ರಾವ್‌ ಬಹಾದ್ದೂರ್‌ ಧರ್ಮ ಪ್ರವರ್ತಕ ಗುಬ್ಬಿ ತೋಟದಪ್ಪ

tonta4ಸಾಮಾನ್ಯವಾಗಿ ವ್ಯಾಪಾರ ವ್ಯವಹಾರ ನಡೆಸುವಾಗ, ವ್ಯಾಪಾರಕ್ಕೆ ಉಚಿತವಲ್ಲದ ಕನಿಷ್ಠ ಬೆಲೆಯನ್ನು ಕೇಳಿದಾಗ, ಥಟ್ ಅಂತ ಅವರಿಗೆ ಅರಿವಿಲ್ಲದಂತೆಯೇ ನೀವು ಕೇಳಿದ ಬೆರೆಗೆ ಕೊಡಲು ನಾವೇನೂ ತೋಟದಪ್ಪನ ಛತ್ರ ನಡೆಸುತ್ತಿದ್ದೇವಾ? ಎಂದು ಪ್ರಶ್ನಿಸುವುದನ್ನು ಗಮನಿಸಿರಬಹುದು. ಇದೇ ಸಂಭಾಷಣೆ ಅನೇಕ ನಾಟಕ ಮತ್ತು ಸಿನಿಮಾಗಳಲ್ಲಿಯೂ ಸರ್ವೇ ಸಾಮಾನ್ಯವಾಗಿದೆ. ಹಾಗಾಗಿ ಜನಮಾನಸದಲ್ಲಿ ಅ ಪರಿಯಾಗಿ ಮನೆ ಮಾತಾಗಿರುವ ರಾವ್‌ ಬಹಾದ್ದೂರ್‌ ಧರ್ಮ ಪ್ರವರ್ತಕ ಗುಬ್ಬಿ ತೋಟದಪ್ಪರವರೇ ನಮ್ಮ ಇಂದಿನ ಕನ್ನಡದ ಕಲಿಗಳು ಮಾಲಿಕೆಯ ಕಥಾ ನಾಯಕರು.

tonta3ತುಮಕೂರು ಜಿಲ್ಲೆಯ ಗುಬ್ಬಿ ಕರ್ನಾಟಕದ ಸಾರಸ್ವತ ಲೋಕದಲ್ಲಿ ಅತ್ಯಂತ ಹೆಸರುವಾಸಿಯಾದ ಪಟ್ಟಣವಾಗಿದೆ. ಸ್ವಾತ್ರಂತ್ರ್ಯ ಪೂರ್ವದಲ್ಲಿ ಗುಬ್ಬಿ ವೀರಣ್ಣನವರ ನಾಟಕ ಕಂಪನಿ ಅನೇಕ ಕಂಪನಿ ನಾಟಕಕಾರರ ತವರು ಮನೆಯಾಗಿದ್ದು, ನಂತರದ ದಿನಗಳಲ್ಲಿ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡು ಅನೇಕ ಕಲಾವಿದರುಗಳು ಗುಬ್ಬಿ ಕಂಪನಿಯಿಂದಲೇ ಬಂದವರು. ಅದೇ ಗುಬ್ಬಿಯ ಅತ್ಯಂತ ಸ್ಥಿತಿವಂತ ಕುಟಂಬದ ಶ್ರೀ ರುದ್ರಪ್ಪ ಹಾಗು ಚೆನ್ನಮ್ಮ ದಂಪತಿಗಳ ಸುಪುತ್ರರಾಗಿ 1838ರಲ್ಲಿ ತೋಟದಪ್ಪನವರು ಜನಿಸುತ್ತಾರೆ. ಶ್ರೀ ರುದ್ರಪ್ಪನವರು ವ್ಯಾಪಾರ ವಹಿವಾಟು ನಡೆಸಲು ಅಗ್ಗಾಗ್ಗೆ ಬೆಂಗಳೂರಿನ ಮಾಮೂಲು ಪೇಟೆಗೆ ಬರುತ್ತಿದ್ದರಿಂದ ಕೆಲವೊಮ್ಮೆ ಮರಳಿ ಊರಿಗೆ ಹೋಗಲು ತಡವಾಗುತ್ತಿದ್ದ ಕಾರಣ ಬೆಂಗಳೂರಿನಲ್ಲೇ ತಂಗಲು ಒಂದು ಮನೆಯನ್ನು ಕೊಳ್ಳುತ್ತಾರೆ. ನಂತರ ತುಮಕೂರು ಸುತ್ತಮುತ್ತಲಿನ ಊರುಗಳಿಂದ ಹೆಚ್ಚಿನ ವಿದ್ಯಾಭ್ಯಾಸಕ್ಕೆಂದು ಬೆಂಗಳೂರಿಗೆ ಬರುತ್ತಿದ್ದ ಬಡ ಕುಟುಂಬದ ವಿದ್ಯಾರ್ಥಿಗಳಿಗೆ ಇದೇ ಮನೆಯೇ ಆಶ್ರಯದಾಣವಾಗುತ್ತದೆ. ಹಾಗೆ ದಿನ ಕಳೆದಂತೆ ದೂರದೂರದ ಊರುಗಳಿಂದ ಬೆಂಗಳೂರಿನ ಚಿಕ್ಕಪೇಟೆ, ಮಾಮೂಲಪೇಟೆ, ಬಳೇಪೇಟೆಗಳಿಗೆ ಬರುತ್ತಿದ್ದ ವ್ಯಾಪಾರಸ್ಥರು ಕೂಡ ಇಲ್ಲೇ ಉಳಿದುಕೊಳ್ಳಲು ಪ್ರಾರಂಭಿಸುವ ವೇಳೆಗೆ ತೋಟದಪ್ಪನವರ ತಂದೆಯವರು ಅಗಲಿ ತೋಟದಪ್ಪನವರೇ ವ್ಯಾಪಾರ ವ್ಯವಹಾರಗಳನ್ನು ನೋಡಿಕೊಳ್ಳುತ್ತಿರುತ್ತಾರೆ. ಮದುವೆಯಾಗಿ ಬಹಳ ವರ್ಷಗಳಾದಾರೂ ತೋಟದಪ್ಪನವರಿಗೆ ಮಕ್ಕಳಿಲ್ಲದಿದ್ದ ಕಾರಣ, ತಮ್ಮ ಮನೆಯಲ್ಲಿ ಉಳಿದು ಕೊಂಡು ವಿದ್ಯಾಭ್ಯಾಸ ಮಾಡುತ್ತಿದ್ದ ಮಕ್ಕಳ ಮೇಲೆ ತೋಟದಪ್ಪನವರಿಗೆ ಅಪಾರವಾದ ಪ್ರೀತಿ. ಹಾಗಾಗಿ ಈ ರೀತಿಯಾಗಿ ಬೆಂಗಳೂರಿಗೆ ಓದಲು ಬರುವ ಬಡ ಮಕ್ಕಳಿಗೆ ಆಶ್ರಯ ಕಲ್ಪಿಸಬೇಕೆಂಬ ಉದ್ದೇಶದಿಂದ ವಿದ್ಯಾರ್ಥಿನಿಲವೊಂದನ್ನು ಕಟ್ಟಲು ನಿರ್ಧರಿಸುತ್ತಾರೆ.

