ಸಮಾಜ ಸೇವಕ ಸಾಯಿರಾಂ ಗೋಪಾಲಕೃಷ್ಣ ಭಟ್

ಸಾಮಾನ್ಯವಾಗಿ ಯಾರಾದರೂ ತಮ್ಮ ಬಳಿಯಲ್ಲಿ ಸಹಾಯವನ್ನು ಕೇಳಿಕೊಂಡು ಬಂದಾಗ ಬಹುತೇಕರು ಹೇಳುವುದು ಉಳ್ಳವರು ಶಿವಾಲಯವ ಮಾಡುವರು ನಾನೇನು ಮಾಡಲಿ ಬಡವನಯ್ಯಾ? ಎಂದು ಹೇಳುವುದು ವಾಡಿಕೆ. ಅದೇ ರೀತಿಯಾಗಿ ಇಲ್ಲೊಬ್ಬ ಶ್ರದ್ದೇಯ ಆಸ್ತಿಕರು ತಮ್ಮ 50ನೇ ವರ್ಷದ ಹುಟ್ಟು ಹಬ್ಬವನ್ನು ಕಾಶೀ ವಿಶ್ವೇಶ್ವರನ ಸನ್ನಿಧಿಯ ಆಚರಿಸಿಕೊಳ್ಳಬೇಕು ಎಂದು ನಿರ್ಧರಿಸಿ ಅದರ ಸಿದ್ಧತೆಯಲ್ಲೇ ಇರುವಾಗ, ನೈಸರ್ಗಿಕ ವಿಕೋಪದಿಂದಾಗಿ ತಮ್ಮಲ್ಲಿಯೇ ಕೂಲಿ ಕೆಲಸ ಮಾಡಿಕೊಂಡಿದ್ದಂತಹ ವ್ಯಕ್ತಿಯ ಮನೆ ಬಿದ್ದು ಹೋದಾಗ, ತಮ್ಮ ತೀರ್ಥಯಾತ್ರೆಗೆ ವಿನಿಯೋಗಿಸಲು ಇಟ್ಟುಕೊಂಡಿದ್ದ ಹಣದಲ್ಲೇ ಆತನಿಗೆ ಮನೆಯನ್ನು ಕಟ್ಟಿಕೊಟ್ಟು ಅವನ ತೃಪ್ತಿಯಲ್ಲೇ ಭಗವಂತನ ಸಂತೃಪ್ತಿಯನ್ನು ಕಂಡು ಮುಂದೆ ಬಡವರಿಗಾಗಿಯೇ 260 ಮನೆಗಳನ್ನು ನಿರ್ಮಿಸಿಕೊಡುವ ಜೊತೆ ಹತ್ತು ಹಲವಾರು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಂಡು ಕೇರಳ ಮತ್ತು ಕರ್ನಾಟಕದ ಕರಾವಳಿಯ ಭಾಗದಲ್ಲಿ ಮನೆಯ ಮಾತಾದ ಮಾನವೀಯ ಹೋರಾಟಗಾರ ಶ್ರೀ ಸಾಯಿರಾಂ ಗೋಪಾಲಕೃಷ್ಣ ಭಟ್ ಅವರ ವ್ಯಕ್ತಿ ಮತ್ತು ವ್ಯಕ್ತಿತ್ವ ಪರಿಚಯವನ್ನು ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ತಿಳಿಸುವ ಸಣ್ಣ ಪ್ರಯತ್ನ.

