ಭಾರತೀಯರು ಮತ್ತು ಸರ್ಕಾರೀ ಉಚಿತ ಕೊಡುಗೆಗಳು

ಕಳೆದ ಎರಡು ದಿನಗಳಿಂದಲೂ ಸಮಾಜಿಕ ಜಾಲತಾಣಗಳಲ್ಲಿ ಬಿಹಾರದ ಐ.ಎ.ಎಸ್ ಅಧಿಕಾರಿಯ ವೀದಿಯೂ ವೈರಲ್ ಆಗಿದ್ದು, ಇದುವರೆವಿಗೂ ನಮ್ಮನ್ನು ಆಳಿದ ರಾಜಕೀಯ ಪಕ್ಷಗಳು ಹೇಗೆ ಭಾರತೀಯರ ಮನಸ್ಥಿತಿಯನ್ನು ಹಾಳು ಮಾಡಿವೆ ಎಂಬುದಕ್ಕೆ ಕೈಗನ್ನಡಿಯಾಗಿರುವ ಆ ಸಂಗತಿ ನಿಜಕ್ಕೂ ಕಳವಳಕಾರಿಯಾಗಿದೆ.

free6

ಇತ್ತೀಚೆಗೆ ಬಿಹಾರದ ಪಾಟ್ನಾದಲ್ಲಿ ನಡೆದ ಸಶಕ್ತ್ ಬೇಟಿ, ಸಮೃದ್ಧ್ ಬಿಹಾರ (ಸಬಲೀಕರಣಗೊಂಡ ಹೆಣ್ಣುಮಕ್ಕಳು, ಸಮೃದ್ಧ ಬಿಹಾರ) ಎಂಬ ಕಾರ್ಯಕ್ರಮದ ಭಾಗವಾಗಿ ಬಿಹಾರದ ಮಹಿಳಾ ಅಭಿವೃದ್ಧಿ ನಿಗಮದ ಹರ್ಜೋತ್ ಕೌರ್ ಅವರೊಂದಿಗೆ ಸ್ಥಳೀಯ 9 ಮತ್ತು 10ನೇ ತರಗತಿಯ ವಿದ್ಯಾರ್ಥಿನಿಯರು ಸಂವಾದ ನಡೆಯುತ್ತಿದ್ದ ಸಂಧರ್ಭದಲ್ಲಿ ಹದಿಹರೆಯದ ವಿದ್ಯಾರ್ಥಿನಿಯೊಬ್ಬರು ಸರ್ಕಾರವು ಈಗಾಗಲೇ ಅನೇಕ ಉಚಿತ ಕೊಡುಗೆಗಳನ್ನು ನೀಡುತ್ತಿರುವಾಗ ಹೆಣ್ಣುಮಕ್ಕಳ ನೈರ್ಮಲೀಕರಣದ ಭಾಗವಾಗಿ ಸರ್ಕಾರವೇಕೆ ಉಚಿತವಾಗಿ ಸ್ಯಾನಿಟರಿ ಪ್ಯಾಡ್‌ಗಳನ್ನು ಕೊಡಬಾರದು? ಎಂಬ ಪ್ರಶ್ನೆಯನ್ನು ಕೇಳಿದಾಗ, ಆಕೆಯ ಪ್ರಶ್ನೆಯಿಂದ ಪ್ರಭಾವಿತರದ ಅಲ್ಲಿ ನೆರೆದುದ್ದ ಸಭಿಕರು ಚಪ್ಪಾಳೆ ತಟ್ಟುವ ಮೂಲಕ ಆಕೆಯನ್ನು ಹುರಿದುಂಬಿಸಿದ್ದಾರೆ.

free7

ಈ ರೀತಿಯ ಪ್ರಶ್ನೆಯಿಂದ ಬಹುಶಃ ವಿಚಲಿತರಾದಂತೆ ಕಂಡ ಆ ಬಿಹಾರದ ಮಹಿಳಾ ಐಎಎಸ್ ಅಧಿಕಾರಿ ನೀವೀಗ ಸ್ಯಾನಿಟರಿ ಪ್ಯಾಡ್ ಕೇಳುತ್ತಿದ್ದೀರಿ, ನಾಳೆ ಹಾಕಿಕೊಳ್ಳಲು ಜೀನ್ಸ್ ಏಕೆ ಉಚಿತವಾಗಿ ನೀಡಬಾರದು ಎಂದು ಕೇಳುತ್ತೀರಿ. ಮುಂದೆ, ನೀವು ಹೊಳೆಯುವ ಶೂಗಳನ್ನು ಕೇಳುತ್ತೀರಿ, ಮತ್ತು ಕುಟುಂಬ ಯೋಜನೆ ಸಮಯ ಬಂದಾಗ, ನಮಗೆ ಕಾಂಡೋಮ್ ಕೂಡ ಉಚಿತವಾಗಿ ಬೇಕು ಎಂದು ಕೇಳುವ ಸಂದರ್ಭವೂ ಬರಬಹುದು. ನೀವೇಕೆ ಎಲ್ಲಾ ಸೌಲಭ್ಯಗಳನ್ನೂ ಸರ್ಕಾರದಿಂದ ಉಚಿತವಾಗಿ ಬಯಸುತ್ತೀರಿ? ಇಷ್ಟು ಚಿಕ್ಕವಯಸ್ಸಿನಲ್ಲಿಯೇ ಈ ರೀತಿಯ ಮನೋಭಾವನೆಯನ್ನು ಬೆಳಸಿಕೊಂಡಲ್ಲಿ ಇಂತಹ ಬೇಡಿಕೆಗಳಿಗೆ ಕೊನೆ ಇರುವುದಿಲ್ಲ. ಜನರಿಗಾಗಿ ಸರ್ಕಾರದಿಂದ ಹಲವು ಯೋಜನೆಗಳಿದ್ದರೂ, ಸರ್ಕಾರವು ಜನರಿಗೆ ಉಚಿತವಾಗಿ ನೀಡಬೇಕೆಂಬ ನಿಮ್ಮ ಆಲೋಚನೆಯೇ ತಪ್ಪು ಎಂದು ಶ್ರೀಮತಿ ಕೌರ್ ಉತ್ತರಿಸಿದ್ದಾರೆ.

free

ಅದಾಗಲೇ ಜನರ ಚಪ್ಪಾಳೆಗಳಿಂದ ಉಬ್ಬಿ ಹೋಗಿ, ಒಂದು ಕ್ಷಣ ತಾನೇನೋ ನಾಯಕಿ ಎಂಬ ಭ್ರಮೆಯಲ್ಲಿದ್ದ ಆ ಬಾಲಕಿ, ಹಾಗಾದರೆ ರಾಜಕಾರಣಿಗಳು ನಮ್ಮ ಮತವನ್ನು ಕೇಳಲು ಏಕೆ ಬರುತ್ತಾರೆ? ನಮ್ಮಂತಹವರ ಮತದಿಂದಲೇ ಸರ್ಕಾರ ಆಗಿರುವುದು ಎಂದು ತುಸು ಉದ್ಧಟತನದ ಪ್ರಶ್ನೆ ಕೇಳಿದಾಗ, ಸ್ವಲ್ಪ ತಾಳ್ಮೆ ಕಳೆದುಕೊಂಡ ಕೌರ್, ಇದು ಮೂರ್ಖತನದ ಪರಮಾವಧಿ. ಹಾಗಾದರೆ ನೀವು ಹಣ ಮತ್ತು ಅವರು ಒಡ್ಡುವ ಆಮಿಶಗಳಿಗಾಗಿ ಮತ ನೀಡುತ್ತೀರಾ? ಇದು ನಿಜವಾಗಿದ್ದಲ್ಲಿ ನೀವು ಅಂತಹವರಿಗೆ ಮತವನ್ನು ಹಾಕ ಬೇಡಿ ಎಂದಿದ್ದಲ್ಲದೇ, ನಿಮಗೆ ಈ ದೇಶದಲ್ಲಿ ಇರಲು ಆಗದಿದ್ದದ್ದಲ್ಲಿ ಪಾಕಿಸ್ತಾನಕ್ಕೆ ಹೋಗು ಎಂದಿದ್ದಾರೆ. ಇದಕ್ಕೆ ಕೂಡಲೇ ಪ್ರತಿಕ್ರಿಯಿಸಿದ ಆ ಬಾಲಕಿ ನಾನು ಭಾರತೀಯಳು. ನಾನೇಕೆ ಪಾಕಿಸ್ಥಾನಕ್ಕೆ ಹೋಗಬೇಕು? ಎಂದು ಪ್ರತ್ಯುತ್ತರ ನೀಡಿದ್ದಾಳೆ. ಈ ಚಕಮಕಿಯ ಸಂವಾದ ಸಾಮಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದ್ದು ಬಹುತೇಕರು ಆ ಬಾಲಕಿಯನ್ನು ಸಮರ್ಥಿಸುತ್ತಾ, ಐ.ಎ.ಎಸ್ ಅಧಿಕಾರಿಯನ್ನು ಹೀನಾಮಾನವಾಗಿ ತೆಗಳುತ್ತಿರುವುದು ನಿಜಕ್ಕೂ ಅಚ್ಚರಿಯ ಸಂಗತಿಯಾಗಿದೆ.

