ಹರಿಕಥಾ ವಿದ್ವಾನ್ ಶ್ರೀ ಗುರುರಾಜಲು ನಾಯ್ದು

guru4

ಹರಿಕಥೆ ಎನ್ನುವುದು ನಮ್ಮ ಸಮಾಜದಲ್ಲಿ ಅತ್ಯಂತ ಪುರಾತನವಾದ ಕಲೆಯಾಗಿದ್ದು, ರಾಮಾಯಣ, ಮಹಾಭಾರತದವಲ್ಲದೇ ನಾನಾ ಪುರಾಣಕಥೆಯನ್ನು ಸರಳವಾದ ಪದ್ಯದ ರೂಪದಲ್ಲಿ ಪಕ್ಕ ವಾದ್ಯದವರ ಜೊತೆಯಲ್ಲಿ ಹಾಡಿ ನಂತರ ಅದನ್ನೇ ಜನರಿಗೆ ಮನ ಮುಟ್ಟುವಂತಹ ರೀತಿಯಲ್ಲಿ ಅರ್ಧೈಸುವ ಸುಂದರವಾದ ಕಲೆಯಾಗಿದೆ. ಇಂತಹ ಸುಂದರವಾದ ಹರಿಕಥೆಯನ್ನು ಕರ್ನಾಟಕದಲ್ಲಿ ಪ್ರಖ್ಯಾತಿಗೆ ತಂದ ಪ್ರಮುಖರಲ್ಲಿ ಅಚ್ಯುತ ದಾಸ ಮತ್ತು ಕೇಶವ ದಾಸರೊಂದಿಗೆ ಮತ್ತೊಂದು ಪ್ರಮುಖವಾದ ಹೆಸರೇ ಶ್ರೀ ಗುರುರಾಜುಲು ನಾಯ್ಡು ಅವರು. ತಮ್ಮ ಸುಶ್ರಾವ್ಯ ಕಂಠದಿಂದ ವಿಭಿನ್ನ ಶೈಲಿಯಲ್ಲಿ ಹರಿಕಥೆ ಹೇಳುವ ಕಲೆಯನ್ನು ಮೈಗೂಡಿಸಿಕೊಂಡಿದ್ದಲ್ಲದೇ, ಹರಿಕಥೆಗಳನ್ನು ಕ್ಯಾಸೆಟ್ ರೂಪದಲ್ಲಿ ಬಿಡುಗಡೆ ಮಾಡಿ ನಾಡಿನ ಮೂಲೆ ಮೂಲೆಯಲ್ಲೂ ಜನಪ್ರಿಯಗೊಳಿಸುವಲ್ಲಿ ಉಳಿದವರಿಗೆಲ್ಲರಿಂಗಿಂತಲೂ ಅಗ್ರಗಣ್ಯರಾಗಿದ್ದ ಕಾರಣ, ಅವರನ್ನು ಕರ್ನಾಟಕದ ಹರಿಕಥಾ ಪಿತಾಮಹ ಎಂದು ಕರೆಯಲಾಗುತ್ತದೆ. ಅಂತಹ ಹರಿಕಥಾ ವಿದ್ವಾನ್ ಗುರುರಾಜಲು ನಾಯ್ಡುರವರ ವ್ಯಕ್ತಿ ವ್ಯಕ್ತಿವ ಮತ್ತು ಕಲಾ ಸಾಧನೆಗಳನ್ನು ನಮ್ಮ ಇಂದಿನ ಕನ್ನಡ ಕಲಿಗಳು ಮಾಲಿಕೆಯಲ್ಲಿ ಮೆಲುಕು ಹಾಕೋಣ.

