ಗುರು ಶಿಷ್ಯರು ಸಿನಿಮಾ ವಿಮರ್ಶೆ

ಮುತ್ತು ರತ್ನ ವಜ್ವ ವೈಢೂರ್ಯಗಳನ್ನು ರಸ್ತೆ ರಸ್ತೆಗಳಲ್ಲಿ ಬಳ್ಳ ಬಳ್ಳಗಳಲ್ಲಿ ಮಾರಾಟ ಮಾಡುತ್ತಿದ್ದಂತಹ ಸುವರ್ಣ ಭಾರತವನ್ನು ಕೇವಲ 200-300 ವರ್ಷಗಳಲ್ಲೇ ಬ್ರಿಟೀಷರು ಕೊಳ್ಳೆ ಹೊಡೆದು ಆರ್ಥಿಕವಾಗಿ ದೀವಾಳಿತನಕ್ಕೆ ತಳ್ಳಿಹೋದದ್ದು ಈಗ ಇತಿಹಾಸ. ಅವರು ಕೇವಲ ಸಂಪತ್ತನ್ನು ಕೊಳ್ಳೆ ಹೊಡೆದುಕೊಂಡು ಹೋಗಿದ್ದರೆ ಮತ್ತೆ ಮರಳಿ ಸಂಪಾದಿಸಬಹುದಾಗಿತ್ತು. ಆದರೆ ಅವರು ಈ ದೇಶದ ಶಿಕ್ಷಣ, ಕಲೆ, ಸಂಸ್ಕಾರ, ಸಂಪ್ರದಾಯ ಆಚಾರ ವಿಚಾರ, ಭಾಷೆಗಳು, ಉಡುಗೆ, ತೊಡುಗೆ, ಕ್ರೀಡೆಗಳ ಹೀಗೆ ಎಲ್ಲದ್ದರ ಮೇಲೂ ಅವ್ಯಾಹತವಾಗಿ ಧಾಳಿ ನಡೆಸಿದ ಪರಿಣಾಮ ಇಂದು ನಮ್ಮ ದೇಶ ಬೌದ್ಧಿಕವಾಗಿ ದೀವಾಳಿತನಕ್ಕೆ ಹೋಗಿರುವುದನ್ನು ಮತ್ತೆ ಸರಿದಾರಿಗೆ ತರಲು ಅದೆಷ್ಟು ಶತಮಾನಗಳು ಬೇಕಾಗುವುದೋ ಯಾರಿಗೆ ಗೊತ್ತು? ಬ್ರಿಟೀಷರು ಕಲಿಸಿ, ಉಳಿಸಿ ಹೋದ ಆಟಗಳಾದ ಕ್ರಿಕೆಟ್, ಫುಟ್ಬಾಲ್, ಬಾಸ್ಕೆಟ್ ಬಾಲ್, ಗಾಲ್ಫ್ ಮುಂತಾದವುಗಳ ಮುಂದೆ ನಮ್ಮ ಅಪ್ಪಟ ದೇಸೀ ಕ್ರೀಡೆಗಳಾದ, ಕುಸ್ತಿ, ಕಬ್ಬಡ್ಡಿ, ಕೊಕ್ಕೋ ಅಟ್ಯಾಪಾಟ್ಯಾ, ಹಾಕಿ ಮುಂತಾದ ಆಟಗಳು ನಲುಗಿ ಹೋಗಿರುವುದು ನಿಜಕ್ಕೂ ದೌರ್ಭಾಗ್ಯದ ಸಂಗತಿ. ಅಂತಹ ದೇಸೀ ಆಟವಾದ ಕೊಕ್ಕೋ ಕುರಿತಾದ ಭಾವನಾತ್ಮಕವಾದ ಅಂಶವನ್ನೇ ಅತ್ಯಂತ ಮನೋಜ್ಞವಾಗಿ ಗುರು ಶಿಷ್ಯರು ಸಿನಿಮಾದಲ್ಲಿ ತೋರಿಸಿದ್ದಾರೆ.

