ಎಂ. ಎಸ್. ರಂಗಾಚಾರ್ಯ

ಬಹುಶಃ ಎಪ್ಪತ್ತರದ ದಶಕದ ಹಿಂದೆ ವಿವಿಧ ಹಳ್ಳಿಗಳಿಂದ ಪಟ್ಟಣಕ್ಕೆ ಬಂದು ಶಿಕ್ಷಣ ಪಡೆಯುತ್ತಿದ್ದವರಿಗೆ ವಾರನ್ನ, ಧರ್ಮಛತ್ರದ ಅನುಭವ ಇರುತ್ತದೆ. ಆಗಿನ ಕಾಲದಲ್ಲಿ ತಮ್ಮ ಊರುಗಳಲ್ಲಿ ಪ್ರಾಥಮಿಕ ಶಿಕ್ಷಣವನ್ನು ಮುಗಿಸಿ ಉನ್ನತ ವ್ಯಾಸಂಗಕ್ಕಾಗಿ ಹತ್ತಿರದ ಪಟ್ಟಣಗಳಿಗೆ ಬರುವ ಬಾಡಿಗೆ ಕಟ್ಟಿಕೊಂಡು ಸ್ವಂತವಾಗಿ ಅಡುಗೆ ಮಾಡಿಕೊಂಡು ಓದುವುದಕ್ಕೂ ಆರ್ಥಿಕವಾಗಿ ಬಡತನವಿದ್ದ ಕಾಲದಲ್ಲಿ ವಿದ್ಯಾರ್ಥಿಗಳಿಗೆ ಯಾರಾದರೂ ಎರಡು ಹೊತ್ತಿನ ಊಟ ಮತ್ತು ಉಳಿದು ಕೊಳ್ಳಲು ಸಣ್ಣದಾದ ವ್ಯವಸ್ಥೆಯೊಂದು ಕೊಟ್ಟವರೇ ದೇವರಾಗಿ ಬಿಡುತ್ತಿದ್ದರು. ಹೀಗೆ 60-70ರ ದಶಕದಲ್ಲಿ ಮೈಸೂರಿನಲ್ಲಿ ಓದಲು ಬರುತ್ತಿದ್ದ ಹುಡುಗರಿಗೆ ದೇವರಾಗಿ ಇದ್ದವರೇ, ವಕೀಲರಾಗಿದ್ದ ಶ್ರೀ ಎಂ. ಎಸ್. ರಂಗಾಚಾರ್ಯ. ಸದಾಕಾಲವೂ ನೀಳವಾಗಿ ಗಡ್ಡಧಾರಿಗಳಾಗಿದ್ದ ಕಾರಣ, ಜನರು ಅವರನ್ನು ಪ್ರೀತಿ ಮತ್ತು ಗೌರವದಿಂದ ಗಡ್ಡದ ರಂಗಾಚಾರ್ಯ ಎಂದೇ ಕರಿಯುತ್ತಿದ್ದರು.