ಶ್ರೀ ಗುರುರಾಜಲು ನಾಯ್ಡುರವರು ಅಕ್ಟೋಬರ್ 30, 1931ರಂದು ಮೈಸೂರಿನಲ್ಲಿ ಜನಿಸಿದರು. ಶಾಲಾ ಶಿಕ್ಷಕರಾಗಿದ್ದ ಅವರ ತಂದೆ ರಾಮಸ್ವಾಮಿನಾಯ್ಡು ಅವರೂ ಸಹಾ ಕಲಾರಾಧಕರಾಗಿದ್ದಲ್ಲದೇ, ಸ್ವತಃ ಸುಶ್ರಾವ್ಯವಾಗಿ ಹರಿಕಥೆಯನ್ನೂ ಮಾಡುತ್ತಿದ್ದರು. ಹಾಗಾಗಿ ಗುರುರಾಜುಲು ಅವರಿಗೆ ಹರಿಕಥೆ ಎನ್ನುವುದು ತಂದೆಯಿಂದ ಬಂದ ಬಳುವಳಿ ಎಂದರೂ ತಪ್ಪಾಗದು. ಬಾಲ್ಯದಿಂದಲೂ ಅವರ ತಂದೆಯವರ ಜೊತೆಯಲ್ಲೇ ಹರಿಕಥಾ ಕಚೇರಿಗಳಲ್ಲಿ ಪಾಲ್ಗೊಳ್ಳುತ್ತಿದ್ದ ಕಾರಣ ಅವರ ತಂದೆಯವರು ಮಾಡುತ್ತಿದ್ದ ಅಷ್ಟೂ ಹರಿಕಥಾ ಕಾಲಕ್ಷೇಪಗಳು ಗುರುರಾಜಲು ಅವರಿಗೆ ಕಂಠಪಾಠವಾಗಿತ್ತು. ಹಾಗಾಗಿ ಗುರುರಾಜಲು ಅವರಿಗೆ ಸಂಗೀತಾಭ್ಯಾಸಕ್ಕೆ ಸೇರಿಸಿ ಅವರಲ್ಲಿದ್ದ ಕಲೆಗೆ ಮತ್ತಷ್ಟು ಪ್ರೋತ್ಸಾಹವನ್ನು ಅವರ ತಂದೆಯವರು ನೀಡಿದ್ದರು.

