ಕಳೆದು ಹೋದ ಕರ್ನಾಟಕ ಮತ್ತು ಕನ್ನಡಿಗರ ಮಾನ

karnatakaಇಡೀ ವಿಶ್ವದಲ್ಲಿ ಕರ್ನಾಟಕ ಮತ್ತು ಕನ್ನಡಿಗರಿಗೆ ಅತ್ಯಂತ ಗೌರವಾನ್ವಿತ ಸ್ಥಾನವಿದ್ದು ಪ್ರಪಂಚಾದ್ಯಂತ ಎಲ್ಲೇ ಹೋಗಿ ಯಾರನ್ನೇ ಕೇಳಿದರೂ ಕನ್ನಡಿಗರ ಔದಾರ್ಯ, ಕಾರ್ಯಕ್ಷಮತೆ, ಬುದ್ಧಿವಂತಿಕೆ ಎಲ್ಲದಕ್ಕೂ ಹೆಚ್ಚಾಗಿ ವಿಶ್ವಾಸ ನಂಬಿಕೆ ಮತ್ತು ಬಧ್ಧತೆಗೆ ಅರ್ಹರಾದ ವ್ಯಕ್ತಿಗಳೆಂದರೆ ಕನ್ನಡಿಗರು ಎಂದೇ ಹೇಳುತ್ತಾರೆ. ದುರಾದೃಷ್ಟವಷಾತ್ ಕಳೆದ ಕೆಲವು ತಿಂಗಳುಗಳಿಂದ ಕೆಲವು ಪಟ್ಟ ಭದ್ರಹಿತಾಸಕ್ತಿಗಳ ವಯಕ್ತಿಕ ಹಾಗೂ ರಾಜಕೀಯ ಅಸ್ಮಿತೆಗಾಗಿ ಕರ್ನಾಟಕ ಮತ್ತು ಕನ್ನಡಿಗರ ಮಾನ ಹರಾಜಾಗಿ ಹೋಗುತ್ತಿರುವುದು ನಿಜಕ್ಕೂ ದೌರ್ಭಾಗ್ಯದ ಸಂಗತಿಯಾಗಿದೆ.

hampe+mysoreಮುತ್ತು ರತ್ನಗಳನ್ನು ಬಳ್ಳ ಬಳ್ಳಗಳಲ್ಲಿ ರಸ್ತೆಯ ಬದಿಯಲ್ಲಿ ವ್ಯಾಪಾರ ಮಾಡುತ್ತಿದ್ದಂತಹ ಅತ್ಯಂತ ಸುಭಿಕ್ಷವಾದ ರಾಜ್ಯ ವಿಜಯನಗರ ಸಾಮ್ರಾಜ್ಯವಾಗಿತ್ತು ಎಂದು ಅನೇಕ ಇತಿಹಾಸಕಾರರೇ ಹೇಳಿದ್ದಾರೆ. ಕಲೆ, ಶಿಲ್ಪಕಲೆ, ಸಾಹಿತ್ಯ, ಜನಪದ ಸಾಹಿತ್ಯ, ಸಂಗೀತ ಹೀಗೆ ಯಾವುದೇ ವಿಷಯದಲ್ಲಾಗಲೀ ಕರ್ನಾಟಕ ಮತ್ತು ಕನ್ನಡಿದರು ಅಗ್ರಗ್ರೇಸರರಾಗಿ ನಿಲ್ಲುತ್ತಿದ್ದ ವಿಷಯ ಎಲ್ಲರಿಗೂ ಗೊತ್ತೇ ಇದೆ. ಇಲ್ಲಿ ಇದ್ದ ಅಪಾರವಾದ ಸಂಪತ್ತನ್ನೆಲ್ಲವನ್ನೂ ದೇಶದ ಮೇಲೆ ಬಾರಿ ಬಾರಿ ಧಾಳಿ ಗೈದವರು ಲೂಟಿ ಹೊಡೆದು ಕೊಂಡು ಹೋದರೂ, ಹೋದ್ದದ್ದು ಕೇವಲ ಸಂಪತ್ತೇ ಹೊರತು ಸಂಸ್ಕಾರ ಅಥವಾ ಸಂಪ್ರದಾಯವಲ್ಲಾ ಎಂಬ ನಂಬಿಕೆಯಿಂದ ಮರಳಿ ಯತ್ನವ ಮಾಡು ಮರಳಿ ಯತ್ನವ ಮಾಡು ಎಂದು  ಕರ್ನಾಟಕವನ್ನು ಆಳಿದ ಎಲ್ಲಾ  ರಾಜರುಗಳು ಅದರಲ್ಲೂ ವಿಶೇಷವಾಗಿ ಮೈಸೂರಿನ ಅರಸರು ಕಟ್ಟಿ ಬೆಳಸಿ ಉಳಿಸಿ ಹೋಗಿದ್ದರು.

lanchavataraಸ್ವಾತಂತ್ರ್ಯಾನಂತರ 565 ಸಣ್ಣ ಸಣ್ಣ ಪ್ರಾಂತ್ಯಗಳಾಗಿ ಹರಿದು ಹಂಚಿಹೋಗಿದ್ದ ಈ ದೇಶವನ್ನು ಒಕ್ಕೂಟ ರಾಷ್ಟ್ರದಲ್ಲಿ ಒಗ್ಗೂಡಿಸಿ, ವಂಶಪಾರಂಪರ್ಯ ಆಡಳಿತದ ಬದಲು ಪ್ರಜೆಗಳಿಂದ ಪ್ರಜೆಗಳಿಗಾಗಿ ಪ್ರಜೆಗಳಿಗೋಸ್ಕರವೇ, ಪ್ರಜೆಗಳೇ ತಮ್ಮನ್ನಾಳುವ ನಾಯಕರನ್ನು ಆಯ್ಕೆಮಾಡುವಂತಹ ಸುಂದರವಾದ ಕಲ್ಪನೆಯೊಂದಿಗೆ ಪ್ರಜಾಪ್ರಭುತ್ವವನ್ನು ಜಾರಿಗೆ ತಂದಾಗ, ಆಕಾಶವೇ ಭೂಮಿಯ ಮೇಲೆ ಬರಬಹುದು ಎಂಬ ಕಲ್ಪನೆ ಭಾರತೀಯರಿಗಿದ್ದದ್ದು ಸುಳ್ಳಲ್ಲ. ದುರಾದೃಷ್ಟವಷಾತ್ ಆ ಎಲ್ಲಾ ಕಲ್ಪನೆಗಳು ಕೇವಲ ಭ್ರಮೆಯಾಗಿ ಹೋಗಿ ಬ್ರಿಟೀಷರ ಬದಲಾಗಿ ನಮ್ಮನ್ನಾಳ ತೊಡಗಿದೆ ರಾಜಕಾರಣಿಗಳು ಮತ್ತು ಅಧಿಕಾರಿಗಳು ಭ್ರಷ್ಟರಾದ ಕಾರಣ ಲಂಚವತಾರ ಎಲ್ಲೆಡೆಯಲ್ಲಿಯೂ ತಾಂಡವವಾಡತೊಡಗಿದ್ದನ್ನೇ ಗಮನಿಸಿದ ಕಲ್ಚರ್ಡ್ ಕಮಡಿಯನ್ ದಿ. ಹಿರಣ್ಣಯ್ಯನವರು 1959 ರಲ್ಲೇ ಲಂಚಾವತಾರ ನಾಟಕವನ್ನು ಬರೆದು ರಂಗಭೂಮಿಯಲ್ಲಿ ಪ್ರದರ್ಶಿಸಿದರೆ ಅವರ ನಂತರ ಅವರ ಮಗ ಮಾಸ್ಟರ್ ಹಿರಣ್ಣಯ್ಯ ಮತ್ತು ಅವರ ಮೊಮ್ಮಗ ಬಾಬು ಹಿರಣ್ಣಯ್ಯ ಸೇರಿ ಮೂರು ತಲೆಮಾರಿನವರು ಸುಮಾರು 15,000ಕ್ಕೂ ಹೆಚ್ಚು ಪ್ರದರ್ಶನಗಳನ್ನು ನೀಡಿದ ಆರು ದಶಕಗಳ ನಂತರವೂ ಲಂಚದ ಪಾತ್ರ ಕೊಂಚವೂ ಕಡಿಮೆಯಾಗದೇ ಇದೆ ಎಂದರೆ ಆದರ ಕಬಂಧ ಬಾಹು ಎಲ್ಲಿಯವರೆಗೆ ಹರಡಿದೆ ಎನ್ನುವುದು ಕಳವಳಕಾರಿಯಾದ ವಿಷಯವಾಗಿದ್ದು ನಿಜಕ್ಕೂ ಎಲ್ಲರೂ ತಲೆ ತಗ್ಗಿಸಲೇ ಬೇಕಾಗಿದೆ.

