ಸತ್ತವರ ಮನೆ ಮುಂದೆ ಬೆಂಕಿ ಏಕೆ ಹಾಕುತ್ತಾರೆ?

ಯಾರಾದರೂ ಸತ್ತರೇ, ಅವನು ಹೊಗೆ ಹಾಕಿಸ್ಕೊಂಡ ಅಂತಲೋ, ಅದೇ ರೀತಿ ಯಾರನ್ನಾದರೂ ಎಚ್ಚರಿಸುವಾಗಲೂ ಹುಷಾರು ಮಗಾ, ಸ್ವಲ್ಪ ಎಚ್ಚರ ತಪ್ಪಿದ್ರೂನೂ ಹೊಗೆನೇ ಇಲ್ಲಾ ಹೊಗೆ ಹಾಕಿಸ್ಕೊಂಡ್ ಬಿಡ್ತಿಯಾ! ಅಂತಾ ಹೇಳುವುದು ಸರ್ವೇ ಸಾಮಾನ್ಯವಾಗಿದೆ. ಇತ್ತೀಚೆಗೆ ಇದೇ ಕುರುತಾಗಿ ನಮ್ಮ ಆತ್ಮೀಯರಾದ ಶ್ರೀ ಜೆ ಬಿ ರಂಗಸ್ವಾಮಿ (ಜೇಬರ್ ಸರ್ ನಿವೃತ್ತ ಪೋಲೀಸ್ ಅಧಿಕಾರಿಗಳು ) ಮತ್ತು ಚಿಕ್ಕಬಳ್ಳಾಪುರದ ಶ್ರೀ  ಡಿ. ಎನ್. ಸುದರ್ಶನ್ ರೆಡ್ಡಿಯವರು (ಇತಿಹಾಸದಲ್ಲಿ ತಜ್ಞರು) ಮುಖಪುಟದಲ್ಲಿ ಪ್ರಶ್ನೆಯೊಂದನ್ನು ಎತ್ತಿದ್ದಾಗ, ಹಲವರು ಇದರ ಕುರಿತಾಗಿ ತಮಗೆ ತಿಳಿದಿದ್ದ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದರು. ಆಗ ಹಬ್ಬಗಳ ಸಾಲು ನಡೆಯುತ್ತಿದ್ದರಿಂದ ಮತ್ತು ಹೇಗೂ ಪಕ್ಷಮಾಸ ಬರುತ್ತಲಿದ್ದರಿಂದ ಇದೇ ಶೀರ್ಷಿಕೆಯ ಕುರಿತಾದ ಸಮಗ್ರ ಮಾಹಿತಿಯನ್ನು ಹಂಚಿಕೊಳ್ಳುವುದಾಗಿ ನಾನು ಹೇಳಿದ್ದರ ಪರಿಣಾಮ ಈ ಲೇಖನವನ್ನು ಬರೆಯುತ್ತಿದ್ದೇನೆ.

ನಮ್ಮ ಪೂರ್ವಜರ ಬೌದ್ಧಿಕ ಮಟ್ಟದ ಬಗ್ಗೆ ಎಷ್ಟು ಹೇಳಿದರೂ ಸಾಲದು. ನಮ್ಮ ಪೂರ್ವಜರು ಇಂದು ಇಡೀ ಜಗತ್ತಿನ ಭೂಮಂಡಲ, ಅಂತರಿಕ್ಷ ಮತ್ತು ಸಮುದ್ರಡಡಿಯಲ್ಲಿ ಇರುವ ಎಲ್ಲಾ ಪ್ರದೇಶ, ಸೇವೆ, ಮತ್ತು ಉಪಕರಣ ಎಲ್ಲವುದನ್ನೂ ಅದಾಗಲೇ ಅನ್ವೇಷಣೆ ಮಾಡಿ, ಅವುಗಳ ಅನುಕೂಲ ಮತ್ತು ಉಪಯೋಗಗಳನ್ನೇ ವೇದ, ಪುರಾಣ, ಶ್ಲೋಕ, ಸುಭಾಷಿತಗಳ ಮೂಲಕ ಬರೆದು ಇಟ್ಟಿದ್ದಾರೆ. ಇಂದಿನವರು ಕೇವಲ ಆ ಶ್ಲೋಕ, ಸುಭಾಷಿತ, ಪುರಾಣ ಮತ್ತು ವೇದಗಳನ್ನು ಸರಿಯಾಗಿ ಅರ್ಥೈಸಿಕೊಂಡು ಅವುಗಳನ್ನು ಮತ್ತೆ ಮರು ಅನ್ವೇಷಣೆ ಮಾಡುವುದಷ್ಟೇ ಉಳಿದಿದ್ದು ಹೊಸದಾಗಿ ಕಂಡು ಹಿಡಿಯುವ ಅವಶ್ಯಕತೆಯೇ ಇಲ್ಲ ಎಂದರೂ ಅತಿಶಯವಲ್ಲಾ. ನಮ್ಮ ಪೂರ್ವಜರು ಬಹುತೇಕ ವಿಷಯಗಳನ್ನು ಬಹಳ ಸೂಕ್ಷ್ಮವಾಗಿ ಸಂಜ್ಣೆಗಳಲ್ಲಿ ಹೇಳುವುದ ಮೂಲಕ ಮಾತು ಕಡಿಮೆ ಕೆಲಸ ಜಾಸ್ತಿ ಮಾಡುವುದನ್ನು ರೂಢಿಯಲ್ಲಿ ತಂದಿದ್ದರು. ಸತ್ತವರ ಮನೆ ಮುಂದೆ ಬೆಂಕಿ ಹಾಕುವುದೂ ಇದೇ ಪದ್ದತಿಯ ಮುಂದುವರಿದ ರೂಪವಾಗಿದೆ.

  • fire1ಹಿಂದಿನ ಕಾಲದಲ್ಲಿ ಕಾಡು ಮೇಡುಗಳಲ್ಲಿ ಹತ್ತು ಹದಿನೈದು ಮನೆಗಳು ಇದ್ದು ಅವುಗಳನ್ನೇ ಊರು ಎಂದು ಕರೆಯಲಾಗುತ್ತಿತ್ತು. ಇನ್ನು ಆ ಮನೆಗಳೂ ಇಂದಿನಂತೆ ಅಕ್ಕ ಪಕ್ಕದಲ್ಲೇ ಒತ್ತಾಗಿರದೇ ಮೈಲು ಮೈಲುಗಟ್ಟಲೇ ದೂರವಿದ್ದ ಕಾರಣ, ಯಾರ ಮನೆಯಲ್ಲಾದರೂ ಸಾವಾದರೆ, ಕೂಡಲೇ ಅವರ ಮನೆಯ ಮುಂದೆ ಬೆಂಕಿಯನ್ನು ಹಾಕಿದಾಗ (ಬೆಂಕಿಗಿಂತಲೂ ಹೊಗೆಯಾಡಬೇಕು) ದೂರ ದೂರದಲ್ಲಿ ಇದ್ದವರಿಗೂ ಆ ಮನೆಯಲ್ಲಿ ಯಾವುದೋ ಸಾವು ನೋವು ಸಂಭವಿಸಿರಬೇಕು ಎಂದು ತಿಳಿದು ಕೂಡಲೇ ಸಹಾಯಕ್ಕೆ ಬರುತ್ತಿದ್ದರು.