ನಂತರದ ದಿನಗಳಲ್ಲಿ ಅವರ ಇಡೀ ಕುಟುಂಬ ಮೈಸೂರಿನಿಂದ ಬೆಂಗಳೂರಿಗೆ ವಲಸೆ ಬಂದದ್ದು ನಾಯ್ದು ಆವರಿಗೆ ಒಂದು ರೀತಿಯ ವರದಾನವಾಯಿತು ಎಂದರೂ ತಪ್ಪಾಗದು. ಮನೆಯಲ್ಲೂ ಕಲೆ ಮತ್ತು ಸಂಗೀತಕ್ಕೆ ಪೂರಕವಾದ ವಾತಾವರಣವಿದ್ದರೆ, ಅವರ ಮನೆಯ ಪಕ್ಕದಲ್ಲೇ, ಅದಾಗಲೇ ಗುಬ್ಬಿ ಕಂಪೆನಿಯಲ್ಲಿದ್ದ ಹೆಸರಾಂತ ನಾಟಕ ಕಲಾವಿದ ಬಿ.ಎನ್.ಚಿನ್ನಪ್ಪನವರ ಮನೆ ಇದ್ದು ಅವರ ಮನೆಯಲ್ಲೇ ನಟಭಯಂಕರ ಎಂಬ ಬಿರುದಾಂಕಿತ ಶ್ರೀ ಎಂ.ಎನ್. ಗಂಗಾಧರರಾಯರು ವಾಸವಾಗಿದ್ದರು ನಾಯ್ಡು ಅವರು ಆ ಕಲಾವಿದರುಗಳನ್ನೆಲ್ಲಾ ಪರಿಚಯ ಮಾಡಿಕೊಂಡು ಅವರು ನಾಟಕಗಳ ಅಭ್ಯಾಸ ಮಾಡುತ್ತಿದ್ದನ್ನೇ ಕುತೂಹಲದಿಂದ ಗಮನಿಸುತ್ತಿದ್ದದ್ದಲ್ಲದೇ ಅವರು ಅಭಿನಯಿಸುತ್ತಿದ್ದ ಪೌರಾಣಿಕ ನಾಟಕಗಳಿಗೂ ಹೋಗುತ್ತಿದ್ದ ಕಾರಣ ಅವರಿಗೆ ರಂಗಭೂಮಿಯ ಮೇಲೂ ಆಸಕ್ತಿ ಮೂಡಿ ಆ ನಾಟಕಗಳಲ್ಲಿ ಬರುತ್ತಿದ್ದ ಪಾತ್ರಗಳನ್ನೆಲ್ಲಾ ಮನೆಯಲ್ಲಿ ಅನುಕರಿಸುತ್ತಾ ಅವರಳೊಗಿದ್ದ ಕಲಾವಿದ ವಿಕಸನಗೊಳ್ಳತೊಡಗಿತು. ಅದೊಮ್ಮೆ ಇದ್ದಕ್ಕಿದ್ದಂತೆಯೇ ಅವರ ನಾಟಕದಲ್ಲಿ ಅಭಿನಯಿಸಬೇಕಾಗಿದ್ದ ಕಲಾವಿದ ಕಾಣೆಯಾಗಿ ಹೋದಾಗ, ಗುರುರಾಜರು ಆ ಪಾತ್ರವನ್ನು ಅತ್ಯಂತ ಮನೋಜ್ಞವಾಗಿ ಅಭಿನಯಿಸುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ಹೀಗೆ ವಿದ್ಯಾಭ್ಯಾಸದ ಜೊತೆಯಲ್ಲೇ, ಸಂಗೀತ, ನಾಟಕ ಮತ್ತು ಹರಿಕಥಾ ಕಾಲಕ್ಷೇಪಗಳೆಲ್ಲವೂ ನೆಡೆದು ಕೊಂಡು ಶಾಲೆಯಿಂದ ಬಿಡುವ ಸಿಕ್ಕಾಗಲೆಲ್ಲಾ ನಾಟಕಗಳಲ್ಲಿ ಚಿಕ್ಕ-ಪುಟ್ಟ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದದ್ದಲ್ಲದೇ, ಆಗಾಗ ಹರಿಕಥೆಯನ್ನೂ ಮಾಡುತ್ತಾ ಹಾಗೂ ಹೀಗೂ ವಿದ್ಯಾಭ್ಯಾಸವನ್ನು ಮುಗಿಸಿದರು.

ಮನೆಯ ಸಂಸಾರದ ನೊಗವನ್ನು ಹೊತ್ತಿದ್ದ ಅವರ ತಂದೆಯವರು ಅನಾರೋಗ್ಯಕ್ಕೀಡಾದಾಗ ಮನೆಯ ಆರ್ಥಿಕ ಸಂಕಷ್ಟವನ್ನು ತೂಗಿಸುವ ಸಲುವಾಗಿ ಗುರುರಾಜರು ಬೆಂಗಳೂರಿನ ಎಚ್‌ಎಎಲ್‌ ಕಾರ್ಖಾನೆಯಲ್ಲಿ ಕೆಲಸಕ್ಕೆ ಸೇರಿಕೊಂಡರೂ ಅವರಲ್ಲಿದ ಕಲಾವಿದ ಸದಾಕಾಲವೂ ಜಾಗೃತನಾಗಿದ್ದ ಕಾರಣ, ಅಲ್ಲಿನ ಲಲಿತ ಕಲಾ ಸಂಘದ ಮೂಲಕ, ಸಮಾನಮನಸ್ಕರ ತಂಡವೊಂದನ್ನು ಕಟ್ಟಿ ಕೆಂಪೇಗೌಡ, ಎಚ್ಚೆಮನಾಯಕ, ಶಿವಾಜಿ ಮೊದಲಾದ ಐತಿಹಾಸಿಕ ನಾಟಕಗಳಲ್ಲಿ ನಾಯಕನಾಗಿ ಅಭಿನಯಿಸಿದ್ದಲ್ಲದೇ, ಅನೇಕ ಸಾಮಾಜಿಕ ಮತ್ತು ಹಾಸ್ಯ ನಾಟಕಗಳಲ್ಲಿ ಅಭಿನಯಿಸುವ ಮೂಲಕ ಅಪಾರ ಜನಪ್ರಿಯತೆಯನ್ನು ಗಳಿಸಿಕೊಂಡರು. ಗುರುರಾಜರ ಪ್ರಖ್ಯಾತಿ ಅಂದಿನ ಕಾಲದ ರಂಗ ದಿಗ್ಗಜ ಮತ್ತು ಕನ್ನಡ ಮೂಕಿ ಚಿತ್ರದ ಮೊದಲ ನಾಯಕರಾಗಿದ್ದ ಶ್ರೀ ಎಂ.ವಿ.ಸುಬ್ಬಯ್ಯ ನಾಯ್ಡು ರವರ ಕಿವಿಗೂ ಬಿದ್ದು ಅವರ ಆಹ್ವಾನದ ಮೇರೆಗೆ ಅವರ ಕಂಪೆನಿಯ ನಾಟಕಗಳಲ್ಲಿ ಅಭಿನಯಿಸತೊಡಗಿದರು. ಎಚ್ಚೆಮನಾಯಕ ನಾಟಕದಲ್ಲಿ ಚಾಂದ್ ಖಾನ್ ಪಾತ್ರ, ಶ್ರೀರಾಮ ವಿಜಯ ನಾಟಕದಲ್ಲಿ ರಾವಣನ ಪಾತ್ರವಲ್ಲದೇ, ಭಕ್ತ ಅಂಬರೀಷ ನಾಟಕದ ರಮಾಕಾಂತನ ಪಾತ್ರದ ಮೂಲಕ ಅಪಾರ ಮಟ್ಟದ ಜನಮನ್ನಣೆಯನ್ನು ಗಳಿಸಿಕೊಂಡರು. ಹೀಗೆ ರಾತ್ರಿ ಇಡೀ ವೃತ್ತಿರಂಗಭೂಮಿಯಲ್ಲಿ ನಾಟಕಗಳಲ್ಲಿ ಅಭಿನಯಿಸುತ್ತಾ, ಬೆಳಗಿನ ಹೊತ್ತಿನಲ್ಲಿ ವಿಮಾನ ಕಾರ್ಖಾನೆಯಲ್ಲಿ ಕೆಲಸ ಮಾಡುವುದು ಅವರಿಗೆ ಬಹಳ ಕಷ್ಟ ಎನಿಸಿ, ವೃತ್ತಿ ಮತ್ತು ಪ್ರವೃತ್ತಿಯ ನಡುವೆ ಯಾವುದನ್ನು ಆರಿಸಿಕೊಳ್ಳಬೇಕು ಎಂಬ ಸಮಸ್ಯೆ ಎದುರಾದಾಗ ಧೈರ್ಯದಿಂದ ತಮ್ಮ ಹೆಚ್.ಎ.ಎಲ್ ವೃತ್ತಿಗೆ ತಿಲಾಂಜಲಿ ಇತ್ತು ಸಂಪೂರ್ಣವಾಗಿ ನಾಟಕ ಮತ್ತು ಹರಿಕಥೆಯಲ್ಲೇ ತಮ್ಮನ್ನು ತೊಡಗಿಸಿಕೊಂಡರು.

