ಕೊಳ್ಳುಬಾಕ ಸಂಸ್ಕೃತಿ

ಇತ್ತೀಚೆಗೆ ಸಾಮಾಜಿಕ ಜಾಲತಾಣವೊಂದರಲ್ಲಿ ಓದಿದ ಸಂದೇಶವೊಂದು ಬಹಳವಾಗಿ ಮನಸ್ಸನ್ನು ಕಾಡಿದ ಪರಿಣಾಮ ಮತ್ತು ದೇಶದ ಪ್ರಖ್ಯಾತ E-Commerce ಕಂಪನಿಯೊಂದರಲ್ಲಿ ಸುಮಾರು 7.5 ವರ್ಷಗಳ ಕಾಲ ಕೆಲಸ ಮಾಡಿ ಅದರ ಒಳಹೊರವುಗಳನ್ನು ಸುಮಾರಾಗಿ ಅರ್ಥ ಮಾಡಿ ಕೊಂಡಿರುವ ಕಾರಣ, ಈ ಲೇಖನವನ್ನು ಬರೆಯುತ್ತಿದ್ದೇನೆ. ಮೊದಲು ಮೂಲ ಸಂದೇಶವನ್ನು ಓದಿದ ನಂತರ ಲೇಖನದ ಶೀರ್ಷಿಕೆಗೆ ಬರೋಣ.

all2

ಅದೊಂದು ಮುಂಜಾನೆ 4 ಗಂಟೆಗೆ ಸಿಹಿನಿದ್ದೆಯಲ್ಲಿ ಕಂಡ ಕನಸು ನಿಜಕ್ಕೂ ಅಚ್ಚರಿಯನ್ನು ಮೂಡಿಸಿತ್ತು. ಆ ಕನಸಿನಲ್ಲಿ ನಾನು ಭಾರತದ ಅತಿದೊಡ್ಡ ಮಾಲ್ನಲ್ಲಿ ಒಂದು ಜೊತೆ ಸಾಕ್ಸ್ ಮತ್ತು ನೆಕ್ ಟೈ ಖರೀದಿಸಲು ಒಳಗೆ ಕಾಲಿಡುತ್ತಿದ್ದಂತೆ ಆಶ್ಚರ್ಯವಾಯಿತು. ಅಲ್ಲಿ ಸ್ವೆಟರ್ ಬೆಲೆ 9000 ರೂ ಗಳಿದ್ದರೆ, ಸ್ವೆಟರ್ ಪಕ್ಕದಲ್ಲೇ ಇದ್ದ ಜೀನ್ಸ್ ಪ್ಯಾಂಟ್ ಬೆಲೆ 10000 ರೂ. ಎಂದಿತ್ತು, ಅದೇ ರೀತಿ ಅಲ್ಲೇ ಇದ್ದ ಸಾಕ್ಸ್ 8000 ರೂಗಳಿದ್ದರೆ, ಎಲ್ಲದ್ದಕ್ಕಿಂತಲೂ ಬೆರಗುಗೊಳಿಸಿದ್ದು ನಾನು ಕೊಳ್ಳಲು ಬಂದಿದ್ದ ಟೈ ಬೆಲೆ 16,000 ರೂ ಎಂದು ನಮೂದಿಸಿತ್ತು.

