ನಮ್ಮ ದೇಶದಲ್ಲಿ ಕೆಲ ವರ್ಷಗಳ ಹಿಂದೆ ಇಂಟರ್ನೆಟ್ ದರ ಕಡಿಮೆ ಆಗ್ತಾ ಇದ್ದ ಹಾಗೆ ಸ್ಮಾರ್ಟ್ ಫೋನ್ ಬಳಕೆ ಹೆಚ್ಚಾದಂತೆಲ್ಲಾ, ಹಿರಿಯರು ಕಿರಿಯರು ಸೇರಿದಂತೆ ಬಹುತೇಕರು ಸಾಮಾಜಿಕ ಜಾಲತಾಣಗಳ ಬಳಕೆ ಹೆಚ್ಚಾದಂತೆಲ್ಲಾ ಒಬ್ಬರ ಮೇಲೆ ಮತ್ತೊಬ್ಬರು ಮಾಡುವ ಟೀಕೆಗಳು ಹೆಚ್ಚಾಗುತ್ತಿರುವುದು ನಿಜಕ್ಕೂ ಕಳವಳಕಾರಿಯಾಗಿದೆ. ಅದರಲ್ಲೂ ಕೆಲವರಂತೂ ಟೀಕಿಸುವುದಕ್ಕಾಗಿಯೇ ಹುಟ್ಟಿದ್ದಾರೋ ಎನ್ನುವಂತೆ ತಮ್ಮ ವಯಕ್ತಿಕ ಸಿದ್ದಾಂತಕ್ಕೆ ವಿರುದ್ಧವಾಗಿದೆ ಎಂದು ಟೀಕೆ ಮಾಡುವುದು ಇನ್ನು ಭಯಾನಕವಾಗಿದೆ.
2014ರಲ್ಲಿ ಶ್ರೀ ನರೇಂದ್ರ ಮೋದಿಯವರು ದೇಶದ ಪ್ರಧಾನಮಂತ್ರಿಗಳಾದ ಮೇಲಂತೂ, ಅವರು ಮಾಡುವ ಪ್ರತಿಯೊಂದು ಕೆಲಸ ಕಾರ್ಯಗಳ ವಿರುದ್ಧ ಒಂದು ವರ್ಗದ ಜನರು ನಿರಂತರವಾಗಿ ಟೀಕೆ ಮಾಡುವುದನ್ನೇ ಕಾಯಕ ಮಾಡಿಕೊಂಡಿರುವುದು ಒಂದು ರೀತಿಯ ತೋಳ ಬಂತು ತೋಳ ಎಂಬ ಕಥೆಯಂತಾಗಿದ್ದು, ಮುಂದೆ ಅವರು ಹೇಳುವ ಎಲ್ಲಾ ವಿಷಯವೂ ಸತ್ಯವೋ ಸುಳ್ಳೋ? ಅದನ್ನು ನಂಬುವುದೋ ಬಿಡುವುದೋ
ಎಂಬ ಗೊಂದಲಕ್ಕೀಡು ಮಾಡುತ್ತದೆ.
