ಶಿಕ್ಷೆ ಕೊಡುವುದು ಸಜನೋ ಇಲ್ಲಾ ಮಜಾನೋ?

ಶಿಕ್ಷೆ ಎಂದರೆ ಒಂದು ನಿರ್ದಿಷ್ಟ ಕ್ರಿಯೆ ಅಥವಾ ವರ್ತನೆಗೆ ವಿರುದ್ಧವಾಗಿ ನೆಡೆದುಕೊಂಡಾಗ ಮತ್ತೆ ಅದೇ ರೀತಿಯ ತಪ್ಪುಗಳು ಆಗದಿರಲಿ ಎಂದು ಎಚ್ಚರಿಕೆಗಾಗಿ ನೀಡುವ ತೀರ್ಪಾಗಿರುತ್ತದೆ. ತಪ್ಪು ಮಾಡಿದವರು ಆ ರೀತಿಯ ಶಿಕ್ಷೆಗೆ ಒಳಗಾಗಿ ಶಿಕ್ಷೆಯನ್ನು ಅನುಭವಿಸುತ್ತಿರುವಾಗ ಆಗುವ ನೋವಿನಿಂದ ಮತ್ತೆ ಅಂತಹದೇ ತಪ್ಪನ್ನು ಮಾಡುವುದಿಲ್ಲ ಎನ್ನುವ ಅಚಲವಾದ ನಂಬಿಕೆಯಿಂದಾಗಿಯೇ, ಮಾಡಿದ ತಪ್ಪಿನ ಅನುಗುಣವಾಗಿ ವಿವಿಧ ರೀತಿಯ ಶಿಕ್ಷೆಗಳನ್ನು ನೀಡುವುದು ಪ್ರಪಂಚಾದ್ಯಂತ ಜಾರಿಗೆಯಲ್ಲಿದೆ. ಹೀಗೆ ಶಿಕ್ಷೆಯನ್ನು ನೀಡುವ ಅಧಿಕಾರ ಹಿಂದೆಲ್ಲಾ ಪಂಚಾಯಿತಿ ಕಟ್ಟೆ ಮತ್ತು ರಾಜನ ಕೈಯ್ಯಲ್ಲಿತ್ತು. ಇಂದು ಅ ರೀತಿಯ ಶಿಕ್ಷೆಯನ್ನು ಕೊಡುವ ಅಧಿಕಾರ ನ್ಯಾಯಾಂಗದ ವ್ಯವಸ್ಥೆಯ ಅಡಿಯಲ್ಲಿದ್ದು, ನ್ಯಾಯಾಧೀಶರು, ವಕೀಲರ ಮೂಲಕ ಆರೋಪಿಯ ಪರ ಮತ್ತು ವಿರೋಧದ ವಾದಗಳನ್ನು ಆಲಿಸಿ ಅಳೆದು ತೂಗಿ ಶಿಕ್ಷೆಯನ್ನು ನೀಡುವುದು ವಾಡಿಕೆ. ಆದರೆ ಇತ್ತೀಚಿನ ದಿನಗಳಲ್ಲಿ ಸರ್ಕಾರ ಮತ್ತು ನ್ಯಾಯಾಲಯಗಳ ತೀರ್ಪು ಶಿಕ್ಷೆ ಎನ್ನುವ ಪದದ ಅರ್ಥಕ್ಕೇ ವಿರುದ್ಧವಾಗಿ ಘಾತಕವಾಗಿರುವ ಕರಾಳ ಸನ್ನಿವೇಶಗಳು ಉದ್ಭವವಾಗಿದ್ದು ಅಂತಹ ಮೂರ್ನಾಲ್ಕು ಪ್ರಸಂಗಗಳನ್ನು ಮೆಲುಕು ಹಾಕೋಣ ಬನ್ನಿ.

