ಸಾಧಾರಣವಾಗಿ ಮೊಸಳೆಗಳು ಸಿಹಿನೀರಿನ ನದಿಗಳಲ್ಲಿ ಹಿಂಡು ಹಿಂಡಾಗಿ ವಾಸಿಸುತ್ತಿದ್ದು ಮಾಂಸಾಹಾರದ ಉಭಯಜೀವಿಯಾಗಿದೆ. ನದಿಯನೀರಿನಲ್ಲಿ ಸಿಗುವ ಮೀನುಗಳು ಮತ್ತು ಇತರೇ ಪ್ರಾಣಿಗಳು ಅವುಗಳ ಆಹಾರವಾಗಿರುತ್ತದೆ. ಆದರೆ, ಕೇರಳ ಮತ್ತು ಕರ್ನಾಟಕದ ಗಡಿಭಾಗದಲ್ಲಿರುವ ಕಾಸರಗೋಡಿನ ಕುಂಬಳೆಯ ಸಮೀಪದ ನಾಯ್ಕಾಪುವಿನಿಂದ 2 ಕಿ.ಮೀ ದೂರದಲ್ಲಿರುವ ಅನಂತಪುರದ ಶ್ರೀ ಅನಂತಪದ್ಮನಾಭ ಸ್ವಾಮಿಯ ದೇವಸ್ಥಾನ ಮುಂದಿರುವ ಕೊಳದಲ್ಲಿದ್ದ ಬಬಿಯಾ ಎಂಬ ಅಪರೂಪದ ಮೊಸಳೆ ಇವೆಲ್ಲಕ್ಕೂ ತದ್ವಿರುದ್ಧವಾಗಿದ್ದು ಅದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯೋಣ ಬನ್ನಿ.
ನಮಗೆಲ್ಲರಿಗೂ ಈಗಾಗಲೇ ತಿಳಿದಿರುವಂತೆ ಕೇರಳ ರಾಜ್ಯವನ್ನು ದೇವರ ನಾಡು ಎಂದೇ ಕರೆಯಲಾಗುತ್ತದೆ. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎನ್ನುವಂತೆ ಅತ್ಯಂತ ಸಣ್ಣ ರಾಜ್ಯವಾದರೂ ಅಲ್ಲಿ ಮೂರೂ ಧರ್ಮದ ದೇವಾಲಯ, ಚರ್ಚ್ ಮತ್ತು ಮಸೀದಿಗಳಿಗೆ ಕಡಿಮೆ ಏನಿಲ್ಲ. ಅದರಲ್ಲೂ ಅಲ್ಲಿ ಸಾವಿರಾರು ವರ್ಷಗಳಷ್ಟು ಪುರಾತನವಾದ ಮತ್ತು ಐತಿಹ್ಯವುಳ್ಳ ನೂರಾರು ದೇವಾಲಯಗಳಿದ್ದು ಅಂತಹ ದೇವಾಲಯಗಳಲ್ಲಿ ಅನಂತಪುರದ ಶ್ರೀ ಅನಂತಪದ್ಮನಾಭ ಸ್ವಾಮಿಯ ದೇವಸ್ಥಾನವೂ ಒಂದಾಗಿದೆ. ಈ ಶ್ರೀ ಅನಂತಪುರ ದೇವಸ್ಥಾನವು ಅನಂತಪುರ ಗ್ರಾಮದ ಕೆರೆಯ ಮಧ್ಯದಲ್ಲಿದ್ದು ಇದು ಕೇರಳದ ಏಕೈಕ ಸರೋವರ ದೇವಾಲಯವಾಗಿದ್ದು, ತಿರುವನಂತಪುರಂ ಅನಂತಪದ್ಮನಾಭ ಸ್ವಾಮಿಯ ಮೂಲ ಸ್ಥಾನ ಎಂದೇ ಎಲ್ಲರ ನಂಬಿಕೆಯಾಗಿದ್ದು, ಬಹಳ ಪ್ರಭಾವಶಾಲಿ ದೇವರು ಎಂದೇ ಭಕ್ತಾದಿಗಳು ನಂಬಿರುವ ಕಾರಣ ಪ್ರತೀ ದಿನವೂ ಸಾವಿರಾರು ಭಕ್ತಾದಿಗಳು ಆ ದೇವಸ್ಥಾನಕ್ಕೆ ಬಂದು ಅನಂತ ಪದ್ಮನಾಭಸ್ವಾಮಿಯ ದರ್ಶನ ಪಡೆದು ಪುನೀತರಾಗುತ್ತಾರೆ.
