ನಮ್ಮ ಸನಾತನ ಧರ್ಮದಲ್ಲಿ ಗುರುಗಳ ಪಾತ್ರ ಅತ್ಯಂತ ಮಹತ್ವದ್ದಾಗಿರುತ್ತದೆ. ಅದರಲ್ಲೂ ಅರಿಷಡ್ವರ್ಗಗಳನ್ನು ಮೀರಿ ಸನ್ಯಾಸತ್ವದ ದೀಕ್ಷೆಯನ್ನು ತೆಗೆದುಕೊಂಡು ಅದರ ನಿಷ್ಠೆ ಮತ್ತು ನಿಯಮಗಳ ಅನುಸಾರ ಮಾಡುತ್ತಾ ಸೌಮ್ಯವಾಗಿ ಧರ್ಮ ಕಾರ್ಯ ಮಾಡುವುದು ನಿಜಕ್ಕೂ ಕಷ್ಟಕರವೇ ಸರಿ. ಆದರೆ ಇಲ್ಲೊಬ್ಬ ಸ್ವಾಮಿಗಳು ಬಾಲ್ಯದಿಂದ ಹಿಡಿದು ತಮ್ಮ ಅಂತಿಮ ದಿನಗಳವರೆಗೂ ಇವೆಲ್ಲಾ ಕಟ್ಟು ಪಾಡುಗಳನ್ನು ಮೀರಿ ತಾವು ನಂಬಿದ್ದ ಧರ್ಮ ಮತ್ತು ಸಿದ್ಧಾಂತಕ್ಕೆ ಧಕ್ಕೆ ಆಗಿದೆ ಎನಿಸಿದಾಗಲೇಲ್ಲಾ ಬಂಡಾಯದ ರೀತಿ ಸೆಟೆದುದ್ದು ಕ್ರಾಂತಿಕಾರಿ ಸ್ವಾಮಿಗಳು ಎಂದೇ ಹೆಸರಾಗಿದ್ದ, ಪಶ್ಚಿಮ್ನಾಯ ದ್ವಾರಕಾ ಮತ್ತು ಉತ್ತರಾಮ್ನಾಯ ಜ್ಯೋತಿರ್ಮಠದ ಅಧಿಪತಿಗಳಾದ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ಸ್ವರೂಪಾನಂದ ಸರಸ್ವತೀ ಮಹಾರಾಜರು ಪಿತೃಪಕ್ಷದ ಮೊದಲನೇ ದಿನವಾದ 11.09.2022ರ ಮಧ್ಯಾಹ್ನ ವಯೋಸಜವಾಗಿ ತಮ್ಮ 99ನೇ ವಯಸ್ಸಿನಲ್ಲಿ, ಮಧ್ಯಪ್ರದೇಶದ ನರಸಿಂಗ್‌ಪುರ ಜಿಲ್ಲೆಯ ಪರಮಹಂಸಿ ಗಂಗಾ ಆಶ್ರಮದಲ್ಲಿ ನಿಧನರಾಗಿರುವುದು ನಿಜಕ್ಕೂ ದುಃಖಕರವಾದ ವಿಷಯವಾಗಿದೆ.
