ಇತ್ತೀಚೆಗೆ ರಿಷಭ್ ಶೆಟ್ಟಿಯವರ ಕರಾವಳಿ ಪ್ರಾಂತದ ಭೂತದಕೋಲದ ಆಚರಣೆಯ ಹಿನ್ನಲೆಯ ಕಾಂತಾರ ಸಿನಿಮಾ ಬಿಡುಗಡೆಯಾಗಿ ಪ್ರಪಂಚಾದ್ಯಂತ ಅತ್ಯಂತ ಯಶಸ್ವಿಯಾಗಿ ಪ್ರದರ್ಶನ ನಡೆಯುತ್ತಿರುವಾಗ, ಈ ದೈವಗಳ ಕುರಿತಾಗಿ ಪರ ವಿರೋಧಗಳು ಚರ್ಚೆಗಳು ತಾರಕ್ಕಕ್ಕೇ ಏರುತ್ತಿರುವಾಗ, ದೇವ, ದೈವ ಮತ್ತು ದೈವ ನರ್ತಕರು ಎಂದರೆ ಯಾರು ಮತ್ತು ಸಮಾಜದಲ್ಲಿ ಅವರುಗಳ ಬಳಕೆ ಮತ್ತು ದುರ್ಬಳಕೆ ಹೇಗೆ ನಡೆಯುತ್ತಿದೆ ಎಂಬುದರ ಕುರಿತಾಗಿ ಸವಿರವಾಗಿ ಉದಾಹರಣೆಗಳ ಮೂಲಕ ಉತ್ತರಿಸುವ ಸಣ್ಣ ಪ್ರಯತ್ನ.
ದೇವ ಎಂದರೆ ನಮ್ಮ ಸನಾತನ ಧರ್ಮದಲ್ಲಿ ಬರುವ ಎಲ್ಲಾ ದೇವಾನು ದೇವತೆಗಳಾಗಿದ್ದು ಅವುಗಳಿಗೆ ಮೂರ್ತ ರೂಪವನ್ನು ಕೊಟ್ಟು ದೇವಸ್ಥಾನ ಮತ್ತು ಮನೆಗಳಲ್ಲಿ ವಿಗ್ರಹ ರೂಪದಲ್ಲಾಗಲೀ ಅಥವ ಚಿತ್ರರೂಪದಲ್ಲಾಗಲೀ ಪೂಜಿಸುವ ಶಕ್ತಿಯಾಗಿದೆ. ಎಲ್ಲರ ನಂಬಿಕೆಗಳ ಪ್ರಕಾರ ದೇವ ಅಥವಾ ದೇವರು ಸ್ವರ್ಗಲೋಕದಲ್ಲಿದ್ದು ಅವರನ್ನು ನಂಬಿದವರನ್ನು ಸದಾಕಾಲವೂ ರಕ್ಷಿಸುತ್ತಿರುತ್ತಾನೆ
ಅದೇ ದೈವ ಎಂದರೆ ದೇವರ ರೂಪದಲ್ಲಿ ಭೂಮಿಯಲ್ಲಿ ಮನುಷ್ಯರೊಂದಿಗೆ ಜೀವಿಸಿಕೊಂಡು ಮನುಷ್ಯರಿಗೆ ಸಹಾಯಮಾಡುವ ಒಂದು ಶಕ್ತಿ ಎಂಬ ನಂಬಿಕೆ. ಕೆಲವೊಂದು ಕಡೆ ದೇವರಿಗೆ ದೈವಗಳು ಕಾವಲು ಕಾಯುವ ಉದಾಹರಣೆಗಳಿವೆ. ಹಾಗಾಗಿ ಈ ದೈವದ ಆಚರಣೆ ಕೇವಲ ತುಳುನಾಡಿಗಷ್ಟೇ ಸೀಮಿತವಾಗಿರದೇ, ದೇಶಾದ್ಯಂತ ಆಯಾಯಾ ಪ್ರಾಂತ್ಯಕ್ಕೆ ಅನುಗುಣವಾಗಿ ಜನರು ದೇವರು ಮತ್ತು ದೈವ ಎರಡನ್ನೂ ನಂಬುತ್ತಾರೆ ಮತ್ತು ಭಕ್ತಿಯಿಂದ ಪೂಜಿಸುತ್ತಾರೆ. ಉದಾಹರಣೆಗೆ ಧರ್ಮಸ್ಥಳದಲ್ಲಿ ಮಂಜುನಾಥಸ್ವಾಮಿ ದೇವರಾದರೇ, ಅಣ್ಣಪ್ಪ ಸ್ವಾಮಿ ಅಲ್ಲಿ ದೈವ ಎನಿಸಿಕೊಳ್ಳುತ್ತಾನೆ. ಇನ್ನು ನಮ್ಮ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕ್ಕಿಗೆ ಸೇರಿದ ನಮ್ಮೂರಾದ ಬಾಳಗಂಚಿಯಲ್ಲಿ ಗ್ರಾಮದೇವತೆ ಸ್ವರ್ಣಾಂಬ ಅರ್ಥಾತ್ ಹೊನ್ನಾದೇವಿ ದೇವರಾದರೆ, ಹೆಬ್ಬಾರಮ್ಮ ಇಲ್ಲವೇ ಚಾವಟಿಯಮ್ಮ ದೈವವಾಗುತ್ತಾರೆ.
ಈ ರೀತಿಯ ದೈವವನ್ನು ಬಹಳ ನಿಷ್ಠೆ ಮತ್ತು ನಿಯಮಗಳಿಂದ ಅರಾಧಿಸುವ ಮತ್ತು ಅವುಗಳನ್ನು ಕೆಲವು ವಿಶಿಷ್ಟ ದಿನಗಳಲ್ಲಿ ತಮ್ಮ ಮೈಮೇಲೆ ಆಹ್ವಾಹನೆ ಮಾಡಿಕೊಂಡು ಜನರ ಮತ್ತು ದೈವದ ಮಧ್ಯೆ ಬೆಸುಗೆಯನ್ನು ಏರ್ಪಡಿಸುವವರನ್ನು ದೈವ ನರ್ತಕ ಎನಿಸಿಕೊಳ್ಳುತ್ತಾರೆ. ಜನರು ದೈವದ ಮುಂದೆ ಕೇಳುವ ಪ್ರಶ್ನೆ ಮತ್ತು ಕೋರಿಕೆಗಳಿಗೆ ಇದೇ ದೈವ ನರ್ತಕರು ಉತ್ತರಿಸುತ್ತಾರೆ. ಬಹಳಷ್ಟು ಸಂದರ್ಭದಲ್ಲಿ ಅವರುಗಳು ನೀಡುವ ಪರಿಹಾರಗಳು ಜನರಿಗೆ ಅನುಕೂಲವಾಗಿರುವ ಕಾರಣ ಇಂದಿಗೂ ಸಹಾ ಜನರು ಈ ದೈವ ಮತ್ತು ದೈವ ನರ್ತಕರನ್ನು ಬಹಳವಾಗಿ ನಂಬುತ್ತಾರೆ. ಇದೇ ಕಾರಣದಿಂದ ಸ್ಥಳೀಯವಾದ ಅನೇಕ ಸಮಸ್ಯೆಗಳು ಇದೇ ದೈವದ ಮುಂದೆ ಆಣೆ ಪ್ರಮಾಣವಾಗಿ ಅದರ ಕುರಿತಾಗಿ ದೈವ ನರ್ತಕರು ಕೊಡುವ ಪರಿಹಾರವೇ, ಅಂತಿಮ ತೀರ್ಪು ಎಂಬುದು ಜನಜನಿತವಾಗಿದೆ.