  • ಅದೇ ರೀತಿಯ ಮನೆಯಲ್ಲಿ ಯಾರದ್ದಾರೂ ಸಾವಾದ ಕೂಡಲೇ, ಮೃತ ದೇಹವನ್ನು ಬಂಧು ಮಿತ್ರರ ಅಂತಿಮ ದರ್ಶನಕ್ಕಾಗಿ ಮನೆಯ ಹೊರಗೆ ತಂದಿಡುತ್ತಿದ್ದರು. ಕೆಲವೊಮ್ಮೆ ದೂರದಿಂದ ಬರಬೇಕಿದ್ದ ಸಂಬಂಧಿಗಳು ಬರಲು ತಡವಾದಾಗ, ರಾತ್ರಿ ಇಡೀ ಆ ಶವವನ್ನು ಕಾಯಬೇಕಾಗುತ್ತಿತ್ತು ಅದಕ್ಕೇ ಥೂ! ಹೆಣ ಕಾಯುವ ಕರ್ಮ ಯಾರಿಗೂ ಬೇಡ ಎಂದು ಹೇಳುವುದು ಉಂಟು. ಹಾಗೆ ಶವವನ್ನು ಹೊರಗೆ ಇಟ್ಟಾಗ, ಕಾಡು ಪ್ರಾಣಿಗಳು ಅದರಲ್ಲೂ ವಿಶೇಷವಾಗಿ, ನರಿ, ತೋಳಗಳು ಬಂದು ಶವವನ್ನು ಎತ್ತಿಕೊಂಡು ಹೋಗುವ ಸಂಧರ್ಭವನ್ನು ತಪ್ಪಿಸುವ ಸಲುವಾಗಿ ಸತ್ತವರ ಮನೆಯ ಮುಂದೆ ಬೆಂಕಿ ಹಾಕುವ ರೂಢಿಗೆ ಬಂದಿತ್ತು. ಬೆಂಕಿಗೆ ಹೆದರುವ ಆ ಕಾಡು ಪ್ರಾಣಿಗಳು ಆ ಕಡೆಯಲ್ಲಿ ಸುಳಿಯುತ್ತಿರಲಿಲ್ಲ. ಇದರ ಮುಂದುವರೆದ ಭಾಗವಾಗಿಯೇ ಇಂದಿಗೂ ಸಹಾ ಅನೇಕ ಗ್ರಾಮೀಣ ಪ್ರದೇಶಗಳಲ್ಲಿ ರಾತ್ರಿ ಇಡೀ ಭಜನೆ/ದೇವರ ಸಂಕೀರ್ತನೆ ಮಾಡುತ್ತಾ ಹೆಣವನ್ನು ಕಾಯುವ ಸಂಪ್ರದಾಯವಿದೆ.
  • ಇನ್ನು ಬಂಧುಗಳ ಸಾವಿನ ವಿಷಯ ತಿಳಿದು ಹೊತ್ತಲ್ಲದ ಹೊತ್ತಿನಲ್ಲಿ ಕಾಡು ಮೇಡುಗಳ ರಸ್ತೆಗಳಲ್ಲಿ ಬರುತ್ತಿದ್ದವರಿಗೆ ಅದೆಷ್ಟೋ ಬಾರಿ ರಸ್ತೆಯು ತಪ್ಪುತ್ತಿದ್ದ ಕಾರಣ ಈ ರೀತಿಯಾಗಿ ಸತ್ತವರ ಮನೆಯ ಮುಂದೆ ಬೆಂಕಿ ಹಾಕಿ ಹೊಗೆ ಯಾಡುವುದನ್ನೇ ಅನುಸರಿಸಿ ಬರಲು ಸಾದ್ಯವಾಗುತ್ತಿತ್ತು. ಇದು ಒಂದು ರೀತಿಯಾಗಿ Google Map live location ನಂತೆ ಕಾರ್ಯ ನಿರ್ವಹಿಸುತ್ತಿತ್ತು ಎಂದರೂ ತಪ್ಪಾಗದು.
  • fireಇನ್ನು ಬಂಧು-ಬಾಂಧವರೆಲ್ಲರೂ ಸತ್ತವರ ಅಂತಿಮ ದರ್ಶನವನ್ನು ಪಡೆದು ಶವವನ್ನು ಸ್ಮಶಾನದಲ್ಲಿ ಚಿತೆಯ ಮೇಲೆ ಇರಿಸಿ ಧಾರ್ಮಿಕ ವಿಧಿವಿಧಾನಗಳನ್ನು ಪೂರೈಸಿ ಅಲ್ಲಿ ಚಿತೆಗೆ ಬೆಂಕಿ ಇಡಲು, ಸುಲಭವಾಗಿ ಬೆಂಕಿ ಸಿಗುವಂತಾಗಲೂ ಮನೆಯ ಮುಂದೆ ಹಾಕಿದ್ದ ಬೆಂಕಿಯಿಂದಲೇ ಕೆಲವೊಂದು ಕೆಂಡಗಳನ್ನು ಮಡಿಕೆಯಲ್ಲಿ ತೆಗೆದುಕೊಂಡು ಹೋಗುವ ಪದ್ದತಿ ರೂಡಿಗೆ ಬಂದಿದ್ದು ಇಂದು ವಿದ್ಯುತ್ ಚಿತಾಗಾರದಲ್ಲಿ ಅಂತಿಮ ಸಂಸ್ಕಾರ ನಡೆಸಿದರೂ, ಆಲ್ಲಿ ನಡೆಸುವ ಶಾಸ್ತ್ರಕ್ಕಾಗಿ ಇಂದಿಗೂ ಮಡಿಕೆಯಲ್ಲಿ ಕೆಂಡವನ್ನು ತೆಗೆದುಕೊಂಡು ಹೋಗುವ ಪದ್ದತಿ ರೂಢಿಯಲ್ಲಿದೆ.
