ಮುಂಬೈಯಿಂದ ಕರೆ ಮಾಡಿದ್ದ ನನ್ನ ಸಹೋದ್ಯೋಗಿಯೊಬ್ಬರು ಎಂದಿನಂತೆ ಉಭಯ ಕುಶಲೋಪರಿ ವಿಚಾರಿಸಿದ ನಂತರ ಕೇಳಿದ ಮೂತ್ತ ಮೊದಲನೇ ಪ್ರಶ್ನೆಯೇ, ಕಳೆದ ಒಂದು ವಾರದಿಂದ ಬೆಂಗಳೂರು ಮುಳುಗಿ ಹೋಗಿದೆಯಂತೆ? ಈಗ ಪರಿಸ್ಥಿತಿ ಹೇಗಿದೆ? ಎಂಚು. ನಿಮಗೆ ಹೇಗೆ ಈ ವಿಷಯ ಗೊತ್ತಾಯಿತು? ಎಂದು ವಿಚಾರಿಸಿದಾಗ, ವಾಟ್ಸಾಪ್ ನಲ್ಲಿ ಬೆಂಗಳೂರಿನ ಹತ್ತು ಹಲವಾರು ವೀಡಿಯೋಗಳು ಹರಿದಾಡುತ್ತಿವೆ. ಅದನ್ನು ನೋಡಿ ಗೊತ್ತಾಯಿತು ಎಂದಾಗ, ಜನರು ಇಲಿ ಹೋಯ್ತು ಎಂದರೆ ಹುಲಿ ಹೋಯ್ತು ಎಂದು ಹೇಳ್ತಾರಲ್ಲಾ ಎಂದು ಮನಸ್ಸಿನಲ್ಲಿ ಅಂದು ಕೊಂಡು, ಅಲ್ಲಾ ಪ್ರತಿ ವರ್ಷಾ ಮುಂಬೈನಲ್ಲಿ ಮಳೆ ಬಂದಾಗ ವಾರನು ಗಟ್ಟಲೇ ಲೋಕಲ್ ಟ್ರೈನ್ ಗಳು ಇಲ್ಲದೇ ಪರದಾಡ್ತೀರಲ್ಲಾ ಅಂದಾಗ, ಹೇ.. ಹೇ.. ಅದೆಲ್ಲಾ ನಮಗೆ ಸಹಜವಾಗಿ ಅಭ್ಯಾಸವಾಗಿ ಹೋಗಿದೆ ಎಂದು ಹೇಳುತ್ತಲೇ ಮಾತನ್ನು ಬೇರೆಡೆಗೆ ತೆಗೆದುಕೊಂಡು ಹೋಗುವ ಮೂಲಕ ದಿಕ್ಕು ತಪ್ಪಿಸಲು ಪ್ರಯತ್ನ ಮಾಡಿದರು. ತಮ್ಮ ತಟ್ಟೆಲೀ ಹೆಗ್ಗಣ ಬಿದ್ದಿದ್ರೂ ಪಕ್ಕದ ತಟ್ಟೇಲಿ ನೋಣ ಬಿದ್ದಿರುವುದರ ಬಗ್ಗೆ ಚಿಂತೆ ಅವರಿಗೆ. ಇದು ಖಂಡಿತವಾಗಿಯೂ ಅವರ ತಪ್ಪಿಲ್ಲದೇ, ಕೇವಲ ಒಂದು ಪ್ರದೇಶದ ವೀಡೀಯೋಗಳನ್ನು ಮಾಡಿಕೊಂಡು ಸಂಪೂರ್ಣ ಬೆಂಗಳೂರೇ ಜಲಾವೃತವಾಗಿದೆ ಎಂದು ಬಿಂಬಿಸುವಲ್ಲಿ ಬೆಂಗಳೂರಿನ ವಲಸಿಗರು ಮತ್ತು ರಾಷ್ಟ್ರೀಯ ಮಾಧ್ಯಮಗಳು ಯಶಸ್ವಿಯಾಗಿರುವುದು ದುರಂತವೇ ಸರಿ.
