ಕನ್ನಡ ಚಿತ್ರರಂಗ ಅಂದು ಇಂದು

ಹೇಳಿ ಕೇಳಿ ಮನುಷ್ಯ ಸಂಘ ಜೀವಿ. ಅವನ ಬುದ್ಧಿ ವಿಕಸನಗೊಳ್ಳುತ್ತಾ ಹೋದಂತೆಲ್ಲಾ ತನ್ನ ಮನರಂಜನೆಗಾಗಿ ಜನಪದ ರೀತಿಯಲ್ಲಿ ಹಾಡು, ಹಸೆ, ನೃತ್ಯ, ನಾಟಕಗಳನ್ನು ಮಾಡುತ್ತಾ ಹೋದ. ಅಂದು ವಿದ್ಯೆಗಿಂತ ಜೀವನೋಪಾಯಕ್ಕಾಗಿ ಕೃಷಿ ಮತ್ತು ಅದಕ್ಕೆ ಸಂಬಂಧ ಪಟ್ಟ ಇನ್ನಿತರ ಕೆಲಸಕಾರ್ಯಗಳತ್ತ ತಲ್ಲೀನರಾದ ಕಾರಣ ತನ್ನ ವ್ಯವಹಾರಕ್ಕೆ ಅನುಕೂಲವಾಗುವಷ್ಟರ ಮಟ್ಟಿಗೆ ಓದು ಬರಹಗಳನ್ನು ಕಲಿಯುತ್ತಿದ್ದ ಕಾರಣ ಅವರಿಗೆ ಶಾಸ್ತ್ರ ಪುರಾಣಗಳನ್ನು ಅಭ್ಯಾಸ ಮಾಡಲು ಸಾಧ್ಯವಿರುತ್ತಿರಲಿಲ್ಲವಾದ್ದ ಕಾರಣ, ಪೌರಾಣಿಕ ಕಥೆಗಳು, ಭಜನೆ, ಹರಿಕಥೆ, ಯಕ್ಷಗಾನ, ರೂಪಕಗಳು ಮತ್ತು ನಾಟಕಗಳ ಮೂಲಕ ಜನಸಾಮಾನ್ಯರಿಗೆ ತಿಳಿಯುವಂತೆ ಆಗುತ್ತಿತ್ತು. ಕ್ರಮೇಣ ಆಧುನಿಕತೆ ಹೆಚ್ಚಾಗಿ ಚಲನಚಿತ್ರಗಳ ಆವಿಷ್ಕಾರ ಆಗುತ್ತಿದ್ದಂತೆಯೇ ಮೂಕಿ ನಂತರ ಟಾಕಿ ಚಿತ್ರಗಳು ಬಂದ ಮೇಲಂತೂ ಚಲನ ಚಿತ್ರಗಳ ಮೂಲಕ ಸುಲಭವಾಗಿ ಪೌರಾಣಿಕ, ಸಾಮಾಜಿಕ ಮತ್ತು ಫ್ಯಾಂಟಸೀ ಕತೆಗಳು ಸುಲಭವಾಗಿ ಜನರಿಗೆ ತಲುವಂತಾಯಿತಲ್ಲದೇ, ತನ್ಮೂಲಕ ಸಾಮಾಜಿಕವಾಗಿ ಭಾರೀ ಬದಲಾವಣೆಯನ್ನೂ ತರುವುದರಲ್ಲಿ ಯಶಸ್ವಿಯಾಗಿದೆ.

pantuli-veerannaಭಾರತದ ಚಿತ್ರರಂಗದಲ್ಲಿ ಕನ್ನಡ ಚಿತ್ರರಂಗಕ್ಕೆ ಅದರದ್ದೇ ಆದ ಘನತೆ ಮತ್ತು ಗೌರವಗಳು ಇದೆ. 1934ರಲ್ಲಿ ಸುಬ್ಬಯ್ಯ ನಾಯ್ಡು ಮತ್ತು ತ್ರಿಪುರಾಂಬ ಅಭಿನಯದ ಮೊದಲ ಕನ್ನಡ ಟಾಕಿ, ಸತಿ ಸುಲೋಚನಾ ಬಿಡುಗಡೆಯಾದರೆ, ನಂತರ ಭಕ್ತ ಧ್ರುವಬಿಡುಗಡೆಯಾದರೆ, ವರ್ಷಕ್ಕೊಂದೋ ಎರಡೋ ಕನ್ನಡ ಸಿನಿಮಾಗಳು ಬಿಡುಗಡೆಯಾಗುತ್ತಿದ್ದು ಬಹುತೇಕ ಸಿನಿಮಾಗಳು ಪೌರಾಣಿಕ ಕತೆಯಾಧಾರವಾಗಿರುತ್ತಿತ್ತು. ನಂತರದ ದಿನಗಳಲ್ಲಿ ಹಿರಿಯ ನಾಟಕಕಾರಾಗಿದ್ದ ಆರ್ ನಾಗೇಂದ್ರ ರಾವ್, ಗುಬ್ಬಿ ವೀರಣ್ಣ, ಹೊನ್ನಪ್ಪ ಭಾಗವತರು ಬಿ.ಆರ್. ಪಂತಲು ಮುಂತಾದವರೇ ನಟಿಸಿ ನಿರ್ಮಾಣ ಮಾಡುತ್ತಿದ್ದರು. ಗುಬ್ಬಿ ವೀರಣ್ಣನವರ ಗುಬ್ಬಿ ಡ್ರಾಮಾ ಕಂಪನಿಯಲ್ಲಿ ನಟಿಸುತ್ತಿದ್ದ ಮುತ್ತುರಾಜ್ ಎಂಬ ತರುಣ,1954ರಲ್ಲಿ ಬೇಡರ ಕಣ್ಣಪ್ಪ ಚಿತ್ರದ ಮೂಲಕ ನಾಯಕರಾಗಿ ತೆರೆಯ ಮೇಲೇ ಕಾಣಿಸಿಕೊಂಡ ನಂತರ ಕನ್ನಡ ಚಿತ್ರರಂಗದ ದಿಕ್ಕು ಮತ್ತು ದೆಸೆಗಳು ಬದಲಾದವು ಎಂದರೂ ಅತಿಶಯವಲ್ಲ.