free5

ಸಣ್ಣ ವಯಸ್ಸಿನ ನಿರ್ಮಲ ಮನಸ್ಸಿನ ಮಕ್ಕಳ ತಲೆಯನ್ನೂ ಕೆಡಸುವ ಕೆಲ ಪಟ್ಟ ಭದ್ರ ಹಿತಾಸಕ್ತಿಗಳು, ಇಂತಹ ಸಮಯದಲ್ಲಿ ಅನವಶ್ಯಕವಾಗಿ ವಾಗ್ವಾದಕ್ಕೆ ಇಳಿಯುವಂತೆ ಹೇಗೆ ಮಾಡುತ್ತವೆ ಎಂಬುದಕ್ಕೆ ಈ ಪ್ರಸಂಗ ಜ್ವಲಂತವಾದ ಉದಾರಣೆಯಾಗಿದೆ. ಚಿಕ್ಕವಯಸ್ಸಿನಿಂದಲೇ ಮಕ್ಕಳಿಗೆ ಚೆನ್ನಾಗಿ ಓದಿ ವಿದ್ಯಾವಂತಳಾಗಿ, ಸಂಸ್ಕಾರವಂತಳಾಗಿ ಸ್ವಾವಲಂಭಿಯಾಗಿ ಒಳ್ಳೆಯ ಕೆಲಸವನ್ನು ಪಡೆದು ದುಡಿದು ತಿನ್ನು ಎಂದು ಹೇಳಿಕೊಡುವುದು ಬಿಟ್ಟು ಈ ರೀತಿ ಪ್ರತಿಯೊಂದಕ್ಕೂ ಸರ್ಕಾರದಿಂದ ಉಚಿತವಾಗಿ ಕೇಳು. ಹಾಗೆ ನಿಮ್ಮ ಬಯಕೆ ಈಡೇರದಿದ್ದಲ್ಲಿ ಪ್ರತಿಭಟನೆಗೆ ಇಳಿ ತನ್ಮೂಲಕ ದೇಶದಲ್ಲಿ ಅರಾಜಕತೆ ಸೃಷ್ಟಿಸು ಎನ್ನುವಂತಹ ಮನಸ್ಥಿತಿಯನ್ನು ಬೆಳಸುತ್ತಿರುವುದು ನಿಜಕ್ಕೂ ದೇಶದ ಅಭಿವೃದ್ಧಿಗೆ ಮಾರಕವಾಗಿದೆ.