ಕನ್ನಡದಲ್ಲಿ ಕ್ರೀಡೆಗೆ ಸಂಬದ್ಧ ಪಟ್ಟ ಸಿನಿಮಾಗಳು ಬಂದಿರುವುದು ಅತ್ಯಂತ ಕಡಿಮೆಯೇ. ತಾಯಿಗೆ ತಕ್ಕ ಮಗ ಸಿನಿಮಾದಲ್ಲಿ ಬಾಕ್ಸಿಂಗ್, ಕರ್ನಾ ಸಿನಿಮಾದಲ್ಲಿ ಫುಟ್ಬಾಲ್, ಅಶ್ವಮೇಧ, ಸಿಕ್ಸರ್, ಬೆಂಗಳೂರು 560023 ಮುಂತಾದ ಸಿನಿಮಾಗಳಲ್ಲಿ ಕ್ರಿಕೆಟ್ ಆಟವಿದ್ದರೆ, 2009ರಲ್ಲಿ ಕಬಡ್ಡಿ ಎಂಬ ಸಿನಿಮಾವನ್ನು ನರೇಂದ್ರ ಬಾಬು ನಿರ್ದೇಶಿಸಿದ್ದರು. ಕೆಲ ವರ್ಷಗಳ ಹಿಂದೆ ಕುಸ್ತಿ ಪೈಲ್ವಾನ್ ಆಗಿ ಸುದೀಪ್ ಕೂಡ ನಟಿಸಿ ಗಮನ ಸೆಳೆದಿದ್ದರು. ಈಗ 2022ರಲ್ಲಿ ನಿರ್ದೇಶಕ ಜಡೇಶ್ ಕಲ್ಪನೆಯನ್ನು ನಿರ್ಮಾಕಕರಾದ ತರುಣ್ ಸುಧೀರ್ ಮತ್ತು ಶರಣ್ ಕ್ರಿಕೆಟ್‌, ಫುಟ್‌ಬಾಲ್‌ ಆಟಗಳ ಮುಂದೆ ಸೊರಗಿ ಹೋಗಿ ಭಾಗಶಃ ಕಣ್ಮರೆಯೇ ಆಗಿ ಹೋಗುತ್ತಿರುವ ಅಪ್ಪಟ ದೇಸೀ ಆಟವಾದ ಕೊಕ್ಕೊ ಆಟವನ್ನು ಮುಂದಿಟ್ಟುಕೊಂಡು, ಮುಗ್ಧ ಹಳ್ಳಿಯ ಜನರು ಜಮೀನ್ದಾರನ ಪಾಳೇಗಾರಿಕೆಯನ್ನು ಹೇಗೆ ಮುರಿಯುತ್ತಾರೆ ಎಂಬುದರ ಕುರಿತಾದ ಸಿನಿಮಾವನ್ನು ಕನ್ನಡಿಗರಿಗೆ ಉಣಬಡಿಸಿದ್ದಾರೆ.

ಈ ಸಿನಿಮಾ 90ರ ದಶಕದ ಕಾಲಘಟ್ಟದ ಸಿನಿಮಾ ಆಗಿದ್ದು  ಅರಸೀಪುರ ಮತ್ತು ಬೆಟ್ಟದ ಪುರ ಎಂಬ ಎರಡು ಗ್ರಾಮಗಳ ನಡುವಿನ ಸಂಘರ್ಷವೇ ಈ ಸಿನಿಮಾ ಮೂಲಕಥೆಯಾಗಿದೆ. ಬೆಟ್ಟದಪುರ ಎಂಬ ಊರು ಅರಸೀಪುರದ ಊರ ಮುಖಂಡನ (ಅಪೂರ್ವ ಕಾಸರವಳ್ಳಿ) ತಾತಾನ ಆಸ್ತಿಯಾಗಿದ್ದು, ಉಳುವವನೇ ಹೊಲದೊಡೆಯ ಎಂಬ ಕಾನೂನು ಬಂದ ಬಳಿಕ ಆ ಇಡೀ ಊರಿನ ಜಮೀನು ಬೆಟ್ಟದಪುರದ ಜನರ ಪಾಲಾಗಿ , ಆ ಊರಿನಲ್ಲಿ ಮ್ಯಾಂಗನೀಸ್ ಅದಿರು ಹೇರಳವಾಗಿರುವುದನ್ನು ಕಂಡುಕೊಂಡ ಆತ, ಹೇಗಾದರು ಮಾಡಿ ಆ ಊರನ್ನು ತನ್ನ ಕೈವಶಮಾಡಿಕೊಂಡು ಗಣಿಗಾರಿಕೆ ನಡೆಸುವುದಕ್ಕಾಗಿ ಊರಿನ ಜನರನ್ನು ಹೆದರಿಸಿ ಬೆದರಿಸಿ ಓಡಿಸಲು ಮುಂದಾಗಿರುತ್ತಾನೆ. ಬೆಟ್ಟದ ಪುರದ ಸ್ವಾತಂತ್ರ್ಯ ಹೋರಾಟಗಾರರಾದ ಸುರೇಶ್‌ ಹೆಬ್ಳೀಕರ್‌ ಅವರ ಮುಂದಾಳತ್ವದಲ್ಲಿ ಆ ಊರಿನ ಜನ ಸ್ಥಳೀಯ ನ್ಯಾಯಾಲಯದಲ್ಲಿ ಇದರ ಕುರಿತು ಹೋರಾಟ ಮಾಡುತ್ತಿರುತ್ತಾರೆ.