kumarರಾಜಕುಮಾರ್ ಅವರನ್ನೇ ಕೇಂದ್ರವಾಗಿಟ್ಟು ಕೊಂಡು ಭಕ್ತ ಕನಕದಾಸ, ರಣಧೀರ ಕಂಠೀರವ, ಸತ್ಯ ಹರಿಶ್ಚಂದ್ರ, ಇಮ್ಮಡಿ ಪುಲಿಕೇಶಿ, ಶ್ರೀ ಕೃಷ್ಣದೇವರಾಯ, ಭಕ್ತ ಕುಂಬಾರ, ಮಯೂರ, ಬಬ್ರುವಾಹನ, ಭಕ್ತ ಪ್ರಹ್ಲಾದಂತಹ ಮುಂತಾದ ಪೌರಾಣಿಕ ಮತ್ತು ಐತಿಹಾಸಿಕವಾದ ಮತ್ತು ವೈವಿಧ್ಯಮಯವಾದ ಚಿತ್ರಗಳು ತೆರೆಕಂಡರೆ, ಅದರ ಜೊತೆ ಜೊತೆಯಲ್ಲೇ ಕಲ್ಯಾಣ್ ಕುಮಾರ್, ಉದಯ್ ಕುಮಾರ್, ರಾಜೇಶ್, ಗಂಗಾಧರ್, ಅಶ್ವತ್, ಶಿವರಾಮ್, ಶ್ರೀನಾಥ್, ಮುಂತಾದ ನಟರುಗಳ ಜೊತೆ ಎಪ್ಪತ್ತರ ದಶಕದಲ್ಲಿ ವಿಷ್ಣುವರ್ಧನ್, ಅಂಬರೀಶ್, ಅನಂತ್ ನಾಗ್, ಶಂಕರ್ ನಾಗ್ ಮುಂತಾದ ನಟರುಗಳು ಚಿತ್ರರಂಗಕ್ಕೆ ಬಂದ ನಂತರವಂತೂ ಕನ್ನಡ ಚಿತ್ರಗಳ ಸಂಖ್ಯೆಯೂ ಗಣನೀಯವಾಗಿ ಹೆಚ್ಚಿದ್ದಲ್ಲದೇ, ಉತ್ತಮ ಗುಣಮಟ್ಟದ ಚಿತ್ರಗಳು ಬರತೊಡಗಿದವು

vishnu_ambarishಎಂಭತ್ತರ ದಶಕದಲ್ಲಿ ನಟನಾಗಿ ಚಿತ್ರರಂಗಕ್ಕೆ ಬಂದು ನಂತರದ ದಿನಗಳಲ್ಲಿ ನಿರ್ಮಾಪಕ ಮತ್ತು ನಿರ್ದೇಶಕನಾದ ವಿ. ರವಿಚಂದ್ರನ್ ಸೀಮಿತವಾಗಿದ್ದ ಕನ್ನಡ ಚಿತ್ರರಂಗವನ್ನು ಕರ್ನಾಟಕದ ಹೊರಗೂ ವಿಸ್ತರಣೆ ಮಾಡಿದ್ದಲ್ಲದೇ ಆವರ ಮತ್ತು ಹಂಸಲೇಖರವರ ಜೊತೆಯಲ್ಲಿ ಬಂದ ಪೇಮಲೋಕ ಚಿತ್ರ ಕನ್ನಡ ಚಿತ್ರರಂಗದಲ್ಲಿ ಸಾರ್ವಕಲಿಕ ಧಾಖಲೆ ಬರೆದದ್ದಲ್ಲದೇ ಅವರ ಜೊತೆ ಜೊತೆಯಲ್ಲೇ ಕಾಶೀನಾಥ್, ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್, ರಮೇಶ್ ಅರವಿಂದ್, ಜಗ್ಗೇಶ್ ಮುಂತಾದವರು ಹಂತ ಹಂತವಾಗಿ ಕನ್ನಡ ಚಿತ್ರ ರಂಗದಲ್ಲಿ ಕಾಲೂರಿದರು.

ಈ ಎಲ್ಲಾ ನಟರುಗಳು ಒಂದು ಸಾಮಾಜಿಕ ಬದ್ಧತೆಯನ್ನು ಇಟ್ಟುಕೊಂಡು ಕೇವಲ ನಟನೆಗಷ್ಟೇ ತಮ್ಮನ್ನು ಸೀಮಿತವಾಗಿಸಿರಿಕೊಂಡು ಕಥೆಗೆ ಅನುಗುಣವಾಗಿ ನಟಿಸುತ್ತಿದ್ದದ್ದಲ್ಲದೇ ಅವರುಗಳ ಬಹುತೇಕ ಚಿತ್ರಗಳಲ್ಲಿ ಒಂದು ಸಾಮಾಜಿಕ ಕಳಕಳಿ ಇದ್ದು ಅದರಿಂದ ಸಾಮಾಜಿಕ ಬದಲಾವಣೆಗೆ ಪೂರಕವಾಗುತ್ತಿತ್ತು. ರಾಜಕುಮಾರ್ ಅವರ ಬಂಗಾರದ ಮನುಷ್ಯ ಚಿತ್ರದಿಂದ ಪ್ರಭಾವಿತರಾಗಿ ಅದೆಷ್ಟೋ ಜನ ಕುಡಿತ ಬಿಟ್ಟರೆ, ಇನ್ನೂ ಸಾವಿರಾರು ಜನರು ಪಟ್ಟಣದಿಂದ ಹಳ್ಳಿಗೆ ಹಿಂದಿರುಗಿ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದದ್ದು ಗಮನಾರ್ಹವಾಗಿತ್ತು.