todaದೂರದ ಊರಿನಿಂದ ರೈಲಿನಲ್ಲಿ ಬರುವ ಮಕ್ಕಳಿಗೆ ಅನುಕೂಲವಾಗಲೆಂದು 1897ರಲ್ಲಿ ಆಗಿನ ಮೈಸೂರು ಸರ್ಕಾರದ ರೈಲ್ವೆ ಇಲಾಖೆಯಿಂದ ಸುಮಾರು 2.5 ಎಕರೆ ಜಾಗವನ್ನು 10,000ರೂಗಳಿಗೆ ಖರೀದಿಸಿ ರೈಲ್ವೇ ನಿಲ್ದಾಣದ ಪಕ್ಕದಲ್ಲೇ, ಪ್ರವಾಸಿಗಳಿಗೆ ಧರ್ಮ ಛತ್ರ ಹಾಗೂ ವಿದ್ಯಾರ್ಥಿಗಳಿಗೆ 10 ಕೊಠದಿಯ ವಿದ್ಯಾರ್ಥಿ ನಿಲಯವನ್ನು ಕಟ್ಟಿಸಿ, ಆ ಕಟ್ಟದವನ್ನು ಫೆಬ್ರವರಿ 11,1903 ರಲ್ಲಿ ಅಂದಿನ ಮೈಸೂರು ಮಹಾರಾಜರಾಗಿದ್ದ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಅಮೃತಹಸ್ತದಿಂದ ಅಧಿಕೃತವಾಗಿ ಉದ್ಘಾಟನೆ ಮಾಡಿಸುತ್ತಾರೆ. ಇಷ್ಟೇ ಅಲ್ಲದೇ ತಮ್ಮ ನಂತರವು ಈ ವಿದ್ಯಾರ್ಥಿ ನಿಲಯ ಸುಗಮವಾಗಿ ನಡೆದುಕೊಂಡು ಹೋಗಬೇಕೆಂದು ನಿರ್ಧರಿಸಿ, ತೋಟದಪ್ಪನವರು ರಾವ್ ಬಹದ್ದೂರ್ ಗುಬ್ಬಿ ತೋಟದಪ್ಪ ಚಾರಿಟಿ ಎಂಬ ಹೆಸರಿನಲ್ಲಿ ಕೆ ಪಿ ಪುಟ್ಟಣ್ಣ ಚೆಟ್ಟಿಯವರ ಅಧ್ಯಕ್ಷತೆಯಲ್ಲಿ ಟ್ರಸ್ಟ್ ಒಂದನ್ನು ಸ್ಥಾಪಿಸಿ ತಮ್ಮ ಸಮಸ್ತ ಆಸ್ತಿಯನ್ನು ಆ ಟ್ರಸ್ಟಿನ ಹೆಸರಿಗೆ ಬರೆದು ಅದರಿಂದ ಬರುವ ಆದಾಯದಿಂದಲೇ ಈ ವಿದ್ಯಾರ್ಥಿನಿಲಯ ಸುಗಮವಾಗಿ ನಡೆದುಕೊಂಡು ಹೋಗಬೇಕೆಂದು ತಿಳಿಸಿರುತ್ತಾರೆ. ಹಾಗಾಗಿ ಅಂದಿನಿಂದ ಇಂದಿನವರೆಗೆ ಲಕ್ಷಾಂತರ ವಿದ್ಯಾರ್ಥಿಗಳು ಈ ವಿದ್ಯಾರ್ಥಿನಿಲಯವನ್ನು ಸದುಪಯೋಗ ಪಡಿಸಿಕೊಂಡು ಸಮಾಜದಲ್ಲಿ ಅತ್ಯುನ್ನತ ಸ್ಥಾನ ಮಾನಗಳನ್ನು ಗಳಿಸಿದ್ದಾರೆ. ನಂತರ ದಿನಗಳಲ್ಲಿ ಈ ಧರ್ಮ ಛತ್ರವು ಎಲ್ಲಾ ಜನರಿಗೂ ಆಶ್ರಯ ಒದಗಿಸಿದ್ದಲ್ಲದೇ, ಕರ್ನಾಟಕ ರಾಜ್ಯಾದ್ಯಂತ ಬೇರೆ ಬೇರೆ ಜಿಲ್ಲೆಗಳಲ್ಲಿ ಒಟ್ಟು 16 ವಿದ್ಯಾರ್ಥಿನಿಲಯಗಳನ್ನು (ಹುಡುಗ ಮತ್ತು ಹುಡುಗಿಯರಿಗೆ ಪ್ರತ್ಯೇಕ) ಆರಂಭಿಸಿ ಅಲ್ಲಿ ವಸತಿ ಮತ್ತು ನಿತ್ಯ ದಾಸೋಹದ ವ್ಯವಸ್ಥೆಯಿದ್ದು ಪ್ರತೀವರ್ಷ ಸುಮಾರು 500 ಹೊಸ ವಿದ್ಯಾರ್ಥಿಗಳಿಗೆ ಆಶ್ರಯ ಮತ್ತು ದಾಸೋಹ ವ್ಯವಸ್ಥೆ ನೀಡುವ ಮೂಲಕ ಅಂದಿನಿಂದ ಇಂದಿನವರೆಗೂ ಲಕ್ಷಾಂತರ ವಿದ್ಯಾರ್ಥಿಗಳ ಜೀವನಕ್ಕೆ ದಾರಿ ಮಾಡಿಕೊಟ್ಟಿದೆ.

