ಬಿಗ್ ಬಾಸ್ ಬಗ್ಗೆ ಅನೇಕ ಬಾರಿ ಬರೆಯ ಬೇಕು ಎಂದು ಕೈ ತುರಿಸುತ್ತಿದ್ದರೂ, ಸಗಣಿ ಜೊತೆ ಸರಸಕ್ಕಿಂತ ಗಂಧದೊಡನೆ ಗುದ್ದಾಟವೇ ಲೇಸು ಎಂದು ನಾಡು ನುಡಿಗಳ ಸಂಸ್ಕಾರ ಸಂಪ್ರದಾಯಗಳ ಕುರಿತಾದ ವಿಷಯದ ಬಗ್ಗೆ ಬರೆಯುತ್ತಿದ್ದೆ. ಕೆಲವು ವರ್ಷಗಳ ಹಿಂದೆ ಇದೇ ಬಿಗ್ ಬಾಸ್ ಎಂಬುದು ಕನ್ನಡ ಮತ್ತು ಕರ್ನಾಟಕ ವಿರೋಧಿ ಕಾರ್ಯಕ್ರಮ ಅದನ್ನು ಈ ಕೂಡಲೇ ನಿಲ್ಲಿಸಬೇಕು. ಅದನ್ನು ಸಕಲ ಕನ್ನಡಿಗರೂ ಭಹಿಷ್ಕರಿಸಬೇಕು ಎಂದು ಅಬ್ಬರಸಿ ಬೊಬ್ಬಿರಿದಿದ್ದ ಮತ್ತು ನೀವೇನಾದರೂ ಬಿಗ್ ಬಾಸಿಗೆ ಹೋಗುತ್ತೀರಾ? ಎಂದು ಮಾಧ್ಯಮದವರು ಕೇಳಿದ್ದಕ್ಕೆ ನಾನಂತೂ ಅದಕ್ಕೆ ಹೋಗುವುದಿಲ್ಲ ಎಂದು ಹೇಳಿದ್ದ ಸ್ವಘೋಷಿತ ಕನ್ನಡ ಹೋರಾಟಗಾರ ರೂಪೇಶ್ ರಾಜಣ್ಣ ಅದ್ದೂರಿಯಾಗಿ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಕಾಲಿಟ್ಟಾಗ ಮತ್ತು ಅದಾಗಲೇ ಹಿಂದೂ ಪರ ಸಮಾಜ ಸೇವಕ ಎಂದು ಗುರುತಿಸಿಕೊಂಡಿರುವ ಮತ್ತು ಈ ಹಿಂದಿನ ಕಾರ್ಯಕ್ರಮದಲ್ಲಿ ಭಾಗಿಯಾಗಿ ಒಂದು ರೀತಿ ಜಗಳಗಂಟನೆಂದೇ ಕುಖ್ಯಾತಿ ಪಡೆದಿದ್ದ ಪ್ರಕಾಶ್ ಸಂಬರ್ಗಿಯೂ ಸಹಾ ಅದೇ ಕಾರ್ಯಕ್ರಮದಲ್ಲಿ ಇರುವಾಗ ಖಂಡಿತವಾಗಿ ಅಲ್ಲೊಂದು ಹೋರಾಟ ನಡದೇ ತೀರುತ್ತದೆ ಎಂದು ಊಹಿಸಿದ್ದು ಮೊದಲನೇ ವಾರವೇ ಸತ್ಯವಾಯಿತು.