ಮಧ್ಯಪ್ರದೇಶದ ಸಿಯೋನಿ ಜಿಲ್ಲೆಯ ಜಬಲ್‌ಪುರ ಸಮೀಪದ ದಿಘೋರಿ ಗ್ರಾಮದ ಶ್ರೀಯುತ ಧನಪತಿ ಉಪಾಧ್ಯಾಯ ಮತ್ತು ಶ್ರೀಮತಿ ಗಿರಿಜಾ ದೇವಿ ಎಂಬ ದಂಪತಿಗಳ ಸಾಂಪ್ರದಾಯಿಕ ಕುಂಟುಂಬದಲ್ಲಿ ಸೆಪ್ಟೆಂಬರ್ 2, 1924ರಂದು ಜನಿಸಿದ ಪುತ್ರರಿಗೆ ಪೋತಿರಾಮ್ ಉಪಾಧ್ಯಾಯ ಎಂದು ನಾಮಕರಣ ಮಾಡುತ್ತಾರೆ. ಆ ಬಾಲಕ ಕೇವಲ 9 ವರ್ಷದಲ್ಲೇ ತಮ್ಮ ಮನೆಯನ್ನು ತೊರೆದು ಧಾರ್ಮಿಕ ತೀರ್ಥಯಾತ್ರೆಗೆ ಹೊರಟು, ಹಿಂದೂಗಳ ಶ್ರದ್ಧಾಕೇಂದ್ರವಾದ ಕಾಶಿಯನ್ನು ತಲುಪಿ ಅಲ್ಲಿಯ ಕರಪಾತ್ರಿ ಸ್ವಾಮಿಗಳಲ್ಲಿ ಶಿಷ್ಯತ್ವದಡಿಯಲ್ಲಿ ವೇದ, ವೇದಾಂತದ ಜೊತೆ ಹಿಂದೂ ಧರ್ಮ ಗ್ರಂಥಗಳ ಅಧ್ಯಯನ ಮಾಡುತ್ತಾರೆ. ಇದೇ ಸಮಯದಲ್ಳೇ ದೇಶಾದ್ಯಂತ ಸ್ವಾತ್ರಂತ್ರ ಚಳುವಳಿ ಹೋರಾಟದ ಕಾವು ಹೆಚ್ಚಾಗಿದ್ದು ಆಗ ಬ್ರಿಟಿಷರ ವಿರುದ್ಧ, ಬ್ರಿಟೀಷರೇ ಭಾರತ ಬಿಟ್ಟು ತೊಲಗಿ ಎಂಬ ಕ್ವಿಟ್ ಇಂಡಿಯಾ ಚಳವಳಿ ನಡೆಯುತ್ತಿದ್ದಾಗ, ಸ್ವಾತ್ರಂತ್ರ್ಯ ದೇಶವಿದ್ದಲ್ಲಿ ಧರ್ಮ ಕಾರ್ಯ ನಿರಂತರವಾಗಿ ನಡೆಸಬಹುದು ಎಂಬುದನ್ನು ಅರಿತು ಸ್ವಪ್ರೇರಣೆಯಿಂದ ತಮ್ಮ 19ನೇ ವಯಸ್ಸಿನಲ್ಲಿ 1942 ರಲ್ಲಿ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿ, ಮೊದಲು 9 ತಿಂಗಳ ಜೈಲು ಶಿಕ್ಷೆಯ ನಂತರ ಮತ್ತೆ 6 ತಿಂಗಳ ಶಿಕ್ಷೆಯನ್ನು ಅನುಭವಿಸುವ ಮೂಲಕ, ಕ್ರಾಂತಿಕಾರಿ ಸಾಧು ಎಂದೇ ಪ್ರಖ್ಯಾತರಾಗುತ್ತಾರೆ.
ದೇಶಕ್ಕೆ ಸ್ವಾತ್ರಂತ್ರ ಸಿಕ್ಕ ನಂತರ, 1950ರಲ್ಲಿ ಉತ್ತರಾಮ್ನಾಯ ಮಠ ಜ್ಯೋತಿರ್ಪೀಠದ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತೀ ಮಹಾಸ್ವಾಮಿಗಳು ಮಹಾಸ್ವಾಮಿ ಕರಪಾತ್ರಿ ಮಹಾರಾಜರು ಸ್ಥಾಪಿಸಿದ್ದ ಅಖಿಲ ಭಾರತೀಯ ರಾಮ ರಾಜ್ಯ ಪರಿಷತ್ ನ ಅಧ್ಯಕ್ಷರಾಗಿದ್ದ ಪೋತಿರಾಮ್ ಉಪಾಧ್ಯಾಯರಿಗೆ 1950ರಲ್ಲಿ ಸಂನ್ಯಾಸ ದೀಕ್ಷೆಯನ್ನು ಅನುಗ್ರಹಿಸಿ ಅವರಿಗೆ ಸ್ವರೂಪಾನಂದ ಸರಸ್ವತಿ ಎಂಬ ಯೋಗಪಟ್ಟ ನೀಡುತ್ತಾರೆ. 