mall1

ಇಷ್ಟು ಸಣ್ಣ ವಸ್ತುಗಳಿಗೆ ಇಷ್ಟೋಂದು ಬೆಲೆಯೇ? ಎಂದು ಹೌರಾರುತ್ತಾ, ಅಲ್ಲೇ ಇದ್ದ ಮಾರಾಟ ಸಹಾಯಕನನ್ನು ವಿಚಾರಿಸಲು ಅಲ್ಲೇ ಗಡಿಯಾರದ ವಿಭಾಗಕ್ಕೆ ಹೋದಾಗ, ಅಲ್ಲಿದ್ದ ರೋಲೆಕ್ಸ್ ಗಡಿಯಾರದ ಬೆಲೆ ರೂ. 225/– ಅದೇ ರೀತಿ ಗಾಜಿನ ಪೆಟ್ಟಿಗೆಯಲ್ಲಿ ಭದ್ರವಾಗಿಟ್ಟಿದ್ದ 4 ಕ್ಯಾರೆಟ್ ಡೈಮಂಡ್ ರಿಂಗ್ ಬೆಲೆ ಕೇವಲ 95/- ಎಂದಿತ್ತು. ಇದರಿಂದ ಆಘಾತಕ್ಕೊಳಗಾದ ನಾನು ಅರೇ, ರೋಲೆಕ್ಸ್ ವಾಚ್ ರೂ. 225/- ಕ್ಕೆ ಹೇಗೆ ಮಾರಾಟವಾಗುತ್ತದೆ? ಅದೇ ರೀತಿ ಅಗ್ಗದ ಜೋಡಿ ಸಾಕ್ಸ್ ರೂ. 8000/- ಗೆ ಮಾರಾಟವಾಗುತ್ತದೆ? ಎಂದು ಪ್ರಶ್ನಿಸಿದಾಗ, ಆತ ಬಹಳ ಕೋಪದಿಂದ ಸಾರ್, ನಿನ್ನೆ ರಾತ್ರಿ ಯಾರೋ ಹುಚ್ಚಾ ನಮ್ಮ ಅಂಗಡಿಗೆ ನುಗ್ಗಿ ಎಲ್ಲದರ ಬೆಲೆಯನ್ನು ಬದಲಾಯಿಸಿದ್ದಾನೆ ಎಂದು ಹೇಳಿದ್ದಲ್ಲದೇ, ಆತ ಆ ಎಲ್ಲಾ ವಸ್ತುಗಳ ಮುಂದಿದ್ದ ಬೆಲೆಯ ಪಟ್ಟಿಯನ್ನು ಸರಿಪಡಿಸಲು ಹೆಣಗಾಡುತ್ತಿದ್ದ.

ಜನರು ಆತ ಹೇಳಿದ್ದನ್ನು ತಾಳ್ಮೆಯಿಂದ ಕೇಳಲು ಮುಂದಾಗದೇ, ತಮ್ಮ ಮೌಲ್ಯವನ್ನು ಕಳೆದುಕೊಂಡಂತೆ ವರ್ತಿಸುತ್ತಾ, ಹೆಚ್ಚಿನ ಮೌಲ್ಯದ ವಸ್ತುಗಳನ್ನು ಅಲ್ಲಿ ನಮೂದಿಸಿದ್ದ ಅತ್ಯಂತ ಕಡಿಮೆ ಹಣಕ್ಕೇ ಕೊಡುವಂತೆ ದಂಬಾಲು ಬಿದ್ದರೇ ಇನ್ನೂ ಕೆಲವರು ಅಂಗಡಿಯವರ ಜೊತೆ ಕಾದಾಟಕ್ಕೆ ಮುಂದಾಗಿದ್ದರು.

