ಸಾಧಾರಣವಾಗಿ ನಮ್ಮಲ್ಲಿನ ಬಹುತೇಕರು ವಾಹನಗಳಲ್ಲಿ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಹೋಗುತ್ತಿರುವಾಗ, ಅಯಾಯಾ ರಸ್ತೆಗಳಿಗೆ ಮತ್ತು ಅಲ್ಲಿನ ವಾಹನಗಳ ಸಂಚಾರದ ದಟ್ಟಣೆಯ ಅನುಗುಣವಾಗಿ ವೇಗದ ಮಿತಿಯನ್ನು ಅಳವಡಿಸಿದ್ದರೂ, ತುರ್ತಾಗಿ ಹೋಗುವ ಅವಶ್ಯಕತೆಯಿಂದಾಗಿಯೋ, ಇಲ್ಲವೇ ಮೋಜಿಗಾಗಿಯೋ ಆ ವೇಗದ ಮಿತಿಯನ್ನೂ ದಾಟಿ ವಾಹವನ್ನು ಚಲಾಯಿಸುವುದನ್ನು ರೂಢಿ ಮಾಡಿಕೊಂಡಿರುತ್ತೇವೆ. ಹಾಗೆ ಹೆದ್ದಾರಿಗೆಳಲ್ಲಿ ಹೋಗುವಾಗ ನಮ್ಮ ಕಣ್ಣಿಗೆ ಸಂಚಾರೀ ವಿಭಾಗದ ಕಡೆಯಿಂದ ಅಪಘಾತಕ್ಕೆ ಅವಸರವೇ ಕಾರಣ ಎನ್ನುವ ಫಲಕವೋ ಇಲ್ಲವೇ, ಅತಿ ವೇಗ ತಿಥಿ ಬೇಗ ಎಂಬ ಫಲಕವೋ ಕಣ್ಣಿಗೆ ಬಿದ್ದರೂ ಅದನ್ನು ನೋಡೀಯೋ ನೋಡದಂತೆ ವೇಗವಾಗಿ ವಾಹನವನ್ನು ಚಲಾಯಿಸಿರುತ್ತೇವೆ. ಇದೇ ರೀತಿಯಲ್ಲೇ ಮೋಜು ಮಸ್ತಿಗಾಗಿ the thrill which kills ಎನ್ನುವುದು ಅಕ್ಷರಶಃ ಪಾಲನೆಯಾದ ಅತ್ಯಂತ ಘನ ಘೋರವಾದ ಪ್ರಸಂಗವನ್ನು ಬಹಳ ನೋವಿನಿಂದ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.
ಸುವ್ಯವಸ್ಥಿತ ರಸ್ತೆಗಳು ದೇಶದ ಆರ್ಥಿಕ ಆಸ್ತಿ. ರಸ್ತೆಗಳು ಸುವ್ಯವಸ್ಥಿತವಾಗಿದ್ದಲ್ಲಿ, ಹಳ್ಳಿ ಹಳ್ಳಿಗಳೂ ದೇಶದ ಪ್ರಮುಖ ನಗರಗಳೊಂದಿಗೆ ಸುಲಭವಾಗಿ ಸಂಪರ್ಕಿಸಿದಾಗ, ಜನರು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಸುಲಭವಾಗಿ ಮತ್ತು ಅತ್ಯಂತ ವೇಗವಾಗಿ ತಲುಪಬಹುದು ಮತ್ತು ಅದೇ ರೀತಿಯಲ್ಲಿ ಹಳ್ಳಿಗರೂ ಸಹಾ ತಮ್ಮ ಕೃಷಿ ಉತ್ಪನ್ನಗಳನ್ನು ನಗರಕ್ಕೆ ಸುಲಭವಾಗಿ ತಂದು ವ್ಯಾಪಾರ ಮಾಡಬಹುದು ಎಂಬ ಉದ್ದೇಶದಿಂದ ದೇಶದ ಅತ್ಯಂತ ಪ್ರಭಾವಿ ಮತ್ತು ದೂರದೃಷ್ಟಿಯ ಪ್ರಧಾನಿಗಳೆಂದೇ ಪ್ರಖ್ಯಾತರಾದ ಅಜಾತ ಶತ್ರುಗಳಾಗಿದ್ದ ಶ್ರೀ ಅಟಲ್ ಬಿಹಾರಿ ವಾಜಪೇಯಿಯವರು, 2001 ರಲ್ಲಿ ಗೋಲ್ಡನ್ ಚತುಷ್ಪಥ ಯೋಜನೆಯನ್ನು ಜಾರಿಗೆ ತಂದು ಅದರ ಮೂಲಕ ಭಾರತದ ನಾಲ್ಕು ಪ್ರಮುಖ ಮಹಾನಗರಗಳಾದ ದೆಹಲಿ, ಮುಂಬೈ, ಚೆನ್ನೈ ಮತ್ತು ಕೋಲ್ಕತ್ತಾವನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿ ಯೋಜನೆಯನ್ನು ರೂಪಿಸಿದ್ದಲ್ಲದೇ, ಪ್ರತೀ ಹಳ್ಳಿ ಹಳ್ಳಿಗಳಿಗೂ ಈ ರಸ್ತೆಯನ್ನು ತಲುಪುವಂತೆ ಮಾಡುವುದರಲ್ಲಿ ಬಹುತೇಕ ಯಶಸ್ವಿಯಾದ ಕಾರಣ, ದೇಶದಲ್ಲಿ ಆರ್ಥಿಕ ಪರಿಸ್ಥಿತಿ ಉತ್ತಮವಾಯಿತು.
ನಂತರ 2014ರಲ್ಲಿ ಶ್ರೀ ನರೇಂದ್ರ ಮೋದಿಯವರು ಪ್ರಧಾನಿಗಳಾಗಿ, ಶ್ರೀ ನಿತಿನ್ ಘಡ್ಕರಿಯವರು ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವರಾದ ಮೇಲಂತೂ ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣವು ಅತ್ಯಂತ ವೇಗವನ್ನು ಪಡೆದು ಸದ್ಯಕ್ಕೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯದ (MoRTH) ಪ್ರಕಾರ, ಭಾರತದಲ್ಲಿ 599 ರಾಷ್ಟ್ರೀಯ ಹೆದ್ದಾರಿಗಳಿದ್ದು, ಮಾರ್ಚ್ 2021ರ ವರದಿಯಂತೆ ದೇಶದಲ್ಲಿ 151,019 km (93,839 mi) ರಾಷ್ಟ್ರೀಯ ಹೆದ್ದಾರಿಗಳನ್ನು ಹೊಂದಿದೆ. ಈ ರಾಷ್ಟ್ರೀಯ ಹೆದ್ದಾರಿಗಳು ಭಾರತದ ಒಟ್ಟು ರಸ್ತೆ ಜಾಲದ 2.7% ರಷ್ಟಿದ್ದು, ಭಾರತವು ವಿಶ್ವದ ಎರಡನೇ ಅತಿ ದೊಡ್ಡ ರಸ್ತೆ ಜಾಲವನ್ನು ಹೊಂದಿರುವ ರಾಷ್ಟ್ರವಾಗಿದೆ. ಈ ರಸ್ತೆಯ ಜಾಲದ ಮೂಲಕವೇ ದೇಶದ ಎಲ್ಲಾ ಸರಕುಗಳ 64.5% ರಷ್ಟನ್ನು ಸಾಗಿಸಿದರೆ, ಭಾರತದ ಒಟ್ಟು ಪ್ರಯಾಣಿಕರ ದಟ್ಟಣೆಯ 90% ರಷ್ಟು ಪ್ರಯಾಣಿಸಲು ರಸ್ತೆ ಜಾಲವನ್ನೇ ಬಳಸುತ್ತಾರೆ.
