ರಾಷ್ಟ್ರೋತ್ಥಾನ ಶಾಲೆಯ ರಾಜ್ಯೋತ್ಸವ ಆಚರಣೆ

rashtronaಸರಿ ಸುಮಾರು 1965 ರಲ್ಲಿ ಬೆಂಗಳೂರಿನಲ್ಲಿ ಸ್ಥಾಪನೆಗೊಂಡ ರಾಷ್ಟ್ರೋತ್ಥಾನ ಪರಿಷತ್ತು ಒಂದು ಸಾಮಾಜಿಕ ಸೇವಾ ಸಂಸ್ಥೆಯಾಗಿದ್ದು, ಈ ಸಂಸ್ಥೆಯ ಮೂಲಕ ರಾಜ್ಯಾದ್ಯಂತ ವಿವಿಧ ಪ್ರದೇಶಗಳಲ್ಲಿ ನಾನಾ ರೀತಿಯ ಸೇವಾ ಚಟುವಟಿಕೆಗಳನ್ನು ನಡೆಸುವ ಮೂಲಕ ಸಾಮಾಜಿಕ ಸುಧಾರಣೆಗಳನ್ನು ತರುತ್ತಿರುವುದಲ್ಲದೇ ಮುಂದಿನ ಪೀಳಿಗೆಗೆ ಉತ್ತಮ ಶಿಕ್ಷಣ ನೀಡುವ ಪ್ರಯತ್ನದಲ್ಲಿ ಹತ್ತು ಹಲವಾರು ಶಾಲೆಗಳನ್ನು ಆರಂಭಿಸಿದ್ದು. ಬೆಂಗಳೂರಿನ ಥಣಿಸಂದ್ರ ಮುಖ್ಯ ರಸ್ತೆಯ ಅರ್ಕಾವತಿ ಬಡಾವಣೆಯಲ್ಲಿರುವ ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರವೂ ಒಂದಾಗಿದೆ.

tvkschool
2006-07 ರಲ್ಲಿ ಆರಂಭವಾದ ಈ ಶಾಲೆಯ ಆಂಗ್ಲ ಮಾಧ್ಯಮದಲ್ಲಿ CBSE ಪಠ್ಯಕ್ರಮವನ್ನು ಅಳವಡಿಸಿಕೊಂಡಿದ್ದು. 2 ನೇ ಮತ್ತು 3 ನೇ ಭಾಷೆಗಳಳಾಗಿ ಕನ್ನಡ,ಸಂಸ್ಕೃತ ಮತ್ತು ಹಿಂದಿ ಭಾಷೆಯನ್ನು ಕಲಿಸಿಕೊಡಲಾಗುತ್ತದೆ. ಶಿಶುವಿಹಾರದಿಂದ ಹಿಡಿದು 10ನೇ ತರಗತಿಯ ವರೆಗೂ ಸುಮಾರು 3000 ವಿದ್ಯಾರ್ಥಿಗಳು ಇದ್ದು, ಸರಿ ಸುಮಾರು 200ಕ್ಕೂ ಹೆಚ್ಚಿನ ಶಿಕ್ಷಕರು ಮತ್ತು ಅಷ್ಟೇ ಸಂಖ್ಯೆಯ ಇತರೇ ಸಿಬ್ಬಂಧಿ ವರ್ಗದವರು ಈ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇಂತಹ ಸುಸಜ್ಜಿತ ಪ್ರತಿಷ್ಠಿತ ಶಾಲೆಯಲ್ಲಿ 2022ರ ನವೆಂಬರ್ 1ರಂದು ಅದ್ದೂರಿಯಿಂದ ಮತ್ತು ಅರ್ಥಪೂರ್ಣವಾಗಿ ಆಚರಿಸಿದ ಕನ್ನಡ ರಾಜ್ಯೋತ್ಸವದಲ್ಲಿ ಮುಖ್ಖ ಅತಿಥಿಯಾಗುವ ಸುಯೋಗ ವಯಕ್ತಿಕವಾಗಿ ನನಗೆ ದೊರೆತದ್ದು ಸುಕೃತವೇ ಸರಿ.

WhatsApp Image 2022-11-01 at 14.48.31

ಶಿಕ್ಷಣ ಸಂಸ್ಥೆ ಎಂದ ಮೇಲೆ ಸಮಯದ ಮಹತ್ವವನ್ನು ಚೆನ್ನಾಗಿ ಅರಿತಿರುವ ಕಾರಣ, ನಿಗಧಿತ ಸಮಯ 8:30ಕ್ಕೆ ಸರಿಯಾಗಿ ಹಳದಿ ಕೆಂಪು ಬಣ್ಣದ ಕನ್ನಡ ಬಾವುಟದ ಆರೋಹಣವನ್ನು ಮಾಡಿ 10-12 ವಿದ್ಯಾರ್ಥಿಗಳು ಕನ್ನಡ ನಾಡಗೀತೆ ಜಯ ಭಾರತ ಜನನಿಯ ತನುಜಾತೆ ಯನ್ನು ಅತ್ಯಂತ ರಾಗಬದ್ಧವಾಗಿ ಸುಶ್ರಾವ್ಯವಾಗಿ ಹಾಡುವ ಮೂಲಕ ಕಾರ್ಯಕ್ರಮ ಅಧಿಕೃತವಾಗಿ ಚಾಲನೆ ಗೊಂಡಿತು. ಅಲ್ಲಿಂದ ಎರಡನೇ ಮಹಡಿಯಲ್ಲಿರುವ ಸಭಾಂಗಣಕ್ಕೆ ಶಾಲೆಯ ಪ್ರಾಂಶುಪಾಲರು ಮತ್ತು ಸಾರ್ವಜನಿಕ ಸಂಪರ್ಕಾಧಿಕಾರಿಗಳ ಜೊತೆ ಬರುತ್ತಿದ್ದಂತೆಯೇ ಅಲ್ಲಿ ನಿಶ್ಯಬ್ಧವಾಗಿ ಕುಳಿತಿದ್ದ ಒಂದು ಸಾವಿರಕ್ಕೂ ಹೆಚ್ಚಿನ ಮಕ್ಕಳನ್ನು ನೋಡುತ್ತಿದ್ದಂತೆಯೇ ಎದೆ ಝಲ್ ಎಂದಿದ್ದಂತೂ ಸುಳ್ಳಲ್ಲ.

1

ವೇದಿಕೆಯ ಒಂದು ಭಾಗದಲ್ಲಿಟ್ಟಿದ್ದ ಓಂ, ಭಾರತಮಾತೆ, ಸರಸ್ವತಿಯ ಜೊತೆಗೆ ಕನ್ನಡ ರಾಜ್ಯದ ನಕಾಶೆಯಲ್ಲಿದ್ದ ತಾಯಿ ಭುವನೇಶ್ವರಿಯ ಮುಂದೆ ದೀಪ ಪ್ರಜ್ವಲನೆ ಮಾಡಿ ಆ ಎಲ್ಲಾ ಭಾವಚಿತ್ರಗಳಿಗೂ ಪುಪ್ಪಾರ್ಚನೆ ಮಾಡುತ್ತಿದ್ದಂತೆಯೇ, ವೇದಿಕೆಯ ಮೇಲೆ ಅದಾಗಲೇ ಸಿದ್ಧವಾಗಿ ಕುಳಿತಿದ್ದ ಮಕ್ಕಳು ಸುಶ್ರಾವ್ಯವಾಗಿ ಯಾಕುಂದೇದು ತುಷಾರ ಹಾರ ಧವಳ ಎಂಬ ಸರಸ್ವತಿ ಸ್ತುತಿಯೊಂದಿಗೆ ಇನ್ನೂ ಮೂರ್ನಾಲ್ಕು ಶ್ಲೋಕ ಮತ್ತು ಪ್ರಾರ್ಥನೆಗಳನ್ನು ಹಾಡುತ್ತಿದ್ದರೆ ಅದಕ್ಕೆ ಅನುಗುಣವಾಗಿ ಅದೇ ಶಾಲೆಯ ವಿದ್ಯಾರ್ಥಿಗಳು ಮತ್ತು ಸಂಗೀತ ಶಿಕ್ಷಕರು ಕೀಬೋರ್ಡ್, ತಬಲದೊಂದಿಗೆ ಪಕ್ಕವಾದ್ಯದಲ್ಲಿ ಸಹಕರಿಸುತ್ತಿದ್ದದ್ದು ಮುದ ನೀಡಿತು.

