ಕಾಕತಾಳೀಯ

ಕಾಕತಾಳೀಯ ಎಂಬ ಕನ್ನಡ ಪದಕ್ಕೆ ಪ್ರಾಸಂಗಿಕವಾಗಿ, ಏಕಕಾಲಿಕ ಸಂಭವ, ಅನಿರೀಕ್ಷಿತವಾಗಿ ನಡೆಯಬಹುದಾದ ಅಥವಾ ನಡೆದಿರ ಬಹುದಾದ ಕಾರ್ಯ, ಸ್ಪಷ್ಟವಾದ ಸಾಂದರ್ಭಿಕ ಸಂಪರ್ಕವಿಲ್ಲದ ಘಟನೆಗಳು ಅಥವಾ ಸನ್ನಿವೇಶಗಳ ಗಮನಾರ್ಹ ಸಮ್ಮತಿ ಹೀಗೆ ಹತ್ತು ಹಲವಾರು ಅರ್ಥಗಳು ಬರುತ್ತದೆ. ಸರಳವಾಗಿ ಹೇಳಬೇಕೆಂದರೆ, ನಮಗೆ ಗೊತ್ತಿಲ್ಲದಂತೆ ನಾವು ಅಂದು ಕೊಂಡ ಸನ್ನಿವೇಶಗಳು ನಡೆದಾಗ, ಅದು ನಮ್ಮಿಂದಲೇ ಆದದ್ದು ಎನ್ನುವುದಕ್ಕಿಂತಲೂ ಅದು ಬೇರೋಂದು ಕಾಣದಿಂದಾಗಿರುವುದಕ್ಕೆ ಕಾಕತಾಳೀಯ ಎನ್ನುತಾರೆ. ಉದಾ. ಕಾಗೆಯೊಂದು ಆಯಾಸ ಪರಿಹರಿಸಿಕೊಳ್ಳಲು ಮರದ ಕೊಂಬೆಯ ಮೇಲೆ ಕುಳಿತುಕೊಳ್ಳುವುದಕ್ಕೂ, ಆ ಕೊಂಬೆ ಅದಾಗಲೇ ಒಣಗಿ ಇನ್ನೇನು ಮುರಿದು ಹೋಗುವ ಸ್ಥಿತಿಯಲ್ಲಿದ್ದಕ್ಕೂ ಸರಿ ಹೋಗಿ ಆ ಕೊಂಬೆ ಮುರಿದು ಹೋದಾಗ, ಆ ಕಾಗೆಯು ತಾನು ಕೂತ ಭಾರಕ್ಕೆ ಕೊಂಬೆ ಮುರಿಯಿತು ಎಂದು ಸಂಭ್ರಮ ಪಡುವುದನ್ನೇ ಕಾಕತಾಳೀಯ ಎನ್ನುವುದು. ನೆನ್ನೆ ಮತ್ತು ಇಂದು ನಡೆದ ಅಂತಹದ್ದೇ ಎರಡು ಕಾರತಾಳೀಯ ವಿಷಯವೇ ಇಂದಿನ ಲೇಖನದ ಕಥಾವಸ್ತುವಾಗಿದೆ.