ಈ ರೀತಿಯ ಸಂಪ್ರದಾಯಕ್ಕೆ ವಿಜಯನಗರ ಜಿಲ್ಲೆ ಹರಪನಹಳ್ಳಿ ಪಟ್ಟಣದ ಹೊರವಲಯದಲ್ಲಿರುವ ಮೈಲಾರಲಿಂಗ ದೇಗುಲದಲ್ಲಿ ಪ್ರತಿ ವರ್ಷ ಭರತ ಹುಣ್ಣಿಮೆಯಂದು ನಡೆಯುವ ಕಾರಣಿಕ ವಿಧಿವಿಧಾನವು ಅತ್ಯಂತ ಸುಂದರವಾದ ಉದಾಹಣೆಯಾಗಿದೆ. ಹಿಂದೆ ಪಶುಗಳ್ಳರಾದ ಮಣಿ ಹಾಗೂ ಮಲ್ಲರನ್ನು ಸಂಹಾರ ಮಾಡುವ ಸಲುವಾಗಿ ಸಾಕ್ಷಾತ್ ಈಶ್ವರನು ಪಶುಪಾಲನೆಯ ಕುರುಬನಾಗಿ ಜನಿಸಿ ಆ ಇಬ್ಬರು ಗೋಗಳ್ಳನ್ನು ಸಂಹರಿಸಿ ಅಲ್ಲಿ ಮೈಲಾರಲಿಂಗನಾಗಿ ಸ್ಥಾಪಿತನಾಗಿದ್ದಾನೆ ಎನ್ನುವುದು ಜನರ ನಂಬಿಕೆಯಾಗಿದೆ. ಇಲ್ಲಿನ ಜಾತ್ರೆಯ ಸಮಯದಲ್ಲಿ ಭಕ್ತರ ಜಯಘೋಷದ ನಡುವೆ ಕಾರಣೀಕವನ್ನು ನುಡಿಯುವ ಗೊರವಯ್ಯ ಎತ್ತರದ ಬಿಲ್ಲನ್ನೇರಿ ನುಡಿಯುವ ಹೇಳುವ ನುಡಿಗಳು ಆ ವರ್ಷದ ಭವಿಷ್ಯ ಎಂದೇ ನಂಬಲಾಗುತ್ತದೆ. ಅಂಬ್ಲಿರಾಶಿಗೆ ಮುತ್ತಿನ ಗಿಣಿ ಸಂಪಾದೀತಲೇ ಪರಾಕ್ ಎಂಬ ಕಾರಣಿಕವನ್ನು ಕೆಲ ವರ್ಷಗಳ ಹಿಂದೆ ಹೇಳಿದ್ದಾಗ, ಈ ಬಾರಿ ಚೆನ್ನಾಗಿ ಮಳೆ ಬೆಳೆಯಾಗಿ ರಾಜ್ಯದ ಜನರು ಸುಖದಿಂದ ಇರುತ್ತಾರೆ ಎಂಬುದಾಗಿ ಅರ್ಥೈಸಿದ್ದರೆ, ಅದು ಬಹುತೇಕ ನಿಜವಾದ ಕಾರಣ ಜನರಿಗೆ ಆ ಕಾರಣೀಕದ ಬಗ್ಗೆ ನಂಬಿಕೆ ಉಂಟಾಗಿತ್ತು. ಅದೇ ರೀತಿ ಈ ವರ್ಷ ಆಕಾಶದ ಗುಡ್ಡಕ್ಕಲೆ ಶಿಶು ಏರಿತಲೆ ಪರಾಕ್ ಎಂದು ಹೇಳಿದ್ದಾರೆ. ಇದನ್ನು ಸ್ಥಳೀಯ ಜನರು ಈ ಬಾರಿಯ ಚುನಾವಣೆಯಲ್ಲಿ ಯುವಕರಿಗೆ ರಾಜ್ಯದ ಮುಖ್ಯಮಂತ್ರಿ ಸ್ಥಾನ ದೊರೆಯಲಿದೆ ಎಂಬುದಾಗಿ ವಿಶ್ಲೇಷಣೆ ಮಾಡಿರುವುದು ರಾಜ್ಯದ ಜನತೆ ಮತ್ತು ರಾಜಕೀಯ ವ್ಯಕ್ತಿಗ ಕುತೂಹಲವನ್ನುಂಟು ಮಾಡಿದೆ.