WhatsApp Image 2022-11-02 at 18.23.4460-70ರ ದಶಕದಲ್ಲಿ ಮೈಸೂರು ಕಂಡ ಮಹಾನ್ ವಕೀಲರಾಗಿದ್ದ ಶ್ರೀ ರಂಗಾಚಾರ್ಯರು ಸದಾಕಾಲವೂ ಎದೆಯ ವರೆಗೆ ಬೆಳೆದ ಗಡ್ಡ, ಹಣೆಯ ಮೇಲೆ ಎದ್ದುಕಾಣುವಂತೆ ಇಟ್ಟುಕೊಳ್ಳುತ್ತಿದ್ದ ತಿರುನಾಮದಿಂದಾಗಿ ಅವರೊಬ್ಬ ಯತಿಗಳಂತೆಯೇ ಕಾಣುತ್ತಿದ್ದರು. ಪ್ರತೀ ದಿನವೂ ಬೆಳಿಗ್ಗೆ 4-30 ಕ್ಕೆ ಆರಂಭವಾಗುತ್ತಿದ್ದ ಅವರ ದಿನಚರಿ, ಎದ್ದ ಕೂಡಲೇ ಹಸುಗಳನ್ನು ಕೊಟ್ಟಿಗೆಯಿಂದ ಹೊರಗೆ ಕಟ್ಟಿ, ಹಾಲು ಕರೆದು, ಕೊಟ್ಟಿಗೆಯನ್ನು ಶುಚಿ ಮಾಡಿ ನಂತರ ಸ್ನಾನ ಮಾಡಿ ತಮ್ಮ ದೈನಂದಿನದ ಸಂಧ್ಯಾವಂಧನೆ ಮುಗಿಸಿ, ಹೊರಗೆ ಕಾಂಪೌಂಡ್ ಮೇಲೆ ಅನ್ನವನ್ನು ಮೊಸರಿನಲ್ಲಿ ಕಲೆಸಿ ಮೂರ್ನಾಲ್ಕು ಎಲೆಯ ಮೇಲೆ ಹಾಕಿದ ಕೂಡಲೇ ಅದಕ್ಕಾಗಿಯೇ ಕಾಯ್ದು ಕುಳಿರುತ್ತಿದ್ದ ಮಂಗಗಳು ಬಂದು ತಿಂದು ಹೋದನಂತರವಷ್ಟೇ ಆವರ ಉಳಿದ ಕೆಲಸಗಳು ಆರಂಭವಾಗುತ್ತಿತ್ತು. ಸಂಪ್ರದಾಯಸ್ಥ ಕುಟುಂಬದ ಹಿನ್ನಲೆಯಿಂದಾಗಿ ಬಹಳ ನಿಷ್ಠೆ ನಿಯಮಗಳಿಂದ ತಮ್ಮ ದೈನಂದಿನ ಪೂಜೆ ಪುನಸ್ಕಾರಗಳನ್ನು ಆಚರಿಸುವ ಮೂಲಕ ಸಂಪ್ರದಾಯಗಳನ್ನು ಪಾಲಿಸುತ್ತಿದ್ದರೂ, ಆವರ ಮನೆಯಲ್ಲಿ ಯಾವುದೇ ಜಾತಿ, ಕುಲ, ಧರ್ಮದ ಹಂಗಿಲ್ಲದೇ, ಓದುವ ಮಕ್ಕಳು ಯಾವಾಗ ಬೇಕಾದರೂ ಬಂದು ಹೊಟ್ಟೆ ತುಂಬಾ ಊಟ ಮಾಡಿಕೊಂಡು ಹೋಗಬಹುದಾಗಿತ್ತು. ಹಾಗೆ ಓದುವ ಮಕ್ಕಳಿಗೆ ಊಟವನ್ನು ಹಾಕಿದರೆನೇ ರಾಯರಿಗೆ ಸಂತೃಪ್ತಿ.

ಇನ್ನೂ ವಕೀಲಿಕೆ ವೃತ್ತಿಯನ್ನು ಮಾಡಲು ಮೈಸೂರು ಕೋರ್ಟಿಗೆ ಹೋಗುವಾಗಲೂ ಅವರ ವೇಷಭೂಷಣಗಳಲ್ಲಿ ಹೆಚ್ಚಿನ ಬದಲಾವಣೆ ಸೊಂಟದ ಮೇಲೊಂದು ಸಣ್ಣ ಕಚ್ಚೆ ಪಂಚೆ-ಹೆಗಲ ಮೇಲೊಂದು ದಟ್ಟಿ ಮತ್ತು ಕರೀ ಕೋಟು ಇವಿಷ್ಟೇ ಅವರ ವೇಷ ಭೂಷಣ. ಅದೆಷ್ಟೋ ಬಾರಿ ಕೋರ್ಟಿಗೆ ಬಂದವ ಕಕ್ಷೀದಾರರ ಬಳಿ ಕೋರ್ಟಿಗೆ ಕಟ್ಟಲು ಹಣವಿಲ್ಲದೇ ಹೋದಾಗ ತಮ್ಮ ಕೈಲಿಂದಲೇ ಹಣವನ್ನು ಕೋರ್ಟಿಗೆ ಕಟ್ಟಿ ಉಚಿತವಾಗಿ ಅವರ ಪರ ವಾದ ಮಾಡಿ ವಾದದಲ್ಲಿ ಗೆದ್ದ ಉದಾಹರಣೆಗಳೆಷ್ಟೋ. ಹೀಗೆ ವಕೀಲಿಕೆಯಲ್ಲಿ ಗಳಿಸಿದ್ದಲ್ಲವನ್ನೂ ಅವರು ದಾನ ಧರ್ಮಗಳಿಗೇ ಮೀಸಲಿಟ್ಟದ್ದು ಗಮನಾರ್ಹ. ಅದರಲ್ಲೂ ಆವರು ಮಾಡಿರುವ ಅನ್ನದಾನವನ್ನು ಹಳೆಯ ಮೈಸೂರಿಗರು ಇಂದಿಗೂ ನೆನಪಿಸಿಕೊಳ್ಳುತ್ತಾರೆ

nalwadi_krishnaಹೀಗೆ ಮನೆಯಲ್ಲಿ ಪ್ರತಿನಿತ್ಯವೂ ಅನ್ನದಾಸೋಹ ನಡೆಯುತ್ತಿದ್ದರೂ, ಪ್ರತೀ ತುಲಾಮಾಸದಲ್ಲಿ ಕಾವೇರಿ ದಂಡೆಯಲ್ಲಿ ಅನ್ನದಾನ ಮಾಡುವುದನ್ನು ಅವರು ಬಹಳ ವರ್ಷಗಳಿಂದಲೂ ರೂಢಿಯಲ್ಲಿಟ್ಟು