kempanna_algationಕಳೆರ ವಿಧಾನಸಭಾ ಚುನಾವಣೆಯ ಪ್ರಚಾರದ ಸಮಯದಲ್ಲಿ ಪ್ರಧಾನ ಮಂತ್ರಿಗಳು ಆಗ ಆಡಳಿತಲ್ಲಿದ್ದ ಸಿದ್ದು ಸರ್ಕಾರವನ್ನು 10% ಕಮಿಷನ್ ಸರ್ಕಾರ ಎಂದು ಜರಿದಿದ್ದನ್ನೇ ನೆಪ ಮಾಡಿಕೊಂಡು ಕೆಲವು ತಿಂಗಳುಗಳ ಹಿಂದೆ ಗುತ್ತಿಗೆದಾರ ಸಂಘದ ಅಧಕ್ಷರಾದ ಕೆಂಪಣ್ಣನವರು ಈ ಸರ್ಕಾರದಲ್ಲಿ ಪ್ರತೀ ಕೆಲಸ ಆಗಬೇಕಾದರೂ 40% ಕಮಿಷನ್ ಕೊಡಲೇ ಬೇಕು ಎಂದು ಆರೋಪಿಸಿದ್ದಲ್ಲದೇ ಪ್ರಧಾನ ಮಂತ್ರಿಗಳಿಗೂ ಅದರ ಕುರಿತಾಗಿ ಪತ್ರವನ್ನು ಬರೆದದ್ದೇ ತಡಾ ಯಾವುದೇ ಸೌದ್ಧಾಂತಿಕ ನೆಲೆಗಟ್ಟಿನ ಮೇಲೆ ಹೋರಾಟ ಮಾಡಲು ಆಗದಿದ್ದ ವಿರೋಧ ಪಕ್ಷಗಳು ಇದನ್ನೇ ಮುಖ್ಯವನ್ನಾಗಿಸಿ ಪ್ರಸಕ್ತ ಸರ್ಕಾರದ ವಿರುದ್ಧ ಹೋರಾಟ ನಡೆಸಲು ಮುಂದಾಯಿತು.

ಪ್ರತೀ ಐದು ವರ್ಷಗಳಿಗೊಮ್ಮೆ ನೆಪ ಮಾತ್ರಕ್ಕೆ ಕೇವಲ ಸರ್ಕಾರ ಬದಲಾಗುತ್ತದೆಯೇ ಹೊರತು ಆ ಎಲ್ಲಾ ಸರ್ಕಾರಗಳಲ್ಲಿ ಬಹುತೇಕ ಅದೇ ಮಂತ್ರಿಗಳು (ಪಕ್ಷಾಂತರಿಗಳು) ಮತ್ತು ಅಧಿಕಾರಿಗಳೇ ಇರುವ ಕಾರಣ ಜನರೂ ಸಹಾ ಇದರ ಬಗ್ಗೆ ಹೆಚ್ಚಿನ ಗಮನ ಹರಿಸಲಿಲ್ಲ. ಒಬ್ಬ ಜವಾಬ್ಧಾರೀ ಸರ್ಕಾರೀ ಅನುಮೋದಿತ ಗುತ್ತಿಗೆ ಸಂಸ್ಥೆಯಾಗಿ ಮತ್ತು ವಿರೋಧ ಪಕ್ಷವಾಗಿ ಈ ಕುರಿತಂತೆ ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗಲು ಬಯಸಿದ್ದಲ್ಲಿ ಮತ್ತು ತಮ್ಮ ಆರೋಪಕ್ಕೆ ಸೂಕ್ತವಾದ ದಾಖಲೆಗಳು ಇದ್ದಲ್ಲಿ ಇದರ ಕುರಿತಾಗಿ ನ್ಯಾಯಾಲಯದಲ್ಲಿ ಮೊಕ್ಕದ್ದಮ್ಮೆ ಹೂಡಿ ಭ್ರಷ್ಟ ರಾಜಕಾರಣಿಗಳನ್ನು ಮತ್ತು ಅಧಿಕಾರಿಗಳಿಗೆ ಶಿಕ್ಷೆ ಕೊಡಿಸಬಹುದಾಗಿತ್ತು. ಕಳೆದ ಮೂರ್ನಾಲ್ಕು ತಿಂಗಳುಗಳಲ್ಲಿ ಕೆಂಪಣ್ಣನವರು ಪ್ರಧಾನಿಗಳಿಗೆ ನೇರವಾಗಿ ಪತ್ರ ಬರೆದು ಮಾಧ್ಯಮಗಳ ಮುಂದೆ ಅವಲತ್ತು ತೋಡಿಕೊಂಡರೇ ವಿನಃ ಕಾನೂನಾತ್ಮಕವಾಗಿ ಯಾವುದೇ ಹೋರಾಟ ಮಾಡದೇ ಹೋದದ್ದು ಅಚ್ಚರಿ ಎನಿಸಿದೆ. ಕೆಲವು ವಾರಗಳ ಹಿಂದೆ ಪ್ರಧಾನ ಮಂತ್ರಿಗಳ ಕಛೇರಿಯಿಂದ ಇದೇ ಆರೋಪದ ತನಿಖೆಗಾಗಿ ಪ್ರಧಾನ ಮಂತ್ರಿಗಳ ಕಛೇರಿಯಿಂದ ಆಗಮಿಸಿದ್ದ ಅಧಿಕಾರಿಗಳು ಬೆಂಗಳೂರಿಗೆ ಬಂದು ಸಾಕ್ಷಾಧಾರಗಳನ್ನು ಸಂಗ್ರಹಿಸುವಾಗ ಕೆಂಪಣ್ಣನವರಿಗೂ ಬರಲು ಹೇಳಿದಾಗ ಕೆಂಪಣ್ಣನವರು ಅನಾರೋಗ್ಯದ ನೆಪವೊಡ್ಡಿ ತನಿಖೆಗೆ ಸಹಕರಿಸದೇ ಹೋದದ್ದೂ ಸಹಾ ಅನುಮಾನ ಮೂಡಿಸುತ್ತಿದೆ.

ಈ ಪರ್ಸಂಟೇಜ್ ಲೆಕ್ಕದ ಗುದ್ದಾಟ ಏನೂ ಹೊಸಾ ವಿಷಯವಾಗಿರದೇ ಈಗಾಗಲೇ ಎಲ್ಲರಿಗೂ ತಿಳಿಸಿದಿರುವ ಸಂಗತಿಯಾಗಿದ್ದು. ಇದು ಹಿಂದೆಯೂ ಇತ್ತು. ಈಗಲೂ ಇದೆ ಮತ್ತು ಮುಂದೆಯೂ ಇದ್ದೇ ಇರುತ್ತದೆ ಎನ್ನುವುದು ಬಹಿರಂಗ ರಹಸ್ಯವಾಗಿರುವುದು ನಿಜಕ್ಕೂ ವಿಪರ್ಯಾಸವೇ ಸರಿ. ಪ್ರತಿಯೊಂದು ಸರ್ಕಾರೀ ಕಛೇರಿಗಳಲ್ಲೂ ಪ್ರತಿಯೊಂದು ಕೆಲಸಕ್ಕೂ ಪರೋಕ್ಷವಾಗಿ ಇಂತಿಷ್ಟು ಲಂಚ ಕೊಡಲೇ ಬೇಕೆಂಬ ಅಲಿಖಿತ ನಿಯಮವಿದ್ದು ಅನೇಕ ಹಾಗೆ ಪಡೆದ ಲಂಚ ಕಛೇರಿಯ ಜವಾನನಿಂದ ಹಿಡಿದು ಕಛೇರಿಯ ದಿವಾನರವರೆಗೆ ಅವರ ಸ್ಥಾನಮಾನಕ್ಕೆ ತಕ್ಕಂತೆ ಹಂಚಿಹೋಗುತ್ತದೆ ಎನ್ನುವುದು ಎಲ್ಲರಿಗೂ ತಿಳಿದ ವಿಷಯವಾಗಿದೆ.