ಮೈಲಾರಲಿಂಗೇಶ್ವರ ಕಾರಣಿಕವನ್ನು ನುಡಿಯುವವರನ್ನು ಗೊರವಯ್ಯ ಅಥವಾ ಗ್ವಾರಪ್ಪ ಎಂದು ಕರೆಯುತ್ತಾರೆ. ಉತ್ತರ ಕರ್ನಾಟಕ ಭಾಗದಲ್ಲಿ ಈ ಕಾರಣಿಕಕ್ಕೆ ಹೆಚ್ಚು ಮಹತ್ವ ಇದ್ದು ವಿವಿಧ ಜಾತಿ ಮತ್ತು ಧರ್ಮಗಳಿಗೆ ಸೇರಿದ ಭಕ್ತರು ಮೈಲಾರಲಿಂಗೇಶ್ವರನನ್ನು ಆರಾಧಿಸುತ್ತಾರೆ. ಈ ರೀತಿಯ ಗೊರವಯ್ಯನ ದೀಕ್ಷೆ ಪಡೆಯಲು ಎಲ್ಲರಿಗೂ ಮುಕ್ತ ಅವಕಾಶ ಇದೆಯಾದರೂ, ಕುರುಬ ಜನಾಂಗದ ಹಾಲುಮತದ ಗೊರವಯ್ಯ ಮಾತ್ರ ಕಾರಣಿಕ ನುಡಿಯುವ ಅರ್ಹತೆ ಪಡೆದುಕೊಳ್ಳುತ್ತಾರೆ. ಎತ್ತರವಾದ ಕೊಲು ಅಥವಾ ಬಿಲ್ಲನ್ನು ಏರುವ ಗೊರವಯ್ಯ ಮೊದಲು ಸದ್ದಲೇ ಪರಾಕ್ ಎಂದು ಕೂಗಿದ ತಕ್ಷಣ, ಅಲ್ಲಿನ ಜಾತ್ರೆಗೆ ಸೇರಿರುವ ಲಕ್ಷಾಂತರ ಜನರು ಏಕಾ ಏಕಿ ನಿಶ್ಯಬ್ಧರಾದ ಕೂಡಲೇ, ಗೊರವಯ್ಯ ಪರಾಕು ನುಡಿದಕೂಡಲೇ, ಜಿಡಿದಿದ್ದ ಬಿಲ್ಲನ್ನು ಕೈಬಿಟ್ಟು ಕೆಳಗೆ ಬೀಳುತ್ತಾರೆ. ಹಾಗೆ ಬೀಳುವ ಗೊರವಯ್ಯನನ್ನು ಭಕ್ತರು ಕೆಳಗೆ ಹಿಡಿಯುತ್ತಾರೆ. ಹೀಗೆ ಗೊರವಯ್ಯ ನುಡಿಯುವ ಕಾರಣೀಕವನ್ನು ದೈವವಾಣಿ ಎಂದೇ ಗೌರವಿಸುವ ಜನರು ಅದಕ್ಕನುಗುಣವಾಗಿ ನಡೆದುಕೊಂಡು ಹೋಗುತ್ತಾರೆ. ಹೀಗೆ ಕಾರಣಿಕ ನುಡಿಯುವ ಗೊರವಯ್ಯನ ಮಾತನ್ನು ಈಶ್ವರನ ಮಾತು ಎಂದೇ ಭಕ್ತರು ನಂಬುತ್ತಾರೆ. ದೇವರೇ ಗೊರವನ ಬಾಯಿಂದ ಕಾರಣಿಕ ನುಡಿಸುತ್ತಾನೆ ಎಂಬ ಮಾತು ಪ್ರಚಲಿತದಲ್ಲಿದೆ.