puneetನೆನ್ನೆ ಸಂಜೆ ಕುಟುಂಬದೊಡನೆ ಪುನೀತ್ ರಾಜ್ ಕುಮಾರ್ ಅಭಿನಯಿಸಿರುವ ಕಡೆಯ ಚಿತ್ರವಾದ ಲಕ್ಕೀಮ್ಯಾನ್ ಸಿನಿಮಾ ನೋಡುವುದಕ್ಕೆ ಹೊರಡಲು ಸಿದ್ದವಾಗಿದ್ದಾಗಲೇ, ರೀ.. ಮಂಡ್ಯಾ ರವಿ ಹೋಗ್ಬಿಟ್ರಂತೇ.. ಸ್ವಲ್ಪ ಅದು ನಿಜವೇ ಎಂದು ನೋಡಿ ಎಂದು ಹೇಳಿದಾಗ ಒಂದು ಕ್ಷಣ ನನ್ನ ಕಿವಿಗಳನ್ನು ನಾನೇ ನಂಬದಾಗಿ, ಕೂಡಲೇ ನಡುಗುವ ಕೈಗಳಿಂದಲೇ ಸಾಮಜಿಕ ಜಾಲತಾಣಗಳಲ್ಲಿ ನೋಡಿದಾಗ ಬಹುತೇಕರು ಮಂಡ್ಯಾ ರವಿಯವರ ನಿಧನದ ವಾರ್ತೆಯನ್ನು ಪ್ರಕಟಿಸಿದ್ದರೆ, ಮರಳುಗಾಡಿನಲ್ಲಿ ನೀರು ಸಿಗುವ ಓಯಸ್ಸಿಸ್ ನಂತೆ ಕೆಲವೊಂದು ಕಡೆ ರವಿ ಅವರ ತಂದೆಯವರು ನನ್ನ ಮಗ ಇನ್ನೂ ಸತ್ತಿಲ್ಲ. ಅವರನ ಪರಿಸ್ಥಿತಿ ಗಂಭೀರವಾಗಿದೆ. ಬೆಂಗಳೂರಿನಿಂದ ಮಂಡ್ಯಾಕ್ಕೆ ಕರೆದುಕೊಂಡು ಹೊಗುತ್ತಿದ್ದೇವೆ ಎಂಬ ಸುದ್ದಿಯನ್ನು ಓದೀ.. ಆಪ್ಪಾ ದೇವರೇ, ರವಿಯವರಿಗೆ ಏನೂ ಆಗದಿರಲಪ್ಪಾ ಎಂದು ಕೇಳಿಕೊಂಡು ದುಗಡದ ಮನಸ್ಸಿನಿಂದಲೇ ಸಿನಿಮಾಗೆ ಹೋಗಿ ಕುಳಿತೆವು.

PUneet210 ತಿಂಗಳುಗಳ ಹಿಂದೆ ಇದೇ ರೀತಿ ಅಪ್ಪು ಅವರ ಅಕಾಲಿಕ ಮರಣ ಸುದ್ಧಿ ಕೇಳಿದ್ದ ನಮಗೆ ಮಂಡ್ಯಾ ರವಿ ಅವರ ವಿಷಯದಲ್ಲಿ ಹಾಗಾಗದಿರಲಿ ಎಂದು ಕೊಳ್ಳುತ್ತಲೇ, ಬಹು ದಿನಗಳ ನಂತರ ಅಪ್ಪು ಅವರನ್ನು ಸಿನಿಮಾ ತೆರೆಯಮೇಲೆ ನೋಡುತ್ತಾ ನಮಗೇ ಅರಿವಿಲ್ಲದಂತೆ ಕಣ್ಣಿರು ಸುರಿಸುತ್ತಿದ್ದ ಪರಿ ಹೇಗಿತ್ತೆಂದರೆ, ಮಧ್ಯಾಂತರದಲ್ಲಿ ಹೊರಗೆ ಎದ್ದು ಸಹಾ ಹೋಗದೇ ಸೀಟಿಗೆ ಅಂಟಿ ಕುಳುತ್ತಿದ್ದೆವು. ಸಿನಿಮಾದಲ್ಲಿ ಆಧುನಿಕ ವೇಷದ ದೇವರ ಪಾತ್ರ ನಿರ್ವಹಿಸಿದ್ದ ಪುನೀತ್ ಅವರು ಪ್ರಭುದೇವ ಅವರೊಂದಿಗೆ ಸಿನಿಮಾದ ಕಡೆಯ ದೃಶ್ಯಾವಳಿಯಲ್ಲಿ ನೃತ್ಯ ಮಾಡುತ್ತಿದ್ದರೆ, ನಮ್ಮೆಲ್ಲರ ಗಮನ ಕೇವಲ ಅಪ್ಪೂ ಮೇಲೇ ಇತ್ತೇ ವಿನಃ ಅಪ್ಪಿ ತಪ್ಪಿ ಭಾರತದ ಮೈಕಲ್ ಜಾಕ್ಸನ್ ಎಂದೇ ಖ್ಯಾತವಾಗಿರುವ ಪ್ರಭುದೇವ ಅವರ ಮೇಲೆ ಹೋಗಲೇ ಇಲ್ಲ. ಮನೆಗೆ ಬಂದ ಕೂಡಲೇ ಮತ್ತೆ ಮಂಡ್ಯಾ ರವಿಯವರ ಕುರಿತಾಗಿ ಹೆಚ್ಚಿನ ಮಾಹಿತಿ ಹುಡುಕುತ್ತಿದ್ದಾಗ ಬಹುತೇಕ ಕಡೆ ರವಿ ಇನ್ನಿಲ್ಲಾ ಎಂಬ ವಿಷಯವನ್ನು ಪ್ರಕಟಿಸುತ್ತಿದ್ದರೆ, ಕುತೂಹಲಕಾರಿಯಾಗಿ ಮಂಡ್ಯಾ ರವಿಯವರ ನನಸಾಗದ ಆಸೆಯ ಬಗ್ಗೆ ಒಂದು ಕಡೆ ಓದಿದಾಗ ಖಂಡಿತವಾಗಿಯೂ ದುಃಖವನ್ನು ತಡೆಯಲಾಗಲೇ ಇಲ್ಲ.

