ವಿಶ್ವದ ಬೃಹತ್ ವಿಮಾನ ಏರ್ ಬಸ್ ಎ380 ಬೆಂಗಳೂರಿಗೆ ಬರಲಿದೆ

ಪ್ರಪಂಚಾದ್ಯಂತ ನೂರಾರು ವಿಮಾನ ತಯಾರಿಸುವ ಸಂಸ್ಥೆಗಳು ಇದ್ದರೂ, ಪ್ರಮುಖವಾಗಿ ಏರ್ ಬಸ್ ಮತ್ತು ಬೋಯಿಂಗ್ ಎಂಬ ಎರಡು ಕಂಪನಿಗಳು ಬಹಳ ಪ್ರಸಿದ್ಧವಾಗಿದ್ದು ಪ್ರಪಂಚದ ಬಹುತೇಕ ರಾಷ್ಟ್ರಗಳು ಈ ಎರಡೂ ಕಂಪನಿಗಳ ವಿವಿಧ ಶ್ರೇಣಿಯ ವಿಮಾನಗಳನ್ನು ತನ್ನ ಪ್ರಯಾಣಿಕರ ಮತ್ತು ಸರಕು ಸಾಗಾಣಿಗೆ ಬಳಸುತ್ತದೆ. ಸಾಮಾನ್ಯವಾಗಿ ಬಹುತೇಕ ರಾಷ್ಟ್ರಗಳು ಏರ್‌ಬಸ್ A220 ಮತ್ತು A320 ಫ್ಯಾಮಿಲಿ, ಬೋಯಿಂಗ್ 737 ಮತ್ತು ಎಂಬ್ರೇರ್ ಇ-ಜೆಟ್ ವಿಮಾನಗಳನ್ನು ಬಳಸುತ್ತಿದ್ದು ಅದರಲ್ಲಿ ಸಾಮಾನ್ಯವಾಗಿ 100 ರಿಂದ 240 ಪ್ರಯಾಣಿಕರನ್ನು ಹೊತ್ತು ಸಾಗಿಸುತ್ತವೆ.

ಏರ್‌ಬಸ್ ಸಂಸ್ಥೆಯು ತಯಾರಿಸುವ A380 ಎನ್ನುವ ವಿಮಾನವು ವಿಶ್ವದ ಅತಿ ದೊಡ್ಡ ಪ್ರಯಾಣಿಕ ವಿಮಾನವಾಗಿದ್ದು, ಪೂರ್ಣ-ಉದ್ದದ ಡಬಲ್ ಡೆಕ್ ಜೆಟ್ ವಿಮಾನವಾಗಿದೆ. ಈ ಮಾದರಿಯ ಮೊದಲ ವಿಮಾನವು 27 ಏಪ್ರಿಲ್ 2005 ರಂದು ಹಾರಾಟ ನಡೆಸಿದರೂ, ವಿವಿಧ ರೀತಿಯ ನ್ಯೂನತೆಗಳಿಂದಾಗಿ ಆರಂಭಿಕ ಉತ್ಪಾದನೆಯು ಎರಡು ವರ್ಷಗಳಷ್ಟು ವಿಳಂಬವಾಗಿ 15 ಅಕ್ಟೋಬರ್ 2007ರಂದು ಮೊದಲ ವಿಮಾನವನ್ನು ಸಿಂಗಾಪುರ್ ಏರ್‌ಲೈನ್ಸ್‌ಗೆ ಮಾರಾಟಮಾಡಲಾಯಿತು. ನಂತರ 2012 ಮತ್ತು 2014ವೇಳೆಗೆ ವರ್ಷಕ್ಕೆ ಸುಮಾರು 30 ವಿಮಾನಗಳನ್ನು ತಯಾರಿಸುವ ಮಟ್ಟಕ್ಕೆ ತಲುಪಿತು. ಎಮಿರೇಟ್ಸ್ ಸಂಸ್ಥೆಯು ಈ ಏರ್ ಬಸ್ A380ಕ್ಕೆ ಅತಿದೊಡ್ಡ ಗ್ರಾಹಕನಾಗಿ ಸುಮಾರು 119 A380ಗಳನ್ನು ಹೊಂದಿ ದೇಶ ವಿದೇಶಗಳ ನೂರಾರು ಕಡೆಗೆ ಸಂಚರಿಸುತ್ತಿದ್ದಾದರೂ, ಈ ವಿಮಾನ ಇದುವರೆವಿಗೂ ನಮ್ಮ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಬಂದಿರಲಿಲ್ಲ.