ಇನ್ನು ಈಗ ಲಂಚದ ಆರೋಪ ಮಾಡಿರುವ ಗುತ್ತಿಗೆದಾರರೇನೂ ಸತ್ಯಹರಿಶ್ಚಂದ್ರನ ವಂಶದವರೇನಲ್ಲಾ. ಗುತ್ತಿಗೆಯಲ್ಲಿ ಹೇಳಿದ ಗುಣಮಟ್ಟದಲ್ಲಿ ಎಂದಿಗೂ ಕಾರ್ಯವನ್ನು ನಿರ್ವಹಿಸದೇ, ಕೆಲವೊಮ್ಮೆ ಗುತ್ತಿಗೆ ಸಿಗುವ ಮುನ್ನವೇ ತೇಪೆ ಕೆಲಸವನ್ನು ಮಾಡದಿರುವುದರ ಉದಾಹರಣೆ ನೂರಾರಿವೆ. ಸರ್ಕಾರಿ ಅಧಿಕಾರಿಗಳನ್ನು ಮತ್ತು ರಾಜಕಾರಣಿಗಳನ್ನು ಲಂಚದ ಆಸೆ ತೋರಿಸಿದವರೂ ಇದೇ ಗುತ್ತಿಗೆದಾರರೇ ಎಂದರೂ ತಪ್ಪಾಗದು. 5-10 ವರ್ಷ ತಾಳುವ ಗುಣಮಟ್ಟದ ರಸ್ತೆಗೆಂದು ಟೆಂಡರ್ ಕರೆದರೆ, ಕೆಲಸ ಮುಗಿದು ಒಂದೆರಡು ವಾರಕಳೆಯುವುದರೊಳಗೇ ರಸ್ತೆಗಳು (ಪ್ರಧಾನಿಗಳು ಬಂದಾಗ ತುರಾತುರಿಯಲ್ಲಿ ಹಾಗಿದ್ದ ಡಾಂಬರ್ ಕೇವಲ ಎರಡೇ ದಿನಗಳಲ್ಲಿ ಕಿತ್ತುಹೋದದ್ದು ನೆನಪಿಗೆ ಬರುತ್ತದೆ) ಗುಂಡಿ ಬೀಳುವಂತಹ ರಸ್ತೆಗಳನ್ನು ಮಾಡುವ ಗುತ್ತಿಗೆದಾರ ನಂತರ ಅದೇ ರಸ್ತೆಯ ಮರು ನಿರ್ಮಾಣಕ್ಕೆ ಮತ್ತೆ ಟೆಂಡರ್ ಕರೆದು ಕೋಟಿ ಕೋಟಿ ತಿನ್ನುವುದು ಸಹಾ ಎಲ್ಲರಿಗೂ ತಿಳಿದೇ ಇದೆ (ಶ್ರವಣ ಬೆಳಗೋಳದ ಮಸ್ತಕಾಭಿಷೇಕಕ್ಕೆ ಹಾಕಿಸಿದ ರಸ್ತೇ ಮತ್ತೇ ಕೆಲವೇ ತಿಂಗಳುಗಳಲ್ಲಿ ರೇವಣ್ಣನವರ ಕೃಪಾಕಟಾಕ್ಷದಿಂದ ಮರು ಡಾಂಭರಿಕರಣಗೊಂಡ ಪ್ರಕರಣ ಇನ್ನೂ ಹಚ್ಚಹಸುರಾಗಿಯೇ ಇದೆ)