ravi1ನಟ ಪುನೀತ್​ ರಾಜ್​ಕುಮಾರ್ ನಿಧನರಾದ ಸಂದರ್ಭದಲ್ಲಿ ಛೇ.. ಅವರೊಂದಿಗೆ ಒಂದಾದರು ಸಿನಿಮಾದಲ್ಲಿ ನಟಿಸಬೇಕು ಎಂಬ ಆಸೆಯನ್ನು ಹೊಂದಿದ್ದೆ. ಆದರೆ ಆ ಅವಕಾಶ ನನಗೆ ಸಿಗಲೇ ಇಲ್ಲ ಎಂಬ ದುಃಖವನ್ನು ತೋಡಿಕೊಂಡಿದ್ದರು. ಕಾಕತಾಳಿಯವೆಂದರೆ, ಅದೇ ಪುನೀತ್ ರಾಜಕುಮಾರರ ಕಡೆಯ ಸಿನಿಮಾ ಬಿಡುಗಡೆಯಾಗಿ ನಾವು ಅದನ್ನು ನೋಡುತ್ತಿರುವ ಸಂದರ್ಭದಲ್ಲೇ ಮಂಡ್ಯ ರವಿಯವರೂ ಪುನೀತ್ ಅವರಂತೆ ಮರಳಿ ಬಾರದ ಲೋಕಕ್ಕೆ ಹೋಗಿದ್ದಾರೆ. ಆದರೇ ಒಂದು ಸಮಾಧಾನಕರ ಅಂಶವೆಂದರೆ, ಪುನೀತ್​ ಜೊತೆಯಲ್ಲಿ ನಟಿಸದೇ ಹೋದರೂ, ರಾಘವೇಂದ್ರ ರಾಜಕುಮಾರ್ ಅವರ ಹಿರಿಯ ಪುತ್ರ ವಿನಯ್​ ರಾಜ್​ಕುಮಾರ್​ ಜೊತೆಯಲ್ಲಿ ಪೆಪೆ ಎಂಬ ಸಿನಿಮಾದಲ್ಲಿ ಮಂಡ್ಯಾ ರವಿ ನಟಿಸಿದ್ದು ಅದಿನ್ನೂ ತೆರೆಕಾಣಬೇಕಿದೆ.