ಹೀಗೆ ಸಾವಿರಾರು ವರ್ಷಗಳಿಂದಲೂ ಅನೂಚಾನಾಗಿ ನಡೆದುಕೊಂಡು ಬಂದಿರುವ ನಂಬಿಕೆಗಳಿಗೆ ಯಾವುದೇ ಜಾತಿ, ಧರ್ಮದ ಆಚಾರ ವಿಚಾರದ ಸೋಂಕಿಲ್ಲದೇ, ಶುದ್ಧ ಮನಸ್ಸಿನ ಭಕ್ತಾದಿಗಳ ನಂಬಿಕೆಯಿಂದಲೇ ನಡೆದುಕೊಂಡು ಬಂದಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಚಾರ್ವಾಕಮನಸ್ಸಿನ ಕೆಲವು ವಿಕೃತ ಜನರು ಜನರ ಇಂತಹ ನಂಬಿಕೆಗಳಿಗೂ ಜಾತೀ ಧರ್ಮವನ್ನು ಬಳಿದು ಅದನ್ನು ವೈದೀಕ ಧರ್ಮದ ಆಚರಣೆ ಮೂಲನಿವಾಸಿಗಳ ಆಚರಣೆ ಎಂಬುದಾಗಿ ವಿಶ್ಲೇಷಣೆ ಮಾಡುತ್ತಾ ಅನಗತ್ಯವಾಗಿ ಜನರ ಮನಸ್ಸಿನಲ್ಲಿ ಇಲ್ಲ ಸಲ್ಲದ ತಪ್ಪು ಕಲ್ಪನೆಗಳನ್ನು ಮೂಡಿಸಿ ಮತ್ತೆ ಮತ್ತೆ ಹಿಂದೂಗಳನ್ನು ಒಡೆಯುವ ಹುನ್ನಾರ ಮಾಡುತ್ತಿರುವುದು ನಿಜಕ್ಕೂ ವಿಪರ್ಯಾಸದ ಸಂಗತಿಯಾಗಿದೆ.
ಕೆಲವು ಪಟ್ಟ ಭಧ್ರ ಹಿತಾಸಕ್ತಿಗಳು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಜನರು ಅತ್ಯಂತ ಭಕ್ತಿ ಭಾವನೆಗಳಿಂದ ನಂಬುವ ಈ ರೀತಿಯ ದೈವ ನರ್ತಕರ ಬಾಯಿಯಿಂದ ತಮಗೆ ಅನುಕೂಲವಾಗುವಂತಹ ವಿಷಯಗಳನ್ನು ಹೇಳಿಸುವ ಮಟ್ಟಕ್ಕೆ ಹೋಗಿರುವುದು ನಿಜಕ್ಕೂ ಜನರ ನಂಬಿಕೆಗೆ ಬಗೆಯುವ ದ್ರೋಹವಾಗಿದೆ ಎಂದರೂ ತಪ್ಪಾಗದು. ಕಾಂತಾರ ಸಿನಿಮಾದಲ್ಲೇ ತೋರಿಸಿರುವಂತೆ, ದೈವ ನರ್ತಕನಿಗೆ ಕೆಲವು ಎಕರೆ ಜಮೀನು ಕೊಡುವ ಆಸೆ ತೋರಿಸಿ ಅವನ ಬಾಯಿಯಿಂದ ಈ ಊರಿನ ಜಮೀನು ಜಮೀನ್ದಾರರಿಗೆ ಸೇರಿದ್ದು ಅದನ್ನು ಊರಿನ ಜನರು ಬಿಟ್ಟು ಕೊಡಬೇಕು ಎಂದು ಹೇಳಿಸಲು ಮುಂದಾಗುತ್ತಾನೆ ಮತ್ತು ಅದಕ್ಕೊಪ್ಪದ ಆ ದೈವ ನರ್ತಕನನ್ನು ಕೊಂದು ಹಾಕಿರುತ್ತಾನೆ. ಇದೇ ರೀತಿಯ ಹುನ್ನಾರ ಸುಮಾರು ಮೂರು ದಶಕಗಳ ಹಿಂದೆ ನಮ್ಮೂರಿನಲ್ಲೇ ನಮ್ಮ ಕುಟುಂಬಕ್ಕೇ ನಡೆದಿದ್ದ ಪ್ರಸಂಗ ಬಹಳ ರೋಚಕವಾಗಿದೆ.