guru3

ಹೀಗೆ ವೃತ್ತಿರಂಗಭೂಮಿಯಲ್ಲಿ ಅಭಿನಯಿಸುತ್ತಿರುವಾಗಲೇ, ಅವರಿಗೆ ಅಂದಿನ ಕಾಲದ ಪ್ರಖ್ಯಾತ ನಟ ಮತ್ತು ನಿರ್ದೇಶಕ ಎಂದು ಹೆಸರುವಾಸಿಯಾಗಿದ್ದ ಶ್ರೀ ನಾಗೇಂದ್ರರಾಯರ ಪರಿಚಯವಾಗಿ 1963ರಲ್ಲಿ ಅವರ ಆನಂದಭಾಷ್ಪ ಸಿನಿಮಾದಲ್ಲಿ ದೊಡ್ಡ ಮಟ್ಟದ ಪಾತ್ರವನ್ನು ಗಿಟ್ಟಿಸಿಕೊಳ್ಳುವ ಮೂಲಕ ಅಧಿಕೃತವಾಗಿ ಗುರುರಾಜುಲು ಅವರು ಸಿನಿಮಾರಂಗ ಪ್ರವೇಶಿಸಿದಾಗ, ಸಿನಿಮಾಗೆಂದು ತಮ್ಮ ಹೆಸರನ್ನು ಅರುಣ್‌ ಕುಮಾರ್‌ ಎಂದು ಬದಲಿಸಿಕೊಂಡರು. ಆನಂದ ಬಾಷ್ಪ ಎಂಬ ಚಿತ್ರದಲ್ಲಿ ಖಳನಾಯಕನ ಪಾತ್ರ ವಹಿಸಿದ್ದಲ್ಲದೇ, ನಂತರದ ದಿನಗಳಲ್ಲಿ ಹಣ್ಣೆಲೆ ಚಿಗುರಿದಾಗ, ಮೂರುವರೆ ವಜ್ರಗಳು, ಮಧುಮಾಲತಿ ಮುಂತಾದ ಚಲನಚಿತ್ರಗಳಲ್ಲಿ ನಟಿಸಿದ್ದಲ್ಲದೇ, ಡಾ. ರಾಜ್‌ಕುಮಾರ್ ಮತ್ತು ಮಾಧವಿ ಅಭಿನಯದ ಶಿವಕನ್ಯೆ ಚಿತ್ರದಲ್ಲಿಯೂ ಅರುಣ್ ಕುಮಾರು ನಟಿಸಿದ್ದರು. ಹೀಗೆ ಸುಮಾರು 20-30 ಸಿನಿಮಾಗಳಲ್ಲಿ ಅಲ್ಲೊಂದು ಇಲ್ಲೊಂದು ಸಣ್ಣ ಪುಟ್ಟ ಪಾತ್ರಗಳಲ್ಲಿ ಅಭಿನಯಿಸಿದರೂ ಹೆಚ್ಚಿನ ಅವಕಾಶ ಮತ್ತು ಆರ್ಥಿಕವಾದ ನೆರವು ಸಿಗದ ಕಾರಣ, ಅರುಣ್ ಕುಮಾರ್ ಚಿತ್ರ ಮಂಡಳಿ ಎಂಬುದನು ಆರಂಭಿಸಿ ಅದರ ಮೂಲಕ ಸಂಗೀತ ಸಾಮ್ರಾಟ್, ವಿದ್ಯಾವತಿ, ರೂಪಸರ್ಪಿಣಿ ಮೊದಲಾದ ಸಾಮಾಜಿಕ ನಾಟಕಗಳನ್ನು ರಚಿಸಿ, ನಟಿಸಿ ನಿರ್ದೇಶಿಸಿ ಯಶಸ್ಸನ್ನು ಕಂಡರೂ ಅಂತಿಮವಾಗಿ ಸುಬ್ಬಯನಾಯ್ಡು ಅವರು ನಿಧನರಾದ ನಂತರ ಅವರು ತಮ್ಮ ನೆಚ್ಚಿನ ಕೀರ್ತನ ಕ್ಷೇತ್ರದಲ್ಲೇ ಮುಂದು ವರೆಯಲು ನಿರ್ಧರಿಸಿದರು.