ಅಪರಾಧಿಗಳಿಗೆ ಕೊಡುವ ಶಿಕ್ಷೆ ಹೇಗಿರಬೇಕು ಎಂದರೆ, ಕೇವಲ ಅಪರಾಧ ಮಾಡಿರುವ ವ್ಯಕ್ತಿಗಳಲ್ಲದೇ, ಮುಂದೆ ಅದೇ ರೀತಿಯ ಅಪರಾಧವನ್ನು ಮಾಡಲು ಹವಣಿಸಿರುವ ವ್ಯಕ್ತಿ ಮತ್ತು ಮುಂದೆ ಯಾರೂ ಸಹಾ ಅಂತಹ ಅಪರಾಧದ ಬಗ್ಗೆ ಯೋಚಿಸದೇ ಇರುವ ಹಾಗೆ ಎದೆ ಝಲ್ ಎಂದು ನಡುಗಿಸುವಂತಿರಬೇಕು. ಆದರೆ ದುರಾದೃಷ್ಟವಷಾತ್, ಇಂದಿನ ಸರ್ಕಾರ ಮತ್ತು ನ್ಯಾಯಾಧೀಶರುಗಳು ಕೆಲ ಸಿದ್ಧಾಂತಗಳಿಗೋ ಇಲ್ಲವೇ ಅಂದಿನ ಮನಸ್ಥಿತಿಗೆ ಕಟ್ಟು ಬಿದ್ದು ನೀಡುತ್ತಿರುವ ತೀರ್ಪುಗಳಿಂದ ಅಪರಾಧಿಗಳಿಗೆ ಶಿಕ್ಷೆ ಎಂದರೆ ಭಯವೇ ಇಲ್ಲದೇ ಇರುವಂತಹ ದುಸ್ತಿತಿಗೆ ಬಂದಿರುವುದು ನಿಜಕ್ಕೂ ವಿಪರ್ಯಾಸವೇ ಸರಿ.

ಇನ್ನು ದೇಶದಲ್ಲಿ ಕಾನೂನು ಮತ್ತು ಸುವ್ಯವಸ್ಥೆಗಳನ್ನು ಕಾಪಾಡುವ ಜವಾಬ್ಧಾರಿಯನ್ನು ಹೊತ್ತಿರುವ ಪೋಲಿಸರಿಗೆ, ವಾಹನ ಚಾಲಕರು ಹೆಲ್ಮೆಟ್ ಧರಿಸಿಸದೇ ಇರುವುದು, ಸೀಟು ಬೆಲ್ಟ್ ಧರಿಸದೇ ಇರುವುದು ಇಲ್ಲವೇ ವಾಹನಗಳು ಅಧಿಕ ಹೊಗೆ ಸೂಸುವು, ಇಲ್ಲದೇ ಹೋದಲ್ಲಿ ರಸ್ತೆ ಬದಿಯಲ್ಲಿ ಬಡವರು ವ್ಯಾಪಾರ ನಡೆಸುವುದೇ ದೊಡ್ಡ ಅಪರಾಧವಾಗಿ ಸದ್ದಿಲ್ಲದೇ ಅವರು ಕೊಡುವ ನೂರು ಇನ್ನೂರನ್ನು ಜೇಬಿಗೆ ಇಳಿಸುವವರಿಗೂ ಅವರ ಮೇಲೆ ವೀರಾವೇಷದಿಂದ ಹಾರಾಡಿ ಎಗರಾಡುವುದೇ ದೊಡ್ಡ ಕೆಲಸವಾಗಿ ಮೋಸ, ಧಗ, ವಂಚನೆ, ದರೋಡೆ, ಕೊಲೆ, ರೇಪ್ ಮಾಡಿದವರೆಲ್ಲರೂ ರಾಜಾರೋಷವಾಗಿ ಬೀದಿಯಲ್ಲಿ ಓಡಾಡಲು ಅನುವು ಮಾಡುಕೊಡುತ್ತಿರುವುದೂ ಅಪರಾಧಿಗಳಿಗೆ ಭಯವೇ ಇಲ್ಲದಂತೆ ಆಗಿರುವುದಕ್ಕೆ ಕಾರಣೀಭೂತವಾಗಿದೆ ಎಂದರೂ ತಪ್ಪಾಗದು.