ಆದರೇ 1990-2000ರದ ಆಸುಪಾಸಿನಲ್ಲಿ ಉಪೇಂದ್ರ, ಸುದೀಪ್, ದರ್ಶನ್, ದುನಿಯಾವಿಜಯ್, ವಿಜಯ ರಾಘವೇಂದ್ರ, ಗಣೇಶ್, ಶ್ರೀನಗರ ಕಿಟ್ಟಿ, ಪುನೀತ್, ಯಶ್ ಮುಂತಾದ ನಟರುಗಳು ಚಿತ್ರರಂಗಕ್ಕೆ ಧಾಳಿ ಇಟ್ಟ ನಂತರವಂತೂ ಕನ್ನಡ ಚಿತ್ರರಂಗ ಸಂಪೂರ್ಣವಾಗಿ ಮನೋರಂಜನೆಗಷ್ಟೇ ಸೀಮಿತವಾಗ ತೊಡಗಿತು. ಇದರಲ್ಲಿ ಬಹುತೇಕ ನಟರುಗಳಿಗೆ ಗಾಡ್ ಫಾದರ್ ಎನ್ನುವವರು ಇಲ್ಲದಿದ್ದ ಕಾರಣ, ತಾವೇ ತಮ್ಮ ಸಮಾನ ಮನಸ್ಕರ ತಂಡವನ್ನು ಕಟ್ಟಿಕೊಂಡು ತಮ್ಮ ತಮ್ಮಲ್ಲೇ ಅಲ್ಪ ಸ್ವಲ್ಪ ಹಣ ಹಾಕಿಕೊಂಡೋ ಇಲ್ಲವೇ, ಯಶಸ್ವಿಯಾದ ಹಿಂದಿ, ತಮಿಳು, ತೆಲುಗು ಸಿನಿಮಾಗಳನ್ನು ರಿಮೇಕ್ ಮಾಡುತ್ತಾ, ಹಣ ಮಾಡುವುದರಲ್ಲಿ ಮತ್ತು ಒಂದು ರೀತಿಯಲ್ಲಿ ತಮ್ಮನ್ನೇ ತಾವೇ ವೈಭವೀಕರಿಸುವ ಸಿನಿಮಾಗಳತ್ತವೇ ಗಮನ ಹರಿಸಿದ ಕಾರಣ, ಕನ್ನಡ ಚಿತ್ರರಂಗ ಮತ್ತೆ ಗುಣಾತ್ಮಕವಾಗಿ ಕೆಳಮಟ್ಟಕ್ಕೆ ಇಳಿಯ ತೊಡಗಿದ್ದಂತೂ ಸುಳ್ಳಲ್ಲ.

directorsಜಿ.ವಿ ಐಯ್ಯರ್, ಎನ್ ಲಕ್ಷ್ಮೀನಾರಾಯಣ್, ಗಿರೀಶ್ ಕಾಸರವಳ್ಳಿ,  ಗಿರೀಶ್ ಕಾರ್ನಾಡ್, ಪುಟ್ಟಣ್ಣ ಕಣಗಾಲ್, ಟಿ ಎಸ್ ನಾಗಾಭರಣ, ಶಂಕರ್ ನಾಗ್, ಪಿ. ಶೇಷಾದ್ರಿ ಮುಂತಾದ ನಿರ್ದೇಶಕರುಗಳ ಕನ್ನಡದ ಶ್ರೇಷ್ಟ ಕಾದಂಬರಿಯಾಧಾರಿತ ಚಿತ್ರಗಳು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿತ್ತು. ಈ ಎಲ್ಲಾ ನಿರ್ದೇಶಕರುಗಳು ಸಮರ್ಥವಾದ ಕತೆಗಾರರು, ಸಂಭಾಷಣೆಗಾರರು, ಹಾಡು ಬರೆಯುವವರು, ಸಂಗೀತಗಾರರನ್ನು ಗುರುತಿಸಿ ಅವರಿಂದ ಉತ್ಕೃಷ್ಟವಾದ ಕತೆ, ಹಾಡುಗಳನ್ನು ಬರೆಯಿಸಿ, ಹೃದಯಕ್ಕೆ ಮುಟ್ಟುವಂತಹ ಸಂಗೀತ ಸಂಯೋಜಿಸಿ ಆ ಕತೆಗೆ ತಕ್ಕಂತೆ ನಟ ನಟಿಯರನ್ನು ಆಯ್ಕೆ ಮಾಡುತ್ತಿದ್ದದ್ದಲ್ಲದೇ, ಮನೋರಂಜನೆಯ ಜೊತೆ ಜೊತೆಯಲ್ಲೇ ಅಂತಿಮವಾಗಿ ಆ ಸಿನಿಮಾದಲ್ಲೊಂದು ಸಂದೇಶ ಇರುತಿತ್ತು.