ಬಿಗ್ ಬಾಸ್ ಕಾರ್ಯಕ್ರಮಕ್ಕೆ ಹೋಗುವ ಪ್ರತಿಯೊಬ್ಬರೂ ತಮ್ಮ ವಯಕ್ತಿಕ ವ್ಯಕ್ತಿತ್ವದ ಮೇಲೆ ಆಟವಾಡಲು ಹೋಗಿರುತ್ತಾರೆಯೇ ಹೊರತು, ಹೊರ ಜಗತ್ತಿನಲ್ಲಿ ಅವರ ಸಿದ್ದಾಂತ ಮತ್ತು ಕೆಲಸ ಕಾರ್ಯಗಳ ಮೇಲೆ ಹೋಗಿರುವುದಿಲ್ಲ. ಆದರೆ ನನ್ನದು ವೃತ್ತಿ ಮತ್ತು ಪ್ರವೃತ್ತಿ ಎಲ್ಲವೂ ಕನ್ನಡವೇ. ನಾನು ಹುಟ್ಟು ಹೋರಾಟಗಾರ ಎಂದೇ ಮನೆಯಲ್ಲಿ ಪರಿಚಯಿಸಿಕೊಂಡ ರೂಪೇಶ್ ರಾಜಣ್ಣ, ತಾನು ಇಡೀ ಕನ್ನಡ ಮತ್ತು ಕನ್ನಡಿಗರ ಪ್ರತಿನಿಧಿ. ಇಲ್ಲಿ ಎಲ್ಲರೂ ತನ್ನ ಮೂಗಿನ ನೇರದಲ್ಲಿ ನಡೆಯಬೇಕು. ತಾನು ಆಡಿದ್ದೇ ಶ್ರೇಷ್ಠ ಕನ್ನಡ ಉಳಿದವರದ್ದೆಲ್ಲಾ ನಿಕೃಷ್ಠ ಎಂದು ಮೊದಲನೇ ದಿನದಿಂದಲೇ ತೋರಿಸುವ ಪ್ರಯತ್ನ ಮಾಡಿದಾಗ ಸಹಜವಾಗಿಯೇ ಇಡೀ ಮನೆಯವರ ಆಕ್ರೋಶಕ್ಕೆ ಪಾತ್ರರಾಗಿದ್ದಂತೂ ಸುಳ್ಳಲ್ಲ. ಇದನ್ನು ಮಯೂರಿ ಮತ್ತು ಗೊಂಬೆಯವರು ನೇರವಾಗಿ ರೂಪೇಶ್ ರಾಜಣ್ಣನವರ ಬಳಿ ಹೇಳಿದಾಗ ಅದನ್ನು ಕೇಳಿ ಸರಿ ಪಡಿಸಿಕೊಂಡು ಹೋಗುವ ಸೌಜನ್ಯವನ್ನೂ ತೋರದೇ ಹೋದದ್ದನ್ನು ಗಮನಿಸಿ ಅ ಮನೆಯಲ್ಲಿರುವ ಅತ್ಯಂತ ಹಿರಿಯ ಮತ್ತು ಕನ್ನಡದ ನಾಡು ನುಡಿ ಎಲ್ಲದರಲ್ಲೂ ಅತ್ಯಂತ ಹೆಚ್ಚಿನ ಅನುಭವ ಪಡೆದಿರುವ ಅರುಣ್ ಸಾಗರ್ ಸಹಾ ಕನ್ನಡ ಹೋರಾಟ ಎಂದರೆ ಏನು? ಅದನ್ನು ಎಲ್ಲಿ ಹೇಗೆ? ಯಾವರೀತಿಯಲ್ಲಿ ಮಾಡಬೇಕು ಎಂಬುದನ್ನು ಅತ್ಯಂತ ಹೃದಯಕ್ಕೆ ನಾಟುವ ರೀತಿಯಲ್ಲಿ ತಿಳಿಸಿದ್ದರು.
ಆದರೆ ಮಾತು ಮಾತಿಗೂ ತಾನೊಬ್ಬ ಹೋರಾಟಗಾರ. ನಾನೇ ಬೇರೇ ನನ್ನ ಸ್ಟೈಲೇ ಬೇರೆ ಎನ್ನುವ ಅಹಂ ಸದಾಕಾಲವೂ ತಲೆಯ ಮೇಲೆ ಹೊತ್ತುಕೊಂಡೇ ತಿರುಗುವ ರಾಜಣ್ಣ ಅದರಿಂದಲೇ ಆಟಗಳಲ್ಲೂ ಆರಂಭದಲ್ಲಿ ಅದರ ಪರಿಣಾಮ ಬೀರಿದ ಪರಿಣಾಮ ಆಟಗಳಲ್ಲಿ ಸೋತಾಗ, ತಾನು ಬಿಗ್ ಬಾಸ್ ಕಾರ್ಯಕ್ರಮಕ್ಕೆ ಹೋಗಿರುವುದು ವೈಯಕ್ತಿಕವಾಗಿರುವಾಗ ಅಲ್ಲಿನ ಸಮಸ್ತ ಸಾಧಕ ಬಾದಕಗಳಿಗೆ ತಾನೇ ಜವಾಬ್ದಾರನೇ ಹೊರತು ಇದಕ್ಕು ಕನ್ನಡಕ್ಕೂ ಮತ್ತು ಕನ್ನಡಿಗರಿಗೂ ಸಂಬಂಧವೇ ಇಲ್ಲ ಎನ್ನುವ ಇತಿಮಿತಿಯನ್ನೂ ಅರಿಯದೇ, ನನ್ನ ವಿರುದ್ಧ ಷಡ್ಯಂತ್ರ ಮಾಡಲಾಗುತ್ತಿದೆ ಇದು ನನಗಾದ ಅವಮಾನಕ್ಕಿಂತ ಕನ್ನಡಿಗರಿಗಾದ ಅವಮಾನ, ಕನ್ನಡ ಹೋರಾಟಗಾರರಿಗೆ ಆದ ಅವಮಾನ,ಎಂದು ಕೂಗಾಡಿದ್ದು ನಿಜಕ್ಕೂ ಬಾಲಿಶ ಎನಿಸಿತು.