4

ಅದೇ ಶಾಲೆಯ ಇಬ್ಬರು ಅವಳಿ ಮಕ್ಕಳು ನವೆಂಬರ್ 1ರಂದೇ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದ ಕಾರಣ, ನೆರೆದಿದ್ದ ಎಲ್ಲಾ ಮಕ್ಕಳ ಸಮ್ಮುಖದಲ್ಲಿ ಅವರಿಗೆ ಅವರ ಶಿಕ್ಷರಿಂದಲೇ ಆರತಿ ಬೆಳಗುವ ಸಂಪ್ರದಾಯ ನಿಜಕ್ಕೂ ಅಚ್ಚರಿ ತಂದಿತ್ತು (ಈ ಪದ್ಧತಿಯು ಶಾಲೆಯ ಎಲ್ಲಾ ಮಕ್ಕಳ ಹುಟ್ಟು ಹಬ್ಬದಂದು ಆಚರಿಲಾಗುತ್ತದೆ ಎಂದು ನಂತರ ತಿಳಿದು ಬಂದಿತು) ನಂತರ 10ನೇ ತರಗತಿಯ ವಿದ್ಯಾರ್ಥಿಯಿಂದ ಪ್ರಾರ್ಥನೆ, ಅತಿಥಿಗಳ ಸ್ವಾಗತ ಮತ್ತು ಪರಿಚಯವನ್ನು ಮಾಡಿಕೊಟ್ಟ ನಂತರ ನಡೆದದ್ದಲ್ಲಾ ಕಾರ್ಯಕ್ರಮಗಳೂ ಕಣ್ಣಿಗೆ ಹಬ್ಬವೇ.