ನಿಜ ಹೇಳಬೇಕೆಂದರೆ ಇದು ಕೇವಲ ಕನಸಾಗಿರದೇ, ವಾಸ್ತವಕ್ಕೆ ಹಿಡಿದ ಕೈಗನ್ನಡಿಯಾಗಿತ್ತು. ಜನರು ಈಗ ಅಗತ್ಯಕ್ಕಿಂತಲೂ ಅನಾವಶ್ಯಕವಾಗಿ ಕೊಳ್ಳುಬಾಕ ಸಂಸ್ಕೃತಿಗೆ ಮಾರು ಹೋಗುತ್ತಿರುವುದು ಸ್ಪಷ್ಟವಾಗಿ ಕಾಣುತ್ತಿತ್ತು. ಅದೇ ರೀತಿ ಹೆಚ್ಚಿನ ಬೆಲೆಯ ವಸ್ತುಗಳನ್ನು ಕಡಿಮೆ ಬೆಲೆಗೆ ಕೊಳ್ಳಲು ಹಪಾಹಪಿಸುವ ಜನ ಎಂತಹ ಕುಕೃತ್ಯಗಳಿಗೂ ಮುಂದಾಗುತ್ತಾರೆ ಎಂಬುದರ ಉದಾಹರಣೆಯಾಗಿತ್ತು. ಹಿಂದೆಲ್ಲಾ ಪ್ರತೀ ತಿಂಗಳ ಮೊದಲ ವಾರದಲ್ಲಿ ಮನೆಯ ಆಕೆ ಇಡೀ ತಿಂಗಳಿಗೆ ಅವಶ್ಯಕವಾಗಿದ್ದ ವಸ್ತುಗಳನ್ನು ಪಟ್ಟಿ ಮಾಡಿ ಅದನ್ನು ತಮ್ಮ ಮನೆಯವರ ಕೈಗಿತ್ತರೇ, ಆತ ಅದನ್ನು ತೆಗೆದುಕೊಂಡು ಹತ್ತಿರದ ಕಿರಾಣಿ ಅಂಗಡಿಯಿಂದ ಅವೆಲ್ಲವನ್ನು ಖರೀದಿಸಿ ತಂದಿತ್ತರೇ, ವಿಶೇಷ ಸಂದರ್ಭದದ ಹೊರತಾಗಿ ಇಡೀ ತಿಂಗಳಲ್ಲಿ ಮತ್ತೆ ಆ ಅಂಗಡಿಯತ್ತ ಹೋಗುವ ಪ್ರಮೇಯವೇ ಇರುತ್ತಿರಲಿಲ್ಲ.

ಇನ್ನು ಹಬ್ಬ ಹರಿದಿನಗಳು ಬಂದಿತೆಂದರೆ, ಮನೆಯ ಹಿರಿಯರು ತಮ್ಮ ಪರಿಚಯವಿದ್ದ ಬಟ್ಟೆ ಅಂಗಡಿಗೆ ಹೋಗಿ ಅಲ್ಲಿ ತಮ್ಮ ಮನೆಯ ಹೆಣ್ಣುಮಕ್ಕಳಿಗೆ ಒಮ್ದೇ ಥಾನ್ ನಲ್ಲಿ ಬಟ್ಟೆ ತೆಗೆದುಕೊಂಡು ಅದೇ ರೀತೀಯಾಗಿ ಗಂಡು ಮಕ್ಕಳಿಗೂ ಒಂದೇ ರೀತಿಯ ಬಟ್ಟೆಗಳನ್ನು ಖರೀದಿಸಿ ಅಲ್ಲೇ ಅಂಗಡಿಯ ಮುಂದೆ ಇರುತ್ತಿದ್ದ ದರ್ಜಿ (ಟೈಲರ್)ಗೆ ಕೊಟ್ಟು, ಲಂಗ, ದಾವಣಿ, ಪ್ಯಾಂಟು ಶರ್ಟ್ ಹೊಲಿಸಿಕೊಂಡು ಬಂದರೆ, ಹಬ್ಬದ ದಿನ ಇಡೀ ಮನೆ ಮಂದಿಯೆಲ್ಲಾ ಸಂಭ್ರಮ ಸಡಗರಗಳಿಂದ ಅದೇ ಬಟ್ಟೆಗಳನ್ನು ಧರಿಸಿ ಸಂತೋಷ ಪಡುತ್ತಿದ್ದರು.