ಇನ್ನು ಬಿಗ್ ಬಾಸ್ ಕಾರ್ಯಕ್ರಮಕ್ಕೆ ಹೋಗುವ ಮುನ್ನವೇ ಹೊರಗೆ ಪ್ರಶಾಂತ್ ಸಂಬರ್ಗಿ ಮತ್ತು ರೂಪೇಶ್ ರಾಜಣ್ಣನ ನಡುವೆ ಒಂದು ರೀತಿಯ ಶೀತಲ ಸಮರವಿದ್ದದ್ದು ಎಲ್ಲರಿಗೂ ತಿಳಿದ ವಿಷಯವಾಗಿತ್ತಾದರೂ, ಅವೆಲ್ಲವನ್ನು ಮರೆತು ಎಲ್ಲರಿಗೂ ಒಂದಾಗಿ ಮನೋರಂಜನೆ ಕೊಡುತ್ತಾರೆ ಎಂದೇ ಎಲ್ಲರೂ ತಿಳಿದ್ದಿದ್ದರು. ದುರಾದೃಷ್ಟವಷಾತ್ ನಾಯಿಯ ಬಾಲ ಡೊಂಕು. ಎಷ್ಟೇ ದಬ್ಬೆ ಕಟ್ಟಿದರು ಅದು ನೆಟ್ಟಗೆ ನಿಲ್ಲೋದಿಲ್ಲ ಎನ್ನುವಂತೆ ಅವರಿಬ್ಬರೂ ಸಹಾ ತಮ್ಮ ವಯಕ್ತಿಯ ವ್ಯಕ್ತಿತ್ವಕ್ಕಿಂತಲೂ ತಮ್ಮ ಸಿದ್ಧಾಂತಕ್ಕೆ ಕಟ್ಟು ಬಿದ್ದು ಪರಸ್ಪರ ಹಾವು ಮುಂಗುಸಿಯಂತೆ ಕಚ್ಚಾಡತೊಡಗುವ ಮೂಲಕ ಮನೆಯಲ್ಲಿ ಧನಾತ್ಮಕ ಅಂಶಗಳಿಗಿಂತಲೂ ಋಣಾತ್ಮಕವಾದ ಅಂಶವನ್ನೇ ಮೂಡಿಸತೊಡಗಿದ್ದಂತೂ ವಿಷಾಧವೆನಿಸಿತು.
ಸಮಯ ಸಿಕ್ಕಾಗಲೆಲ್ಲಾ ರೂಪೇಶ್ ಕೂಡಾ ಒಬ್ಬ ಹಿಂದೂ ಆಗಿದ್ದರೂ ಹಿಂದೂ ಕಾರ್ಯಕರ್ತ ಎಂದೇ ಗುರುತಿಸಿಕೊಂಡಿರುವ ಪ್ರಶಾಂತ್ ಸಂಬರ್ಗಿಯವರನ್ನು ಪದೇ ಪದೇ ಕೆರಳಿಸಿ, ಹೊರಗಿನ ಜನರು ನಿಮ್ಮನ್ನು ಇಷ್ಟ ಪಡುವುದಿಲ್ಲ. ನಿಮ್ಮ ಹೋರಾಟವೆಲ್ಲವೂ ಕೇವಲ ಹಾರಾಟಕ್ಕಷ್ಟೇ ಸೀಮಿತ ನಿಮ್ಮ ಬಗ್ಗೆ ನನಗೆ ಚೆನ್ನಾಗಿ ತಿಳಿದಿದೆ ಎಂದು ಹೇಳಿದಾಗ ಅದಕ್ಕೆ ತಕ್ಕನಾಗಿಯೇ ಕೌಂಟರ್ ಕೊಡಲು ಪ್ರಶಾಂತ್ ಸಹಾ ಸಿದ್ಧನಾಗಿಯೇ ಬಂದಂತಿತ್ತು. ಸಾನಿಯಾಳನ್ನು ಬಳಸಿಕೊಂಡು ಬುದ್ದಿವಂತ ನಾಜೂಕಯ್ಯನ ರೀತಿಯಲ್ಲಿ ರೂಪೇಶ್ ರಾಜಣ್ಣನ ಪೆದ್ದುತನವನ್ನು ಬಯಲು ಮಾಡಿದ ಸಂಬರ್ಗಿ ಸಮಯ ಸಿಕ್ಕಾಗಲೆಲ್ಲಾ ರೂಪೇಶ್ ಮೇಲೆ ವಯಕ್ತಿಕವಾಗಿ ಏರಿ ಹೋದದ್ದೂ ತಪ್ಪು. ಅದಕ್ಕೆ ಪ್ರತಿ ಮಾತನಾಡುವ ಭರದಲ್ಲಿ ಹಿಡಿತ ತಪ್ಪಿ ರೂಪೇಶ್ ಪ್ರಶಾಂತ್ ಸಂಬರ್ಗಿ ಅವರ ತಾಯಿಯವರ ಬಗ್ಗೆ ಆಸಂಬದ್ಧವಾಗಿ ಮಾತನಾಡಿದ್ದೂ ಸಹಾ ಅನುಚಿತವೇ.
ಅದೇ ರೀತಿ ರೂಪೇಶ್ ರಾಜಣ್ಣನವರನ್ನು ಕೆರಳಿಸಿ ಅವರನ್ನು ಮಾನಸಿಕವಾಗಿ ಕುಗ್ಗಿಸಲು ಕನ್ನಡ ಹೋರಾಟಗಾರರ ವಿರುದ್ಧ ಆಕ್ಷೇಪಾರ್ಹ ಪದಗಳನ್ನು ಪ್ರಶಾಂತ್ ಸಂಬರ್ಗಿ ಬಳಸಿದ್ದದ್ದನ್ನು ಎಲ್ಲರೂ ಖಂಡಿಸಲೇ ಬೇಕು. ಇಬ್ಬರೂ ಸಹಾ ಹಿಂದುಗಳು ಇಬ್ಬರೂ ಸಹಾ ಕನ್ನಡಿಗರು ಎಂಬುದನ್ನು ಅರಿತು ಅಯ್ಯಾ ಎಂದರೆ ಸ್ವರ್ಗ, ಎಲವೋ ಎಂದರೆ ನರಕ ಎಂದು ಬಸವಣ್ಣನವರು ಹೇಳಿರುವುದನ್ನೂ ನೆನಯದೇ, ತಮ್ಮ ತಮ್ಮ ವಯಕ್ತಿಯ ವಿರೋಧಾಬಾಸಕ್ಕಾಗಿ ಪರಸ್ಪರ ಅವರಿಬ್ಬರ ಕೆಸರೆಚಾಟದಲ್ಲಿ ಅನಾವಶ್ಯಕವಾಗಿ ಕನ್ನಡ ಮತ್ತು ಹಿಂದೂ ಪರ ಹೋರಾಟಗಾರನ್ನು ಬಳಕೆ ಮಾಡಿಕೊಂಡಿದ್ದರ ಬಗ್ಗೆ ಇಬ್ಬರ ಮೇಲೂ ಆಕ್ಷೇಪವಿದೆ ಮತ್ತು ಆಕ್ರೋಶವೂ ಇದೆ.