ರಾಜ್ಯೋತ್ಸವದ ಹೆಸರಿನಲ್ಲಿ ಕನ್ನಡ ಚಲನಚಿತ್ರಗಳ ಅರ್ಥವೇ ಇಲ್ಲದ ಅಸಂಬದ್ಧ ಹಾಡುಗಳಿಗೆ ಅಷ್ಟೇ ಅಸಹ್ಯಕರವಾಗಿ ಮೈ ಕೈ ಕುಲುಕಿಸುತ್ತಾ ನರ್ತಿಸುವುದೇ ಸಾಂಸ್ಕೃತಿಕ ಕಾರ್ಯಕ್ರಮ ಎಂದು ಭಾವಿಸಿರುವ ಅನೇಕರಿಗೆ ಈ ಶಾಲೆಯಲ್ಲಿ ಆಯೋಜಿಸಿದ್ದ “ವೈಭವದ ವಿಜಯನಗರ ಸಾಮ್ರಾಜ್ಯ” ಕಾರ್ಯಕ್ರಮ, ನಿಜಕ್ಕೂ ರಾಜ್ಯೋತ್ಸವದ ಆಚರಣೆಯನ್ನು ಬಹಳ ಅರ್ಥಪೂರ್ಣವಾಗಿಸಿತು ಎಂದರೂ ಅತಿಶಯವಾಗದು. ಕರ್ನಾಟಕ ಎಂದ ಕೂಡಲೇ, ಥಟ್ ಅಂತ ನೆನಪಾಗೋದೇ ರಸ್ತೆ ರಸ್ತೆಗಳಲ್ಲಿ ಮುತ್ತು ರತ್ನಗಳನ್ನು ಬಳ್ಳ ಬಳ್ಳಗಳಲ್ಲಿ ಮಾರಾಟ ಮಾಡುತ್ತಿದ್ದಂತಹ ಶ್ರೀ ಕೃಷ್ಣದೇವರಾಯರ ವಿಜಯನಗರ ಸಾಮ್ರಾಜ್ಯ, ಶಿಲ್ಪಕಲೆಗಳ ಪ್ರತೀಕವಾಗಿ ಹಂಪೆಯ ವಿರೂಪಾಕ್ಷ ದೇವಾಲಯ, ಕಡಲೇ ಕಾಳು ಗಣಪ, ಕಲ್ಲಿನ ರಥಗಳ ಹಿನ್ನಲೆಯಲ್ಲಿ ವಿಜಯನಗರದ ಅರಸ ಶ್ರೀಕೃಷ್ಣದೇವರಾಯರನ್ನು ಶಂಖ, ಕಹಳೆಗಳ ಮೂಲಕ ಬಹುಪರಾಕ್ ನೊಂದಿಗೆ ವೇದಿಕೆ ಮೇಲೆ ಬರಮಾಡಿಕೊಂಡು ರಾಜರ ಸಮ್ಮುಖದಲ್ಲಿಯೇ ವಿಜಯ ನಗರ ಸಾಮ್ರಾಜ್ಯವನ್ನು ಕೊಂಡಾಡುವ ಲಾವಣಿಯೊಂದಿಗೆ ಆರಂಭವಾದ ವಿಜಯನಗರದ ವೈಭವದ ಸಾಂಸ್ಕೃತಿಯ ಕಾರ್ಯಕ್ರಮ, ನಂತರ ಭರತನಾಟ್ಯ, ಬೀರಪ್ಪನ ಪೂಜಾ ಕುಣಿತ, ಶ್ರೀ ಕೃಷ್ಣ ದೇವರಾಯನ ಆಸ್ಥಾನದಲ್ಲಿದ್ದ ವಿಕಟಕವಿ ತೆನಾಲಿ ರಾಮಕೃಷ್ಣನ ತಿಲಕಾಷ್ಠ ಮಹಿಷ ಬಂಧನ ನಾಟಕ, ಆನಂತರ ಕೈಯಲ್ಲಿ ಕತ್ತಿ ಹಿಡಿದ ವೀರಭದ್ರ ಕುಣಿತ, ಕಂಸಾಳೆ ಕುಣಿತ ಜೊತೆ ವಿವಿಧ ಭಂಗಿಗಳ ನಂತರ ಕಡೆಯದಾಗಿ ಹತ್ತಿಪ್ಪತ್ತು ಹುಡುಗಿಯರ ನಂದಿ ಕೋಲು ಕುಣಿತ ಪ್ರತೀ ಪ್ರದರ್ಶನ ಮುಕ್ತಾಯವಾದಾಗ ಆ ಕಲಾವಿದರುಗಳಿಗೆ ರಾಜರು ನೀಡುತ್ತಿದ್ದ ಬಹುಮಾನ ಇವೆಲ್ಲವೂ ಸಹಾ ಪಠ್ಯಪುಸ್ತಕಗಳಲ್ಲಿ ವಿಜಯನಗರ ಸಾಮ್ಯಾಜ್ಯದ ಗತವೈಭವವನ್ನು ಓದುತ್ತಿದ್ದ ಮಕ್ಕಳಿಗೆ ನೇರವಾಗಿ ಅವರ ಕಣ್ಮುಂದೆಯೇ ವಿಜಯ ನಗರದ ವೈಭವವನ್ನು ಅತ್ಯಂತ ವರ್ಣಮಯವಾಗಿ ಆ ಶಾಲೆಯ ಮಕ್ಕಳು ಪ್ರದರ್ಶನ ಮಾಡಿದ್ದದ್ದು ನಯನ ಮಹೋಹರವಾಗಿತ್ತು.

WhatsApp Image 2022-11-01 at 14.49.22 (1)