ಇದೇ ಯೋಜನೆಯ ಅಂಗವಾಗಿ ಪ್ರಧಾನಿಗಳಾದ ಶ್ರೀ ಮೋದಿಯವರು ನವೆಂಬರ್ 2021 ರಲ್ಲಿ ಉದ್ಘಾಟಿಸಿದ್ದ ಪೂರ್ವ ಉತ್ತರ ಪ್ರದೇಶದ ಘಾಜಿಪುರ ಜಿಲ್ಲೆ ಮತ್ತು ಲಕ್ನೋವನ್ನು ಸಂಪರ್ಕಿಸುವ ಎಕ್ಸ್ಪ್ರೆಸ್ವೇ ರಸ್ತೆಯಲ್ಲಿ 14 ಅಕ್ಟೋಬರ್ 2022 ರಂದು ಬಿಹಾರದ ಡೆಹ್ರಿ ನಿವಾಸಿ ಆನಂದ್ ಪ್ರಕಾಶ್ (35), ಬಿಹಾರದ ಔರಂಗಾಬಾದ್ ಮೂಲದ ಅಖಿಲೇಶ್ ಸಿಂಗ್ (35) ಮತ್ತು ದೀಪಕ್ ಕುಮಾರ್ (37) ಅವರ ಜೊತೆ ಮತ್ತೊಬ್ಬ ಸ್ನೇಹಿತ ಹೊಸದಾಗಿ ಖರೀಧಿಸಿದ BMW ಕಾರಿನಲ್ಲಿ ಸುಲ್ತಾನ್ಪುರದಿಂದ ದೆಹಲಿಗೆ ಅದೇ ರಸ್ತೆಯಲ್ಲಿ ಪ್ರಯಾಣಿಸುತ್ತಿದ್ದಾರೆ. ಆ ರಸ್ತೆಯಲ್ಲಿ ವೇಗದ ಮಿತಿಯನ್ನು ಗಂಟೆಗೆ 100 ಕಿಲೋಮೀಟರ್ ಎಂದು ನಿಗದಿಪಡಿಸಲಾಗಿದ್ದರೂ, ಗೆಳೆಯರೆಲ್ಲರೂ ಹೊಸಾ ಕಾರಿನ ವೇಗದ ಮಿತಿಯನ್ನು ಪರೀಕ್ಷಿಸುವ ಸಲುವಾಗಿ ವೇಗದ ಮಿತಿಯನ್ನು ಗಂಟೆಗೆ 250 ಕಿಮೀ ನಿಂದ ಸುಮಾರು 300 ಕಿಮೀ ವರೆಗೂ ಹೆಚ್ಚಿಸಿದ್ದಾರೆ.
ಹೀಗೆ ಕೇವಲ ವೇಗವಾಗಿ ಕಾರ್ ಚಲಿಸುವ ಜೊತೆ ಜೊತೆಯಲ್ಲಿಯೇ ತಮಗಾಗುತಿರುವ ರೋಮಾಂಚನದ ಅನುಭವವನ್ನು ತಮ್ಮ ಇತರೇ ಗೆಳೆಯರೊಂದಿಗೆ ಹಂಚಿಕೊಳ್ಳುವ ಸಲುವಾಗಿ ಫೇಸ್ ಬುಕ್ ಲೈವ್ ಸಹಾ ಮಾಡುತ್ತಿರುತ್ತಾರೆ. ವಾಹನವನ್ನು ರೋಹ್ತಾಸ್ನದ ಖಾಸಗಿ ವೈದ್ಯಕೀಯ ಕಾಲೇಜಿನ ಪ್ರಾಧ್ಯಾಪಕರಾಗಿದ್ದ ಡಾ.ಆನಂದ್ ಪ್ರಕಾಶ್ ಅವರು ಚಲಾಯಿಸುತ್ತಿದ್ದರು. ಕಾರಿನ ವೇಗ 230 ಕಿ.ಮೀ ಮುಟ್ಟುವುದನ್ನು ಗಮನಿಸಿ, ಕಾರಿನ ವೇಗವನ್ನು ತಗ್ಗಿಸುವ ಸಲುವಾಗಿ ಬ್ರೇಕ್ ಹಾಕಿದಾಗ, ಅವರ ಪಕ್ಕದಲ್ಲಿದ್ದವರು ಅರೇ ಬ್ರೇಕ್ ಏಕೆ ಹಾಕುತ್ತಿದ್ದೀರಿ? ಕಾರನ್ನು ನಿಧಾನಗೊಳಿಸಬೇಡಿ. ಹೀಗೆ ನಿಧಾನಗೊಳಿಸಿದರೆ ನಾವು ಮತ್ತೆ ವೇಗವನ್ನು ಪಡೆದು ಕೊಳ್ಳಲು ಸಾಧ್ಯವಿಲ್ಲ ಇನ್ನೂ ವೇಗವಾಗಿ ಚಲಾಯಿಸಿ ಎಂದು ಪುಸಲಾಯಿಸಿದ ಪರಿಣಾಮ ಚಾಲಕರು ವಾಹನದ ವೇಗವನ್ನು ಹೆಚ್ಚಿಸಿದ್ದಾರೆ. ಆಗ ಕಾರಿನ ವೇಗ ಸುಮಾರು 300 ಕಿಮೀ ತಲುಪುತ್ತಿದ್ದಂತೆಯೇ, ಅದೇ ವಾಹನದಲ್ಲಿದ್ದ ಮತ್ತೊಬ್ಬ ಸ್ನೇಹಿತರು, ಅಯ್ಯೋ ಈ ಪರಿಯಾದ ವೇಗದಲ್ಲಿ ವಾಹವನ್ನು ಚಲಾಯಿಸಿದಲ್ಲಿ ಖಂಡಿತವಾಗಿಯೂ ನಾವೆಲ್ಲರೂ ಸತ್ತೇ ಹೊಗುತ್ತೇವೆ ಎಂದು ಹೇಳಿರುವ ಸಂಗತಿಯೂ ಸಹಾ ಆ ಫೇಸ್ ಬುಕ್ ಲೈವ್ ನಲ್ಲಿ ದಾಖಲಾಗಿದೆ.
