ವಿಜಯನಗರ ಸಾಮ್ರಾಜ್ಯದ ಅಧೀನರಾಗಿದ್ದ ಯಲಹಂಕ ನಾಡಪ್ರಭುಗಳಾಗಿದ್ದ ಮೊದಲನೇ ಕೆಂಪೇಗೌಡರು ಸುಮಾರು 1537ರ ಆಸುಪಾಸಿನಲ್ಲಿ ಮಣ್ಣಿನ ಕೋಟೆಯೊಂದನ್ನು ನಿರ್ಮಿಸಿ ಆ ಪ್ರದೇಶಕ್ಕೆ ಬೆಂದಕಾಳೂರು ಎಂದು ಕರೆದರು ನಂತರ ಜನರ ಆಡು ಮಾತಿನಲ್ಲಿ ಅದು ಬೆಂಗಳೂರು ಆಗಿ ನಂತರ ಆಂಗ್ಲರಿಂದ ಬ್ಯಾಂಗ್ಕೋರ್ ಆಗಿ ಈಗ ಮತ್ತೆ ಬೆಂಗಳೂರು ಆಗಿದೆ. ಸ್ವಾತ್ರಂತ್ತ್ಯ ಬಂದು ಕರ್ನಾಟಕ ರಾಜ್ಯವಾದಾಗ ಇದೇ ಬೆಂಗಳೂರನ್ನು ಕರ್ನಾಟಕದ ರಾಜಧಾನಿಯನ್ನಾಗಿಸಿದರು. ಇಡೀ ಪ್ರಪಂಚದಲ್ಲೇ ವಾಸಿಸಲು ಅತ್ಯಂತ ಯೋಗ್ಯವಾದ ಹವಾಮಾನ ಹೊಂದಿರುವ ಕಾರಣ, ಅಂದಿನಿಂದ ಇಂದಿನ ವರೆಗೂ ಅವ್ಯಾಹತವಾಗಿ ಕರ್ನಾಟಕದ ರಾಜಧಾನಿ ಬೆಂಗಳೂರಿಗೆ ವಲಸೆ ಬರುತ್ತಲೇ ಇರುವ ಕಾರಣ ಅಂದು ಬೆಂಗಳೂರಿನ ಸುರಕ್ಷತೆಯಿಂದ ಕಾಯುವ ಸಲುವಾಗಿ ಅಂದಿನ ಬೆಂಗಳೂರಿನ ಹೊರವಲಯದ ನಾಲ್ಕು ಕಡೆಯಲ್ಲಿ ಕೆಂಪೇಗೌಡರು ಕಟ್ಟಿಸಿದ್ದ ಕಾವಲು ಗೋಪುರಗಳು ಇಂದು ಬೆಂಗಳೂರಿನ ಹೃದಯಭಾಗವಾಗಿ ಹೋಗಿ ಅಲ್ಲಿಂದ ಸುಮಾರು ಕಿಮೀ ಅಚೀಚೆ ಬೃಹದಾಕಾರವಾಗಿ ಬೆಳೆದು ಬಿಟ್ಟಿದೆ.
ಯಲಹಂಕ ಪ್ರಭು ಹಿರಿಯ ಅಥವಾ ಒಂದನೇ ಕೆಂಪೇಗೌಡರು ಹಾಗೂ ಕೆಂಪೇಗೌಡರ ಮೊಮ್ಮಗ ಮಾಗಡಿಯ ಕೆಂಪೇಗೌಡ ಅಥವಾ ಇಮ್ಮಡಿ ಕೆಂಪೇಗೌಡ. ದಾಖಲೆಗಳ ಪ್ರಕಾರ, ಗಂಗರ ಅವನೀತನ ಕಾಲದ ಶಾಸನ (ಕ್ರಿ.ಶ. 469-520)ದ ಪ್ರಕಾರ ಗಂಗರಸರು ಕೆಂಗೇರಿಯ ಬಳಿ ತಮ್ಮ ಬೆಂಗಾವಲು ಆಳುಗಳಿಗಾಗಿ ಬೆಂಗಾವಲಾಳೂರು ಎಂಬ ಊರನ್ನು ಕಟ್ಟಿದರೆಂಬ ಮಾಹಿತಿಯೂ ಇದೆ. ಹಾಗೇಯೇ ಯಲಹಂಕ ಪ್ರಭು ಕೆಂಪೇಗೌಡರ ತಾಯಿ ಲಿಂಗಮ್ಮಾಂಬೆಯ ಊರು ಕೊಡಿಗೇಹಳ್ಳಿಯ ಬಳಿ ಇದ್ದ ಬೆಂಗುಳೂರು ಎಂಬ ಮಾಹಿತಿಯೂ ಇದೆ
ಕೆಂಪೇಗೌಡರು ಬೆಂಗಳೂರನ್ನು ಕಟ್ಟಿದಾಗ ಈ ಊರಿನ ಹತ್ತಿರ ನೀರಿಗಾಗಿ ಯಾವುದೇ ನದಿ ಇಲ್ಲದಿದ್ದದ್ದನ್ನು ಮನಗಂಡು ಜನರ ಕೃಷಿ ಮತ್ತು ದೈನಂದಿನದ ಅನುಕೂಲಕ್ಕಾಗಿ ಎತ್ತರದ ಪ್ರದೇಶಗಳಿಂದ ತಗ್ಗಿಗೆ ನೀರು ಹರಿಯುವ ಪ್ರದೇಶಗಳನ್ನು ಗುರುತಿಸಿ ಅಲ್ಲಿ ನೂರಾರು ಕೆರೆ ಕಟ್ಟೆಗಳನ್ನು ನಿರ್ಮಿಸಿ, ಆ ಪ್ರದೇಶದಲ್ಲಿ ಸುರಿದ ನೀರು ಸರಾಗವಾಗಿ ಕೆರೆಯ ಕಡೆಗೆ ಹರಿಯಲೆಂದೇ ರಾಜಕಾಲುವೆಗಳನ್ನು ನಿರ್ಮಿಸಿ ಒಂದು ಕೆರೆ ತುಂಬಿ ಕೋಡಿ ಹರಿಯುತ್ತಲೇ, ಅದು ಅಲ್ಲಿಂದ ಮುಂದೆ ಇರುವ ತಗ್ಗಾದ ಕೆರೆಯ ಕಡೆಗೆ ಹರಿಯುವಂತೆ ಅತ್ಯಂತ ಸೈಸರ್ಗಿಕವಾಗಿ ನಿರ್ಮಾಣ ಮಾಡಿದ್ದರು.