ಇವೆಲ್ಲದರ ನಡುವೆ, ದ್ರೋಣಾಚಾರ್ಯ ಪ್ರಶಸ್ತಿ ವಿಜೇತ ಕ್ರೀಡಾ ಶಿಕ್ಷಕರಾದ ದತ್ತಣ್ಣ ಮತ್ತು ಅವರ ಉಡಾಳ ಶಿಷ್ಯನಾಗಿ ಚಿತ್ರದ ನಾಯಕ ಶರಣ್ ಮೈಸೂರಿನ ಸಣ್ಣದೊಂದು ಕೊಠಡಿಯಲ್ಲಿ ಜೀವಿಸುತ್ತಿರುತ್ತಾರೆ. ಒಂದಾನೊಂದು ಕಾಲದಲ್ಲಿ ಕೊಕ್ಕೋ ನ್ಯಾಷಿನಲ್ ಛಾಂಪಿಯನ್ ಆಗಿದ್ದ ನಾಯಕನಿಗೆ ತನ್ನ ಕೊಕ್ಕೋ ಆಟದ ಅರ್ಹತೆಯ ಮೇರೆಗೆ ಎಲ್ಲೂ ಯಾರು ಕೆಲಸವನ್ನು ಕೊಡಲು ಮುಂದಾಗದೇ ಹೋದಾಗ, ಭ್ರಮನಿರಸನಗೊಂಡು ಉಂಡಾಡಿ ಗುಂಡನಾಗಿ ಬೀದಿ ಬೀದಿ ಅಲೆಯುತ್ತಿದ್ದಾಗ, ತನ್ನಿಂದ ಆತನ ಭವಿಷ್ಯ ಹಾಳಾಯಿತೆಂದು ಭಾವಿಸಿದ ಆತನ ಗುರು ದತ್ತಣ್ಣ, ಆತನ ಜೀವನಕ್ಕೆ ದಾರಿ ಮಾಡಿಕೊಡಿಸುವ ಸಲುವಾಗಿ ಆತನಿಗೊಂದು ಕೆಲಸ ಕೊಡಿಸಲು ಬಹಳ ಕಷ್ಟ ಪಡುತ್ತಿರುತ್ತಾರೆ.

gs3ಅಂತೂ ಇಂತೂ ಹರ ಸಾಹಸ ಮಾಡಿ ಸ್ವಾತಂತ್ರ ಹೋರಾಟಗಾರರು ಸರ್ಕಾರಿ ಅನುದಾನದಲ್ಲಿ ನಡೆಸುತ್ತಿದ್ದ ಬೆಟ್ಟದ ಪುರದ ಶಾಲೆಯಲ್ಲಿ ನಾಯಕನಿಹೊಂದು ದೈಹಿಕ ಶಿಕ್ಷಕನ ಕೆಲಸ ಕೊಡಿಸಿ, ಆತನ ಭವಿಷ್ಯವನ್ನು ರೂಪಿಸಿಕೊಳ್ಳಲು ಅನುವು ಮಾಡಿಕೊಡುತ್ತಾರೆ. ಕೆಲಸ ಕಾರ್ಯವಿಲ್ಲದೇ ಅಂಡೆಲೆಯುತ್ತಿದ್ದ ನಾಯಕನೂ ಸಹಾ ಕಾಟಾಚಾರಕ್ಕೆ ಕೆಲಸ ಮಾಡಿಕೊಂಡಿದ್ದು, ಊರಿನ ಜನರ ಮೆಚ್ಚುಗೆ ಗಳಿಸುವ ಸಲುವಾಗಿ ತನ್ನ ಶಿಷ್ಯರನ್ನು ಬೇರೆ ಬೇರೆ ಊರಿಗೆ ಕರೆದುಕೊಂಡು ಹೋಗಿ ಮೋಜು ಮಸ್ತುಮಾಡಿ ಹಿಂದಿರುಗುವಾಗ ಅಂಗಡಿಯಲ್ಲಿ ಪ್ರಶಸ್ತಿ ಫಲಕಗಳನ್ನು ಕೊಂಡು ತಂದು ಅದನ್ನು ಊರಿನ ಮಕ್ಕಳೇ ಗೆದ್ದಿದ್ದಾರೆ ಎಂದೂ ತೋರಿಸುವುದಲ್ಲೇ ಮೊದಲಾರ್ಧ ಮುಗಿದು ಹೋಗಿರುತ್ತದೆ. ಈ ಮಧ್ಯೆ ಊರಿನಲ್ಲಿ ಹಾಲು ಮಾರುತ್ತಿದ್ದ ನಾಯಕಿಯನ್ನೂ ಆಕೆಗೆ ನಾಯಕನ ಮೇಲೆ ಪ್ರೀತಿಯಾಗುವುದನ್ನು ಮತ್ತೊಂದು ಜೋಡಿಯ ಮುಖಾಂತರ ತೋರಿಸಿಯಾಗಿರುತ್ತದೆ.