ಈ ಎಲ್ಲಾ ಸಾಂಸ್ಕೃತಿಕ ಕಾರ್ಯಕ್ರಮಗಳು ಮುಗಿದ ನಂತರ ಮುಖ್ಯ ಅತಿಥಿಯಾಗಿ ನನ್ನ ಭಾಷಣದಲ್ಲಿ, ಸ್ವಾತಂತ್ರ ಪೂರ್ವದಲ್ಲಿ ಕರ್ನಾಟಕ ಮತ್ತು ಕನ್ನಡಿಗರು ಹೇಗೆ ವಿಕೇಂದ್ರೀಕರಣಗೊಂಡಿದ್ದರು ನಂತರ ಹೇಗೆ ಕನ್ನಡ ಕುಲಪುರೋಹಿತ ಆಲೂರು ವೆಂಕಟರಾಯ ಏಕೀಕರಣ ಚಳುವಳಿಯ ಮೂಲಕ ಒಗ್ಗೂಡುವಿಕೆ ಆರಂಭವಾಗಿ, ದೇಶಕ್ಕೆ ಸ್ವಾತ್ರಂತ್ರ ದೊರೆತ ನಂತರ ಒಕ್ಕೂಟ ದೇಶದ ಮೊದಲ ರಾಜ್ಯವಾಗಿ ಹೇಗೆ ಮೈಸೂರು ಭಾರತ ದೇಶದ ಭಾಗವಾಯಿತು. 1956 ನವೆಂಬರ್ 1 ರಂದು ಭಾಷಾವಾರು ಪ್ರಾಂತ್ಯದ ಆಧಾರದಲ್ಲಿ ಹರಿದು ಹಂಚಿಹೋಗಿದ್ದ ಕನ್ನಡಿಗರನ್ನು ಮೈಸೂರು ಸಂಸ್ಥಾನದಲ್ಲಿ ಜೋಡಿಸಲಾಯಿತು, ಆನಂತರ 1973 ನವೆಂಬರ್ 1 ರಂದು ಅಂದಿನ ಮುಖ್ಯಮಂತ್ರಿಗಳಾಗಿದ್ದ ಶ್ರೀ ದೇವರಾಜ ಅರಸರ ಕಾಲದಲ್ಲಿ ಮೈಸೂರು ಸಂಸ್ಥಾನ ಹೇಗೆ ಮತ್ತು ಏಕೆ ಕರ್ನಾಟಕ ಎಂದು ತನ್ನ ಹೆಸರನ್ನು ಬದಲಿಸಿಕೊಂಡಿತು ಎಂಬುದನ್ನು ಸವಿವರವಾಗಿ ಮಕ್ಕಳಿಗೆ ತಿಳಿದ ನಂತರ 3ನೇ ಶತಮಾನದಿಂದ 20ನೇ ಶತಮಾನದ ವರೆಗೂ ಕರ್ನಾಟಕವನ್ನು ಆಳಿದ ಗಂಗ ಕದಂಬ, ರಾಷ್ಟ್ರಕೂಟ ಚಾಳುಕ್ಯ, ಹೊಯ್ಸಳ, ಬಲ್ಲಾಳ, ಹಕ್ಕ ಬುಕ್ಕರ ವಿಜಯನನಗರ ನಂತರ ಕರ್ನಾಟಕದ ಕಡೆಯ ರಾಜ ಮನೆತನ ಮೈಸೂರು ಅರಸರನ್ನು ನೆನಪಿಸಿಕೊಳ್ಳುವುದರ ಜೊತೆಗೆ ವಿಜಯನಗರ ಸಂಸ್ಥಾನದ ಶಂಕುಸ್ಥಾಪನೆಯ ಕರಾಳ ಕಥೆ-ವ್ಯಥೆಯ ಜೊತೆಗೆ ತಿರುಚನಾಪಳ್ಳಿಯ ಜಟ್ಟಿಯ ಮಣ್ಣು ಮುಕ್ಕಿಸಿದ ರಣಧೀರ ಕಂಠೀರವರ ಸಾಹಸ ಕತೆಯನ್ನು ಹೇಳಿ ನಿಶ್ಯಬ್ಧವಾಗಿ ಕುಳಿತಿದ್ದ ಮಕ್ಕಳಲ್ಲಿ ಕನ್ನಡಿಗರ ಶೌರ್ಯ ಸಾಹಸಗಳ ಬಗ್ಗೆ ಹೆಮ್ಮೆ ಪಟ್ಟುಕೊಳ್ಳುವಂತೆ ಮಾಡುವ ಪ್ರಯತ್ನ ನಡೆಯಿತು.