ನೂರಾರು ವರ್ಷಗಳ ಹಿಂದಿನಿಂದಲೂ ವಂಶ ಪಾರಂಪರ್ಯವಾಗಿ ಊರ ಶ್ಯಾನುಭೋಗತನವನ್ನು ಮಾಡಿಕೊಂಡು ಬರುತ್ತಿದ್ದ ನಮ್ಮ ಕುಟುಂಬ ಅದರ ಜೊತೆ ಜೊತೆಯಲ್ಲಿಯೇ ನಮ್ಮ ಮನೆಯ ಹಿಂದೆಯೇ ಇದ್ದ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ದೇವಾಲಯದಲ್ಲಿ ಆ ಸ್ವಾಮಿಯನ್ನು ಭಕ್ತಿಯಿಂದ ಪೂಜಿಸಿಕೊಂಡು ಬಂದಿದ್ದರು. ನಂತರದ ದಿನಗಳಲ್ಲಿ ಶ್ಯಾನುಭೋಗತನವೂ ಹೋದ ನಂತರ ಊರಿನಲ್ಲಿ ಸರಿಯಾದ ಮಳೆಯಾಗದ ಕಾರಣ, ಇದ್ದ ಮೂರ್ನಾಲ್ಕು ಎಕರೆ ಜಮೀನಿನಲ್ಲಿ ಬೆಳೆಯೂ ಬಾರದೇ ಹೊದಾಗ, ದೇವರ ಪೂಜೆಗೆಂದು ಪ್ರತೀ ತಿಂಗಳೂ ಸರ್ಕಾರ ಕೊಡುತ್ತಿದ್ದ 10-15 ರೂಪಾಯಿ ದೇವರ ದೀಪದ ಎಣ್ಣೆಗೇ ಖರ್ಚಾಗುತ್ತಿದ್ದ ಕಾರಣ, ಅನಿವಾರ್ಯವಾಗಿ ಹೊಟ್ಟೆಯ ಪಾಡಿಗಾಗಿ ಉದ್ಯೋಗವನ್ನು ಅರಸಿಕೊಂಡು ನಮ್ಮ ತಂದೆ, ಚಿಕ್ಕಪ್ಪನವರು ಬೆಂಗಳೂರು ಮೈಸೂರು ನಗರಕ್ಕೆ ವಲಸೆ ಬಂದಾಗ ವಯಸ್ಸಾದ ತಾತ ಮತ್ತು ಅಜ್ಜಿ ದೇವರ ಪೂಜೆಯನ್ನು ನಡೆಸಿಕೊಂಡು ಬರುತ್ತಿದ್ದರು
ವಯೋಸಹಜವಾಗಿ ನಮ್ಮ ತಾತನವರು ಕಾಲವಾದಾಗ, ದೇವರ ಪೂಜೆಮಾಡಲು ಯಾರೂ ಇಲ್ಲದಿದ್ದಾಗ ಕೆಲ ಕಾಲ ಅಜ್ಜಿಯವರೇ ಪೂಜೆ ಮಾಡಿ ನಂತರ ಅದೂ ಸಮಂಜಸ ಎನಿಸಿದ ಕಾರಣ, ಆ ದೇವಾಲಯ ಧಾರ್ಮಿಕ ದತ್ತಿಯ ಇಲಾಖೆಯ ಸುಪರ್ಧಿಗ ಒಳಪಟ್ಟಿದ್ದರಿಂದ ಅಲ್ಲಿನ ಇಲಾಖೆಗೆ ಪತ್ರ ಬರೆದು ಇನ್ನು ಮುಂದೆ ನಮ್ಮ ಕುಂಟುಂಬಸ್ಥರು ಈ ದೇವಾಲಯದ ಅರ್ಚಕವೃತ್ತಿಯನ್ನು ನಡೆಸಲು ಆಗುತ್ತಿಲ್ಲವಾದ್ದರಿಂದ ಅದಕ್ಕೆ ಸೂಕ್ತವಾದ ವ್ಯವಸ್ಥೆಯನ್ನು ಮಾಡಬೇಕೆಂದು ವಿವರಿಸಿ ದೇವರಿಗೆ ಸಂಬಂಧಪಟ್ಟಿದ್ದ ಒಡವೆ ವಸ್ತ್ರಗಳೆಲ್ಲವನ್ನೂ ಅವರಿಗೆ ಒಪ್ಪಿಸಿ ಬಂದಿದ್ದರು.