ಹಾಗೆ ಆಂದು ನಿರ್ಮಿಸಿದ ಕೆರೆಗಳಲ್ಲಿ ಪ್ರಮುಖವಾದುವುಗಳೆಂದರೆ, ಧರ್ಮಾಂಬುಧಿ ಕೆರೆ, ಸಂಪಂಗೀ ಕೆರೆ,, ಕೆಂಪಾಂಬುಧಿ ಕೆರೆ, ಕಾರಂಜಿ ಕೆರೆ, ಚೆನ್ನಮ್ಮ ಕೆರೆ,ಶೂಲೆ ಕೆರೆ, ಅಕ್ಕಿ ತಿಮ್ಮನ ಹಳ್ಳಿ ಕೆರೆ,ಚಲ್ಲಘಟ್ಟ ಕೆರೆ, ಹಲಸೂರು ಕೆರೆ, ಗಂಧದಕೋಟಿ ಕೆರೆ,ಕೋರಮಂಗಲದ ಕೆರೆ, ಯಡೆಯೂರು ಕೆರೆ, ಲಾಲ್ಭಾಗ್ ಕೆರೆ, ನಾಗಶೆಟ್ಟಿಹಳ್ಳಿ ಕೆರೆ, ಹೆಬ್ಬಾಳ ಕೆರೆ, ಬೆಳ್ಳೆಂದೂರು ಕೆರೆ, ವರ್ತೂರು ಕೆರೆ ಹೀಗೆ ಹೇಳುತ್ತಾ ಹೋದರೆ ನೂರಾರು ಕೆರೆಗಳನ್ನು ಕಟ್ಟಿಸಿ ಅವುಗಳ ಮಧ್ಯೆ ಅತ್ಯಂತ ರಚನಾತ್ಮಕವಾಗಿ ಮತ್ತು ಉತ್ತಮವಾಗಿ ಯೋಜಿಸಲಾದ ಚಿಕ್ಕಪೇಟೆ ಮತ್ತು ದೊಡ್ಡಪೇಟೆಯನ್ನು ಕಟ್ಟಿ ಅದರ ಮಧ್ಯೆ ಅಯಾಯಾ ವ್ಯಾಪಾರ ಅನ್ವರ್ಥವಾಗಿ ಅಕ್ಕೀ ಪೇಟೆ, ಬಳೇ ಪೇಟೆ, ತರಗು ಪೇಟೆ, ಮಾಮೂಲು ಪೇಟೆ ಹೀಗೆ ಹತ್ತಾರು ವ್ಯಾಪಾರಿ ಬೀದಿಗಳನ್ನು ಕಟ್ಟಿಸಿ ಅವುಗಳ ಸುತ್ತ ಅತ್ಯಂತ ಚಂದದ ಬೆಂಗಳೂರನ್ನು ನಿರ್ಮಿಸಿದ್ದರು. ಇಂದಿಗೂ ಸಹಾ ಎಂತಹ ಕುಂಭದ್ರೋಣ ಮಳೆ ಸುರಿದರೂ ಈ ಪ್ರದೇಶಗಳು ಜಲಾವೃತವಾಗುವುದಿಲ್ಲ ಎನ್ನುವುದು ಗಮನಾರ್ಹ.
ವಲಸಿಗರು ಬೆಂಗಳೂರಿಗೆ ಬರುವುದು ಹೆಚ್ಚಾದಂತೆಲ್ಲಾ ಅವರೆಲ್ಲರಿಗೂ ವಸತಿಯನ್ನು ಕಲ್ಪಿಸಿಕೊಡುವ ಸಲುವಾಗಿ ಬೆಂಗಳೂರಿನ ಹೊರವಲಯದಲ್ಲಿದ್ದ ಅರಣ್ಯಗಳು ಒಂದೊಂದೇ ಸಮತಟ್ಟಾಗಿ ಬಡಾವಣೆಗಳಾಗಿ ಹೋದಾಗ ಸಹಜವಾಗಿ ಮಳೆಯ ಪ್ರಮಾಣವೂ ಕಡಿಮೆಯಾಗಿ ಅಲ್ಲಿದ್ದ ಕೆರೆಗಳು ಬತ್ತಿಹೋದದ್ದನ್ನೇ ನೆಪ ಮಾಡಿಕೊಂಡು ಅಭಿವೃದ್ಧಿಯ ಹೆಸರಿನಲ್ಲಿ ಒಂದೊಂದೇ ಕೆರೆಗಳನ್ನು ಮುಚ್ಚುತ್ತಾ, ರಾಜ ಕಾಲುವೆಗಳನ್ನು ಒತ್ತರಿಸಿಕೊಳ್ಳುತ್ತಾ, ನೋಡ ನೋಡುತ್ತಲೇ ನೂರಾರು ಕಟ್ಟಡಗಳು ತಲೆ ಎತ್ತಲಾರಂಭಿಸಿದವು.
ಹೀಗೆ ಮುಚ್ಚಲ್ಪಟ್ಟ ಕೆಲವು ಕೆರೆಗಳು ಈರೀತಿಯಾಗಿವೆ.
ಧರ್ಮಾಂಬುಧಿ ಕೆರೆ ಈಗ ಬೆಂಗಳೂರಿನ KSRTC & BTS ಬಸ್ ಸ್ಟ್ಯಾಂಡ್ ಆಗಿದ್ದರೆ, ಅದರ ಸಮೀಪವೇ ಇದ್ದ ಜಕ್ಕರಾಯನ ಕೆರೆ ಈಗ ಆಟದ ಮೈದಾನವಾಗಿದೆ. ಇನ್ನು ಸಂಪಂಗೀ ಕೆರೆ’ಪ್ರಸಕ್ತ ಕಂಠೀರವ ಕ್ರೀಂಡಾಂಗಣವಾಗಿದ್ದು ಅಲ್ಲಿ ಕೆರೆಯ ಕುರುಹಿಗಾಗಿ ಮತ್ತು ಧರ್ಮರಾಯನ ದೇವಾಸ್ಥಾನದ ಪೂಜಾ ಕೈಂಕರ್ಯಕ್ಕಾಗಿ ಒಂದು ಸಣ್ಣ ಕಲ್ಯಾಣಿಯನ್ನು ಉಳಿಸಿಕೊಳ್ಳಲಾಗಿದೆ. ಶೂಲೆ ಕೆರೆ ಈಗ ಫುಟ್ಬಾಲ್ ಕ್ರೀಂಡಾಂಗಣವಾದರೆ, ಅಕ್ಕಿ ತಿಮ್ಮನ ಹಳ್ಳಿ ಕೆರೆಯಲ್ಲೇ ಅಂತರಾಷ್ಟ್ರೀಯ ಹಾಕಿ ಆಟದ ಮೈದಾನ ಮತ್ತು ಸಾಘ್ಟ್ವೇರ್ ಕಂಪನಿಯ ಕಟ್ಟಡಗಳಿವೆ. ಚಲ್ಲಘಟ್ಟ ಕೆರೆಯನ್ನು ಮುಚ್ಚಿ ಗಾಲ್ಫ್ ಆಟದ ಮೈದಾನವನ್ನು ಮಾಡಿಕೊಂಡರೆ, ಈಜೀಪುರ ಮತ್ತು ಕೋರಮಂಗಲದ ಕೆರೆಯ ಮೇಲೆಯೇ ನ್ಯಾಷಿನಲ್ ಗೇಮ್ಸ್ ಕ್ರೀಡಾ ಸಂಕೀರ್ಣ ತಲೆ ಎತ್ತಿದೆ. ಸಿದ್ಧಿಕಟ್ಟೆ ಕೆರೆಯನ್ನು ಮುಚ್ಚಿಯೇ ಕೃಷ್ಣರಾಜಾಮಾರುಕಟ್ಟೆಯನ್ನು ಕಟ್ಟಿದ್ದರೆ, ಬಹುತೇಕರಿಗೆ ಮರತೇ ಹೋಗಿರುವ ಕಾರಂಜಿ ಕೆರೆಯೇ ಈಗ ಗಾಂಧಿ ಬಜಾರ್ ಎಂಬ ಬಡಾವಣೆಯಾಗಿದೆ. ಕೆಂಪಾಬುಧಿ ಕೆರೆಯ ನೀರು ಈಗ ಬೆಂಗಳೂರಿನ ಕಲುಶಿತ ನೀರಿನ ಸಂಸ್ಕರಣಾ ಕೇಂದ್ರವಾಗಿ ಮಾರ್ಪಟ್ಟ ಕಾರಣ, ಆ ನೀರು ಕುಡಿಯಲು ಅನುಪಯೋಗವಾಗಿದೆ. ನಾಗಶೆಟ್ಟಿಹಳ್ಳಿ ಕೆರೆಯ ಮೇಲೆಯೇ ಬಾಹ್ಯಾಕಾಶ ಇಲಾಖೆಯ ಇಸ್ರೋ ಇದ್ದರೆ, ಕಾಡುಗೊಂಡನ ಹಳ್ಳಿ ಕೆರೆಯನ್ನು ಮುಚ್ಚಿ ಅಂಬೇಡ್ಕರ್ ಮೆಡಿಕಲ್ ಕಾಲೇಜು ಕಟ್ಟಲಾಗಿದೆ. ದೊಮ್ಮಲೂರು ಕೆರೆಯನ್ನು ಮುಚ್ಚಿದ BDA ಅಲ್ಲಿ ಅಲ್ಲಿ ವಾಸಿಸಲು ಯೋಗ್ಯವಾದ ಬಡಾವಣೆ ನಿರ್ಮಿಸಿದರೆ, ಮಿಲ್ಲರ್ಸ್ ಕೆರೆಯೇ ಗುರುನಾನಕ್ ಭವನ ಮತ್ತು ಒಳಾಂಗಣ ಬ್ಯಾಡ್ಮಿಂಟನ್ ಕ್ರೀಡಾಂಗಣವಾಗಿದೆ. ಸುಭಾಷ್ ನಗರ ಕೆರೆ, ಕುರುಬರ ಹಳ್ಳಿ ಕೆರೆ, ಕೋಡಿ ಹಳ್ಳಿ ಕೆರೆ, ಮಾರೇನ ಹಳ್ಳಿ ಕೆರೆ, ಸಿನಿವೈಗಳು ಕೆರೆ ಇವೆಲ್ಲವುಗಳನ್ನು ಮುಚ್ಚಿಯೇ ಬಡಾವಣೆಗಳನ್ನು ನಿರ್ಮಾಣ ಮಾಡಿದ್ದಾರೆ. ಶಿವನ ಹಳ್ಳಿ ಕೆರೆ ಮುಚ್ಚಿ ಆಟದ ಮೈದಾನ ಮತ್ತು ಬಸ್ ನಿಲ್ಡಾಣ ಕಟ್ಟಿದ್ದರೆ, ಪುಟ್ಟೇನ ಹಳ್ಳಿ ಕೆರೆ ಜೆ.ಪಿ.ನಗರದ 6ನೇ ಹಂತದ ಬಡಾವಣೆಯಾಗಿದೆ. ಇನ್ನು ಚೆನ್ನಮ್ಮನ ಕೆರೆಯ ಒಂದು ಭಾಗ ಬನಶಂಕರಿ 2 ನೇ ಹಂತದ ಬಡಾವಣೆ ಆದರೆ, ಮತ್ತೊಂದು ಭಾಗ ರುಧ್ರಭೂಮಿಯಾಗಿ ಮಾರ್ಪಾಟಾಗಿ ಹೋಗಿದೆ.
ಹೀಗೆ ದಿನೇ ದಿನೇ ಬೃಹದಾಕಾರವಾಗಿ ಬೆಳೆಯುತ್ತಲೇ ಹೋದ ಬೆಂಗಳೂರಿನ ಮೂಲ ಒಳಚರಂಡಿ ವ್ಯವಸ್ಥೆಯನ್ನು 1922 ರಲ್ಲಿ ಅಂದು ಇದ್ದ ನಗರ ಮತ್ತು ಜನಸಂದಣಿಯ ಅಗತ್ಯಕ್ಕೆ ತಕ್ಕಂತೆ ಹಳೆಯ ಬೆಂಗಳೂರಿನ ಹೃದಯ ಭಾಗಕ್ಕೆ ಆಗುವಂತೆ ನಿರ್ಮಿಸಲಾಯಿತು. ಮತ್ತೆ 1950 ರಲ್ಲಿ ಅದನ್ನು ಮತ್ತಷ್ಟು ವಿಸ್ತರಿಸಿದರೆ, 1960ರ ದಶಕದಲ್ಲಿ BWSSB ಸಂಸ್ಥೆಯನ್ನು ಹುಟ್ಟುಹಾಕಿ ಅದರ ಮೂಲಕ ಸುವ್ಯವಸ್ಥೆಯ ಒಳಚರಂಡಿ ನಿರ್ಮಾಣಕ್ಕೆ ಒತ್ತು ನೀಡಿದ್ದಲ್ಲದೇ, ಬೆಂಗಳೂರಿನ ಸಮಸ್ತ ತ್ರಾಜ್ಯದ ನೀರನ್ನು ಅಂದು ಬೆಂಗಳೂರಿನ ಹೊರವಲಯದಲ್ಲಿ ಹರಿಯುತ್ತಿದ್ದ ವೃಷಭಾವತಿ ನದಿಗೆ ಬಿಟ್ಟರೆ ಇನ್ನು ಕೋರಮಂಗಲ ಕೆರೆ, ಚೆಲ್ಲಘಟ್ಟ ಕೆರೆ, ಮಡಿವಾಳ ಕೆರೆ, ಕೆಂಪಾಂಬುದಿ ಕೆರೆ ಮತ್ತು ಹೆಬ್ಬಾಳದ ಕೆರೆಗಳಲ್ಲಿ ಚಂಡೆಇಯ ನೀರನ್ನು ಸಂಸ್ಕರಿಸಿ ಬಿಡುವ ಮೂಲಕ ಬೆಂಗಳೂರಿನ ಅವನತಿಗೆ ಮೊತ್ತ ಮೊದಲ ಷರಾ ಬರೆದರು.
ಇನ್ನು 90ರ ದಶಕದಲ್ಲಿ ನರಸಿಂಹ ರಾವ್ ಮತ್ತು ಮನಮೋಹನ್ ಸಿಂಗ್ ಕಾಲದಲ್ಲಿ ಜಾಗಗೀಕವಾಗಿ ಬಹುರಾಷ್ಟ್ರೀಯ ಕಂಪನಿಗಳನ್ನು ಕೆಂಪುಹಾಸುಗಳ ಮೂಲಕ ಹಾಸಿದಾಗ. ಬೆಂಗಳೂರಿನ ಉತ್ತಮ ಶಿಕ್ಷಣ ಸಂಸ್ಥೆಗಳ ಮೂಲಕ ಅತ್ಯಂತ ಬುದ್ಧಿವಂತ ಇಂಜಿನಿಯರ್ಗಳು ಅತ್ಯಂತ ಕಡಿಮೆ ಸಂಬಳಕ್ಕೆ ಕೆಲಸ ಮಾಡಲು ಸಿಗುತ್ತಾರೆ ಎಂಬ ನೆಪದಿಂದ ಒಂದೊಂದೇ ಬಹುರಾಷ್ಟ್ರೀಯ ಕಂಪನಿಗಳು ಬೆಂಗಳೂರಿನಲ್ಲಿ ನಿಧಾನವಾಗಿ ಕಛೇರಿಗಳನ್ನು ಆರಂಭಿಸಿ 2000 ಇಸ್ವಿಯ ಹೊತ್ತಿಗೆ ಅವುಗಳ ಸಂಖ್ಯೆ 1000 ಮುಟ್ಟಿತ್ತು. ಬೆಂಗಳೂರನ್ನು ಭಾರತದ ಸಿಲಿಕಾನ್ ವ್ಯಾಲಿ ಯನ್ನಾಗಿ ಮಾಡಬೇಕೆಂದು ವೈಕುಂಠ ಬಾಳಿಗಾರವರು ಕಂಡಿದ್ದ ಕನಸನ್ನು ನನಸು ಮಾಡುವ ಸಲುವಾಗಿ 1990ರ ದಶಕದಲ್ಲಿ ಬೆಂಗಳೂರು ಮತ್ತು ಹೊಸೂರು ಮಧ್ಯದಲ್ಲಿ ಕರ್ನಾಟಕ ಸರ್ಕಾರ ಎಲೆಕ್ಟ್ರಾನಿಕ್ಸ್ ಸಿಟಿ ಆರಂಭಿಸಿ ಅಲ್ಲಿ ಎಲೆಕ್ಟ್ರಾನಿಕ್ಸ್ ಕಂಪನಿಗಳು ಮತ್ತು ಐಟಿ ಟೆಕ್ ಪಾರ್ಕ್‌ಗಳನ್ನು ಆರಂಭಿಸಿದರೆ, ಜನವರಿ 1994 ರಲ್ಲಿ ಭಾರತ ಮತ್ತು ಸಿಂಗಾಪುರದ ನಡುವಿನ ಜಂಟಿ ಉದ್ಯಮದ ಪರಿಣಾಮವಾಗಿ ಬೆಂಗಳೂರಿನ ಮತ್ತೊಂದು ಹೊರವಲಯದ ವೈಟ್‌ಫೀಲ್ಡ್ ನಲ್ಲಿ ITPL ಎಂಬ ಟೆಕ್ ಪಾರ್ಕ್ ಆರಂಭಿಸವ ಮೂಲಕ ಬೆಂದಕಾಳುರು ಎಂಬ ಬೆಂಗಳೂರು ಭಾರತದ ಸಿಲಿಕಾನ್ ಸಿಟಿ ಎಂದೇ ಖ್ಯಾತಿ ಪಡೆಯಿತು. ರಾಜ್ಯದ 16 ನೇ ಮುಖ್ಯಮಂತ್ರಿ ಯಾಗಿ ಅಧಿಕಾರಕ್ಕೆ ಬಂದ ಶ್ರೀ ಎಸ್. ಎಂ. ಕೃಷ್ಣರವರು ತಮ್ಮ ಅಧಿಕಾರಾವಧಿಯಾದ 1999 ರಿಂದ 2004ರಲ್ಲಿ ಐಟಿ ಮತ್ತು ಬಿಟಿ ಕಂಪನಿಗಳಿಗೆ ಮತ್ತಷ್ಟು ಒತ್ತು ನೀಡಿದ ಪರಿಣಾಮವಾಗಿ ಕೋರಮಂಗಲ, ಇಂದಿರಾನಗರ, ನಾಗಾವಾರ, ಜಕ್ಕೂರು, ಸರ್ಜಾಪುರ, ಮಾರತ್ತಹಳ್ಳಿ, ವೈಟ್‌ಫೀಲ್ಡ್ ಸುತ್ತಮುತ್ತಲೂ ಲಕ್ಷಾಂತರ ಐಟಿ ಕಂಪನಿಗಳು ನಾಯಿ ಕೊಡೆಯಂತೆ ತಲೆ ಎತ್ತಿದವು.
ಹೀಗೆ ಆರಂಭಗೊಂಡ ಐಟಿ ಬಿಟಿ ಕಂಪನಿಗಳಲ್ಲಿ ಕೆಲಸ ಮಾಡಲು ನೆರರಾಜ್ಯಗಳಿಂದ ಬಂದ ಟಿಕ್ಕಿಗಳಿಗೆ ಅನುಕೂಲವಾಗಲೆಂದೇ ಅವರ ಕಛೇರಿಯ ಪಕ್ಕದಲ್ಲೇ ವಸತಿ ಸಂಕೀರ್ಣಗಳನ್ನು ಕಟ್ಟಲು ಆರಂಭಿಸಿದ್ದೇ ತಡಾ ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್ ಉದ್ಯಮ ಧಿಗ್ಗನೇ ತಲೆ ಎತ್ತಿತು. ನೋಡ ನೋಡುತ್ತಿದ್ದಂತೆಯೇ ಈ ಪ್ರದೇಶದಲ್ಲಿ ಇದ್ದ ಕೃಷಿ ಚಟುವಟಿಕೆಯ ಭೂಮಿಯೆಲ್ಲಾ ಬಡಾವಣೆಗಳಾಗಿ, ವಾಣಿಜ್ಯ ಸಂಕೀರ್ಣಗಳನ್ನಾಗಿ ಮಾಡಿಸಲು ನೂರಾರು ರಿಯಲ್ ಎಸ್ಟೇಟ್ ಏಜೆಂಟ್ ಅರ್ಥಾನ್ ಬ್ರೋಕರ್ಗಳು ಹುಟ್ಟಿಕೊಂಡಿದ್ದಲ್ಲದೇ ಕೆಲವೇ ಕೆಲವು ದಿನಗಳಲ್ಲಿ ಅವರೆಲ್ಲರೂ ಕೋಟ್ಯಾಧಿಪತಿಗಳಾಗಿ ಅವರಲ್ಲಿಂದು ಅನೇಕರು ಕರ್ನಾಟಕ ರಾಜ್ಯದ ಶಾಸಕ, ಸಾಂಸದರಾಗಿದ್ದರೆ, ಇನ್ನೂ ಕೆಲವರು ರಾಜ್ಯ ಮತ್ತು ಕೇಂದ್ರ ಸರ್ಕಾರದಲ್ಲೂ ಮಂತ್ರಿಗಳಾಗಿರುವುದು ವಿಪರ್ಯಾಸವೇ ಸರಿ.