ಒಂದು ನಾಣ್ಯಕ್ಕೆ ಎರಡು ಮುಖಗಳಿರುವ ಹಾಗೇ, ಎರಡೂ ಕೈಗಳು ಸೇರಿದರೆ ಮಾತ್ರವೇ ಚಪ್ಪಾಳೆ ತಟ್ಟಲು ಸಾಧ್ಯವಾಗುವ ಹಾಗೆ ಈ ಜಗಳದಲ್ಲಿ ರೂಪೇಶ್ ರಾಜಣ್ಣ ಮತ್ತು ಪ್ರಶಾಂತ್ ಸಂಬರ್ಗಿ ಇಬ್ಬರದ್ದೂ ತಪ್ಪಿರುವಾಗ, ಯಾವುದೋ ಒಂದು ಖಾಸಗೀ ಛಾನೆಲ್ಲಿನ ರಿಯಾಲಿಟಿ ಶೋ ನಲ್ಲಿ ಅವರಿಬ್ಬರೇ ಕನ್ನಡ ಹಿಂದು ಎಂಬ ಕಿತ್ತಾಟವನ್ನು ಆರಂಭಿಸಿರುವ ಕಾರಣ ಅದನ್ನು ಅವರಿಬ್ಬರೇ ಸರಿ ಪಡಿಸಿಕೊಳ್ಳಬೇಕೇ ಹೊರತು ಅದಕ್ಕೆ ಕನ್ನಡಪರ ಹೋರಾಟಗಾರರು ಬೀದಿಗಿಳಿದಿರುವುದು ಹೋರಾಟ ನಡೆಸುವುದು ಹಾಸ್ಯಾಸ್ಪದ ಎನ್ನಿಸುತ್ತದೆ. ಇನ್ನು ಬಿಗ್ ಬಾಸ್ ಆಯೋಕರೂ ಸಹ ಇದರಿಂದೇನಾದರೂ ಕಾರ್ಯಕ್ರಮಕ್ಕೆ ತೊಂದರೆ ಆಗಬಹುದು ಎಂದು ಪ್ರಶಾಂತ್ ಸಂಬರ್ಗಿಯವರನ್ನು ಕನ್ಫೆಷನ್ ರೂಂಗೆ ಕರೆದು ಅವರಿಂದ ವಯಕ್ತಿಕವಾಗಿ ಕ್ಷಮೆ ಕೇಳಿಸಿದ್ದೂ ಸಹಾ ಒಂದು ರೀತಿ ತಿಪ್ಪೆ ಸಾರಿಸಿದಂತಿತ್ತು. ಮುಂದೆ ಇದೇ ರೀತಿ ಹಿಂದೂಗಳನ್ನು ಮತ್ತು ಹಿಂದೂ ಕಾರ್ಯಕರ್ತರನ್ನು ರೂಪೇಶ್ ರಾಜಣ್ಣ ನಿಂದಿಸಿದರು ಎಂದು ಹಿಂದೂ ಪರ ಸಂಘಟನೆಗಳು ಹೀಗೇ ಹೋರಾಟ ನಡೆಸಿದರೆ ಅದರ ಹೊಣೆ ಯಾರು ಹೊರುತ್ತಾರೆ? ಹೀಗೆ ವಯಕ್ತಿಕವಾಗಿ ಪ್ರಶಾಂತ್ ಬಳಿ ಕ್ಷಮೆ ಕೇಳಿಸುವ ಬದಲು ಆವರಿಬ್ಬರಿಗೂ ಅವರವರ ತಪ್ಪನ್ನು ಎಲ್ಲಾ ಸ್ಪರ್ಧಿಗಳ ಸಮ್ಮುಖದಲ್ಲಿಯೇ ತಿಳಿಸಿ ಅವರಿಬ್ಬರಿಗೂ ಎಚ್ಚರಿಕೆಯನ್ನು ನೀಡಿದ್ದರೆ ಮುಂದೆ ಯಾವುದೇ ಸ್ಪರ್ಧಿಗಳು ಈ ರೀತಿಯಾದ ತಪ್ಪುಗಳನ್ನು ಮಾಡದಂತೆ ತಡೆಯಬಹುದಾಗಿತ್ತು ಎನ್ನುವುದು ವಯಕ್ತಿಕ ಅಭಿಪ್ರಾಯ.