ನಾವೊಂದು ಬಗೆದರೆ ಊರೊಂದು ಬಗೆದೀತು ಎನ್ನುವಂತೆ, ಈ ದೇವಾಲಯಕ್ಕೆ ಯಾವುದೇ ಆದಾಯವಿಲ್ಲದೇ ಇರುವುದು ಮತ್ತು ನಮ್ಮ ಕುಟುಂಬ ನಿರ್ವಹಣೆಗೆ ಅಗತ್ಯವಿರುವ ಜಮೀನು ಸಹಾ ನಮ್ಮ ಬಳಿ ಇಲ್ಲದಿರುವ ಸಂಗತಿ ಗೊತ್ತಿದ್ದರೂ, ಊರಿನ ಕೆಲವರು ನಮ್ಮ ಕುಟುಂಬ ಅರ್ಚಕ ವೃತ್ತಿಯನ್ನು ತ್ಯಜಿಸಿದ್ದನ್ನು ಸಹಿಸಲಾಗದೇ, ವರ್ಷಕ್ಕೊಮ್ಮೆ ನಡೆಯುವ ಊರ ಹಬ್ಬದ ಸಮಯದಲ್ಲಿ ನಮ್ಮೂರಿನ ಜನರು ನಂಬುವ ದೈವ ಹೆಬ್ಬಾರಮ್ಮ ಮತ್ತು ಚಾವಟಿಯಮ್ಮನ ಹೊರುವ ಅರ್ಚಕರ (ದೈವ ನರ್ತಕರು) ತಲೆ ಕೆಡೆಸಿಯೋ ಇಲ್ಲವೇ ಅಮಿಷವನ್ನು ಒಡ್ಡಿಯೋ, ಹಬ್ಬದ ಸಮಯದಲ್ಲಿ, ಅದೇ ಚಾವಟಿಯಮ್ಮನ ಬಾಯಿಯಿಂದ ಈ ದೇವರ ಪೂಜೆಯನ್ನು ನಿಮ್ಮ ಕುಟುಂಬದವರೇ ಮುಂದುವರೆಸಿಕೊಂಡು ಹೋಗಬೇಕು ಎಂಬ ಫರ್ಮಾನು ಹೋರಡಿಸಿದ್ದಲ್ಲದೇ, ಅದಾಗಲೇ 70ರ ಆಸುಪಾಸಿನ ವಯಸ್ಸಿನಲ್ಲಿದ್ದ ನಮ್ಮ ಅಜ್ಜಿಯವರಿಗೆ ಚಾವಟಿಯಮ್ಮನ ಬೆತ್ತದಿಂದ ಹೊಡೆಸುವ ಮೂಲಕ ತಮ್ಮ ವಯಕ್ತಿಕ ತೆವಲನ್ನು ತೀರಿಸಿಕೊಂಡಿದ್ದರು.