ಇಂತಹ ಟೀಕೆಗಳಿಗೆ ಸದ್ಯದ ಉದಾಹರಣೆ ಎಂದರೆ, 1 ಅಕ್ಟೋಬರ್ 2022 ರಂದು ಗಾಂಧಿನಗರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಗಾಂಧಿನಗರ – ಮುಂಬೈ ವಂದೇ ಭಾರತ್ ಗಂಟೆಗೆ 180 ಕಿಮೀ ನಷ್ಟು ವೇಗದಲ್ಲಿ ಸಂಚರಿಸುವ ಅದ್ಭುತವಾದ ರೈಲಿಗೆ ಚಾಲನೆ ನೀಡಿದ್ದರು. ದುರಾದೃಷ್ಟವಶಾತ್ ಅದೇ ರೈಲಿಗೆ ಎಮ್ಮೆಯೊಂದು ಅಕ್ಟೋಬರ್ 7 ರಂದು ಅಡ್ಡ ಬಂದ ಕಾರಣ, ಇಂಜಿನ್ನಿಗೆ ಧಕ್ಕೆಯಾಗಿ ಕೆಲ ಕಾಲ ಆ ರೈಲು ಸಂಚಾರ ನಿಂತಿದ್ದೇ ತಡಾ, ಅದೇ ಮೋದಿ ಉದ್ಘಾಟನೆ ಮಾಡಿ 7 ದಿನಕ್ಕೆ ರೈಲು ಪುಡಿಯಾಗಿದೆ ಎಂದು ಅದಾ ಪೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿಕೊಂಡು ಅಪಹಾಸ್ಯ ಮಾಡುತ್ತಿರುವುದು ನಿಜಕ್ಕೂ ಬೇಸರ ತರಿಸುತ್ತಿದೆ. ಈ ಹಿಂದೆಯೂ ಸಾಕಷ್ಟು ರೈಲುಗಳು ವಿವಿಧ ಕಾರಣಗಳಿಗಾಗಿ ಅಪಘಾತಕ್ಕೀಡಾಗಿದೆಯಲ್ಲವೇ? ಸ್ವಾತ್ರಂತ್ರ್ಯ ಬಂದ ಹೊಸದರಲ್ಲಿ, ರೈಲ್ವೇ ಮಂತ್ರಿಗಳಾಗಿದ್ದ ಲಾಲ್ ಬಹದ್ದೂರ್ ಶಾಸ್ತ್ರಿಗಳೊಬ್ಬರು ಮಾತ್ರವೇ ರೈಲ್ವೇ ಅಪಘಾತಕ್ಕೆ ನೈತಿಕ ಹೊಣೆ ಹೊತ್ತು ರಾಜಿನಾಮೆ ನೀಡಿದ್ದು ಕೊಟ್ಟದ್ದು ಬಿಟ್ಟರೇ, ನಂತರ ನಡೆದಿರುವ ನೂರಾರು ರೈಲ್ವೇ ಅಪಘಾತಗಳಿಗೆ ಆಡಳಿತ ಪಕ್ಷದತ್ತ ಯಾರೂ ಸಹಾ ಬೆರಳು ಮಾಡದೇ ಇರುವಾಗ ಈಗ ಮಾತ್ರಾ ಮೋದಿಯವರ ಕಾಲನ್ನು ಎಳೆಯುತ್ತಿರುವುದು ಎಷ್ಟು ಸರಿ?
ನಿಜ ಹೇಳಬೇಕೆಂದರೆ, ದೇಶದ ವಾಣಿಜ್ಯ ರಾಜಧಾನಿ ಮುಂಬೈ ಮತ್ತು ಅಹಮದಾಬಾದ್ ನಡುವೆ ಬುಲೆಟ್ ಟ್ರೈನ್ ಅರ್ಥಾತ್ ಹೈಸ್ಪೀಡ್ ರೈಲ್ ಕಾರಿಡಾರ್ (MAHSR) ಅಥವಾ ಮುಂಬೈ-ಅಹಮದಾಬಾದ್ HSR ಆರಂಭಿಸುತ್ತೇವೆ ಎಂದಾಗಲೂ ಇದೇ ರೀತಿಯಾಗಿ ಅಪಹಾಸ್ಯ ಮಾಡಿದ್ದರು. ಹೊಟ್ಟೆಗೆ ಹಿಟ್ಟಿಲ್ಲದೇ ಇರುವಾಗ ಜುಟ್ಟಿಗೆ ಮಲ್ಲಿಗೇ ಹೂವೇ ಎಂದೆಲ್ಲಾ ಕಿಚಾಯಿಸಿದ್ದರು. ಸದ್ಯದ ವಿಷಯವೇನೆಂದರೆ ಆ ರೈಲ್ವೇ ಹಳಿಯ ಜೋಡಣೆ ಅತ್ಯಂತ ಭರದಿಂದ ಸಾಗುತ್ತಲಿದ್ದು, ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರೇ ಇತ್ತೀಚೆಗೆ ಹೇಳಿರುವಂತೆ ಭಾರತದ ಮೊದಲ ಬುಲೆಟ್ ಟ್ರೈನ್ 2026 ರ ವೇಳೆಗೆ ಕಾರ್ಯಾರಂಭ ಮಾಡಲಿದೆ.