ಯಾವಾಗ ರಿಯಲ್ ಎಸ್ಟೇಟ್ ಏಜಂಟರುಗಳು ರಾಜಕಾರಣಿಗಳಾಗಿ ಮಾರ್ಪಟ್ಟರೋ, ಕಂದಾಯ ಇಲಾಖೆಯ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ಇದ್ದ ಬದ್ದ ಒಣಗಿದ್ದ ಕೆರೆಗಳನ್ನೆಲ್ಲಾ ಮುಚ್ಚಿ, ರಾಜ ಕಾಲುವೆಗಳನ್ನು ಒತ್ತವರಿ ಮಾಡಿ ನೋಡ ನೋಡುತ್ತಿದ್ದಂತೆಯೇ ಗಗನಚುಂಬಿ ಕಟ್ಟಡಗಳನ್ನು ಕಟ್ಟಿ ಅವುಗಳನ್ನು ಬಹುರಾಷ್ಟ್ರೀಯ ಕಂಪನಿಗಳಿಗೆ ಮತ್ತು ಅವರ ಸಿಬ್ಬಂಧಿವರ್ಗಕ್ಕೆ ಲಕ್ಷಾಂತರ ರೂಪಾಯಿಗಳಿಗೆ ಬಾಡಿಗೆ ಕೊಡುವ ಮೂಲಕ ಕೋಟ್ಯಾಧಿಪತಿಗಳಾಗಿ ಹೋದರು. ಹೀಗೆ ರಾಜ್ಯವನ್ನಾಳುವ ಪ್ರಜಾಪ್ರತಿನಿದಿಗಳದ್ದೇ ಕಟ್ಟಡಗಳು ಹಾಗಾಗಿ ಮುಂದೆ ಯಾವುದೇ ರೀತಿಯ ಕಾನೂನು ತೊಡಕುಗಳು ಆಗುವುದಿಲ್ಲಾ ಎಂದು ಭಾವಿಸಿದ ಬಹುತೇಕ ಕಂಪನಿಗಳು ಮತ್ತು ನಿವಾಸಿಗಳು ಆ ಕಟ್ಟಡಗಳು ಕೆರೆ ಅಥವಾ ರಾಜಕಾಲುವೆ ಒತ್ತರಿಸಿದ್ದೇ ಇಲ್ಲವೇ? ಎಂವುದನ್ನು ಪರೀಕ್ಷಿಸದೇ ಕೊಂಡು ಕೊಂಡಿದ್ದಲ್ಲದೇ ಕಳೆದ ಎರಡು ದಶಕಗಳಿಂದಲೂ ಅಲ್ಲೇ ತಮ್ಮ ವ್ಯಾಪಾರ ಮತ್ತು ವ್ಯವಕಾರ ಮಾಡುತ್ತಾ ಲಕ್ಷಾಂತರ ಕೋಟಿ ರೂಪಾಯಿಗಳಷ್ಟು ಆದಾಯ ಗಳಿಸಿದರು.
ಬೆಂಗಳೂರಿನ ಖ್ಯಾತ ರಿಯಲ್ ಎಸ್ಟೇಟ್ ಕಂಪಿನಿಯಾದ ಎಂಬೆಸಿ ಗ್ರೂಪಿನಲ್ಲಿ ಕೆ.ಜೆ. ಜಾರ್ಜ್ ಪಾಲುದಾರರಾಗಿದ್ದರೆ, 1986 ರಲ್ಲಿ ಶ್ರೀ ಜೈಶಂಕರ್ ಆರಂಭಿಸಿದ ಬ್ರಿಗೇಡ್ ಗ್ರೂಪಿನಲ್ಲಿ ಅನೇಕ ರಾಜಕಾರಣಿಗಳು ಬೇನಾಮಿ ಪಾಲುದಾರರಾಗಿದ್ದಾರೆ. ಶೋಭಾ ಕಂಪನಿಯ ಜೊತೆಯಲ್ಲಿ ಡಿ.ಕೆ.ಶಿವಕುಮಾರ್ ಅವರ ಪಾಲುದಾರಿಕೆ ಇದೆ. ಭಾಗಮನೆ ಜೊತೆ ಎಂ.ಟಿ.ಬಿ. ನಾಗರಾಜ್ ಪಾಲುದಾರಿಕೆ ಹೊಂದಿದ್ದರೆ, ಬೆಳ್ಳಂದೂರಿನ ಇಕೋ ಸ್ಪೇಸ್ ಮತ್ತು ಇಕೋ ವರ್ಲ್ಡ್ ಅಲ್ಲದೇ ವೈಟ್ ಫೀಲ್ಡಿನ ನೂರಾರು ಕಂಪನಿಗಳಿಗೆ ಕುಪೇಂದ್ರ ರೆಡ್ಡಿ ಒಡೆಯರಾಗಿದ್ದಾರೆ. ಇದೇ ಕುಪೇಂದ್ರ ರೆಡ್ಡಿಯೊಂದಿಗೆ ದೇವೇಗೌಡರ ಕುಟುಂಬದ ಬೇನಾಮಿ ಅಸ್ತಿ ಇದೆ ಎಂದೂ ಬಲ್ಲವರು ಹೇಳುತ್ತಾರೆ. ಸಾಂಸದ ಪಿ.ಸಿ.ಮೋಹನ್, ಮಂತ್ರಿ ಅಶೋಕ್ ಮಾಜಿ ಮಂತ್ರಿಗಳಾಗಿದ್ದ ಲೇಔಟ್ ಕೃಷ್ಣಪ್ಪ. ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಮಾಜೀ ಶಾಸಕರಾದ ಮಾಲೂರಿನ ಕೃಷ್ಣಯ್ಯ ಶೆಟ್ಟಿ, ಅಶೋಕ್ ಖೇಣಿ, ಶಾಸಕರಾದ ಹ್ಯಾರೀಸ್ ಮತ್ತವನ ಮಗ ನಲ್ಪಾಡ್ ಕೂಡಾ ರಿಯಲ್ ಎಸ್ಟೇಟ್ ಮಾಡುವ ಪ್ರಮುಖರಾದರೆ, ಕುಮಾರಸ್ವಾಮಿ, ಯಡೆಯೂರಪ್ಪ, ಸಿದ್ದರಾಮಯ್ಯ ಮುಂತಾದ ಮಾಜಿ ಮುಖ್ಯಮಂತ್ರಿಗಳೂ ಸಹಾ ಪತ್ಯಕ್ಷವಾಗಿಯೋ ಇಲ್ಲವೇ ಬೇನಾಮೀ ಹೆಸರಿನಲ್ಲೋ ರಿಯಲ್ ಎಸ್ಟೇಟ್ ಹಣದ ರುಚಿ ನೋಡಿರುವಾಗ ಇನ್ನೂ ನಾವೇಕೆ ಮಾಡಬಾರದು? ಎಂದು ಅವರ ಹಿಂಬಾಲಕರಾದ ನೂರಾರು ರಾಜಕಾರಣಿಗಳು ಅದೇ ಹಾದಿಯಲ್ಲಿದ್ದಾರೆ.
