ನಮ್ಮ ಸನಾತನ ಧರ್ಮದಲ್ಲಿ ಜನ್ಮ ಕೊಟ್ಟ ತಂದೆ ತಾಯಿಯರನ್ನೇ ಪ್ರತ್ಯಕ್ಷದೇವರು ಎಂದು ಭಾವಿಸುವ ಕಾರಣ ನಾವು ಮೊದಲು ಮಾತೃದೇವೋ ಭವ, ಪಿತೃದೇವೋಭವ ಎಂದು ಅವರಿಗೆ ಗೌರವವನ್ನು ಸೂಚಿಸಿದರೆ, ಅದರ ನಂತರದ ಸ್ಥಾನವನ್ನು ನಮಗೆ ವಿದ್ಯಾಬುದ್ಧಿಯನ್ನು ಕಲಿಸಿಕೊಡುವ ಗುರುಗಳಿಗೆ ಆಚಾರ್ಯದೇವೋಭವ ಎಂದು ನಮಿಸಿದ ನಂತರ ನಾಲ್ಕನೇಯದಾಗಿ ನಾವು ಗೌರವಿಸುವುದೇ ಅತಿಧಿದೇವೋಭವ ಎಂದು. ಅದರಲ್ಲೂ ಹೇಳೀ ಕೇಳೀ ಕರ್ನಾಟಕದವರಂತೂ ಅತಿಧಿ ಸತ್ಕಾರಕ್ಕೆ ಎತ್ತಿದ ಕೈ. ನೀರು ಕೇಳಿದರೆ, ನೀರಿನ ಜೊತೆಗೆ ಬೆಲ್ಲವನ್ನು ಕೊಡುವಷ್ಟು ವಿಶಾಲ ಹೃದಯದವರು. ವಿಳಾಸ ಕೇಳಿದರೆ, ಸುಮ್ಮನೇ ಅಲ್ಲಿಂದಲೇ ಹೇಳದೇ, ಅದೆಷ್ಟೋ ಬಾರಿ ಕೈ ಹಿಡಿದುಕೊಂಡು ಕರೆದುಕೊಂಡು ಹೋಗಿ ಅವರ ವಿಳಾಸಕ್ಕೆ ಬಿಟ್ಟು ಬರುವಂತಹವರು. ಅದಕ್ಕೂ ಒಂದು ಹೆಚ್ಚಾಗಿ ತಮಗೆ ಅತಿಥಿಗಳ ಭಾಷೆ ಬಾರದೇ ಹೋದರೂ ಹರುಕು ಮುರುಕು ಅವರದ್ದೇ ಭಾಷೆಯಲ್ಲಿ ಉತ್ತರಿಸುವ ಸೌಜನ್ಯವಂತರು. ಹೀಗೆ ಭಾರತೀಯರ ಅತಿಥಿ ಸತ್ಕಾರ ಹೇಗಿರುತ್ತದೆ ಎಂಬುದರ ಕುರಿತು ಒಬ್ಬ ವಿದೇಶಿಗರು ಹಂಚಿಕೊಂಡ ರಸಾನುಭವದ ಜೊತೆ ನನ್ನದೇ ಕೆಲವು ವಯಕ್ತಿಕ ಅವುಭವಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.
ಸಾಮಾನ್ಹವಾಗಿ ವಿದೇಶಿಗರು ಭಾರತಕ್ಕೆ ಹೋಗುತ್ತಿದ್ದೇನೆ ಎಂದಾಗ, ಹೆಚ್ಚಿನವರು ಭಾರತಕ್ಕೆ ಹೋಗುವಾಗ ಬಹಳ ಎಚ್ಚರದಿಂದಿರಬೇಕು. ಅಲ್ಲಿ ಬಹಳ ಕಳ್ಳಕಾಕರಿದ್ದಾರೆ ಎಂಬ ಭಯವನ್ನು ಬಿತ್ತಿ ಕಳುಹಿಸುತ್ತಾರೆ. ದುರಾದೃಷ್ಟವಶಾಷಾತ್ ಅವರು ಹೇಳುವ ಸಂಗತಿ ಸುಳ್ಳಲ್ಲದಿದ್ದರೂ, ಆದರೆ ಎಲ್ಲೋ ಕೆಲವು ಬೆರಳಣಿಕೆಯ ಮಂದಿ ಮಾಡುವ ಮೋಸಕ್ಕೆ ಎಲ್ಲರನ್ನೂ ಸಾರಾಸಗಟಾಗಿ ಮೂದಲಿಸಲು ಸಾಥ್ಯವಿಲ್ಲ. ಆತ ಒಬ್ಬ ಅಮೇರಿಕಾದ ನಾಗರೀಕನಾಗಿದ್ದು ಅಲ್ಲಿಯ ಬಹುರಾಷ್ಟ್ರೀಯ ಕಂಪನಿಯೊಂದರ ಮುಖ್ಯಸ್ಥ. ಹಾಗಾಗಿ ಆತ, ತನ್ನ ಕಂಪನಿಯ ವ್ಯವಹಾರದ ವಿಷಯವಾಗಿ ಅಗ್ಗಾಗ್ಗೆ ದೇಶ ವಿದೇಶಗಳ ಪ್ರವಾಸ ಮಾಡುತ್ತಲೇ ಇರುತ್ತಾರೆ. ಅದೇ ರೀತಿ ಆತ ಭಾರತದ ಬೆಂಗಳೂರಿನಲ್ಲಿರುವ ಒಂದು ಕಂಪನಿಯೊಂದಿಗೆ ವ್ಯವಹರಿಸಲು ಅದೊಮ್ಮೆ ಬಂದಿರುತ್ತಾರೆ. ಇಡೀ ದಿನ ಅನೇಕರೊಂದಿಗೆ ಮಾತು ಕತೆ ನಡೆಸಿ, ಸಂಜೆ ಅಲ್ಲೇ ಸ್ಥಳೀಯ ಕ್ಯಾಬ್ ಒಂದರ ಮೂಲಕ ಹೋಟೇಲ್ ತಲುಪುತ್ತಾರೆ. ರಾತ್ರಿ ಹೋಟೆಲ್ಲಿನಲ್ಲಿ ಊಟ ಮಾಡಿ ಅದರ ಬಿಲ್ ಕೊಡಲು ಹೋದಾಗ ಅವರ ಜೇಬಿನಲ್ಲಿ ಪರ್ಸ್ ಇಲ್ಲದೇ ಹೋದ್ದದನ್ನು ಗಮನಿಸಿ ಎಲ್ಲಾ ಕಡೆಯಲ್ಲೂ ಹುಡುಕಿ ಸಿಗದೇ ಹೋದಾಗ, ಬಹುಶಃ ಕ್ಯಾಬಿನಲ್ಲೇ ತನ್ನ ಬ್ಯಾಗ್ ಇಟ್ಟಿದ್ದು ಅದರಲ್ಲೇ ಪರ್ಸ್ ಇದ್ದದ್ದನ್ನು ನೆನಪಿಸಿಕೊಂಡು ಕೂಡಲೇ, ಕ್ಯಾಬ್ ಬುಕ್ ಮಾಡಿದ್ದ ತಮ್ಮ ಸ್ನೇಹಿತನಿಗೆ ಕರೆ ಮಾಡಿ ವಿಷಯವನ್ನು ತಿಳಿಸಿ ಆ ಕ್ಯಾಬ್ ಚಾಲಕನನ್ನು ಕರೆ ಮಾಡಿ ವಿಚಾರಿಸಲು ಸೂಚಿಸುತ್ತಾರೆ.