ಪ್ರಕರಣ – 1 : ಅಧಿಕಾರಕ್ಕೆ ಬರುವ ಸಲುವ ಏಕೈಕ ಉದ್ದೇಶದಿಂದ ಹಲವಾರು ಉಚಿತಗಳ ಆಮಿಷಗಳನ್ನು ನೀಡುವ ಮೂಲಕ ದೆಹಲಿ ಮತ್ತು ಪಂಜಾಬಿನಲ್ಲಿ ಅಧಿಕಾರಕ್ಕೆ ಬಂದಿರುವ ಕೇಜ್ರಿವಾಲ್ ಅವರ ಆಪ್ ಸರ್ಕಾರ ಈಗ ಪಂಜಾಬ್ ನಲ್ಲಿ ಮಾಡುತ್ತಿರುವ ಕಾನೂನು ಸಡಿಲಿಕೆ ನಿಜಕ್ಕೂ ಭಯವನ್ನು ಹುಟ್ಟಿಸುವಂತಿದೆ.

panjab_jail

  • 2022ರ ಮಾರ್ಚ್‌ನಲ್ಲಿ ಗುರುಗ್ರಾಮ ಮೂಲದ ಮಹಿಳೆಯೊಬ್ಬಳು ಪಂಜಾಬ್‌ ಹೈಕೋರ್ಟಿಗೆ ಅರ್ಜಿಯನ್ನು ಸಲ್ಲಿಸಿ, ಕೊಲೆ ಮತ್ತು ದರೋಡೆ ಮಾಡಿದ ಅಪರಾಧದ ಹಿನ್ನಲೆಯಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ತನ್ನ ಪತಿಯು ಸೆರೆಮನೆಯಲ್ಲಿರುವ ಕಾರಣ, ತಮ್ಮ ವಂಶ ಮುಂದುವರೆಯಲು ಅಸಾಧ್ಯವಾಗಿದೆ. ಹಾಗಾಗಿ ಜೈಲಿನಲ್ಲಿರುವ ತನ್ನ ಪತಿಯೊಂದಿಗೆ ದೈಹಿಕ ಸಂಬಂಧವನ್ನು ಬೆಳೆಸಲು ಅನುಮತಿ ನೀಡುವಂತೆ ನ್ಯಾಯಾಲಯಕ್ಕೆ ಕೋರಿಕೆ ಸಲ್ಲಿಸಿದ್ದರು.
  • ಅದೇ ರೀತಿಯಲ್ಲಿ 2022ರ ಜನವರಿಯಲ್ಲಿ ಪಂಜಾಬ್‌-ಹರಿಯಾಣ ಹೈಕೋರ್ಟ್‌ನಲ್ಲಿ ಅಪರಾಧಿಯ ಪತ್ನಿಯು ತನ್ನ ಗಂಡನೊಂದಿಗೆ ಜೊತೆಯಾಗಿ ಇರಲು ಜೈಲಿನಲ್ಲಿ ಪ್ರತ್ಯೇಕ ಕೊಠಡಿಯಲ್ಲಿ ಅಪಾಯಿಂಟ್‌ಮೆಂಟ್‌ ನೀಡುವಂತೆ ಸಂವಿಧಾನದ 21 ನೇ ವಿಧಿಯನ್ನು ಉಲ್ಲೇಖ ಮಾಡಿ, ದೇಶದ ಸಂವಿಧಾನ ತನಗೆ ನೀಡಿರುವ ಹಕ್ಕನ್ನು ಬಳಸುವಂತಾಗಬೇಕು ಎಂದಿದ್ದರು.
  • ಇನ್ನು ಮೂರನೇ ಪ್ರಕರಣದಲ್ಲಿ ಜಸ್ವೀರ್ ಸಿಂಗ್ ಎಂಬ ಅಪರಾಧಿಯೇ ತಮ್ಮ ವಂಶಾವಳಿಯನ್ನು ಮುಂದುವರಿಸಬೇಕಾಗಿರುವ ಕಾರಣ, ತನ್ನ ಪತ್ನಿ ಗರ್ಭಿಣಿಯಾಗುವವರೆಗೂ ಜೈಲಿನಲ್ಲಿ ತನ್ನೊಂದಿಗೆ ಇರಲು ಅವಕಾಶ ನೀಡಬೇಕು ಎಂದು ಮನವಿ ಮಾಡಿದ್ದರು.