discounts

ಆದರೆ ಇಂದು ಅವೆಲ್ಲವೂ ಬದಲಾಗಿ ಹೋಗಿದೆ. ದೈನಂದಿನ ಬಳಕೆಗೆ ಅಗತ್ಯಕ್ಕಿರುವ ವಸ್ತುಗಳನ್ನು ಕೊಳ್ಳುವುದಕ್ಕಿಂತಲೂ, Mall & Online Shopping ತಾಣಗಳು ಕೊಡುವ offers/Discount ಗಳ ಆಧಾರದ ಮೇಲೆ ಖರೀಧಿ ಮಾಡುವುದನ್ನು ಕಾಣಬಹುದಾಗಿದೆ. ಕೇವಲ 2-3 ದಶಕಗಳ ಹಿಂದೆ ಇರುತ್ತಿದ್ದ ಒಂದೇ ಬಚ್ಚಲು ಮನೆಯಲ್ಲಿ, ಒಂದೇ ಸೋಪು, ಹಲ್ಲುಪುಡಿ/ಪೇಸ್ಟ್, ಸೀಗೆ ಪುಡಿ, ಚಿಗರೇ ಪುಡಿಗಳು ಇರುತ್ತಿದ್ದರೆ, ಇಂದು ಮನೆಯಲ್ಲಿ ಪ್ರತಿಯೊಬ್ಬರಿಗೂ ಪ್ರತ್ಯೇಕ ಬಚ್ಚಲು ಮನೆ ಅದರಲ್ಲಿ ಅವರವರದ್ದೇ ಆದಂತಹ ಸೋಪು, ಪೇಸ್ಟ್, ಶಾಂಪೂಗಳು, ಜಾಹೀರಾತಿಗೆ ಮರುಳಾಗಿ ಖರೀದಿಸಿದ, ಕೂದಲು ಉದುರುವಿಕೆಯನ್ನು ತಡೆಯುವ ಎಣ್ಣೆಗಳು, ಕೂದಲು ಸೊಂಪಾಗಿ ಬೆಳೆಯುವಂತಹ ಇನ್ನು ನಾನಾ ತರಹದ ಎಣ್ಣೆಗಳು, ಕಪ್ಪಗಿರುವವರನ್ನು ಬೆಳ್ಳಗೆ ಮಾಡುತ್ತದೆ ಎಂಬ ಭ್ರಮೆ ಮೂಡಿಸುವಂತಹ ಬಗೆ ಬಗೆಯ ಕ್ರೀಮ್ಗಳು, ಪೌಡರ್ಗಳು, ಇನ್ನು ತಮ್ಮ ಕಂಪನಿಯ ಕಾಚಾ, ಬನಿಯನ್, ಬಾಡೀ ಸ್ಪ್ರೇ ಹಾಕಿಕೊಂಡ ತಕ್ಷಣವೇ ಹುಡುಗಿಯರು ಮುಗಿ ಬೀಳುತ್ತಾರೆಂಬ ಮರಳು ಮಾಡುವ ಪದಾರ್ಥಗಳೇ ಮನೆಯ ತುಂಬಾ ತುಂಬಿಕೊಂಡಿದೆ ಎಂದರೆ ಸುಳ್ಳೇನಲ್ಲಾ.

bathroom

ನೈಸರ್ಗಿಕವಾದ ಕೊಬ್ಬರಿ ಎಣ್ಣೆ, ಕಡಲೇ ಹಿಟ್ಟು ಅರಿಶಿನ, ಅಂಟುವಾಳಕಾಯಿ, ಸೀಗೇ ಪುಡಿ, ಚಿಗರೇಪುಡಿ ಇವೆಲ್ಲವೂ ಇಂದಿನವರಿಗೆ ತಿಳಿದೇ ಇಲ್ಲಾ. ಇಂದಿನ ಬಹುತೇಕರು ಜಾಹೀರಾತಿನಲ್ಲಿ ತಮ್ಮ ಸಿನಿಮಾ ತಾರೆಯರು, ತಮ್ಮ ನೆಚ್ಚಿನ ಆಟಗಾರರು ತಮ್ಮನ್ನೇ ತಾವು ಕಂಪನಿಗಳಿಗೆ ಮಾರಿಕೊಂಡು ನೀಡುವ ಜಾಹೀರಾತುಗಳಿಗೆ ಮಾರು ಹೋಗಿ, ಕಡಿಮೆ ಮೌಲ್ಯದ ವಸ್ತುಗಳಿಗೆ ಸಾಕಷ್ಟು ಹಣವನ್ನು ಪಾವತಿಸಲು ಸಿದ್ಧರಿರುವುದು ನಿಜಕ್ಕೂ ವಿಪರ್ಯಾಸವೇ ಸರಿ. ಅವರಿಗೆ ಯಾವ ವಸ್ತು ಮೌಲ್ಯಯುತವಾಗಿದೆ ಮತ್ತು ಯಾವುದು ಅಲ್ಲ ಎಂಬುದನ್ನು ಅರಿಯದೆ, ಜನಮರುಳೋ ಜಾತ್ರೆ ಮರುಳೋ ಎನ್ನುವಂತೆ ಕುರಿಮಂದೆಯಂತೆ ಕೊಳ್ಳುಬಾಕರಾಗುತ್ತಿರುವ ಬಗ್ಗೆ ನಿಜಕ್ಕೂ ಕರುಣೆ ಇದೆ.