bhat5

ಶ್ರೀ ಗೋಪಾಲ ಕೃಷ್ಣ ಭಟ್ ಅವರು 1937ರಲ್ಲಿ ಅವಿಭಜಿತ ಕಾಸಗೋಡಿನ ಕಿಳಿಂಗಾರಿನ ನೀರ್ಚಾಲು. ಎಂಬಲ್ಲಿ ಸೀತಂಗೋಳಿ ಮೂಲದ ಸಾಂಪ್ರದಾಯಿಕ ಸ್ಥಿತಿವಂತರ ಕೃಷಿ ಕುಟುಂಬದಲ್ಲಿ ಜನಿಸಿದರು. ಅವರು ಆರಂಭದಲ್ಲಿ ದೈಹಿಕ ಶಿಕ್ಷಣದ ತರಬೇತುದಾರರಾಗಿದ್ದರು. ನಂತರದ ದಿನಗಳಲ್ಲಿ ಅವರಿಗೆ ವಂಶಪಾರಂಪರ್ಯವಾಗಿ ಇದ್ದಂತಹ ಜಮೀನಿನಲ್ಲಿ ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವ ಜೊತೆಗೆ ಕೆಲವು ಬಸ್ಸುಗಳನ್ನು ಖರೀದಿಸಿ ತಮ್ಮದೇ ಆದ ಖಾಸಗೀ ಸಾರಿಗೆ ಸಂಸ್ಥೆಯನ್ನು ನಡೆಸುತ್ತಾ ತಕ್ಕ ಮಟ್ಟಿಗೆ ಆದಾಯವನ್ನು ಗಳಿಸುತ್ತಿದ್ದರು. ಇಂತಹ ಸಮಯದಲ್ಲೇ ತಮ್ಮ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅನಾರೋಗ್ಯದಿಂದ ಬಳಲುತ್ತಿರುವವರಿಗೆ, ನಿರುದ್ಯೋಗಿಗಳಿಗೆ, ಆರ್ಥಿಕ ಸಮಸ್ಯೆಯಿಂದಾಗಿ ಶಿಕ್ಷಣವನ್ನು ಪೂರ್ಣಗೊಳಿಸಲು ಕಷ್ಟಪಡುತ್ತಿರುವವರಿಗೆ ತಮ್ಮ ಕೈಲಾದ ಮಟ್ಟಿಗೆ ಸಹಾಯ ಮಾಡುತ್ತಾ ನಿಧಾನವಾಗಿ ಸಮಾಜ ಸೇವಕರಾಗಿ ಜಯಪ್ರಿಯರಾದರು. ಆರ್ಥಿಕವಾಗಿ ಸಂಕಷ್ಟದಲ್ಲಿದ್ದವರು ಭಟ್ ಅವರು ವಾಸಿಸುತ್ತಿದ್ದ ಕಿಳಿಂಗಾರ್ನ ಸಾಯಿ ಮಂದಿರದ ರಸ್ತೆಯ ಬಂದು ಹೋಗುವುದು ಸಹ ಪ್ರಕ್ರಿಯೆಯಾಯಿತು. ತಮ್ಮಿಂದ ಸಹಾಯ ಪಡೆದವರ ಮುಖದಲ್ಲಿ ನಗುವು ಅರಳಿದಾಗ, ಅದರಿಂದ ದೊರಕುವ ಅನಂದಕ್ಕೆ ಎಣೆಯೇ ಇಲ್ಲ ಎಂದು ಭಟ್ಟರೇ ಆಗ್ಗಾಗ್ಗೆ ಹೇಳುತ್ತಿದ್ದರು.

ಇಂತಹ ಸಮಯದಲ್ಲೇ ಕಾಸರಗೋಡಿನ ಖಾಸಗಿ ಕ್ಲಿನಿಕ್ನಲ್ಲಿ ವೈದ್ಯರಾಗಿ ಕೆಲಸ ಮಾಡುತ್ತಿದ್ದ ಮತ್ತು ಭಟ್ ಅವರಿಗಿಂತಲೂ ಮುಂಚಿನಿಂದಲೂ ಸಮಾಜದದಲ್ಲಿ ಆರ್ಥಿಕವಾಗಿ ಸಂಕಷ್ಟದಲ್ಲಿದ್ದವರಿಗೆ ಉಚಿತ ವೈದ್ಯಕೀಯ ನೆರವನ್ನು ನೀಡುತ್ತಿದ್ದ ಡಾ.ಕೇಶವ ಭಟ್ ಭಟ್ ಅವರ ಪರಿಚಯವಾಗಿ, ಅವರಿಬ್ಬರೂ ಸೇರಿಕೊಂಡು ಕರ್ನಾಟಕ ಮತ್ತು ಕೇರಳ ರಾಜ್ಯಗಳ ಗಡಿ ಪ್ರದೇಶಗಳಲ್ಲಿ ನೂರಾರು ಉಚಿತ ಆರೋಗ್ಯ ಶಿಬಿರಗಳನ್ನು ಏರ್ಪಡಿಸ ತೊಡಗಿದರು. ಸ್ಥಳೀಯರು ತಿಳಿಸುವ ಮಾಹಿತಿಯಂತೆ ಈ ವರೆವಿಗೂ ಸುಮಾರು 950 ಕ್ಕೂ ಹೆಚ್ಚು ಆರೋಗ್ಯ ಶಿಭಿರಗಳನ್ನು ನಡೆಸಿ ಪ್ರತಿ ಶಿಬಿರದಲ್ಲಿಯೂ ಸುಮಾರು 700ಕ್ಕೂ ಹೆಚ್ಚು ಮಂದಿ ಭಾಗವಹಿ ಶಿಬಿರದ ಪ್ರಯೋಜನವನ್ನು ಪಡೆದುಕೊಳ್ಳುವಷ್ಟರ ಮಟ್ಟಿಗೆ ಪ್ರಸಿದ್ಧಿಯನ್ನು ಪಡೆಯಿತು. ಉಚಿತ ವೈದ್ಯಕೀಯ ಶಿಬಿರದಲ್ಲಿ ರೋಗಿಗಳ ತಪಾಸಣೆ ನಡೆಸುವುದಲ್ಲದೇ, ಶಿಬಿರದ ಫಲಾನುಭವಿಗಳಿಗೆ 15 ದಿನಗಳ ಉಚಿತ ಔಷಧ ನೀಡಲಾಗುತ್ತಿದ್ದದ್ದಲ್ಲದೇ, ಏಡ್ಸ್, ಕ್ಯಾನ್ಸರ್ ಸೇರಿದಂತೆ ಎಲ್ಲಾ ಕಾಯಿಲೆಗಳಿಗೆ ವೈದ್ಯರು ಚಿಕಿತ್ಸೆ ನೀಡುತ್ತಿದ್ದರು.