ಪರಸ್ಪರ ಗಂಡು ಹೆಣ್ಣುಗಳ ಮಧ್ಯೆ ದೈಹಿಕ ಸಂಪರ್ಕವೇ ಇಲ್ಲದೇ ಮಕ್ಕಳನ್ನು ಪಡೆಯಬಹುದಾದ ತಂತ್ರಜ್ಞಾನ ಇರುವ ಇಂತಹ ವೇಳೆಯಲ್ಲೂ, ಕಳ್ಳನ ಹೆಂಡತಿ ಎಂದಿದ್ದರೂ ಮುಂಡೆ ಎಂಬ ಗಾದೆ ಮಾತೇ ಇದ್ದರೂ, ವಿವಿಧ ಅಪರಾಧದ ಅಡಿಯಲ್ಲಿ ನ್ಯಾಯಾಲಯದಲ್ಲಿ ವಿ‍ಚಾರಣೆ ನಡೆದು ಆರೋಪಗಳು ಸಾಭೀತಾಗಿ ವಿವಿಧ ಬಗೆಯ ಶಿಕ್ಷೆಗೆ ಒಳಗಾಗಿ ಸೆರೆಮನೆಯಲ್ಲಿ ಬಂಧಿತರಾಗಿರುವ ಅಪರಾಧಿಗಳಿಗೆ ಇನ್ನು ಮುಂದೆ ಜೈಲಿನಲ್ಲಿರುವ ಗಂಡ ಅಥವಾ ಹೆಂಡತಿ ತಮ್ಮ ಜೀವನ ಸಂಗಾತಿಯನ್ನು ಏಕಾಂತದಲ್ಲಿ ಭೇಟಿಯಾಗಲು ಇನ್ನು ಮುಂದೆ ಸಾಧ್ಯವಾಗಲಿದೆ.

ಮೇಲೆ ತಿಳಿಸಿದ ಅರ್ಜಿಗಳನ್ನು ಪರಿಗಣಿಸಿದ ನ್ಯಾಯಾಧೀಶರು ಸದ್ಯಕ್ಕೆ ಪಂಜಾಬಿನ ನಾಲ್ಕು ಜೈಲುಗಳಲ್ಲಿ 2 ಗಂಟೆಗಳ ಕಾಲ ಏಕಾಂತ ಭೇಟಿಗೆ ಸೌಲಭ್ಯವನ್ನು ಮಾಡಲಾಗಿದೆ. ಹೀಗಾಗಿ ಇನ್ನು ಮುಂದೆ ಜೈಲಿನಲ್ಲಿರುವ ಕೈದಿಗಳಿಗೆ ತಮ್ಮ ಜೀವನ ಸಂಗಾತಿಯೊಂದಿಗೆ ಒಂದಿಷ್ಟು ಸಮಯ ಕಳೆಯಲು ಅವಕಾಶ ಕಲ್ಪಿಸಲಾಗುತ್ತಿದೆ. ಇದಕ್ಕಾಗಿ ಜೈಲಿನಲ್ಲಿ ಪ್ರತ್ಯೇಕ (Conjugal Visit) ಕೊಠಡಿಯನ್ನು ಮಾಡಲಾಗಿದೆ. ಪ್ರಸ್ತುತ, ಇಂದ್ವಾಲ್ ಸಾಹಿಬ್, ನಭಾ, ಲುಧಿಯಾನ ಮತ್ತು ಬಟಿಂಡಾ ಮಹಿಳಾ ಜೈಲಿನಲ್ಲಿ ಈ ಸೌಲಭ್ಯವನ್ನು ಪ್ರಾರಂಭಿಸಲಾಗಿದ್ದು, ಇದಕ್ಕಾಗಿ ಜೈಲು ಆಡಳಿತ ಪ್ರತ್ಯೇಕ ಕೊಠಡಿಗಳನ್ನು ಸಿದ್ಧಪಡಿಸಿದ್ದು, ಪ್ರತ್ಯೇಕ ಡಬಲ್ ಬೆಡ್‌ಗಳು, ಟೇಬಲ್‌ಗಳು ಮತ್ತು ಅಟ್ಯಾಚ್ಡ್ ಬಾತ್‌ರೂಮ್‌ಗಳನ್ನು ಸಹ ಹೊಂದಿರಲಿದೆ. ಪಂಜಾಬಿನ ಉಳಿದ ಜೈಲುಗಳಲ್ಲಿಯೂ ಇದೇ ರೀತಿಯ ಈ ಸೌಲಭ್ಯವನ್ನು ಆರಂಭಿಸಲು ಸಿದ್ಧತೆ ನಡೆದಿದೆ.