ಮಹದೇವಪುರ ಸುತ್ತಮುತ್ತಲಿನಲ್ಲಿ ಸುರಿದಷ್ಟೇ ಪ್ರಮಾಣದ ಮಳೆ ಬೆಂಗಳೂರಿನ ವಿಜಯನಗರ, ಜಯನಗರ, ಜೆಪಿ ನಗರ, ದಾಸರಹಳ್ಳಿ, ಪೀಣ್ಯ, ಜಾಲಹಳ್ಳಿ ಕ್ರಾಸ್ ರಾಜಾಜಿನಗರ ನಾಗರಬಾವಿ ಮುಂತಾದ ಕಡೆಗಳಲ್ಲಿ ಸುರಿದಿದ್ದರೂ, ಮಳೆ ನಿಂತ ಕೆಲವೇ ಗಂಟೆಗಳಲ್ಲಿ ಮಳೆ ನೀರು ಒಳಚರಂಡಿಯ ಮೂಲಕ ಹರಿದು ಹೋಗಿದೆ. ಸ್ವಲ್ಪ ಸೂಕ್ಷ್ಮವಾಗಿ ಗಮನಿಸಿದಲ್ಲಿ 20 ವರ್ಷಗಳ ಹಿಂದೆ ಏನೂ ಇರದಿದ್ದ ಸಿಲ್ಕ್ ಬೋರ್ಡಿನಿಂದ ಮತ್ತು ಕೆ.ರ್.ಪುರದ ಸುತ್ತಮುತ್ತಲಿನ ಪ್ರದೇಶ ಅವೆರಡರ ಮಧ್ಯೆ ಈ ಹೊರವರ್ತುಲ ರಸ್ತೆಯಾಗಿದ್ದೇ ತಡಾ ಅಂದಿನ ನಗರಾಭಿವೃದ್ಧಿ ಸಚಿವಾಗಿದ್ದ ಕೆ.ಜೆ.ಜಾರ್ಚ್, ಡಿ.ಕೆ.ಶಿವಕುಮಾರ್, ಕುಪೇಂದ್ರ ರೆಡ್ಡಿ, ಎಂ.ಟಿ.ಬಿ. ನಾಗರಾಜ್ ಪಿ.ಸಿ.ಮೋಹನ್ ನಂತಹ ಪ್ರಭಾವಿ ರಾಜಾಕಾರಣಿಗಳು ಅ ವರ್ತುಲ ರಸ್ತೆಯ ಇಕ್ಕೆಲಗಳನ್ನೂ ಹರಿದು ಹಂಚಿ ಕೊಂಡು ತಮ್ಮ ತಮ್ಮ ಆಪ್ತ ಬಿಲ್ಡರ್ಗಳ ಮೂಲಕ ಕಂದಾಯ ಇಲಾಖೆಯ ಎಲ್ಲಾ ನಿಯಮಗಳನ್ನೂ ಗಾಳಿಗೆ ತೂರಿ ನೂರಾರು ಗಗನ ಚುಂಬಿ ಕಟ್ಟಡಗಳನ್ನು ಕಟ್ಟಿಸಿ ಕೋಟ್ಯಾಂತರ ರೂಪಾಯಿ ಬಾಡಿಗೆ ಹಣವನ್ನು ಪಡೆದಿರುವುದೇ ಸಮಸ್ಯೆಯಾಗಿದ್ದು, ಖಂಡಿತವಾಗಿಯೂ ಈಗ ಸುರಿಯುತ್ತಿರುವ ಮಳೆಯಂತೂ ಕಾರಣ ಅಲ್ಲವಾಗಿದೆ. ರಿಯಲ್ ಎಸ್ಟೇಟ್ ದಂಧೆ, ಭ್ರಷ್ಟ ಅಧಿಕಾರಿಗಳ ಭ್ರಷ್ಟಾಚಾರ ಮತ್ತು ವಲಸಿಗರ ಕ್ರೌರ್ಯದಿಂದಾಗಿ, ಐತಿಹಾಸಿಕ ಹಿನ್ನೆಲೆ ಇರುವ, ಉದ್ಯಾನನಗರಿ, ಭಾರತದ ಸಿಲಿಕಾನ್ ವ್ಯಾಲಿ ಎಂದೇ ಎನಿಸಿಕೊಂಡಿರುವ ಬೆಂಗಳೂರಿಗೆ ಕೆಟ್ಟ ಹೆಸರು ಬರುವಂತಾಗಿದೆ.