ಶಿಕ್ಷಣ, ಆರೋಗ್ಯ, ಉದ್ಯೋಗ ಮುಂತಾದ ವಿಭಾಗಗಳಲ್ಲಿ ಖಂಡಿತವಾಗಿಯೂ ಸರ್ಕಾರ ಜನರ ಪರವಾಗಿ ನಿಲ್ಲಬೇಕು ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಜನರ ದೈನಂದಿನ ಬದುಕಿಗೆ ಬೇಕಾಗುವಂತಹ ಎಲ್ಲಾ ಅವಶ್ಯ ವಸ್ತುಗಳನ್ನೂ ಸರ್ಕಾರವೇ ಉಚಿತವಾಗಿ ಕೊಡಬೇಕು. ಹೆಣ್ಣುಮಕ್ಕಳು ತಮ್ಮ ವಯಕ್ತಿಕ ನೈರ್ಮಲ್ಯಕ್ಕೆ ಅವಶ್ಯಕತೆ ಇರುವ ವಸ್ತುವನ್ನೂ ಸರ್ಕಾರವೇ ಉಚಿತವಾಗಿ ಜನರ ತೆರಿಗೆ ಹಣದಲ್ಲಿ ಕೊಡಬೇಕು ಎಂಬು ಬಯಸುವುದು ನಿಜಕ್ಕೂ ಮೂರ್ಖತನ ಮತ್ತು ಧೂರ್ತತನದ ಪರಮಾವಧಿಯಾಗಿದೆ. ಜನರು ಯಾವುದೇ ಕೆಲಸ ಮಾಡ ಬಾರದು, ತೆರಿಗೆ ಕಟ್ಟಬಾರದು ಆದರೂ ಅವರಿಗೆ ಎಲ್ಲಾ ರೀತಿಯ ಸರ್ಕಾರೀ ಸೌಲಭ್ಯಗಳು ಬೇಕು ಎಂದು ಸರ್ಕಾರೀ ಭಿಕ್ಷೇ ಬೇಡುವಂತ ದೈನೇಸಿ ಪರಿಸ್ಥಿತಿಗೆ ತಂದಿರುವುದು ನೋಡಿದರೇ, ನಿಜಕ್ಕೂ ಕಳವಳಕಾರಿಯಾಗಿದೆ.

ಐದನೇ ಶತಮಾನದ ಆರಂಭದಲ್ಲಿ ಭಾರತಕ್ಕೆ ಭೇಟಿ ನೀಡಿದ್ದ ಹುಯ್ಯನ್ಸಾಂಗ್ ಮತ್ತು ಫಾಹಿಯಾನ್ ಎಂಬ ಚೀನಾದ ಇತಿಹಾಸಕಾರರು, ಭಾರತಾದ್ಯಂತ ಸಂಚರಿಸಿದರೂ ಒಬ್ಬನೇ ಒಬ್ಬ ಭಿಕ್ಷ್ಕುಕನನ್ನು ಕಂಡಿರಲಿಲ್ಲ. ಭಾರತ ಅತ್ಯಂತ ಸುಭಿಕ್ಷವಾದ ನಾಡಾಗಿತ್ತು ಎಂದು ಬರೆದಿದ್ದಾರೆ ಎಂದರೆ ಅಂದೇ ಇಲ್ಲದಿದ್ದ ಅಂತಹ ರೂಢಿ ಇಂದೇಕೇ ಈ ರೀತಿಯ ಭಿಕ್ಷೆ ಬೇಡುವ ಮನಸ್ಥಿತಿ? ಎನ್ನುವುದೇ ಪ್ರಶ್ನೆಯಾಗಿದೆ