WhatsApp Image 2022-11-05 at 19.25.20

ಪ್ರಕರಣ – 2 :18 ಕೊಲೆ ಮತ್ತು 20 ಅತ್ಯಾಚಾರಗಳನ್ನು ಮಾಡಿದ್ದ ಸೇನೆಯೂ ಸೇರಿದಂತೆ ವಿವಿಧ ಸರ್ಕಾರಿ ಇಲಾಖೆಗಳಲ್ಲಿ ಕೆಲಸ ಮಾಡಿದ್ದ ಉಮೇಶ್ ರೆಡ್ಡಿಯ ಕುರಿತಾಗಿ ಸುದೀರ್ಘವಾದ ವಿಚಾರಣೆಗಳು ನಡೆದು ಆತನಿಗೆ ಗಲ್ಲು ಶಿಕ್ಷೆಯನ್ನು ವಿಧಿಸಲಾಗಿತ್ತು. ಇದರ ಕುರಿತಂತೆ ರಾಷ್ಟ್ರಪತಿಗಳಿಗೆ ಕ್ಷಮಾದಾನದ ಅರ್ಜಿಯೂ ಸಹಾ ತಿರಸ್ಕೃತಗೊಂಡಾಗ, ಗಲ್ಲು ಶಿಕ್ಷೆ ವಿಳಂಬವಾಗಿದೆ ಎಂಬ ನೆಪವೊಡ್ಡಿ ಆತನ ಗಲ್ಲು ಶಿಕ್ಷೆಯನ್ನು ರದ್ದುಪಡಿಸಿ ಅದನ್ನು ಜೀವಾವಧಿ ಶಿಕ್ಷೆಗೆ ಬದಲಾಯಿಸಿರುವ ಅಘಾತಕಾರಿ ಆದೇಶ ಬಂದಿದೆ.

ಒಂದಲ್ಲಾ, ಎರಡಲ್ಲಾ 18 ಕೊಲೆ ಮತ್ತು 20 ಅತ್ಯಾಚಾರಗಳನ್ನು ಮಾಡಿರುವ ವ್ಯಕ್ತಿಗಳನ್ನು ಜನರ ತೆರಿಗೆ ಹಣದಲ್ಲಿ ಜೈಲಿನಲ್ಲಿ ಇಟ್ಟುಕೊಂಡು ಮುಂದೊಂದು ದಿನ ಸ್ವಾತ್ರಂತ್ರ ದಿನಾಚರಣೆ ಇಲ್ಲವೇ ಗಣರಾಜ್ಯದಿನೋತ್ಸವದಂದು ಸನ್ನಡತೆಯ ಆಧಾರದಲ್ಲಿ ಬಿಟ್ಟು ಬಿಟ್ಟಲ್ಲಿ ಅಂತಹ ಘನಘೋರ ಅಪರಾಧ ಮಾಡಿರುವಂತಹ ವ್ಯಕ್ತಿಗೆ ಯಾವ ರೀತಿಯ ಶಿಕ್ಷೆ ಕೊಟ್ಟ ಹಾಗೆ ಆಗುತ್ತದೇ?

ವಿಕೃತಕಾಮಿ ಉಮೇಶ್ ರೆಡ್ಡಿಯ ವಿಚಾರಣೆಯನ್ನು ವರ್ಷಾನುಗಟ್ಟಲೆ ಎಳೆದಾಡಿ, ಶಿಕ್ಷೆಗೆ ಗುರಿಯಾದರೂ, ಮರು ತನಿಖೆ ಎಂದು ಮತ್ತೆ ಹಲವು ವರ್ಷಗಳ ಕಾಲ ಎಳೆದಾಡಿ ಇನ್ನೂ ಅಂತಹ ವ್ಯಕ್ತಿಯನ್ನು ಜೈಲಿನಲ್ಲಿ ಕೊಳೆಸುವುದರಿಂದ ಏನು ಪ್ರಯೋಜನ? ಅತನ ಖರ್ಚು ವೆಚ್ಚಗಳನ್ನು ಭರಿಸುವವರು ಯಾರು? ಎಂಬ ಪ್ರಶ್ನೆ ಜನರನ್ನು ಕಾಡಲಾರಂಭಿಸಿದೆ