tonta2ನಡೆದಾಡುವ ದೇವರು ಎಂದೇ ಪ್ರಖ್ಯಾತರಾಗಿದ್ದ ಶತಾಯುಷಿ ಸಿದ್ಧಗಂಗೆಯ ಶ್ರೀ ಶ್ರೀ ಶಿವಕುಮಾರ ಸ್ವಾಮಿಗಳು (1927 -1930), ಕರ್ನಾಟಕದ ಮುಖ್ಯಮಂತ್ರಿಗಳಾಗಿದ್ದ ಎಸ್ ನಿಜಲಿಂಗಪ್ಪನವರು (1921-1924), ಕರ್ನಾಟಕ ಸರ್ಕಾರದ ಶಿಕ್ಷಣ ಸಚಿವರಾಗಿದ್ದ ಶ್ರೀ ಡಿ ಎಚ್ ಚಂದ್ರಶೇಖರಯ್ಯ, ಅಕೌಂಟೆಂಟ್ ಜನರಲ್ ಆಗಿದ್ದ ಶ್ರೀ ಡಿ ಏಚ್ ವೀರಯ್ಯ ಮತ್ತು ಕರ್ನಾಟಕ ಪೊಲೀಸ್ ಮುಖ್ಯ ಅಧಿಕಾರಿ ಎಚ್ ವೀರಭದ್ರಯ್ಯ ಮುಂತಾದ ಅನೇಕ ಗಣ್ಯರು ಇದೇ ವಿದ್ಯಾರ್ಥಿ ನಿಲಯದಲ್ಲೇ ಇದ್ದು ವಿದ್ಯಾಭ್ಯಾಸ ಮಾಡಿದ್ದದ್ದು ಗಮನಾರ್ಹ. ಅಮೇರಿಕಾದ ಚಿಕಾಗೋ ಧರ್ಮ ಸಮ್ಮೇಳನಕ್ಕೆ ಹೋಗುವ ಮುನ್ನಾ ಪರಿವ್ರಾಜಕರಾಗಿ ಭಾರತಾದ್ಯಂತ ಪ್ರರಿಪ್ರಮಿಸಿದ್ದ ಸ್ವಾಮಿ ವಿವೇಕಾನಂದರು ಬೆಂಗಳೂರಿಗೆ ಬಂದಾಗ ಇದೇ ಸ್ಥಳದಲ್ಲೇ ತಂಗಿದ್ದರು ಎಂದು ಹೇಳಲಾಗುತ್ತದೆ. ಅದರ ಪ್ರತೀಕವಾಗಿ ಅವರು ಕುಳಿತಿದ್ದ ಕಲ್ಲಿನ ಬೆಂಚೊಂದನ್ನು ಇಂದಿಗೂ ಸಹಾ ಬಸವನಗುಡಿಯ ರಾಮಕೃಷ್ಣ ಆಶ್ರಮದಲ್ಲಿ ಕಾಣಬಹುದಾಗಿದೆ.