1973ರಲ್ಲಿ ಸ್ವಾಮಿ ಕೃಷ್ಣಬೋಧ ಆಶ್ರಮದ ಸ್ವಾಮಿಗಳು ನಿಧನರಾದಾಗ, ಬದರಿನಾಥ ಸ್ವಾಮಿ ಸ್ವರೂಪಾನಂದರಿಗೆ ಪೀಠ ಹಸ್ತಾಂತರವಾಯಿತಾದರೂ, ಕಾನೂನು ಹೋರಾಟದಲ್ಲಿ ಅದು ಅನೂರ್ಜಿತವಾಗುತ್ತದೆ. ದಕ್ಷೀಣಾಮ್ನಾಯ ಶೃಂಗೇರಿ ಪೀಠದೊಂದಿಗೆ ಸದಾಕಾಲವೂ ಉತ್ತಮ ಸಂಪರ್ಕ ಇಟ್ಟುಕೊಂಡಿದ್ದ ಅದಾಗಲೇ ಜ್ಯೋತಿರ್ಮಠದ ಪೀಠಾಧಿಪತಿಗಳಾಗಿದ್ದ ಶ್ರೀ ಶ್ರೀ ಸ್ವರೂಪಾನಂದ ಸರಸ್ವತಿಗಳಿಗೆ. 27 ಮೇ 1982 ಶೃಂಗೇರಿ ಜಗದ್ಗುರು ಶ್ರೀಮದಭಿನವ ವಿದ್ಯಾತೀರ್ಥ ಮಹಾಸ್ವಾಮಿಗಳಿಂದ ಉತ್ತರಾಮ್ನಾಯ ದ್ವಾರಕಾ ಪೀಠದ ಮಹಾಸ್ವಾಮಿಗಳಾಗಿ ಪಟ್ಟಾಭಿಷಿಕ್ತರಾಗುತ್ತಾರೆ.
ನಂತರದ ದಿನಗಳಲ್ಲಿ ರಾಮ ಹುಟ್ಟಿದ ಅಯೋಧ್ಯೆಯಲ್ಲಿ ಖಂಡಿತವಾಗಿಯೂ ರಾಮಮಂದಿರ ನಿರ್ಮಾಣವಾಗಲೇ ಬೇಕು ಎಂದು ಪ್ರತಿಪಾದಿಸುತ್ತಾ, ವಿಶ್ವಹಿಂದೂ ಪರಿಷತ್ತಿನ ಆಶ್ರಯದಲ್ಲಿ ಎಲ್ಲಾ ಸ್ವಾಮಿಗಳು ನಡೆಸುತ್ತಿದ್ದ ರಾಮ ಜನ್ಮಭೂಮಿ ಹೋರಾಟಕ್ಕೆ ತಮ್ಮ ಬೆಂಬಲವನ್ನು ಸೂಚಿಸಿದರೂ, ನಂತರದ ದಿನಗಳಲ್ಲಿ ರಾಮಮಂದಿರದ ಹೆಸರಿನಲ್ಲಿ ವಿಎಚ್‌ಪಿಯ ಸಹಾಯದೊಂದಿಗೆ ಬಿಜೆಪಿ ರಾಜಕೀಯವಾಗಿ ಪ್ರಾಭಲ್ಯಕ್ಕೆ ಬರುತ್ತಿರುವುದು ನಮಗೆ ಸ್ವೀಕಾರಾರ್ಹವಲ್ಲ. ಹಿಂದೂಗಳಲ್ಲಿ ಶಂಕರಾಚಾರ್ಯರು ಸರ್ವಶ್ರೇಷ್ಠರು. ಶಂಕರಾಚಾರ್ಯರ ನಾಲ್ಕು ಪೀಠಗಳೇ ಹಿಂದೂಗಳ ಸರ್ವೋಚ್ಚ ನ್ಯಾಯಾಲಯ. ದೇವಸ್ಥಾನಕ್ಕೆ ಧಾರ್ಮಿಕ ಸ್ವರೂಪ ಇರಬೇಕೇ ಹೊರತು, ಅದಕ್ಕೆ ರಾಜಕೀಯ ರೂಪ ಕೊಡಲು ನಮಗೆ ಒಪ್ಪಿಗೆಯಾಗುವುದಿಲ್ಲ ಎಂದು ಬಹಿರಂಗವಾಗಿಯೇ ಹೇಳುವ ಮೂಲಕ ಒಂದು ರೀತಿಯ ಬಂಡಾಯದ ಬಾವುಟನ್ನು ಹಾರಿಸಿದ್ದರು ಎಂದರೂ ತಪ್ಪಾಗದು.
2012 ರಲ್ಲಿ ಪಂಚ ಪ್ರಯಾಗ, ದೇವ ಪ್ರಯಾಗ, ರುದ್ರ ಪ್ರಯಾಗ, ಕರಣ್ ಪ್ರಯಾಗ, ನಂದ ಪ್ರಯಾಗ, ಮತ್ತು ವಿಷ್ಣು ಪ್ರಯಾಗದಲ್ಲಿ ಗಂಗಾನದಿಯಯಲ್ಲಿ ಜಲವಿದ್ಯುತ್ ಯೋಜನೆಗಳನ್ನು ಆರಂಭಿಸಲು ಉತ್ತರಾಖಂಡದ ಅಂದಿನ ಮುಖ್ಯಮಂತ್ರಿಗಾಳಾಗಿದ್ದ ಶ್ರೀ ವಿಜಯ್ ಬಹುಗುಣರು ಮುಂದಾದಾಗ, ಈ ರೀತಿ ಹಲವಾರು ಸ್ಥಳಗಳಲ್ಲಿ ಅಣೆಕಟ್ಟು ಕಟ್ಟಲ್ಪಡುವುದರಿಂದ ಗಂಗಾ ನದಿ ಆ ಸಿಮೆಂಟೆಡ್ ಸುರಂಗಗಳ ಮೂಲಕ ಹರಿಯುವ ಕಾರಣ, ಗಂಗಾನದಿಯ ನೀರಿನಲ್ಲಿ ನೈಸರ್ಗಿಕ, ಖನಿಜ ಗುಣಮಟ್ಟದ ಪದಾರ್ಥಗಳು ಮತ್ತು ಬ್ಯಾಕ್ಟೀರಿಯಾ ವಿರೋಧಿ ಅಂಶಗಳು ಕಳೆದುಹೋಗುವ ಕಾರಣ, ಗಂಗಾ ನದಿಯ ಮೇಲೆ ಈ ಜಲ ಯೋಜನೆಗಳು, ಅಣೆಕಟ್ಟುಗಳು ಮತ್ತು ಬ್ಯಾರೇಜ್‌ಗಳನ್ನು ಕಟ್ಟ ಬಾರದೆಂದು ಜಂತರ್ ಮಂತರ್ ನಲ್ಲಿ ಪ್ರತಿಭಟನೆಯನ್ನೂ ಆಯೋಜಿಸಿದ್ದರು.
ಒಂದು ಕಾಲದಲ್ಲಿ ಕಾಶ್ಮೀರಪುರವಾಸಿನಿ ಎಂದೇ ಪೌರಾಣಿಕವಾಗಿ ಹೆಸರಾಗಿ ಶಾರದಾ ಸರ್ವಜ್ಞಪೀಠವಿದ್ದಂತಹ ಕಾಶ್ಮೀರದಲ್ಲಿ 2014ರ ಸಮಯದಲ್ಲಿ ಆರ್ಟಿಕಲ್ 370 ಇದ್ದ ಕಾರಣ ಅಲ್ಲಿನ ಮುಸ್ಲಿಮ್ಮರಿಂದ ಹಿಂದೂಗಳ ಮೇಲೆ ಆಗುತ್ತಿದ್ದ ದಬ್ಬಾಳಿಕೆಯನ್ನು ಖಂಡಿಸಿ ಆದಷ್ಟು ಕೂಡಲೇ, ಜಮ್ಮು ಮತ್ತು ಕಾಶ್ಮೀರದಿಂದ 370ನೇ ವಿಧಿಯನ್ನು ತೆಗೆದುಹಾಕುವ ಮೂಲಕ ಹಿಂದೂ ಮತ್ತು ಮುಸಲ್ಮಾನರ ಜನಸಂಖ್ಯಾ ಸಮತೋಲನ ಕಾಪಾಡುವುದು ಅತ್ಯಗತ್ಯ ಎಂದು ಹೇಳಿದ್ದರಲ್ಲದೇ, ಈ ರೀತಿಯಾಗಿ ಮಾಡುವ ಮೂಲಕ, ಕಾಶ್ಮೀರದಲ್ಲಿ ನಡೆಯುತ್ತಿದ್ದ ರಾಷ್ಟ್ರವಿರೋಧಿ ಶಕ್ತಿಗಳನ್ನು ಮೆಟ್ಟಿ ನಿಲ್ಲಬಹುದಾಗಿದೆ. ಭಾರತದಲ್ಲಿ ಹಿಂದೂಗಳು ಮತ್ತು ಮುಸ್ಲಿಮರಿಗೆ ತಮ್ಮ ಜನಸಂಖ್ಯೆಯಲ್ಲಿ ಸಮತೋಲನವನ್ನು ಕಾಯ್ದುಕೊಳ್ಳಲು ಏಕರೂಪದ ನಾಗರಿಕ ಕಾನೂನನ್ನು ಆದಷ್ಟು ಶೀಘ್ರವಾಗಿ ತರಬೇಕೆಂದು ಪ್ರತಿಪಾದಿಸುವ ಮೂಲಕ ತಮ್ಮ ರಾಷ್ಟ್ರೀಯ ಬದ್ಧತೆಯನ್ನು ಎತ್ತಿ ತೋರಿಸಿದ್ದರು.