gs1ಅಲ್ಲಿಯವರೆಗೂ 2ನೇ ಗೇರ್ ನಲ್ಲಿ ನಿಧಾನವಾಗಿ ಓಡುತ್ತಿದ್ದ ಸಿನಿಮಾ ದ್ವಿತಿಯಾರ್ಧದಲ್ಲಿ ಏಕಾಏಕಿ 4 ಮತ್ತು 5ನೇ ಗೇರಿಗೆ ಬದಲಿಸಿಕೊಂಡು ವೇಗವನ್ನು ಪಡೆದುಕೊಂಡಾಗಲೇ ಪ್ರೇಕ್ಷಕರನ್ನು ಆಸಕ್ತಿಯಿಂದ ಸೂಜಿಗಲ್ಲಿನಂತೆ ಸೆಳೆಯುತ್ತಾ ಹೋಗುತ್ತದೆ. ಊರಿನ ಜಮೀನಿನ ಪ್ರಕರಣ ನ್ಯಾಯಾಲಯದಲ್ಲಿ ಬಗೆಹರಿಯದೇ ಹೋದಾಗ, ಅರಸೀಪುರದಲ್ಲಿ ನಡೆಯುವ ವಾರ್ಷಿಕ ಜಾತ್ರೆಯಲ್ಲಿ ನಡೆಯುವ ಕೊಕ್ಕೋ ಪಂದ್ಯದಲ್ಲಿ ಬೆಟ್ಟದಪುರದವರು ಗೆದ್ದಲ್ಲಿ ಊರಿನ ಅಷ್ಟೂ ಜನರಿಗೆ ತಲಾ 25000/- ಕೊಡುವುದರ ಜೊತೆಗೆ ಊರನ್ನೇ ಬಿಟ್ಟುಕೊಡುವುದಾಗಿ ಆ ಜಮೀನ್ದಾರ ಹಾಕಿದ ಸವಾಲನ್ನು ಸ್ವಾತಂತ್ರ ಹೊರಾಟಗಾರರು ಬೆಟ್ಟದಪುರ ಶಾಲೆಯ ದೈಹಿಕ ಶಿಕ್ಷಕ ಮನೋಹರ್ ಮತ್ತವನ ತಂಡವನ್ನು ನೆಚ್ಚಿ ಒಪ್ಪಿಕೊಂಡಾಗಲೇ ನಿಜವಾದ ಸಿನಿಮಾ ಆರಂಭವಾಗುತ್ತದೆ. ಈ ದೃಶ್ಯವನ್ನು ನೋಡುತ್ತಿದ್ದಾಗ ಹಿಂದಿಯ ಲಗಾನ್ ಸಿನಿಮಾವನ್ನು ನೆನಪಿಸಿದ್ದಂತೂ ಸುಳ್ಳಲ್ಲ. ಆಟವನ್ನೇ ಆಡದೇ ಕೇವಲ ಮೋಜು ಮಸ್ತಿ ಮಾಡುತ್ತಾ ಕೊಂಡು ತಂದ ಟ್ರೋಫಿ ತೋರಿಸುತ್ತಾ ಮುಗ್ಧ ಊರಿನ ಜನರನ್ನು ಬೇಸ್ತು ಗೊಳಿಸಿದ್ದ ಗುರು ಶಿಷ್ಯಂದಿರು, ತಮ್ಮ ಆಟದ ಮೂಲಕ ಊರಿನ ಮಾನ ಹೇಗೆ ಕಾಪಾಡುತ್ತಾರೆ? ಎನ್ನುವುದನ್ನು ಇಲ್ಲಿ ವರ್ಣಿಸುವುದಕ್ಕಿಂತಲು ಸಿನಿಮಾ ನೋಡಿಯೇ ತಿಳಿದಲ್ಲಿ ಉತ್ತಮ.