Bhat6

1995ರಲ್ಲಿ ಗೋಪಾಲಕೃಷ್ಣ ಭಟ್ ಅವರು ತಮ್ಮ 50ನೇ ವಯಸ್ಸಿನಲ್ಲಿ ಕಾಶೀ ಯಾತ್ರೆಗೆ ಹೊರಡಲು ಸಿದ್ಧವಾಗುತ್ತಿದ್ದಾಗಲೇ ಮಾನ್ಸೂನ್ ಕಾಲದಲ್ಲಿ ಅವರ ಪ್ರದೇಶದಲ್ಲಿ ಸುರಿದ ವಿಪರೀತವಾದ ಮಳೆಯಿಂದಾಗಿ. ಅವರಲ್ಲಿಯೇ ಕೂಲಿ ಕೆಲಸ ಮಾಡಿಕೊಂಡಿದ್ದ ಅಬ್ಬಾಸ್ ಎಂಬುವವರ ಮನೆ ಕುಸಿದು ಬಿದ್ದು ಹೋಗಿ ನಿರ್ಗತಿಗನಾದದ್ದನ್ನು ಕಂಡು ಅವರ ಮನಸ್ಸು ಮಮ್ಮಲ ಮರುಗಿ, ಕಾಶೀ ಯಾತ್ರೆಯ ಯೋಜನೆಯನ್ನು ಕೈ ಬಿಟ್ಟು, ಅದೇ ಹಣದಲ್ಲಿ ಅಬ್ಬಾಸನಿಗೆ ಮೆನೆಯನ್ನು ಕಟ್ಟಿಸಿ ಕೊಟ್ಟರು. ಮನೆಯಿಲ್ಲದೇ ನಿರಾಶ್ರಿತನಾಗಿದ್ದ ಅಬ್ಬಾಸರಿಗೆ ಹೊಸಮನೆ ಸಿಕ್ಕಾಗ ಅವನಿಗಾದ ಆನಂದವನ್ನು ಕಂಡು ಸಂತೃಪ್ತರಾದ ಭಟ್ಟರು, ಈ ರೀತಿಯಾಗಿ ಆರ್ಥಿಕವಾಗಿ ಹಿಂದುಳಿದವರಿಗೆ ಆಶ್ರಯವನ್ನು ನೀಡಿದಲ್ಲಿ, ಮನಸ್ಸಿಗೂ ನೆಮ್ಮದಿ ದೊರೆಯುವುದಲ್ಲದೇ ದೇವರಿಗೂ ಹತ್ತಿರವಾಗಬಹುದು ಎಂಬ ಸತ್ಯವನ್ನು ಕಂಡುಕೊಂಡು ತಮ್ಮ ಕುಟುಂಬದ ಆದಾಯದ ಹೆಚ್ಚಿನ ಭಾಗವನ್ನು ಕೃಷಿ, ಆಯುರ್ವೇದ, ದೇವತಾ ಕಾಯ್ಕಗಳ ಜೊತೆ ಜೊತೆಯಲ್ಲೇ ಬಡಾವರಿಗೆ ವಸತಿ, ಕುಡಿಯುವ ನೀರು, ಔಷಧವನ್ನು ಒದಗಿಸುವ ಉದ್ದೇಶದಿಂದ ವಿನಿಯೋಗಿಸಲು ನಿರ್ಧರಿಸಿ ತಮ್ಮ ಜೀವಿತಾವಧಿಯಲ್ಲಿ ಸುಮಾರು 250 ರಿಂದ 300ಕ್ಕೂ ಅಧಿಕ ಮನೆಗಳನ್ನು ಕಟ್ಟಿಸಿಕೊಟ್ಟರು. ಬಡವರಿಗೆ ಕಟ್ಟಿಸಿಕೊಡುತ್ತಿದ್ದ ಮನೆಗಳು ಅವರದ್ದೇ ಸ್ವಂತ ಮನೆ ಎಂಬುವಂತೆ ಕಟ್ಟದ ನಿರ್ಮಾಣದ ಕಾರ್ಮಿಕರೊಂದಿಗೆ ಕೆಲಸ ಮಾಡಿಡುವ ಮೂಲಕ ನಿರ್ಮಾಣದ ಗುಣಮಟ್ಟವನ್ನು ಖಾತ್ರಿಪಡಿಸಿ ಕೊಳ್ಳುತ್ತಿದ್ದರು. ಹೀಗೆ ಮನೆಗಳನ್ನು ಪಡೆಯಲು ಬರುತ್ತಿದ್ದವರ ಪೈಕಿ ಅರ್ಹರಾದ ಫಲಾನುಭವಿಗಳನ್ನು ಸ್ವತಃ ಖುದ್ದಾಗಿ ಆಯ್ಕೆ ಮಾಡುವ ಮೂಲಕ ಯಾವುದೇ, ಜಾತಿ ಮತಗಳ ಬೇಧವಿಲ್ಲದೇ ಸತ್ಪಾತ್ರರಿಗೆ ದೊರೆಯುವಂತೆ ನೋಡಿಕೊಳ್ಳುತ್ತಿದ್ದದ್ದು ವಿಶೇಷ.