ಮಂಡ್ಯಾದ ಹೆಸರಾಂತ ಸಾಹಿತಿಯೂ ಮತ್ತು ಪ್ರಾಧ್ಯಾಪಕರಾಗಿದ್ದ ಡಾ. ಎಚ್. ಎಸ್. ಮುದ್ದೇಗೌಡ ಮತ್ತು ವೆಂಕಟಲಕ್ಷಮ್ಮ ದಂಪತಿಗಳಿಗೆ 43 ವರ್ಷದ ಹಿಂದೆ ಜನಿಸಿದ್ದ ಮಗುವಿಗೆ ರವಿ ಪ್ರಸಾದ್ ಎಂದು ಹೆಸರಿಟ್ಟಿದ್ದರು. ಚಿಕ್ಕವಯಸ್ಸಿನಿಂದಲೂ ಆಟ ಪಾಠಗಳಲ್ಲಿ ಚುರುಕಾಗಿದ್ದ ರವಿ ಓದಿನೊಂದಿಗೆ ನಾಟಕಗಳಲ್ಲಿ ಆಭಿನಯಿಸುತ್ತಿದ್ದ ಕಾರಣ ಮುಂದೆ ಇಂಗ್ಲೀಷ್ ನಲ್ಲಿ ಎಂಎ ಮುಗಿಸಿ ಕಾನೂನಿನಲ್ಲಿ ಪದವಿಯನ್ನು ಪಡೆದರೂ ರಂಗಭೂಮಿಯೊಂದಿಗೆ ಅಂಟಿಸಿಕೊಂಡಿದ್ದ ನಂಟು ಬಿಟ್ಟಿರಲಿಲ್ಲ, ಸಮಯ ಸಿಕ್ಕಾಗಲೆಲ್ಲಾ ಗೆಳೆಯರೊಡನೇ ಸೇರಿಕೊಂಡು ನಾಟಕ ತಂಡವನ್ನು ಕಟ್ಟಿಕೊಂಡು ನಾಟಕಗಳನ್ನು ಮಾಡುತ್ತಲೇ ಹೋದರು.

ravi5ಸುಮಾರು 5.6″ – 5.8″ ಎತ್ತರವಿದ್ದಿರಬಹುದಾದ ರವಿ, ನೋಡಲು ಅತ್ಯಂತ ಆಕರ್ಷಣೀಯವಾದ ಬಣ್ಣ, ತಲೆ ತುಂಬಾ ಕೂದಲು ಅದನ್ನು ಒಪ್ಪವಾಗಿ ಬಾಚುವ ಹೇರ್ ಸ್ಟೈಲ್, ಸದಾ ಕಾಲವೂ ಮೇಲ್ದುಟಿ ಮುಚ್ಚುವ ಹಾಗಿ ದಪ್ಪನೆಯ ಮೀಸೆ. ಬಾಯಿ ಬಿಟ್ಟರೆ ಎಲ್ಲಿ ಮುತ್ತು ಉದುರಿ ಹೋಗುತ್ತದೆಯೋ ಎನ್ನುವಂಟೆ ಬಾಯಿಬಿಟ್ಟೂ ಬಿಡದಂತೆ ಹಲ್ಲು ಕಚ್ಚಿ ಮಾತನಾಡುವ ಅವರ ಶೈಲಿ, ತುಟಿಗಳನ್ನು ಸಣ್ಣಗೆ ಸ್ವಲ್ಪ ಸೊಟ್ಟಗೆ ಮಾಡಿಕೊಂಡು ನಗುವ ಆ ಪರಿಯೊಂದಿಗೆ ಅವರನ್ನು ಜನರು ಹೆಚ್ಚಿಗೆ ಇಷ್ಟ ಪಡಲು ಆರಂಭಿಸಿದ್ದೇ ಅವರು ಕಣ್ಣುಗಳನ್ನು ಆಡಿಸುತ್ತಾ, ತಮ್ಮ ಬೇಸ್ ವಾಯ್ಸ್ ನ ಸಂಭಾಷಣೆಯಿಂದಾಗಿಯೇ. 