sales

ಇನ್ನು ದಸರಾ, ದೀಪಾವಳಿ, ಕ್ರಿಸ್ಮಸ್, ಪಾಶ್ಚಾತ್ಯರ ಹೊಸವರ್ಷ, ಸಂಕ್ರಂತಿ, ಪ್ರೇಮಿಗಳ ದಿನಾಚರಣೆ, ಯುಗಾದಿ, ಅಕ್ಷಯ ತದಿಗೆ, ಗೌರಿ, ಗಣೇಶ ಹಬ್ಬಗಳು ಬಂದಿತೆಂದರೆ, ಈ ರೀತಿಯ mall & Online ವ್ಯಾಪಾರಿಗಳಿಗೆ ಸುಗ್ಗಿಯೋ ಸುಗ್ಗಿ, Big billion day, Great Indian Festival, End of reasons sales ಹೀಗೆ ಮಣ್ಣು ಮಸಿ ಎಂಬ ಹೆಸರಿನಲ್ಲಿ ಲಕ್ಷಾಂತರ ಉತ್ಪನ್ನಗಳನ್ನು ರಿಯಾಯಿತಿ ದರದಲ್ಲಿ ಕೊಡುತ್ತಿದ್ದೇವೆ ಎಂದು ಒಂದು ತಿಂಗಳುಗಳ ಮುಂಚೆಯೇ, ಎಲ್ಲಾ ರೀತಿಯ ಮಾಧ್ಯಮಗಳಲ್ಲಿ ಜಾಹೀರಾತು ನೀಡುತ್ತಿದ್ದಂತೆಯೇ, ಬಹುತೇಕರು ಬೇಕೋ ಬೇಡವೋ ಯಾವುದನ್ನೂ ಗಮನಿಸಿದೇ, ಆ ಶಾಪಿಂಗ್ ದಿನಗಳಲ್ಲಿ ಹುಚ್ಚಾಪಟ್ಟೇ ಕೊಳ್ಳಲು ಪಟ್ಟಿ ಮಾಡಿಕೊಳ್ಳುವುದಲ್ಲದೇ, ಆ ಶಾಪಿಂಗ್ ದಿನಗಳಲ್ಲಿ ಒಂದಷ್ಟು ರಿಯಾಯಿತಿ ಹಣ ಉಳಿಯುತ್ತದೆ ಎಂಬ ಆಸೆಯಿಂದ, ಪಟ್ಟಿ ಮಾಡಿಕೊಂಡಿದ್ದಕ್ಕೂ ಅಧಿಕ ವೆಚ್ಚದ ವಸ್ತುಗಳನ್ನು ಬೇಕೋ ಬೇಡವೋ ಕೊಂಡು ಕೊಂಡು ಅದನ್ನೇ ತಮ್ಮ ಪ್ರತಿಷ್ಟೆಯ ಸಂಕೇತ ಎಂದು ತಮ್ಮ Wall/Status ಗಳಲ್ಲಿ ಹಾಕಿಕೊಳ್ಳುವುದು ನಿಜಕ್ಕೂ ಗಾಬರಿಯನ್ನು ಹುಟ್ಟಿಸುತ್ತದೆ.