ದುರಾದೃಷ್ಟವಷಾತ್ ಮುಂದಿನ ಕೆಲವೇ ಕೆಲವು ಸೆಕೆಂಡುಗಳಲ್ಲಿ ಹಾಗೆ ಹೇಳಿದ ಸ್ನೇಹಿತರ ಎಚ್ಚರಿಕೆಯ ಮಾತುಗಳು ನಿಜವಾಗಿ ಹೋಗಿ, ವಾಹನಚಲಾಯಿಸುತ್ತಿದ್ದ ಚಾಲಕರ ನಿಯಂತ್ರಣ ತಪ್ಪಿ ಎದುರಿಗೆ ಬರುತ್ತಿದ್ದ ಅತ್ಯಂತ ದೊಡ್ಡದಾದ ಕಂಟೇನರ್ ಲಾರಿಗೆ ಗುದ್ದಿದ ಪರಿಣಾಮ, ಸದ್ಯದ ಕಾರುಗಳ ಪೈಕಿ ಅತ್ಯಂತ ಐಷಾರಾಮಿ ಕಾರುಗಳಲ್ಲಿ ಒಂದಾಗಿರುವ, ವಿನ್ಯಾಸ ಮತ್ತು ಕರಕುಶಲತೆಯ ಜೊತೆಗೆ ಸುರಕ್ಷತೆಯಲ್ಲೂ ಉನ್ನತ ದರ್ಜೆಯನ್ನು ಹೊಂದಿದ್ದಂತಹ BMW ಕಾರ್ ಸಹ ಕ್ಷಣ ಮಾತ್ರದಲ್ಲಿ ನುಜ್ಜು ನೂರಾದ ಪರಿಣಾಮ ವಾಹದದಲ್ಲಿದ್ದ ನಾಲ್ವರೂ ಸಹಾ ಕಾರಿನಿಂದ ದೂರಕ್ಕೆ ಎಸೆಯಲ್ಪಟ್ಟು ಗುರುತಿಸಲೂ ಅಸಾಧ್ಯವೆನಿಸುವಷ್ಟು ರೀತಿಯಲ್ಲಿ ಸುಟ್ಟು ಕರುಕಲಾಗಿ ಹೋಗಿರುವುದು ನಿಜಕ್ಕೂ ವಿಷಾಧನೀಯವೇ ಸರಿ.