ಕಳೆದ ಒಂದು ಶತಮಾನದಲ್ಲಿ ಕಂಡೂ ಕೇಳರಿಯಷ್ಟು ಮಳೆ ಬೆಂಗಳೂರಿನಲ್ಲಿ ಏಕಾಏಕಿ ಸುರಿದಾಗ, ನೈಸರ್ಗಿಕವಾಗಿ ನಿರ್ಮಾಣಗೊಂಡಿದ್ದ ನಗರದ ಪ್ರಕಾರ ಮಳೆಯ ನೀರು ಕೆರೆಗಳತ್ತ ಹರಿಯತೊಡಗಿದಾಗ ಸಹಜವಾಗಿ ಕೆರೆ ಮುಚ್ಚಿ ಹೋಗಿಯೋ ಇಲ್ಲವೇ ರಾಜಕಾಲುವೆ ಒತ್ತರಿಸಲ್ಪಟ್ಟ ಕಾರಣ ಅಲ್ಲಿ ನೀರು ನಿಂತಿದೆ. ಇದನ್ನೇ ಮುಂದು ಮಾಡಿಕೊಂಡ ಬೆಂಗಳೂರಿನ ಹಲವಾರು ಕಂಪನಿಗಳು ನಾವು ಬೆಂಗಳೂರನ್ನು ಬಿಟ್ಟು ಹೋಗುತ್ತೇವೆ ಎಂದು ಸರ್ಕಾರದ ಮೇಲೆ ಒತ್ತಡ ಹಾಕುತ್ತಿರುವುದು ನಿಜಕ್ಕೂ ಹಾಯಾಸ್ಪದ ಎನಿಸುತ್ತದೆ. ನೆರೆ ಹಾವಳಿ , ಕಾಳ್ಗಿಚ್ಚು ಮುಂತಾದ ಪ್ರಾಕೃತಿಕ ವಿಕೋಪಗಳು ಪ್ರಪಂಚದ ಯಾವುದೇ ಭಾಗಗಳಲ್ಲಿ ಆದರೂ ಪರಿಸ್ಥಿತಿ ಇದಕ್ಕಿಂತಲೂ ಭಿನ್ನವಾಗಿ ಏನೂ ಇರುವುದಿಲ್ಲ ಅಲ್ಲವೇ?
ಪ್ರತಿ ವರ್ಷ ಮಳೆಗಾಲದ ಸಮಯದಲ್ಲಿ ಮುಂಬೈನಲ್ಲಿ ಮುಳುಗಿ ಹೋದಾಗ, ಒರಿಸ್ಸಾ, ಅಸ್ಸಾಂನಲ್ಲಿ ಪ್ರವಾಹವಾದಾಗ, ಅಷ್ಟೇ ಏಕೇ ಚನ್ನೈ ಮಳೆಯಲ್ಲಿ ಮುಳುಗಿ ಹೋದಾಗ ಇದೇ ಕಂಪನಿಗಳು pray for Chennai, pray for Odisha, pray for… ಎಂದು ಬೊಬ್ಬೆ ಹೊಡೆಯುತ್ತಾ ತಮ್ಮ CSR fund ಮೂಲಕ ಅಗತ್ಯ ವಸ್ತುಗಳನ್ನು ಅಲ್ಲಿಗೆ ಕಳಿಸಿಕೊಡುವುದಲ್ಲದೇ ತಮ್ಮ ಕಂಪನಿಯಲ್ಲಿ ಕೆಲಸ ಮಾಡುವರಿಗೂ ಅಂತಹವರಿಗೆ ಮನಬಿಚ್ಚಿ ದಾನ ಮಾಡುವಂತೆ ಈ-ಮೇಲ್ ಕಳುಹಿಸುತ್ತಾರೆ. ಆದರೆ ಇಷ್ಟು ವರ್ಷಗಳ ಕಾಲ ಬೆಂಗಳೂರಿನಲ್ಲೇ ಇದ್ದು, ಕೋಟ್ಯಾಂತರ ಹಣವನ್ನು ಗಳಿಸಿಯೂ, ಕನ್ನಡ್ ಗೊತ್ತಿಲ್ಲಾ ಅಂತಾನೇ ಬೆಂಗಳೂರಿನ ಅಭಿವೃದ್ಧಿಗಾಗಿ ಒಂದು ನಯಾ ಪೈಸೆಯನ್ನೂ ಖರ್ಚು ಮಾಡದ ಕಂಪನಿಗಳ ಈ ವರಾತ ನೋಡಲು ಅಸಹನೀಯವೆನಿಸುತ್ತದೆ.