ಪ್ರಕರಣ – 3 :ರಾಜೀವ್ ಗಾಂಧಿ ಹತ್ಯೆಯ ಪ್ರಕರಣ

rajiv

ಈ ದೇಶದ ಪ್ರಧಾನಿಗಳಾಗಿದ್ದ ರಾಜೀವ್ ಗಾಂಧಿಯವರು ನೆರೆ ರಾಷ್ಟ್ರ ಶ್ರೀಲಂಕದಲ್ಲಿ ತಮಿಳುರು ಮತ್ತು ಸಿಂಹಳೀಯರ ನಡುವೆ ನಡೆಯುತ್ತಿದ್ದ ಕದನದಲ್ಲಿ ಶ್ರೀಲಂಕದಲ್ಲಿ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ಸಲುವಾಗಿ ಭಾರತದಿಂದ ಸೇನಾಪಡೆಯನ್ನು ಕಳುಹಿಸಿದ್ದೇ ಮಹಾ ಅಪರಾಧ ಎಂದು ಭಾವಿಸಿದ LTTE ತಮಿಳು ಉಗ್ರರು ಚುನಾವಣಾಪ್ರಚಾರಕ್ಕೆಂದು ತಮಿಳುನಾಡಿನ ಶ್ರೀಪೆರಂಬದೂರಿಗೆ ಆಗಮಿಸಿದ್ದಾಗ, ಮಾನವ ಬಾಂಬ್ ಮೂಲಕ ರಾಜೀವ್ ದೇಹ ಗುರುತೂ ಸಹಾ ಸಿಗದಂತೆ ಛಿದ್ರ ಛಿದ್ರವಾಗುವಂತೆ ಕೊಂದು ಹಾಕಿದ್ದನ್ನು ಬೇಧಿಸಿದ ಪೋಲಿಸರು ಈ ಘನ ಘೋರ ಕೃತ್ಯಕ್ಕೆ ಪತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಸಹಕರಿಸಿದ್ದ ಎಲ್ಲರನ್ನೂ ಬಂಧಿಸಿ ಅವರಿಗೆ ಶಿಕ್ಷೆ ಆಗುವಂತೆ ನೋಡಿಕೊಂಡಿದ್ದರು.

rajiv3

ಇಂಥ ಬರ್ಬರ ದೇಶದ್ರೋಹ ಎಸಗಿದವರಲ್ಲಿ 1998ರಲ್ಲೇ ಕೆಲವರಿಗೆ ಗಲ್ಲು ಶಿಕ್ಷೆಯಾಗಿದ್ದು ಉಳಿದವರಿಗೆ ಜೀವಾವಧಿ ಶಿಕ್ಷೆಯನ್ನು ಅಂದಿನ ನ್ಯಾಯಾಲಯ ವಿಧಿಸಿತ್ತು. ರಾಜೀವ್ ಗಾಂಧಿ ಹತ್ಯೆಯಾಗಿ 7 ವರ್ಷಗಳ ಕಾಲಾ ನಂತರ ವಿಚಾರಣೆ ಮುಗಿಸಿದ್ದೇ ಐತಿಹಾಸಿಕ ತೀರ್ಪು ಎಂದು ನ್ಯಾಯಾಲಯ ತನ್ನ ಬೆನ್ನನ್ನು ತಾನೇ ತಟ್ಟಿಕೊಂಡಿತ್ತು. ಈಗ ಅದೇ ನ್ಯಾಯಾಲಯ, ‍30 ವರ್ಷಗಳ ಕಾಲ ಜನರ ತೆರಿಗೆ ದುಡ್ಡಿನಲ್ಲಿ ಸೆರೆಮನೆಯಲ್ಲಿ ಸುಮ್ಮನೆ ಕುಳಿತು ತಿಂದಿದ್ದವರೆಲ್ಲರಿಗೂ ಮಾನವೀಯ ದೃಷ್ಠಿಯಿಂದ ಬಿಡುಗಡೆ ಮಾಡಿದೆ.