ಈ ಅಪಘಾತದ ಕುರಿತಾಗಿ ತನಿಖೆಯನ್ನು ನಡೆಸುತ್ತಿರುವ ಸುಲ್ತಾನ್ಪುರದ ಎಸ್ಪಿ ಸೋಮೆನ್ ಬರ್ಮಾ ಅವರು ಬಿಎಂಡಬ್ಲ್ಯು ಮತ್ತು ಕಂಟೈನರ್ ಟ್ರಕ್ನ ತಾಂತ್ರಿಕ ತಪಾಸಣೆಯನ್ನು ವಿಧಿವಿಜ್ಞಾನ ರಾಜ್ಯ ಪ್ರಯೋಗಾಲಯದ ಸಹಾಯದಿಂದ ನಡೆಸಲಾಗುವುದಲ್ಲದೇ ಅಪಘಾತದ ಎಲ್ಲಾ ಅಂಶಗಳನ್ನು ತನಿಖೆ ಮಾಡಲಾಗುತ್ತದೆ ಎಂದಿರುವುದಲ್ಲದೇ, ಈ ಅಪಘಾತಕ್ಕೆ ಕಾರಿನ ಚಾಲಕರ ಅತಿಯಾದ ವೇಗ ಮತ್ತು ನಿರ್ಲಕ್ಷವೇ ಕಾರಣ ಎಂಬ ಸಂಗತಿ ಚೆನ್ನಾಗಿಯೇ ಅರಿವಿದ್ದರೂ, ಎತ್ತಿಗೆ ಜ್ವರ ಬಂದರೆ ಕೋಣಕ್ಕೆ ಬರೆ ಎಳೆದರಂತೆ ಎನ್ನುವ ರೀತಿಯಲ್ಲಿ ಈ ಅಪಘಾತಕ್ಕೆ ಕಾರಣವಾಗಿರುವ ಕಂಟೈನರ್ ಚಾಲಕನನ್ನು ಪತ್ತೆಹಚ್ಚಲು ತಂಡವನ್ನು ರಚಿಸಲಾಗಿದೆ ಎಂದು ಹೇಳಿರುವುದು ಹಾಸ್ಯಾಸ್ಪದವಾಗಿದೆ.
1990ರ ಸೆಪ್ಟೆಂಬರ್ 30ರ ಮುಂಜಾನೆ ತಮ್ಮ ಜೋಕುಮಾರಸ್ವಾಮಿ ಸಿನಿಮಾದ ಆರಂಭದ ಪೂಜೆಗಾಗಿ ತಡೆರಾತ್ರಿಯಲ್ಲಿ ಹೊರಟಿದ್ದ ಕನ್ನಡದ ಅತ್ಯಂತ ಪ್ರತಿಭಾವಂತ ನಟ, ನಿರ್ದೇಶಕ, ನಿರ್ಮಾಪಕ ಶ್ರೀ ಶಂಕರ್ ನಾಗ್ ತಮ್ಮ ಅಣ್ಣ ಅನಂತ್ ನಾಗ್ ರಾತ್ರಿಯ ಹೊತ್ತು ಪ್ರಯಾಣಿಸದಂತೆ ತಡೆಯಲು ಪ್ರಯತ್ನಿಸಿದರೂ ಅದನ್ನು ಕೇಳದೇ, ದಾವಣಗೆರೆ ಬಳಿಯ ಆನಗೋಡು ಗ್ರಾಮದಲ್ಲಿ ನಿದ್ದೆಯ ಮಂಪರಿನಲ್ಲಿ ನಿಂತಿದ್ದ ಕಾರಿಗೆ ಡಿಕ್ಕಿ ಹೊಡೆದು ಸಾವನ್ನಪ್ಪಿದ್ದರೆ, ಇತ್ತೀಚೆಗೆ ಸೆಪ್ಟೆಂಬರ್ 4 ರಂದು ಮುಂಬೈ-ಅಹಮದಾಬಾದ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಟಾಟಾ ಗ್ರೂಪಿನ ಮಾಜಿ ಅಧ್ಯಕ್ಷ ಸೈರಸ್ ಮಿಸ್ತ್ರಿ ಅವರು ಸಂಚರಿಸುತ್ತಿದ್ದ ಕಾರು ಅತಿಯಾದ ವೇಗದ ಕಾರಣದಿಂದಾಗಿ ಚಾಲಕರ ನಿಯಂತ್ರಣ ತಪ್ಪಿ ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ಸೇತುವೆಯ ಮೇಲೆ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಸೈರಸ್ ಮಿಸ್ತ್ರಿ ಸಾವನ್ನಪ್ಪಿದ್ದನ್ನು ಸಹಾ ನೆನಪಿಸಿಕೊಳ್ಳಬಹುದಾಗಿದೆ.
