ನೈಜ ಕನ್ನಡ ಪ್ರೇಮ ಮತ್ತು ಕನ್ನಡ ಸೇವೆ

ಸದ್ಯಕ್ಕೆ ಅಕ್ಟೋಬರ್ ಮೂರನೇ ವಾರ ನಡೆಯುತ್ತಿದ್ದು ಇನ್ನೇನು ಎರಡು ವಾರಕ್ಕೆ ನವೆಂಬರ್ 1ನೇ ತಾರೀಖು ಬಂದಿತೆಂದರೆ ಕನ್ನಡಿಗರ ಹೆಮ್ಮೆಯ ಮತ್ತು ಸಂಭ್ರಮದ ಕನ್ನಡ ರಾಜ್ಯೋತ್ಸವಕ್ಕೆ ಸಿದ್ದಗೊಳ್ಳುತ್ತೇವೆ. ಈ ಹಿನ್ನಲ್ಲೆಯಲ್ಲಿ ಕರ್ನಾಟಕ ರಾಜ್ಯಸರ್ಕಾರವೂ ಸಹಾ ಅಕ್ಟೋಬರ್ 28ರಂದು ಕರ್ನಾಟಕದಾದ್ಯಂತ ‘ಕೋಟಿ ಕಂಠ ಗಾಯನ’ ಕಾರ್ಯಕ್ರಮ ಆಯೋಜಿಸಿದ್ದು, ಈ ಕಾರ್ಯಕ್ರಮದಲ್ಲಿ ಕನ್ನಡದ ಕವಿಗಳ ಜನಪ್ರಿಯ ಗೀತೆಗಳನ್ನು ಏಕಕಾಲದಲ್ಲಿ ಕೋಟಿ ಕಂಠಗಳಲ್ಲಿ ಪ್ರಸ್ತುತಪಡಿಸಲಾಗುತ್ತಿದೆ. ಇದರ ನಿಮಿತ್ತ ಅ.28ರಂದು ಬೆಳಗ್ಗೆ ರಾಷ್ಟ್ರಕವಿ ಕುವೆಂಪು ವಿರಚಿತ ನಾಡಗೀತೆ ಜಯ ಭಾರತ ಜನನಿಯ ತನುಜಾತೆ, ಡಾ.ಚನ್ನವೀರ ಕಣವಿ ಅವರ ವಿಶ್ವ ವಿನೂತನ ವಿದ್ಯಾ ಚೇತನ ಸರ್ವ ಹೃದಯ ಸಂಸ್ಕಾರಿ, ಕುವೆಂಪು ಅವರ ಬಾರಿಸು ಕನ್ನಡ ಡಿಂಡಿಮವಾ, ಡಾ.ಡಿ.ಎಸ್‌.ಕರ್ಕಿಯವರ ಹಚ್ಚೇವು ಕನ್ನಡದ ದೀಪ ಹಾಗೂ ಡಾ. ಹಂಸಲೇಖ ಅವರ ಜನಪ್ರಿಯ ಚಿತ್ರಗೀತೆ ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಈ ಐದೂ ಹಾಡುಗಳನ್ನು ಏಕ ಕಾಲದಲ್ಲಿ ಕೋಟಿ ಕಂಠಗಳಲ್ಲಿ ಹಾಡಲು ನಿರ್ಧರಿಸಲಾಗಿದ್ದು ಅದಕ್ಕಾಗೆ ಎಲ್ಲೆಡೆಯಲ್ಲಿಯೂ ತರಭೇತಿ ಮತ್ತು ನೊಂದಾವಣಿ ಶುರುವಾಗಿದೆ. ಕಳೆದ ವರ್ಷ ಮಾತಾಡ್‌ ಮಾತಾಡ್‌ ಕನ್ನಡ ಎಂಬ ಘೋಷವಾಕ್ಯದೊಂದಿಗೆ ಆಯೋಜಿಸಿದ್ದ ಲಕ್ಷಕಂಠ ಗಾಯನ’ಕ್ಕೆ ವ್ಯಾಪಕವಾದ ಪ್ರಶಂಸೆ ಬಂದ ಹಿನ್ನಲೆಯಲ್ಲಿ ಈ ಬಾರಿಯ ರಾಜ್ಯೋತ್ಸವದ ಅಂಗವಾಗಿ ಕೋಟಿ ಕಂಠ ಗಾಯನ ಅಭಿಯಾನವನ್ನು ಮತ್ತೆ ಅಯೋಸಿದ್ದೇವೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಶ್ರೀ ಸುನೀಲ್ ಕುಮಾರ್ ತಿಳಿಸಿದ್ದಾರೆ.