  • ಈ ರೀತಿಯಾದ ತೀರ್ಪುಗಳನ್ನು ನ್ಯಾಯಲಯಗಳು ಯಾವ ಆಧಾರದ ಮೇಲೆ ಕೊಡುತ್ತಿದೆ?
  • ಇಂತಹ ಕ್ಷಮಾಧಾನದಿಂದಾಗಿ ಅಪರಾಧಿಗಳಿಗೆ ದೇಶದ ಕಾನೂನಿನ ಮೇಲೆ ಅಪನಂಬಿಕೆ ಉಂಟಾಗಿ ಕಾನೂನಿಗೆ ಬೆಲೆಯನ್ನೇ ಕೊಡುವುದಿಲ್ಲ ಎನ್ನುವ ಸಾಮಾನ್ಯ ತಿಳುವಳಿಕೆಯೂ ತೀರ್ಪನ್ನು ಇತ್ತ ನ್ಯಾಯಾಧೀಷರುಗಳಿಗೆ ಇಲ್ಲವೇ?
  • ಸಜೆಯಾದ ಅಪರಾಧಿಗಳಿಗೆ ಈ ರೀತಿಯಾಗಿ ಕ್ಷಮಧಾನವನ್ನು ಕೊಡುತ್ತಾ ಹೋದಲ್ಲಿ ದೇಶದ ಘನತೆ ಪ್ರಪಂಚದ ಮುಂದೆ ಹೇಗಿರುತ್ತದೆ?
  • ದೇಶದ ಭದ್ರತೆಯ ದೃಷ್ಟಿಯಿಂದ ಈ ರೀತಿಯ ಕ್ಷಮಾದಾನಗಳು ಅಪರಾಧ ಮಾಡಲು ಮುಂದಾಗುವವರಿಗೆ ಯಾವ ಸಂದೇಶ ಕೊಡುತ್ತದೆ?

judge1

ಪ್ರಸ್ತುತ ನ್ಯಾಯಾಂಗದ ರೀತಿ ನೀತಿಗಳು ಸರಿಯಾಗಿಯೇ ಇದೆ. ನ್ಯಾಯಾಲಯದ ತೀರ್ಪುಗಳನ್ನು ಯಾರೂ ಪ್ರಶ್ನಿಸುವಂತಿಲ್ಲ. ಹಾಗೆ ಪ್ರಶ್ನಿಸಿದರೆ ಅದು ನ್ಯಾಯಾಂಗ ನಿಂದನೆ ಎನಿಸಿಕೊಂಡು ಶಿಕ್ಷಾರ್ಹ ಅಪರಾಧವಾಗುತ್ತದೆ ಎಂಸು ಜನರ ಭಾವನೆಗಳಿಗೆ ಗೌರವ ಕೊಡದೇ ಭಯದ ವಾತಾವರಣ ಹುಟ್ಟಿಸುವ ನ್ಯಾಯಾಲಯ ಇದ್ದರೇಷ್ಟು ಬಿಟ್ಟರೆಷ್ಟು? ನ್ಯಾಯಾಧೀಶರುಗಳು ಸಹಾ ನಮ್ಮ ನಿಮ್ಮಂತೆ ಸಾಮಾನ್ಯ ಮನುಷ್ಯರು ಮತ್ತು ಕೇವಲ ಆ ಪೀಠದಲ್ಲಿ ಕುಳಿತಿದ್ದಾಗ ಮಾತ್ರವೇ ಅವರಿಗೆ ಗೌರವ ಎನ್ನುವುದನ್ನು ತಿಳಿಯಬೇಕೇ ಹೊರತು, ಸುಖಾ ಸುಮ್ಮನೆ ಪೂರ್ವಾಗ್ರಹ ಪೀಡಿತರಾಗಿಯೋ ಇಲ್ಲವೇ ಪ್ತತ್ಯಕ್ಷ ಇಲ್ಲವೇ ಪರೋಕ್ಷ ಆಮಿಷಕ್ಕೆ ಒಳಗಾಗಿ ಇಂತಹ ತೀರ್ಮಾನಗಳನ್ನು ಕೊಟ್ಟಲ್ಲಿ ಅದು ಸರ್ವಾಧಿಕಾರಿ ಧೋರಣೆ ಎನಿಸಿ ಅಪರಾಧಗಳು ಹೆಚ್ಚಾಗಲು ಇದೇ ನ್ಯಾಯಾಲಯ ಮತ್ತು ನ್ಯಾಯಾಧೀಷರುಗಳೇ ಕಾರಣೀಭೂತರಾಗುತ್ತಾರೆ ಎನ್ನುವ ವಿಷಯ ತಿಳಿದಬೇಕು.