sai_mandir

ಭಟ್ಟರ ಈ ಸಮಾಜಸೇವೆಗೆ ಅವರ ಧರ್ಮಪತ್ನಿ ಶ್ರೀಮತಿ ಶಾರದಾ ಭಟ್, ಬದಿಯಡ್ಕ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾಗಿದ್ದ ಅವರ ಪುತ್ರ ಕೆ ಎನ್ ಕೃಷ್ಣ ಭಟ್ ಮತ್ತು ಪುತ್ರಿಯರಾದ ಶ್ಯಾಮಲಾ ಮತ್ತು ವಸಂತಿ ಅವರ ಸಹಕಾರವೂ ಇದ್ದ ಕಾರಣ, ಬಡವರಿಗೆ ಮನೆ ನಿರ್ಮಿಸಲು ಭೂಮಿಯ ವಿತರಣೆ, ಮನೆ ಕಟ್ಟಿಸಿ ಕೊಡುವುದುದರ ಜೊತೆಗೆ ಹಲವಾರು ಕುಡಿಯುವ ನೀರಿನ ಯೋಜನೆಗಳು, ನೂರಕ್ಕೂ ಹೆಚ್ಚು ಮನೆಗಳಿಗೆ ವಿದ್ಯುದ್ದೀಕರಣ, ಸಾಮೂಹಿಕ ವಿವಾಹಗಳು, ಮೆಗಾ ವೈದ್ಯಕೀಯ ಶಿಬಿರಗಳು, ವಿದ್ಯಾರ್ಥಿಗಳಿಗೆ ಸಮವಸ್ತ್ರ ಮತ್ತು ಪುಸ್ತಕಗಳ ವಿತರಣೆ, ಸ್ವಯಂ ಉದ್ಯೋಗವನ್ನು ಪ್ರಾರಂಭಿಸಲು ಆರ್ಥಿಕ ನೆರವನ್ನು ನೀಡುವ ಮೂಲಕ ಸಮಾಜದ ದೀನದಲಿತ ವರ್ಗವನ್ನು ಮೇಲೆತ್ತಲು ಪ್ರಯತ್ನಿಸಿದರು. ಶ್ರೀ ಸತ್ಯ ಸಾಯಿ ಬಾಬಾ ಅವರ ಅನನ್ಯ ಭಕ್ತರಾಗಿದ್ದ ಕಾರಣ, ತಮ್ಮ ಕಿಳಿಂಗಾರಿನಲ್ಲಿ ಸಾಯಿ ಮಂದಿರವನ್ನು ನಿರ್ಮಿಸಿದ್ದರಿಂದಲೇ ಅವರು ಸಾಯಿರಾಂ ಭಟ್ ಎಂದೂ ಖ್ಯಾತರಾಗಿದ್ದರು. ಭಟ್ ಅವರ ಈ ನಿಸ್ವಾರ್ಥ ಸಮಾಜ ಸೇವೆಯನ್ನು ಗುರುತಿಸಿ ಕರ್ನಾಟಕ ಮತ್ತು ಕೇರಳ ಎರಡೂ ರಾಜ್ಯಗಳ ನೂರಾರು ಸ್ಥಳೀಯ ಸಂಸ್ಥೆಗಳು ಮತ್ತು ಸರ್ಕಾರಗಳಿಂದ ಲೆಕ್ಕವಿಲ್ಲದಷ್ಟು ಗೌರವಗಳು ಮತ್ತು ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆಯಾದರೂ, ಅವರ ಈ ನಿಸ್ವಾರ್ಥ ಸೇವೆಗೆ ನಿಜವಾಗಿಯೂ ಸಲ್ಲಬೇಕಾದ ಮನ್ನಣೆ ಸಿಗದೇ ಹೋಗಿ ಎಲೆ ಮರೆಕಾಯಿಯಾಗಿಯೇ ಉಳಿದು ಹೋದದ್ದು ದುರಾದೃಷ್ಟಕರ ಮತ್ತು ಸಮಾಜಕ್ಕೆ ಆದ ನಷ್ಟವೇ ಸರಿ.