gs5ಸಾಮಾನ್ಯವಾಗಿ ಶರಣ್‌ ಅವರ ಚಿತ್ರ ಎಂದರೆ ಲಾಜಿಕ್ ಎಲ್ಲವನ್ನೂ ಪಕ್ಕಕ್ಕಿಟ್ಟು ಕೇವಲ ಮನೋರಂಜನಾತ್ಮಕವಾಗಿ ಪ್ರೇಕ್ಷಕರನ್ನು ರಂಜಿಸುತ್ತದೆ. ಆದರೆ ಈ ಚಿತ್ರದ ಸಹ ನಿರ್ಮಾಪಕರೂ ಆಗಿರುವ ಶರಣ್ ತಮ್ಮ ಉಳಿದೆಲ್ಲಾ ಸಿನಿಮಾಗಳಿಗಿಂತ ವಿಭಿನ್ನವಾಗಿ ದ್ವಿತೀಯಾರ್ಧದಲ್ಲಿ ಆತ್ಯಂತ ಪ್ರಬುದ್ಧವಾಗಿ ಮತ್ತು ಗಾಂಭೀರ್ಯದಿಂದ ನಟಿಸಿದ್ದಾರೆ. ಹಾಗೆಂದ ಮಾತ್ರಕ್ಕೆ ಸಿನಿಮಾದಲ್ಲಿ ಹಾಸ್ಯಕ್ಕೇನೂ ಕೊರತೆ ಇಲ್ಲ. ಸಿನಿಮಾದ ಓಘದ ಅಗತ್ಯಕ್ಕೆ ತಕ್ಕಂತೆ ಹಳ್ಳಿ, ಶಾಲೆ, ಅಲ್ಲಿನ ಮೇಷ್ಟ್ರು, ಮಕ್ಕಳ ಮೂಲಕ ತಿಳಿ ಹಾಸ್ಯವನ್ನು ಬೆರೆಸಿ, ಊರ ರಾಜಕೀಯದ ಸಮಸ್ಯೆಯನ್ನು ಅಪ್ಪಟ ದೇಸೀ ಆಟದ ಮೂಲಕ ಹೇಗೆ ಬಗೆ ಹರಿಸಬಹುದು ಎಂಬುದನ್ನು ಅತ್ಯುತ್ತಮವಾಗಿ ತೋರಿಸಿದ್ದಾರೆ. ವಿದ್ಯೆ ಮತ್ತು ಪ್ರತಿಭೆಗಳು ಕೇವಲ ಶಾಲೆಯಿಂದ ಕಲಿತಾಗ ಮಾತ್ರ ಬರುವುದಿಲ್ಲ ಊರಿನ ಹಂದಿ ಹಿಡಿಯುವ ಹುಡುಗ, ಮೀನು ಹಿಡಿಯುವ ಬೆಸ್ತರ ಹುಡುಗನಲ್ಲಿಯೂ ಇರುತ್ತದೆ. ಅಂತಹ ಪ್ರತಿಭೆಗಳನ್ನು ಎತ್ತಿ ಹಿಡಿದು ಪ್ರೋತ್ಸಾಹಿಸಿದರೆ, ಅವರು ಅದ್ಭುತವನ್ನು ಮಾಡಬಲ್ಲರು ಎಂಬುದನ್ನು ಅತ್ಯಂತ ಸುಂದರವಾಗಿ ತೋರಿಸಲಾಗಿದೆ.