  • fire4ಇನ್ನೂ ಕೆಲವರ ಮನೆಯಲ್ಲಿ ಶವ ಸಂಸ್ಕಾರಕ್ಕೆ ಮನೆಯೊಳಗಿನ ಬೆಂಕಿ ಉಪಯೋಗಿಸಬಾರದು ಎಂಬ ಪದ್ದತಿ ಇರುವ ಕಾರಣದಿಂದ ಮನೆಯ ಮುಂದೆ ಬೆಂಕಿ ಹಾಕಿದ್ದ ಬೆಂಕಿಯ ಕೆಲವು ತುಂಡು ಕೆಂಡಗಳನ್ನು ಮಡಕೆಯಲ್ಲಿ ಸ್ಮಶಾನಕ್ಕೆ ತೆಗೆದುಕೊಂಡು ಹೋಗಿ ಅದೇ ಕೆಂಡದಿಂದಲೇ ಚಿತೆಗೆ ಅಗ್ನಿ ಸ್ಪರ್ಶ ಮಾಡುವ ಸಂಪ್ರದಾಯವೂ ಇದೆ.
  • ಅದೇ ರೀತಿ ಕೆಲವು ಗ್ರಾಮೀಣ ಪ್ರದೇಶದಲ್ಲಿ ಮೃತರಾದವರ ಶವಗಳಿಗೆ ಬಿಸಿ ನೀರಿನಲ್ಲಿ ಸ್ನಾನ ಮಾಡಿಸಿ ಶುಚಿರ್ಭೂತಗೊಳಿಸಿ ಶುಭ್ರವಾದ ಬಟ್ಟೆಗಳನ್ನು ತೊಡಿಸಿ/ಹೊದಿಸಿ ಸ್ಮಶಾನಕ್ಕೆ ಕೊಂಡೊಯ್ಯುವ ಪದ್ದತಿ ಇರುವ ಕಾರಣ, ಹಾಗೆ ನೀರನ್ನು ಬಿಸಿ ಮಾಡಲು ಇದೇ ಬೆಂಕಿಯನ್ನೇ ಬಳಸುವುದು ರೂಡಿಯಲ್ಲಿದೆ.
  • ಇನ್ನು ಹೀಗೆ ಹಚ್ಚಿದ ಬೆಂಕಿಯನ್ನು ಶವವನ್ನು ಸ್ಮಶಾನಕ್ಕೆ ತೆಗೆದುಕೊಂಡು ಹೋದ ಕೂಡಲೇ ಕುಟುಂಬದ ಹಿರಿಯರು ನಂದಿಸುತ್ತಾರೆ. ಶವವನ್ನು ಸ್ಮಶಾನಕ್ಕೆ ತೆಗೆದುಕೊಂಡು ಹೋದ ನಂತರ ದುಃಖ ತಡೆಯದೇ ಕೆಲವರು ಅದೇ ಬೆಂಕಿಯಿಂದ ಅನಾಹುತ ಮಾಡಿಕೊಳ್ಳಬಾರದೆಂಬ ಮುಂಜಾಗ್ರತೆಯ ಕ್ರಮ ಇದಾಗಿದೆ.

ಇನ್ನು ಹೆಣವನ್ನು ಸ್ಮಶಾನಕ್ಕೆ ಹೊತ್ತು ಹೊಂಡು ಹೋಗುವಾಗ ಕಡಲೇ ಪುರಿ ಮತ್ತು ನಾಣ್ಯವನ್ನು ಎಸೆಯುವ ಪದ್ದತಿಯೂ ಬಹುತೇಕ ಕಡೆಯಲ್ಲಿ ರೂಢಿಯಿದ್ದು, ಹಾಗೆ ಎಸೆಯುವ ಕಡಲೇ ಪುರಿಯು ಜೀವನ ಎನ್ನುವುದು ಬರೀ ಟೊಳ್ಳು, ನಶ್ವರ ಎನ್ನುವುದರ ಪ್ರತೀಕವಾಗಿದ್ದರೆ, ಇನ್ನು ಹೋಗುವಾಗ ಎಲ್ಲರೂ ಬರೀಗೈಯಲ್ಲೇ ಹೋಗುತ್ತಾರೆಯೇ ಹೊರತು ತಾವು ಸಂಪಾದಿಸಿದ ಹಣವನ್ನು ತೆಗೆದುಕೊಂಡು ಹೋಗದೇ ಎಲ್ಲವನ್ನೂ ಇಲ್ಲಿಯೇ ಬಿಟ್ಟು ಹೋಗುತ್ತಾರೆ ಎನ್ನುವುದನ್ನು ತಿಳಿಸುವುದಕ್ಕಾಗಿಯೇ ನಾಣ್ಯಗಳನ್ನು ಹೆಣದ ಮೇಲೆ ಎಸೆಯುವುದರ ಮೂಲಕ ಅತ್ಯಂತ ಗಹನವಾದ ವಿಷಯವನ್ನು ಅತ್ಯಂತ ಸರಳವಾಗಿ ತಿಳಿಯಪಡಿಸುವುದನ್ನು ನಮ್ಮ ಪೂರ್ವಜರು ರೂಢಿಗೆ ತಂದಿದ್ದಾರೆ.

ಹೆಣವನ್ನು ಸ್ಮಶಾನಕ್ಕೆ ತೆಗೆದುಕೊಂಡು ಹೋಗುವಾಗ ಕಡ್ಲೇ ಪುರಿ ಮತ್ತು ಹೂವುಗಳು ಚೆಲ್ಲಲು ಮತ್ತೊಂದು ಪ್ರಮುಖ ಕಾರಣವೆಂದರೆ, ಅಂತಿಮ ದರ್ಶನಕ್ಕೆ ತಡವಾಗಿ ಬರುವವರು ಆ ಹೂವು ಮತ್ತು ಕಡ್ಲೇಪುರಿಯನ್ನು ಚೆಲ್ಲಿದ ದಾರಿಯ  ಜಾಡನ್ನು ಅಂತಿಮ ಸಂಸ್ಕಾರ ನಡೆಯುವಂತಹ ಸ್ಥಳಕ್ಕೆ (ಗ್ರಾಮೀಣ ಪ್ರದೇಶಗಳಲ್ಲಿ ಮೃತಪಟ್ಟವರ ಹೊಲಗಳಲ್ಲಿ ಶವಗಳನ್ನು ಹೂಳುವುದು/ಸುಡಲಾಗುವ ಕಾರಣ ಎಲ್ಲರಿಗೂ ಆ ಸ್ಥಳದ ಪರಿಚಯ ಇರುವುದಿಲ್ಲ) ಸುಲಭವಾಗಿ ಬಂದು ತಮ್ಮ ಕೊನೆಯ ಗೌರವವನ್ನು ಸಲ್ಲಿಸುವ ಮಾರ್ಗೋಪಾಯವಾಗಿದೆ.