ತಮ್ಮ ಜನಪರ ಯೋಜನೆಗಳನ್ನು ಸಾಕಾರಗೊಳಿಸಲು ಆಗತ್ಯವಿರುವ ಹಣವನ್ನು ಸಂಪಾದಿಸುವ ಸಲುವಾಗಿ, ತಮ್ಮ ಒಡೆತನದ ಜಮೀನಿನಲ್ಲಿ, ರಬ್ಬರ್, ತೆಂಗು, ಅಡಿಕೆ, ಗೋಡಂಬಿ ಮತ್ತು ಕೋಕೋ ಬೆಳೆಗಳಿಗೆ ಆಧುನಿಕ ಕೃಷಿ ತಂತ್ರಗಳನ್ನು ಬಳಸಿಕೊಳ್ಳುವ ಮೂಲಕ ಇಳುವರಿಯನ್ನು ಹೆಚ್ಚಿಸಿ ಉತ್ತಮ ಹಣವನ್ನು ಗಳಿಸಿದ್ದಲ್ಲದೇ, ತಮ್ಮ ದೇವಾಲಯದಲ್ಲಿ ಬರುವ ಆದಾಯವನನ್ನೂ ಸಹಾ ಇದೇ ಸಮಾಜಮುಖಿ ಕಾರ್ಯಗಳಿಗೆ ಬಳಸಿಕೊಳ್ಳಲು ಮುಂದಾದರು. ಇನ್ನು ಬೆಂಗಳೂರಿನ ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಇಂಜಿನಿಯರ್ ಆಗಿರುವ ಅವರ ಮೊಮ್ಮಗ ವೇಣುಗೋಪಾಲ್ ಭಟ್ ಸಹಾ ಆದಾಯದಲ್ಲಿ ಉಳಿಸಿದ ಬಹುಪಾಲು ಭಾಗವನ್ನು ತಮ್ಮ ಕುಟುಂಬದ ಸಾಮಾಜಿಕ ಹೊಣೆಗಾರಿಕೆಗಾಗಿ ಮೀಸಲಿಡುವ ಮೂಲಕ ತನ್ನ ತಾತನ ಕನಸನ್ನು ಮುಂದುವರೆಸಿಕೊಂಡು ಹೋಗುತ್ತಿರುವುದು ನಿಜಕ್ಕೂ ಅನನ್ಯ ಮತ್ತು ಅನುಕರಣೀಯ.