12

ದೇಶಕ್ಕೆ ಸ್ವಾತ್ರಂತ್ರ್ಯ ಬಂದ ನಂತರ ಸಂವಿಧಾನದ ಕರುಡ ನ್ನು ಸಿದ್ದ ಪಡಿಸಿದ ಕನ್ನಡಿಗ ಬೆನಗಲ್ ನರಸಿಂಗ ರಾಯರು, ದೇಶದ ಪ್ರಪ್ರಥಮ ಸೇನಾ ದಂಡ ನಾಯಕ ಕಾರ್ಯಪ್ಪ, ನಮ್ಮ ಕನ್ನಡಕ್ಕೆ ದೊರೆತ ೮ ಜ್ಞಾನಪೀಠ ಪ್ರಶಸ್ತಿಗಳನ್ನು ನೆನಪಿಸಿ, ದೇಶದ 6 ಕೇಂದ್ರ ಸರ್ಕಾರದ ಸ್ವಾಯುತ್ತತೆ ಸಂಸ್ಥೆಗಳಾದ BEL, HAL, HMT, ITI, BEML, BHEL ಕರ್ನಾಟಕದಲ್ಲಿ ಆರಂಭವಾದ ಪರಿ, ಕೇವಲ ಉದ್ಯಾನ ನಗರಿಯಾಗಿದ್ದ ಬೆಂಗಳೂರು ನೋಡ ನೋಡುತ್ತಿದ್ದಂತೆಯೇ ಹೇಗೆ ಪ್ರಪಂಚದ ಎರಡನೇ ಅತಿದೊಡ್ಡ ಸಾಪ್ಟವೇರ್ ನಗರಿಯಾಗಿ (Silicon City) ಬೆಳೆದು ದೇಶದ ಎರಡನೇ ಅತಿದೊಡ್ಡ ತೆರಿಗೆ ಪಾವತಿಸುವ ರಾಜ್ಯವಾಗಿದೆ ಎಂಬುದನ್ನು ಎಳೆ ಎಳೆಯಾಗಿ ಬಿಡಿಸಿ ಕನ್ನಡ ಮತ್ತು ಕರ್ನಾಟಕ ಹಿರಿಮೆ ಗರಿಮೆಯನ್ನು ಮಕ್ಕಳಿಗೆ ಮನಮುಟ್ಟುವಂತೆ ಹೇಳಿದ್ದಲ್ಲದೇ, ಕನ್ನಡ ಉಳಿಯ ಬೇಕಾದರೆ ಪ್ರತಿಯೊಬ್ಬ ಮಕ್ಕಳ ಪಾತ್ರವೇನು? ಎಂಬುದನ್ನು ವಿವರಿಸಿ, ಮಕ್ಕಳಿಂದ ಕನ್ನಡ ಉಳಿಸುವುಕೆ ಮತ್ತು ಬೆಳೆಸುವಿಕೆಗಳಿಗೆ ಕೆಲವು ಪ್ರತಿಜ್ಞೆಗಳನ್ನು ಮಾಡಿಸುವ ಮೂಲಕ ಅಧ್ಯಕ್ಷೀಯ ಭಾಷಣ ಮುಗಿದ ನಂತರ, ವಂದನಾರ್ಪಣೆ ಮತ್ತು ಶಾಂತಿ ಮಂತ್ರದ ಮೂಲಕ ಒಂದು ಅರ್ಥಪೂರ್ಣ ಕನ್ನಡ ರಾಜ್ಯೋತ್ಸವಕ್ಕೆ ತೆರೆ ಬಿದ್ದ ನಂತರ ಅನೌಪಚಾರಿಕವಾಗಿ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಕ್ಕಳೊಂದಿಗೆ ಪೋಟೋ ತೆಗಿಸಿಕೊಂಡ ನಂತರ ಇಡೀ ಕಾರ್ಯಕ್ರಮವನ್ನು ಯೋಜಿಸಿ ಅದನ್ನು ಮಕ್ಕಳಿಗೆ ಹೇಳಿಕೊಟ್ಟು ಎಲ್ಲಾ ಶಿಕ್ಷಕರೊಂದಿಗೆ ಪೋಟೋ ತೆಗೆಸಿಕೊಂಡಿದ್ದು ಮನಸ್ಸಿಗೆ ಮುದ ನೀಡಿತು. ಎಲ್ಲಕ್ಕಿಂತಲೂ ಮೆಚ್ಚುಗೆಯಾದ ಅಂಶವೆಂದರೆ, ಕನ್ನಡ ವಿಭಾಗದಲ್ಲಿ 10ಕ್ಕೂ ಹೆಚ್ಚಿನ ಶಿಕ್ಷ್ಕಕರು ಇರುವ ಸಂಗತಿ.