ಸ್ವಾಮಿ ಸ್ವರೂಪಾನಂದರು ಜುಲೈ 2014 ರಲ್ಲಿ ಶಿರಡಿ ಸಾಯಿಬಾಬಾ ಮತ್ತವರ ಅನುಯಾಯಿಗಳ ವಿರುದ್ಧ ಮಾಡಿದ್ದ ಹೇಳಿಕೆಯೊಂದರಿಂದ ವಿವಾದಕ್ಕೆ ಕಾರಣೀಭೂತರಾಗಿದ್ದರು. ಅಂದಿನ ಕೇಂದ್ರ ಸರ್ಕಾರದಲ್ಲಿ ಸಚಿವೆಯಾಗಿದ್ದ ಸಾದ್ವಿ ಉಮಾಭಾರತಿಯವರು ಶಿರಡಿ ಸಾಯಿಬಾಬಾರವರ ಮೇಲಿನ ಭಕ್ತಿಯನ್ನು ಸಾರ್ವಜನಿಕವಾಗಿ ಪ್ರತಿಪಾದಿಸಿದಾಗ, ಇದೇ ಸ್ವರೂಪಾನಂದರು, ಶಾಸ್ತ್ರಗಳು ಮತ್ತು ವೇದಗಳಲ್ಲಿ ಸಾಯಿಬಾಬಾರ ಉಲ್ಲೇಖವಿಲ್ಲ. ಮೇಲಾಗಿ ಆತ ಕೇವಲ ಮುಸ್ಲಿಂ ಫಕೀರನಷ್ಟೇ ಹೊರತು ಅವರೆಂದೂ ದೇವರಾಗಿರಲಿಲ್ಲ ಹಾಗಾಗೊ ಶಿರಡಿ ಸಾಯಿ ಬಾಬನನ್ನು ಹಿಂದೂ ದೇವರುಗಳೊಂದಿಗೆ ಪೂಜಿಸಬಾರದು ಎಂದಿ ವಾದಿಸಿದ್ದಲ್ಲದೇ, ಸಬ್ಕಾ ಮಾಲಿಕ್ ಏಕ್ (ದೇವರು ಎಲ್ಲರಿಗೂ ಒಬ್ಬರೇ) ಎಂದು ಪ್ರತಿಪಾಡಿಸುತ್ತಿದ್ದ ಸಾಯಿಬಾಬಾರನ್ನು ಆರಾಧಿಸುವ ಮೂಲಕ ಹಿಂದೂಗಳನ್ನು ವಿಭಜಿಸಲು ರೂಪಿಸಿದ ಪಿತೂರಿಯ ಭಾಗವಾಗಿದೆ. ಆತ ಕೇವಲ ಸಂತನಾದ ಮನುಷ್ಯನಷ್ಟೇ ಹೊರತು ಎಂದಿಗೂ ದೇವರಲ್ಲ ಎಂದು ಪ್ರಭಲವಾಗಿ ಪ್ರತಿಪಾದಿಸಿದ್ದರು. ಈ ಹೇಳಿಕೆಗಳ ವಿರುದ್ಧವಾಗಿ ಹಲವಾರು ಔಪಚಾರಿಕ ಎಫ್‌ಐಆರ್ ಮತ್ತು ಪಿಐಎಲ್ ದೂರುಗಳು ದಾಖಲಾದಾಗ, ನಾನು ಧಾರ್ಮಿಕವಾಗಿ ಹೇಳಿಕೆಯನ್ನು ನೀಡಿದ್ದೇನೆಯೇ ಹೊರತು, ಯಾರದ್ದೇ ಧಾರ್ಮಿಕ ಭಾವನೆಗಳನ್ನು ನೋಯಿಸುವ ಉದ್ದೇಶವನ್ನು ಹೊಂದಿಲ್ಲ ಎಂದು ನ್ಯಾಯಾಲಯಕ್ಕೆ ಲಿಖಿತರೂಪದಲ್ಲಿ ಹೇಳುವ ಮೂಲಕ ಪರಿಸ್ಥಿತಿಯನ್ನು ತಹಬದಿಗೆ ತಂದಿದ್ದರು.