ಅವರ ಸ್ನೇಹಿತ ಆ ಕ್ಯಾಬ್ ಚಾಲಕನಿಗೆ ಕರೆ ಮಾಡಿದಾಗ ನೆಟ್ವರ್ಕ್ ಸಮಸ್ಯೆಯಿಂದಾಗಿ ಕರೆ ತಲುಪದೇ ಹೋಗಿ ಮತ್ತೆ ಮತ್ತೆ ಕರೆ ಮಾಡಲು ಪ್ರಯತ್ನಿಸಿದಾಗ ಮೊಬೈಲ್ ಸ್ವಿಚ್ಡ್ ಆಫ್ ಎಂಬ ಸಂದೇಶ ಬಂದಾಗ, ಛೇ.. ಎಂತಹ ಜನರಪ್ಪಾ ಕಂಡೋರ ಬ್ಯಾಗ್ ಸಿಕ್ಕ ಕೂಡಲೇ ಹಿಂದಿರುಗಿಸದೇ ನಮ್ಮ ದೇಶದ ಮಾನ ಮರ್ಯಾದೆ ತೆಗೆದು ಬಿಡ್ತಾರೆ ಎಂದು ಬೇಸರ ಮಾಡಿಕೊಂಡು, ತಮ್ಮ ವಿದೇಶಿ ಗೆಳೆಯನಿಗೆ ಕರೆ ಮಾಡಿ ಈಗ ರಾತ್ರಿ ಆಗಿರುವ ಕಾರಣ, ಮಾರನೇಯ ದಿನ ಮತ್ತೆ ಪ್ರಯತ್ನಿಸುತ್ತೇನೆ. ಭಯ ಪಡಬೇಡಿ ಗಾಭರಿ ಆಗದಿರಿ ಕಳೆದು ಹೋದ ನಿಮ್ಮ ವಸ್ತುಗಳನ್ನು ಪತ್ತೆ ಹಚ್ಚಿ ಹಿಂದಿರುಗಿಸಲು ಪ್ರಯತ್ನಿಸುತ್ತೇವೆ ಎಂದು ಹೇಳಿ ಸಮಾಧಾನ ಪಡಿಸಲು ಯತ್ನಿಸುತ್ತಾರೆ. ಆಷ್ಟೆಲ್ಲಾ ಭರವಸೆಗಳು ಇದ್ದರೂ, ಭಾರದ ಹೃದಯದಿಂದಲೇ ನಿದ್ದೆಗೆ ಜಾರಿದ್ದ ಆ ವಿದೇಶಿಗರಿಗೆ ಬೆಳ್ಳಿಗ್ಗೆ ಎಚ್ಚರವಾದದ್ದೇ, ತಮ್ಮ ಹೋಟೇಲ್ ಕೊಠಡಿಯ ಕಾಲಿಂಗ್ ಬೆಲ್ ಹೊಡೆದಾಗಲೇ.
ಛೇ.. ಯಾರಪ್ಪಾ ಬೆಳಿಗ್ಗೆ ಬೆಳಿಗ್ಗೆ ಎಬ್ಬಿಸೋದು ಎಂದು ಬೇಸರದಿಂದಲೇ ಎದ್ದು ಕೊಠಡಿಯ ಬಾಗಿಲನ್ನು ತೆಗೆದು ಕೂಡಲೇ ಒಂದು ಕ್ಷಣ ತಬ್ಬಿಬ್ಬಾಗಿ, ಭಾರತದಲ್ಲೂ ಹೀಗೂ ಉಂಟೇ? ಎಂದು ಭಾವಿಸುತ್ತಾರೆ. ಬೆಳ್ಳಂಬೆಳಿಗ್ಗೆಯೇ ಅವರು ಕಳೆದು ಕೊಂದಿದ್ದ ಬ್ಯಾಗ್ ನೊಂದಿಗೆ ಆ ಕ್ಯಾಬ್ ಚಾಲಕ ವಿನಮ್ರನಾಗಿ ನಿಂತಿದ್ದು, ಸಾರ್ ನೆನ್ನೆ ರಾತ್ರಿ ನೀವು ನಮ್ಮ ಕಾರ್ ನಲ್ಲಿ ಈ ಬ್ಯಾಗ್ ಬಿಟ್ಟು ಹೋಗಿದ್ದೀರಿ. ಬೆಳಿಗ್ಗೆ ಕಾರ್ ಕ್ಲೀನ್ ಮಾಡುವಾಗ ಅದನ್ನು ಗಮನಿಸಿ ನಿಮಗೆ ಹಿಂದಿರಿಗಿಸಲು ಬಂದಿದ್ದೇನೆ. ತೆಗೆದುಕೊಳ್ಳಿ ಎಂದು ಕೊಡುತ್ತಾನೆ