ಅಂಕಿ ಆಂಶಗಳ ಪ್ರಕಾರ ಬೆಂಗಳೂರು ಸರಾಸರಿ ಸಮುದ್ರ ಮಟ್ಟದಿಂದ ಸುಮಾರು 3000 ಅಡಿ ಎತ್ತರದಲ್ಲಿದ್ದು, ಸಹಜವಾಗಿ ಮಳೆಯಾದಾಗ ನೀರು ಉಳಿಸಿಕೊಳ್ಳದಿದ್ದರೆ ಮಳೆ ನೀರು ತಗ್ಗಿನ ಪ್ರದೇಶಗಳಿಗೆ ಹರಿಯುತ್ತದೆ. ಇದೇ ಭೌಗೋಳಿಕ ಆಧಾರವನ್ನೇ ಮನಸ್ಸಿನಲ್ಲಿಟ್ಟು ಕೊಂಡ ಕೆಂಪೇಗೌಡರು ತಮ್ಮ ಆಳ್ವಿಕೆಯ ಕಾಲದಲ್ಲಿ ನೂರಾರು ಕೆರೆಗಳನ್ನು ನಿರ್ಮಿಸಿದರು. ಈ ಹಿಂದಿನ ಲೇಖನದಲ್ಲಿ ತಿಳಿಸಿದಂತೆ, ಎತ್ತರದ ಪ್ರದೇಶಗಳಲ್ಲಿ ಸುರಿದ ಮಳೆಯ ನೀರು ರಾಜ ಕಾಲುವೆಗಳ ಮೂಲಕ ಹತ್ತಿರದ ತಗ್ಗಿನಲ್ಲಿರುವ ಕೆರೆಗೆ ಹೋಗಿ, ಆ ಕೆರೆ ತುಂಬಿದಾಗ ಮತ್ತೇ ಕೋಡಿ ಹರಿಯುವ ಮೂಲಕ ಮತ್ತೊಂದು ಅತ್ಯುತ್ತಮ ರಾಜಕಾಲುವೆಯ ಮೂಲಕ ತಗ್ಗಿರುವ ಕೆರೆಗೆ ಸೇರಿಕೊಳ್ಳುತ್ತಿತ್ತು. ಹೀಗೆ ಬಹುತೇಕ ಎಲ್ಲಾ ಕೆರೆಗಳೂ ರಾಜಕಾಲುವೆ ಎಂಬ ಅಧ್ಭುತ ಪರಿಕಲ್ಪನೆಯ ಮೂಲಕ ಪರಸ್ಪರ ಜೋಡಿಸಿದ್ದರು ಇದರಿಂದಾಗಿ ಎತ್ತರದ ಕೆರೆಗಳು ತುಂಬಿದಾಗ ನೀರು ಕಡಿಮೆ ಎತ್ತರದಲ್ಲಿರುವ ಕೆರೆಗಳಿಗೆ ಹರಿಯುವ ಮೂಲಕ ಗ್ರಾಮಗಳಾಗಲೀ ರಸ್ತೆಗಳಾಗಲೀ ಜಲಾವೃತವಾಗುತ್ತಿರಲಿಲ್ಲ.
ಬೆಂಗಳೂರಿನ ನೀರು ನಿರ್ವಹಣಾ ವ್ಯವಸ್ಥೆಯನ್ನು ಅರ್ಥಮಾಡಿಕೊಳ್ಳಲು, ನಗರದ ಭೂಗೋಳವನ್ನು ಅರ್ಥಮಾಡಿಕೊಳ್ಳುವುದು ಮುಖ್ಯವಾಗಿದೆ. ಬೆಂಗಳೂರು ಮೂರು ಪ್ರಮುಖ ನೈಸರ್ಗಿಕ ಕಣಿವೆ/ಒಳಚರಂಡಿ ವಲಯಗಳನ್ನು ಹೊಂದಿದೆ ಮತ್ತು ಮೂರು ಸಣ್ಣ ಪ್ರದೇಶಗಳನ್ನು ಹೊಂದಿದೆ. ಪ್ರಮುಖ ಕಣಿವೆಗಳೆಂದರೆ ವೃಷಭಾವತಿ ಕಣಿವೆ, ಕೋರಮಂಗಲ-ಚಲ್ಲಘಟ್ಟ ಕಣಿವೆ ಮತ್ತು ಹೆಬ್ಬಾಳ ಕಣಿವೆ. ಚಿಕ್ಕ ಕಣಿವೆಗಳು ತಾವರೆಕೆರೆ, ಕತ್ರಿಗುಪ್ಪೆ ಮತ್ತು ಅರ್ಕಾವತಿ. ದುರಾದೃಷ್ಟವಶಾತ್ ಬುದ್ದಿಹೀನ ನಗರ ಯೋಜನೆ ಅಥವಾ ಅಂತಹ ಆಯಕಟ್ಟಿನ ಹುದ್ದೆಗೆ ಅರ್ಹರಲ್ಲದ ವ್ಯಕ್ತಿ ನೇಮಕವಾಗಿ ಅವರ ಬೌದ್ಧಿಕ ಕೊರತೆಯಿಂದಾಗಿ ಇಲ್ಲವೇ, ದುರಾಸೆಯ ರಿಯಲ್ ಎಸ್ಟೇಟ್ ದರೋಡೆಕೋರರು ರಾಜಕೀಯ ವ್ಯಕ್ತಿಗಳು ಮತ್ತು ಅಧಿಕಾರಶಾಹಿಗಳ ಮೇಲೆ ಲಾಬಿ ನಡೆಸಿ ಅವರೆಲ್ಲರ ಸ್ವಾರ್ಥ ಭ್ರಷ್ಟ ಸಂಯೋಜನೆಯಿಂದ ಈ ರೀತಿಯ ಕಣಿವೆಗಳನ್ನೆಲ್ಲಾ ನಿರ್ಬಂಧಿಸಿದಾಗ ಮಳೆ ನೀರು ಎಲ್ಲಿಗೂ ಹರಿದು ಹೋಗಲಾರದೇ, ಈ ರೀತಿಯ ಅವಘಡಗಳಿಗೆ ಕಾರಣವಾಗಿದೆ.
ಇನ್ನು ಸದ್ಯದ ಪರಿಸ್ಥಿತಿಯಲ್ಲಿ ಬೆಂಗಳೂರಿನಲ್ಲಿ ಮುಳುಗಿರುವ ಪ್ರದೇಶಗಳ ವಸ್ತುನಿಷ್ಠ ಅವಲೋಕನ ಮಾಡಿದಲ್ಲಿ, ರಿಯಲ್ ಎಸ್ಟೇಟ್ ಮಾಫಿಯಾಗಳ ದುರಾಸೆಯಿಂದ ಈ ಎಲ್ಲಾ ವ್ಯವಸ್ಥೆಗಳನ್ನೂ ಹಾಳು ಮಾಡಿರುವುದರಿಂದಾಗಿಯೇ ಈ ಪ್ರದೇಶ ಮಳೆಯ ನೀರಿನಿಂದ ಜಲಾವೃತವಾಗಿರುವುದು ಸ್ಪಷ್ಟವಾಗಿದೆ.
- ಮಹದೇವಪುರ ಮತ್ತು ಸುತ್ತಮುತ್ತಲೂ ಈ ಹಿಂದೆ 63 ಕೆರೆಗಳಿದ್ದು ಈಗ ಬಹುತೇಕ ಕೆರೆಗಳು ಮತ್ತು ರಾಜಕಾಲುವೆಗಳು ಮುಚ್ಚಿ ಅಲ್ಲಿ ಗಗನಚುಂಬಿ ಕಟ್ಟಡಗಳು ಎದ್ದಿರುವ ಕಾರಣ ಆಲ್ಲಿ ಸುರಿದ ಮಳೆಯ ನೀರು ಹೊರಗೆ ಹೋಗಲು ಯಾವುದೇ ಮಾರ್ಗವಿಲ್ಲದೇ ಎಲ್ಲೆಂದರಲ್ಲಿ ಹರಿದ ಪರಿಣಾಮ ಅಲ್ಲಿನ ತಗ್ಗು ಪ್ರದೇಶಗಳು ಅಪಾಯದಲ್ಲಿದೆ.