ಅದೇ ರೀತಿ 2015ರಲ್ಲಿ ಬಿಡುಗಡೆಯಾದ ಅಮೀರ್ ಖಾನ್ ನ ವಿವಾದಿತ ಸಿನಿಮಾ PK ದಲ್ಲಿ ಹಿಂದೂ ದೇವರುಗಳನ್ನು ಅವಮಾನ ಮಾಡಿರುವ ಕಾರಣ, ಆ ಚಿತ್ರವನ್ನು ಪ್ರದರ್ಶಿಸಲು ಅನುಮತಿ ನೀಡಿದ ಸೆನ್ಸಾರ್ ಮಂಡಳಿಗೆ ಪತ್ರವನೊಂದನ್ನು ಬರೆದು, ಆ ಚಲನಚಿತ್ರವನ್ನು ಮತ್ತೊಮ್ಮೆ ಪರಿಶೀಲಿಸಬೇಕೆಂದು ಮಂಡಳಿಯ ಹಲವಾರು ಸದಸ್ಯರು ವಿನಂತಿಸಿದ ಹೊರತಾಗಿಯೂ ಸೆನ್ಸಾರ್ ಮಂಡಳಿಯಿಂದ ಚಲನಚಿತ್ರವು ತನ್ನ ಪ್ರಮಾಣಪತ್ರವನ್ನು ಹೇಗೆ ಪಡೆದುಕೊಂಡಿದೆ ಎಂಬುದರ ಕುರಿತಾಗಿ ಸಿಬಿಐ ತನಿಖೆ ನೆಡೆಸಬೇಕೆಂದು ಒತ್ತಾಯಿಸಿದ್ದರು.
2016 ರಲ್ಲಿ RSS ಹಿಂದೂ ಧರ್ಮಕ್ಕಾಗಿ ಕೆಲಸ ಮಾಡುತ್ತಿದೆ ಎಂದು ಹೇಳುತ್ತದಾದರೂ, ಅವರಿಗೆ ಹಿಂದುತ್ವದ ಬಗ್ಗೆ ಯಾವುದೇ ಬದ್ಧತೆ ಇಲ್ಲ. ಅವರು ಹಿಂದೂಗಳನ್ನು ರಕ್ಷಿಸಲು ಬಂದಿದ್ದೇವೆ ಎಂದು ಹೇಳುವ ಮೂಲಕ ಜನರನ್ನು ಮೋಸಗೊಳಿಸಲು ಪ್ರಯತ್ನಿಸುತ್ತಿರುವುದು ಮಾರಕವಾಗಿದೆ. ಮೊದಲು ಕಾಂಗ್ರೆಸ್ ಈಗ ಬಿಜೆಪಿ ಹೀಗೆ ಎರಡೂ ಸರ್ಕಾರಗಳ ಅಡಿಯಲ್ಲಿ ಗೋಹತ್ಯೆ ನಿರಂತರವಾಗಿ ನಡೆಯುತ್ತಿರುವಾಗ, ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ವ್ಯತ್ಯಾಸವೇನು? ಅವರದ್ದೇ ಸರ್ಕಾರ ಇರುವ ಅರುಣಾಚಲ ಪ್ರದೇಶದಲ್ಲಿ ಸಾವಿರಾರು RSS ಕಾರ್ಯಕರ್ತರು ಗೋಮಾಂಸವನ್ನು ಸೇವಿಸುತ್ತಾರೆ ಎಂದು ಹೇಳಿದ್ದಲ್ಲದೇ, ಅಂದಿನ ಮಹಾರಾಷ್ಟ್ರ ಸರ್ಕಾರವು ಗೋಹತ್ಯೆ ನಿಷೇಧವನ್ನು ರಾಜ್ಯದಲ್ಲಿ ಗೂಳಿಗಳು ಮತ್ತು ರಾಸುಗಳಿಗೆ ವಿಸ್ತರಿಸುವ ನಿರ್ಧಾರವನ್ನು ಸ್ವಾಗತಿಸಿದ್ದಲ್ಲದೇ, ಭಾರತವು ಹಿಂದೂ ಬಹುಸಂಖ್ಯಾತ ದೇಶವಾಗಿದ್ದರೂ, ಭಾರತವೇ ಗೋಮಾಂಸದ ಅತಿದೊಡ್ಡ ರಫ್ತುದಾರವಾಗಿರುವುದು, ನಮಗೆ ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಹೇಳುವ ಮೂಲಕ ಎಲ್ಲರೂ ಹುಬ್ಬೇರುವಂತೆ ಮಾಡಿದ್ದರು.