ravi_hamsaಯಾವಾಗ, ರವಿಚಂದ್ರನ್ ರಂತಹ ಕತೆ, ಚಿತ್ರಕತೆ, ನಿರ್ಮಾಣ, ನಿರ್ದೇಶನದ ಜೊತೆ ನಾಯಕನಾಗಿ ಅಭಿನಯಿಸಿ ಯಶಸ್ವಿಯಾದರೋ, ಅವರ ಜೊತೆಯಲ್ಲೇ ಸಂಗೀತ ಮತ್ತು ಸಾಹಿತ್ಯ ಎರಡರಲ್ಲೂ ಹಂಸಲೇಖರಂತಹವರೂ ಮುನ್ನಲೆಗೆ ಬಂದರೋ ಆಗಲೇ ನವಿಲು ನೋಡಿ ಕೆಂಭೂತ ಕುಣಿಯಿತಂತೇ ಎನ್ನುವಂತೆ, ಬಹುತೇಕರು ಅದೇ ಪ್ರಯೋಗಕ್ಕೆ ಇಳಿದು ತಮ್ಮ ಮನಸ್ಸಿಗೆ ತೋಚಿದ್ದೇ ಹಾಡು, ಗುನಿಗಿದ್ದೇ ಸಂಗೀತ, ಬಾಯಿಯಿಂದ ಹೊರಬಂದಿದ್ದೇ ಸಂಭಾಷಣೆ ಎನ್ನುವಂತೆ ಕಥೆ, ಚಿತ್ರಕಥೆ, ಸಂಭಾಷಣೆ, ಸಂಗೀತ, ಸಾಹಿತ್ಯ, ನಟನೆ, ನಿರ್ಮಾಣ, ನಿರ್ದೇಶನ ಎಲ್ಲವೋ ಒಬ್ಬರೇ ಮಾಡಲು ಮುಂದಾದಂತೆ, ಕನ್ನಡ ಚಿತ್ರರಂಗದ ಗುಣಮಟ್ಟ ಕುಸಿಯತೊಡಗಿತು. ಅದೇ ಸಮಯಕ್ಕೆ ಸರಿಯಾಗಿ ರಿಯಲ್ ಎಸ್ಟೇಟ್ ಸಹಾ ಗರಿಗೆರರಿದ್ದೇ ತಡಾ ಒಂದೆರಡು ಸೈಟ್ ಮಾರಿ ಕೋಟಿ ಹಣ ತಂದವನೇ ಹೀರೋ, ಅವನ ತೆವಲಿಗೆ ಸಹಕರಿಸುವವಳೇ ಹೀರೋಯಿನ್. ಇಂತಹ ಮಿಕಗಳಿಗೇ ಕಾಯುತ್ತಿದ್ದ ಗಾಂಧಿನಗರದ ಕೆಲವು ಬರಗೆಟ್ಟ ನಿರ್ದೇಶಕರು, ರೌಡಿಸಂ ಹಿನ್ನಲೆಯ ಚಿತ್ರಗಳ ಸರಮಾಲೆಯನ್ನೇ ಆಧರಿಸಿ, ಅದರಲ್ಲಿ ರಿಯಲಿಸ್ಟಿಕ್ ಆಗಿರಲಿ ಎನ್ನುವಂತೆ ಗಲ್ಲಿ ಗಲ್ಲಿಯ ಪುಡಿ ರೌಡಿಗಳನ್ನೆಲ್ಲಾ ಗುಡ್ಡೇ ಹಾಕಿಕೊಂಡು ನಾಯಕ ಲಾಂಗ್ ಹಿಡಿದು ಅವರನ್ನು ಸೆದೆ ಬಡಿಯುತ್ತಾ ಆಗ್ಗಾಗ್ಗೆ ನಾಯಕಿಯೊಂದಿಗೆ ಮರ ಸುತ್ತುತ್ತಾ ಹಾಡುವುವುದೇ ಸಿನಿಮಾಗಳಾದಾಗ ಮತ್ತೆ ಕನ್ನಡ ಚಿತ್ರರಂಗ ಅಧೋಗತಿ ತಲುಪಿದ್ದಂತೂ ಸುಳ್ಳಲ್ಲ.

duniyaಇವುಗಳ ಮಧ್ಯದಲ್ಲಿ ಸುನೀಲ್ ಕುಮಾರ್ ದೇಸಾಯಿ ಮತ್ತು ರಮೇಶ್ ಅರವಿಂದ್ ಶಿವರಾಜ್ ಕುಮಾರ್ ಸಂಗಮದ ನಮ್ಮೂರ ಮಂದಾರ ಹೂವೇ ತರಹದ ಸದಭಿರುಚಿಯ ಚಿತ್ರದ ಜೊತೆಯಲ್ಲೇ ಉಪೇಂದ್ರ-ಶಿವರಾಜ್ ಕುಮಾರ್ ಅವರ ಓಂ, ಓಂ ಪ್ರಕಾಶ್ ಅವರ ಲಾಕಪ್ ಡೆತ್ ಮತ್ತು AK-47 ಮುಂತಾದ ರೌಡಿಸಂ ಕುರಿತಾದ ಚಿತ್ರ ಬಿಡುಗಡೆಯಾದರೆ, 2006ರ ಅಂತ್ಯದಲ್ಲಿ ಯೋಗರಾಜ್ ಭಟ್ ನಿರ್ದೇಶನ, ಮನೋಮೋರ್ತಿ ಅವರ ಸಂಗೀತ, ಎಸ್. ಕೃಷ್ಣ ಅವರ ಕ್ಯಾಮೆರಾ ಕೈ ಚಳಕದ ಜೊತೆ ಅದಾಗಲೇ ಟಿವಿ ಕಾರ್ಯಕ್ರಮದಲ್ಲಿ ನಮಸ್ಕಾರ ನಮಸ್ಕಾರ ಎಂದು ಹೇಳುತ್ತಲೇ ಜನರಿಗೆ ಚಿರಪರಿಚಿತನಾಗಿದ್ದ ಗಣೇಶ್ ಅಭಿನಯದ ಮುಂಗಾರು ಮಳೆ  ಸಿನಿಮಾ ಮತ್ತು ಅದಾದ ಕೆಲವೇ ವಾರಗಳಲ್ಲಿ 2007ರಲ್ಲಿ ಯೋಗ ರಾಜ್ ಭಟ್ಟರ ಗೆಳೆಯ ಸೂರಿ ಮತ್ತು ಸಣ್ಣ ಪುಟ್ಟ ಫೈಟಿಂಗ್ ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ವಿಜಿ ಇಬ್ಬರನ್ನೂ ನೆಚ್ಚಿಕೊಂಡು ವಿಜಿ ಅವರ ಭಾವ (ಲೂಸ್ ಮಾದ ಅವರ ತಂದೆ) ಸಿದ್ದರಾಜು ಸಣ್ಣ ಬಜೆಟ್ ನಲ್ಲಿ ಮಾಡಿದ ದುನಿಯ ರೌಡಿಸಂ ಸಿನಿಮ. ಈ ಎರಡೂ ಸಿನಿಮಾ ಕನ್ನಡ ಚಿತ್ರರಂಗದಲ್ಲಿ ಸೂಪರ್ ಡ್ಯೂಪರ್ ಹಿಟ್ ಆಗುತ್ತಿದ್ದಂತೆಯೇ, ಸಾಲು ಸಾಲು ಅದೇ ರೀತಿಯ ಸಿನಿಮಾಗಳು ರೀಲ್ ಸುತ್ತಿ ಚಿತ್ರಮಂದಿರದಲ್ಲಿ ಬಂದದ್ದೂ ಹೋದದ್ದೂ ಗೊತ್ತೇ ಆಗಲಿಲ್ಲ. ಇವರೆಲ್ಲರ ನಡುವೆ, ಶಿವರಾಜ್ ಕುಮಾರ್, ರಮೇಶ್, ಪುನೀತ್, ಸುದೀಪ್, ದರ್ಶನ್ ಮತ್ತು ಯಶ್ ಮುಂತಾದ ನಟರುಗಳು ಗಟ್ಟಿ ಕಾಳುಗಳಾಗಿ ನಿಂತರೆ, ಜೊಳ್ಳು ಕಾಳುಗಳು ಹೋದ್ಯಾ ಪುಟ್ಟಾ ಬಂದ್ಯಾ ಪುಟ್ಟಾ ಎನ್ನುವಂತಾಯಿತಲ್ಲದೇ ಕನ್ನಡ ಚಿತ್ರರಂಗ ನಿಂತ ನೀರಾಯಿತು.