ಭಾರತದಲ್ಲಿ ಸದ್ಯದ ಎಕ್ಸ್‌ಪ್ರೆಸ್ ರೈಲುಗಳ ಸರಾಸರಿ ವೇಗ, ಗಂಟೆಗೆ 113 ಕಿ.ಮೀ ಇದೆ. ಗಂಟೆಗೆ 320 ಕಿಮೀ ವೇಗದಲ್ಲಿ ಚಲಿಸುವ ಸಾಮರ್ಥ್ಯವನ್ನು ಹೊಂದಿರುವ ಬುಲೆಟ್ ಟ್ರೈನ್ ಗಳನ್ನು ಸದ್ಯದ ರೈಲು ಹಳಿಗಳ ಮೇಲೆ ಓಡಿಸಲು ಸಾಧ್ಯವಿಲ್ಲದೇ ಇರುವ ಕಾರಣ ಅದಕ್ಕೆಂದೇ ಹೊಸಾ ರೈಲು ಹಳಿಗಳನ್ನು ಹಾಕುವುದೂ ಸಹಾ ಅತ್ಯಂತ ದುಬಾರಿಯೂ ಅಗಿರುವ ಕಾರಣ ಇವೆಲ್ಲದರ ಮಧ್ಯೆ ಗಂಟೆಗೆ 180 ಕಿಮೀ ಚಲಿಸಬಲ್ಲಂತಹ ಸಾಮರ್ಥ್ಯ ಹೊಂದಿರುವ ವಂದೇ ಭಾರತ್ ರೈಲುಗಳನ್ನು 15 ಫೆಬ್ರವರಿ 2019 ರಂದು ಆರಂಭಿಸಿದ್ದು 27 ಜನವರಿ 2019 ರಂದು ವಂದೇ ಭಾರತ್ ಎಕ್ಸ್‌ಪ್ರೆಸ್ ಎಂದು ಹೆಸರಿಸಲಾಯಿತು. ಸದ್ಯಕ್ಕೆ ನವದೆಹಲಿ – ವಾರಣಾಸಿ ಮಾರ್ಗ ಮತ್ತು ನವದೆಹಲಿ – ಶ್ರೀ ಮಾತಾ ವೈಷ್ಣೋ ದೇವಿ ಕತ್ರಾ ಮಾರ್ಗದಲ್ಲಿ ಕಾರ್ಯನಿರ್ವಹಿಸುತ್ತಿದ್ದು ಕಳೆದ ವಾರ ಮಹಾರಾಷ್ಟ್ರ ಮತ್ತು ಗುಜರಾತ್‌ನ ಎರಡು ರಾಜ್ಯಗಳ ರಾಜಧಾನಿಗಳನ್ನು ಸಂಪರ್ಕಿಸುವ ಮೂಲಕ ಇದು ಭಾರತದಲ್ಲಿ ಮೂರನೇ ವಂದೇ ಭಾರತ್ ರೈಲು ಇದಾಗಿದೆ. ಸದ್ಯಕ್ಕೆ ರಾಷ್ಟ್ರದ ಅತ್ಯಂತ ವೇಗದ ರೈಲು ಎನ್ನುವ ಖ್ಯಾತಿ ಪಡೆದಿದ್ದು, ಇಂತಹ ನೂರು ರೈಲುಗಳಳು ದೇಶಾದ್ಯಂತ ಸದ್ಯದಲ್ಲೇ ಆರಂಭಿಸುವುದೆ ಪ್ರಸಕ್ತ ಸರ್ಕಾರದ ಉದ್ದೇಶವಾಗಿದೆ.