ಅದೇ ರೀತಿ 2016ರಲ್ಲಿ ತುಕ್ಡೇ ಗ್ಯಾಂಗ್ ನೇತೃತ್ವದಲ್ಲಿ JNU ವಿದ್ಯಾರ್ಥಿಗಳು ದೇಶದ್ರೋಹದ ವಿವಾದದಲ್ಲಿ ಸಿಲುಕಿದ್ದಾಗ, ಈ ದಿನಗಳಲ್ಲಿ ಕಾಲೇಜು ವಿದ್ಯಾರ್ಥಿಗಳು ಆಧ್ಯಾತ್ಮಿಕತೆಯಿಂದ ಭಿನ್ನರಾಗಿದ್ದಾರೆ. ಈ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಜ್ಞಾನದ ಕೊರತೆಯಿಂದಾಗಿಯೇ ಆವರು ರಾಷ್ಟ್ರವಿರೋಧಿಗಳಾಗುತ್ತಿದ್ದಾರೆ. ಇತರೇ ಧರ್ಮಗಳಿಗೆ ಹೋಲಿಸಿದರೆ ಹಿಂದೂ ಯುವಕರು ಧರ್ಮದಿಂದ ವಿಮುಖರಾಗುತ್ತಿರುವುದು ಹೆಚ್ಚಾಗುತ್ತಿರುವ ಕಾರಣ, ಶಾಲಾ ಕಾಲೇಜುಗಳ ಪಠ್ಯಕ್ರಮದಲ್ಲಿ ಹಿಂದೂ ಧರ್ಮಗ್ರಂಥಗಳನ್ನು ಸೇರಿಸುವ ಮೂಲಕ, ನಮ್ಮ ಧರ್ಮಗ್ರಂಥಗಳು ಮತ್ತು ಸಾಂಸ್ಕೃತಿಕ ಮೌಲ್ಯಗಳ ಶ್ರೀಮಂತಿಕೆ ಮತ್ತು ಹಿರಿಮೆಯ ಬಗ್ಗೆ ಹಿಂದೂ ಯುವಕರರಲ್ಲಿ ಜಾಗೃತಿ ಮೂಡಿಸಬೇಕು ಎಂದಿದ್ದರು.
ಅದೇ ರೀತಿಯಲ್ಲಿ 2016ರಲ್ಲಿ ಮಹಾರಾಷ್ಟ್ರದ ಶಿರಡಿಯ ಸಮೀಪದಲ್ಲಿರುವ ಅಹಮದ್ ನಗರದಲ್ಲಿರುವ ಶನಿ ಶಿಂಗ್ಣಾಪುರ ದೇವಸ್ಥಾನದ ಗರ್ಭಗುಡಿಗೆ ಸ್ತ್ರೀವಾದಿಗಳು ಪ್ರವೇಶಿಸಲು ಪ್ರಯತ್ನಿಸಿದಾಗ, ಇದೇ ಸ್ವರೂಪಾನಂದರು ಶನಿಯು ಕ್ರೂರ ಗ್ರಹವಾಗಿದ್ದು ಮಹಿಳೆಯರು ಆ ದೇವರನ್ನು ಪೂಜಿಸುವಲ್ಲಿ ಎಚ್ಚರದಿಂದಿರಬೇಕು. ಶನಿ ಪ್ರಭಾವವು ಹಾನಿಕಾರಕವಾಗಿದೆ. ಹಾಗಾಗಿ ಮಹಿಳೆಯರು ಶನಿ ದೇವರಿಂದ ದೂರವಿರಬೇಕು ಎಂದಿದ್ದಲ್ಲದೇ, ಹೀಗೆ ಶನಿ ಶಿಂಗ್ಣಾಪುರ ದೇವಸ್ಥಾನಕ್ಕೆ ಮಹಿಳೆಯರು ಪ್ರವೇಶ ಮಾಡುವ ಮೂಲಕ ಮಹಿಳೆಯರ ಮೇಲೆ ಹೆಚ್ಚು ಹಲ್ಲೆಗಳು ಮತ್ತು ಅತ್ಯಾಚಾರ ಘಟನೆಗಳಿಗೆ ಕಾರಣವಾಗಬಹುದು ಎಂದೂ ಎಚ್ಚರಿಸಿದ್ದರು.