shetty_gang2015ರಲ್ಲಿ ದಕ್ಷಿಣ ಕನ್ನಡದ ಭಂಡಾರಿ ಅಣ್ಣ ತಮ್ಮಂದಿರ ಕರಾವಳಿ ಪ್ರಾಂತ್ಯದ ಹಿನ್ನಲೆಯ ಚಿತ್ರ ರಂಗಿತರಂಗ ಬಿಡುಗಡೆಯಾಗಿ ಸುಮಾರು ಒಂದು ವರ್ಷಗಳ ಕಾಲ ದೇಶ ವಿದೇಶಗಳಲ್ಲಿ ಅದ್ಭುತವಾಗಿ ಪ್ರದರ್ಶನವಾದರೆ, ಮತ್ತೆ ಕರಾವಳಿ ಪ್ರಾಂತ್ಯದ ರಕ್ಷಿತ್ ಶೆಟ್ಟಿ, ರಿಷಭ್ ಶೆಟ್ಟಿ ಮತ್ತವರ ಕರಾವಳಿ ಪ್ರಾಂತ್ಯದ ತಂಡದವರೇ ಸೇರಿ ನಿರ್ಮಿಸಿದ ರಿಕ್ಕಿ, ಕಿರಿಕ್ ಪಾರ್ಟಿ, ಭರ್ಜರಿಯಾಗಿ ಪ್ರದರ್ಶನವಾಗಿ ಗಾಂಧಿನಗರದ ಹೊರಗಡೆಯೂ ಅದ್ಭುತವಾದ ಪ್ರತಿಭೆಗಳಿವೆ ಎಂಬುದು ಜಗಜ್ಜಾಹೀರಾಯಿತು. ಇವರ ಜೊತೆಗೆ ತನ್ನ ಬೋಳು ತಲೆ ಕುರಿತಾಗಿಯೇ ಒಂದು ಮೊಟ್ಟೆಯ ಕಥೆ ಎಂಬ ಸಿನಿಮಾ ಮಾಡಿದ ನಂತರ ಗುರುಡಗಮನ ವೃಷಭವಾಹನ ಚಿತ್ರವನ್ನೂ ಮಾಡಿ ರಾಜ್ ಬಿ ಶೆಟ್ಟಿಯವರೂ ಸಹಾ ಸೈ ಎನಿಸಿಕೊಂಡರು.

yash_neeelಇವರೆಲ್ಲರ ಮಧ್ಯೆ ಸದ್ದಿಲ್ಲದೇ ಕಿರು ತೆರೆಯ ಮೂಲಕ ಹಿರಿಯ ತೆರೆಗೆ ತನ್ನ ಪ್ರತಿಭೆ ಮತ್ತು ಶ್ರಮದ ಮೂಲಕವೇ ಪ್ರವರ್ಧಮಾನಕ್ಕೆ ಬಂದ ಮೈಸೂರಿನ ಹುಡುಗ ಯಶ್ 2018 ರಲ್ಲಿ, ಯಶ್ ಅಭಿನಯದ ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್-1 ಬಾಕ್ಸ್ ಆಫೀಸ್‌ನಲ್ಲಿ ₹250 ಕೋಟಿ ಗಳಿಸಿದ ಮೊದಲ ಕನ್ನಡ ಚಿತ್ರವಾಗಿ ಕನ್ನಡ ಚಿತ್ರರಂಗವನ್ನು ಇಡೀ ವಿಶ್ವವೇ ನೋಡುವಂತಾದರೇ, ಇದರ ಮುಂದುವರಿದ ಭಾಗಬಾದ, ಕೆಜಿಎಫ್-2 ಬಾಕ್ಸ್ ಆಫೀಸ್‌ನಲ್ಲಿ ₹1000 ಕೋಟಿ ಗಳಿಸುವ ಮೂಲಕ ಹಾಲಿವುಡ್, ಬಾಲಿವುಡ್, ಕಾಲಿವುಡ್, ಟಾಲಿವುಡ್ ಹೀಗೆ ಎಲ್ಲರೂ ಕನ್ನಡ ಚಿತ್ರರಂಗದತ್ತ ತಿರುಗುವಂತೆ ಮಾಡಿತು ಎಂದರೇ ಅತಿಶಯವಲ್ಲ.

kant4ಇನ್ನೂ ಇತ್ತೀಚೆಗೆ ರಿಷಭ್ ಶೆಟ್ಟಿಯವರ ಪ್ರಕೃತಿ ಮತ್ತು ಕರಾವಳಿಯ ಸಂಸ್ಕೃತಿ ಆಧಾರಿತ ಕಾಂತಾರ ಸಿನಿಮಾ ಪ್ರಪಂಚಾದ್ಯಂತ ಭರ್ಜರಿಯಾಗಿ 25ದಿನಗಳನ್ನು ಪೂರೈಸಿ ಸಣ್ಣ ಬಡ್ಜೆಟ್ಟಿನ ಈ ಸಿನಿಮಾ 250+ ಕೋಟಿ ಗಳಿಸಿ ಮುನ್ನುಗ್ಗುತ್ತಾ ಕನ್ನಡ ಸಿನಿಮಾ ನಟರು ಮತ್ತು ತಂತ್ರಜ್ಞರಿಗೆ ದೇಶವಿದೇಶಗಳಲ್ಲಿ ಬಾರೀ ಬೇಡಿಕೆಯನ್ನು ತಂದಿರುವುದು ಉತ್ತಮ ಬೆಳವಣಿಗೆಯಾಗಿದೆ.