ಶಾಲಾ ಮುಖ್ಯೋಪಾಧ್ಯಾಯಿನಿಯವರ ಜೊತೆ ಶಾಲೆಯ ಬಗ್ಗೆ ಮಾತನಾಡುತ್ತಿದ್ದಾಗ ಅವರ ಶಾಲೆಯಲ್ಲಿ ಶಿಕ್ಷಣದ ಮೂಲಭೂತ ವ್ಯವಸ್ಥೆಯನ್ನು “ಪಂಚಮುಖಿ ಶಿಕ್ಷಣ” ಎಂದು ಕರೆಯಲಾಗುತ್ತದೆ, ಇದರ ಪ್ರಕಾರ ಕೇವಲ ಶೈಕ್ಷಣಿಕ ವಿದ್ಯಾಭ್ಯಾಸವಲ್ಲದೇ, ಮಕ್ಕಳಿಗೆ ಬೌದ್ಧಿಕ, ಭಾವನಾತ್ಮಕ, ಮಾನಸಿಕ, ದೈಹಿಕ ಮತ್ತು ಆಧ್ಯಾತ್ಮಿಕ ಶಿಕ್ಷಣವನ್ನು ಒಳಗೊಂಡಿರುವ ಮಗುವಿನ ಸರ್ವತೋಮುಖ ಬೆಳವಣಿಗೆಗೆ ಮೌಲ್ಯಾಧಾರಿತ ಶಿಕ್ಷಣವಾಗಿದ್ದು ಒಂದು ರೀತಿಯ ಗುರುಕುಲ ಶಿಕ್ಷಣ ಪದ್ಧತಿಯ ಹಾಗೆ ಇರುತ್ತದೆ ಎಂದು ತಿಳಿಸಿದ್ದರು. ಶಾಲೆಯ ಆವರಣದಲ್ಲಿ ನಾಲ್ಕು ಗಂಟೆಗಳ ಕಾಲ ಕಳೆದು ಅಲ್ಲಿನ ಮಕ್ಕಳು, ಶಿಕ್ಷಕರು ಮತ್ತು ಅಲ್ಲಿನ ಶಿಸ್ತು ಮತ್ತು ಸಂಸ್ಕಾರಗಳನ್ನು ಪ್ರತ್ಯಕ್ಷವಾಗಿ ನೋಡಿದಾಗ ಮುಖ್ಯೋಪಾಧ್ಯಾಯಿನಿಯವರು ಹೇಳಿದ್ದಷ್ಟೂ ಸತ್ಯ ಎಂಬ ಮನವರಿಕೆಯಾಗಿದ್ದಂತೂ ಸುಳ್ಳಲ್ಲ. ಇದನ್ನೆಲ್ಲವನ್ನೂ ನೋಡಿದಾಗ ಶಿವರಾಮ ಕಾರಂತರು ಮಕ್ಕಳಿಗೆ ಆಸ್ತಿ ಮಾಡಬೇಡಿ ಬದಲಾಗಿ ಮಕ್ಕಳಿಗೆ ಒಳ್ಳೆಯ ಶಿಕ್ಷಣವನ್ನು ಕೊಟ್ಟು ಅವರನ್ನೇ ಆಸ್ತಿಯನ್ನಾಗಿ ಮಾಡಿ ಎಂದು ಹೇಳಿದ್ದದ್ದು ನೆನಪಾಗಿ, ಇಂತಹ ಶಾಲೆಗಳಲ್ಲಿ ಮಕ್ಕಳಿಗೆ ಶಿಕ್ಷಣ ಕೊಡಿಸಿದಲ್ಲಿ ಅವರು ಕಂಡಿತವಾಗಿಯೇ ದೇಶಕ್ಕೇ ಆಸ್ತಿಗಳಾಗುತ್ತಾರೆ ಅಲ್ವೇ?

ಏನಂತೀರೀ?
ನಿಮ್ಮವನೇ ಉಮಾಸುತ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s