ಸುಮಾರು 70 ಹೆಕ್ಟೇರ್ ವಿಸ್ತೀರ್ಣದ ಪಾಲನಾಯಕನ ಹಳ್ಳಿಯ ಕೆರೆ ಸುಮಾರು 40 ವರ್ಷಗಳ ನಂತರ ತುಂಬಿ ತುಳುಕಿ ಕೋಡಿ ಬಿದ್ದಿದ್ದು, ಅಲ್ಲಿನ ಹೆಚ್ಚಿನ ನೀರು ಈ ಮುಂಚಿನ ಪ್ರಕಾರ ರಾಜಾಕಲುವೆಗಳ ಮೂಲಕ ಸೋಲ್ ಸರೋವರಕ್ಕೆ ತಲುಪಬೇಕಿತ್ತು. ಆದರೆ ರೇನ್‌ಬೋ ಡ್ರೈವ್ ಲೇಔಟ್ ಅದೇ ರಾಜಾಕಾಲುವೆಯ ಮೇಲೆ ಇರುವ ಕಾರಣ ಇಡೀ ರೈನ್ ಬೋ ಲೇಔಟ್ ಜಲಾವೃತವಾಗಿದೆ.
ಇನ್ನು ಸೋಲ್ ಕೆರೆ ತುಂಬಿ ಹರಿಯುತ್ತಿರುವುದರಿಂದ ಅಲ್ಲಿನ ನೀರು ಸ್ವಾಭಾವಿಕವಾಗಿ ಬೆಳ್ಳಂದೂರು ಕೆರೆ ತಲುಪಬೇಕಿತ್ತು ಆದರೆ ಅವರೆಡರ ನಡುವಿನ ಸಂಪರ್ಕವಾಗಿದ್ದ ರಾಜಾಕಾಲುವೆಯನ್ನೇ ಒತ್ತುವರಿ ಮಾಡಿದ ಇಕೋಸ್ಪೇಸ್ ಮತ್ತು ಇಕೋ ವರ್ಲ್ಡ್ ಐಟಿ ಪಾರ್ಕನ್ನು ರಾಜಕಾರಣಿ ಕುಪೇಂದ್ರರೆಡ್ಡಿ ಕಟ್ಟಿರುವ ಕಾರಣ ಸಹಜವಾಗಿಯೇ ಆ ಪ್ರದೇಶ ಜಲಾವೃತಗೊಂಡಿದ್ದಲ್ಲದೇ, ಹೊರವರ್ತುಲ ರಸ್ತೆಯ ಭರ್ತಿ ಮೊಣಕಾಲು ಎತ್ತರದಷ್ಟು ನೀರು ಹರಿಯುತ್ತಿದೆ. ಇದನ್ನರಿಯದ ಮುಗ್ಧ ಜನರು ಸುಖಾ ಸುಮ್ಮನೇ ವೀಡಿಯೊಗಳನ್ನು ಮಾಡುತ್ತಾ ಬಾಯಿಗೆ ಬಂದಂತೆ ಪ್ರಸಕ್ತ ಸರ್ಕಾರವನ್ನು ಬೈಯ್ಯುತ್ತಾ ಬೆಂಗಳೂರು ಬಿಟ್ಟು ಹೋಗುತ್ತೇವೆ ಎನ್ನುವ ಕಾರ್ಯ ಸಾಧುವಾಗದ ಮಾತುಗಳನ್ನಾಡುತ್ತಿದ್ದಾರೆ.
- 98 ಎಕರೆಯಷ್ಟು ವಿಸ್ತೀರ್ಣದ ಮತ್ತು ಸದ್ಯದಲ್ಲಿ ಬೆಂಗಳೂರಿನ ಅತ್ಯಂತ ಉತ್ತಮವಾಗಿ ನಿರ್ವಹಿಸಲಾದ ಕೆರೆಗಳಲ್ಲಿ ಒಂದಾಗಿರುವ ಅಗರ ಕೆರೆಯೂ ಸಹಾ ಇನ್ನೇನೂ ತುಂಬುವ ಹಂತಕ್ಕೆ ತಲುಪಿದ್ದು ಇದೇ ರೀತಿ ಇನ್ನೂ ಒಂದೆರಡು ದಿನ ಮಳೆಯಾದಲ್ಲಿ ವಿಧಿ ಇಲ್ಲದೇ ಹೆಚ್.ಎಸ್.ಆರ್ ಮತ್ತು ಕೋರಮಂಗಲದ ಸುತ್ತಮುತ್ತಲಿನ ತಗ್ಗಿನ ಪ್ರದೇಶಗಳು ಜಲಾವೃತವಾಗುತ್ತದೆ
ಸರ್ಜಾಪುರದ ಕೆರೆಗಿಂತಲೂ ತಗ್ಗಿನಲ್ಲಿರುವ ಬೆಂಗಳೂರಿನ ವಿಪ್ರೋ ಕಚೇರಿಯ ನಲ ಮಹಡಿಯೂ ಸಹಾ ಸಹಜವಾಗಿ ಜಲಾವೃತಗೊಂಡಿದೆ.