ಅದೇ ರೀತಿ ದ್ವಿಚಕ್ರ ಮತ್ತು ಕಾರ್ ವಾಹನಗಳ ತಯಾರಕರು ಮತ್ತು ಚಿನ್ನ, ಬೆಳ್ಳಿ, ವಜ್ರ ವೈಢೂರ್ಯದ ಆಭರಣಗಳ ತಯಾರಕರು, ವಿವಿಧ ಉತ್ಪನ್ನಗಳ ತಯಾರಕರೂ ಬಗೆ ಬಗೆಯ ಆಶೆ ಆಮಿಷಗಳನ್ನು ಒಡ್ಡಿ ಇನ್ನೂ ಕೆಲವೊಂದು ಬಾರಿ ಈ ದಿನಗಳಲ್ಲಿ ಕೊಂಡರೆ ಅಕ್ಷಯವಾಗುತ್ತದೆ, ಎಂಬ ಹಸೀ ಆಸೆ ಹುಟ್ಟಿಸುವ ಮೂಲಕ ಜನರ ಮುಗ್ಧತೆಯನ್ನು ತಮ್ಮ ತಮ್ಮ ಬೇಳೇ ಬೇಯಿಸಿಕೊಳ್ಳಲು ಬಳಸಿಕೊಳ್ಳುತ್ತಾ, ಜನರನ್ನು ಬೇಸ್ತು ಬೀಳಿಸುತ್ತಿರುವುದು ನಿಜಕ್ಕೂ ಬೇಸರ ತರಿಸುತ್ತದೆ.

indian_women

ನಿಜ ಹೇಳಬೇಕೆಂದರೆ, ನಮ್ಮ ಭಾರತೀಯ ಮಹಿಳೆಯರಿಗೆ ಒಂದು ರೂಪಾಯಿ ಕೊಟ್ಟರೆ ಅದರಲ್ಲಿ 60-70 ಪೈಸೆ ಖರ್ಚು ಮಾಡಿ ಉಳಿದ 30-40 ಪೈಸೆಗಳನ್ನು ಸಾವಿವೆ ಡಬ್ಬದಲ್ಲೋ ಅಕ್ಕಿಯ ಡಬ್ಬದಲ್ಲೋ ಜತನದಿಂದ ಮುಚ್ಚಿಟ್ಟು ಅದೇ ಹಣವನ್ನು ಕುಟುಂಬದ ಅವಶ್ಯಕತೆ ಬಂದಾಗ ಬಳಸುತ್ತಾಳೆ ಇಲ್ಲವೇ, ಅದೇ ಹಣದಲ್ಲಿ ಮಗಳ ಮದುವೆಗೆಂದು ಚಿನ್ನದ ಆಭರಣಗಳನ್ನೋ ಇಲ್ಲವೇ ಬೆಳ್ಳಿಯ ಪಾತ್ರೆಗಳನ್ನು ತೆಗೆದಿಟ್ಟು ಮದುವೆಯ ಸಮಯದಲ್ಲಿ ಹೆಚ್ಚಿನ ಹೊರೆಯಾಗದಂತೆ ನೋಡಿಕೊಳ್ಳುತ್ತಿದ್ದ ಕಾಲವಿತ್ತು.