ಕೂಡಲೇ ಬ್ಯಾಗ್ ಪಡೆದುಕೊಂಡು ಒಳಗೆ ತನ್ನ ಪಾಸ್ ಪೋರ್ಟ್ ಇದೆಯೇ, ಇತರೇ ದಾಖಲೇ ಸರಿ ಇದೆಯೇ? ಅದರಲ್ಲಿ ಇಟ್ಟಿದ್ದ ಹಣವೆಲ್ಲವು ಸರಿ ಇದೆಯೇ ಎಂದು ಪರೀಕ್ಷಿಸಿದರೆ, ಎಲ್ಲವೂ ಸರಿ ಇದ್ದದ್ದನ್ನು ಕಂಡಾಗ, ಭಾರತಕ್ಕೆ ಬರುವಾಗ ಭಾರತೀಯರ ಬಗ್ಗೆ ಅಪನಂಬಿಕೆಯನ್ನೇ ಮೂಡಿಸಿದ್ದಾಗ ಹೆದರಿದ್ದ ಆ ವಿದೇಶಿಗರಿಗೆ ಈ ಪ್ರಸಂಗ ಒಂದು ರೀತಿಯ ಅಚ್ಚರಿ ಮತ್ತು ಸಂತೋಷ ಎರಡೂ ಸಹಾ ಒಟ್ಟೊಟ್ಟಿಗೆ ಆಗುತ್ತದೆ. ಕೂಡಲೇ ತಮ್ಮ ಪರ್ಸಿನಿಂದ ಸ್ವಲ್ಪ ಹಣವನ್ನು ತೆಗೆದು ಆ ಚಾಲಕನಿಗೆ ಕೊಡಲು ಹೋದಾಗ, ಆತ ಅಷ್ಟೇ ವಿನಮ್ರವಾಗಿ ಆ ಹಣವನ್ನು ತೆಗೆದುಕೊಳ್ಳಲು ನಿರಾಕರಿಸುತ್ತಾನೆ. ಅರೇ, ಇದನ್ನು ನಾನು ಸಂತೋಷದಿಂದ ಕೊಡುತ್ತಿರುವ ಕಾರಣ, ಸಂಕೋಚವಿಲ್ಲದೇ ತೆಗೆದುಕೋ ಎಂದು ಹೇಳಿದಾಗ, ಆ ಚಾಲಕ ಹೇಳಿದ ಮಾತು ಆ ವಿದೇಶಿಗರಿಗೆ ಭಾರತೀಯರ ಬಗ್ಗೆ ಇದ್ದ ಅಪನಂಬಿಗೆಯೆಲ್ಲವೂ ಕ್ಷಣಮಾತ್ರದಲ್ಲೇ ಮಾಯವಾಗಿದ್ದಂತೂ ಸುಳ್ಳಲ್ಲ.
ಭಕ್ಷೀಶ್ ಹಣವನ್ನು ತೆಗೆದುಕೊಳ್ಳಲು ನಿರಾಕರಿಸಿದ ಆ ಚಾಲಕ ಸಾರ್, ನಾನು ಕ್ಯಾಬ್ ಚಾಲಕನೇ ಹೌದು. ನಿಮ್ಮಂತಹ ಅತಿಥಿಗಳು ಮತ್ತು ಪ್ರಯಾಣಿಕರಿಂದಲೇ ನಮ್ಮ ಜೀವನವು ನಡೆಯುತ್ತದೆ ಎನ್ನುವುದೂ ಸತ್ಯ. ಆದರೇ, ನಾವು ಚಿಕ್ಕಂದಿನಿಂದಲೂ ನಮ್ಮ ತಾಯಿಯವರು ಅತಿಥಿ ದೇವೋ ಭವ ಎಂಬುದನ್ನು ಹೇಳಿಕೊಟ್ಟಿರುವುದಲ್ಲದೇ, ಅದರ ಜೊತೆಗೆ ಹರ್ಷದ ಕೂಳಿಗಾಗಿ ವರ್ಷದ ಕೂಳನ್ನು ಕಳೆದುಕೊಳ್ಳಬಾರದು ಎಂಬುದನ್ನೂ ಸಹಾ ಮನದಟ್ಟು ಮಾಡಿಸಿದ್ದಾರೆ. ಅಕಸ್ಮಾತ್ ನಾನು ನಿಮ್ಮ ಪರ್ಸ್ ಹಿಂದಿರುಗಿಸದೇ ಆದರಲ್ಲಿ ಇದ್ದ ಹಣವನ್ನು ತೆಗೆದುಕೊಂಡು ಒಂದೆರಡು ದಿನ ಸಂಭ್ರಮದಿಂದ ಮೋಜು ಮಸ್ತಿ ಮಾಡಬಹುದು ಆದರೆ, ಹಾಗೆ ಮಾಡುವುದು ನಮ್ಮ ಸಂಸ್ಕಾರವಲ್ಲ. ಅದರಿಂದ ಕೇವಲ ನನ್ನ ಮಾನವಷ್ಟೇ ಅಲ್ಲದೇ, ದೇಶಕ್ಕೂ ಅಪಕೀರ್ತಿ ತರುವುದಕ್ಕೆ ನಾನು ಕಾರಣೀಭೂತನಾಗುತ್ತೇನೆ. ಅದಷ್ಟೇ ಅಲ್ಲದೇ, ಇಂತಹ ಪ್ರಸಂಗಗಳಿಂದಾಗಿ ಭಾರತಕ್ಕೆ ಬರುವ ವಿದೇಶಿಗರ ಮನಸ್ಸಿನಲ್ಲಿ ಭಾರತದ ಬಗ್ಗೆ ಅಪ ನಂಬಿಕೆ ಮೂಡುತ್ತದೆ. ಹಾಗಾಗಿ ನೀವು ಅನ್ಯಥಾ ಭಾವಿಸದಿರಿ ಎಂದು ಎರಡೂ ಕೈ ಜೋಡಿಸಿ ಆ ವಿದೇಶಿಗರಿಗೆ ನಮಸ್ಕಾರ ಮಾಡುತ್ತಾನೆ.
ಆ ಚಾಲಕನ ಮಾತುಗಳಿಂದ ಕೇಳುತ್ತಾ ಸ್ಥಂಬೀಭೂತರಾದ ಆ ವಿದೇಶಿಗರು. ನೀವು ನಿಮ್ಮ ದೇಶ ಮತ್ತು ಸಂಸ್ಕೃತಿಯ ಬಗ್ಗೆ ಅತ್ಯಂತ ಮನೋಜ್ಞವಾಗಿ ತಿಳಿಸಿದ್ದಲ್ಲದೇ ನಿಮ್ಮೀ ನಡುವಳಿಕೆಯ ಮೂಲಕ ದೇಶದ ಗೌರವವನ್ನು ಎತ್ತಿ ಹಿಡಿದಿದ್ದೀರಿ. ಅದೇ ರೀತಿ ನಾನೂ ಸಹಾ ನನ್ನ ದೇಶದ ಗೌರವವನ್ನು ಎತ್ತಿ ಹಿಡಿಯುವ ಸಲುವಾಗಿ ನನ್ನೀ ಕಿರು ಕಾಣಿಕೆಯನ್ನು ಸ್ವೀಕರಿಸಲೇ ಬೇಕು ಎಂದು ಒತ್ತಾಯ ಪಡಿಸಿದಾಗ, ಮತ್ತೆ ಕರ ಜೋಡಿಸಿ ಅಷ್ಟೇ ವಿನಮ್ರತೆಯಿಂದ ನೀವು ನನಗೆ ಏನನ್ನಾದರೂ ಕೊಡಲೇ ಬೇಕೆಂದಲ್ಲಿ ದಯವಿಟ್ಟು ನಿಮ್ಮ ದೇಶಕ್ಕೆ ಹೋದಾಗ, ಈ ಪ್ರಸಂಗವನ್ನು ಮತ್ತು ನಮ್ಮ ಭಾರತೀಯರ ಅತಿಥಿಸತ್ಕಾರವನ್ನು ಎಲ್ಲರಿಗೂ ತಿಳಿಸಿ ಹೆಚ್ಚು ಹೆಚ್ಚು ವಿದೇಶಿಗರು ಭಾರತಕ್ಕೆ ಬರುವಂತೆ ಮಾಡಿದಲ್ಲಿ ಅದು ಕೇವಲ ನನಗಲ್ಲದೇ ನನ್ನಂತೆಯೇ ವಿದೇಶಿಗರ ಸತ್ಕಾರದಿಂದಲೇ ಜೀವನವನ್ನು ನಡೆಸಿಕೊಂಡು ಹೋಗುವವರಿಗೆ ಸಹಕರಿಸಿದಂತಾಗುತ್ತದೆ ಎಂದಿದ್ದಲ್ಲದೇ, ಹಾಗೇ ಮಾತನ್ನು ಮುಂದುವರೆಸಿ, ನೀವು ಮುಂದೊಮ್ಮೆ ಭಾರತಕ್ಕೆ ಬಂದಾಗ ಖಂಡಿತವಾಗಿಯೂ ಈ ಬಡವನ ಮನೆಗೆ ಬಂದು ಒಂದು ಕಪ್ ಚಹ ಕುಡಿದುಕೊಂಡು ಹೋಗಿ ಎಂದು ವಿನಂತಿಸಿಕೊಳ್ಳುತ್ತಾನೆ. ಚಾಲಕನ ಮಾತಿನಿಂದ ಮತ್ತೊಮ್ಮೆ ಹೃದಯ ತುಂಬಿ ಕೊಂಡ ಆ ವಿದೇಶಿಗರು ಕೂಡಲೇ ಚಾಲಕನನ್ನು ಹೆಮ್ಮೆಯಿಂದ ಬಿಗಿದಪ್ಪಿಕೊಂಡು ಅಭಿನಂದಿಸುತ್ತಾರೆ.