ಬೆರಳು ತುದಿಯಿಂದ ಆರ್ಡರ್ ಮಾಡಿದ 20 ನಿಮಿಷಗಳೊಳಗೇ ಮನೆಗೆ ಸಾಮಾನುಗಳನ್ನು ತಂದು ಕೊಡುವಂತಹ ವ್ಯವಸ್ಥೆಯನ್ನು ಮಾಡಬಲ್ಲ ಇಂತಹ ಟೆಕ್ಕಿಗಳು ಅನಾವಶ್ಯಕವಾಗಿ ಬೆಂಗಳೂರನ್ನು ಬೈಯ್ಯುತ್ತಲೇ ಸಮಯ ವ್ಯರ್ಥ ಮಾಡುವ ಬದಲು ಸ್ವಲ್ಪ ಬೆಂಗಳೂರಿನ ಸಮಸ್ಯೆಗಳನ್ನು ಪರಿಹರಿಸಲು ಸಹಕಾರ ನೀಡಬಹುದಲ್ಲವೇ? Save Chennai, Mumbai, Assam ಎನ್ನುವಂತಹ ಮನಸ್ಸಿಗೆ Save Bangalore ಎನ್ನುವ ಮನೋಭಾವನೆಯೇ ಮೂಡದಿರುವುದು ಅಚ್ಚರಿಯ ಸಂಗತಿಯಾಗಿದೆ.
ಈ ರೀತಿಯಾಗಿ ಹೊಟ್ಟೆಪಾಡಿಗಾಗಿ ಪರ ಊರಿನಿಂದ ಇಲ್ಲಿ ಕೆಲಸ ಮಾಡಲು ಪರ ರಾಜ್ಯ ಮತ್ತು ವಿದೇಶಗಳಿಂದ ಹೀಗೆ ಬಂದವರಿಂದಲೇ ನಮ್ಮ ಕನ್ನಡಿಗರ ಸಂಸ್ಕೃತಿ, ಸಂಸ್ಕಾರ ಮತ್ತು ಭಾಷೆಗಳಿಗೆ ಕುತ್ತು ಬಂದಿರುವುದು ನಿಜಕ್ಕೂ ದುಃಖಕರವಾಗಿದೆ. When you are in Rom be like a Roman ಎನ್ನುವ ಇವರೇ ಸ್ಥಳೀಯರ ಭಾವನೆಗಳೊಂದಿಗೆ ಮತ್ತು ಸ್ಥಳೀಯ ಸಮಸ್ಯೆಗಳಿಗೆ ಸ್ಪಂದಿಸದೇ ಹೋದಲ್ಲಿ ಇಂತಹ ಕಲ್ಲು ಹೃದಯದವರು ಇಲ್ಲಿ ಇದ್ದರೆಷ್ಟು ಬಿಟ್ಟರಷ್ಟು ಅಲ್ಲವೇ?
ಅಷ್ಟು ಕೋಟ್ಯಾಂತಹ ಹಣವನ್ನು ಖರ್ಚು ಮಾಡಿ ಕಂಪನಿಗಳನ್ನು ಆರಂಭಿಸಿರುವವರು, ಲಕ್ಷ ಲಕ್ಷ ಹಣ ತೆತ್ತು ಕೊಂಡ ಮನೆಗಳನ್ನು ಯಕಚ್ಚಿತ್ ಒಂದು ಕುಂಭದ್ರೋಣ ಮಳೆಗಾಗಿ ಬಿಟ್ಟು ಹೋಗುತ್ತೇವೆ ಎನ್ನುವುದನ್ನು ಯಾರಾದರೂ ನಂಬಲು ಸಾದ್ಯವೇ? ಸಾವಿರದ ಮನೆಯಿಂದ ಸಾಸಿವೆ ಕಾಳು ತಾ ಎಂದು ಬುದ್ಧ ಹೇಳಿದಂತೆ ಪ್ರಪಂಚದಲ್ಲಿ ಯಾವುದೇ ಪ್ರಾಕೃತಿಕ ವಿಕೋಪಕ್ಕೆ ಒಳಗಾಗದೇ ಇರುವಂತಹ ಯಾವ ಪ್ರದೇಶವಿದೆ ಎಂದು ತಿಳಿಸಿದಲ್ಲಿ, ನಾವೂ ಸಹಾ ಅವರೊಂದಿಗೆ ಹೋಗಬಹುದು ಅಲ್ವೇ?
ಕನ್ನಡಿಗರು ವಿಶಾಲ ಹೃದಯದವರು ಅಂತಾ ನಮ್ಮ ಬುಡಕ್ಕೇ ಕೈ ಹಾಕಿದಾಗ, ಗಾಂಚಲಿ ಬಿಟ್ಟು ಮುಚ್ಕೊಂಡ್ ಕನ್ನಡಿಗರೊಂದಿಗೆ ಕೈ ಜೋಡಿಸಿ ಸಮಸ್ಯೆಗಳನ್ನು ಪರಿಹರಿಸಿ. ಅದು ಅಗೋದಿಲ್ಲಾ ಅಂದ್ರೇ, ನವರಂಧ್ರಗಳನ್ನೂ ಮುಚ್ಕೊಂಡ್ ನಿಮ್ಮೂರಿಗೆ ಗಂಟು ಮೂಟೆ ಕಟ್ಟಿ ಎನ್ನದೇ ವಿಧಿ ಇಲ್ಲಾ ಅಲ್ವೇ? ತಾಳ್ಮೆಗೂ ಒಂದು ಮಿತಿ ಇರುತ್ತದೆ.
ಏನಂತೀರೀ?
ನಿಮ್ಮವನೇ ಉಮಾಸುತ
A very good article. People who are new to Bangalore and who are from Bangalore/ or people settled in Bangalore , all Kannadigas must read and know about what was Bangalore ? What is the Bangalore in which they are living ? Who are all responsible for this situation today ? and all those who came to Bangalore for living/ earning/ making money and wealth must read this article.
LikeLiked by 1 person
ಧನ್ಯೋಸ್ಮಿ
LikeLike
Good one Shreekanta avare
LikeLiked by 1 person