gs2ಈ ಸಿನಿಮಾದ ಮತ್ತೊಂದು ವಿಶೇಷವಂದರೆ ಗುರುನೊಂದಿಗೆ ಶಿಷ್ಯರಾಗಿ ನಟಿಸಿರುವ ಬಹುತೇಕರೆಲ್ಲರೂ ಕಲಾವಿದರ ಮಕ್ಕಳು. ಶರಣ್ ಪುತ್ರ ಹೃದಯ್, ನೆನಪಿರಲಿ ಪ್ರೇಮ್ ಪುತ್ರ ಏಕಾಂತ್, ಬುಲೆಟ್ ಪ್ರಕಾಶ್ ಮಗ ರಕ್ಷಕ್, ರವಿಶಂಕರ್ ಗೌಡ ಪುತ್ರ ಸೂರ್ಯ, ಶಾಸಕ ರಾಜು ಗೌಡ ಮಗ ಮಣಿಕಂಠ ಮುಂತಾದವರು ಉಳಿದವರೊಂದಿಗೆ ಅದ್ಭುತವಾದ ಕೊಕ್ಕೋ ಆಟಗಾರರಾಗಿ ಕಾಣಿಸಿಕೊಂಡಿದ್ದಾರೆ. ಈ ಪರಿಯಾಗಿ ಪರಿಪೂರ್ಣ ಆಟಗಾರರನ್ನಾಗಿಸುವುದರ ಹಿಂದಿರುವ ತಯಾರಿ ಮತ್ತು ಪರಿಶ್ರಮ ಚಿತ್ರದ ಅಂತ್ಯದ ವೇಳೆಯಲ್ಲಿ ತೆರೆಯ ಮೇಲೆ ಅತ್ಯುತ್ತಮವಾಗಿ ಮೂಡಿ ಬಂದಿದೆ. ಪಂದ್ಯಾವಳಿಯ ಆಯೋಜಕರು, ತೀರ್ಪುಗಾರರು, ಪ್ರೇಕ್ಷಕರು ಎಲ್ಲರೂ ತಮ್ಮ ವಿರುದ್ಧವಿದ್ದರೂ, ದೈಹಿಕವಾಗಿ ಬಲ ಪ್ರಯೋಗದಿಂದ ಆ ಆಟಗಾರರ ಸ್ಥೈರ್ಯವನ್ನು ಕುಗ್ಗಿಸಲು ಎಷ್ಟೇ ಪ್ರಯತ್ನ ಪಟ್ಟರೂ, ಅಂತಿಮವಾಗಿ ನಂಬಿದ ದೈವ, ಊರಿನ ಜನತೆ ಮತ್ತು ಶಕ್ತಿಗಿಂತಲೂ ಯುಕ್ತಿಯಿಂದ ಹೇಗೆ ಫಲಿತಾಂಶವನ್ನು ಬದಲಿಸಬಹುದು ಎಂಬುದನ್ನು ಸಿನಿಮಾ ನೋಡಿಯೇ ಅನಂದಿಸಬೇಕು.

gs4ಎಂದಿನಂತೆ ದತ್ತಣ್ಣ ಮತ್ತು ಸುರೇಶ್ ಹೆಬ್ಳಿಕರ್ ತಮ್ಮ ಸುದೀರ್ಘವಾದ ಅನುಭವದ ಮೂಲಕ ತೂಕದ ಪಾತ್ರದಲ್ಲಿ ಪ್ರಬುದ್ಧವಾಗಿ ನಟಿಸಿದ್ದರೆ, ಫ್ರೆಂಚ್ ಬಿರ್ಯಾನಿ ಮೂಲಕ ಪ್ರವರ್ಧಮಾನಕ್ಕೆ ಬಂದ ಮಹಾಂತೇಶ್ ಹಿರೇಮಠ್‌ ನಾಯಕನ ಜೊತೆಗೆ ಇಡೀ ಚಿತ್ರದುದ್ದಕ್ಕೂ ಮುಗ್ಧನಾಗಿ ಕಾಣಿಸಿಕೊಂಡರೂ ಗಂಭಿರವಾಗಿ ಪ್ರೇಕ್ಷಕರನ್ನು ಮನರಂಜಿಸಲು ಸಫಲರಾಗಿದ್ದಾರೆ. ಇನ್ನು ಖಳನಾಗಿ ಕಾಣಿಸಿಕೊಂಡಿರುವ ಅಪೂರ್ವ ಕಾಸರವಳ್ಳಿ ಚಿತ್ರದ ಹೈಲೈಟ್ ಆದರೆ, ಸಿನಿಮಾದ ಅಗತ್ಯಕ್ಕೆ ತಕ್ಕಂತೆ ಮುದ್ದು ಮುದ್ದಾದ ನಾಯಕಿಯ ಪಾತ್ರದಲ್ಲಿ ನಿಶ್ವಿಕಾ ನಾಯ್ಡು ಅಭಿನಯವೂ ಪ್ರಬುದ್ಧವಾಗಿದೆ.