ಇದು ಖಂಡಿತವಾಗಿಯೂ ಕಲ್ಪನಾ ಕಥೆಯಾಗಿರದಂತೆ ನಿಜವಾಗಿ ನಡೆದ ಕಥೆಯಾಗಿದ್ದು, ತಮ್ಮ ದೇಶಕ್ಕೆ ಹಿಂದಿರುಗಿದ ನಂತರ ಆ ವಿದೇಶಿಗರು ಎಲ್ಲರ ಸಮ್ಮುಖದಲ್ಲೂ ಈ ರೋಚಕವಾದ ವಿಷಯವನ್ನು ಹಂಚಿಕೊಳ್ಳುತ್ತಿರುವ ವೀಡೀಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವುದನ್ನೂ ನೋಡಬಹುದಾಗಿದೆ. ವಾರಕ್ಕೆ ಒಮ್ಮೆ ಇಲ್ಲವೇ ಎರಡು ಬಾರಿಯಾದರೂ, ತಮ್ಮ ಆಟೋದಲ್ಲಿ ಪ್ರಯಾಣಿಕರು ಬಿಟ್ಟು ಹೋಗಿದ್ದ ಹಣವನ್ನು ಹಿಂದಿರುಗಿಸಿದ ಪ್ರಾಮಾಣಿಕ ಚಾಲಕ ಎಂದೋ, ಇಲ್ಲವೇ ಆಭರಣಗಳನ್ನು, ವಯಕ್ತಿಕ ದಾಖಲೆಗಳನ್ನು ಹಿಂದಿರಿಗಿಸಿದ ಚಾಲಕ ಎಂಬ ಸುದ್ದಿಯನ್ನು ಪತ್ರಿಕಗಳಲ್ಲಿ ಮತ್ತು ಮಾಧ್ಯಮಗಳಲ್ಲಿ ಓದಿಯೋ ಇಲ್ಲವೇ ನೋಡಿಯೇ ಇರುತ್ತೇವೆ.
ಮನೆಯ ಮೊದಲ ಪಾಠ ಶಾಲೇ. ತಾಯಿಯೇ ಮೊದಲ ಗುರು. ತಂದೆ, ತಾಯಿ ಮತ್ತು ಗುರು ಹಿರಿಯರು ಕಲಿಸಿದ ಆಚಾರ ವಿಚಾರ ಮತ್ತು ಸತ್ ಸಂಪ್ರದಾಯ ಮತ್ತು ಸಂಸ್ಕಾರಗಳು ಕಡೆಯತನಕವೂ ನಮ್ಮ ಮತ್ತು ನಮ್ಮ ದೇಶದ ಹಿರಿಮೆ ಮತ್ತು ಗರಿಮೆಗಳನ್ನು ಹೆಚ್ಚಿಸುತ್ತದೆ ಎನ್ನುವುದಕ್ಕೆ ಈ ಪ್ರಸಂಗವೇ ಜ್ವಲಂತ ಉದಾಹರಣೆಯಾಗಿದೆ ಅಲ್ವೇ?
ಏನಂತೀರೀ?
ನಿಮ್ಮವನೇ ಉಮಾಸುತ