gnaidu1

ಗುರುರಾಜಲು ನಾಯ್ಡು ಅವರು ಎತ್ತರದ ಆಳಾಗಿದ್ದು, ಸುಂದರವಾದ ಮುಖ, ಆಕರ್ಶಕ ವ್ಯಕ್ತಿತ್ವದ ಜೊತೆ, ತಮ್ಮ ಕಂಚಿನ ಕಂಠದಲ್ಲಿ ಸುಶ್ರಾವ್ಯವಾದ ಸಂಗೀತದ ಜೊತೆ ಸುಲಲಿತವಾಗಿ ರಭಸದಲ್ಲಿ ಕೀರ್ತನೆಯನ್ನು ಮಾಡುವುದು ಜನರನ್ನು ಆಕರ್ಶಿಸಿದ ಕಾರಣ, ದಸರಾ, ರಾಮನವಮಿ, ಗಣೇಶೋತ್ಸವ, ರಾಜ್ಯೋತ್ಸವಗಳದಲ್ಲದೇ ವರ್ಷದ 365ದಿನಗಳು ಒಂದಲ್ಲಾ ಒಂದು ಕಡೆ ಕಾರ್ಯಕ್ರಮಗಳು ಸಿಗತೊಡಗಿದವು. ಅನೇಕ ಬಾರಿ ಬೆಳಿಗ್ಗೆ ಮಧ್ಯಾಹ್ನ ಸಂಜೆ ಹೀಗೆ ದಿನವೊಂದರಲ್ಲೇ ಎರಡು ಮೂರು ಹರಿಕಥೆಗಳನ್ನು ಮಾಡಿದ್ದರು. ಅದೆಷ್ಟೋ ಬಾರಿ ಆಯೋಜಕರು ತಮ್ಮ ಕಾರ್ಯಕ್ರಮಕ್ಕೆ ಗುರುರಾಜಲು ನಾಯ್ಡು ಅವರು ಸಿಗಲಿಲ್ಲವೆಂದು ತಮ್ಮ ಕಾರ್ಯಕ್ರಮವನ್ನೇ ಮುಂದೂಡಿದ ಉದಾಹರಣೆಯೂ ಇದೆ. ಹೀಗೆ ನಾಡಿನುದ್ದಕ್ಕೂ ಸಂಚರಿಸಿ ತಮ್ಮ ಹರಿಕಥೆಯ ಸಾರವನ್ನು ರಾಜ್ಯದ ಜನರಿಗೆ ಉಣಬಡಿಸಿದರು.

guru6

ರೇಣುಕಾದೇವಿ ಮಹಾತ್ಮೆ, ಭೂಕೈಲಾಸ, ಭೀಮ ಜರಾಸಂಧ, ಭಕ್ತ ಸುಧಾಮ, ಭಕ್ತ ಮಾರ್ಕಾಂಡೇಯ, ಭಕ್ತ ಸಿರಿಯಾಳ, ಮಹಿರಾವಣ, ಮಾಯಾ ಬಝಾರ್, ನಲ್ಲತಂಗಾ ದೇವಿ, ಗಜ ಗೌರಿ ವ್ರತ, ಶ್ರೀಕೃಷ್ಣ ಗಾರುಡಿ, ಲವ ಕುಶ, ಗಿರಿಜಾಕಲ್ಯಾಣ, ಮೂರುವರೆ ವಜ್ರಗಳು, ಕಿರಾತಾರ್ಜುನ, ಸತ್ಯ ಹರಿಶ್ಚಂದ್ರ,ಉತ್ತರನ ಪೌರುಷ, ಚಂದ್ರ ಹಾಸ, ಮಾರುತಿ ವಿಜಯ,ಸಂತ ಸಕ್ಕೂಬಾಯಿ, ಕೋಳೂರು ಕೊಡಗೂಸು, ಬಬ್ರುವಾಹನ, ನಳ ದಮಯಂತಿ, ಶನಿಪ್ರಭಾವ, ಭಕ್ತ ಕುಂಬಾರ, ಲಂಕಾದಹನ ಹೀಗೆ ತಮ್ಮ ಕಂಚಿನ ಕಂಠ ಮತ್ತು ಭಾವಪೂರ್ಣ ಮಾತಿನ ಶೈಲಿಯಿಂದ 100ಕ್ಕೂ ಹೆಚ್ಚು ಹರಿಕಥೆಯನ್ನು ನಾಡಿನಾದ್ಯಂತ ಜನಪ್ರಿಯಗೊಳಿಸಿದ್ದಲ್ಲದೇ, ಅವೆಲ್ಲವನ್ನೂ ಧ್ವನಿಸುರಳಿಗಳಲ್ಲಿ ದಾಖಲಿಸುವ ಮೂಲಕ ಅವರ ಹರಿಕಥೆ ಮತ್ತು ಅವರ ಕಥಾ ಶೈಲಿಯು ಆಚಂದ್ರಾರ್ಕವಾಗಿ ಇರುವಂತೆ ಮಾಡಿದ ಹೆಗ್ಗಳಿಗೆ ಪಾತ್ರರಾಗಿದ್ದಾರೆ.