ravi4ಇಷ್ಟೆಲ್ಲಾ ಅರ್ಹತೆ ಇದ್ದ ರವಿ ಪ್ರಸಾದ್ ಅವರ ನಾಟಕದಲ್ಲಿನ ಮನೋಜ್ಞ ಅಭಿನಯವನ್ನು ಕಂಡ ಕನ್ನಡದ ಹಿರಿಯ ರಂಗಕರ್ಮಿ ಮತ್ತು ನಿರ್ದೇಶಕ ಟಿ. ಎಸ್​.  ನಾಗಾಭರಣ ತಮ್ಮ ನಿರ್ದೇಶನದ ಮಾಹಾಮಾಯಿ ಧಾರವಾಹಿ ಮೂಲಕ ಕಿರುತೆರೆಗ ಪಾದಾರ್ಪಣೆ ಮಾಡಿಸಿದ ನಂತರ ಹಿಂದಿರುಗಿ ನೋಡುವ ಪ್ರಮೇಯ ಮಂಡ್ಯ ರವಿಗೆ ಬರಲೇ ಇಲ್ಲಾ. ರವಿಯ ಸಹಜ ಅಭಿನಯವನ್ನು ಮೆಚ್ಚಿದ ಕಿರುತೆರೆಯ ಮತ್ತೊಬ್ಬ ಹಿರಿಯ ನಿರ್ದೇಶಕ ಟಿ. ಎನ್ ಸೀತಾರಾಂ ಅವರು ತಮ್ಮ ಅತ್ಮೀಯ ಬಳಗಕ್ಕೆ ಸೇರಿಸಿಕೊಂಡು ಒಂದಾಂದ ಮೇಲೆ ಒಂದಂತೆ, ಮಿಂಚು, ಮುಕ್ತ ಮುಕ್ತ, ಮಗಳು ಜಾನಕಿ ಧಾರಾವಾಹಿಗಳಲ್ಲಿ ಅವಕಾಶ ಕೊಟ್ಟರೇ, ರವೀ ಚಿತ್ರಲೇಖ, ಯಶೋಧೆ, ವರಲಕ್ಷ್ಮೀ ಸ್ಟೋರ್ಸ್, ಹಾಗೂ ನಮ್ಮನೆ ಯುವರಾಣಿ ಸೇರಿದಂತೆ ಸಾಕಷ್ಟು ಧಾರವಾಹಿಗಳಲ್ಲಿ ನಟಿಸಿದ್ದಲ್ಲದೇ, ಕಾಫಿತೋಟ ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿಯೂ ಮಂಡ್ಯ ರವಿ ಅಭಿನಯಿಸಿದ್ದರು.. ಶಾಂತಂ ಪಾಪಂ ಎಂಬ ಕ್ರೈಂ ಆಧಾರಿತೆ ಕಾರ್ಯಕ್ರಮವನ್ನು ಅದ್ಭುತವಾಗಿ ನಡೆಸಿಕೊಡುತ್ತಿದ್ದರು.

ravi6ಟಿ. ಎನ್. ಸೀತಾರಾಮ್ ಅವರ ಧಾರಾವಾಹಿಗಳಲ್ಲಿ ನಟಿಸುವ ಪ್ರತಿಯೊಬ್ಬ ಕಲಾವಿದರೂ ಸಹಾ ತಮ್ಮ ಸಹಜ ಅಭಿನಯದಿಂದಾಗಿ ನೋಡ ನೋಡುತ್ತಿದ್ದಂತೆಯೇ ಆವರು ಕಲಾವಿದರು ಎನ್ನುವುದಕ್ಕಿಂತ ತಮ್ಮ ಮನೆಯ ಒಬ್ಬ ಸದಸ್ಯರೇನೋ ಎನ್ನುವಂತಾಗಿಬಿಡುತ್ತಾರೆ. ಅದೇ ರೀತಿ ಮಂಡ್ಯಾ ರವಿಯೂ ಸಹಾ ಅದೆಷ್ಟೋ ಧಾರಾವಾಹಿಗಳಲ್ಲಿ ಅಭಿನಯಿಸಿದ್ದರೂ, ಕನ್ನಡಿಗರು ಗುರುತಿಸೋದು ಸೀತಾರಾಂ ಧಾರಾವಾಹಿಗಳಲ್ಲಿ ಅಭಿನಯಿಸಿದ ಲಾಯರ್, ಪೋಲೀಸ್ ಆಫಿಸರ್ ಮತ್ತು ಕಡೆಯ ಸೀರಿಯಲ್ ಮಗಳು ಜಾನಕಿಯಲ್ಲಿ ಬಾರ್ಗಿ ಹೆಸರಿನ ಗೋಮುಖವ್ಯಾಘ್ರದ ರಾಜಕಾರಣಿಯಗಿಯೇ. ಪಾತ್ರಗಳಲ್ಲಿ ನೈಜತೆಯ ಅಭಿನಯ ಎನ್ನುವುದಕ್ಕಿಂತಲೂ ಶುದ್ಧ ಕನ್ನಡದೊಂದಿಗೆ ಪಾತ್ರದೊಂದಿಗೆ ಪರಕಾಯ ಪ್ರವೇಶ ಮಾಡುತ್ತಿದ್ದರಿಂದಲೋ ಏನೋ ಜನರಿಗೆ ಮಂಡ್ಯಾ ರವಿ ಬಹಳಷ್ಟು ಹತ್ತಿರವಾಗಿದ್ದರು. ಹೀಗೆ ಪ್ರಬುದ್ಧ ಪಾತ್ರಗಳಲ್ಲಿಯೇ ರವಿಯವರನ್ನು ನೋಡಿ ಮೆಚ್ಚಿದ್ದ ಜನರಿಗೆ ನಮ್ಮನೆ ಯುವರಾಣಿ ಧಾರಾವಾಹಿಯಲ್ಲಿ ಮಧ್ಯಮ ವರ್ಗದ ಕುಟುಂಬದ ಖಳನಟನ ಪಾತ್ರದಲ್ಲಿ ಅಭಿನಯಿಸಿದ್ದು ತುಸು ತಳಮಳ ಮತ್ತು ಬೇಸರನ್ನೂ ತರಿಸಿತ್ತು ಎಂದರೂ ಸುಳ್ಳಲ್ಲ.

ಹೀಗೆ ನಾಟಕ, ಧಾರಾವಾಹಿ ಮತ್ತು ಸಿನಿಮಾಗಳ ಅಭಿನಯದಲ್ಲಿ ಸದಾಕಾಲವೂ ನಿರತರಾಗಿದ್ದ ರವೀ ಪ್ರತೀ ಬಾರಿಯೂ ನಿಗಧಿತ ಸಮಯಕ್ಕೆ ಸರಿಯಾಗಿ ತಮ್ಮೂರಾದ ಮಂಡ್ಯಾದಿಂದಲೇ ಬರುತ್ತಿದ್ದದ್ದು ಅವರ ಸಮಯ ಪ್ರಜ್ಞೆಗೆ ಸಾಕ್ಷಿಯಾಗಿತ್ತು. ತಮ್ಮ ಸಹಜ ಅಭಿನಯದಿಂದ ಲಕ್ಷಾಂತರ ಜನ ಅಭಿಮಾನಿಗಳನ್ನು ಗಳಿಸಿದ್ದರೂ ರವಿ ಹೆಚ್ಚಿನ ಜನರೊಂದಿಗೆ ಬೆರೆಯದೇ ಒಂದು ರೀತಿಯ ಅಂಅರ್ಮುಖಿಯಾಗಿಯೇ ಇರುತ್ತಿದ್ದದ್ದು ಗಮನಾರ್ಹ. ಕೇವಲ ಬೆರಳೆಣಿಕೆಯಷ್ಟು ಮಾತ್ರವೇ ಸ್ನೇಹಿತರಿದ್ದರೂ, ಒಮ್ಮೆ ಅವರಿಗೆ ಪರಿಚಿತರಾಗಿ ಅವರಿಬ್ಬರ ಮನಸ್ಥಿತಿ ಸರಿ ಸಮನಾಗಿ ಹೋಗಿತೆಂದರೆ ಬಹಳ ಆತ್ಮೀಯರಾಗಿ ಅದು ಏಕವಚನದ ಗೆಳೆತನವಾಗಿ ಮಾರ್ಪಾಟಾಗುತ್ತಿದ್ದಂತಹ ಅವಿನಾಭಾವ ಸಂಬಂಧವನ್ನು ಇಟ್ಟುಕೊಳ್ಳುತ್ತಿದ್ದಂತಹ ವ್ಯಕ್ತಿಯಾಗಿದ್ದರು.