ಈ ದೇವಾಲಯದ ಮತ್ತೊಂದು ವಿಶೇಷವೇನೆಮದರೆ ಆ ದೇವಾಲಯದ ಮುಂದಿರುವ ಬಬಿಯಾ ಕೊಳದಲ್ಲಿದ್ದ ಮೊಸಳೆ ಎಂದರು ತಪ್ಪಾಗದು. ಸರೋವರ ಕ್ಷೇತ್ರ ಅನಂತಪುರ ಶ್ರೀ ಅನಂತ ಪದ್ಮನಾಭ ಸ್ವಾಮಿ ದೇವಸ್ಥಾನದ ಕ್ಷೇತ್ರ ಪಾಲಕನಂತಿದ್ದ ಈ ಬಬಿಯಾ ಮೊಸಳೆ ಯಾವಾಗ? ಅದು ಹೇಗೆ ಈ ಕೊಳಕ್ಕೆ ಬಂದು ಸೇರಿಕೊಂಡಿತು ಎಂಬುದು ಯಾರಿಗೂ ತಿಳಿಯದಾಗಿದೆ. ಸ್ಥಳೀಯರು ಹೇಳುವ ಪ್ರಕಾರ ಈ ಮೊಸಳೆ ಇಲ್ಲಿಗೆ ಹೇಗೆ ಮತ್ತು ಯಾವಾಗ ಬಂದಿತು ಎಂಬುದು ಯಾರಿಗೂತ ತಿಳಿದಿಲ್ಲ. ಇದಕ್ಕೂ ಮೊದಲು ಈ ಕೊಳದಲ್ಲಿ ಇದ್ದ ಬಬಿಯಾ ಎಂಬ ಮೊಸಳೆಯನ್ನು ಬ್ರಿಟಿಷ್ ಅಧಿಕಾರಿಯೊಬ್ಬರು ಹೊಡೆದು ಕೊಂದ ಸ್ವಲ್ಪ ದಿನಗಳ ಈ ಮೊಸಳೆಯು ಈ ಸರೋವರದಲ್ಲಿ ಕಾಣಿಸಿಕೊಂಡಿದ್ದು ಜನರು ಅದಕ್ಕೂ ಸಹಾ ಬಬಿಯಾ ಎಂದೇ ಕರೆಯುತ್ತಿದ್ದರು.
ಅಂದಿನಿಂದಲೂ, ಪ್ರತೀ ದಿನವೂ ದೇವಾಲಯದ ಪದ್ಮನಾಭಸ್ವಾಮಿಗೆ ಪೂಜೆ ಮಾಡಿದ ನಂತರ ಸ್ವಾಮಿಗೆ ಅರ್ಪಿಸಿದ ನೈವೇದ್ಯವನ್ನು ತಂದು ದೇವಾಸ್ಥಾನದ ಅರ್ಚಕರು ಈ ಕೊಳದ ಬಳಿ ಬಂದು ಬಬಿಯಾ ಎಂದು ಕೂಗುತ್ತಿದ್ದಂತೆಯೇ ನೀರಿನಿಂದ ಹೊರಬರುತ್ತಿದ್ದ ಬಬಿಯಾ ಬಾಯಿ ತೆರೆಯುತ್ತಿದ್ದಂತೆಯೇ ಅರ್ಚಕರು ಅದಕ್ಕೆ ದೇವರ ಪ್ರಸಾದವನ್ನು ಹಾಕುತ್ತಿದ್ದಂತೆಯೇ, ಪ್ರಸಾದವನ್ನು ಸ್ವೀಕರಿಸಿ ಮತ್ತೆ ನೀರಿನಲ್ಲಿ ಮರೆಯಾಗುತ್ತಿತ್ತು ಹೀಗೆ ದೇವಾಲಯದ ಅರ್ಚಕರ ಜೊತೆ ಬಬಿಯಾಗೆ ಬಹಳ ಅನ್ಯೋನ್ಯ ಸಂಬಂಧವಿತ್ತು. ಉಳಿದ ಭಕ್ತರು ಬಬಿಯಾ ಬಬಿಯಾ ಎಂದು ಎಷ್ಟು ಬಾರಿ ಎಷ್ಟೇ ಜೋರಾಗಿಯೇ ಕರೆದರೂ ಹೊರಗೆ ಬಾರದ ಬಬಿಯಾ ಅರ್ಚಕರು ಕರೆದ ಶಬ್ದ ಕೇಳಿದ ಕೂಡಲೆ ಕೆರೆಯಿಂದ ಹೊರಗೆ ಬಂದು ನೈವೇದ್ಯ ಸ್ವೀಕರಿಸುತ್ತಿತ್ತು. ಈ ಪ್ರಕ್ರಿಯೆ ಪ್ರತಿನಿತ್ಯ ಮಧ್ಯಾಹ್ನ ಮತ್ತು ಸಂಜೆ ನಿರಂತವಾಗಿ ಹಲವಾರು ವರ್ಷಗಳಿಂದಲೂ ಅನೂಚಾನಾಗಿ ನಡೆದು ಕೊಂಡು ಬರುತ್ತಿದ್ದ ಕಾರಣ, ಈ ಮೊಸಳೆಯನ್ನು ದೇವರ ಮೊಸಳೆ ಎಂದೇ ಎಲ್ಲರೂ ಕರೆಯುತ್ತಿದ್ದದ್ದಲ್ಲದೇ, ಈ ಮೊಸಳೆಯೂ ದೇವಾಲಯಕ್ಕೆ ಬರುತ್ತಿದ ಭಕ್ತಾದಿಗಳ ಪ್ರಮುಖ ಆಕರ್ಷಣಿಯ ಕೇಂದ್ರಬಿಂದುವಾಗಿತ್ತು. ದೇವಾಲಯಕ್ಕೆ ಬರುತ್ತಿದ್ದ ಭಕ್ತಾದಿಗಳಲ್ಲರೂ ಇದೇ ಕೊಳದಲ್ಲಿ ಕಾಲು ತೊಳೆದುಕೊಳ್ಳುವುದು ಕೆಲವರು ಸ್ನಾನವನ್ನೂ ಸಹಾ ಮಾಡುತ್ತಿದ್ದರೂ, ಒಮ್ಮೆಯೂ ಸಹಾ ಬಬಿಯಾ ಯಾರಿಗೂ ತೊಂದರೆಯನ್ನುಂಟು ಮಾಡಿದ ಘಟನೆಗಳೇ ನಡೆದಿಲ್ಲ. ಅಷ್ಟೇ ಅಲ್ಲದೇ ಆ ಕೊಳದಲ್ಲಿ ಸಾಕಷ್ಟು ಮೀನುಗಳಿದ್ದರೂ ಬಬಿಯಾ ಒಮ್ಮೆಯೂ ಆ ಮೀನುಗಳ ತಂಟೆಗೆ ಹೋಗದೇ, ಅನಂತ ಪದ್ಮನಾಭ ದೇವಸ್ಥಾನದ ಅರ್ಚಕರು ಪ್ರತೀದಿನ 2 ಹೊತ್ತು ಕೊಡುತ್ತಿದ್ದ ಪ್ರಸಾದವನ್ನೇ ಅದರ ಪ್ರಮುಖ ಆಹಾರವಾಗಿತ್ತು!