ಕಳೆದ ವರ್ಷ ನವೆಂಬರ್ 30 ರಂದು ಕುಂಭಕರ್ಣ ನಿದ್ದೆಗೆ ಜಾರಿದ್ದ ಕನ್ನಡ ಹೋರಾಟಗಾರರೂ ಸಹಾ ರಾಜ್ಯೋತ್ಸವಕ್ಕೆ ಎರಡು ಮೂರು ವಾರಕ್ಕೆ ಮುಂಚೆಯೇ ನಿದ್ದೆಯಿಂದ ಎಚ್ಚೆತ್ತು ಲಕ ಲಕನೆ ಹೊಳೆಯುವ ಬಿಳೀ ಉಡುಪು ಮತ್ತು ಹಳದಿ ಕೆಂಪು ಶಾಲುವನ್ನು ಒಗೆದು ಇಸ್ತ್ರೀ ಮಾಡಿ ಈಗಾಗಲೇ ರಾಜ್ಯೋತ್ಸವದ ಹೆಸರಿನಲ್ಲಿ ಕಂಡ ಕಂಡವರೊಡನೆ ಚಂದ ಎತ್ತುತ್ತಾ, ಕನ್ನಡಾಭಿವೃದ್ಧಿ ಇಲಾಖೆ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ನಾಡಿನಾದ್ಯಂತ ಸಂಭ್ರಮದ ರಾಜ್ಯೋತ್ಸವವನ್ನು ನಡೆಸುವುದಕ್ಕಾಗಿ ಕೋಟಿ ಕೋಟಿ ಹಣ ಖರ್ಛು ಆಗುವ ಕಾರಣ ಅದನ್ನು ಸರ್ಕಾರದವತಿಯಿಂದ ಜನರ ತೆರಿಗೆ ಹಣದಿಂದ ಕೊಡಬೇಕೆಂದು ಅರ್ಜಿ ಗುಜರಾಯಿಸಿವೆ.

ಇನ್ನು ಬೀದಿಗೆ ಇಳಿದು ಕನ್ನಡೇತರರ ಮೇಲೆ ಧಾಳಿ ಮಾಡಿ, ಇಂಗ್ಲೀಷ್ ಭಾಷೆಯ ನಾಮ ಫಲಕಗಳ ಮೇಲೆ ಮಸಿ ಬಳಿಯುವುದನ್ನೇ ಕಾಯಕ ಮಾಡಿಕೊಂಡಿರುವ, ಕನ್ನಡಕ್ಕೆ ಸಂಬಂಧ ಪಟ್ಟಿಲ್ಲದಿದ್ದರೂ ಯಾವುದೋ ರಾಜಕೀಯ ನಾಯಕರ ಎಂಜಲು ಕಾಸಿನ ಆಸೆಗೆ ಬಿದ್ದು, ನಾಯಿ ನರಿ, ಕತ್ತೆ ಕೋಳಿಗಳನ್ನು ಹಿಡಿದು ತಂದು ವರ್ಷಕ್ಕೆ ಮೂರ್ನಾಲ್ಕು ಬಂದ್ ಮಾಡಿಸುವುದೇ ಕನ್ನಡ ಹೋರಾಟ ಎಂದು ಭಾವಿಸಿರುವವರು ಎಲ್ಲರೂ ಕಣ್ತೆರೆದು ನೈಜ ಕನ್ನಡ ಪ್ರೇಮ ಮತ್ತು ಕನ್ನದ ಸೇವೆ ಏನು? ಎಂಬುದನ್ನು ಅರಿಯುವುದಕ್ಕೆ ಈ ಪ್ರಸಂಗ ಸಾಕ್ಷಿಯಾಗಿದೆ.

ಈಗಾಗಲೇ ನಮ್ಮ ಬ್ಲಾಗಿನಲ್ಲೇ ತಿಳಿಸಿರುವಂತೆ ಅಕ್ಟೋಬರ್ 14 ಶುಕ್ರವಾರದ ಸಂಜೆ ಸುಮಾರು 15:27 ಕ್ಕೆ ಎಮಿರೇಟ್ಸ್ ಫ್ಲೈಟ್ EK562 ವಿಶ್ವದ ಅತಿದೊಡ್ಡ ವಿಮಾನವಾದ ಏರ್‌ಬಸ್ A380ರಲ್ಲಿ ಸುಮಾರು 224 ಪ್ರಯಾಣಿಕರು ದೂರದ ದುಬೈನಿಂದ ಬೆಂಗಳೂರಿಗೆ ಹಾರಿ ಬಂದ ವಿಷಯವನ್ನು ಓದಿ ತಿಳಿದಿದ್ದೇವೆ.