ಇಷ್ಟೆಲ್ಲಾ ಒಳ್ಳೆಯ ಗುಣಗಳಿದ್ದ ರವಿಯವರೂ ಸಹಾ ಅದು ಹೇಗೋ ಕಾಣೇ ವಿಪರೀತ ಕುಡಿತದ ಚಟಕ್ಕೆ ದಾಸರಾಗಿ ಬಿಟ್ಟಿದ್ದರು. ಸೀತಾರಾಮ್ ತಂಡದ ಮತ್ತೊಬ್ಬ ಕ್ರಿಯಾಶೀಲ ನಟ ಮತ್ತು ಸಂಚಿಕೆ ನಿರ್ದೇಶಕರಾಗಿದ್ದ ಶ್ರೀ ದೇವಾನಂದ್ ಸಹಾ ಇದೇ ರೀತಿಯ ಕುಡಿತಕ್ಕೆ ದಾಸರಾಗಿದ್ದದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ. ಮನುಷ್ಯ ಆರಂಭದಲ್ಲಿ ದುಃಖವನ್ನು ಮರೆಯಲೋ ಇಲ್ಲವೇ ಸುಖಃವನ್ನು ಅನುಭವಿಸಲೂ ಅರಂಭಿಸುವ ಕುಡಿತ ನಂತರದ ದಿನಗಳಲ್ಲಿ ಚಟವಾಗಿ ಕುಡಿತವೇ ಮನುಷ್ಯನನ್ನು ನುಂಗಿ ಹಾಕುತ್ತದೆ ಎನ್ನುವಂತೆ ರವಿಯವರ ವಿಷಯದಲ್ಲೂ ಅದೇ ರೀತಿಯಾಗಿ ವಿಪರೀತ ಕುಡಿತದಿಂದಾಗಿ ಸಹಾ ಕಾಲವೂ ಅವರ ಕಣ್ಣುಗಳು ಕೆಂಪಗಿ ಇದ್ದದ್ದಲ್ಲದೇ ವಿಪರೀತ ದಪ್ಪಗೂ ಆಗಿ ಹೋಗಿ ಇತ್ತೀಚೆಗೆ ನಟನೆಯಲ್ಲೂ ಅವರ ಛಾರ್ಮ್ ಸ್ವಲ್ಪ ಕಡಿಮೆಯಾಗಿದ್ದದ್ದನ್ನು ಸ್ಪಷ್ಟವಾಗಿ ಕಾಣಬಹುದಾಗಿತ್ತು.

ಧಾರಾವಾಹಿಯಲ್ಲಿ ಐಪಿಎಸ್ ಅಧಿಕಾರಿಯ ರೋಲ್ ಮಾಡಿದ್ದಾಗ ಅವರ ದೇಹದಾರ್ಡ್ಯ, ಬುದ್ದಿವಂತಿಕೆ, ವರ್ಚಸ್ಸು ಮಿಳಿತಗೊಂಡಿದ್ದ ವ್ಯಕ್ತಿತ್ವವನ್ನು ಜನರು ಮೆಚ್ಚಿಕೊಂಡು ಅಧಿಕಾರಿ ಇದ್ದರೆ ಹೀಗಿರಬೇಕು ಅವರ ಪ್ರತಿಭೆ ಬಗ್ಗೆ ಗುಣನಡತೆಯ ಬಗ್ಗೆ ಅಪಾರ ಮೆಚ್ಚುಗೆ ವ್ಯಕ್ತ ಪಡಿಸುತಿದ್ದರು. ಅಭಿನಯಕ್ಕಾಗಿ ಎಂತಹ ತ್ಯಾಗಕ್ಕೂ ಸಿದ್ಧರಾಗಿರುತ್ತಿದ್ದ ರವಿ ಪ್ರಸಾದ್ ತಮ್ಮ ಜನಪ್ರಿಯ ನಾಟಕವಾದ ಟಿಪ್ಪುಸುಲ್ತಾನದಲ್ಲಿ ಪ್ರತೀ ಪ್ರದರ್ಶನಕ್ಕೂ ತಲೆ ಬೋಳಿಸಿಕೊಂಡು ಅಭಿನಯಿಸುವ ಬದ್ದತೆಯನ್ನು ತೋರುತ್ತಿದ್ದವರು, ಜೀವನದ ವಿಷಯದಲ್ಲಿ ಅದಕ್ಕೆ ತದ್ವಿರುದ್ಧವಾಗಿದ್ದದ್ದು ನಿಜಕ್ಕೂ ಬೇಸರದ ಸಂಗತಿಯಾಗಿದೆ.