ಇದಕ್ಕಿಂತಲೂ ಹೆಮ್ಮೆಯ ಸಂಗತಿ ಎಂದರೆ, ಕೇವಲ 18 ತಿಂಗಳ ಅವಧಿಯಲ್ಲಿ ಭಾರತ ಸರ್ಕಾರದ ಮೇಕ್ ಇನ್ ಇಂಡಿಯಾ ಉಪಕ್ರಮದ ಅಡಿಯಲ್ಲಿ ಚೆನ್ನೈನ ಪೆರಂಬೂರ್‌ನಲ್ಲಿರುವ ಇಂಟಿಗ್ರಲ್ ಕೋಚ್ ಫ್ಯಾಕ್ಟರಿ (ICF) ವಿನ್ಯಾಸಗೊಳಿಸಿದ್ದಲ್ಲದೇ ತಯಾರಿಸಿದೆ. ಮೊದಲ ರೇಕ್‌ನ ಘಟಕ ವೆಚ್ಚವನ್ನು ₹100 ಕೋಟಿ (US$13 ಮಿಲಿಯನ್) ಎಂದು ಅಂದಾಜಿಸಲಾಗಿದ್ದು, ಹೆಚ್ಚು ಹೆಚ್ಚು ಉತ್ಪಾದನೆ ಆಗುತ್ತಾ ಹೊದಂತೆಲ್ಲಾ ಈ ವೆಚ್ಚ ಕಡಿಮೆಯಾಗುವ ನಿರೀಕ್ಷೆಯಿದೆ. ಇದು ಯುರೋಪ್‌ನಿಂದ ಆಮದು ಮಾಡಿಕೊಳ್ಳುವ ರೈಲಿಗಿಂತ ಸುಮಾರು 40% ಅಗ್ಗವಾಗಿದೆ. ಈ ಸ್ವದೇಶಿ ನಿರ್ಮಿತ ಸೆಮಿ-ಹೈ ಸ್ಪೀಡ್ ರೈಲು ವಂದೇ ಭಾರತ್ ರೈಲು ಅಲ್ಯೂಮಿನಿಯಂ ನಿಂದ ಮಾಡಲ್ಪಟ್ಟಿರುವ ಕಾರಣ, ಕಡಿಮೆ ತೂಕವನ್ನು ಹೊಂದಿರುವ ಕಾರಣ ಹೆಚ್ಚಿನ ಇಂಧನ ದಕ್ಷತೆ ಹೊಂದಿರುವ ಅಧ್ಭುತ ರೈಲು ಇದಾಗಿದೆ.
ದುರಾದೃಷ್ಟವಷಾತ್ ಅಕ್ಟೋಬರ್ 6 ಗುರುವಾರ ಬೆಳಗ್ಗೆ 11.15 ರ ಸುಮಾರಿಗೆ ಗಾಂಧಿನಗರದ ಕಡೆಗೆ ವೇಗವಾಗಿ ಚಲಿಸುತ್ತಿದ್ದ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಅಹಮದಾಬಾದ್‌ನ ವತ್ವಾ ಮತ್ತು ಮಣಿನಗರ ನಿಲ್ದಾಣಗಳ ನಡುವೆ ಈ ವೇಗದ ರೈಲು ಸಂಚರಿಸುವಾಗ ಎಮ್ಮೆಗಳ ಹಿಂಡು ಅಡ್ಡಬಂದು ಅಪಘಾತ ಸಂಭವಿಸಿದ ಕಾರಣ, ರೈಲಿನ ಮುಂಭಾಗಕ್ಕೆ ಹಾನಿಯಾಗಿದೆ. ಕಣ್ಣು