ನ್ಯಾಯಾಧೀಷರುಗಳು ಪ್ರಕರಣದಲ್ಲಿ ವಕೀಲರು ಪರ ಮತ್ತು ವಿರೋಧದ ಪರ ವಾದಿಸುವಾಗ ಮಂಡಿಸುವ ದಾಖಲೆಗಳನ್ನೇ ಆಧರಿಸಿ ತೀರ್ಪುನೀಡಿದರೆ ಅದು ಏಕ ಪಕ್ಷೀಯವಾಗಿ ಬಿಡುತ್ತದೆ. ಪ್ರತ್ಯಕ್ಷಿಸಿ ನೋಡಿದರೂ, ಪ್ರಮಾಣಿಸಿ ನೋಡು ಎನ್ನುವಂತೆ ನ್ಯಾಯಾಧೀಶರುಗಳು ಸ್ವಲ್ಪ ಸಂಯವ ವಹಿಸಿದಲ್ಲಿ ಇಂತಹ ಪ್ರಕರಣಗಳು ನಿಲ್ಲಬಹುದೇನೋ? ಇನ್ನು ಪ್ರಕರಣಗಳ ಇತ್ಯರ್ಥಕ್ಕೆ ಹತ್ತಾರು ವರ್ಷಗಳ ಕಾಲ ತೆಗೆದುಕೊಳ್ಳುವ ಬದಲು ಶೀಘ್ರವಾಗಿ ಇತ್ಯರ್ಥಗೊಳಿಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯನ್ನು ವಿಧಿಸಿದಾಗ ಮಾತ್ರ ಅಪರಾಧಿಗಳಿಗೆ ಭಯ ಮೂಡಿ ಅಪರಾಧಗಳು ತಪ್ಪುತ್ತವೆ ಅಲ್ಲವೇ? ಇಲ್ಲದೇ ಉಮೇಶ್ ರೆಡ್ಡಿಯಂತಹ ವಿಕೃತಕಾಮಿ ಮತ್ತು ಕೊಲೆಗಡುಕನಿಗೆ ಮರಣದಂಡನೆ ತಪ್ಪಿಸುವುದು, ಅಪರಾಧಿಗಳಿಗೆ ತಮ್ಮ ಕುಟುಂಬದೊಡನೆ ಕಾಲ ಕಳೆಯಲು ಐಶಾರಾಮೀ ವ್ಯವಸ್ಥೆಯನ್ನು ಸರ್ಕಾರವೇ ಮಾಡಿಕೊಡುವುದು, ಜೀವಾವಧಿ ಶಿಕ್ಷೆಯನ್ನು ಅನುಭವಿಸುತ್ತಿರುವವರಿಗೆ ಸನ್ನಡತೆ ಮತ್ತು ಮಾನವೀಯ ದೃಷ್ಟಿಯಿಂದ ಬಿಡುಗಡೆ ಮಾಡಿದಲ್ಲಿ ಈ ದೇಶದಲ್ಲಿ ಮರಣದಂಡನೆಯಂತಹ ಶಿಕ್ಷೆ ಇರುವುದಾದರೂ ಏಕೇ? ಅಪರಾಧಿಗಳಿಗೆ ಹೀಗೆ ಕ್ಷಮೆ ನೀಡುತ್ತಾ ಹೊದಲ್ಲಿ ಶಿಕ್ಷೆ ಎನ್ನುವುದು ಸಜಾ ಬದಲು ಮಜವಾಗಿ ದೇಶದಲ್ಲಿ ಕಾನೂನು ಸುವ್ಯವಸ್ಥೆ ಹೇಗೆ ಕಾಪಾಡುವುದು ? ಹಾಗಾಗಿ ನಮ್ಮ ನ್ಯಾಯಾಂಗ ವ್ಯವಸ್ಥೆಯಲ್ಲೂ ಆಮೂಲಾಗ್ರ ಬದಲಾವಣೆ ಅವಶ್ಯಕತೆ ಇದೆ ಎನಿಸುತ್ತದೆ ಅಲ್ವೇ?

ಏನಂತೀರೀ?
ನಿಮ್ಮವನೇ ಉಮಾಸುತ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s