ravi2ಕಳೆದ ಒಂದು ತಿಂಗಳಿನಿಂದಲೂ ಜಾಂಡೀಸ್ ಖಾಯಿಲೆಯಿಂದಾಗಿ ಬೆಂಗಳೂರಿನ ಬಿಜಿಎಸ್ ಗ್ಲೋಬಲ್ ಆಸ್ಲತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಂಡ್ಯಾ ರವಿಯವರಿಗೆ ಕಿಡ್ನಿಯ ಸಮಸ್ಯೆಯೂ ಕಾಣಿಸಿಕೊಂಡು ಚಿಕಿತ್ಸೆ ಫಲಕಾರಿಯಾಗದೇ ಸೆಪ್ಟಂಬರ್ 14, 2022ರಂದು ತಮ್ಮ ತಂದೆ, ತಾಯಿ, ಪತ್ನಿ ಜಿ ಎಸ್ ಮಾಲತಿ ಮತ್ತು ಪುತ್ರ ರಾಜೀವ್ ಅವರೊಂದಿಗೆ ಅಪಾರವಾದ ಅಭಿಮಾನಿಗಳನ್ನು ಕೇವಲ 43ವರ್ಷಕ್ಕೇ ಅಗಲಿ ಹೋಗಿರುವುದು ನಿಜಕ್ಕೂ ದುಃಖಕರವೇ ಸರಿ.

ಚಿತ್ರರಂಗಕ್ಕೆ ಅದ್ಯಾರ ಕೆಟ್ಟ ದೃಷ್ಠಿ ಬಿದ್ದಿದೆಯೋ ತಿಳಿಯದು ಅಪ್ರತಿಮ ನಟರು ಒಬ್ಬರಾದ ಮೇಲೆ ಒಬ್ಬರಂತೆ ಇಹಲೋಕ ಯಾತ್ರೆ ನಡೆಸುತ್ತಿದ್ದಾರೆ ಒಬ್ಬೊಬ್ಬರನ್ನೇ ಕಳೆದುಕೊಂಡ ಚಿತ್ರರಂಗ ಶೋಕದ ಸಾಗರದಲ್ಲಿ ಮುಳುಗಿ ಹೋಗಿರುವ ಈ ಸಂದರ್ಭದಲ್ಲಿ ಕನ್ನಡ ಕಿರುತೆರೆಯ ಜನಪ್ರಿಯ ಕಲಾವಿದ ಮಂಡ್ಯ ರವಿ ಪ್ರಸಾದ್ ಆವರ ಸೇರ್ಪಡೆಯಾಗಿರುವುದು ಕಲಾರಂಗಕ್ಕೆ ತುಂಬಲಾರದ ನಷ್ಟವಾಗಿದ್ದರೂ, ದುಶ್ಛಟಗಳಿಗೆ ದಾಸರಾಗಿರುವ ಪ್ರತಿಯೊಬ್ಬರಿಗೂ ಎಚ್ಚರಿಕೆಯೆ ಗಂಟೆಯಾಗಿದೆ ಎನ್ನುವುದಂತೂ ಸತ್ಯ. ಈ ಎಲ್ಲಾ ಘಟನೆಗಳಿಂದ ಪಾಠ ಕಲಿತು, ಜೀವ ಇದ್ದಲ್ಲಿ ಮಾತ್ರವೇ ಜೀವನ ಎಂಬುದನ್ನು ಅರಿತು. ಇತಿ ಮಿತಿಯಲ್ಲಿ ತಮ್ಮ ಕೆಲಸಕಾರ್ಯಗಳನ್ನು ಮಾಡಿಕೊಂಡು ನೆಚ್ಚಿಕೊಂಡ ಸಂಸಾರದೊಂದಿಗೆ ಎಲ್ಲರೂ ಸುಖಃವಾಗಿ ಇರಲೆಂದೇ ಸಕಲ ಕನ್ನಡಿಗರ ಆಶಯವಾಗಿದೆ ಅಲ್ವೇ?

ಏನಂತೀರೀ?
ನಿಮ್ಮವನೇ ಉಮಾಸುತ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s