ಮಿಟುಕಿಸುವಷ್ಟರಲ್ಲಿ ಹತ್ತಾರು ಮೀಟರ್ ಚಲಿಸುವ ಇಂತಹ ವೇಗದ ರೈಲಿಗೆ ಏನಾದರು ಅಡ್ಡ ಬಂದರೆ ಸಹಜವಾಗಿ ರೈಲಿಗೆ ಹಾನಿಯಾಗುತ್ತದೆ. ಇದು ಖಂಡಿತವಾಗಿಯೂ ರೈಲ್ವೇ ಹಳಿಗಳ ಬಳಿ ಎಮ್ಮೆಗಳನ್ನು ಮೇಯುಸುತ್ತಿದ್ದ ದನಗಾಹಿಯ ತಪ್ಪಾಗಿದೆಯೇ ಹೊರತು ಇದು ಖಂಡಿತವಾಗಿಯೂ ಆ ರೈಲು ಚಾಲಕ ಮತ್ತು ಪ್ರಧಾನಿಗಳ ಮೇಲೆ ಗೂಬೆ ಕೂರಿಸುವುದು ಸರಿಕಾಣದು ಅಲ್ವೇ? ಇನ್ನು ಪ್ರಪಂಚಾದ್ಯಂತ ವಿಮಾನಗಳೂ ಆಕಾಶದಲ್ಲಿ ಹಾರಾಡುವಾಗ ಅವುಗಳಿಗೆ ಪಕ್ಷಿಗಳು ಬಡಿದು ಹಾನಿಯಾಗಿರುವ ಎಷ್ಟೋ ಘಟನೆಗಳು ಸಹಜವಾಗಿ ಇರುವಾಗ ಇದೆಲ್ಲಾ ದೊಡ್ಡ ವಿಷಯವೇ ಆಗುವುದಿಲ್ಲ ಅಲ್ಲವೇ?
ಇದಕ್ಕಿಂತಲು ಅಭಿನಂದನಾರ್ಹವಾದ ಅಂಶವೆಂದರೆ, ಅಪಘಾತ ಆದ ಕೆಲವೇ ಕೆಲವು ಗಂಟೆಗಳಲ್ಲಿ ಸಣ್ಣ ಪುಟ್ಟ ದುರಸ್ತಿ ಕಾರ್ಯ ನಡೆಸಿ, ಮುಂಬೈ ಸೆಂಟ್ರಲ್ ನಿಲ್ದಾಣಕ್ಕೆ ರೈಲಿನ ಮುಂಭಾಗದ ಪ್ಯಾನೆಲ್ ಇಲ್ಲದೆ ಪ್ರಯಾಣಿಸಿದ್ದಲ್ಲದೇ, ಅಪಘಾತ ವಾದ ಕೇವಲ 18 ಗಂಟೆಯ ಒಳಗೆ ರೈಲ್ವೆ ಸಿಬ್ಬಂದಿಗಳು ಪುಡಿಯಾದ ರೈಲಿನ ಪ್ಯಾನಲ್ ಗಳನ್ನು ಬದಲಿಸಿ ಮತ್ತ್ ಮೊದಲಿನಿಂತೆಯೇ ಮಾಡಿದ್ದಾರೆ. ಇನ್ನು ಮುಂದೆ ಈ ರೀತಿಯ ಅಪಘಾತದಿಂದ ರಕ್ಷಣೆ ಪಡೆಯುವ ರೀತಿಯಲ್ಲಿ ಹೆಚ್ಚು ಬಲಿಷ್ಟವಾದ ರೈಲುಗಾಡಿಗಳನ್ನು ವಿನ್ಯಾಸ ಮಾಡಲಾಗುತ್ತದೆ ಎಂದು ರೈಲ್ವೆ ಸಚಿವರು ಹೇಳಿರುವುದು ಶ್ಲಾಘನೀಯವಾಗಿದೆ.