ಹಳ್ಳಿಯ ಸೊಗಡು, ಬೆಟ್ಟದಪುರ ಊರಿನ ಹೆಸರಿಗೆ ಅನ್ವಯದಂತೆ ಇರುವ ಬೆಟ್ಟಗುಡ್ಡಗಳನ್ನು ಅತ್ಯಂತ ಸಹಜವಾಗಿ ಛಾಯಾಗ್ರಾಹಕರಾದ ಆರೂರು ಸುಧಾಕರ್ ಶೆಟ್ಟಿಯವರು ಕಣ್ಣಿಗೆ ಕಾಣಿಸಿದ್ದರೆ, ಕಾಂತಾರದಂತೆ ಈ ಚಿತ್ರದಲ್ಲೂ ಹಳ್ಳಿಗ ಸೊಗಡಿಗೆ ಅನುಗುಣವಾದ ಮಧುರವಾದ ಹಾಡುಗಳು ಮತ್ತು ಹಿನ್ನೆಲೆ ಸಂಗೀತದ ಮೂಲಕ ಅಜನೀಶ್ ಲೋಕನಾಥ್ ಎಲ್ಲರ ಗಮನ ಸೆಳೆಯುತ್ತಾರೆ. ಮಕ್ಕಳು ಮರಿಯೊಂದಿಗೆ ಮುಜುಗರವಿಲ್ಲದೇ ಕೇಳುವಂತೆ ಸಂಭಾಷಣೆಯನ್ನು ಮಾಸ್ತಿಯವರು ಬರೆದಿದ್ದಾರೆ. ಸಿನಿಮಾದ ಕಡೆಯ 20 ರಿಂದ 25 ನಿಮಿಷಗಳ ಕೊಕ್ಕೋ ಪಂದ್ಯಾವಳಿಯ ದೃಶ್ಯಗಳಂತೂ ವರ್ಣಿಸಲಸಡಳವಾಗಿ, ಮಕ್ಕಳು ಅಲ್ಲಿ ಅಭಿನಯಿಸಿದ್ದಾರೆ ಎನ್ನುವುದಕ್ಕಿಂತಲೂ ಅವರೆಲ್ಲರೂ ನಿಜವಾದ ಕೊಕ್ಕೊ ಆಟಗಾರರಾಗಿಯೇ ನೈಜ ಪಂದ್ಯಾವಳಿಗಳನ್ನೇ ಆಡಿದ್ದಾರೆ ಎಂಬಷ್ಟು ಸಹಜವಾಗಿ ದೃಶ್ಯಗಳು ಮೂಡಿ ಬಂದಿವೆ. ಆದರೆ, ಈ ಕ್ರೀಡಾ ದೃಶ್ಯಗಳ ಕುತೂಹಲ ಹೆಚ್ಚಿಸಲು, ತಮ್ಮ ಕತ್ತರಿಯ ಮೂಲಕ ಅಲ್ಲಲ್ಲಿ ದಿಢೀರ್‌ ಎಂದು ಕತ್ತಲು ಮಾಡಿರುವ ಸಂಕಲನಕಾರರು, ವೀಕ್ಷಕರ ಓಘಕ್ಕೆ ಭಂಗ ತಂದರೇನೋ ಎಂದೆನಿಸುತ್ತದೆ.

ಅಂತಿಮವಾಗಿ ಸತ್ಯಕ್ಕೇ ಜಯ ಎಂಬುದನ್ನು ಮತ್ತೊಮ್ಮೆ ಎತ್ತಿ ಹಿಡಿದಿರುವ ಈ ಸಿನಿಮಾದ ಕಡೆಯಲ್ಲಿ ಅತ್ಯಂತ ದೈಹಿಕ ಪರಿಶ್ರಮದ ದೇಸೀ ಆಟವಾದ ಕೊಕ್ಕೋವಿನಲ್ಲಿ ಚಾಂಪಿಯನ್‌ ಆದವರಿಗೂ ಉಳಿದ ಕ್ರಿಕೆಟ್, ಫುಟ್ಬಾಲ್, ಹಾಕಿ ಆಟಗಾರರಿಗೆ ಸಿಗುವ ಮನ್ನಣೆ, ಉದ್ಯೋಗ, ಸೌಲಭ್ಯಗಳು ಸಿಗದೇ ಹೋದ ಕಾರಣ, ಕೊಕ್ಕೋ ಆಟಕ್ಕೆ ದಿನೇ ದಿನೇ ಜನ ಮನ್ನಣೆ ಕಡಿಮೆಯಾಗುತ್ತಿದೆ ಎಂಬುದನ್ನು ಕೊಕ್ಕೋ ಸಾಧಕರಿಂದಲೇ ಹೇಳಿಸಿರುವುದು ಮಾರ್ಮಿಕವಾಗಿದೆ.