ಕೊಂಡಿದ್ದರು. ಅಂದಿನ ದಿನ ಸ್ವತ: ರಂಗಾಚಾರ್ಯ ದಂಪತಿಗಳೇ ಅಲ್ಲಿಗೆ ಬಂದವರೆಲ್ಲಗಿರೂ ಅಡುಗೆಯನ್ನು ತಯಾರಿಸಿ ಅವರಿಗೆಲ್ಲಾ ಊಟ ಬಡಿಸಿ ಅವರ ತೃಪ್ತಿಯಲ್ಲಿ ಇವರು ಸಂತೃಪ್ತರಾಗುತ್ತಿದ್ದರು. ಹೀಗೆ ಪತಿಯ ಸಮಾಜಸೇವೆಯಲ್ಲಿ ಭಾಗಿಗಳಾಗುತ್ತಿದ್ದ ಅವರ ಪತ್ನಿಯವರ ಹೆಸರು ಮಹಾಲಕ್ಷ್ಮಮ್ಮ ಎಂದಿದ್ದರೂ, ಆವರು ತಾಯಮ್ಮ ಎಂದೇ ಪ್ರಸಿದ್ದಿಯಾಗಿದ್ದರು. ಈ ದಂಪತಿಗಳು ಮಾಡುತ್ತಿದ್ದ ದಾನ ಧರ್ಮದ ವಿಷಯ ಶ್ರೀಮನ್ಮಹಾರಾಜ ನಾಲ್ವಡಿಕೃಷ್ಣರಾಜ  ಒಡೆಯರ್ ಅವರ ಕಿವಿಗೂ ಬಿದ್ದು, ಅವರ ಸಮಾಜ ಸೇವೆಗೆ ಮಹಾರಾಜರೂ ಕೈಜೋಡಿಸುವ ಸಲುವಾಗಿ ರಂಗಾಚಾರ್ ಅವರನ್ನು ತಮ್ಮ ಅರಮನೆಗೆ ಬಂದು ರಾಜರನ್ನು ಕಾಣಲು ಸೂಚಿಸಿದಾಗ, ರಾಜ ಪ್ರತ್ಯಕ್ಷ ದೇವತಾ ಹಾಗಾಗಿ ಅವರನ್ನು ನೋಡಲು ನಾನು ಅರಮನೆಗೆ ಹೋಗಲಾರೆ ಎಂದಿದ್ದ ರಂಗಚಾರ್ಯರು, ತಮ್ಮ ರಾಜ್ಯದಲ್ಲಿ ಇಂತಹ ಕೊಡುಗೈ ದಾನಿಯವರ ಸಮಾಜಸೇವೆಯಲ್ಲಿ ಸಹಾಯ ಮಾಡುವ ಇಂಗಿತವನ್ನು ಮಹಾರಾಜರು ವ್ಯಕ್ತಪಡಿಸಿದಾಗ, ಅದನ್ನು ನಯವಾಗಿಯೇ ತಿರಸ್ಕರಿಸಿದಂತಹ ಮಹಾನ್ ಸ್ವಾಭಿಮಾನಿಗಳಾಗಿದ್ದರು ಶ್ರೀ ರಂಗಾಚಾರ್ಯರು. ಮುಂದೆಂದೋ ಮಹಾರಾಜರು ಕಾವೇರಿ ತೀರದಲ್ಲಿ ರಂಗಾಚಾರ್ಯರನ್ನು ಭೇಟಿಯಾಗಿದ್ದರಂತೆ.