ಬಿಸಿಯಾದ ವಾದ ವಿವಾದದ ಸಂದರ್ಭದಲ್ಲಿ ಶ್ರೀಮತಿ ಕೌರ್ ಹೇಳಿದ ಧಾಟಿ ಸರಿ ಇಲ್ಲದೇ ಹೋದರೂ, ಆಕೆ ಹೇಳಿದ ವಿಷಯದಲ್ಲಿ ಯಾವುದೇ ತಪ್ಪಿಲ್ಲ ಎಂದೆನಿಸುತ್ತದೆ. ಇಂತಹ ಕ್ಷುಲ್ಲಕ ವಿಷಯಗಳಿಗೆಂದೇ ಕಾತರಿಸುತ್ತಿರುವ ಕೆಲವು ಪಟ್ಟ ಭದ್ರ ಹಿತಾಸಕ್ತಿಯ ಜನ ಆಕೆ ಕಾಂಡೋಮ್ ಕುರಿತಂತೆ ಹೇಳಿದ್ದನೇ ಬೊಟ್ಟು ಮಾಡಿ ತೋರಿಸುವವರು, ನಂತರ ಅದೇ ಚರ್ಚೆಯಲ್ಲಿ ಆಕೆ ಬೇರೇ ಮಕ್ಕಳ ಪ್ರಶ್ನೆಗೆ, ಭವಿಷ್ಯದಲ್ಲಿ ನಿಮ್ಮನ್ನು ನೀವು ಹೇಗೆ ಮತ್ತು ಎಲ್ಲಿ ನೋಡಬೇಕೆಂದು ನೀವೇ ನಿರ್ಧರಿಸಬೇಕು ಮತ್ತು ನಿಮ್ಮ ನಿರ್ಧಾರಗಳನ್ನು ನೀವೇ ತೆಗೆದುಕೊಳ್ಳುವಷ್ಟು ಬುದ್ಧಿವಂತರಾಗ ಬೇಕು. ನೀವು ಈಗ ಎಲ್ಲಿ ಕುಳಿತಿರುವಿರೋ ಅಲ್ಲಿಯೇ ಕುಳಿತು ಕೊಳ್ಳುತ್ತೀರೋ? ಇಲ್ಲವೇ, ಚನ್ನಾಗಿ ಓದಿ ಬುದ್ಧಿವಂತರಾಗಿ ನಾನು ಈಗ ಕುಳಿತಿರುವ ಆಸನದಲ್ಲಿ ಕುಳಿತುಕೊಳ್ಳಲು ಬಯಸುತ್ತೀರೋ? ಎಂಬುದನ್ನು ನೀವೇ ನಿರ್ಧರಿಸಬೇಕು ಮತ್ತು ಅದಕ್ಕೆ ತಕ್ಕಂತೆ ಯೋಚನೆಗಳನ್ನು ಮಾಡಿ ಕಾರ್ಯಪ್ರವೃತ್ತರಾಗಬೇಕು. ಎಲ್ಲವನ್ನೂ ಸರ್ಕಾರವೇ ಕೊಡಬೇಕು ಎಂಬುದನ್ನು ಮೊದಲು ಮನಸ್ಸಿನಿಂದ ಹೊರಗೆ ಹಾಕಬೇಕು ಎಂಬ ಪ್ರೋತ್ಸಾಹಕ ಮಾತುಗಳನ್ನು ಆಡಿರುವ ವಿಷಯವನ್ನು ಯಾರೂ ವೈಭವೀಕರಿಸುವುದೇ ಹೋಗದಿರುವುದು ನಿಜಕ್ಕೂ ದೌರ್ಭಾಗ್ಯದ ಸಂಗತಿಯಾಗಿದೆ.

ಕೌರ್ ಅವರ ದುಡಿದು ತಿನ್ನಿ ಎಂಬ ಕಿವಿ ಮಾತನ್ನು ಅರಗಿಸಿಕೊಳ್ಳಲಾಗದ ಸಭಿಕರೊಬ್ಬರು ಹಾಗಾದರೇ, ಸರ್ಕಾರದ ಯೋಜನೆಗಳು ಏಕೆ ಅಸ್ತಿತ್ವದಲ್ಲಿವೆ? ಎಂದು ವ್ಯಂಗ್ಯವಾಗಿ ಪ್ರಶ್ನಿಸಿದಾಗ ಶ್ರೀಮತಿ ಕೌರ್ ಅವರು ಅಂತಹ ಆಲೋಚನೆಯನ್ನು ಖಂಡಿತವಾಗಿಯೂ ಬದಲಾಯಿಸುವ ಅವಶ್ಯಕತೆಯಿದೆ ಎಂದಿರುವುದೂ ಸ್ವಾಗತಾರ್ಹವಾಗಿದೆ.