ಇವೆಲ್ಲದರ ಮಧ್ಯೆ, ಕೆಲವು ಕಮ್ಯೂನಿಷ್ಟ್ ಸಿದ್ದಾಂತದ ಹಿನ್ನಲೆಯುಳ್ಳ ಅದರಲ್ಲೂ ಈ ದೇಶದ ಬಹುಸಂಖ್ಯಾತ ಹಿಂದೂಗಳ ವಿರುದ್ಧ ಮತ್ತು ಆಡಳಿತ ಪಕ್ಷದ ವಿರುದ್ದ ಸೈದ್ಧಾಂತಿಕ ವಿರೋಧಾಭಾಸವಿರುವ ನಟರುಗಳಾದ, ಪ್ರಕಾಶ್ ರೈ, ಚೇತನ್ ಅಹಿಂಸ, ಅಚ್ಚುತ್, ಧನುಂಜಯ್, ಕಿಶೋರ್ ಮುಂತಾದ ನಟರುಗಳು ಸಾಧ್ಯವಿದ್ದ ಕಡೆಯಲ್ಲೆಲ್ಲಾ ತಮ್ಮ ಬೇಳೆ ಕಾಳು ಬೇಯಿಸಿಕೊಳ್ಳುತ್ತಾ, ಸಿನಿಮಾಕ್ಕೆ ತಮ್ಮದೇ ದೃಷ್ಟಿಕೋನದಲ್ಲಿ ವ್ಯಾಖ್ಯಾನ ಮಾಡುತ್ತಾ, ಎಲ್ಲೆಲ್ಲಿ ಸಾಧ್ಯವೋ ಅಲ್ಲಲ್ಲಿ ಹಿಂದೂ ಧಾರ್ಮಿಕ ನಂಬಿಕೆಗಳನ್ನು ಪ್ರತ್ಯಕ್ಷವಾಗಿಯೋ ಇಲ್ಲವೇ ಪರೋಕ್ಷವಾಗಿಯೋ ಅವಹೇಳನ ಮಾಡುತ್ತಾ ಮತ್ತು ಅದನ್ನೇ ಎಲ್ಲರೂ ಒಪ್ಪಲೇ ಬೇಕು ಎಂದು ಹಾರಾಡುತ್ತಾ ಚೀರಾಡುತ್ತಾ ಇರುವುದನ್ನೇ, ಕೆಲವು ಮಾಧ್ಯಮಗಳು ಮತ್ತು ಆ ಚಿತ್ರ ನಟರ ಅಭಿಮಾನಿಗಳು ವಿಪರೀತ ಪ್ರಚಾರ ಕೊಡುತ್ತಿರುವುದು ಸಹಾ ಕನ್ನಡ ಚಿತ್ರರಂಗದ ಬೆಳವಣಿಗೆಗೆ ಮಾರಕವಾಗಿದೆ.

head_bushಇಂತಹ ವಿಕೃತ ಮನಸ್ಥಿತಿಗಳ ಗೋಳಾಟಕ್ಕೆ ಜ್ವಲಂತ ಉದಾಹಣೆಯೆಂದರೆ, ಕಾಂತಾರ ಸಿನಿಮಾದ ಕುರಿತಾಗಿ ಚೇತನ್, ಅಚ್ಚುತ್, ಕಿಶೋರ್ ಎತ್ತುತ್ತಿರುವ ಅಪವಾದ ಮತ್ತು ಅದೇ ಚೇತನ್ ಹೆಡ್ ಬುಷ್ ಸಿನಿಮಾ ಪರ ಮಾತನಾಡಿರುವ ಸಂಗತಿ. ಕಾಂತಾರ ಹಿಂದೂ ಧರ್ಮದ ಆಚರಣೆಗಳಾದ ಭೂತದ ಕೋಲ, ದೇವ, ದೈವದ ಕುರಿತಾದ ಚಿತ್ರವಾಗಿದೆ ಎಂದು ಚಿತ್ರದ ನಿರ್ದೇಶಕರೇ ಬಹಿರಂಗವಾಗಿ ಹೇಳಿದ್ದರೆ, ಅದಕ್ಕೆ ತದ್ವಿರುದ್ದವಾಗಿ ಕಾಲ್ಸ್ ಮಾರ್ಕ್ಸ್ ಪೆರಿಯಾರ್ ಸಿದ್ದಾಂತ ಇರುವ ಚಿತ್ರ ಇದಾಗಿದೆ ಎಂದು ಅಚ್ಚುತ್ ಹೇಳಿದರೆ, ಚೇತನ್ ಅಂತೂ ಇನ್ನೂ ಮುಂದುವರೆದು, ಈ ಸಂಸ್ಕೃತಿ ಹಿಂದೂ ಸಂಸ್ಕೃತಿಯಾಗಿರದೇ, ಇದು ಮೂಲನಿವಾಸಿಗಳ ಸಂಸ್ಕೃತಿಯಾಗಿದೆ ಎಂದು ಓತ ಪ್ರೋತವಾಗಿ ಕಂಡ ಕಂಡ ಕಡೆಯಲ್ಲೆಲ್ಲಾ ಚೀರಾಡುತ್ತಿರುವ ಚೇತನ್,ಬ್ಬ ಮಾಜೀ ಪುಡಿ ರೌಡಿ ಮತ್ತೊಬ್ಬ ರೌಡಿಯನ್ನು ಮೆರೆಸುವಂತಹ ಕತೆ ಮಾಡಿದ್ದರೆ, ಇನ್ನು ಮಾಡಿರುವ ಬೆರಳೆಣಿಕೆಯ ಸಿನಿಮಾಗಳಲ್ಲಿ ಬಹುತೇಕ ರೌಡಿ ಪಾತ್ರಗಳನ್ನೇ ಮಾಡಿರುವ ನಟನೊಬ್ಬ ನಟಿಸಿ ನಿರ್ಮಾಣ ಮಾಡಿರುವ ಹೆಡ್ ಬುಷ್ ಚಿತ್ರದಲ್ಲಿ, ನಿಜವಾದ ಕಥೆಯಲ್ಲಿ ಆ ರೀತಿಯಲ್ಲಿ ಇಲ್ಲದೇ ಹೋದರೂ, ಖಳನಟರಿಗೆ ಹಿಂದೂಗಳು ಪವಿತ್ರ ಎಂದು ನಂಬುವ ವೀಸಗಾಸೆಯ ವೀರಭದ್ರವೇಷವನ್ನು ಹಾಕಿಸಿ ಅವನಿಗೆ ನಾಯಕ ಬೂಟುಗಾಲಲ್ಲಿ ಒದೆಯುವ ದೃಶ್ಯವನ್ನು ತೋರಿಸುತ್ತಿರುವುದನ್ನು ಸಮರ್ಥನೆ ಮಾಡಿಕೊಂಡು ಚಿತ್ರವನ್ನು ಚಿತ್ರವಾಗಿ ನೋಡಬೇಕು ಅದರಲ್ಲಿ ಕೊಂಕು ಹುಡುಕಬಾರದು ಎಂದು ಹೇಳುವುದು ಎಷ್ಟು ಸರಿ?