ಸ್ವಂತಕ್ಕೆ ಸ್ವಲ್ಪ ಸಮಾಜಕ್ಕೆ ಸರ್ವಸ್ವ ಎಂಬುದನ್ನು ಅಕ್ಷರಶಃ ಜಾರಿಗೆ ತಂದಿದ್ದಂತಹ ಅಪರೂಪದ ಪ್ರಸಂಗವೊಂದನ್ನು ಇಲ್ಲಿ ನೆನಪಿಸಿಕೊಂಡಾಗಲೇ ಅವರ ವ್ಯಕ್ತಿತ್ವ ಅನಾವರಣವಾಗುತ್ತದೆ. ತಮ್ಮ ವಕೀಲಿಕೆಯಿಂದ ಸಂಪಾದಿಸಿ ದಾನ ಧರ್ಮಗಳಲ್ಲಿ ವಿನಿಯೋಗಿಸಿಯೂ ಉಳಿದ ಹಣದಿಂದ ಮೈಸೂರಿನ ಒಂಟಿಕೊಪ್ಪಲಿನಲ್ಲಿ ಒಂದು ಸುಂದರವಾದ ಮನೆಯೊಂದನ್ನು ಕಟ್ಟಿ ಇನ್ನೇನು ಗೃಹಪ್ರವೇಶ ಮಾಡಬೇಕು ಎಂದು ಸಿದ್ದತೆ ಮಾಡಿಕೊಳ್ಳುತ್ತಿರುವ ಸಮಯದಲ್ಲೇ. ಮೈಸೂರು ರಾಮಕೃಷ್ಣಾಶ್ರಮದ ಪ್ರತಿನಿಧಿಗಳು ಅವರ ಬಳಿಗೆ ಬಂದು ರಾಮಕೃಷ್ಣ ಆಶ್ರಮದ ವಿದ್ಯಾರ್ಥಿಗಳಿಗಾಗಿ ವಿದ್ಯಾರ್ಥಿ ನಿಲಯವನ್ನು ಕಟ್ಟಲು ಆರ್ಥಿಕ ನೆರವನ್ನು ಕೋರಿದಾಗ, ಅರೇ ಹೀಗೆ ಎಲ್ಲರ ಬಳಿ ಧನ ಸಹಾಯ ಪಡೆದು ವಿದ್ಯಾರ್ಥಿನಿಲಯವನ್ನು ಕಟ್ಟಲು ಬಹಳ ಸಮಯ ತಗಲುವುದರಿಂದವಿದ್ಯಾರ್ಥಿಗಳಿಗೆ ತೊಂದರೆ ಆಗುವಹುದು ಎಂದು ತಿಳಿದು ಹೊಸದಾಗಿ ಕಟ್ಟಿದ್ದ ತಮ್ಮ ಮನೆಯನ್ನೇ ರಾಮಕೃಷ್ಣ ಆಶ್ರಮದ ವಿದ್ಯಾರ್ಥಿ ನಿಲಯಕ್ಕಾಗಿ ದಾನ ಮಾಡಿದಂತಹ ಕೊಡುಗೈದಾನಿಯವರು ಶ್ರೀ ರಂಗಾಚಾರ್ಯರು. ಆ ಮೂರು ಅಂತಸ್ತಿನ ಗೃಹ ಶ್ರೀ ರಾಮಕೃಷ್ಣ ವಿದ್ಯಾರ್ಥಿಗಳ ಗೃಹ ಎಂಬ ಹೆಸರಿನಲ್ಲಿ ಭಾನುವಾರ, 22 ಅಕ್ಟೋಬರ್ 1950 ರಂದು ಭಾರತದ ಮಾಜಿ ಗವರ್ನರ್ ಜನರಲ್ ಮತ್ತು ಮಿಷನ್‌ನ ನಿಷ್ಠಾವಂತ ಸ್ನೇಹಿತ ಶ್ರೀ ಚಕ್ರವರ್ತಿ ರಾಜಗೋಪಾಲಾಚಾರಿ ಅವರು ಉದ್ಘಾಟಿಸಿದರೆ, ಆ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಮೈಸೂರು ಮಹಾರಾಜರಾದ ಶ್ರೀ ಜಯ ಚಾಮರಾಜ ಒಡೆಯರ್ ಬಹದ್ದೂರ್ ವಹಿಸಿದ್ದರು.

ashramaಮುಂದೆ 30, ಜನವರಿ, 1953 ರಂದು ಅದೇ ಶ್ರೀ ರಾಮಕೃಷ್ಣ ವಿದ್ಯಾರ್ಥಿಗಳ ಮನೆಯನ್ನು ಶ್ರೀ ರಾಮಕೃಷ್ಣ ವಿದ್ಯಾಶಾಲಾ ಎಂಬ ಹೆಸರಿನಲ್ಲಿ ಬಾಲಕರಿಗಾಗಿ ಸಂಪೂರ್ಣ ವಸತಿ ಪ್ರೌಢ ಮತ್ತು ಮಧ್ಯಮ ಶಾಲೆಯಾಗಿ ಪರಿವರ್ತಿಸಲಾಯಿತು. ಇದೇ ವಿದ್ಯಾರ್ಥಿ ನಿಲಯದಲ್ಲೇ ಮುಂದೇ ಮಹಾಕವಿ ಕುವೆಂಪು, ಡಾ. ಪ್ರಭುಶಂಕರ ರಂಥಹ ದಿಗ್ಗಜಗಳು ಓದಿದ್ದಾಗಿ ಪ್ರಭುಶಂಕರರೇ ಗೋಖಲೆ ಸಂಸ್ಥೆಯ ಕಾರ್ಯಕ್ರಮವೊಂದರಲ್ಲಿ ರಂಗಾಚಾರ್ಯರ ಪುತ್ರಿ ಶಕುಂತಲಾ ಅವರಿಗೆ ನಿಮ್ಮ ತಂದೆ ಮಹಾನುಭಾವ ಎಂದು ಕೈ ಮುಗಿದಿದ್ದರಂತೆ.