ವಿಶ್ವದ ಈ ಅತಿ ದೊಡ್ಡ ಮತ್ತು ಅತ್ಯಂತ ವಿಶಾಲವಾದ ಪ್ರಯಾಣಿಕ ವಿಮಾನವು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಅಕ್ಟೋಬರ್ 30 ರಂದು ಸ್ಥಳೀಯ ಸಮಯ ರಾತ್ರಿ 9.25 ಕ್ಕೆ ದುಬೈನಿಂದ ಹೊರಟು ಅಕ್ಟೋಬರ್ 31 ರಂದು ಬೆಳಿಗ್ಗೆ 2.30 ಕ್ಕೆ ಬೆಂಗಳೂರಿನಲ್ಲಿ ಇಳಿಯುತ್ತದೆ ಎಂದು ಎಮಿರೇಟ್ಸ್ ವಿಮಾನ ಸಂಸ್ಥೆ ತಿಳಿಸಿತ್ತು. ಆದರೆ, ತನ್ನೀ ನಿರ್ಧಾರವನ್ನು ಬದಲಿಸಿದ್ದು. ಈ ಮುಂಚೆ ನಿಗಧಿಪಡಿಸಿದ್ದ ಎರಡು ವಾರಗಳ ಮುಂಚೆಯೇ, ಎಮಿರೇಟ್ಸ್ ಏರ್‌ಲೈನ್ಸ್‌ನ ವಿಮಾನ ಸಂಖ್ಯೆಯ ಇಕೆ562 ವಿಮಾನವು ದುಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಅಕ್ಟೋಬರ್ 14 ಶುಕ್ರವಾರದಂದು ಅಲ್ಲಿನ ಸ್ಥಳೀಯ ಸಮಯ ಬೆಳಿಗ್ಗೆ 10 ಗಂಟೆಗೆ ಟೇಕ್ ಆಫ್ ಆಗಿ ಬೆಂಗಳೂರಿನ ಮಧ್ಯಾಹ್ನ 3.40 ಕ್ಕೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯಲಿದೆ ಎಂದು ತಿಳಿಸಿದ್ದಾರೆ. ಮತ್ತೆ ಅದೇ ವಿಮಾನ ಸಂಖ್ಯೆ ಇಕೆ563ರ ಹೆಸರಿನಲ್ಲಿ ಬೆಂಗಳೂರಿನಿಂದ ಸಂಜೆ 6.40 ಕ್ಕೆ ಹೊರಟು ದುಬೈನ ರಾತ್ರಿ 9 ಗಂಟೆಗೆ ತಲುಪುತ್ತದೆ.

ಎ380 ಹಾರಾಟ ನಡೆಸುವ ಭಾರತದ ನಾಲ್ಕು ವಿಮಾನ ನಿಲ್ದಾಣಗಳಲ್ಲಿ ಈಗಾಗಲೇ ದೆಹಲಿಯಲ್ಲಿ ಲುಫ್ತಾನ್ಸಾ ಹಾಗೂ ಸಿಂಗಾಪೂರ್ ಏರ್‍ಲೈನ್ಸ್ ವಿಮಾನಗಳು ಕಾರ್ಯ ನಿರ್ವಹಿಸುತ್ತಿದ್ದರೆ, .ಮುಂಬೈನಲ್ಲಿ ಸಿಂಗಾಪೂರ್ ಏರ್‌ಲೈನ್ಸ್ ಹಾಗೂ ಎಮಿರೇಟ್ಸ್ ಏರ್‍ಲೈನ್ಸ್‍ನ ಜಂಬೋ ಜೆಟ್ ವಿಮಾನಗಳು ಕಾರ್ಯ ನಿರ್ವಹಿಸುತ್ತಿದ್ದು, ಬೆಂಗಳೂರು ಜಂಬೋ ಜೆಟ್ ಹಾರುವ ಮೂರನೇ ಭಾರತೀಯ ನಗರವಾಗಿದೆ. ನಂತರದ ದಿನಗಳಲ್ಲಿ ಹೈದರಾಬಾದಿಗೂ ಈ ವಿಮಾನಗಳ ಹಾರಟವನ್ನು ವಿಸ್ತರಿಸಲು ಯೋಜಿಸಲಾಗಿದೆ. ಈ ಐತಿಹಾಸಿಕ ಹಾಗೂ ಮೊದಲ ಹಾರಾಟಕ್ಕಾಗಿ ಬೆಂಗಳೂರು ವಿಮಾನ ನಿಲ್ದಾಣದ ಅಧಿಕಾರಿಗಳು, ಇಂಜಿನಿಯರ್‌ಗಳು ಮತ್ತು ಕಾರ್ಯಾಚರಣೆ ತಂಡವು ಮೂಲಸೌಕರ್ಯ ಮತ್ತು ಪ್ರಕ್ರಿಯೆಗಳನ್ನು ಈಗಾಗಲೇ ಪರೀಕ್ಷಿಸಿ ಎಲ್ಲವನ್ನೂ ನಿಗಧಿಪಡಿಸಿದಂತೆ ಸಿದ್ಧಪಡಿಸಿ ಬಹಳ ಕಾತುರತೆಯೊಂದಿಗೆ ಸಜ್ಜಾಗಿದ್ದಾರೆ.

ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಬಿಎಲ್‍ಆರ್) ಮತ್ತು ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಡಿಎಕ್ಸ್‌ಬಿ) ಮಧ್ಯೆ 1675 ಮೈಲಿ (2,695 ಕಿಲೋಮೀಟರ್ ಅಥವಾ 1455 ನಾಟಿಕಲ್ ಮೈಲಿ) ಅಂತರವಿದ್ದರೆ, ಎ380 ವಿಮಾನವು 8,200 ನಾಟಿಕಲ್ ಮೈಲ್ (15,200 ಕಿಲೋಮೀಟರ್) ವ್ಯಾಪ್ತಿಯಷ್ಟು ದೂರದ ಹಾರಾಟದ ಸಾಮರ್ಥ್ಯವನ್ನು ಹೊಂದಿದ್ದು, ಈ ವಿಮಾನ ತಡೆರಹಿತ ಅತ್ಯಂತ ದೂರ ಪ್ರಯಾಣದ ಸ್ಥಳಗಳಿಗೆ ಪ್ರಯಾಣಿಕರನ್ನು ಕರೆದೊಯ್ಯಲು ಸಮರ್ಥವಾಗಿದೆ. ವಿಮಾನದ ಕ್ರೂಸ್ ವೇಗ 0.85 ಮ್ಯಾಕ್ ಆಗಿದ್ದು, ಗರಿಷ್ಠ ವೇಗ ಗಂಟೆಗೆ 634 ಮೈಲಿಗಳಾಗಿದೆ. ಈ ಅಪಾರ ವೇಗವನ್ನು ಹೊಂದಿರುವ ಎ380 ಜಗತ್ತಿನ ಅಗ್ರ ಐದು ಅತಿವೇಗದ ವಿಮಾನಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಈ ಬೃಹತ್ ಡಬಲ್ ಡೆಕ್ಕರ್ ವಿಮಾನದಲ್ಲಿ ಗರಿಷ್ಠ 853 ಪ್ರಯಾಣಿಕರನ್ನು ಕರೆದೊಯ್ಯಲು ಅನುಮತಿ ಇದ್ದರೂ ಸದ್ಯಕ್ಕೆ 525 ಪ್ರಯಾಣಿಕರಿಗಷ್ಟೇ ಆಸನ ವ್ಯವಸ್ಥೆ ಮಾಡಲಾಗಿದೆ. ಈ ವಿಮಾನದಲ್ಲಿ ಮೂರು ವಿಧದ ಆಸನಗಳ ವ್ಯವಸ್ಥೆಯನ್ನು ರೂಪಿಸಲಾಗಿದ್ದು, ಮೊದಲೆನೆಯದು ಪ್ರೀಮಿಯಂ ಕ್ಲಾಸ್, ಎರಡನೆಯದು, ಬ್ಯುಸಿನೆಸ್ ಕ್ಲಾಸ್ ಮತ್ತು ಮೂರನೆಯದಾಗಿ ಎಕನಾಮಿ ಕ್ಲಾಸ್ ಆಸನಗಳ ವ್ಯವಸ್ಥೆಯನ್ನು ಹೊಂದಿದೆ. ಪ್ರೀಮಿಯಂ ಕ್ಲಾಸ್ ಗಳು ಖಾಸಗಿ ಸೂಟ್‌ಗಳು ಮತ್ತು ಶವರ್ ಸ್ಪಾಗಳನ್ನು ಹೊಂದಿರುವುವ ಐಷಾರಾಮಿ ವಿಮಾನವಾಗಿದೆ.