ಹುಟ್ಟಿ ಬೆಳೆದು ಊರಿನಲ್ಲೇ ಈ ರೀತಿಯ ಅಪಮಾನಕ್ಕೆ ಒಳಗಾಗ ಬೇಕಾದ ಮುಜುಗೊರದ ಪರಿಸ್ಥಿತಿ ಎದುರಾದರೂ, ಊರಿನ ಘನತೆಗೆ ನಮ್ಮಿಂದ ಚ್ಯುತಿ ತಾರಬಾರದೆಂದು ತಾಳ್ಮೆ ವಹಿಸಿ ಕಾನೂನಾತ್ಮಕವಾಗಿ ಮತ್ತು ತಾಳ್ಮೆ ವಹಿಸಿ ಧಾರ್ಮಿಕ ದತ್ತಿಯ ಇಲಾಖೆಯ ಮುಖೇನವಾಗಿಯೇ ಅಧಿಕೃತವಾಗಿ ನಮ್ಮೂರಿನ ನಮ್ಮ ಸಂಬಂಧಿಗಳೇ ಆಗಿರುವ ಮತ್ತೊಂದು ಕುಟುಂಬಕ್ಕೆ ಆ ದೇವಾಲಯದ ಅರ್ಚಕ ವೃತ್ತಿಯನ್ನು ವರ್ಗಾಯಿಸಿದರ ಪರಿಣಾಮ ಇಂದಿಗೂ ದೇವರ ಪೂಜೆ ನಿರ್ವಿಘ್ನವಾಗಿ ನಡೆದುಕೊಂಡು ಬರುತ್ತಿದ್ದು ಇತ್ತೀಚೆಗೆ ಆ ದೇವಾಲಯ ಶಿಥಿಲಾವಸ್ಥೆ ತಲುಪಿದ್ದ ಕಾರಣ, ಸಕಲ ಭಕ್ತಾದಿಗಳ ಸಹಕಾರದಿಂದ ಭವ್ಯವಾದ ನೂತನ ದೇವಾಲಯ ನಿರ್ಮಾಣವಾಗುತ್ತಿರುವುದು ಸಂತಸದ ವಿಷಯವಾಗಿದೆ.
ಹೀಗಾಗಿ ನದಿ ಮೂಲ, ಋಷಿ ಮೂಲ ಹುಡುಕ ಬಾರದು ಎಂಬುದು ಗಾದೆ ಮಾತಿನಂತೆ ದೇವ, ದೈವ ಮತ್ತು ದೈವ ನರ್ತಕರು ಇವಲ್ಲವೂ ನಮ್ಮ ದೇಶದ ಜನರ ನಂಬಿಕೆಗಳಾಗಿದ್ದು, ಅನಗತ್ಯವಾಗಿ ಅದರ ಮೂಲವನ್ನು ಕೆದಕುತ್ತಾ, ತಮ್ಮ ಸೈದ್ದಾಂತಿಕ ವಿರೋಧಾಭಾಸಕ್ಕಾಗಿ ಹೇಳಿಕೆಗಳನ್ನು ಕೊಡುತ್ತಾ, ಜನರ ಭಾವನೆಗಳನ್ನು ಮತ್ತು ನಂಬಿಕೆಗಳನ್ನು ಕೆಣಕುವುದು ಒಳ್ಳೆಯ ಸಂಗತಿಯಲ್ಲ ಎನ್ನುವುದೇ ಸಕಲ ಸನಾತನ ಹಿಂದೂಗಳ ನಂಬಿಕೆಯಾಗಿದೆ. ಇನ್ನೂ ಸನಾತನ ಹಿಂದೂ ಸಂಪ್ರದಾಯ, ಸಂಸ್ಕಾರ ಮತ್ತು ಅಚರಣೆಗಳ ಬಗ್ಗೆ ಮತ್ತೊಬ್ಬರಿಗೆ ತಿಳಿ ಹೇಳುವಷ್ಟು ಬೌದ್ಧಿಕಮಟ್ಟ ನಮಗಿಲ್ಲದಿರುವಾಗ, ಮತ್ತೊಬ್ಬರ ನಂಬಿಕೆ ಮತ್ತು ವಿಚಾರಗಳ ಬಗ್ಗೆ ಅವಹೇಳನ ಮಾಡುವುದಕ್ಕೂ ಅಧಿಕಾರ ಯಾರಿಗೂ ಇರುವುದಿಲ್ಲ ಎನ್ನುವುದೇ ಎಲ್ಲರ ಭಾವನೆಯಾಗಿದೆ. ಆದಕ್ಕೇ ಅಲ್ವೇ ಆದಿ ಶಂಕರಾಚಾರ್ಯರು ಅತ್ಯಂತ ಸರಳವಾಗಿ ಯದ್ಭಾವಂ, ತದ್ಭತಿ ಎಂದಿರುವುದು.
ಏನಂತೀರೀ?
ನಿಮ್ಮವನೇ ಉಮಾಸುತ