ತೋಟದಪ್ಪನವರ ಟ್ರಸ್ಟಿನ ಒಡೆತನದಲ್ಲಿ ಬೆಂಗಳೂರು ಸಿಟಿ ರೈಲ್ವೇ ನಿಲ್ದಾಣದ ಸುತ್ತಮುತ್ತಲು ಸುಮಾರು ಅಂಗಡಿ ಮುಗ್ಗಟ್ಟುಗಳು ಮತ್ತು ಮತ್ತು ಮಾಮುಲ್‌ಪೇಟೆಯಲ್ಲಿ ಕೆಲವು ವಾಣಿಜ್ಯ ಪ್ರದೇಶಗಳಿದ್ದು ಅವುಗಳಿಂದ ಪ್ರತೀ ತಿಂಗಳೂ ಸುಮಾರು 40-50 ಲಕ್ಷ ರೂಪಾಯಿಗಳಷ್ಟು ಬಾಡಿಗೆ ಬರುತ್ತದೆ. ಅಷ್ಟೇ ಅಲ್ಲದೇ, ಅದೇ ಸ್ಥಳದಲ್ಲಿ ತೋಟದಪ್ಪನವರ ನೂರು ವರ್ಷದ ನೆನಪಿಗಾಗಿ ಬೆಲ್ ಎಂಬ ಆಧುನಿಕ ರೀತಿಯ ಐಶಾರಾಮ್ಯ ಹೋಟೆಲ್ ಒಂದನ್ನು ಆರಂಭಿಸಿ ಅದರಿಂದ ಬರುವ ಹಣವನ್ನೂ ಸಹಾ ಬೆಂಗಳೂರು ಮತ್ತು ಕರ್ನಾಟಕದ ಇತರೇ ಜಿಲ್ಲೆಗಳಲ್ಲಿರುವ ಉಚಿತ ವಿದ್ಯಾರ್ಥಿನಿಲಯಗಳ ನಿರ್ವಹಣೆಗಾಗಿ ಬಳಸಲಾಗುತ್ತದೆ.

tonta1ಇದೇ ಸಂಸ್ಥೆಯು ವತಿಯಿಂದ ಪ್ರತಿ ವರ್ಷವೂ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡುವುದಕ್ಕಾಗಿಯೇ 25 ಲಕ್ಷ ರೂ.ಗಳನ್ನು ಕಾಯ್ದಿರಿಸಲಾಗಿದೆಯಲ್ಲದೇ, ಸ್ನಾತಕೋತ್ತರ ಮತ್ತು ವೃತ್ತಿಪರ ಕೋರ್ಸ್‌ಗಳನ್ನು ಅನುಸರಿಸುವ ಪ್ರತಿಭಾವಂತ ಮತ್ತು ಬಡ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲು, ಟ್ರಸ್ಟ್‌ನಿಂದ ರೂ 10,000 ರಿಂದ ರೂ 25,000 ವರೆಗೆ ವಿದ್ಯಾರ್ಥಿವೇತನವನ್ನು ನೀಡಲಾಗುತ್ತದೆ. ಇಷ್ಟೇ ಅಲ್ಲದೇ, ತೋಟದಪ್ಪನವರ ನಿಧನಹೊಂದಿದ ದಿನದಂದು ಅವರ ಸಂಸ್ಮರಣಾರ್ಥವಾಗಿ ಪ್ರತಿ ವರ್ಷವೂ ಬೆಂಗಳೂರಿನ ನೃಪತುಂಗ ರಸ್ತೆಯಲ್ಲಿರುವ ಮಿಥಿಕ್ ಸೊಸೈಟಿಯಲ್ಲಿ ದತ್ತಿ ಉಪನ್ಯಾಸವನ್ನು ದೇಶದ ವಿವಿಧ ವಿದ್ವಾಂಸರಿಂದ ಏರ್ಪಡಿಸಲಾಗುತ್ತದೆ.

ತೋಟದಪ್ಪನವರ ಸಾಮಾಜಿಕ ಕಾರ್ಯಗಳನ್ನು ಗುರುತಿಸಿ ಅನೇಕ ಪ್ರಶಸ್ತಿ ಪುರಸ್ಕಾರಗಳು ಲಭಿಸಿದ್ದು ಅವುಗಳಲ್ಲಿ ಪ್ರಮುಖವಾದವುಗಳು ಹೀಗಿವೆ.