ಹಿಂದೆಲ್ಲಾ ಸತ್ತವರ ಮನೆಯಲ್ಲಿ ಮೂರು ದಿನಗಳು ಅರ್ಥಾತ್ ಹಾಲು ತುಪ್ಪವಾಗುವವರೆಗೂ, ಇನ್ನೂ ಕೆಲವರ ಮನೆಯಲ್ಲಿ 13 ನೇ ದಿನ ವೈಕುಂಠ ಸಮಾರಾಧನೆ ಮುಗಿಯುವ ವರೆಗೂ ಮನೆ ಒಲೆಯಲ್ಲಿ ಹತ್ತಿಸಬಾರದೆಂಬ ಪದ್ದತಿಯೂ ಇದ್ದು, ಅಷ್ಟು ದಿನಗಳ ಕಾಲ ನೆರೆ ಹೊರೆಯವರು ಇಲ್ಲವೇ ಹತ್ತಿರದ ಬಂಧುಗಳು ಆವರ ಮನೆಗೆ ಊಟ ತಿಂಡಿ ತಂದು ಕೊಡುವ ಮೂಲಕ ಸತ್ತವರ ಮನೆಯ ದುಃಖಕ್ಕೆ ಸಮಭಾಗಿಗಳಾಗುವ ಪದ್ದತಿ ಇತ್ತು. ದುರಾಡೃಷ್ಟಷಾತ್ ಇಂದು ಆ ರೀತಿಯ ನೆರೆಹೊರೆಯವರು ಕಡಿಮೆ ಆದ ಕಾರಣ ಇಲ್ಲವೇ ಇಲ್ಲಾ ಎಂದರೂ ತಪ್ಪಾಗದ ಕಾರಣ, ಸತ್ತ ಮೊದಲನೇ ಇಲ್ಲವೇ ಎರಡನೇಯ ದಿನದ ವರೆಗೂ ಅಕ್ಕ ಪಕ್ಕದವರಾಗಲೀ ಅಥವಾ ಹೊರಗಿನಿಂದ ಆಹಾರವನ್ನು ತಂದು ಮೂರನೇ ದಿನದಿಂದ ಯಥಾಪ್ರಕಾರ ಮನೆಯಲ್ಲೇ ಅಡುಗೆ ಮಾಡುವ ಪದ್ದತಿಯೂ ಜಾರಿಯಲ್ಲಿದೆ.

ಇನ್ನು ಸತ್ತ ದೇಹವು ಅಶುದ್ಧವಾಗಿರುವ ಕಾರಣ, ಅವರ ಅಂತಿಮ ಸಂಸ್ಕಾರಕ್ಕೆ ಬಂದವರೆಲ್ಲರೂ ಖಡ್ಡಾಯವಾಗಿ ತಲೆಗೆ ಸ್ನಾನ ಮಾಡುವುದಲ್ಲದೇ ತೊಟ್ಟ ಬಟ್ಟೆಗಳನ್ನು ಶುಭ್ರಗೊಳಿಸಲೇ ಬೇಕೆಂಬ ನಿಯಮವಿದೆ. ಇನ್ನು ಸತ್ತವರ ಮೆನೆಯ ಹತ್ತಿರದ ಸಂಬಂಧಿಕರಿಗೆ 11 ದಿನಗಳ ಕಾಲ ಸೂತಕವಿದ್ದು ಆ ಸಮಯದಲ್ಲಿ ಅವರು ಬೇರೆಯವರ ಮನೆಗೆ ಹೋಗುವುದಾಗಲೀ, ಬೇರೆಯವರು ಅವರ ಮನೆಗೆ ಬರುವುದು ನಿಶಿದ್ಧವಾಗಿದ್ದು. ಅಕಸ್ಮಾತ್ ಹೋಗಲೇ ಬೇಕಾದ ಅನಿವಾರ್ಯವಾದಲ್ಲಿ ಒಬ್ಬರಿಗೊಬ್ಬರು ಮುಟ್ಟಿಕೊಂಡು ದೈಹಿಕ ಸಂಪರ್ಕ ಮಾಡಬಾರದೆಂಬ ನಿಯಮವಿದೆ. ಇದು ಖಂಡಿತವಾಗಿಯೂ ಸತ್ತ ವ್ಯಕ್ತಿಗೆ ಇರಬಹುದಾದ ಸೋಂಕುಗಳು ಅಥವಾ ರೋಗಾಣುಗಳು ಇತರರಿಗೆ ಹರಡುವುದನ್ನು ತಪ್ಪಿಸುವ ಮುಂಜಾಗೃತಾ ಕ್ರಮವಾಗಿದೆ. ಅದೇ ರೀತಿ 13 ನೇ ದಿನ ಶುದ್ಧ ಪುಣ್ಯಾಹ ಎಂಬ ಆಚಾರ ಪದ್ದತಿಯ ಅಡಿಯಲ್ಲಿ ಗೋ ಮೂತ್ರವನ್ನು ಇಡೀ ಮನೆಗೆ ಸಿಂಪಡಿಸುವ ಮೂಲಕ ನೈರ್ಮಲ್ಯೀಕರಣವನ್ನು (Natural Sanitizer) ಮಾಡುವ ಪದ್ದತಿಯನ್ನು ನಮ್ಮ ಪೂರ್ವಜರು ರೂಢಿಗೆ ತಂದಿರುವುದು ನಿಜಕ್ಕೂ ಅನನ್ಯ ಮತ್ತು ಅದ್ಭುತವಾಗಿದೆ.