ಒಟ್ಟಿನಲ್ಲಿ ಕಳೆದ ಮೂರು ವಾರದಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಾದ ಗುರು ಶಿಷ್ಯರು ಮತ್ತು ಕಾಂತಾರ ಚಿತ್ರಗಳ ಧ್ಯೇಯಗಳೂ ಒಂದಾಗಿದ್ದೂ ಕಾಂತಾರದಲ್ಲಿ ಭೂತದ ಕೋಲ ದೈವದ ಮೂಲಕ ಮತ್ತು ಗುರು ಶಿಷ್ಯರು ಸಿನಿಮಾದಲ್ಲಿ ಕೊಕ್ಕೋ ಆಟದ ಮೂಲಕ ದೇಸೀ ಸೊಗಡು ಮತ್ತು ಭೂಮಿಯನ್ನು ನುಂಗಿಹಾಕಲು ಹೊಂಚು ಹಾಕುವ ಖೂಳರಿಗೆ ಬುದ್ಧಿಕಲಿಸಿವುದನ್ನು ಸಾಧಿಸಿ ತೋರಿಸಿದ್ದಾರೆ. ಎರಡೂ ಸಿನಿಮಾಗಳಲ್ಲಿಯೂ ಕಡೆಯ 15-20 ನಿಮಿಷಗಳು ಅಕ್ಷಕರಶಃ ಪ್ರೇಕ್ಷಕರನ್ನು ಸೀಟಿನ ತುದಿಗೆ ತಂದು ಕೂರಿಸುವುದರಲ್ಲಿ ಆ ಇಬ್ಬರೂ ನಿರ್ದೇಶಕರೂ ಸಮರ್ಥರಾಗಿರುವ ಮೂಲಕ ಕನ್ನಡ ಸಿನಿಮಾಗಳ ಗುಣಮಟ್ಟವನ್ನು ವಿಶ್ವಮಟ್ಟಕ್ಕೇರಿಸಿರುವುದಲ್ಲದೇ, ಪೈರೆಸಿ ಮತ್ತು ಒಟಿಟಿಗಳ ಮೂಲಕ ಚಿತ್ರವನ್ನು ವೀಕ್ಷಿಸುತ್ತಿದ್ದವರಿಗೆ ಮತ್ತೆ ಚಿತ್ರ ಮಂದಿರಗಳತ್ತ ಕರೆತರುವುದರಲ್ಲಿ ಸಫಲವಾಗಿದ್ದಾರೆ ಎಂದರೂ ಅತಿಶಯೋಕ್ತಿಯೇನಲ್ಲ. ಹಾಗಾಗಿ ದಯವಿಟ್ಟು ಈ ಚಿತ್ರಗಳನ್ನು ಚಿತ್ರಮಂದಿರಲ್ಲೇ ನೋಡುವ ಮೂಲಕ ಕನ್ನಡದಲ್ಲಿ ಮತ್ತಷ್ಟು ಈ ರೀತಿಯ ಸದಭಿರುಚಿಯ ಚಿತ್ರಗಳು ಬರುವಂತೆ ಮಾಡುವುದು ಕನ್ನಡಿಗರಾದ ನಮ್ಮ ಕರ್ತವ್ಯವೇ ಆಗಿದೆ ಅಲ್ವೇ?

ಏನಂತೀರೀ?
ನಿಮ್ಮವನೇ ಉಮಾಸುತ

2 thoughts on “ಗುರು ಶಿಷ್ಯರು ಸಿನಿಮಾ ವಿಮರ್ಶೆ

  1. Read the introductory words os Shri Balaganchi Srikanta. The name Balaganchi stirs the memory of my childhood days. I was born in Hirisave and have visited Balaganchi often. The rural setting of the place, a small rivulet flowing by the village in the rainy season and the hospitality of the local people are still green in my memory. Gamaki Rama krishna used to visit our home those days. The last I saw him was in the year 1956. Owing to my employment in a public sector institution I was out of Karnataka for most of my service years and so lost touch of Hirisave. Srikanta’s writing has drawn me back to those days and I thank him for that.

    Liked by 1 person

  2. ಅದೇ ಗಮಕಿ ರಾಮಕೃಷ್ಣ ಶಾಸ್ತ್ರಿಗಳ ಪ್ರೇರಣೆಯಿಂದಲೇ ನಮ್ಮ ತಾತ ನಂಜುಂಡಯ್ಯನವರು ಗಮಕ ಮತ್ತು ಹರಿಕಥೆಯನ್ನು ಅಭ್ಯಾಸ ಮಾಡಿ ನಾಡಿನ ಹೆಸರಾಂತ ಗಮಕಿಗಳು ಮತ್ತು ಹರಿಕಥಾ ವಿದ್ವಾಂಸರೆನಿಸಿಕೊಂಡಿದ್ದರು. ತಂದೆ ಶಿವಮೂರ್ತಿಗಳೂ ಸಹಾ ಖ್ಯಾತ ಗಮಕಿಗಳೆನಿಸಿಕೊಂಡಿದ್ದರು.

    ನನಗೆ ಅವರಂತೆ ಪದ್ಯ ಒಲಿಯಸ ಕಾರಣ ಗದ್ಯವನ್ನು ಒಪ್ಪಿ ಅಪ್ಪಿಕೊಂಡಿದ್ದೇನೆ. ನಿಮ್ಮ ಫೋನ್ ನಂಬರ್ ಕೊಡಿ ಮಾತನಾಡೋಣ.

    Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s