- ಇನ್ನು ಕೆ.ಆರ್. ಪುರದಲ್ಲಿ ವಿಭೂತಿಪುರ ಕೆರೆ ತುಂಬಿ ಹರಿಯುತ್ತಿರುವ ಕಾರಣ ಅಲ್ಲಿನ ನೀರು ಹೊರಹೋಗಲಾಗದೇ ತಗ್ಗಿನ ಪ್ರದೇಶ ಸಾಯಿ ಲೇಔಟ್ ಸಂಪೂರ್ಣ ಜಲಾವೃತಗೊಂಡಿದೆ.
ಆಡಳಿತಕ್ಕೆ ಬರುವ ಪ್ರತೀ ಸರ್ಕಾರಕ್ಕೂ ಈ ಎಲ್ಲಾ ವಿಷಯಗಳ ಅರಿವಿದ್ದರೂ ಬೇಲಿಯೇ ಎದ್ದು ಹೊಲ ಮೇಯ್ದಂತೆ ಎನ್ನುವಂತೆ, ಆಡಳಿತಾತ್ಮಕವಾಗಿ ವಿವಿಧ ಪಕ್ಷಗಳಲ್ಲಿದ್ದು ವಿಧಾನ ಸೌಧದಲ್ಲಿ ಪರಸ್ಪರ ವಿರೋಧ ವ್ಯಕ್ತಪಡಿಸಿದರೂ, ಹೊರಗೆ ಎಲ್ಲಾ ಪಕ್ಷದ ಧುರೀಣರೂ ಇರುವ ಕಾರಣ, ಪ್ರತೀ ಬಾರಿ ಈ ರೀತಿಯ ಭಾರೀ ಮಳೆ ಬಿದ್ದಾಗ ಕೆಲವು ಕೋಟಿ ಹಣವನ್ನು ತುರ್ತಾಗಿ ಬಿಡುಗಡೆ ಮಾಡೀ ಅದು ಸಹಾ ತಮ್ಮ ನೆಚ್ಚಿನ ಕಂಟ್ರಾಕ್ಟರ್ ಗಳಿಗೆ ಸಿಗುವಂತೆ ಮಾಡುವ ಮೂಲಕ ಅಲ್ಲೊಂದಿಷ್ಟು ಕಮೀಷನ್ ಪಡೆದು ತಿಪ್ಪೇ ಸಾರಿಸುವುದನ್ನು ಬಿಟ್ಟರೆ ಮತ್ತೇನೂ ಮಾಡದೇ ಹೋಗಿರುವುದೇ ಪ್ರತಿಬಾರಿಯೂ ಸಮಸ್ಯೆ ಉಲ್ಬಣವಾಗಲು ಕಾರಣವಾಗಿದೆ.
ಸಿದ್ದ್ರರಾಮಯ್ಯನವರ ಕಾಲದಲ್ಲಿ ಆಯವ್ಯಯದಲ್ಲಿ ರಾಜಕಾಲುವೆ ಒತ್ತರಿಕೆಯ ತೆರವಿಗಾಗಿಯೇ ಕೆಲವು ಕೋಟಿಗಳನ್ನು ಮಂಜೂರು ಮಾಡಿ ಆ ಕುರಿತಂತೆ ಕೆಲವಡೆ ಜೆಸಿಬಿ ಸದ್ದು ಮಾಡುವ ಮೂಲಕ ಆಶಾಕಿರಣವನ್ನು ಮೂಡಿಸಿತ್ತಾದರೂ, ಅದು ಕೇವಲ ಆರಂಭ ಶೂರತ್ವಕ್ಕೇ ಮೀಸಲಾಗಿ ಹೋಗಿದ್ದು ದುರಾದೃಷ್ಟಕರ. ಕೆರೆ ಒತ್ತುವರಿ ತೆರೆವಿನ ಕಾರ್ಯಕ್ರಮ ಹಳ್ಳ ಹಿಡಿದಿದ್ದೇಕೆ? ಎಂದು ಸೂಕ್ಷ್ಮವಾಗಿ ವಿಚಾರಿಸಲು ಹೋದಾಗ, ಹೆಚ್ಚಿನ ಪಾಲಿನ ಒತ್ತುವರಿ ಇದೇ ರಾಜಕಾರಣಿಗಳು ಮತ್ತು ಅವರ ಚೇಲಾಗಳೇ ಮಾಡಿದ್ದ ಕಾರಣ, ಓಟ್ ಬ್ಯಾಂಕ್ ರಾಜಕೀಯದಿಂದಾಗಿ ತಮ್ಮವರ ಮೇಲೇ ಕ್ರಮ ತೆಗೆದುಕೊಳ್ಳಲು ಮುಂದಾಗದೇ, ಕೇವಲ ಕಾಗದ ಮೇಲೆ ಒತ್ತುವರಿ ಕಾರ್ಯವನ್ನು ಪೂರೈಸಿ ಅದಕ್ಕಿಟ್ಟಿದ್ದ ಹಣವನ್ನು ಸದ್ದಿಲ್ಲದೇ ಗುಳುಂ ಸ್ವಾಹ ಮಾಡಿರುವುದು ತಿಳಿದು ಬಂದಿದೆ.