sheela_Shobha

ತಮ್ಮ ನಂತರ ಈ ಕಲೆ ನಶಿಸಿ ಹೋಗಬಾರದೆಂದು ಅವರ ಮಕ್ಕಳಾದ ಶೋಭಾ ನಾಯ್ಡು ಮತ್ತು ಶೀಲಾ ನಾಯ್ಡು ಅವರಲ್ಲದೇ ಇನ್ನೂ ನೂರಾರು ಶಿಷ್ಯಂದಿರಿಗೆ ತಮ್ಮ ಅದ್ಭುತ ಕಲೆಯನ್ನು ಹೇಳಿಕೊಟ್ಟರೆ, ಅವರ ಕ್ಯಾಸೆಟ್ ಕೇಳಿ ಕೇಳಿ ಅವರಂತೆಯೇ ಹರಿಕಥಾ ದಾಸರಾದವರ ಸಂಖ್ಯೆ ಅಗಣಿತವಾಗಿದೆ. ಶೋಭಾನಾಯ್ದು ಅವರ ಮಗಳಾದ ಅಮೃತ ನಾಯ್ಡು ಸಹಾ ಅಲ್ಲೊಂದು ಇಲ್ಲೊಂದು ಹರಿಕಥೆಯನ್ನು ಮಾಡುವ ಮೂಲಕ ತಮ್ಮ ತಾತನವರ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುತ್ತಿರುವುದು ಶ್ಲಾಘನೀಯವಾಗಿದೆ.

ಗುರುರಾಜಲು ನಾಯ್ಡು ಅವರ ಕಲಾಸಾಧನೆಯನ್ನು ಗುರುತಿಸಿ ಅನೇಕ ಸಂಘಸಂಸ್ಥೆಗಳು ಅವರಿಗೆ ನೂರಾರು ಪ್ರಶಸ್ತಿ ಪುರಸ್ಕಾರಗಳನ್ನು ನೀಡಿ ಗೌರವಿಸಿದ್ದರೆ, ಬೆಂಗಳೂರು ಮಹಾನಗರಪಾಲಿಕೆಯು ಬೆಂಗಳೂರಿನ ಹೃದಯ ಭಾಗವಾದ ರಾಜಾಜಿನಗರದಲ್ಲಿರುವ ನವರಂಗ್ ಚಿತ್ರಮಂದಿರದ ಮುಂಭಾಗದ ರಸ್ತೆಗೆ ಹರಿಕಥೆ ವಿದ್ವಾನ್ ಶ್ರೀ ಗುರುರಾಜಲು ನಾಯ್ಡು ವೃತ್ತ ಎಂದು ನಾಮಕರಣ ಮಾಡುವ ಮೂಲಕ ಅವರ ಸಾಧೆನೆಯನ್ನು ನೆನಪಿನಲ್ಲಿಡುವಂತೆ ಮಾಡಿದೆ.