ಅದೇ ರೀತಿ ಇಸ್ಕಾನ್ ಸನಾತನ ಧರ್ಮದ ಒಂದು ಭಾಗವೆಂದು ಹೇಳಿಕೊಳ್ಳುವುದನ್ನೂ ಪ್ರಭಲವಾಗಿ ಖಂಡಿಸಿದ್ದಲ್ಲ್ದೇ, ಭಾರತೀಯರು ಇಸ್ಕಾನ್ ಗೆ ನೀಡುವ ದೇಣಿಗೆಯ ಹಣವನ್ನು ಭಾರತದಿಂದ ಅಮೇರಿಕಾ ಮತ್ತು ಇತರೇ ವಿದೇಶಗಳಿಗೆ ಹಣವನ್ನು ಕಳುಹಿಸಲು ಬಳಸಲಾಗುತ್ತಿದ್ದು ದೇಶಾದ್ಯಂತ ಇಸ್ಕಾನ್ ದೇವಾಲಯಗಳ ಸಂಖ್ಯೆ ಹೆಚ್ಚುತ್ತಿರುವುದರ ಬಗ್ಗೆ ಕಳವಳ ವ್ಯಕ್ತ ಪಡಿಸಿದ್ದರು.
ಜಾತಸ್ಯ ಮರಣಂ ಧೃವಂ ಎಂದರೆ, ಹುಟ್ಟಿದವರು ಒಂದಲ್ಲಾ ಒಂದು ದಿನ ಸಾಯಲೇ ಬೇಕು ಎನ್ನುವ ಜಗದ ನಿಯಮದಂತೆ, ಹಿರಿಯ ಧಾರ್ಮಿಕ ಗುರುಗಳಾಗಿದ್ದ ಶ್ರೀ ಶ್ರೀ ಸ್ವರೂಪಾನಂದ ಸರಸ್ವತೀ ಸ್ವಾಮೀಗಳು ತಮ್ಮ 99ನೇ ವಯಸ್ಸಿನಲ್ಲಿ ನಮ್ಮನ್ನಗಲಿರುವುದು ನಿಜಕ್ಕೂ ದುಃಖಕರವಾಗಿದ್ದರೂ, ಸರ್ವ ಸಂಗ ಪರಿತ್ಯಾಗಿಗಳಾಗಿ ಖಾವಿ ತೊಟ್ಟರೂ ಅನೇಕ ವಿವಾಧಗಳಿಗೆ ಸಿಲುಕುತ್ತಿರುವ ಈ ಸಂಧರ್ಭದಲ್ಲಿ ಒಬ್ಬ ಧಾರ್ಮಿಕ ಗುರುಗಳಾಗಿದ್ದರೂ ದೇಶದ ಏಕತೆಗೆ ಧಕ್ಕೆ ಬಂದಾಗಲೆಲ್ಲಾ ದೇಶ ಮೊದಲು ಧರ್ಮ ಆನಂತರ ಎಂದು ದೇಶದ ಅಖಂಡತೆ ಮತ್ತು ಸಮಾನತೆಗೆ ಸದಾಕಾಲವು ತುಡಿಯುತ್ತಿದ್ದಂತಹ ಹಿರಿಯರಿಗೆ ನಮ್ಮ ಭಕ್ತಿ ಪೂರ್ವಕ ನಮಸ್ಕಾರಗಳನ್ನು ತಿಳಿಸಿ, ಭಗವಂತನ ಅವರ ಆತ್ಮಕ್ಕೆ ಸದ್ಗತಿಯನ್ನು ನೀಡಲಿ ಎಂದು ಕೋರೋಣ ಅಲ್ವೇ?
ಏನಂತೀರೀ?
ನಿಮ್ಮವನೇ ಉಮಾಸುತ