em1

ಅಂತಹ ಐತಿಹಾಸಿಕ ದಿನಕ್ಕಾಗಿ ಬೆಂಗಳೂರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಅಧಿಕಾರಿಗಳು, ಅಲ್ಲಿಯ ಸಿಬ್ಬಂದಿ ಮತ್ತು ವಾಯುಯಾನ ಉತ್ಸಾಹಿಗಳು ವಿಮಾನವು ಇಳಿಯುವಾಗ ಬಹಳ ಕುತೂಹಲದಿಂದ ಮತ್ತು ಅಷ್ಟೇ ಆತಂಕದಿಂದ ಕಾಯುತ್ತಿದ್ದರೆ, ಒಳ್ಳೆಯ ಮನಸ್ಸಿನ ಜನರು ಒಳ್ಳೆಯ ಕೆಲಸವನ್ನು ಮಾಡಿದರೆ ಅದು ಖಂಡಿತವಾಗಿಯೂ ಒಳ್ಳೆಯದೇ ಆಗುತ್ತದೆ ಎನ್ನುವುದಕ್ಕೆ ಅ ದೈತ್ಯ ವಿಮಾನ ಅತ್ಯಂತ ಸುರಕ್ಷಿತವಾಗಿ ಕನ್ನಡದ ಮಣ್ಣಿನ ಮೇಲೆ ಇಳಿದಾಗ ಎಲ್ಲರ ಮನಸ್ಸಿಗೂ ನಿರಾಳವಾಗಿತ್ತು..

Saneep_Prahu_pilot

ಇದು ನಿಲ್ದಾಣದ ಹೊರಗೆ ನಿಂತವರ ಅನುಭವವಾದರೆ, ಇನ್ನು ವಿಮಾನದಲ್ಲಿ ಕುಳಿತಿದ್ದವರ ಅನುಭವ ಮತ್ತಷ್ಟು ರೋಚಕವಾಗಿತ್ತು. ಈ ಉದ್ಘಾಟನಾ ವಿಮಾನವನ್ನು ಕ್ಯಾಪ್ಟನ್ ನಿಖಿಲ್ ತ್ಯಾಗರಾಜನ್ ಮತ್ತು ಫಸ್ಟ್ ಆಫೀಸರ್ ಸಂದೀಪ್ ಪ್ರಭು ಅವರು ಚಲಾಯಿಸಿದ್ದರು. ದಕ್ಷಿಣ ಕನ್ನಡದ ಮೂಲದವರಾದ ಶ್ರೀ ಸಂದೀಪ್ ಪ್ರಭು ಅವರು ಸುಮಾರು 15 ವರ್ಷಗಳಿಂದ ಪೈಲಟ್ ಆಗಿದ್ದು ಸಾವಿರಾರು ಘಂಟೆಗಳಷ್ಟು ವಿಮಾನವನ್ನು ಚಲಾಯಿಸಿದ್ದಾರೆ.

ಕನ್ನಡದ ನೆಲದ ಮೇಲೆ ಈ ಐತಿಹಾಸಿಕ ದಿನವನ್ನು ಮತ್ತಷ್ಟೂ ನೆನಪಿನಲ್ಲಿ ಉಳಿಯುವಂತೆ ಮಾಡಬೇಕು ಎಂದು ನಿರ್ಧರಿಸಿದ್ದರು. ಸಾಮಾನ್ಯವಾಗಿ ವಿಮಾನ ನೆಲಕ್ಕೆ ಇಳಿಯುವ ಸ್ವಲ್ಪ ಮುನ್ನ, ವಿಮಾನದ ಚಾಲಕರು ಸರಿಯಾಗಿ ಎಷ್ಟು ಹೊತ್ತಿಗೆ ಎಲ್ಲಿ ವಿಮಾನ ಇಳಿಯಲಿದೆ. ಅಲ್ಲಿ ಸದ್ಯದ ವಾತಾವರಣ ಹೇಗಿದೆ ಮತ್ತು ಅದನ್ನು ಹೇಗೆ ನಿಭಾಯಿಸಬೇಕು ಎಂಬುದನ್ನು ಇಂಗ್ಲೀಷ್ ಇಲ್ಲವೇ ಹಿಂದಿಯಲ್ಲಿ ವಿವರಿಸುವುದು ಸಹಜವಾಗಿ ನಡೆದುಕೊಂಡು ಬಂದಿರುವ ರೂಡಿಯಾಗಿದೆ.