ಇನ್ನು ಹಾಕಿದ ಬಂಡವಾಳಕ್ಕೆ ಧಕ್ಕೆ ಆಗಬಾರದೆಂದು ನಟ ಮತ್ತು ಆ ಚಿತ್ರದ ನಿರ್ಮಾಪಕ ನನಗೆ ಅನ್ಯಾಯವಾಗುತ್ತದೆ. ನನ್ನ ಬೆಳವಣಿಗೆಯನ್ನು ಕೆಲವರು ಸಹಿಸುತ್ತಿಲ್ಲ ಎಂದು ಬೊಬ್ಬೆ ಹಾಕುತ್ತಾ, ಹಿಂದೆ ಬಂದ ಅನೇಕ ಸಿನಿಮಾಗಳಲ್ಲಿ ಹಾಗಿತ್ತು ಹೀಗಿತ್ತು ಅಗ ಯಾಕೆ ಮಾತಾಡಲಿಲ್ಲ? ಈಗ ಮಾತ್ರ ಹಿಂದೂ ಸಮಾಜ ಹಾರಾಡ್ತಿದೆ ಎಂದು ಬಟ್ಟೆ ಹರ್ಕೋತಿರುವವರು ತಾಳ್ಮೆಯಿಂದ ಅರಿತು ಕೊಳ್ಳಬೇಕಾಗಿರುವ ಸಂಗತಿ ಏನೆಂದರೆ, ಓಂ ಇಂದ ಹಿಡಿದು ಇಂದಿನ ಹೆಡ್ ಬುಷ್ ವರೆಗೂ ಬಂದಿರುವ ಎಲ್ಲಾ ರೌಡಿಸಂ ಮೆರೆಸುವ ಚಿತ್ರಗಳೂ ಸಹಾ ಸಮಾಜಕ್ಕೆ ಮಾರಕವೇ‌ ಸರಿ. 80ರ ದಶಕದ ಬೆಂಗಳೂರಿನ ಭೂಗತ ಲೋಕದ ರೌಡಿ ಜಯರಾಜ್ ಕುರಿತಾಗಿ ಇಂದು ತೆರೆಯಮೇಲೆ ತಂದು ಆತನನ್ನು ಇಂದ್ರ ಚಂದ್ರ ದೇವೇಂದ್ರ ಎಂದು ಮರೆಸುವುದರಿಮ್ದ ಸಮಾಜಕ್ಕೆ ಏನು ಉಪಯೋಗ? ಇದೇ ಸಿನಿಮ ನೋಡಿಕೊಂಡು ಹೊರ ಬಂದ ತರುಣನೊಬ್ಬ, ಮಾಧ್ಯಮಕ್ಕೆ ಪ್ರತಿಕ್ರಯಿಸುತ್ತಾ, ಮೇಡಂ ಫಿಲ್ಮ್ ಸೂಪರ್!! ಈ ಸಿನಿಮಾ ನೋಡಿ ನಾನೂ ಸಹಾ ರೌಡಿ‌ ಆಗ್ಬೇಕು ಅಂತಾ ಅನ್ನಿಸ್ತಾ ಇದೆ ಎಂದು ಹೇಳಿರುವುದೇ ಸಿನಿಮಾದ ಕರಾಳ ಕಥೆಯನ್ನು ಬಿಚ್ಚಿಡುತ್ತಿದೆ. ಕೇವಲ ನಾಲ್ಕು ಸಿನಿಮಾ ಮಾಡಿರೋ ನಟ ಪ್ರಸಿದ್ಧಿಯಾಗಲು ಈ ರೀತಿಯ ಅಡ್ಡದಾರಿ ಹಿಡಿಯುವುದು ಖಂಡಿತವಾಗಿಯೂ ಆತನ ಬೌದ್ಧಿಕ ದಿವಾಳಿತನವನ್ನು ಎತ್ತಿ‌ ತೋರಿಸುತ್ತದೆ.