  • 1905 ದಸರಾ ಸಮಯದಲ್ಲಿ ತೋಟದಪ್ಪನವರ ಸಾಮಾಜಿಕ ಕಾರ್ಯ ಮತ್ತು ಕೆಲಸ ಗುರುತಿಸಿ ಅವರಿಗೆ ಅಂದಿನ ಮೈಸೂರಿನ ಮಹಾರಾಜರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಧರ್ಮ ಪ್ರವರ್ತ ಎಂಬ ಬಿರುದು ನೀಡಿದರು.
  • 1910 ರಲ್ಲಿ, ಬ್ರಿಟಿಷ್ ಸರ್ಕಾರ ಅವರಿಗೆ ರಾವ್ ಬಹಾದ್ದೂರ್ ಎಂಬ ಬಿರುದನ್ನು ನೀಡಿ ಗೌರವಿಸಿದೆ.
  • ಇವರ ಸಮಾಜಸೇವೆಯನ್ನು ಗುರುತಿಸಿದ ಬೆಂಗಳೂರು ನಗರ ಪಾಲಿಗೆ ಆವರ ಗೌರವಾರ್ಥವಾಗಿ ಬೆಂಗಳೂರಿನ ರೈಲ್ವೆ ನಿಲ್ದಾಣದ ಮುಖ್ಯ ರಸ್ತೆಗೆ ಗುಬ್ಬಿ ತೋಟದಪ್ಪ ರಸ್ತೆ ಎಂದು ನಾಮಕರಣ ಮಾಡಲಾಗಿದೆ.

tonta6ಬೆಂಗಳೂರಿಗೆ ರೈಲು ಮತ್ತು ಬಸ್ಸುಗಳಲ್ಲಿ ಬರುವ ದೂರದ ಊರಿನಿಂದ ಬರುವ ಬಡ ಪ್ರಯಾಣಿಕರು ಮೆಜೆಸ್ಟಿಕ್ ಪ್ರದೇಶದಲ್ಲಿರುವ ದುಬಾರಿ ಹೋಟೆಲ್ಲುಗಳಲ್ಲಿ ಉಳಿದುಕೊಳ್ಳಲು ಕಷ್ಟವಾಗುವ ಕಾರಣ, ಇಂದಿಗೂ ಸಹಾ ಅಂತಹ ಪ್ರಯಾಣಿಕರು ಅತ್ಯಂತ ಕಡಿಮೆ ಮತ್ತು ಕೈಗೆಟುಕವ ದರದಲ್ಲಿ ತೋಟದಪ್ಪ ಚತ್ರದ ವಿಶ್ರಾಂತಿ ಗೃಹದ ಸದುಪಯೋಗವನ್ನು ಪಡೆದುಕೊಂಡು ತೋಟದಪ್ಪನವರ ಸೇವಾಕಾರ್ಯಗಳನ್ನು ಮನಸಾರೆ ಹರಸುತ್ತಾರೆ. ಕಾಸಿದ್ದರೆ ಕೈಲಾಸ, ದುಡ್ಡೇ ದೊಡ್ಡಪ್ಪ ಎನ್ನುವ ಇಂತಹ ಕಾಲದಲ್ಲೂ ಬಡ ವಿದ್ಯಾರ್ಥಿಗಳಿಗೆ ಮತ್ತು ಪ್ರಯಾಣಿಕರಿಗೆ ತೊಂದರೆ ಆಗದಿರಲಿಂದು ದೂರದೃಷ್ಟಿಯಿಂದ ಸುಮಾರು 120 ವರ್ಷಗಳ ಹಿಂದೆಯೇ ಸಮಾಜಕ್ಕಾಗಿ ತಮ್ಮ ಇಡೀ ಸಂಪತ್ತನ್ನು ಧಾರೆ ಎರೆದಿದ್ದ ರಾವ್‌ ಬಹಾದ್ದೂರ್‌ ಧರ್ಮ ಪ್ರವರ್ತಕ ಗುಬ್ಬಿ ತೋಟದಪ್ಪನವರು ಖಂಡಿತವಾಗಿಯೂ ನಮ್ಮ ಹೆಮ್ಮೆಯ ಕನ್ನಡಕಲಿಗಳೇ ಸರಿ.

ಏನಂತೀರೀ?
ನಿಮ್ಮವನೇ ಉಮಾಸುತ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s