guru1

ಕರ್ನಾಟಕದ ಹರಿಕಥಾ ಕ್ಷೇತ್ರದಲ್ಲಿ ಬಹುದೊಡ್ಡ ಹೆಸರನ್ನು ಮಾಡಿದ್ದ ಗುರುರಾಜುಲು ನಾಯ್ಡು ಆವರು ವಯೋಸಜವಾದ ಖಾಯಿಲೆಗಳಿಂದಾಗಿ 1985ರ ಏಪ್ರಿಲ್ 14 ರಂದು ನಿಧನರಾಗುವ ಮೂಲಕ ಸಾರಸ್ವತಲೋಕಕ್ಕೆ ತುಂಬಲಾರದ ನಷ್ಟವಾಗಿದ್ದಂತೂ ಸುಳ್ಳಲ್ಲ. ಹೀಗೆ ಸಂಗೀತ, ನಾಟಕ, ಸಿನಿಮಾ ರಂಗ ಮತ್ತು ಎಲ್ಲಕ್ಕಿಂತಲೂ ವಿಶೇಷವಾಗಿ ಹರಿಕಥೆಯ ಕಲೆಯ ಮೂಲಕ ನಾಡಿನಾದ್ಯಂತ ಕಲಾ ಸೇವೆಯನ್ನು ಮಾಡಿದ ಶ್ರೀ ಗುರುರಾಜಲು ನಾಯ್ಡು ಅವರು ನಿಸ್ಸಂದೇಹವಾಗಿ ನಮ್ಮ ಕನ್ನಡದ ಕಲಿಗಳೇ ಸರಿ.

ಏನಂತೀರೀ?
ನಿಮ್ಮವನೇ ಉಮಾಸುತ

One thought on “ಹರಿಕಥಾ ವಿದ್ವಾನ್ ಶ್ರೀ ಗುರುರಾಜಲು ನಾಯ್ದು

  1. ಗುರುರಾಜುಲು ನಾಯ್ಡು ಅವರು ಹರಿಕಥಾ ವಿದ್ವಾಂಸರಲ್ಲಿ ಅಗ್ರಗಣ್ಯರು. ಅವರ ಕಾಲದಲ್ಲಿ ಬೇರೆ ಯಾವ ಹರಿಕಥೆಗಳಿಗಿಂತ ಇವರ ಹರಿಕಥೆಗೆ ಜನ ಕಿಕ್ಕಿರಿದು ಸೇರುತ್ತಿದ್ದರು. ಇಷ್ಟಪಟ್ಟು ಕೇಳುತ್ತಿದ್ದರು. ನಾವೆಲ್ಲ ಚಿಕ್ಕ ಹುಡುಗರಾಗಿದ್ದಾಗ ರಾಮೋತ್ಸವ ಹನುಮಜ್ಜಯಂತಿ ಸಂದರ್ಭಗಳಲ್ಲಿ ಇವರ ಹರಿಥೆಗೆ ಎಲ್ಲಿದ್ದರೂ ಹೋಗುತ್ತಿದ್ದೆವು. ನಮಗೆ ಹರಿಕಥೆಗಿಂತ ಉಪಕಥೆಗಳನ್ನು ಕೇಳಲು ಇಷ್ಟವಾಗುತ್ತಿತ್ತು. ತುಂಬಾ ತಮಾಷೆಯಾಗಿರುತ್ತಿತ್ತು. ಅವರ ಕಂಠ ಕಂಚಿನ ಕಂಠ. ಚಿಕ್ಕವರಿಂದ ದೊಡ್ಡವರವರೆಗೂ ಅವರ ಹರಿಕಥೆ ಇಷ್ಟವಾಗುತ್ತಿತ್ತು. ಗುರುರಾಜುಲು ನಾಯ್ಡು ಅವರಂಥವರು ನಭೂತೋ ನಭವಿಷ್ಯತಿ.

    Liked by 1 person

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s