paycmಸರಕಾರಿ ಇಲಾಖೆಗಳ ಗುತ್ತಿಗೆಯಲ್ಲಿ ಲಂಚದ ಪಾಲು ಕೇವಲ ಬಿಜೆಪಿ, ಜೆಡಿಎಸ್, ಆಮ್ ಆದ್ಮಿ ಮತ್ತು ಕಾಂಗ್ರೆಸ್ ಅಂತಿಲ್ಲಾ ಆಡಳಿತಕ್ಕೆ ಬಂದಿರುವ ಎಲ್ಲಾ ಪಕ್ಷಗಳೂ ತಾರತಮ್ಯವಿಲ್ಲದೇ ಮುಕ್ಕಿ ಹಾಕಿವೆ. ಈಗ ಬಿಜೆಪಿ 40% ನುಂಗುತ್ತಿದೆ ಎಂದು ಆರೋಪಿಸುವ ಕಾಂಗ್ರೆಸ್ ತಾನು ಈ ಹಿಂದೆ ಅಧಿಕಾರದಲ್ಲಿ ಇದ್ದಾಗ ಹತ್ತಾರು ತಲೆಮಾರುಗಳಿಗೆ ಆಗುವಷ್ಟು  ಕಮಿಷನ್ ನುಂಗುತ್ತಿದ್ದವು ಎಂದು ಕಾಂಗ್ರೇಸ್ಸಿನ ರಮೇಶ್ ಕುಮಾರ್ ಅವರೇ ಒಪ್ಪಿಕೊಂಡಿದ್ದಾರೆ. ಇನ್ನೂ ಕಾಂಗ್ರೇಸ್ಸಿನ ಅಧ್ಯಕ್ಷೆ ಸೋನಿಯಾ ಮತ್ತವರ ಮಗ ರಾಹುಲ್ ಗಾಂಧಿ, ಸಿ ಚಿದಂಬರಂ, ಪ್ರದೇಶ ಕಾಂಗ್ರೇಸ್ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಸಹಾ ಭ್ರಷ್ಟಾಚಾರದ ಅಡಿಯಲ್ಲಿ ಆರೋಪಿಗಳಾಗಿದ್ದು ಈಗ ಅವರುಗಳೇ PayCM ಅಂತಾ Poster ಮಾಡಿಸಿ ಕಂಡ ಕಂಡ ಗೋಡೆಗಳ ಮೇಲೆ ಸಭ್ಯರಂತೆ Poste ಹಚ್ಚುತ್ತಾ ಆರೋಪ ಮಾಡುತ್ತಿರುವುದು ಭೂತದ ಬಾಯಿಯಲ್ಲಿ ಭಗವದ್ಗೀತೆಯನ್ನು ಕೇಳುವಂತಾಗಿದೆ. 1980ರ ದಶಕದಲ್ಲಿ ದೇಶದ ಪ್ರಧಾನಿಗಳಾಗಿದ್ದ ರಾಜೀವ್ ಗಾಂಧಿ ಅವರು ಕಲ್ಯಾಣ ಮತ್ತು ಬಡತನ ನಿರ್ಮೂಲನೆಗೆ ಗುರಿಪಡಿಸಿದ ಪ್ರತಿ ರೂಪಾಯಿಗೆ ಕೇವಲ ಒಂದು ಭಾಗ, 15 ಪೈಸೆ, ಉದ್ದೇಶಿತ ಫಲಾನುಭವಿಗೆ ತಲುಪುತ್ತದೆ ಎಂಬ ಸತ್ಯವನ್ನು ಬಹಿರಂಗವಾಗಿಯೇ ಹೇಳಿದ್ದರು ಎನ್ನುವುದು ಗಮನಾರ್ಹವಾಗದೆ.