ಬಿಗ್ ಬಾಸ್ ಒಂದು ರಿಯಾಲಿಟಿ ಶೋ ಅಷ್ಟೇ. ಆ ಶೋ ನಲ್ಲಿ ಭಾಗವಹಿಸಿಸುವುದಕ್ಕೆ ಸ್ಪರ್ಧಿಗಳನ್ನು ಆಯ್ಕೆ ಮಾಡುವಾಗ ಛಾನೆಲ್ಲಿನವರು ಈ ರೀತಿಯ ಪರಸ್ಪರ ಈ ಮೊದಲೇ ವೈರುಧ್ಯವಿರುವವರನ್ನು ಒಂದೇ ಕಾರ್ಯಕ್ರಮಕ್ಕೆ ಆಯ್ಕೆ ಮಾಡಿ ತಮ್ಮ ಟಿ.ಆರ್.ಪಿ ಹೆಚ್ಚಿಸಿಕೊಳ್ಳಲು ಕಂಡೋರ ಮನೆಯ ಮಕ್ಕಳನ್ನು ಭಾವಿಗೆ ತಳ್ಳಿ ಆಳ ನೋಡುವಂತಿದೆ ಎಂದರೂ ತಪ್ಪಾಗದು. ಈ ಮೊದಲೂ ಹುಚ್ಚಾ ವೆಂಕಟ್ ಅಂತಹವರ ಮನಸ್ಥಿತಿ ಗೊತ್ತಿದ್ದರೂ ಅಂತಹವರನ್ನು ತಮ್ಮ ಕಾರ್ಯಕ್ರಮಕ್ಕೆ ಸೇರಿಸಿಕೊಂಡು ಅವರಿಂದ ಅಮಾಯಕ ಸ್ಪರ್ಧಿಯ ಮೇಲೆ ಆಘಾತವಾದಾಗ ಆತನನ್ನು ಕಾರ್ಯಕ್ರಮದಿಂದ ಹೊರಗೆ ಹಾಕುವ ಬದಲು prevention is better than cure ಎನ್ನುವಂತೆ ಅಂತಹವರನ್ನು ಆಯ್ಕೆ ಮಾಡಿದಿರುವುದೇ ಉತ್ತಮ ಅಲ್ಲವೇ? ಮನೋರಂಜನೆಯ ಹೆಸರಿನಲ್ಲಿ ಕಿತ್ಟಾಟ ಮತ್ತು ಹೊಡೆದಾಟ ಮಾಡಿಸುವುದು ಎಷ್ಟು ಸರಿ?
ಹಾಗಾಗಿ ರೂಪೇಶ್ ರಾಜಣ್ಣ ತಾನು ಕನ್ನಡಿಗರ ಪ್ರತಿನಿಧಿ ಎಂಬ ಹುಂಬತನವನ್ನೂ ಪ್ರಶಾಂತ್ ತಾನೇ ಅತ್ಯಂತ ಬುದ್ಧಿವಂತ ಉಳಿದವರೆಲ್ಲರೂ ದಡ್ಡರು ಎಂಬ ಅಹಂ ಬದಿಗಿಟ್ಟು ಕೇವಲ ರೂಪೇಶ್ ರಾಜಣ್ಣನಾಗಿ, ಪ್ರಶಾಂತ್ ಸಂಬರ್ಗಿಯಾಗಿ ಕಾರ್ಯಕ್ರಮದಲ್ಲಿ ತಮ್ಮ ವ್ಯಕ್ತಿತ್ವವನ್ನು ಅಭಿವ್ಯಕ್ತಿಗೊಳಿಸುವಂತೆ ಆಟಗಳನ್ನು ಆಡಿದರೆ ಅವರಿಬ್ಬರಿಗೂ ಉತ್ತಮ ಮತ್ತು ಕನ್ನಡಿಗರಿಗೂ ನೆಮ್ಮದಿ. ಜಯ ಭಾರತ ಜನನಿಯ ತನುಜಾತೆ ಎಂದು ಕನ್ನಡಾಂಬೆ ಭಾರತಾಂಬೆಯ ಮಗಳು ಎಂದು ರಾಷ್ಟಕವಿ ಕುವೆಂಪು ಅವರೇ ಹೇಳಿರುವಾಗ ಮತ್ತು ಭಾರತ ದೇಶದ ಒಕ್ಕೂಟಕ್ಕೆ ಕರ್ನಾಟಕವೇ ಯಾವುದೇ ಷರತ್ತಿಲ್ಲದೇ ಮೊತ್ತ ಮೊದಲ ರಾಜ್ಯವಾಗಿ ಭಾಗವಾಗಿರುವ ಇತಿಹಾಸ ಅರಿತು, ಸ್ಪರ್ಧೆಯಲ್ಲಿ ಭಾಗವಹಿಸುವವರೆಲ್ಲರೂ ತಮ್ಮ ತಮ್ಮ ವಯಕ್ತಿಕ ಪ್ರತಿಷ್ಟೆ, ಅಹಂ, ಸಿದ್ಧಾಂತ ಎಲ್ಲವನ್ನೂ ಬದಿಗಿಟ್ಟು ಪರಸ್ಪರ ಮರ್ಯಾದೆ ಕೊಟ್ಟಾಗಲೇ ಇಂತಹ ಅಪಸವ್ಯಗಳನ್ನು ತಡೆಯಬಹುದಾಗಿದೆ ಅಲ್ವೇ?
ಏನಂತೀರೀ?
ನಿಮ್ಮವನೇ ಉಮಾಸುತ