ಅದೊಮ್ಮೆ ಕೋರ್ಟ್ ಕೆಲಸ ಮುಗಿಸಿಕೊಂಡು ಮನೆಗೆ ಹಿಂದಿರಿಗಿ ಸಾಯಂಸಂಧ್ಯಾವಂಧನೆ ಮತ್ತು ಪೂಜೆಗಳನ್ನು ಮುಗಿಸಿ, ಮನೆಯಲ್ಲಿ ಇದ್ದವರೊಡನೆ ಲೋಕಾಭಿರಾಮವಾಗಿ ಹರಟುದ್ದಿದ್ದಾಗ ಅವರ ಮನೆಗೆ ಬಂದಿದ್ದ ಡಾ.ಸುಭದ್ರಾ ಅವರನ್ನು ಜೀವನದ ಬೈಲಾ ಏನು ಹೇಳುತ್ತದೆ ಎಂದು ಕೇಳಿದರಂತೆ. ಆಗ ಅವರು ಸಹಜವಾಗಿ, ಬರುವಾಗ ಬೆತ್ತಲೆ-ಹೋಗುವಾಗ ಬೆತ್ತಲೆ ಎಂದ ಕೂಡಲೇ, ರಂಗಾಚಾರ್ಯರು ತಾವು ಉಟ್ಟಿದ್ದ ಬಟ್ಟೆಯನ್ನು ಕಳಚುತ್ತಿದ್ದಂತೆಯೇ ಇಹಲೋಕ ತೊರೆದಂತಹ ಇಚ್ಚಾಮರಣಿಗಳಾಗಿದ್ದಂತಹ ಹಿರಿಯ ಚೇತನ ಅವರಾಗಿದ್ದರು. ಕಾಕತಾಳೀಯವೆಂದರೆ, ಅಂದು ಸಂಜೆ ಕೋರ್ಟಿನಿಂದ ಹಿಂದಿರುಗುವಾಗ ನಾಳೆಯಿಂದ ನಾನು ಕೋರ್ಟಿಗೆ ಬರುವುದಿಲ್ಲ ಎಂದು ಹೇಳಿ ಬಂದಿದ್ದರಂತೆ.

WhatsApp Image 2022-11-02 at 18.23.44ಅಂತಹ ಹಿರಿಯ ಚೇತನದ ಅಂತಿಮ ದರ್ಶನಕ್ಕಾಗಿ ಹುಜೂರ್ ಸಕ್ರೆಟರಿ ತಂಬುಚೆಟ್ಟಿ ಅವರಲ್ಲದೇ, ಸ್ವತಃ ಮುಖ್ಯ ನ್ಯಾಯಮೂರ್ತಿಗಳಾಗಿದ್ದ ಶ್ರೀ ಹೊಂಬೇಗೌಡರು ಬಂದಿದ್ದಲ್ಲದೇ, ಅವರ ಜೊತೆಯಲ್ಲಿಯೇ ರಂಗಾಚಾರ್ಯರ ಮನೆಯಲ್ಲಿ ವಾರಾನ್ನ ಮಾಡಿ ಓದಿ ಬೆಳೆದು ಉನ್ನತ ಹುದ್ದೆಗಳಲ್ಲಿದ್ದ ಅನೇಕರು ರಂಗಾಚಾರ್ಯರಿಗೆ ಅಂತಿಮ ನಮನಗಳನ್ನು ಸಲ್ಲಿಸಿದ್ದರಂತೆ. ಅಂತಹ ಮಹಾನುಭಾವರು ವಿದ್ಯಾರ್ಥಿ ನಿಲಯಕ್ಕಾಗಿ ದಾನವಾಗಿ ಕೊಟ್ಟಿದ್ದಂತಹ ಮನೆಯನ್ನೂ ಇಂದಿಗೂ ಮೈಸೂರಿನಲ್ಲಿ ನೋಡ ಬಹುದಾಗಿದೆ. ವ್ಯಕ್ತಿಗಳು ಸಾಯಬಹುದು ಆದರೆ ಅವರ ವ್ಯಕ್ತಿತ್ವಕ್ಕೆ ಸಾವಿಲ್ಲ ಎಂಬುದಕ್ಕೆ ಜ್ವಲಂತ ಉದಾಹರಣೆಯಾದ ಕೊಡುಗೈ ದಾನಿ ಶ್ರೀ ಎಂ. ಎಸ್. ರಂಗಾಚಾರ್ಯರು ನಮ್ಮ ಹೆಮ್ಮೆಯ ಕನ್ನಡದ ಕಲಿಗಳೇ ಸರಿ ಅಲ್ವೇ?

ಏನಂತೀರೀ?
ನಿಮ್ಮವನೇ ಉಮಾಸುತ

One thought on “ಎಂ. ಎಸ್. ರಂಗಾಚಾರ್ಯ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s