ಕಾರು ಕೇವಲ ಐಶಾರಾಮಿ ವಸ್ತುವಾಗಿರದೇ ಸುರಕ್ಷತೆಯ ಬಗ್ಗೆಯೂ ಕಾರಿನ ಮಾಲೀಕರಿಗೆ ಕಾಳಜಿಯಾಗಿರಬೇಕು. ಏರ್‌ಬ್ಯಾಗ್‌ಗಳು, ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ ಮತ್ತು EBD (ಎಲೆಕ್ಟ್ರಾನಿಕ್ ಬ್ರೇಕ್-ಫೋರ್ಸ್ ಡಿಸ್ಟ್ರಿಬ್ಯೂಷನ್ ಸಿಸ್ಟಮ್) ಜೊತೆಗೆ ಆಂಟಿ-ಲಾಕ್ ಬ್ರೇಕಿಂಗ್ ಸಿಸ್ಟಮ್‌ನಂತಹ ಉತ್ತಮ ಸಂಖ್ಯೆಯ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿರುವ ಕಾರಿನ ಜೊತೆಗೆ ಕಾರಿನ ಚಕ್ರಗಳಿಗೆ ಸರಿಯಾದ ಗಾಳಿಯನ್ನು ತುಂಬಿಸಿರುವುದಲ್ಲದೇ ನಿಯಮಿತ ಅವಧಿಯಲ್ಲಿ ಟೈರ್ಗಳನ್ನು ಬದಲಿಸುತ್ತಿರಬೇಕು.
- ಕಾರಿನಲ್ಲಿ ಪ್ರಯಾಣಿಸುವವರೆಲ್ಲರೂ ಖಡ್ಡಾಯವಾಗಿ ಸೀಟ್ ಬೆಲ್ಟ್ ಧರಿಸ ಬೇಕು.
- ಅಯಾಯಾ ರಸ್ತೆಗೆ ಅನುಗುಣವಾಗಿ ನಿಗಧಿ ಪಡಿಸಿದ ವೇಗದ ಮಿತಿಗಳನ್ನು ದಾಟಬಾರದು.
- ವಾಹನಗಳನ್ನು ನಿಯಮಿತವಾಗಿ ರಿಪೇರಿ ಮಾಡಿಸುತ್ತಿರಬೇಕು.
- ಟ್ರಾಫಿಕ್ ಸಿಗ್ನಲ್‌ಗಳನ್ನು ಮೀರದೇ ಲೇನ್ ಶಿಸ್ತನ್ನು ಕಾಪಾಡಿಕೊಳ್ಳ ಬೇಕು.
- ವಾಹನಗಳ ಮಧ್ಯೆ ಸುರಕ್ಷಿತ ಅಂತರವನ್ನು ಕಾಯ್ದುಕೊಳ್ಳಬೇಕು
- ಎಂದಿಗೂ ಮದ್ಯಪಾನ ಇಲ್ಲವೇ ಮಾದಕವಸ್ತು ಸೇವಿಸಿ ಅಮಲಿನಲ್ಲಿ ವಾಹನ ಚಲಾಯಬಾರದು
- ಆದಷ್ಟೂ ರಾತ್ರಿಯ ಹೊತ್ತಿನ ಪ್ರಯಾಣವನ್ನು ಮಾಡದಿರುವುದು ಉತ್ತಮ
- ಅರೆನಿದ್ರಾವಸ್ಥೆಯಲ್ಲಿರುವಾಗ ಎಂದಿಗೂ ವಾಹನ ಚಲಾಯಿಸಬಾರದು
ವಾಹನಗಳನ್ನು ಚಲಾಯಿಸುತ್ತಿರುವಾಗ, ಮನೆಯಲ್ಲೂ ಸಹಾ ನಮ್ಮನ್ನು ನಂಬಿರುವ ಆಪ್ತ ಕುಟುಂಬವರ್ಗವು ಕಾಯುತ್ತಿರುತ್ತದೆ ಎಂಬುದನ್ನು ಗಮನದಲ್ಲಿ ಇಟ್ಟುಕೊಂಡು ಈ ಮೇಲೆ ತಿಳಿಸಿದ ಹಾಗೆ ಸುರಕ್ಷತೆಯ ಬಗ್ಗೆ ಎಚ್ಚರ ವಹಿಸಿದರೆ ಎಲ್ಲರಿಗೂ ಉತ್ತಮ ಅಲ್ವೇ?
ಏನಂತೀರೀ?
ನಿಮ್ಮವನೇ ಉಮಾಸುತ
ತುಂಬ ಉಪಯುಕ್ತ ಕರವಾದ ಲೇಖನ
LikeLiked by 1 person