ಇದೇ ಪದ್ದತಿಯು ಮನೆಯಲ್ಲಿ ಮಕ್ಕಳು ಜನನವಾದಾಗಲೂ ಆಚರಿಸುವ ರೂಢಿಯಲ್ಲಿದ್ದು ಅದಕ್ಕೆ ಪುರುಡು (ಬಹುತೇಕರು ತಪ್ಪಾಗಿ ಸೂತಕ ಎನ್ನುತ್ತಾರೆ) ಎಂದು ಕರೆಯಲಾಗುತ್ತದೆ. ಹಿಂದೆಲ್ಲಾ ಮಕ್ಕಳು ಮನೆಯಲ್ಲಿಯೇ ಹುಟ್ಟುತ್ತಿದ್ದ ಕಾರಣ, ಪುರುಡು ಎಂಬ ನೆಪದಲ್ಲಿ ಹೊರಗಿನವರು ಮನೆಗೆ ಬಂದು ಅವರ ಮೂಲಕ ನವಜಾತ ಶಿಶುವಿಗೆ ಸಾಂಕ್ರಾಮಿಗೆ ರೋಗಾಣುಗಳು ಹರಡದಿರಲಿ ಎನ್ನುವ ಮುಂಜಾಗೃತ ಕ್ರಮವಿದಾಗಿದೆ. ಇಂದಿಗೂ ಸಹಾ ಅವಿವಾರ್ಯ ಸಂಧರ್ಭದಲ್ಲಿ ಬಾಣಂತಿಯ ಮನೆಗೆ ಹೊರಗಿನವರು ಬಂದಾಗ, ಶುದ್ಧವಾಗಿ ಕೈಕಾಲುಗಳನ್ನು ತೊಳೆದುಕೊಂಡು ಬರುವ ಪದ್ದತಿ ಜಾರಿಯಲ್ಲಿದೆ.

ಈ ರೀತಿಯಾಗಿ ವೈಜ್ಣಾನಿಕವಾದ ಕಾರಣಗಳನ್ನು ಸಂಪ್ರದಾಯ ರೂಪದಲ್ಲಿ ಜಾರಿಗೆ ತಂದ ನಮ್ಮ ಹಿರಿಯರ ಆಚಾರ ವಿಚಾರಗಳನ್ನು ಅರಿಯದ ಇಂದಿನ ಜನರು ಅಯ್ಯೋ ಇದೆಲ್ಲಾ ಗೊಡ್ಡು ಸಂಪ್ರದಾಯ ಎಂದು ಮೂಗು ಮುರಿದ ಕಾರಣದಿಂದಾಗಿಯೇ ಇಂದು ನಾನಾ ವಿವಿಧದ ರೋಗರುಜಿನಗಳಿಗೆ ತುತ್ತಾಗಿ ನರಳ ಬೇಕಾಗಿರುವುದು ನಿಜಕ್ಕೂ ದೌರ್ಭಾಗ್ಯವೇ ಸರಿ. ಹಾಗಾಗಿಯೇ ನಮ್ಮ ಹಿರಿಯರು ಸಂಸ್ಕಾರ ಮತ್ತು ಸಂಪ್ರದಾಯ ಮೂಲಕ ರೂಢಿಗೆ ತಂದಿರುವ ಅನೇಕ ಪದ್ದತಿಗಳನ್ನು ಸರಿಯಾಗಿ ಅರ್ಧೈಸಿಕೊಂಡು ಅದರ ಹಿಂದಿರುವ ವೈಜ್ಞಾನಿಕ ಕಾರಣಗಳನ್ನು ನಾವೂ ತಿಳಿದು ಇತರರಿಗೂ ತಿಳಿಸುವುದು ನಮ್ಮ ನಿಮ್ಮೆಲ್ಲರ ಆದ್ಯ ಕರ್ತವ್ಯವೇ ಆಗಿದೆ ಅಲ್ವೇ?

ಏನಂತೀರೀ?
ನಿಮ್ಮವನೇ ಉಮಾಸುತ

2 thoughts on “ಸತ್ತವರ ಮನೆ ಮುಂದೆ ಬೆಂಕಿ ಏಕೆ ಹಾಕುತ್ತಾರೆ?

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s