ಇಂತಹ ಕುಕೃತ್ಯಗಳಿಗೆ ಕೇವಲ ರಿಯಲ್ ಎಸ್ಟೇಟ್ ಉದ್ಯಮಿಗಳು, ರಾಜಕಾರಣಿಗಳು ಮತ್ತು ಅಧಿಕಾರಿಶಾಹಿಗಳನ್ನು ಮಾತ್ರಾ ದೂಷಿಸದೇ, ಎರಡು ಕೈ ಸೇರಿದಲ್ಲಿ ಮಾತ್ರವೇ ಚಪ್ಪಾಳೆ ಎನ್ನುವಂತೆ, ಹೂಸಿದ್ದು ಕೆಮ್ಮಿದ್ದೆಲ್ಲವನ್ನೂ ಅಂತರ್ಜಾಲದಲ್ಲಿ ಹಾಕುವ ಇದೇ ಟೆಕ್ಕಿಗಳು, ಇದೇ ಕಟ್ಟಡಗಳಿಗೆ ಲಕ್ಷ ಲಕ್ಷ ಹಣ ಕೊಟ್ಟು ಕೊಂಡು ಕೊಳ್ಳುವ ಮೊದಲು ಅದರ ಕಾಗದ ಪತ್ರಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿ, ಈ ಕಟ್ಟಡ ಅಕ್ರಮವೇ? ಸಕ್ರಮವೇ? ಕೆರೆಯ ಬಫರ್ ಝೋನ್ ನಲ್ಲಿ ಇದೆಯೇ? ರಾಜಕಾಲುವೆಯನ್ನು ಒತ್ತುವರಿ ಮಾಡಿದ್ದೇ? ಎಂದು ತಿಳಿದುಕೊಂಡು ಸಾರ್ವಜನಿಕರಿಗೆ ಎಚ್ಚರಿಕೆ ಗೊಳಿಸಿದ್ದಲ್ಲಿ ತಾವೂ ಮತ್ತು ಇತರೇ ಸಾರ್ವಜನಿಕರ ಹೆಚ್ಚಿನ ಅಪಾಯಗಳನ್ನು ತಪ್ಪಿಸ ಬಹುದಾಗಿತ್ತು. ಆದರೆ ತಿಂಗಳಿಗೆ ಲಕ್ಷ ಲಕ್ಷ ಹಣ ಸಂಪಾದಿಸಿ ಅದನ್ನು ಹೇಗೆ ಮತ್ತು ಎಲ್ಲಿ ಖರ್ಚು ಮಾಡಬೇಕು ಎಂಬುದನ್ನರಿಯದವರ ಈ ಟೆಕ್ಕಿಗಳ ಕೊಳ್ಳುಬಾಕ ತನವವೇ ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಲಾಭ ತಂದು ಕೊಡುತ್ತಿರುವುದೇ ಸಮಸ್ಯೆಯ ಮೂಲ ಕಾರಣವಾಗಿದೆ.