ಹಾಗಾಗಿ ಈ ದೇವಸ್ಥಾನಕ್ಕೆ ಬರುವ ಭಕ್ತರು ಅನಂತ ಪದ್ಮನಾಭನ ದರ್ಶನದ ಜೊತೆಗೆ ದೇವಾಲಯದ ಕೊಳದಲ್ಲಿದ್ದ ಬಬಿಯಾ ಮೊಸಳೆಯನ್ನು ನೋಡದೇ ಹಿಂದಿರುಗುತ್ತಿರಲಿಲ್ಲ. ಅನೇಕ ಬಾರಿ ಬಬಿಯಾಳ ದರ್ಶನಕ್ಕಾಗಿ ಗಂಟೆಗಟ್ಟಲೆ ಕಾಯ್ದಿರುವ ಉದಾಹರಣೆಯೂ ಇತ್ತು. ಹೀಗೆ, ಅನಂತ ಪದ್ಮನಾಭಸ್ವಾಮಿ ದೇವಸ್ಥಾನದ ಪ್ರಮುಖ ಆಕರ್ಷಣೆಯ ಕೇಂದ್ರವಾಗಿದ್ದ ಮತ್ತು ಭಕ್ತಾದಿಗಳಿಂದ ದೇವರ ಪ್ರತಿರೂಪವೆಂದೇ ಕರೆಯಲ್ಪಡುತ್ತಿದ್ದ ಬಬಿಯಾ ಮೊಸಳೆ ದಿನಾಂಕ 9.10.2022ರ ಭಾನುವಾರ ರಾತ್ರಿಯಂದು ವಯೋಸಹಜವಾಗಿ ಕೊನೆಯುಸಿರೆಳೆದಿರುವುದು ಅಪಾರ ಭಕ್ತಾದಿಗಳಿಗೆ ನೋವನ್ನುಂಟುಮಾಡಿದೆ.
1940ರ ಸುಮಾರಿಗೆ ಅನಂತ ಪದ್ಮನಾಭ ದೇವಸ್ಥಾನದ ಕೊಳದಲ್ಲಿ ಕಾಣಿಸಿಕೊಂಡ ಈ ಬಬಿಯಾ ಮೊಸಳೆ ಆ ದೇವಾಲಯವನ್ನು ಕಾಪಾಡುತ್ತಿತ್ತು ಎಂಬ ನಂಬಿಕೆಯಾಗಿತ್ತು. ಹಾಗಾಗಿ, ಬಬಿಯಾಳ ಅಂತ್ಯಕ್ರಿಯೆಯನ್ನು ಅನಂತಪದ್ಮನಾಭ ದೇವಸ್ಥಾನದ ಆವರಣದಲ್ಲಿಯೇ ಮಾಡಲು ನಿರ್ಧರಿಸಲಾಗಿದ್ದು, ಬಬಿಯಾಳ ಅಗಲಿಕೆಯ ವಿಷಯವನ್ನು ತಿಳಿದ ಕೂಡಲೇ ರಾಜ್ಯಾದ್ಯಂತ ನೆಲೆಸಿರುವ ಅನೇಕ ಭಕ್ತರು ಬಳಿಯಾಳ ಅಂತಿಮ ದರ್ಶನಕ್ಕೆ ಕ್ಷೇತ್ರಕ್ಕೆ ಆಗಮಿಸುತ್ತಿರುವುದು ಅತ್ಯಂತ ಗಮನಾರ್ಹವಾಗಿದೆ. ದೇವಾಲಯವನ್ನು ರಕ್ಷಿಸಲು ದೇವರು ನೇಮಿಸಿದ ರಕ್ಷಕಳೇ ಈ ಬಬಿಯಾ ಎಂಬ ಮೊಸಳೆ ಎಂದು ಭಕ್ತರು ನಂಬುತವುದನ್ನೂ ಅನೇಕ ನಾಸ್ತಿಕರು ಆಡಿಕೊಂಡರೂ, ಅವರವರ ಭಾವಕ್ಕೆ ಅವರವರ ಭಕುತಿ ಎಂದು ನಂಬುವುದು ಬಿಡುವುದು ಅವರವರಿಗೆ ಬಿಟ್ಟುಬಿಡುವುದು ಉತ್ತಮವಾದ ಪ್ರಕ್ರಿಯೆಯಾಗಿದೆ ಅಲ್ವೇ?
ಏನಂತೀರೀ?
ನಿಮ್ಮವನೇ ಉಮಾಸುತ