40_commissionಹೀಗೆ ಕಾಂಗ್ರೇಸ್ ಮತ್ತು ಬಿಜೆಪಿ ಪಕ್ಷಗಳು ರಾಜಕೀಯ ತೆವಲುಗಳಿಗಾಗಿ ಪರಸ್ಪರ ಆರೋಪ ಪ್ರತ್ಯಾರೋಪ ಮಾಡುತ್ತಿರುವುದರಿಂದ ಕರ್ನಾಟಕದ ಮಾನ ಹರಾಜಾಗಿ ಹೋಗುತ್ತಿರುವುದು ನಿಜಕ್ಕೂ ದುಃಖಕರವಾಗಿದೆ. ಶತ್ರುಗಳ ಶತ್ರು ತಮ್ಮ ಮಿತ್ರ ಎನ್ನುವಂತೆ ಬಿಜೆಪಿಯನ್ನು ಕಾಂಗ್ರೇಸ್ಸಿನಷ್ಟೇ ವಿರೋಧಿಸುವ ಮತ್ತು ಕರ್ನಾಟಕದ ಗಡಿ ಭಾಗಗಳಲ್ಲಿ ಮುಂದಿನ ಚುನಾವಣೆಯಲ್ಲಿ ತನ್ನ ಸಾಮರ್ಧ್ಯವನ್ನು ಪರೀಕ್ಷಿಸಲು ಮುಂದಾಗಿರುವ ತೆಲಂಗಾಣದ ಕೆಸಿಆರ್ ಪಕ್ಷವೂ ಸಹಾ ಕಳೆದವಾರ ಹೈದರಾಬಾದ್ ಕರ್ನಾಟಕ ವಿಮೋಚನಾ ದಿನದಂದು ಹೈದರಾಬಾದಿನ ಪ್ರಾಂತ್ಯಗಳಲ್ಲಿ ದೊಡ್ಡದೊಡ್ಡದಾಗಿ 40% ಸರ್ಕಾರದ ಮುಖ್ಯಮಂತ್ರಿಗಳಿಗೆ ಸ್ವಾಗತ ಎಂಬ ದೊಡ್ಡದಾದ ಹೋರ್ಡಿಂಗ್ಸ್ ಗಳನ್ನು ಹಾಕಿಸಿ ಮುಖ್ಯಮಂತ್ರಿ ಬೊಮ್ಮಾಯಿಯವರಿಗೆ ಮುಜುಗರ ತಂದದ್ದು ನಿಜಕ್ಕೂ ಅಕ್ಷ್ಯಮ ಅಪರಾಧವಾಗಿದೆ.

scam_ramaiahಇನ್ನು ಹೋದ ಬಂದ ಕಡೆಯಲ್ಲೆಲ್ಲಾ ತಾನು ಸತ್ಯಹರಿಶ್ಚಂದ್ರನ ತುಂಡು ಎಂದೇ ಬಿಂಬಿಸಿಕೊಳ್ಳಲು ಪ್ರಯತ್ನಿಸುವ ಸಿದ್ದರಾಮಯ್ಯರಂತೂ ಮತ್ತೊಮ್ಮೆ ಮುಖ್ಯಮಂತ್ರಿಯಾಗುವ ಭರದಲ್ಲಿ ಇದು 40% ಶರ್ಕಾರ, ಈ ಭ್ರಷ್ಟ ಶರ್ಕಾರವನ್ನು ಶೀಘ್ರವಾಗಿ ಕಿತ್ತೊಗೆಯಬೇಕು ಎಂದು ಅರ್ಭಟಿಸುತ್ತಿರುವಾಗಲೇ, BJP ರಾಜ್ಯಾಧ್ಯಕ್ಷರು ಅವರ ಕುರಿತಾಗಿ ಸ್ಕ್ಯಾಮ್ ರಾಮಯ್ಯ ಎಂಬ ಪುಸ್ತಕವೊಂದನ್ನು ಬಿಡುಗಡೆಗೊಳಿಸಿ ಅದರಲ್ಲಿ, ಸಿದ್ಧರಾಮಯ್ಯನವರು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ನೆಡೆದಿವೆ ಎನ್ನಲಾದ ಹಗರಣಗಳ ಪಟ್ಟಿಯನ್ನು ಮಾಡುವ ಮೂಲಕ ತನ್ನ ಬೆನ್ನನ್ನು ತಾನು ತಟ್ಟಿಕೊಳ್ಳುತ್ತಿದೆಯಾದರೂ, ಕೆಂಪಣ್ಣನವರ ಆರೋಪದ ವಿರುದ್ಧ ಇರುವರೆವಿಗೂ ಅವರು ಯಾವುದೇ ಚಕಾರ ಎತ್ತದಿರುವ ಮೂಲಕ ಮೌನಂ ಸಮ್ಮತಿ ಲಕ್ಷಣಂ ಎನ್ನುವಂತೆ ಅವರು ಮಾಡುತ್ತಿರುವ ಆರೋಪವನ್ನು ಪರೋಕ್ಷವಾಗಿ ಒಪ್ಪಿಕೊಂಡಂತಿದೆ.