ಸಂದೀಪ್ ಪ್ರಭುವಿನ ಮನದಲ್ಲಿದ್ದ ಕನ್ನಡತನ ಜಾಗೃತವಾಗಿ, ಸಂದೀಪ್ ಅವರ ಹಿರಿಯ ಸಹೋದರ ಸತ್ಯೇಂದ್ರ ಪ್ರಭು ಅವರು ಮಾಧ್ಯಮಕ್ಕೆ ತಿಳಿಸಿದಂತೆ ವಿಮಾನ ಬೆಂಗಳೂರಿನಲ್ಲಿ ಇಳಿಯುವಾಗ ನನ್ನ ಸಹೋದರ ವಿಮಾನದ ಎಲ್ಲಾ ಪ್ರಯಾಣಿಕರನ್ನು ಕನ್ನಡ ಭಾಷೆಯಲ್ಲಿ ಪುಟ್ಟ ಭಾಷಣವನ್ನು ಮಾಡಿ ಸ್ವಾಗತ ಮಾಡಿದರು ಎಂದಿದ್ದಾರೆ. ಈ ರೀತಿಯಾಗಿ ಕನ್ನಡದಲ್ಲಿ ಭಾಷಣವನ್ನು ಮಾಡ ಬೇಕೆಂದು ಮುಂಚೆಯೇ ನಿರ್ಧರಿಸಿದ್ದ ಕಾರಣ, ಅವರು ತಮ್ಮ ಪೋಷಕರಾದ ಶ್ರೀಮತಿ ಆರತಿ ಪ್ರಭು ಮತ್ತು ಶ್ರೀ ಶಿವರಾಯ ಪ್ರಭು ಅವರನ್ನು ಸಂಪರ್ಕಿಸಿ ಅವರಿಂದಲೇ ಅ ಪುಟ್ಟ ಭಾಷಣವನ್ನು ಸಿದ್ಧ ಪಡಿಸಿ ಅದೇ ಭಾಷಣವನ್ನು ವಿಮಾನದಲ್ಲಿದ್ದ ಪ್ರಯಾಣಿಕರನ್ನು ಅಧಿಕೃತವಾಗಿ ಮತ್ತು ವೃತ್ತಿಪರ ರೀತಿಯಲ್ಲಿ ಸ್ವಾಗತಿಸಲು ಬಳಸುವ ಮೂಲಕ ಕನ್ನಡತನವನ್ನು ಎತ್ತಿ ಹಿಡಿದ್ದಾರೆ. ಹೀಗೆ ವಿಮಾನದಲ್ಲಿ ಕನ್ನಡವನ್ನು ಕೇಳಿದ ವಿಮಾನದ ಪ್ರಯಾಣಿಕರೂ ರೋಮಾಂಚನಗೊಂಡು ತುಂಬು ಹೃದಯದಿಂದ ಜೋರಾದ ಚಪ್ಪಾಳೇ ತಟ್ಟುವ ಮೂಲಕ ಸಂದೀಪ್ ಪ್ರಭುವರ ಪ್ರಯತ್ನವನ್ನು ಶ್ಲಾಘಿಸಿರುವುದು ನಿಜಕ್ಕೂ ಅದ್ಭುತವೇ ಸರಿ.

ಎಲ್ಲಾದರೂ ಇರು, ಹೇಗೇ ಇರು ಎಂದೆಂದಿಗೂ ನೀ ಕನ್ನಡವಾಗಿರು, ಕನ್ನಡವೇ ಸತ್ಯ, ಕನ್ನಡವೇ ನಿತ್ಯ. ಎಂದು ಸಾಧ್ಯವಿದ್ದ ಕಡೆಯಲ್ಲೆಲ್ಲಾ ರಾಜ್ಯ ಸರ್ಕಾರದ ಕೋಟಿ ಕಂಠ ಗಾಯನ ಮತ್ತು ಸಂದೀಪ್ ಪ್ರಭು ಅವರ ರೀತಿಯಲ್ಲಿ ಕನ್ನಡವನ್ನು ಬಳಸುವುದೇ ನೈಜ ಕನ್ನಡ ಪ್ರೇಮ ಮತ್ತು ಕನ್ನಡಕ್ಕೆ ಮಾಡುವ ಸೇವೆಯಲ್ಲವೇ? ಹಾಗಾದಾಗ ಮಾತ್ರವೇ ಕನ್ನಡ ಉಳಿಯುತ್ತದೆ ಮತ್ತು ಬೆಳೆಯುತ್ತದೆ ಅಲ್ವೇ?

ಸಿರಿಗನ್ನಡಂ ಗೆಲ್ಗೆ,

ಸಿರಿಗನ್ನಡಂ ಬಾಳ್ಗೆ

ಏನಂತೀರೀ?
ನಿಮ್ಮವನೇ ಉಮಾಸುತ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s