buy_now

ಆದರೆ ಇಂದು ಎಲ್ಲವೂ ಬದಲಾಗಿದೆ. ಗಂಡು ಮಕ್ಕಳ ಸರಿಸಮನಾಗಿ ಹೆಣ್ಣುಮಕ್ಕಳೂ ದುಡಿಯುವ ಕಾರಣ ಇಂದು ಉಳಿತಾಯ ಎನ್ನುವುದು ಮಾಯೆಯಾಗಿ, ಸಾಲ ಮಾಡಿಯಾದರೂ ತುಪ್ಪಾ ತಿನ್ನು ಎನ್ನುವಂತೆ ಕೈಯಲ್ಲಿ ನಯಾಪೈಸೆ ಇಲ್ಲದಿದ್ದರೂ, Credit Card, Use Now pay later offersಗಳ ಆಮಿಷಕ್ಕೆ ಬಿದ್ದು ಕೊಳ್ಳುವುದನ್ನು ರೂಢಿಮಾಡಿಕೊಂಡಿರುವುದು ನಿಜಕ್ಕೂ ಕಳವಳಕಾರಿಯಾಗಿದೆ. ಇಂದಿನ ಮಕ್ಕಳಿಗೆ ಧರ್ಮಶಿಕ್ಷಣ, ಸಂಸ್ಕಾರ ಯಾವುದನ್ನೂ ಹೇಳಿ ಕೊಡದೆ ಕೇವಲ ಮಾರ್ಕ್ಸ್ ಮಾತ್ರ ಮುಖ್ಯ ಅಂತ ಬೆಳೆಸಿದರ ಪರಿಣಾಮವಾಗಿ ಉರು ಹೊಡೆದು ಅಂಕಗಳನ್ನು ಗಳಿಸಿ, ಪದವಿ ಪಡೆದು, ಅದರ ಆಧಾರದ ಮೇಲೆಯೇ ಕೆಲಸಕ್ಕೆ ಸೇರಿದ ತಕ್ಷಣವೇ ಲಕ್ಷ ಲಕ್ಷ ಹಣ ಸಂಪಾದಿಸುವಾಗ, ಬಹುತೇಕರು, ದುರಹಂಕಾರಿ ಮತ್ತು ಸ್ವಾರ್ಥಿಗಳಾಗಿ, ಕೊಂಚವೂ ಮಾನವೀಯತೇ ಇಲ್ಲದೇ, ತಾನಾಯಿತು ತನ್ನ ಕುಟುಂಬವಾಯಿತು ಎಂದು ಯೋಚಿಸುವ ಮನಸ್ಥಿತಿಯನ್ನು ಮೈಗೂಡಿಸಿಕೊಂಡ ಕಾರಣ ಅಂತಹವರಿಂದ ದೇಶಕ್ಕೆ ಯಾವುದೇ ಪ್ರಯೋಜನವಿಲ್ಲದೇ ಹೋಗುವುದು ಆತಂಕಕಾರಿಯಾಗಿದೆ. ಮುಂದೇ ಇದೇ ಮಕ್ಕಳು ಮುಂದೆ ವಿದೇಶಕ್ಕೆ ಪ್ರತಿಭಾಪಲಾಯನ ಮಾಡುವ ಕಾರಣ, ಹೆತ್ತವರನ್ನು ನೋಡಿಕೊಳ್ಳಲು ಯಾರೂ ಇಲ್ಲದೇ, ಅನಿವಾರ್ಯವಾಗಿ ವೃದ್ಧಾಶ್ರಮಕ್ಕೆ ಸೇರಿಸುವಂತಹ ಪರಿಸ್ಥಿತಿ ಬಂದಿರುವುದು ನಿಜಕ್ಕೂ ಖೇದಕರವಾಗಿದೆ.

ಕೆಲವೇ ಕೆಲವು ದಶಕಗಳ ಹಿಂದೆ ಚಳಿ ಗಾಳಿ ಮಳೆಯಿಂದ ರಕ್ಷಿಸಲು ಒಂದು ಮನೆ, ತಿನ್ನಲು ಮೂರು ಹೊತ್ತು ತಿಂಡಿ/ಊಟ, ಮಾನ ಕಾಪಾಡಲು ಒಳ್ಳೆಯ ಬಟ್ಟೆ, ಕಣ್ತುಂಬ ನಿದ್ದೆ ಇದ್ದರೆ ಅದೇ ಸ್ವರ್ಗ ಸುಖಃ ಎಂದು ಭಾವಿಸಿದ್ದ ಜನರಿಗೆ ಈಗ ಸಂತೋಷ ಎಂಬುದೇ ಎಲ್ಲೆಯನ್ನೇ ಮೀರಿ, ಸಂತೋಷ ಎನ್ನುವುದಕ್ಕೆ ಎಣೆಯೇ ಇಲ್ಲದೇ, ಕುಟುಂಬ, ಸಂಬಂಧಗಳು, ಮನಸ್ಸಿನ ಶಾಂತಿ, ತೃಪ್ತಿ, ಸ್ನೇಹ ಪ್ರೀತಿ ಇವೆಲ್ಲವೂ ತಮ್ಮ ತಮ್ಮ ಬಳಿ ಇರುವ ಕಾರು, ಬಂಗಲೆ, ಉಡುಗೆ ತೊಡುಗೆಯ ಜೊತೆ electronics gadgetsಗಳ ಮೂಲಕ ಅಳೆಯುವಂತಾಗಿರುವುದು ನಿಜಕ್ಕೂ ಭಯವನ್ನು ಹುಟ್ಟಿಸುತ್ತಿದೆ.