ಒಟ್ಟಿನಲ್ಲಿ ಎಲ್ಲಾ ರಾಜಕೀಯ ಪಕ್ಷಗಳಿಗೂ ತಾವು ಅಧಿಕಾರಕ್ಕೆ ಬಂದಾಗ ಆ ಸಮಸ್ಯೆಗೆ ಶಾಶ್ವತವಾದ ಪರಿಹಾರವನ್ನು ಕಂಡು ಹಿಡಿಯುವ ಬದಲು ಸಮಸ್ಯೆಯನ್ನು ಜೀವಂತವಾಗಿಟ್ಟುಕೊಂಡು ತೂ.. ತೂ.. ಮೈ.. ಮೈ.. ಎಂದು ಕರ್ನಾಟಕದ ಮಾನ ಮರ್ಯಾದೆಯನ್ನು ಹಾಳು ಮಾಡುತ್ತಿರುವಾಗ ಬೇರೇ ಪಕ್ಷಗಳನ್ನು ಬಿಡಿ, ನಾನು ತಿನ್ನುವುದಿಲ್ಲ ಮತ್ತು ಮತ್ತೊಬ್ಬರಿಗೂ ತಿನ್ನಲು ಬಿಡುವುದಿಲ್ಲ ಎಂದು ಕೇವಲ ಪ್ರಧಾನ ಮಂತ್ರಿಗಳು ನಿರ್ಧಾರ ತೆಗೆದುಕೊಂಡರೆ ಸಾಲದಾಗಿದ್ದು. ಅದನ್ನು ಅವರ ಮಂತ್ರಿಮಂಡಲ ಮತ್ತು ಅವರ ಪಕ್ಷದ ಇತರೇ ರಾಜ್ಯದಲ್ಲಿರುವ ಎಲ್ಲಾ ಮಂತ್ರಿ ಮತ್ತು ಶಾಸಕರು ನಿರ್ಧರಿಸಿದಾಗ ಅಲ್ಪ ಸ್ವಲ್ಪ ಮಾನ ಉಳಿಯುವಂತಾಗುತ್ತದೆ. ಸದ್ಯದ ಪರಿಸ್ಥಿತಿಯಲ್ಲಿ ಮರ್ಯಾದಸ್ತ ಅಧಿಕಾರಿಗಳು ನಮ್ಮ ಇಲಾಖೆಯಲ್ಲಿ ಲಂಚ ಸ್ವೀಕರಿಸುವುದಿಲ್ಲಾ ಎಂಬ ಪತ್ರವನ್ನು ಪರರ್ಶಿಸ ಬೇಕಾಗಿರುವುದು ನಿಜಕ್ಕೂ ಕರ್ನಾಟಕ್ಕೆ ಆದ ಅವಮಾನವಾಗಿದೆ.  ಇಂತಹ ಪರಿಸ್ಥಿತಿಯಲ್ಲಿ  ಸಮಸ್ತ ಕನ್ನಡಿಗರಿಗೂ ಕಾಡುತ್ತಿರುವ ಪ್ರಶ್ನೆ ಎಂದರೆ, ಯಾರು ಹಿತವರು ಈ ಎಲ್ಲಾ ಭ್ರಷ್ಟ ರಾಜಕೀಯ ಪಕ್ಷಗಳ ನಡುವೆ ಎಂದಾಗಿದೆ ಅಲ್ವೇ?

ಏನಂತೀರಿ?
ನಿಮ್ಮವನೇ ಉಮಾಸುತ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s