bhat3

ದೇವರ ಆರಾಧನೆಗಾಗಿ ಪುಣ್ಯ ಕ್ಷೇತ್ರಗಳು ಮತ್ತು ದೇವಸ್ಥಾನಗಳಿಗೇ ಭೇಟಿ ನೀಡಬೇಕೆಂದೇನಿಲ್ಲಾ. ಮಾನವೀಯ ಉದ್ದೇಶಕ್ಕಾಗಿ ಅದೇ ಹಣವನ್ನು ಪ್ರಾಮಾಣಿಕವಾಗಿ ಸಮಾಜ ಸೇವೆಗಾಗಿ ಸದ್ಬಳಕೆ ಮಾಡಿಕೊಂಡರೂ ಸಾಕು ತೀರ್ಥಕ್ಷೇತ್ರಗಳಿಗೆ ಹೋದಷ್ಟೇ ಭಗವಂತನ ಅನುಗ್ರಹ ದೊರೆಯುತ್ತದೆ ಮತ್ತು ಅದರಿಂದ ಶಾಂತಿ ಮತ್ತು ನೆಮ್ಮದಿ ಸಿಗುತ್ತದೆ ಎಂಬುದನ್ನು ಕಂಡುಕೊಂಡಿದಲ್ಲದೇ ಅದನ್ನು ಅಕ್ಷರಶಃ ತಮ್ಮ ಜೀವನದಲ್ಲಿ ಅನುಸರಿಸಿ ಲಕ್ಷಾಂತರ ಜನರಿಗೆ ಮಾರ್ಗದರ್ಶಿಗಳು ಮತ್ತು ಪ್ರೇರಣಾದಾಯಕರಾಗಿದ್ದ ಶ್ರೀ ಸಾಯಿರಾಂ ಗೋಪಾಲ ಕೃಷ್ಟ ಭಟ್ ಅವರು ಸಮಾಜ ಸೇವಕ ಸಾಯಿರಾಂ ಗೋಪಾಲಕೃಷ್ಣ ಭಟ್ ಅವರು ತಮ್ಮ ನಿವಾಸದಲ್ಲೇ 2022ರ ಜನವರಿ 22 ಶನಿವಾರದಂದು, 85ನೇ ವಯಸ್ಸಿನಲ್ಲಿ ವಯೋಸಜವಾಗಿ ನಿಧನರಾದರು.

bhat4

ಭೌತಿಕವಾಗಿ ಶ್ರೀ ಗೋಪಾಲ ಕೃಷ್ಣ ಭಟ್ ಅವರು ನಮ್ಮೊಂದಿಗೆ ಇಲ್ಲದೇ ಇದ್ದರೂ, ಅವರು ಮಾಡಿರುವ ಮತ್ತು ಅವರಿಂದ ಪ್ರೇರಿತರಾಗಿ ಸಮಾಜದ ದೀನದಲಿತ ಮತ್ತು ಬಡ ವರ್ಗಕ್ಕೆ ನೂರಾರು ಸಂಘ ಸಂಸ್ಥೆಗಳು ಮಾಡುತ್ತಿರುವ ನಿಸ್ವಾರ್ಥ ಸೇವೆಗಾಗಿ ಆಚಂದ್ರಾರ್ಕವಾಗಿ ಭಟ್ ಅವರು ಜನಮಾನಸದಲ್ಲಿ ಇರುವ ಕಾರಣ ಅವರು ನಮ್ಮ ಹೆಮ್ಮೆಯ ಕನ್ನಡದ ಕಲಿಗಳೇ ಸರಿ.

ಏನಂತೀರೀ?
ನಿಮ್ಮವನೇ ಉಮಾಸುತ

ಶ್ರೀ ಸಾಯಿರಾಂ ಭಟ್ ಅವರ ಬಗ್ಗೆ ಕೆಲ ತಿಂಗಳ ಹಿಂದೆ ನನಗೆ ಮಾಹಿತಿಯನ್ನು ನೀಡಿದ ಮತ್ತು ಅವರಿಂದಲೇ ಸ್ಪೂರ್ತಿ ಪಡೆದು ಬೆಂಗಳೂರಿನ ವಿದ್ಯಾರಣ್ಯಪುರದಲ್ಲಿ ವಿಶ್ವ ಗುರು ಫೌಂಡೇಷನ್ ಮೂಲಕ ಸಮಾಜಮುಖಿ ಸೇವೆ ಸಲ್ಲಿಸುತ್ತಿರುವ ಗೆಳೆಯ ಧನಂಜಯ್ ಮುರ್ದಂಬಿಲ್ ಅವರಿಗೆ ಧನ್ಯವಾದಗಳು

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s