ಇಂದು ನಿಂತಿರುವ ನೀರು ಕಲವೇ ದಿನಗಳಲ್ಲಿ ತಗ್ಗಿನ ಇತರೇ ಪ್ರದೇಶಗಳಿಗೆ ಹರಿದು ಹೋಗಿಯೋ ಇಲ್ಲವೇ, ಆವಿಯಾಗಿಯೋ ಹೋಗಿ ಪರಿಸ್ಥಿತಿ ಸಹಜ ಸ್ಥಿತಿಗೆ ಬಂದ ಕೂಡಲೇ ಈ ರೀತಿಯ ಪರಿಸ್ಥಿತಿ ಮರುಕಳಿಸಬಾರದಂತೆ ತಡೆಗೆಟ್ಟುವ ಮತ್ತು ಇದಕ್ಕೆ ಸಂಪೂರ್ಣ ಪರಿಹಾರವನ್ನು ಹುಡುಕುವ ಬದಲು ಸುಮ್ಮನಾಗಿದ್ದು ಮತ್ತೆ ಮುಂದಿನ ವರ್ಷ ಮಳೆ ಸುರಿದಾಗ ಇದೇ ರೀತಿ ಬೊಬ್ಬೆ ಹೊಡೆಯುವುದರಿಂದ ಇಂತಹ ಸಮಸ್ಯೆಗೆ ಶಾಶ್ವತವಾದ ಪರಿಹಾರವನ್ನು ಪಡೆಯಲು ಸಾಧ್ಯವಿಲ್ಲದಾಗಿದೆ. ಇದಲ್ಲದೇ ಈ ರೀತಿಯಾಗಿ ನಿಂತ ನೀರು ಕಲುಷಿತಗೊಂಡು ಸಾಂಕ್ರಾಮಿಕ ರೋಗಗಳನ್ನೂ ಹರಡ ಬಹುದಾದ ಸಂಭವ ಹೆಚ್ಚಾಗಿರುವ ಕಾರಣ ಆ ಪ್ರದೇಶದವರೆಲ್ಲರೂ ಎಚ್ಚರಿಕೆಯಿಂದ ಸಮಸ್ಯೆಯನ್ನು ನಿಭಾಯಿಸ ಬೇಕಾಗಿದೆ. ನಾವೇ ತಂದು ಕೊಂಡ ಸಮಸ್ಯೆಯನ್ನು ನಾವೆಲ್ಲರೂ ಸೇರಿಕೊಂಡೇ ಪರಿಸರಿಸಿಕೊಳ್ಳಬೇಕೇ ಹೊರತು, ಸಾಮಾಜಿಕ ಜಾಲತಾಣಗಳಲ್ಲಿ ಇದರ ವೀಡೀಯೋ ಹಂಚಿಕೊಂಡು ನಮ್ಮ ಬೆಂಗಳೂರಿನ ಮಾನ ಮಾರ್ಯಾದೆಯನ್ನು ಹಾಳು ಮಾಡುತ್ತಿರುವುದು, ಬೆಂಗಳೂರು ಬಿಟ್ಟು ಹೋಗ್ತೀವಿ ಎಂದು ಬೊಬ್ಬಿರಿಯುತ್ತಿರುವುದು ನಿಜಕ್ಕೂ ದೌರ್ಭಾಗ್ಯ ಮತ್ತು ದುರಾದೃಷ್ಟಕರವೂ ಆಗಿದೆ.
ಮನುಷ್ಯರು ಸತ್ತಾಗ ಅವರ ದೇಹವನ್ನು ಮಣ್ಣು ಮಾಡಿ ಅವರ ಸವಿನೆನಪಿಗಾಗಿ ಗೋರಿಗಳನ್ನು ಕಟ್ಟಿದರೆ. ಅದೇ ಬತ್ತಿದ ಕೆರೆಗಳ ಜಾಗದಲ್ಲಿ ಗಗನಚುಂಬಿ ಕಟ್ಟಡಗಳನ್ನು ಕಟ್ಟುವ ಮೂಲಕ ಜಲದೇವತೆಗೇ ಗೋರಿ ಕಟ್ಟಿದಂತಿದೆ ಎಂದು ಹಿರಿಯ ಕವಿಗಳಾಗಿದ್ದ ಶ್ರೀ ಚನ್ನವೀರ ಕಣವಿ ಅವರು ಅದೆಂದೋ ಹೇಳಿರುವುದು ನಿಜಕ್ಕೂ ಎಷ್ಟು ಮಾರ್ಮಿಕವಾಗಿದೆ ಅಲ್ವೇ?
ಏನಂತೀರೀ?
ನಿಮ್ಮವನೇ ಉಮಾಸುತ
ಕಟು ಸತ್ಯ ವಿವರಣೆ
LikeLiked by 1 person