ಬಡವರ ಮನೆಯ ವಿದ್ಯಾವಂತ ಹುಡುಗ, ಕೈ ತುಂಬಾ ಸಂಬಳ ಬರುತ್ತಿದ್ದ ಇನ್ಫೋಸಿಸ್ ಬಿಟ್ಟು ಕಲೆಯನ್ನು ನಂಬಿಕೊಂಡು ಕಷ್ಟ ಪಟ್ಟು ಕನ್ನಡ ಚಿತ್ರರಂಗದಲ್ಲಿ ಪ್ರವರ್ಧಮಾನಕ್ಕೆ ಬರಲು ಪ್ರಯತ್ನಿಸುತ್ತಿರುವ ಧನುಂಜಯ್ ಅನ್ಯಾಯವಾಗಿ ಈ ರೀತಿಯಲ್ಲಿ ಸಮಾಜದ ಕರಾಳವಾದಿಗಳ ಕೈಗೆ ಬಿದ್ದು ದಾರಿ ತಪ್ಪಿ, ಅನಾವಶ್ಯಕವಾಗಿ ಸಮಾಜದ ನಿರ್ಲಕ್ಷ್ಯಕ್ಕೆ ಒಳಗಾಗಿ ಚಿತ್ರರಂಗದಿಂದ ಕಣ್ಮರೆಯಾಗುವಂತಹ ಪ್ರಸಂಗ ಬಾರದಿರಲಿ ಎಂಬ ಉದ್ದೇಶದಿಂದ ತಿದ್ದುವ ಪ್ರಯತ್ನ ಮಾಡುತ್ತಿದೆಯೇ ಹೊರತು, ಆತನ ವಿರುದ್ದ ಯಾವುದೇ ದ್ವೇಷದ ಭಾವನೆ ಹೊಂದಿಲ್ಲ ಎನ್ನುವುದನ್ನು ಆತ ಅರಿಯಬೇಕಾಗಿದೆ.

ಇದೇ ರೀತಿ ಹಿಂದೂ ಧಾರ್ಮಿಕ ಭಾವನೆಗಳ ವಿರುದ್ಧವಾಗಿ ತೊಡೆತಟ್ಟಿ ನಿಂತ ದೇಶದ ದೊಡ್ಡ ದೊಡ್ಡ ಸ್ಟಾರ್ ನಟರುಗಳೆಲ್ಲಾ ಒಬ್ಬೊಬ್ಬರಾಗಿ ಹೇಳ ಹೆಸರಿಲ್ಲದಂತೆ ನೆಲ ಕಚ್ಚುತ್ತಾ ಇರುವುದನ್ನು ಇಂದು ಬಹುಸಂಖ್ಯಾತರ ಭಾವನಾತ್ಮಕ ಭಾವನೆಗಳ ವಿಚಾರದಲ್ಲಿ ಚೆಲ್ಲಾಟವಾಡಲು ಮುಂದಾಗುತ್ತಿರುವವರು ಗಮನಿಸಬೇಕಾಗಿದೆ. ಹಿಂದಿನಂತೆ ಹಿಂದೂಗಳನ್ನು ಹೇಗೆ ಬೇಕಾದರೂ ತೋರಿಸಬಹುದು ಎನ್ನುವ ಕಾಲಮಾನ ಬದಲಾಗಿದೆ, ಇಂದು ಹಿಂದೂ ಸಮಾಜ ಜಾಗೃತವಾಗಿ ಅಲ್ಲೇ ಡ್ರಾ ಅಲ್ಲೇ ಬಹುಮಾನ ಕೊಡುವಷ್ಟು ಒಗ್ಗಟ್ಟಾಗಿದೆ.

ತಮ್ಮ ತಪ್ಪುಗಳನ್ನು ಮುಚ್ಚಿಕೊಳ್ಳಲು ಕನ್ನಡ ಸಿನಿಮಾದಲ್ಲಿ ಬಡವರ ಮಕ್ಕಳು ಬೆಳಿಬಾರ್ದಾ? ಎಂದು ಬಡತನ, ಜಾತಿ ಧರ್ಮದ ಗುರಾಣಿ ಹಿಡಿಯುವವರೇ, ಬಡವರ ಮಕ್ಕಳು ಅಂತಾ ಧರ್ಮ ಹಾಗೂ ಸಂಸ್ಕೃತಿಗೆ ವಿರುದ್ಧ ಮಾಡುವ ಅವಮಾನ ಮತ್ತು ಅಪಮಾನಗಳನ್ನು ಖಂಡಿತವಾಗಿಯೂ ನಮ್ಮ ಕನ್ನಡಿಗರು ಸಹಿಸಿಕೊಳ್ಳಲಾರರು. ನಮ್ಮ ಕನ್ನಡ ನಾಡಿನ ನಡೆ ನುಡಿ, ಸಂಸ್ಕಾರ ಸಂಸ್ಕೃತಿಗಳಿಗೆ ಚ್ಯುತಿ ಬಾರದಂತೆ ಸದಭಿರುಚಿಯ ಮತ್ತು ಸಾಮಾಜಿಕ ಕಾಳಚಿಯುಳ್ಳ ಸಿನಿಮಗಳಿಂದಲೇ ಅಂದು ಇಂದು ಮುಂದೆಯೂ ಆ ಚಂದ್ರಾರ್ಕವಾಗಿ ರಾಜಕುಮಾರ್ ವಿಷ್ಣುವರ್ಧನ್, ಪುನೀತ್ ರಂತಹವರು ಧೃವತಾರೆಗಳಾಗಿ ಕನ್ನಡ ಸಿನಿಮಾರಂಗದಲ್ಲಿ ಇದ್ದಾರೆ ಎನ್ನುವುದನ್ನು ಅರಿಯಬೇಕಾಗಿದೆ ಅಲ್ವೇ?

ಏನಂತೀರೀ?
ನಿಮ್ಮವನೇ ಉಮಾಸುತ

One thought on “ಕನ್ನಡ ಚಿತ್ರರಂಗ ಅಂದು ಇಂದು

  1. Those were the days even speaking in Kannada was objected by some people in some areas of Bangalore. Kannada pictures were not shown in Majestic area. Those were the days Kannada films and our stars were getting scant respect from Indian Film Chambers and South Indian Film Chambers. Kannada and Kannadigas were neglected in all fields, then emerged Kannada Cheluvali headed by Dr. A. Na. Krishna Rao that was the turning point and later Gokak Cheluvali headed by Dr. Rajkumar, what the status of our Kannada Cinema is today we should remember those people who fought for our language and our land.

    Liked by 1 person

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s