ಹಾಗಾಗಿ, ತಮ್ಮ ಸೈದ್ಧಾಂತಿಕ ವಿರೋಧಾಭಾಸಕ್ಕೋ ಇಲ್ಲವೇ ನರೇಂದ್ರ ಮೋದಿಯವರ ಮೇಲಿನ ವಯಕ್ತಿಕ ದ್ವೇಷಕ್ಕಾಗಿಯೋ ಪ್ರತಿಯೊಂದು ವಿಷಯದಲ್ಲೂ ದೇಶ ವಿದೇಶಗಳಲ್ಲಿ ಹೋದ ಬಂದ ಕಡೆಯಲ್ಲೆಲ್ಲಾ ಟೀಕಿಸುವುದನ್ನೇ ಕಾಯಕ ಮಾಡಿಕೊಂಡಲ್ಲಿ ದೇಶದ ಮಾನ ಹರಾಜಾಗುವುದಲ್ಲದೇ ಕಾಲಾನಂತರದಲ್ಲಿ ಜನರು ಈ ರೀತಿಯಾಗಿ ಸುಖಾ ಸುಮ್ಮನೆ ಟೀಕಿಸುವವರನ್ನೇ ಎಡಬಿಡಂಗಿಗಳು ಎಂದು ಪರಿಗಣಿಸಿ ಅವರು ಸತ್ಯವಾದ ಸಂಗತಿಯನ್ನು ಹೇಳಿದರೂ ನಂಬಲಾಗದ ಸ್ಥಿತಿಯನ್ನು ಸ್ವಯಂಕೃತರಾಗಿ ತಂದು ಕೊಳ್ಳುವ ಅಪಾಯವಿದೆ. ಹಾಗಾಗಿ ಟೀಕೆಗಳಿಗೂ ಒಂದು ತೂಕ ಇರಬೇಕಲ್ಲವೇ? ರಸವೆ ಜನನ, ವಿರಸ ಮರಣ, ಸಮರಸವೇ ಜೀವನ ಎಂಬ ದ.ರಾ. ಬೇಂದ್ರೆ ಅವರ ಮಾತುಗಳು ಈ ಸಂಧರ್ಭದಲ್ಲಿ ಎಷ್ಟು ಅರ್ಥಗರ್ಭಿತವಾಗಿದೆ ಅಲ್ಲವೇ?
ಜಪಾನ್, ಚೈನಾ, ಯುರೋಪ್ ನಲ್ಲಿ ಮ್ಯಾಗ್ಲೆವ್ ಟ್ರೈನ್ ಮತ್ತು ಬುಲೆಟ್ ಟ್ರೈನ್ ಗಳಿಗೆ ಸಣ್ಣ ಪುಟ್ಟ ಅವಘಡಗಳು ಸಂಭವಿಸಿದಾಗ ಅಲ್ಲಿಯವರೆಂದೂ ನಮ್ಮವರ ರೀತಿಯಲ್ಲಿ ಅಪಹಾಸ್ಯ ಮಾಡುವುದಿಲ್ಲ. ಏಕೆಂದರೆ ಅಲ್ಲಿನವರಿಗೆ ಸ್ವದೇಶಿ ಉತ್ಪನ್ನಗಳ ಬಗ್ಗೆ ಮತ್ತು ತಮ್ಮ ತಾಯ್ನಾಡಿನ ಬಗ್ಗೆ ಹೆಮ್ಮೆಯಿದೆ. ದುರಾದೃಷ್ಟವಶಾತ್ ನಮ್ಮಲ್ಲಿ ನಮ್ಮವರೇ ಪೂರ್ವಾಗ್ರಹ ಪೀಡಿತವಾಗಿ ಕಾಲು ಎಳೆಯಲೆಂದೇ ಟೀಕಿಸುವುದನ್ನು ನೋಡಿದಾಗ, ನಿಜವಾದ ರೋಗಿಗಳನ್ನು ಚಿಕಿತ್ಸೆಯ ಮೂಲಕ ಗುಣಪಡಿಸಬಹುದು ಆದರೇ, ಗುಲಾಮೀ ಮನಸ್ಥಿಯವರ ಮನೋ-ರೋಗಕ್ಕೆ ಮದ್ದಿಲ್ಲ ಎಂದು ಹೇಳುವುದು ಸತ್ಯ ಎಂದೆನಿಸುತ್ತದೆ ಅಲ್ವೇ?
ಏನಂತೀರೀ?
ನಿಮ್ಮವನೇ ಉಮಾಸುತ
Good article
LikeLiked by 1 person
Thank you very much for your constructive feedback
LikeLike