free2

ಅನಕ್ಷರಸ್ಥ ಜನರಿಗೆ ತಮ್ಮ ಮತದಾನದ ಮೌಲ್ಯವನ್ನು ತಿಳಿಸಿ ಕೊಡದೇ, ಚುನಾವಣಾ ಸಂಸರ್ಭದಲ್ಲಿ ಕೈಗೆ ಸ್ವಲ್ಪ ಹಣ, ಕುಡಿಯಲು ಹೆಂಡ ಮತ್ತು ತಿನ್ನಲು ಒಂದು ಬಿರ್ಯಾನಿ ಪೊಟ್ಟಣವೊಂದನ್ನು ಕೊಟ್ಟು ಅವರ ಮತಗಳನ್ನು ಕೊಂಡುಕೊಳ್ಳುವ ಸಂಸ್ಕೃತಿಯನ್ನು ಯಾವಾಗ ರಾಜಕೀಯ ಪಕ್ಷಗಳು ಆರಂಭಿಸಿದವೋ, ಅಂದಿನಿಂದ ಈ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಕೆಟ್ಟು ಕೆರಹಿಡಿದು ಹೋಯಿತು ಎಂದರೂ ತಪ್ಪಾಗದು. ಇನ್ನು ತಾವು ಮಾಡಿದ ಅಕ್ರಮ ಲೂಟಿಗಳನ್ನು ಜನರ ಕಣ್ಣಿನಿಂದ ತಪ್ಪಿಸಿಕೊಳ್ಳುವ ಸಲುವಾಗಿ ಮತ್ತು ಜನರನ್ನು ತಮ್ಮತ್ತ ಸೆಳೆಯುವ ಏಕೈಕ ಕಾರಣದಿಂದಾಗಿ ಕೆಲ ದಶಕಗಳ ಹಿಂದೆ ತಮಿಳುನಾಡಿನಲ್ಲಿ ಡಿಎಂಕೆ ಮತ್ತ್ತು ಎಐಡಿಎಂಕೆ ಪಕ್ಷಗಳು ಆರಂಭಿಸಿದ ಈ ಉಚಿತ ಕೊಡುಗೆಯ ಆಮಿಷ ಇಂದು ದೇಶಾದ್ಯಂತ ಹರಡಿ ಅರಂವಿದ್ ಕೇಜ್ರೀವಾಲ್ ನಂತಹ ಸಮಯಸಾಧಕ ರಾಜಕಾರಣಿಗಳು ಉಚಿತಕೊಡುವುದೇ ತಮ್ಮ ಅಭಿವೃದ್ಧಿ ಎಂದು ಜನರ ಮನಸ್ಥಿತಿಯನ್ನು ತಾಳುವ ಹಾಗೆ ಹೇಗೆ ದಿಕ್ಕು ತಪ್ಪಿಸುತ್ತಿದೆ ಎಂಬುದಕ್ಕೆ ಈ ಪ್ರಕರಣವೇ ಸಾಕ್ಷಿಯಾಗಿದೆ.