ಈ ಎ380 ವಿಮಾನವು ಕ್ವಾಡ್ಜೆಟ್ ಅನ್ನು ಎಂಜಿನ್ ಅಲೈಯನ್ಸ್ GP7200 ಅಥವಾ ರೋಲ್ಸ್-ರಾಯ್ಸ್ ಟ್ರೆಂಟ್ 900 ಟರ್ಬೋಫ್ಯಾನ್‌ಗಳು 8,000 nmi (14,800 km) ವ್ಯಾಪ್ತಿಯನ್ನು ಒದಗಿಸುತ್ತವೆ. ಡಿಸೆಂಬರ್ 2021 ರ ಹೊತ್ತಿಗೆ, ಜಾಗತಿಕ A380 ಫ್ಲೀಟ್ 800,000 ಕ್ಕೂ ಹೆಚ್ಚು ವಿಮಾನಗಳನ್ನು 7.3 ಮಿಲಿಯನ್ ಬ್ಲಾಕ್ ಗಂಟೆಗಳಲ್ಲಿ ಯಾವುದೇ ಸಾವುನೋವುಗಳು ಮತ್ತು ಯಾವುದೇ ನಷ್ಟವಿಲ್ಲದೆ ಪೂರ್ಣಗೊಳಿಸಿದೆ. ಜೂನ್ 2022 ರ ಹೊತ್ತಿಗೆ, ವಿಶ್ವಾದ್ಯಂತ 16 ವಿಮಾನ ಸ್ಥಂಸ್ಥೆಗಳಲ್ಲಿ ಸುಮಾರು 239 ಸಂಖ್ಯೆಯ ಎ380 ವಿಮಾನಗಳು ಸೇವೆಯಲ್ಲಿವೆ.

79.8 ಮೀಟರ್ ಉದ್ದದ ಎ380 ವಿಮಾನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ (ಕೆಐಎ) ರನ್‌ವೇಗೆ ಎ380 ವಿಮಾನವನ್ನು ಇಳಿಸಲು ಕೋಡ್ ಎಫ್‌ಗೆ ಅನುಗುಣವಾಗಿ ಹಲವಾರು ವರ್ಷಗಳ ಪ್ರಯತ್ನದ ನಂತರ ಇದು ಸಾಧ್ಯವಾಗಲಿದೆ. ಕೋಡ್ ಎಫ್ ವಿಮಾನಗಳು 65 ಮೀಟರ್‌ಗಿಂತ ಹೆಚ್ಚು ಉದ್ದವಿರುತ್ತದೆ. ಸದ್ಯಕ್ಕೆ ಕೋಡ್ ಎಫ್ ಅಡಿಯಲ್ಲಿ ಬೋಯಿಂಗ್ 747 ಏಕೈಕ ಪ್ರಯಾಣಿಕ ವಿಮಾನವಾಗಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ದಕ್ಷಿಣ ಭಾರತದಲ್ಲೇ ಆಪರೇಷನಲ್ ಪ್ಯಾರಲಲ್ ರನ್‌ವೇಸ್ (ಕಾರ್ಯಾಚರಿಸಬಲ್ಲ ಸಮಾನಾಂತರ ರನ್‍ವೇಗಳು) ಹೊಂದಿರುವ ಪ್ರಥಮ ವಿಮಾನ ನಿಲ್ದಾಣವಾಗಿದೆ. ಈ ಎರಡೂ ರನ್‍ವೇಗಳು ಬೆಂಗಳೂರು ವಿಮಾನ ನಿಲ್ದಾಣವನ್ನು ಭಾರತದ ವೈಮಾನಿಕ ಹೆಬ್ಬಾಗಿಲಾಗಿಸಬೇಕೆಂಬ ಬಿಐಎಎಲ್ ಕನಸಿಗೆ ಅತ್ಯಂತ ಪೂರಕವಾಗಿದ್ದು ವಿಶ್ವದ ಅತ್ಯಂತ ದೊಡ್ಡ ವಿಮಾನವಾದ ಎ380 ಮೊದಲ ಬಾರಿಗೆ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬರುವ ಮೂಲಕ ಬಿಐಎಎಲ್ ಕನಸು ನನಸಾಗುತ್ತಿರುವುದು ಸಮಸ್ತ ಕನ್ನಡಿಗರೂ ಹೆಮ್ಮೆ ಪಡುವಂತಹ ಸಂಗತಿಯಾಗಿದೆ ಅಲ್ವೇ?.

ಏನಂತೀರೀ?
ನಿಮ್ಮವನೇ ಉಮಾಸುತ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s