ಹಾಗಾಗಿ, ದಯವಿಟ್ಟು ಯಾರೋ ತಮ್ಮ ವಯಕ್ತಿಯ ಹಿತಾಸಕ್ತಿ ಮತ್ತು ಲಾಭಕ್ಕಾಗಿ ಭಾರೀ ರಿಯಾಯಿತಿ ಅಥವಾ ಕಂತುಗಳಲ್ಲಿ ಮೇಲೆ ಹೇಳಿದ ಉತ್ಪನ್ನಗಳನ್ನು ಮಾರುತ್ತಿದ್ದಾರೆ ಎಂದು ಖರೀದಿಸಿ ನಂತರ ಅದರ ಸಾಲವನ್ನು ಸೂಕ್ತ ಸಮಯದಲ್ಲಿ ತೀರಿಸಲಾಗದೆ, ವಿಪರೀತ ಸಾಲದ ಸುಳಿಯಲ್ಲಿ ಸಿಕ್ಕಿಕೊಂಡು ನರಳುವ ಬದಲು ಬಡವಾ ನೀ ಮಡಗ್ದಾಗೀರು ಎನ್ನುವಂತೆ, ಹಾಸಿಗೆ ಇದ್ದಷ್ಟು ಕಾಲು ಚಾಚಿಕೋ ಎನ್ನುವಂತೆ ಅಗತ್ಯವಿದ್ದಲ್ಲಿ ಮಾತ್ರವೇ, ಕೈಯಲ್ಲಿ ಇದ್ದಷ್ಟು ಹಣದಲ್ಲಿ ಮಾತ್ರವೇ ಖರೀದಿಸುವುದು ಉತ್ತಮವಾದ ಅಭ್ಯಾಸವಾಗಿದೆ ಅಲ್ವೇ?

ಏನಂತೀರೀ?
ನಿಮ್ಮವನೇ ಉಮಾಸುತ

One thought on “ಕೊಳ್ಳುಬಾಕ ಸಂಸ್ಕೃತಿ

  1. ನೀವು ಎತ್ತಿರುವ ವಿಚಾರ ಬಹಳ ಸಂದರ್ಭೋಚಿತವಾದದ್ದು.
    ನಿಮ್ಮ ಆತಂಕ,ಕಾಳಜಿಗಳು ನನ್ನದೂ‌ಕೂಡಾ…
    ಹಾಸಿಗೆ ಇದ್ದಷ್ಟು ಕಾಲು ಚಾಚಲು ಬದುಕಬೇಕೆಂಬ ನಮ್ಮ ಹಿರಿಯರ ಮಾತನ್ನು ನಾವು ಗೌರವಿಸುತ್ತಿದ್ದೆವು..
    ಈಗ ಕೊಳ್ಳುಬಾಕತನದ ಭರಾಟೆಯಲ್ಲಿ ,ಬೇಕೋ-ಬೇಡವೋ ವಸ್ತುಗಳ ಮೋಹ ಅತಿಯಾಗುತ್ತಿದೆ..ಕಷ್ಟ ಪಟ್ಟು ದುಡಿದ ಹಣ ವಿನಾ‌ಕಾರಣ ಆಹುತಿಯಾಗುತ್ತಿದೆ…
    ಸರಳ ಜೀವನದ ಮಹತ್ವವನ್ನು ಅರಿತರಷ್ಟೇ ಇಂತಾ ಅಪಸವ್ಯಗಳಿಗೆ ಕಡಿವಾಣ, ಅಂಕುಶವಿಡಲು ಸಾಧ್ಯ..
    ಹೇಳೋರುಂಟು – ಮಾಡೋರ್ಯಾರು ??

    Liked by 1 person

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s