free4

ಈ ರೀತಿಯ ಉಚಿತ ಆಮಿಷಗಳಿಂದ ಜನರು ಹೇಗೆ ಸೋಮಾರಿಗಾಳಾಗುತ್ತಿದ್ದಾರೆ ಎನ್ನುವುದಕ್ಕೆ, ಕೆಲವು ದಶಕಗಳ ಹಿಂದೆ ಬೆಂಗಳೂರಿನ ಕಟ್ಟಡ ನಿರ್ಮಾಣಕ್ಕೆ ಬಹುತೇಕರು ತಮಿಳುನಾಡಿನಿಂದಲೇ ಬರುತ್ತಿದ್ದರು. ಆದರೆ ಯಾವಾಗ ಅಲ್ಲಿನ ಸರ್ಕಾರ ಉಚಿತ ಅಕ್ಕಿ, ಬೇಳೆ, ಸಕ್ಕರೆ, ಮನರಂಜನೆಗಾಗಿ ಟಿವಿ, ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ (ಅದರಿಂದ ಉದ್ದಾರ ಆದವರು ಎಷ್ಟು ಎಂಬುದನ್ನು ಮಾತ್ರಾ ಕೇಳಬೇಡಿ) ಕೊಟ್ಟಿದ್ದಲ್ಲದೇ, ಸುಮ್ಮನೇ ತಮ್ಮ ತಮ್ಮ ಊರಿನಲ್ಲೇ ನರೇಗ ಯೋಜನೆಗಳಲ್ಲಿ ತಿಂಗಳಿಗೆ 20-25 ದಿನಗಳ ಕಾಲ ಕೆಲಸ ಕೊಡುತ್ತೇವೆ (ಅದರಲ್ಲೂ ಅದ್ವಾನವಾಗಿ ಕೆಲಸಕ್ಕೆ ಹೋಗದೇ, ವಾರಕ್ಕೊಮ್ಮೆ ಹೋಗಿ ಸಹಿ ಹಾಕಿಬಂದರೂ ಗುತ್ತಿಗೆದಾರ ಕಮಿಷನ್ ಹಿಡಿದುಕೊಂಡು ಸಂಬಳ ಕೊಡುತ್ತಾರೆ) ಎಂಬ ಆಮಿಷ ಒಡ್ಡಿದ ಮೇಲಂತೂ ಬಹುತೇಕ ಆ ಎಲ್ಲಾ ಕೆಲಸಗಾರರೂ ಬೆಂಗಳೂರಿನಿಂದ ಮತ್ತೆ ತಮ್ಮ ಊರುಗಳಿಗೆ ಹಿಂದಿರುಗಿ ಯಾವುದೇ ಕೆಲಸ ಮಾಡದೇ ಸರ್ಕಾರದ ಉಚಿತ ಆಮಿಷಗಳನ್ನು ಸವಿಯುತ್ತಾ, ಕೆಲಸವೇ ಮಾಡದೇ ಕಮಿಷನ್ ಮುರಿದುಕೊಂಡು ಕೊಡುವ ನರೇಗ ದುಡ್ಡಿನಲ್ಲಿ ಕುಡಿದು ಕುಪ್ಪಳಿಸುತ್ತಾ ಮೋಜು ಮಸ್ತಿ ಮಾಡುತ್ತಿರುವುದು ನಿಜಕ್ಕೂ ಭಯಾನಕವಾಗಿದೆ.

ಸದ್ಯದ ಪರಿಸ್ಥಿತಿಯಲ್ಲಿ ಭಾರತದಲ್ಲಿ ಅಲ್ಲಾ ಇಡೀ ವಿಶ್ವದಲ್ಲೇ ಯಾವ ರಾಷ್ಟ್ರಗಳೂ ಉಚಿತವಾಗಿ ಏನನ್ನೂ ನೀಡಲು ಸಾಧ್ಯವಿಲ್ಲ. ಹಾಗೆ ಉಚಿತ ನೀಡಿದ ಕಾರಣಗಳಿಂದಲೇ, ಇತ್ತೀಚಿನ ಶ್ರೀಲಂಕವೂ ಸೇರಿ ಹತ್ತಾರು ದೇಶಗಳು ಈಗಾಗಲೇ ದಿವಾಳಿಯಾಗಿವೆ ಎಂಬುದನ್ನು ಗಮನದಲ್ಲಿ ಇಟ್ಟುಕೊಂಡು ದುಡಿದು ತಿನ್ನುವ ಮತ್ತು ಜೀವನಕ್ಕೆ ಅವಶ್ಯಕವಾಗಿರುವಷ್ಟೇ ಖರ್ಚು ಮಾಡಿ ಉಳಿದದ್ದನ್ನು ಉಳಿತಾಯ ಮಾಡುವ ಅಭ್ಯಾಸವನ್ನು ನಮ್ಮ ಯುವಜನತೆಗೆ ಹೇಳಿಕೊಡಬೇಕಿದೆ ಅಲ್ವೇ?

ಏನಂತೀರೀ?
ನಿಮ್ಮವನೇ ಉಮಾಸುತ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s